ಇದು ಎಸ್‌ಸಿ ಮೀಸಲು ಕ್ಷೇತ್ರವಾದಾಗಿನಿಂದಲೂ ಬಿಜೆಪಿಯನ್ನು ಕಟ್ಟಿ ಹಾಕಲು ಇಲ್ಲಿ ಬಲಿಷ್ಠ ವಿರೋಧ ಪಕ್ಷವೇ ಇಲ್ಲ.ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆಲ್ಲುತ್ತ ಬಂದಿರುವ ಬಿಜೆಪಿಯ ಪ್ರಭು ಚೌಹಾಣ್ ಅವರದ್ದೇ ಪಾರುಪತ್ಯ. ಕಾಂಗ್ರೆಸ್ಸಿನಿಂದ 2004 ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಗೆದ್ದದ್ದೇ ಕೊನೆ. ಮೀಸಲು ಕ್ಷೇತ್ರವಾಗಿ ಅವರಿಲ್ಲಿಂದ ಕಾಲ್ಕಿತ್ತದ ಮೇಲೆ ಕಾಂಗ್ರೆಸಿಗೆ ಕ್ಷೇತ್ರದ ಮೇಲಿನ ಹಿಡಿತವೆ ತಪ್ಪಿ ಹೋಗಿದೆ.
ಪ್ರಸಕ್ತ ರಾಜ್ಯದಾದ್ಯಂತ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ‘ಕಮಲ’ ಸೊರಗಿದೆ. ಜಿಲ್ಲೆಯ ಔರಾದ ಹಾಗೂ ಬಸವಕಲ್ಯಾಣದ ಬಿಜೆಪಿ ಶಾಸಕರು ತುಸು ಹೆಚ್ಚೇ ಸ್ಥಳೀಯವಾಗಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಅಲೆಯನ್ನು ಎದುರಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಮರ್ಥ್ಯ ಜಿಲ್ಲೆಯ ಬಿಜೆಪಿ ಸಂಸದರಿಗಾಗಲಿ, ಶಾಸಕರಿಗಾಗಲಿ ಇಲ್ಲ. ಇಲ್ಲಿನ ಸಂಸದರೆ ‘ಮೋದಿ’ ನಾಮದ ಬಲದ ಮೇಲೆ ಗೆಲ್ಲುವುದು. ಮೋದಿ ‘ಜಪ’ ಮಸುಕಾದರೆ ಚುನಾವಣೆಯಲ್ಲಿ ಅವರ ಠೇವಣಿಯೇ ಉಳಿಯುವುದಿಲ್ಲ.
ಪ್ರಭು ಚೌಹಾಣ್ ಮೂರು ಅವಧಿಯಿಂದ ಸತತವಾಗಿ ಗೆಲ್ಲುತ್ತಾ ಬಂದರು ಕ್ಷೇತ್ರದಲ್ಲಿ ಎದ್ದುಕಾಣುವಂತಹ ಕೈಗಾರಿಕೆಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ತಂದದ್ದು ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ.ತಾಲೂಕಿನ ಎಷ್ಟೋ ಗ್ರಾಮಗಳಿಗೆ ಇನ್ನೂ ಕುಡಿಯುವ ನೀರಿನ ಸೌಕರ್ಯವೇ ಒದಗಿಸಿಲ್ಲ. ವಿರೋಧ ಪಕ್ಷ ಇಲ್ಲದ್ದಕ್ಕಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ.
ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಸಲ ಪರಿಶಿಷ್ಟ ಜಾತಿಯ ‘ಬಲ’ ಸಮುದಾಯದ ಭೀಮಸೇನರಾವ ಸಿಂಧೆ ಅವರು ಕಣಕ್ಕಿಳಿದಿದ್ದಾರೆ. ಇಲ್ಲಿ ಅವರ ಗೆಲುವಿಗೆ ಬೇಕಾಗುವಷ್ಟು ಪಕ್ಷದ ಸಾಂಪ್ರದಾಯಿಕ ಮತಗಳಿವೆ. ಮತಗಳೊಂದಿಗೆ ಅವರು ಮುಂದೆ ಸಾಕಷ್ಟು ಸವಾಲುಗಳು ಇವೆ. ಆ ಸವಾಲುಗಳನ್ನು ಎದುರಿಸಿ, ಅವುಗಳನ್ನು ಹೇಗೆ ಅವರು ಹಿಮ್ಮೆಟ್ಟಿಸುತ್ತಾರೆ ಎನ್ನುವುದರ ಮೇಲೆಯೇ ಅವರ ಸೋಲು – ಗೆಲುವಿನ ಭವಿಷ್ಯ ಅಡಗಿದೆ.
ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಇದೆ. ಆದರೆ ಜನರನ್ನು ಮತಗಟ್ಟೆಗೆ ತಂದು ವೋಟ್ ಹಾಕಿಸುವ ಕಾರ್ಯಕರ್ತರ ಪಡೆಯೇ ಇಲ್ಲ. 2008 ರಿಂದ ಇಲ್ಲಿ ಪಕ್ಷಕ್ಕೆ ಸಂಘಟಿತ ಕಾರ್ಯಕರ್ತರ ಪಡೆಯೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ಬಾವುಟ ಹಿಡಿದು ರಸ್ತೆಗೆ ಇಳಿಯುತ್ತಾರೆ. ಆಮೇಲೆ ಅದು ಮಡಚಿಟ್ಟು ಮತ್ತೆ ಚುನಾವಣೆ ಬಂದಾಗಲೇ ಅದನ್ನ ತೆಗೆಯುತ್ತಾರೆ. ಇದಕ್ಕೆ ಕಾರಣವೂ ಇದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು, ಅವರಲ್ಲಿ ಭರವಸೆಯನ್ನು ಮೂಡಿಸುವ ಒಬ್ಬನೂ ಬಲಿಷ್ಠ ನಾಯಕನಿಲ್ಲ. ನಾಯಕನಿಲ್ಲದೆ ಪಕ್ಷವೂ, ಪಕ್ಷದ ಕಾರ್ಯಕರ್ತರೂ ಸೋರಗಿದ್ದಾರೆ. ಸೋರಗಿದ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವುದು, ಅವರಲ್ಲಿ ಗೆಲುವಿನ ಭರವಸೆಯನ್ನು ಬಿತ್ತುವುದು ‘ಸಿಂಧೆ’ಯವರ ಮುಂದಿರುವ ಬಹುದೊಡ್ಡ ಜವಾಬ್ದಾರಿಯಾಗಿದೆ.
ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲೂ, ಮತ್ತೇ ಈ ಸಲವೂ ಹೊರಗಿನ ಅಭ್ಯರ್ಥಿಗಳಿಗೆ ಇಲ್ಲಿ ಮಣೆ ಹಾಕಿದೆ. ಇದರಿಂದೇನು ಕಳೆದ ಚುನಾವಣೆಯ ಮೇಲೂ ಯಾವುದೇ ದುಷ್ಪರಿಣಾಮ ಬೀರಿಲ್ಲ, ಈಗಲೂ ಬೀರುವುದಿಲ್ಲ.ಆದರೆ ಇಲ್ಲಿ ಕಳೆದ ಮೂರು ಚುನಾವಣೆಯಲ್ಲೂ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಜಾತಿ ಸಮೀಕರಣವನ್ನು ಸರಿದೂಗಿಸಲು ಮಣೆ ಹಾಕಿತ್ತು. ಆದರಿಲ್ಲಿ ಮೂರು ಸಲವೂ ಪಕ್ಷ ಸೋತಿದೆ. ಈ ಸಲ ಅಳೆದು ತೂಗಿ ‘ಬಲ'(ಛಲವಾದಿ) ಸಮುದಾಯಕ್ಕೆ ಸೇರಿದ ‘ಸಿಂಧೆ’ಯವರಿಗೆ ಮಣೆ ಹಾಕಿದೆ. ಸಹಜವಾಗಿ ತಾಲೂಕಿನಲ್ಲಿ ಪರಿಶಿಷ್ಟರಲ್ಲಿ ತುಸು ಹೆಚ್ಚೇ ಇರುವ ಮಾದಿಗ ಸಮುದಾಯಕ್ಕೆ ಹಾಗೂ ಸಮುದಾಯದ ಮುಖಂಡರಿಗೆ ಬೇಸರ ಮೂಡಿಸಿದೆ. ಇವತ್ತು ನಾಮಿನೇಷನ್ ಹಾಕುವ ಸಂದರ್ಭದಲ್ಲಿ ಬಹುತೇಕ ಮಾದಿಗ ಸಮುದಾಯ ದೂರವೇ ಉಳಿದಿದ್ದು ಢಾಳಾಗಿ ಎದ್ದು ಕಾಣುತ್ತಿತ್ತು. ಈ ಸಮುದಾಯದ ಅಸಮಾಧಾನ ನಿವಾರಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರೆದುರಿಗೊಂದು ಸವಾಲಿನ ಕೆಲಸವೇ ಇದೆ.
ಕಲ್ಯಾಣ ಕರ್ನಾಟಕಲ್ಲಿ ಎಂಟು ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ಇಲ್ಲಿ ಕಾಂಗ್ರೆಸ್ ಪಕ್ಷ ಒಂದು ಕ್ಷೇತ್ರದಲ್ಲೂ ‘ಎಡ’ ಸಮುದಾಯಕ್ಕೆ ಮಣೆ ಹಾಕಿಲ್ಲ. ಅದೇರೀತಿ ಬಿಜೆಪಿ ಪಕ್ಷವೂ ‘ಬಲ’ ಸಮುದಾಯಕ್ಕೆ ಒಂದೂ ಟಿಕೆಟ್ ನೀಡಿಲ್ಲ. ಇದು ಎರಡೂ ಪಕ್ಷಿಗಳಿಗೆ ಈ ಭಾಗದ 41 ಕ್ಷೇತ್ರದ ಮೇಲೂ ಪರಿಣಾಮ ಬೀರಬಹುದು.
ಪಕ್ಷದ ಸಾಂಪ್ರದಾಯಿಕ ಸಾಕಷ್ಟು ಮತದಾರರು ದುಡಿಯಲೆಂದು ವಲಸೆ ಹೋಗಿದ್ದಾರೆ. ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರುವಷ್ಟು ತಯಾರಿ ಕಾಂಗ್ರೆಸ್ ಮಾಡಿಕೊಂಡಿದೆಯೇ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಪಕ್ಷದ ಯಾರಲ್ಲೂ ಇಲ್ಲ. ‘ಸಿಂಧೆ’ ತಾಲೂಕಿನ ಜನರಿಗೆ ಹೊಸಬರು ಬಹುತೇಕರು ಅವರ ಮುಖ್ಯವೇ ನೋಡಿಲ್ಲ. ತಾಲೂಕಿನ ಪ್ರತಿಯೊಂದು ಗ್ರಾಮ, ಥಾಂಡಾಗಳಿಗೆ ಭೇಟಿ ನೀಡಬೇಕಿದೆ. ಈವರೆಗೂ ಅವರು ಮತಭೇಟೆ ಆರಂಭಿಸಿಲ್ಲ. ಹೀಗಿದ್ದರೂ ಚೌಹಾಣ್ ಅವರನ್ನು ಸೋಲಿಸುವ ಉಮೇದಿನಲ್ಲಿ ಜನರು ಸಿಂಧೆಯವರನ್ನು ಬೆಂಬಲಿಸುವ ಇರಾದೆಯಲ್ಲಿದ್ದಾರೆ.
ಆಡಳಿತ ವಿರೋಧಿ ಅಲೆಯ ಜೊತೆಗೆ ಸೂರ್ಯಕಾಂತ ನಾಗಮಾರಪಳ್ಳಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಲಂಬಾಣಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿರುವುದು, ಸಿಂಧೆಯವರ ಸರಳತೆ ಹಾಗೂ ಒಳ್ಳೆಯತನ ಕಾಂಗ್ರೆಸಿಗೆ ಪ್ಲಸ್ ಪಾಯಿಂಟ್ ಆಗಿದೆ. ಆದಾಗ್ಯೂ ತಾಲೂಕಿನ ಮೇಲ್ಜಾತಿ ಹಾಗೂ ಹಿಂದುಳಿದ ಸಮುದಾಯಗಳ ಜನರಲ್ಲಿ ಅಟ್ರಾಸಿಟಿ ಕೇಸಿನ ಭಯ ಬಿತ್ತಲಾಗುತ್ತಿದೆ. ಇದರಲ್ಲೇನು ಹುರುಳಿಲ್ಲ, ಇದು ವಿರೋಧಿಗಳ ಷಡ್ಯಂತ್ರವೆಂದು ಜನರಿಗೆ ಖಾತ್ರಿ ಪಡಿಸುವ ಬಲುದೊಡ್ಡ ಜವಾಬ್ದಾರಿಯೂ ಕಾಂಗ್ರೆಸ್ ಮೇಲಿದೆ.
ಹಾಲಿ ಬಿಜೆಪಿ ಶಾಸಕರ ವಿರುದ್ಧ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ ಇದನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತವಾಗಿ ಪರಿವರ್ತಿಸಿಕೊಳ್ಳುತ್ತಾರೋ ಅಥವಾ ನಾವು ಗೆದ್ದೇ ಬಿಟ್ಟೆವೆಂಬ ಭ್ರಮೆಯಲ್ಲಿ ಉಳಿಯುತ್ತಾರೋ ಎನ್ನುವುದು 13ರಂದೇ ಗೊತ್ತಾಗುತ್ತದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎದುರು ಎರಡು ಆಯ್ಕೆಗಳಿವೆ ಒಂದು ಪಕ್ಷವನ್ನು ಗೆಲ್ಲಿಸುವುದು, ಮತ್ತೊಂದು ಚೌಹಾಣ್ ಗೆಲುವಿಗೆ ಸ್ವತಃ ತಾನೇ ನೆರವಾಗುವುದು. ಎರಡು ಕಾಂಗ್ರೆಸ್ ಅಭ್ಯರ್ಥಿಯ ಕೈಯಲ್ಲೇ ಇವೆ.
‘ಸಿಂಧೆ’ ತಾವೇ ಗೆಲ್ಲುತ್ತಾರೋ ಅಥವಾ ಚೌಹಾಣ್ ಅವರನ್ನು ಗೆಲ್ಲಿಸುತ್ತಾರೋ! 13 ರಂದೇ ಗೊತ್ತಾಗುತ್ತದೆ.