ಇಂದು ಅಕ್ಷರ ಸಂತ ಬಸವಲಿಂಗ ಪಟ್ಟದೇವರ 73ನೇ ಹುಟ್ದಬ್ಬ. ಇವರ ಬದುಕು ಮತ್ತು ಇವರು ಸಾಗಿ ಬಂದ ದಾರಿ ನಮ್ಮಂತಹ ಆಧುನಿಕ ತಲೆಮಾರಿನ ಯುವಜನೆತೆಗೆ ಮತ್ತು ಮಠಾಧೀಶರಿಗೆ ಒಂದು ರೋಲ್ ಮಾಡೆಲ್ ಆಗಿದೆ. ಒಂದೆಡೆ, ಡಾ. ಚನ್ನಬಸವ ಪಟ್ಟದೇವರು ತನ್ನ ಬೆವರು, ರಕ್ತ ಬಸಿದು ಕಟ್ಟಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅವರ ಬೊಳೆತನ ಹಾಗೂ ಅತಿನಂಬಿಕೆಯಿಂದಾಗಿ ತನ್ನ ಕಣ್ಣೆದುರೆ ಖಂಡ್ರೆ ಕುಟುಂಬದ ಕೈವಶವಾಯಿತು. ಇನ್ನೊಂದೆಡೆ, ತಮ್ಮ ಗುರುಗಳೇ ಸ್ವತಃ ತಮ್ಮ ತಲೆಯಮೇಲೆ ಕಲ್ಲು, ಮಣ್ಣು ಹೊತ್ತಿ ನಿರ್ಮಿಸಿದ ನೂತನ ಅನುಭವ ಮಂಟಪವೂ ಮುರುಘಾಶ್ರೀಗಳು ಕಪಟತನದಿಂದ ಇವರಿಂದ ಕಬಳಿಸಿಕೊಂಡರು. ಮತ್ತೊಂದೆಡೆ, ಆಗ ಮಠದಲ್ಲಿ ಒಂದು ಸಣ್ಣ ಬಾತ್‌ರೂಂ ಕಟ್ಟಿಸಿಕೊಳ್ಳಲೂ ಇವರಲ್ಲಿ ಆರ್ಥಿಕ ಶಕ್ತಿ ಇರಲಿಲ್ಲ. ಮಗದೊಂದೆಡೆ ತರಳುಬಾಳು ಮಠದಂತೆ ತಮ್ಮ ಮಠಕ್ಕೆ ಯಾವುದೇ ಜಾತಿ\ಉಪಜಾತಿಯ ಬಲವೂ ಇರಲಿಲ್ಲ. ಮೇಲಾಗಿ ಮಠದ ಸುತ್ತಲೂ ಭಯದ ಕಾರ್ಮೋಡ.
ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಬಸವಲಿಂಗ ಪಟ್ಟದೇವರಲ್ಲದೆ ಬೇರೆ ಯಾರೇ ಆಗಿದ್ದರೂ ಪ್ರಾಯಶಃ ಒಂದೋ ಅವರು ಮಠ ಬಿಟ್ಟು ಓಡಿ ಹೊಗುತ್ತಿದ್ದರು. ಇಲ್ಲವೇ ಪಟ್ಟಭದ್ರ ಶಕ್ತಿಗಳಿಗೆ ಶರಣಾಗಿ ಕೇವಲ ಅವರ ರಬ್ಬರ್ ಸ್ಟಾಂಪ್ ಆಗಿ ಮೂಲೆಗುಂಪಾಗುತ್ತಿದ್ದರು. ಆದರೆ, ಇಂದು ಇವರೊಂದು ಚರಿತ್ರೆಯೆ ನಿರ್ಮಿಸಿದ್ದಾರೆ. ಇಂದು ಭಾಲ್ಕಿಮಠ ಮತ್ತೇ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ತಕ್ಕಮಟ್ಟಿಗೆ ಆರ್ಥಿಕವಾಗಿಯೂ ಬೆಳೆದು ನಿಂತಿದೆ. ಇದರ ಸಂಪೂರ್ಣ ಶ್ರೇಯಸ್ಸು ಬಸವಲಿಂಗ ಪಟ್ಟದೇವರಿಗೆ ಸಲ್ಲಬೇಕು. ಇಲ್ಲದಿದ್ದರೆ ಅದು ಚರಿತ್ರೆಗೆ ಬಗೆಯುವ ದ್ರೋಹವಾಗುತ್ತದೆ. ಇವರಲ್ಲಿ ಅಂತರ್ಗತವಾಗಿರುವ ಕಾರುಣ್ಯ, ಛಲ ಮತ್ತು ಇವರ ದಣಿವರಿಯದ ಅಪಾರ ದುಡಿಮೆಯಿಂದಾಗಿ ಇದು ಸಾಧ್ಯವಾಗಿದೆ. ಕಬಳಿಸಿದರೊಂದಿಗೆ, ಕಸಿದುಕೊಂಡವರೊಂದಿಗೆ ಜಗಳಕ್ಕಿಳಿಯದೆ, ಅದರ ಉಸಾಬರಿಗೂ ಹೋಗದೆ, ಕಂಗಳಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು 1992 ರಲ್ಲಿ ʻಹಿರೇಮಠ ಸಂಸ್ಥಾನ ವಿದ್ಯಾಪೀಠʼ ಎಂಬ ಸಸಿ ನೆಟ್ಟಿದರು. ಇಂದು ಈ ಸಂಸ್ಥೆ ಕಡೆ ಇಡೀ ನಾಡೇ ತಿರುಗಿ ನೋಡುವಂತೆ ಬೆಳೆದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಮತ್ತು ಸಾವಿರಾರು ಕುಟುಂಬಕ್ಕೆ ಅನ್ನದ ದಾರಿಯಾಗಿದೆ.
ಪಟ್ಟದೇವರ ಬಸವ ಪ್ರೀತಿ, ಲಿಂಗಾಯತ ಧರ್ಮ ನಿಷ್ಠೆ, ಇವರ ಸೈದ್ಧಾಂತಿಕ ವಿರೋಧಿಗಳು ಸಹ ಅಲ್ಲಗಳೆಯುದಿಲ್ಲ. ತನ್ನ ಆರೋಗ್ಯವನ್ನು ಲೆಕ್ಕಿಸದೇ ಈ ಇಳಿವಯಸ್ಸಿನಲ್ಲೂ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕರ್ನಾಟಕ ಒಳಗೊಂಡಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಾದಂತ್ಯ ಬಸವ ತತ್ವ ಪಸರಿಸುತ್ತಿದ್ದಾರೆ. ಲಿಂಗಾಯತ ಹೋರಾಟದ ವಿಷಯದಲ್ಲಿ ಇವರಿಗಿರುವ ಬದ್ಧತೆ ಪ್ರಶ್ನಾತೀತ. ಇಂದು ಬಹುತೇಕ ಸ್ವಾಮಿಗಳೂ ರಾಜಕಾರಣಿಗಳೂ ಹೋರಾಟದ ಕಣದಿಂದ ಮುಖ ತಿರುಗಿಸಿದ್ದಾರೆ. ಆದರೆ ಇವರು ಮಾತ್ರ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆದಿಲ್ಲ. ಅದೇ ಉತ್ಸಾಹ, ಅದೇ ಕಾಳಜಿ, ಅದೇ ಬದ್ಧತೆ, ಅದೇ ನಿಷ್ಠೆಯಿಂದ ಇವತ್ತಿಗೂ ಶ್ರಮಿಸುತ್ತಿದ್ದಾರೆ. ಧರ್ಮದ ವಿಷಯ ಬಂದಾಗ ಯಾವ ಮುಲಾಜಿಲ್ಲದೆ ಹೇಳಿಕೆ ನೀಡುತ್ತಾ ಹೋರಾಟದ ಕಾವು ಆರದಂತೆ ನೋಡಿಕೊಳ್ಳುತ್ತಿದ್ದಾರೆ.
ಇವರು ಜಾತಿಯ ಬಲದಿಂದ ಮಠದ ಪೀಠಾಧಿಪತಿ ಆದವರಲ್ಲ; ತತ್ವದ ಬಲದಿಂದ ಸ್ವಾಮೀಜಿಗಳಾದವರು. ಇಂದು ನಾಡಿನ ಬಹುತೇಕ ಮಠಾಧೀಶರು ತಮ್ಮ ಜಾತಿ, ಉಪಜಾತಿಗಳ ಮೋಹದಿಂದ ಇನ್ನೂ ಹೊರಗೆ ಬಂದಿಲ್ಲ. ಅದೆ ಕೊಚ್ಚೆಯಲ್ಲಿ ಹೊರಳಾಡುತ್ತಿದ್ದರೆ. ಮಠಗಳಲ್ಲಿ ಕಾಲಿಟ್ಟ ತಕ್ಷಣ ಜಾತಿ, ಉಪಜಾತಿಯ ಮೋಹಪಾಶದ ಗಬ್ಬುನಾತ ನಮ್ಮ ಮೂಗಿಗೆ ಬಡೆಯುತ್ತದೆ. ವಾಸ್ತವವಾಗಿ ಇವು ಮಠಗಳಲ್ಲ, ಜಾತಿ-ಉಪಜಾತಿಗಳನ್ನ ಪೋಷಿಸುವ ನರ್ಸರಿ ಸ್ಕೂಲ್ ಗಳಾಗಿವೆ. ಇಂತಹ ಮಠದ ಸ್ವಾಮಿಜಿಗಳು ಲಿಂಗಾಯತ ಸ್ವಾಮೀಜಿಗಳಲ್ಲ. ಅವರು ಕೇವಲ ಯಾವುದೋ ಒಂದು ಜಾತಿ ಮತ್ತು ಉಪಜಾತಿ ಶ್ರೀಗಳು ಅಷ್ಟೇ. ಭಾಲ್ಕಿ ಮಠಕ್ಕೆ ಭೂತಗನ್ನಡಿ ಹಾಕಿ ಹುಡುಕಿದರೂ ಜಾತಿ, ಉಪಜಾತಿಯ ಕರಿನೆರಳಿನ ಸಣ್ಣ ಛಾಯೆಯೂ ಸಿಗುವುದಿಲ್ಲ. ಇಂದು ಭಾಲ್ಕಿಮಠ ಹಂತಹಂತವಾಗಿ ಸಮಾಜದ ಕೇಂದ್ರ ಸ್ಥಾನಕ್ಕೆ ಬರುತ್ತಿದೆ. ಇದಕ್ಕೆ ಮಠದ ಈ ಜಾತ್ಯಾತೀತ ನಿಲುವೂ ಕಾರಣವಾಗಿದೆ.
ಇಂದು ಬಸವಕಲ್ಯಾಣದಲ್ಲಿ ಭವ್ಯವಾದ ನೂತನ ಅನುಭವ ಮಂಟಪದ ಕಟ್ಟಣ ಆರಂಭವಾಗಿದೆ. ಈ ಐತಿಹಾಸಿಕ ಕಟ್ಟಡಕ್ಕಾಗಿ ಪಟ್ಟದೇವರು ಹಾಕಿದ ಶ್ರಮ ಹೇಳತಿರದು. ಇದಕ್ಕಾಗಿ ಬೆಂಗಳೂರಿಗೆ ಅಡ್ಡಾಡಿದ್ದು ಲೆಕ್ಕವೇ ಇಲ್ಲ. ಜತೆಗೆ ತನ್ನ ಅಧೀನದಲ್ಲಿರುವ ನಾಲ್ಕಾರು ಕೋಟಿ ಬೆಲೆಬಾಳುವ ಎಂಟು ಎಕರೆ ಜಮೀನನ್ನು ಯಾವ ಷರತ್ತಿಲ್ಲದೆ ಅನುಭವ ಮಂಟಪ ಕಟ್ಟಲು ಸರ್ಕಾರಕ್ಕೆ ಪುಕ್ಕಟೆಯಾಗಿ ನೀಡಿದ್ದಾರೆ. ಇದು ಇವರ ಬಸವ ನಿಷ್ಠೆಯ ದ್ಯೋತಕ.
ತಾನಿನ್ನು ಗಟ್ಟಿಮುಟ್ಟಾಗಿರುವಾಗಲೇ ತಮ್ಮ ಮಠಕ್ಕೆ ತನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಂಡು, ಅವರಿಗೆ ಮಠದ ಸಂಪೂರ್ಣ ಜವಾಬ್ದಾರಿವಹಿಸಿ, ಅವರ ಬೆಳವಣೆಗೆಯಲ್ಲೇ ತನ್ನ ಬೆಳವಣಿಗೆ ಕಂಡು ಖುಷಿ ಪಡುವದಿದೆಯಲ್ಲ, ಅದು ಸಾಮಾನ್ಯವಲ್ಲ. ಅದು ಬಸವಲಿಂಗ ಪಟ್ಟದೇವರಿಂದಲ್ಲದೆ ಇನ್ಯಾರಿಂದಲೂ ಸಾಧ್ಯವಿಲ್ಲವೇನೋ! “ಇಂದು ಮಠಗಳಲ್ಲಿ ಬಸವಲಿಂಗ ಪಟ್ಟದೇವರಂತಹ ಗುರು – ಗುರುಬಸವ ಪಟ್ಟದೇವರಂತಹ ಶಿಷ್ಯ ಕಾಣುವುದೇ ಅಪರೂಪವಾಗಿದೆ. ಇವರಿಬ್ಬರ ಜೋಡಿ ನಮಗೆಲ್ಲ (ಮಠಾಧೀಶರಿಗೆ) ಒಂದು ಮಾದರಿಯಾಗಿದೆ” ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯನಿಲ್ಲ..
ಇವರ ಅಪಾರ ದುಡಿಮೆ, ಸೇವೆ, ಛಲ, ಬಸವ ನಿಷ್ಠೆ, ಕಾರುಣ್ಯ, ಗುರು-ಶಿಷ್ಯರ ಪ್ರಿತಿ ಚರಿತ್ರೆ ದಾಖಲಿಸಿಕೊಳ್ಳುತ್ತದೆ ಮತ್ತು ಅವು ʼಬಸವಲಿಂಗ ಪಟ್ಟದೇವರ ಪಥʼ ಎಂಬ ಹೆಸರಿನಲ್ಲಿ ಜನಜನಿತವಾಗಿ ಉಳಿಯುತ್ತವೆ.