ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಸ್ಪಷ್ಟ ಮತ್ತು ಭಾರಿ ಬಹುಮತ ನೀಡಿದ್ದಾರೆ. ಐದು ವರ್ಷಗಳ ಕಾಲ ನಿರಾಂತಕವಾಗಿ ಉತ್ತಮ ಆಡಳಿತ ನಡೆಸಿ ಎಂದು ಹರಿಸಿ ಜನರು ವಿಧಾನಸಭೆಗೆ ಕಳುಹಿಸಿದ್ದಾರೆ. ಪೂರ್ಣ ಬಹುಮತ ನೀಡಿದರೂ ಇವರು ʻಆಪರೇಷನ್ ಹಸ್ತʼ ಎಂಬ ಹೊಲಸು ರಾಜಕೀಯಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಜನರು ನೀಡಿರುವ ಬಹುಮತಕ್ಕೆ ದ್ರೋಹ ಬಗೆಯುತ್ತಿದೆ. ಮೇಲಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ʻಅವರು (ಬಿಜೆಪಿ) ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? ಕಾಲಕ್ಕೆ ತಕ್ಕಂತೆ ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆʼ ಎಂದು ಬಹಿರಂಗವಾಗಿವೇ ಮಾಧ್ಯಮಗಳ ಮುಂದೆ ಹೇಳುವ ಮೂಲಕ ʻಆಪರೇಷನ್ ಹಸ್ತʼಕ್ಕೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ʻನೀತಿಗೆಟ್ಟ ಸಮರ್ಥನೆʼ ಎನ್ನದೆ ಇದನ್ನು ಇನ್ನೇನು ಅನ್ನಬೇಕೋ?
ಈ ಕೆಟ್ಟ ರಾಜಕೀಯ ಸಂಪ್ರದಾಯವನ್ನು ದೇಶಕ್ಕೆ ಮೋದಲು ಪರಿಚಯಸಿದ್ದೆ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ. ʻಆಪರೇಷನ್ ಕಮಲʼದ ಮೂಲಕವೇ ಇವರು ಮುಖ್ಯಮಂತ್ರಿ ಆಗಿದ್ದು. ಬಿಜೆಪಿಯ ಈ ʻಆಪರೇಷನ್ ಕಮಲʼ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಇಡೀ ದೇಶದಲ್ಲೆ ದೊಡ್ಡ ಪೆಟ್ಟು ನೀಡಿದೆ. ಮೂರ್ನಾಲ್ಕು ರಾಜ್ಯದಲ್ಲಿ ಚುನಾಯಿತ ಸರ್ಕಾರ ಉರುಳಿಸಿ ಅರ್ಧ ಖರಿದಿತ,ಅರ್ಧ ಚುನಾಯಿತ ಸದಸ್ಯರನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರ ಮಾಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಬೆಳೆದು ನಿಂತಿದೆ. ಈಗ ಕಾಂಗ್ರೆಸ್ ಪಕ್ಷ ಕೂಡಾ ಆಪರೇಷನ್ ಗೆ ಮುಂದಾಗಿ ಬಿಜೆಪಿ ಸಂಪ್ರದಾಯವೇ ಮುಂದುವರೆಸಿಕೊಂಡು ಹೋಗುತ್ತಿದೆ. ಇವರಿಗೂ ಮತ್ತು ಬಿಜೆಪಿಯವರಿಗೂ ವ್ಯತ್ಯಾಸ ಏನಿರುತ್ತದೆ? ಪಕ್ಷದ ನಾಯಕರು ಮುಂದೆ ಯಾವ ಮುಖ ಇಟ್ಟುಕೊಂಡು ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೋ?
ಡಜನ್‌ಗಟ್ಟಲೇ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಜೆಡಿಎಸ್ – ಬಿಜೆಪಿಯ ಕೆಲ ರಾಜಕೀಯ ಮುಂಖಡರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಬಿಜೆಪಿ ಹಾಲಿ ಶಾಸಕರಾದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ, ಶಿವರಾಂ ಹೆಬ್ಬಾರ ಹಾಗೂ ಗೋಪಾಲಯ್ಯ ಜತೆ ಈಗಾಗಲೆ ಮಾತುಕತೆಯೂ ಮುಗದಿದೆ. ಇದಕ್ಕೆ ಡಿಕೆ ಬ್ರದರ್ ಸಾರಥ್ಯ ವಹಿಸಿದ್ದಾರೆ. ಈ ಕುಕೃತ್ಯಕ್ಕೆ ಸಿದ್ರಾಮಯ್ಯನವರ ಮತ್ತು ರಾಹುಲ್ ಗಾಂಧಿಯ ಒಪ್ಪಿಗೆಯೂ ಇದ್ದಿರಬಹುದು. ಇವರ ಒಪ್ಪಿಗೆ ಇಲ್ಲದೆ ರಾಜ್ಯದಲ್ಲಿ ʼಆಪರೇಷನ್ ಹಸ್ತʼ ನಡೆಸಲು ಹೇಗೆ ಸಾಧ್ಯ?
ಶತಾಯಗತಾಯವಾಗಿ ಈ ಬಾರಿ 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 18 ರಿಂದ 20 ಸ್ಥಾನ ಗೆಲ್ಲಬೇಕು ಎಂದು ಕಾಂಗ್ರೆಸ್ ವರಿಷ್ಠರು ಟಾಸ್ಕ್ ನೀಡಿದಂತಿದೆ. ಅದಕ್ಕೆ ಅನುಗುಣವಾಗಿಯೇ ರಾಜ್ಯ ನಾಯಕರು ಪ್ಲಾನ್ ರೂಪಿಸುತ್ತಿದ್ದಾರೆ. ಎಲ್ಲೆಲ್ಲಿ ಪಕ್ಷದ ಸಂಘಟನೆ ವೀಕ್ ಇದೆಯೇ, ವಿಧಾನಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಮತಪ್ರಮಾಣ ಕಡಿಮೆ ಬಂದಿದೆಯೋ, ಎಲ್ಲಿ ಬಿಜೆಪಿ – ಜೆಡಿಎಸ್ ಬಲಿಷ್ಠವಾಗಿದ್ದೆಯೋ ಅಂತಹ ಕ್ಷೇತ್ರದಲ್ಲಿ ʻಆಪರೇಷನ್ ಹಸ್ತʼಕ್ಕೆ ಮುಂದಾದಂತಿದೆ. ಹಾಗಾಗಿಯೇ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರಿಗೂ ಗಾಳ ಹಾಕಿದ್ದಾರೆ. ಈ ಸಂಖ್ಯೆ ಇಷ್ಟಕ್ಕೇ ನಿಲ್ಲುವುದಿಲ್ಲ. ಎಲ್ಲಿಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೈ ಆಡಿಸುತ್ತಾರೆ. ವರಿಷ್ಠರು ನೀಡಿರುವ ಟಾಸ್ಕ್ ಪೂರ್ಣ ಮಾಡಿದರೆ, ವರಿಷ್ಠರು ಎರಡೂವರೆ ವರ್ಷ ಆದಮೇಲೆ ಸಿಎಂ ಖುರ್ಚಿ ನನಗೆ ರೆಷ್ಮೆ ಬಟ್ಟೆಯಲ್ಲಿ ಸುತ್ತಿ ಕೋಡುತ್ತಾರೆ ಎಂದು ನಂಬಿಯೇ ಡಿಕೆಶಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.
ಈ ಬಿರುಗಾಳಿ ತಡೆಯುವುದು ಹೇಗೆಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ಎರಡೂ ಪಕ್ಷಗಳ ನಾಯಕರು ಚಿಂತಿತರಾಗಿದ್ದಾರೆ. ಮೊನ್ನೆ ಬಿಜೆಪಿಯ ಆರ್ ಅಶೋಕ್ ಮತ್ತು ಬಸವರಾಜ ಬೊಮ್ಮಾಯಿ ಕೂಡಿಕೊಂಡು ಬಿ ಎಸ್ ಯಡಿಯೂರಪ್ಪನವರ ಮನೆಗೆ ಹೋಗಿ ಅವರ ಜೊತೆ ತಡರಾತ್ರಿಯವರೆಗೆ ಈ ಕುರಿತು ಸಭೆ ನಡೆಸಿದ್ದಾರೆ. ಜೆಡಿಎಸ್ ಸಹ ಈಗ ಇದ್ದಕಿದ್ದಂತೆ ಫುಲ್ ಆಕ್ಟಿವ್ ಆಗಿದೆ. ಯಾರ್ಯಾರನ್ನು ಉಳಿಸಿಕೊಳ್ಳಲು ಸಾದ್ಯವೋ ಅವರನ್ನು ಉಳಿಸಿಕೊಳ್ಳಲು ಎರಡು ಪಕ್ಷದವರು ಹರಸಾಹಸ ಪಡುತ್ತಿದ್ದಾರೆ.
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯ ಮಾತನಾಡುತ್ತಿರುವ ಕಾಂಗ್ರೆಸ್ ಗೆ ಈಗ ಲಾಭ ತಂದುಕೊಡಬಹುದು ಆದರೆ ಮುಂದೆ ಇದು ಪಕ್ಷಕ್ಕೆ ಉರುಳಾಗುತ್ತದೆ.