ದ ಪಾಲಿಟಿಕ್

ಜಾಲಿ ತೋಟದ ಗುಲಾಬಿ…. ತ್ಯಾಗ ಜೀವಿ ಅಂಬಣ್ಣ ಅರೋಲಿಕರ್

ದ ಪಾಲಿಟಿಕ್

ದ ಪಾಲಿಟಿಕ್

ವರ್ತಮಾನದ ಹಲವು ತಾಕಲಾಟಗಳಿಗೆ ತಕ್ಷಣವೇ ಧ್ವನಿಯಾಗಿ ಸಾಮಾಜಿಕ ನ್ಯಾಯವನ್ನು ಪ್ರಸಿಸುವ ಬಂಡಾಯದ ಧ್ವನಿ ಅಂಬಣ್ಣ ಅರೋಲಿಕರ್.  ಬಡತನ, ಹಸಿವು, ಶೋಷಣೆ, ದಬ್ಬಾಳಿಕಗಳ ಕಂಡು ಸುಮ್ಮನಿರದೇ ಬರಗಾಲದ ಬಿಸಿಲಿನ ಹಾಗೆ ಪ್ರತಿಕ್ರಿಯಿಸುತ್ತ  ಕಾಲಿಗೆ ಗೆಜ್ಜೆ ಕಟ್ಟಿ ಹಲಗೆ ಹಿಡಿದು ಕುಣಿದು ಹಾಡುತ್ತಾ ವರ್ಗ ವರ್ಣ ಜಾತಿ ಶತ್ರುಗಳ ವಿರೋಧಕ್ಕೆ ಗಟ್ಟಿ ದನಿಯಾಗಿ ಹಾಡುತ್ತಾ ಬೀಳು ಬಿದ್ದ ನೆಲದಲ್ಲೂ ನಗುನಗುತ್ತ ನಿಲ್ಲುವ ಹಳದಿಯ ಅಂಬ್ರಿಯ ಹೂವಿನಂತೆ ಅರಳಿದವರು ಅಂಬಣ್ಣ ಅರೋಲಿಕರ್.

ಇವರ ಹಾಡು ಬರೀ ಹಾಡಲ್ಲ. ಮನೋರಂಜನೆಯ ಮಾರ್ಗವೂ ಅಲ್ಲ. ಎಲ್ಲರೆದುರು ಹಾಡಿ ಚಪ್ಪಾಳೆ ಗಿಟ್ಟಿಸಲು ಹಾಡಿದವರು ಅಲ್ಲ. ಇವರ ಹಾಡೆಂದರೆ ಅದು ಹಸಿದವರಿಗೆ ಹಂಬಲಿ, ಅನ್ಯಾಯಕ್ಕೆ ತಿರುಗಿ ನಿಲ್ಲುವ ಧನಿ, ಮಾನ ಕಳೆದುಕೊಂಡ ನನ್ನಕ್ಕ ತಂಗಿಯರಿಗೆ ಮಾನ ಮುಚ್ಚುವ ಮೈ ಮೇಲಿನ ಬಟ್ಟೆ, ನಡೆಯಲಾಗದವರ ಊರುಗೋಲು, ಕೃಷಿ ಕೂಲಿಕಾರರ ಕೂಲಿ ಹೆಚ್ಚಳ, ರೈತರ ಪಾಲಿನ ಸಾಂತ್ವಾನ, ಪಠ್ಯಪುಸ್ತಕದ ಮಣಭಾರದಲ್ಲಿ ನಲುಗಿದ ಮಕ್ಕಳ ಪ್ರಶ್ನೆಗೆ ಉತ್ತರ, ಅಂತೆಯೇ ಅರೋಲಿಯವರ ಹಾಡೆಂದರೆ ಸಾಯುವವನಿಗೂ ಸಮಾಧಾನ. ಅಮರವೀರರ ಆಶಯ. ಅಷ್ಟೇ ಅಲ್ಲ ಸಾವಿನ ಜೊತೆಗಿನ ಸಂಗೀತವೂ ಹೌದು.

ಆತನನ್ನು ಮೂವತ್ತು ವರ್ಷಗಳಿಂದ ಗಮನಿಸುತ್ತಿದ್ದೇನೆ ಆತ ನನ್ನ ಸಹಪಾಠಿ ಹೌದು. ಹೋರಾಟದ ಹಾಡುಗಳನ್ನು ಬರೆದು ವಿದ್ಯಾರ್ಥಿ ಯುವಜನರ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹುಟ್ಟಿದವರು ಜನರ ನಿಜ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅಪ್ಪ ಚೌಡಿಕೆ ಹಿಡಿದು ಹಾಡು ಹಾಡಿ ಬೇಡಿ ತಂದು ತಿನಿಸುವ ಊಟ ಮತ್ತು ಆತನ ಕುಡಿತ, ಕಣ್ಣೆದುರೇ ಅಮ್ಮನ ಸಾವು, ಸಮಾಜ ಸಮುದಾಯದ ಹಲವಾರು ಕಷ್ಟಗಳು ಈತನನ್ನ ಹೋರಾಟಕ್ಕೆ ಹಚ್ಚಿದವು.

ಯಾವಯಾವುದೋ ಸುಳ್ಳು ಕೇಸಿನಲ್ಲಿ ಜೈಲು ಸೇರಿ ಕಷ್ಟಗಳನ್ನು ಅನುಭವಿಸಿದವರು. ಪೊಲೀಸರ ಲಾಠಿ  ಬೂಟಿನ ಏಟುಗಳು ಹೊಸ ಹಾಡುಗಳನ್ನು, ಕ್ರಾಂತಿಯ ವಿಚಾರಗಳನ್ನ ತುಂಬಲಾರಂಬಿಸಿದವು. ಕಸಾಯಿ ಕಾಣೆಯ ಕರವಸೂಲಿ ಮಾಡಿ ಮನೆಗೆ ಬಂದು ಸ್ನಾನ ಮಾಡಿ ಅರೆಬೆತ್ತಲೆಯಾಗಿ ಮಲಗಿದ್ದವನನ್ನು ರಾಯಚೂರು ತಾಲೂಕಿನ ಯಾಪಲ್ದಿನ್ನಿ ಗ್ರಾಮೀಣ ಠಾಣೆಯ ಶಸ್ತ್ರಸಜ್ಜಿತ ಪೊಲೀಸ್ ದಳಗಳು 2000 ಇಸ್ವಿ ಜುಲೈ 29ರಂದು ಆತನನ್ನು ಬಂಧಿಸಿ ಜೈಲಿಗಟ್ಟಿದರು. ಜನರ ಜೊತೆ ಬೆರೆತು ಹೋರಾಟ ಮಾಡಿದವನಿಗೆ ರಾಜದ್ರೋಹದ ಕೇಸ್ ದಾಖಲಿಸಿ ಮಾಡದ ತಪ್ಪಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದಾಗಲೂ ಜೈಲಿನಲ್ಲಿ ಸಂಘರ್ಷಗೀತೆ ಬರೆದವರು.

ಜೈಲು ಸಾಕು ಮನೆಗೆ ಬಂದು ಆರಾಮಾಗಿದ್ದು ನೌಕರಿ ಮಾಡಪ್ಪ ಅಂತ ಅಪ್ಪ ಕರೆದರೆ ಅದನ್ನು ಒಪ್ಪದೆ ಸಂಘರ್ಷದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡವರು. ಕಾಲೇಜು ವಿದ್ಯಾರ್ಥಿಗಳಿಗಾಗಿ ಡೊನೇಷನ್ ಕ್ಯಾಪಿಟೇಶನ್ ವಿರುದ್ಧದ ಹೋರಾಟ ಮಂಡಲ್ ಕಮಿಷನ್ ವಿಚಾರದ ಹೋರಾಟ ಹೈದರಾಬಾದ್ ಕರ್ನಾಟಕದ ಹಲವು ಹೋರಾಟಗಳು, ಜಾತಿ ವಿನಾಶದ ಹೋರಾಟಗಳು ಒಂದು ದಿನ ಊಟಕ್ಕೂ ಕಷ್ಟ ಪಡುತ್ತಿರುವ ಗೆಳೆಯ ಸಂಘವನ್ನು ಕಟ್ಟಿಕೊಂಡು ಜನರ ಧ್ವನಿಯಾಗಿ ನಿಂತು ಸಂಘರ್ಷವನ್ನು ಮಾಡುತ್ತಾ ಮತ್ತೆ ಜೈಲಾದರೂ ಪರವಾಗಿಲ್ಲ ಜನರ ಜೊತೆ ಇರಬೇಕೆಂದು ತೀರ್ಮಾನಿಸಿ ತಾವೇ ಕಷ್ಟಪಟ್ಟು ಹಾಸ್ಟೆಲ್ ಆರಂಭಿಸಿ ಕಾಲೇಜು ಆರಂಭಿಸಿ ಒಳ ಮೀಸಲಾತಿ ವರ್ಗೀಕರಣದ ಹೋರಾಟವನ್ನು ಕೂಡ ಆರಂಭಿಸಿದರು. ತಾನೇ ಪತ್ರಿಕಾ ಸಂಪಾದಕನಾಗಿ, ಪತ್ರಕರ್ತನಾಗಿ ಜನರ ಹಕ್ಕುಗಳನ್ನು ಬರೆಯುತ್ತಾ ಸರ್ಕಾರವನ್ನು ಎಚ್ಚರಿಸುವ ಬಗೆ ಎಲ್ಲರನ್ನೂ ಬೆರಗಾಗಿಸುತ್ತದೆ.

2002 ರಲ್ಲಿ ಈ ನಾಡಿನ ಮಾದಿಗ ಜನರಿಗಾಗಿ ಹೋರಾಟ ಮಾಡುತ್ತ ಎಲ್ಲಾ ಜನಪರ ಹೋರಾಟಗಳ ಜೊತೆ ಮಾದಿಗರ ಒಳಮೀಸಲಾತಿಗಾಗಿ ಹೋರಾಟವನ್ನು ಕಟ್ಟಿದವರು. ಸದಾಶಿವ ಆಯೋಗದ ಜಾರಿಗಾಗಿ ನಾಡಿನಾದ್ಯಂತ ತಿರುಗಾಟ ಮಾಡಿ ಸಮ್ಮೇಳನಗಳನ್ನು ಮಾಡಿ ಜನರನ್ನ ಸಂಘಟಿಸಿದವರು. ಆಳುವ ರಾಜಕೀಯ ವ್ಯಕ್ತಿಗಳ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿ ಹೇಗಾದರೂ ಮಾಡಿ ಸದಾಶಿವ ಆಯೋಗದ ವರದಿ ಜಾರಿಯಾಗಲೇಬೇಕು ಇಲ್ಲದಿದ್ದರೆ ಮನೆ ಸೇರಲಾಗದೆಂದು ಭೀಮ ಸೈನ್ಯವನ್ನು ಕಟ್ಟಿಕೊಂಡು ಸಂಘರ್ಷ ಜಾತವನ್ನು ಮುನ್ನಡೆಸುತ್ತಿದ್ದಾರೆ.

ಮೊನ್ನೆ ನಾನು ಕೂಡ ಸದಾಶಿವ ಆಯೋಗದ ವರದಿಯ ಜಾರಿಗಾಗಿ ನಡೆಯುವ ಸಂಘರ್ಷ ಜಾತಾದಲ್ಲಿ ಒಂದು ದಿನ ನಾನು ಭಾಗವಹಿಸಿದ್ದೆ. ಶಿರಾ ನಂತರದಲ್ಲಿ ಬರುವ ಸೀಬಿಯ ಲೋಕಾಂಬ ಶಾಲೆಯಿಂದ ಆರಂಭವಾದ ಕಾಲು ನಡಿಗೆಯ ಜಾತ 10 ಕಿ.ಮೀ ನಡೆದು ಕೋರಾದ ನಿರಾಶ್ರಿತರ ಶಿಬಿರಕ್ಕೆ ಬಂದು ನಿಂತಾಗ ಊಟ ಮಾಡುವ ಸಮಯದಲ್ಲಿ ಒಂದು ಫೋನ್ ಬಂತು. ಅದು ಅವರ ತಂದೆಯ ಸಾವಿನ ಕೊನೆಯ ಗಳಿಗೆಯಲ್ಲಿ ಅವರ ಮನೆಯವರು ನೀರು ಬಿಡುತ್ತಿರುವ ಚಿತ್ರಣವನ್ನು ಕೊಡುತ್ತಿತ್ತು.

ಆ ಮಾತುಗಳನ್ನು ಯಾರೂ ಕೇಳಿಸಿಕೊಳ್ಳಬಾರದೆಂದು ದೂರ ಹೋಗಿ ಮಾತಾಡಿ ಮನೆಯವರಿಗೆ ಸಮಾಧಾನ ಹೇಳಿದ ಅಂಬಣ್ಣ ಬಂದು ಕುಳಿತಾಗ ನಾನೊಂದು ಮಾತು ಹೇಳಿದೆ. ಅಪ್ಪಾಜಿ ಕೊನೆಗಳಿಗೆ ಎಲ್ಲಿದ್ದಾರೆ ನೀನು ಹೋಗಿಬಿಡು ಉಳಿದವರು ಈ ಜಾತವನ್ನು ಮುಂದುವರಿಸುತ್ತಾರೆ ಒಂದೆರಡು ದಿನ ಬಿಟ್ಟು ಬಾ ಎಂದು ಹೇಳಿದೆ. ಆಗ ಅಂಬಣ್ಣನವರು ಹೇಳಿದ ಮಾತು ಏನೆಂದರೆ, ಗೆಳೆಯ ಸಾವಿಗೆ ಹತ್ತಿರದಲ್ಲಿರುವ ನಮ್ಮನ್ನು ಬಿಟ್ಟು ಅಗಲುತ್ತಿರುವ ಅಪ್ಪಾಜಿ ವಾಪಸ್ ಬರುವುದಿಲ್ಲ. ಅವರಿಗೆ ವಯಸ್ಸಾಗಿದೆ ಇವತ್ತೋ ನಾಳೆಯೋ ಗೊತ್ತಿಲ್ಲ. ಆದರೆ ಈ ಸಂಘರ್ಷ ಜಾತವನ್ನು ಮುಂದಕ್ಕೆ ಒಯ್ಯುವ ಜವಾಬ್ದಾರಿ ನನ್ನದು. 

ಈ ಜಾತವನ್ನ ಯಶಸ್ವಿಯಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುವಲ್ಲಿ ನನ್ನ ಕನಸಿದೆ ಅಪ್ಪಾಜಿಯವರ ಆಶಯವು ಅದೇ ಆಗಿದೆ. ಹಾಗಾಗಿ ನಾನು ಹೋಗಲಾರೆ. ಈ ಜಾತ್ರದೊಂದಿಗೆ ಮುನ್ನುಗ್ಗುತ್ತೇನೆ ಎಂದ.ಇದು ಅವರ ಬದ್ಧತೆ. ಸಂಘಟನೆಯನ್ನು ಕಟ್ಟಿ ಬೀದಿಗೆ ಇಳಿದು ಹೋರಾಡುತ್ತಿರುವ ಬದ್ಧತೆಯುಳ್ಳ ನಾಯಕರ ಕಥೆ ಹೀಗೆ. ಇಂತಹ ಹೋರಾಟಗಾರನನ್ನು ಹಂಗಿಸದೇ ಬಿಟ್ಟಿಲ್ಲ. ತೆಗಳಿದವರು ಇದ್ದಾರೆ. ಜಾತ ಹೋಗಲಿ ಬಿಡು ಒಯ್ಯುತ್ತಾನೆ ಎಂದವರು ಇದ್ದಾರೆ.

ಇದನ್ನೂ ಓದಿ : ಮುರುಘಾ ಪ್ರಕರಣ: ಹತ್ತಾರು ಹೆಣ್ಣು ಮಕ್ಕಳು, ಎಂಟು ಪ್ರಶ್ನೆಗಳು – ಉತ್ತರಿಸುವ ಹೊಣೆ ಪೊಲೀಸರದ್ದು

ಅಸಹಕಾರ ತೋರಿ ಹೇಗಾದರೂ ಮಾಡಿ ಜಾತವನ್ನು ಅರ್ಧಕ್ಕೆ ನಿಲ್ಲಿಸಬೇಕೆನ್ನುವರು ಕೂಡ ಇದ್ದಾರೆ.  ಜಾತ್ರದೊಟ್ಟಿಗೆ ನಡೆಯಲಾಗದೆ ದೂರ ನಿಂತು ಮಾತಾಡಿದವರು ಇದ್ದಾರೆ.. ಎಷ್ಟೊಂದು ಅಸಹಕಾರಗಳು ಇದ್ದರೂ ಕೂಡ ಅಂಬಣ್ಣ ಅದ್ಯಾವುದನ್ನು ಲೆಕ್ಕಿಸದೆ ಹೇಗಾದರೂ ಮಾಡಿ ಈ ಜನರ ಬದುಕುಗಳನ್ನು ಬದಲಾಯಿಸಲು ವರದಿಯನ್ನು ಜಾರಿಯನ್ನು ಮಾಡಬೇಕೆಂದು ಹಠ ಹಿಡಿದು ಜ್ವರ ಬಂದರು, ಕಾಲು ನೋಯ್ದರು, ತಲೆಸುತ್ತಿದ್ದರೂ, ಭೀಮ ಸೈನ್ಯವನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ನಡೆಯುವ ಪರಿಗೆ ನಾನೇ ಬೆರಗಾದೆ. 

ಅಂಬಣ್ಣ ಅರೋಲಿಕರ್ ಬರಿ ಮಾತಾಡುತ್ತಿಲ್ಲ. ಅಂಬಣ್ಣ ಹಾಡು ಬರೆಯುತ್ತಾರೆ, ರಾಗ ಸಂಯೋಜಿಸುತ್ತಾರೆ, ಹಾಡುತ್ತಾರೆ, ತಾವೇ ಹಲಗೆ ಹಿಡಿದು ನಿಲ್ಲುತ್ತಾರೆ. ಈ ವ್ಯಕ್ತಿತ್ವ ಈ ಲೋಕದ ಕೆಲವೇ ಜನರಿಗೆ ಮಾತ್ರ ಬರುತ್ತದೆ. ಅಂತಹ ಒಂದು ವಿಶಿಷ್ಟ ವ್ಯಕ್ತಿತ್ವ ಅಂಬಣ್ಣ ಆರೋಲಿಕರ್ ಅವರದು. ಕವಿ ಬರೆದರಷ್ಟೇ ಕವಿಯಾಗಲಾರ. ನನ್ನ ಕವಿತೆ ಯಾರ ಪರ ಅಂತ ಹೇಳಿದರೆ ಸಾಲದು, ಕವಿತೆಯ ಜೊತೆಯಲ್ಲಿ ನಿಲ್ಲುವವನೇ ನಿಜವಾದ ಕವಿ. ಜನರಿಗಾಗಿ ಬರೆಯುತ್ತಾ, ಹಾಡುತ್ತಾ, ಕುಣಿಯುತ್ತ, ಜನತೆಯ ಸಂಗಾತಿಯಾದ ಅಂಬಣ್ಣ ಆರೋಲಿಕರ್ ಈ ನೆಲದಲ್ಲಿ ಕಾವ್ಯ ಕೃಷಿ ಮಾಡುವ ಸಾಧಕರಿಗೆಲ್ಲ ಸಂಪನ್ಮೂಲ ವ್ಯಕ್ತಿ ಇದ್ದಂತೆ.

ಕವಿತೆ ಮತ್ತು ಕಾಲದ ಜೊತೆ ಮಾತನಾಡುವ ಪ್ರಶ್ನಿಸುವ ಹಲಗೆ ಚೌಡಿಕೆ ನುಡಿಸುತ್ತ ಗೆಜ್ಜೆಯಂತೆ ಸದಾ ಜಾಗೃತಿ ಗೀತೆಯಾಗಿ ಸಮುದಾಯದ ಜೊತೆಗಿರುವುದು ಬಹುದೊಡ್ಡ ಹೆಮ್ಮೆ. ನನ್ನಂತೆ ಶಾಲಾ ಶಿಕ್ಷಕನಾಗಬೇಕಾಗಿದ್ದ ಸಹಪಾಠಿ, ಶಿಕ್ಷಕ ಹುದ್ದೆಯನ್ನು ನಿರಾಕರಿಸಿ ಸಂಘರ್ಷದ ನೊಗ ಹೊತ್ತು ಸಮುದಾಯದ ಶಿಕ್ಷಕನಾಗಿದ್ದು ಆದರ್ಶನೀಯವಾಗಿದೆ.

  • ರಮೇಶ ಗಬ್ಬೂರ್

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!