ದ ಪಾಲಿಟಿಕ್

ಕಲ್ಯಾಣ ಕರ್ನಾಟಕ | ಈ ಸಲ ಮಾದಿಗ ಸಮುದಾಯಕ್ಕೆ ಮಣೆ ಹಾಕದ ಕಾಂಗ್ರೆಸ್. 

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕಲ್ಯಾಣ ಕರ್ನಾಟಕದಲ್ಲಿ ನಲ್ವತ್ತೊಂದು ಕ್ಷೇತ್ರಗಳಿದ್ದು, ಇದರಲ್ಲಿ ಎಂಟು ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ಸದಾ ಸಾಮಾಜಿಕ ನ್ಯಾಯದ ಪರವಾಗಿ ವಕಾಲತ್ತು ವಹಿಸುವ ಕಾಂಗ್ರೆಸ್ ಪಕ್ಷ ಈ ಬಾರಿ ಪರಿಶಿಷ್ಟ ಜಾತಿಯಲ್ಲೇ ಅತಿದೊಡ್ಡ ಸಮುದಾಯವಾದ ಮಾದಿಗ ಸಮುದಾಯಕ್ಕೆ ಒಂದು ಕ್ಷೇತ್ರದಲ್ಲೂ ಟಿಕೆಟ್ ನೀಡಿಲ್ಲ. ಹೀಗಾಗಿ ಈ ಭಾಗದಿಂದ ಆ ಸಮುದಾಯದ ಪ್ರಾತಿನಿಧ್ಯ ಇಲ್ಲದಂತಾಗಿದೆ. (ಇಲ್ಲಿ ಬಿಜೆಪಿ ಸಹ ಎಸ್‌ಸಿ ಬಲ ಸಮುದಾಯಕ್ಕೆ ಒಂದೂ ಟಿಕೆಟ್ ನೀಡಿಲ್ಲ) ಕಾಂಗ್ರೆಸ್ ಔರಾದ ಹಾಗೂ ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಔರಾದನಲ್ಲಿ ಮೂರು ಸಲವೂ ಗೆಲ್ಲಲೆಯಿಲ್ಲ. ಕಳೆದ ಬಾರಿ ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲೂ ಪಕ್ಷ ಸೋತಿದೆ. ಹಾಗಾಗಿಯೇ ಈ ಸಲ ಟಿಕೆಟ್ ಬದಲಾವಣೆ ಮಾಡಿ, ಹೊಸ ಪ್ರಯೋಗ ಮಾಡಿದಂತಿದೆ. ಈ ಪ್ರಯೋಗ ಕಾಂಗ್ರೆಸ್ ಪಕ್ಷಕ್ಕೆ ವರವಾಗುತ್ತದೆಯೋ ಅಥವಾ ಪ್ರಪಾತಕ್ಕೆ ತಕ್ಳುತ್ತದೆಯೋ ಎನ್ನುವುದು ಫಲಿತಾಂಶ ಬಂದ ಮೇಲೆ ಸ್ಪಷ್ಟವಾಗುತ್ತದೆ. 

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇದೇ ಭಾಗದವರು. ಅವರ ಗಮನಕ್ಕಿಲ್ಲದೆ ಟಿಕೆಟ್ ಕಟ್ ಆಗುವುದಿಲ್ಲ. ‘ಒಳಮೀಸಲಾತಿ’ ಕೂಗು ಶುರುವಾದಾಗಿನಿಂದ ಎಡ – ಬಲ ಸಮುದಾಯದ ಮಧ್ಯೆ ದೊಡ್ಡ ಕಂದಕವೆ ನಿರ್ಮಾಣವಾಗಿದೆ. ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡಬೇಕಿತ್ತು. ಆದರೇಕೋ ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸಿ, ಕೊನೆಗೆ ಶಿಫಾರಸು ಮಾಡಲೇ ಇಲ್ಲ. 

ಇದನ್ನೂ ಓದಿ : ಕಲ್ಯಾಣ ಕರ್ನಾಟಕ | ಎಸ್‌ಸಿ ‘ಬಲ ಸಮುದಾಯ’ಕ್ಕೆ ಒಂದೂ ಟಿಕೆಟ್ ನೀಡದ ಬಿಜೆಪಿ. 

ಕಾಂಗ್ರೆಸ್ ಪಕ್ಷದ ಬಲ ಸಮುದಾಯದ ರಾಜಕಾರಣಿಗಳೆ ಇದಕ್ಕೆ ಕಾರಣವೆಂದು ಒಳಮೀಸಲಾತಿ ಹೋರಾಟ ಸಮಿತಿಯ ಮುಂಚೂಣಿ ಹೋರಾಟಗಾರರು ದೂರಿದರು. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರನ್ನು ಹೋರಾಟಗಾರರು ‘ಮಾದಿಗ’ ಕಟಕಟೆಯಲ್ಲಿ ತಂದು ನಿಲ್ಲಿಸಿದರು. ಸಮುದಾಯದ ಆಕ್ರೋಶದಲ್ಲಿ ಒಂದು ನ್ಯಾಯವಿತ್ತು. ಇವರ ಅಸಮಾಧಾನವನ್ನು ಬಿಜೆಪಿ ಮತವಾಗಿ ಪರಿವರ್ತಿಸಿಕೊಂಡು ಚುನಾವಣೆಯಲ್ಲಿ ಲಾಭ ಪಡೆದಿತ್ತು. ಬೊಮ್ಮಾಯಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ, ಸಂಪುಟ ಉಪಸಮಿತಿ ರಚಿಸಿ, ಅದರ ವರದಿ ಆಧರಿಸಿ ಕೇಂದ್ರಕ್ಕೆ ಒಳಮೀಸಲಾತಿ ಶಿಫಾರಸು ಮಾಡಿದೆ. ಇದರ ಹಿಂದೆ ಸಮುದಾಯದ ಅಥವಾ ಸಾಮಾಜಿಕ ನ್ಯಾಯದ ಕಾಳಜಿಗಿಂತಲೂ ವೋಟ್ ಬ್ಯಾಂಕ್ ರಾಜಕೀಯ ಇದ್ದದ್ದು ಗುಟ್ಟೆನಿಲ್ಲ. ಯಾವುದೇ ಅಧ್ಯಯನ ವರದಿಯ ಆಧಾರವಿಲ್ಲದೆ ಅವಸರವಸರವಾಗಿ ಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಒಳಮೀಸಲಾತಿ ಮತ್ತಷ್ಟು ಕಗ್ಗಂಟಾಗಿಸಿದೆ.

ಕಳೆದ ಚುನಾವಣೆಯಲ್ಲಿ ಮಾದಿಗ ಸಮುದಾಯ ಕೋಪದಲ್ಲಿ ಬಿಜೆಪಿ ಕಡೆಗೆ ಮುಖ ಮಾಡದ್ದು ಸುಳ್ಳಲ್ಲ. ಸಮುದಾಯದ ಈ ರಾಜಕೀಯ ನಡೆ ಅಪ್ರಬುದ್ಧತೆಯಿಂದ ಕೂಡಿರಬಹುದು, ಆದರೆ ಅವರ ಕೋಪಕ್ಕೆ ಒಂದು ಸಕಾರಣವಿದೆ. ಅದನ್ನು ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಜಾತಿಯ’ಬಲ’ಸಮುದಾಯದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಂಡು, ಅವರ ಕೋಪ – ಅಸಮಾಧಾನ ಶಮನಗೊಳಿಸಲು ಯತ್ನಿಸಬೇಕಿತ್ತು. ಒತ್ತಡಕ್ಕೆ ಒಳಗಾಗಿ ಅದು ಸಾಧ್ಯವಾಗಲೇ ಇಲ್ಲ. ಆದರೀಗ ಕಾಂಗ್ರೆಸ್ ಪಕ್ಷವೂ ಒಳಮೀಸಲಾತಿ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿರುವುದು ಮಾದಿಗ ಸಮುದಾಯ ಹಾಗೂ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. 

ಬರೀ ಮಾತಿಗೆ ಸೀಮಿತವಾಗದೆ, ಈ ಸಲ ಮಾದಿಗ ಸಮುದಾಯಕ್ಕೆ ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆ ಇಡಬೇಕಿತ್ತು. ಆದರೇಕೋ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಡವಿದೆ. ಇದು ಸಮುದಾಯದಲ್ಲಿ ಕಾಂಗ್ರೆಸ್ ಮೇಲೆ ತಣ್ಣಗಾಗುತ್ತಿದ್ದ ಅಸಮಾಧಾನ ಮತ್ತೇ ಹೆಚ್ಚಿಸಿದೆ. ಜತೆಗೆ ಇದಕ್ಕೆ ನೇರ ಹೊಣೆ ಖರ್ಗೆಯವರೆಂದು ಆರೋಪಿಸಿ, ಎಡ ಸಮುದಾಯ ಖರ್ಗೆಯವರ ಮೇಲೆ ಮತ್ತೇ ಮುನಿಸಿಕೊಂಡಿದೆ. ಫಲವಾಗಿ ಕಾಂಗ್ರೆಸ್ ಮೇಲೆ ಅಸಮಾಧಾನವೂ ಸುಪ್ತವಾಗಿ ಹರಿದಾಡುತ್ತಿದೆ. ನಿನ್ನೆ ಔರಾದನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನರಾವ ಸಿಂಧೆ ನಾಮಿನೇಷನ್ ಹಾಕುವ ಸಂದರ್ಭದಲ್ಲಿ ಅದು ಸ್ಪಷ್ಟವಾಗಿ ಕಾಣುತಿತ್ತು. ನಾಮಿನೇಷನ್ ನಲ್ಲಿ ಬಹುತೇಕ ಮಾದಿಗ ಸಮುದಾಯವರು ಗೈರು ಇದ್ದದ್ದು ಏನು ಸೂಚಿಸುತ್ತಿದೆ? 

ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಡ ಸಮುದಾಯದವರ ಈ ಅಸಮಾಧಾನವನ್ನು ನಿವಾರಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೋ ಅಥವಾ ಇಲ್ಲವೋ ಎನ್ನುವುದರ ಮೇಲೆ ಅವರ ಸೋಲು-ಗೇಲುವಿನ ಭವಿಷ್ಯ ನಿರ್ಧಾರವಾಗಲಿದೆ. ಈ ಭಾಗದಲ್ಲಿ ಮಾದಿಗ ಸಮುದಾಯಕ್ಕೆ ಒಂದೂ ಟಿಕೆಟ್ ನೀಡದಿರುವುದು ಕಾಂಗ್ರೆಸ್ ಪಕ್ಷದ ತಪ್ಪು ಮಾತ್ರವಲ್ಲ, ಮೂರ್ಖತನದ ನಡೆಯಾಗಿದೆ.   

ಕಲ್ಯಾಣ ಕರ್ನಾಟಕದ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು  

ಔರಾದ (ಬಾ) – ಡಾ. ಭೀಮಸೇನರಾವ ಸಿಂಧೆ (ಛಲವಾದಿ)

ಚಿತ್ತಾಪುರ : ಪ್ರಿಯಾಂಕ್ ಖರ್ಗೆ (ಛಲವಾದಿ)

ಕಲಬುರಗಿ ಗ್ರಾಮೀಣ : ರೇವುನಾಯಕ ಬೆಳಮಗಿ (ಲಂಬಾಣಿ)

ಚಿಂಚೋಳಿ : ಸುಭಾಷ ರಾಠೋಡ (ಲಂಬಾಣಿ)

ಲಿಂಗಸುಗೂರು – ದುರ್ಗಪ್ಪ ಎಸ್ ಹೂಲಗೇರಿ (ಭೋವಿ)

ಹಗರಿಬೊಮ್ಮನಹಳ್ಳಿ – ಎಸ್. ಭೀಮನಾಯ್ಕ (ಲಂಬಾಣಿ)

ಹೂವಿನಹಡಗಲಿ : ಪಿ.ಟಿ. ಪರಮೇಶ್ವರನಾಯಕ (ಲಂಬಾಣಿ)

ಕನಕಗಿರಿ – ಶಿವರಾಜ್ ತಂಗಡಗಿ (ಭೋವಿ)

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!