ಕೇಂದ್ರ ಸಚಿವ ಭಗವಂತ ಖೂಬಾ ಲಕ್ಕಿ ರಾಜಕಾರಣಿ. ಅವರಿಗೆ 2014 ರಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುತ್ತದೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ. ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿ, ಅದು ಕೈಗೆಟುಕದೆ ಸ್ಪರ್ದೆಯಿಂದ ಬದಿಗೆ ಸರದಿದ್ದರು. ರಾಮದೇವ್ ಬಾಬಾ ಕೃಪಾಕಟಾಕ್ಷ ಹಾಗೂ ಮಾಜಿ ಸಚಿವ, ಹಾಲಿ ಔರಾದ್ ಶಾಸಕ ಪ್ರಭು ಚೌವ್ಹಾಣ್ ಒತ್ತಡ, ಶ್ರಮದ ಫಲದಿಂದ ಬೀದರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆದು ಮೋದಿ ಅಲೆಯಿಂದಾಗಿ ಎರಡು ಸಲ ಸಲೀಸಾಗಿ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ಖಾಲಿಯಾಗಿದ್ದ ಮಂತ್ರಿ ಸ್ಥಾನವೂ ಲಿಂಗಾಯತ ಕೋಟಾದಲ್ಲಿ ಅವರಿಗೆ ದಕ್ಕಿದೆ.
ಎರಡೆರಡು ಸಲ ಗೆದ್ದು, ಕೇಂದ್ರ ಸಚಿವರಾದರೂ ಸಹ ನಾಯಕನನ್ನಾಗಿ ಹೊರಹೊಮ್ಮಲು ಅವರಿಂದ ಈವರೆಗೂ ಸಾಧ್ಯವಾಗಿಲ್ಲ. ಈ ಸಲವೂ ಮೋದಿ ನಾಮಬಲದ ಮೇಲೆ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಇದೆ. ಮಂತ್ರಿ ಆದಮೇಲೆ ಅವರ ಹಾವಭಾವ, ಗತ್ತೇ ಬದಲಾಗಿದೆ ಎಂದು ಅವರ ಪಕ್ಷದ ಕಾರ್ಯಕರ್ತರೇ ಅಸಮಾಧಾನದಿಂದ ಗೋಳು ಹೇಳಿಕೊಳ್ಳುತ್ತಿದ್ದಾರೆ. ʼಈ ಸಲ ನಾವು ಖೂಬಾಗೆ ಮತ ಹಾಕುವುದಿಲ್ಲವೆಂದುʼ ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಟ್ರೆಂಡ್ ಏನಾದರೂ ಲೋಕಸಭಾ ಚುನಾವರೆಗೂ ಇದ್ದರೆ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿವೆ.
ಒಂದೆಡೆ ಕಾರ್ಯಕರ್ತರ ಅಸಮಾಧಾನ, ಇನ್ನೊಂದೆಡೆ ಮೋದಿ ಅಲೆಯೂ ಮಸುಕಾಗಿದೆ, ಮತ್ತೊಂದೆಡೆ ಜಿಲ್ಲೆಯ ಸ್ವಪಕ್ಷದ ಔರಾದ ಶಾಸಕ ಪ್ರಭು ಚೌವ್ಹಾಣ್ ಮತ್ತು ಬಸವಕಲ್ಯಾಣ ಶಾಸಕ ಶರಣು ಸಲಗರ ಸಂಸದರ ವಿರುದ್ಧ ಫುಲ್ ವೈಲೆಂಟ್ ಆಗಿದ್ದಾರೆ. ಇದು ಕ್ರಿಯೆಗೆ ಪ್ರತಿಕ್ರಿಯವೋ ಅಥವಾ ರಾಜಕೀಯ ಸೇಡೋ ಅಥವಾ ಅಹಮಿಕೆಯ ಪ್ರತಿಫಲವೋ ಅಥವಾ ಶಾಸಕರ ಒಣಮಾತೋ… ಅದು ಲೋಕಸಭಾ ಚುನಾಚಣೆಯ ಫಲಿತಾಂಶವೆ ಹೇಳುತ್ತದೆ.
ಇದನ್ನೂ ಓದಿ : ಶಾಸಕ ಪ್ರಭು ಚೌವ್ಹಾಣ್ ಹತ್ಯೆಗೆ ಬಿಜೆಪಿ ಸಂಸದ ಭಗವಂತ ಖೂಬಾ ಸಂಚು!
ಪ್ರಭು ಚೌವ್ಹಾಣ್ ಅವರಂತೂ ಈ ಸಲ ಖೂಬಾಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ನಾನು ಶ್ರಮಿಸುವುದಿಲ್ಲವೆಂದು ಕಾರ್ಯಕರ್ತರ, ಪಕ್ಷದ ಜಿಲ್ಲಾಧ್ಯಕ್ಷರ ಎದುರೇ ಬಹಿರಂಗವಾಗಿಯೆ ಸಾರಿದ್ದಾರೆ. ಶರಣು ಸಲಗರ ಕೂಡಾ ಈ ಸಲ ಪಕ್ಷದಿಂದ ಮರಾಠ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆಂದು ಬಹಿರಂಗವಾಗಿ ಹೇಳುವ ಮೂಲಕ ಖೂಬಾ ಹೆಸರು ಎತ್ತದೆ ಸೂಚ್ಯವಾಗಿ ಅವರನ್ನು ವಿರೋಧಿಸಿದ್ದಾರೆ.
ಇದು ರಾಜಕೀಯ. ರಾಜಕೀಯ ಅಂದಮೇಲೆ ಸೇಡು, ಕ್ರಿಯೆಗೆ – ಪ್ರತಿಕ್ರಿಯೆ, ತಮ್ಮ ರಾಜಕೀಯ ಉಳಿವು-ಬೆಳವಣಿಗೆಗೆ ತಂತ್ರ-ಕುತಂತ್ರ ಹೆಣೆಯುವುದು, ಒಬ್ಬರ ಕಾಲು ಹಿಡಿದು ಮತ್ತೊಬ್ಬರು ಎಳೆಯುವುದು ಸಹಜವಾಗಿ ಇದ್ದದ್ದೆ. ಆದರೆ ಇಲ್ಲಿ ವೈಯಕ್ತಿಕ ದ್ವೇಷಕ್ಕೆ ತಿರುಗಿದೆ. ಸ್ವತಃ ಬಿಜೆಪಿಯ ಬಸವಕಲ್ಯಾಣ ಮತ್ತು ಔರಾದ ಶಾಸಕರೇ ಸಂಸದ ಖೂಬಾ ‘ನಮ್ಮ ಟಿಕೆಟ್ ತಪ್ಪಿಸಲು ಅವಿರತವಾಗಿ ಶ್ರಮಿಸಿದ್ದಲ್ಲದೆ ಚುನಾವಣೆಯಲ್ಲಿ ನಮ್ಮನು ಸೋಲಿಸಲು ಪ್ರಯತ್ನಿಸಿದ್ದಾರೆಂದೆʼ ಬಹಿರಂಗವಾಗಿಯೇ ಆರೋಪಿಸಿದ್ದಾರೆ. ಔರಾದ ಶಾಸಕರಂತೂ ʼನನ್ನ ಕೊಲೆಗೆ ಅವರೇ ಸಾಕಿದ ಗೂಂಡಾಗಳಿಗೆ ಸುಪಾರಿ ನೀಡಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆಂದುʼ ಕಂಡಕಂಡಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಇಬ್ಬರು ಶಾಸಕರು ಕೂಡಾ ಖುಬಾಗೆ ಟಿಕೆಟ್ ತಪ್ಪಿಸಲು ತಮ್ಮ ಕೈಲಾದ ಪ್ರಯತ್ನ ಮಾಡುವ ಸಾಧ್ಯತೆಯೂ ಇದೆ. ವಿರೋಧದ ನಡುವೆಯೂ ಸಂಸದರು ಟಿಕೆಟ್ ಪಡದರೂ ಈ ಶಾಸಕರಿಬ್ಬರೂ ಒಂದೋ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಬಹುದು ಇಲ್ಲವೇ ಕಣ್ಸನ್ನೆ, ಕೈಸನ್ನೆ ಮೂಲಕವೇ ತಮ್ಮ ತಮ್ಮ ಆಪ್ತರಿಗೆ ಹೇಳಿ ಖೂಬಾ ಸೋಲಿಗೆ ತಂತ್ರ ರೂಪಿಸಬಹುದು. ಈ ಶಾಸಕರಿಬ್ಬರಿಗೂ ತಮ್ಮದೇ ಆದ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ಔರಾದ ಶಸಕರಿಗಂತೂ ಅಚಲ ನಿಷ್ಠಾವಂತರ ಕಾರ್ಯಕರ್ತರ ಪಡೆ ಜತೆಗೆ ಜಾತಿ ಬಲವೂ ಇದೆ.
ಈ ತಲೆನೋವುಗಳ ಮಧ್ಯೆ ಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಮೈತ್ರಿಯೋ ಅಥವಾ ವಿಲೀನವೋ ಆಗುವ ಸಂಭವವಿದೆ. (ಹಾಗಾಗಿಯೇ ಈವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ) ಮೈತ್ರಿ ಏರ್ಪಟ್ಟರೆ ಕ್ಷೇತ್ರದ ‘ಅಹಿಂದ’ ಮತಗಳು ವಿಭಜನೆಯಾಗದೆ ಕಾಂಗ್ರೆಸ್ ಮತಬುಟ್ಟಿಗೆ ಜಾರಬಹುದು. ಈ ಸಲ ಕಾಂಗ್ರೆಸ್ ಪಕ್ಷದಿಂದ ಹುಮನಾಬಾದ್ ರಾಜಶೇಖರ ಪಾಟೀಲ್ ಅಖಾಡಕ್ಕೆ ಇಳಿಯಬಹುದು. ಇವರಿಗೆ ಟಿಕೆಟ್ ದೊರೆತರೆ ಚುನಾವಣಾ ಅಖಾಡ ರಂಗೇರುತ್ತದೆ.