ದ ಪಾಲಿಟಿಕ್

ಎಸ್ಟಿ ಮೀಸಲು ಕ್ಷೇತ್ರ : ಒಂದು ಕ್ಷೇತ್ರದಲ್ಲೂ ಗೆಲ್ಲದ ಬಿಜೆಪಿ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ರಾಜ್ಯದಲ್ಲಿ 15 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ದೇವದುರ್ಗ, ಸುರಪುರ, ಸಿರಗುಪ್ಪ, ಕೂಡ್ಲಿಗಿ, ಕನಕಗಿರಿ, ಮೊಳಕಾಲ್ಮುರು, ಜಗಳೂರು ಸೇರಿದಂತೆ ಒಟ್ಟು ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಈ ಸಲ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿಲ್ಲ. ಒಂದರಲ್ಲಿ ಜೆಡಿಎಸ್ ಗೆದ್ದಿದ್ದರೆ ಉಳಿದ ಹದಿನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದೆ. ಒಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ ಬಿಜೆಪಿಯ ಪ್ರಭಾವಿ ಮುಖಂಡ ಶ್ರೀರಾಮುಲು ಸಹ ಕಾಂಗ್ರೆಸ್ ಪಕ್ಷದ ನಾಗೇಂದ್ರ ವಿರುದ್ಧ 29,300 ಮತಗಳ ಭಾರಿ ಅಂತರದಿಂದ ಸೋತಿದ್ದಾರೆ. ಈ ಸೋಲು ಶ್ರೀರಾಮುಲು ಅವರ ಜಂಘಾಬಲವೇ ಉಡಗಿಸುವಂತಿದೆ. 

ಭಾರತೀಯ ಜನತಾ ಪಕ್ಷ ಈ ಸಲ ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಮತ್ತು ಎಸ್ಟಿ ಸಮುದಾಯದಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಮೇಲಾಗಿ ವಾಲ್ಮೀಕಿ ಸಮುದಾಯದ ನಟ ಸುದೀಪ್ ಅವರನ್ನು ರಾಜ್ಯಾದಾದ್ಯಂತ ಸುತ್ತಾಡಿಸಿತ್ತು. ರಾಜ್ಯದ ಚುನಾವಣಾ ರಾಜಕೀಯದ ಇತಿಹಾಸದಲ್ಲಿ ಸಿನಿಮಾ ನಟರ ಹೀರೋಯಿಸಂ ವರ್ಕೌಟ್ ಆಗಿರುವ ಉದಾಹರಣೆಯೇ ಇಲ್ಲ. ಈಗ ಸುದೀಪ್ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಇದು ಕರ್ನಾಟಕ, ಪಕ್ಕದ ಆಂಧ್ರಪ್ರದೇಶ ಅಥವಾ ತಮಿಳುನಾಡು ಅಲ್ಲ. ಸುದೀಪ್ ಮಾತು ಬಿಜೆಪಿಗೆ ಚಪ್ಪಾಳೆ, ಶಿಳ್ಳೆ, ಕೇಕೆ ಬಿಟ್ಟರೆ ಮತವನ್ನು ತಂದುಕೊಡಲಿಲ್ಲ. ಅವರು ಯಾರ ಪರವಾಗಿ ಮತಯಾಚನೆ ಮಾಡಿದ್ದಾರೋ ಅವರಲ್ಲಿ ಬಹುತೇಕರು ಸೋತಿದ್ದಾರೆ. 

ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿಯವರು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು 241 ದಿನಗಳು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ‌ಧರಣಿ ಸತ್ಯಾಗ್ರಹ ಮಾಡಿದರು.ಅವರ ಈ ಹೋರಾಟಕ್ಕೆ ಮಣಿದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3% ರಿಂದ 7 % ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಸಹಜವಾಗಿ ಈ ಸಲ ಪರಿಶಿಷ್ಟ ಪಂಗಡದ ಮತಗಳು ಸಾಲಿಡ್ ಆಗಿ ಬಿಜೆಪಿಗೆ ಬರುತ್ತವೆ ಎಂದು ಸರ್ಕಾರ ಭಾವಿಸಿತು. ಆದರೆ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಚುನಾವಣಾ ಹೊಸ್ತಿಲಲ್ಲಿ ಸರ್ಕಾರದ ಈ ನಡೆಯನ್ನು ಸಮುದಾಯ ಅದೊಂದು ಚುನಾವಣಾ ಆಶ್ವಾಸನೆ ತರಹ ನೋಡಿತು ವಿನಾ ಸರ್ಕಾರವನ್ನು ನಂಬಲಿಲ್ಲ. ನಂಬಿದರೆ ಇವತ್ತು ಎಸ್ ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಂಬಿದರೆ ಬಹುತೇಕ ಕಡೆ ಪಕ್ಷ ಗೆಲ್ಲುತ್ತಿತ್ತು. 

ಬಿಜೆಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೀಸಲಾತಿಯ ಜೇನು ಗೂಡಿಗೆ ಕೈ ಹಾಕಿ ಸುಟ್ಟುಕೊಂಡಿದೆ. ಏನೇನೋ ಗಿಮಿಕ್ ಮಾಡಲು ಹೋಗಿ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದಂತಾಗಿದೆ. ಇದು ಕೇವಲ ಪರಿಶಿಷ್ಟ ಪಂಗಡದ ವಿಷಯದಲ್ಲಿ ಮಾತ್ರವಲ್ಲ. ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಶಿಫಾರಸಿನಿಂದಾಗಿ ಲಂಬಾಣಿ ಸಮುದಾಯವೂ ಬಿಜೆಪಿ ವಿರುದ್ಧ ಸಿಡಿದೆದ್ದು ನಿಂತಿತ್ತು. ಕೆಲ ಕಡೆ ಈ ಸಮುದಾಯದ ಆಕ್ರೋಶ ಮತವಾಗಿಯೂ ಪರಿವರ್ತನೆಯಾಗಿವೆ. ಹಾಗೆಯೇ, ಮುಸ್ಲಿಂ ಮೀಸಲಾತಿ ರದ್ದು ಪಡಿಸಿದರ ಫಲವಾಗಿ ಆ ಸಮುದಾಯ ಸಾಲಿಡ್ ಆಗಿ ಕಾಂಗ್ರೆಸಿಗೆ ಮತ ನೀಡಿದೆ. ಮುಸ್ಲಿಮರು ಹಳೆ ಮೈಸೂರು ಭಾಗದಲ್ಲಿ ಯಾವಾಗಲೂ ಜೆಡಿಎಸ್ ಪಕ್ಷಕ್ಕೆ ಮತ ನೀಡುತ್ತಿದ್ದರು. ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದಂತಿದೆ. ಹಾಗಾಗಿಯೇ, ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪುಟಿದೆದ್ದು ಗೆಲುವಿನ ನಗೆ ಬೀರಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!