ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ (ಎಸ್. ಆರ್. ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್) ಧಾ – ಹು ಸೆಂಟ್ರಲ್ ಕ್ಷೇತ್ರವಿಂದು ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ರಾಜ್ಯವನ್ನಷ್ಟೇ ಅಲ್ಲ, ದೇಶದ ಗಮನವನ್ನೂ ಸೆಳೆದಿದೆ. ಕಳೆದ ಆರು ಅವಧಿಯಿಂದ ಇಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಮಧ್ಯೆ ನೇರಾನೇರ ಹಣಾವಣಿ ನಡೆದು ಈದ್ಗಾ ಮೈದಾನ ವಿವಾದದಿಂದಾಗಿ ಮತಗಳು ಧ್ರುವೀಕರಣವಾಗಿ ಶೆಟ್ಟರ್ ಅನಾಯಾಸವಾಗಿ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಶೆಟ್ಟರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷಕ್ಕೆ ಸಡ್ಡು ಹೊಡೆದು ‘ಕೈ’ ಪಡೆ ಸೇರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಮೈದಾನದಲ್ಲಿ ಬಿಜೆಪಿಯ ಟೆಂಗಿನಕಾಯಿ, ಶೆಟ್ಟರ್ ಸೇರಿ ಹದಿನಾರು ಜನ ಇದ್ದಾರೆ. ಶೆಟ್ಟರ್ ಮತ್ತು ಟೆಂಗಿನಕಾಯಿ ಮಧ್ಯೆ ಸಮಬಲದ ಹೋರಾಟವಿದೆ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳಾದ ಮುಸ್ಲಿಮರು, ಕ್ರೈಸ್ತರು, ದಲಿತರು, ಕುರುಬರು ಜತೆಗೆ ಲಿಂಗಾಯತ ಮತಗಳು ಸೇರಿದರೆ ಸುಲಭವಾಗಿ ನಾನು ದಡ ಸೇರಬಹುದು ಎಂಬ ಲೆಕ್ಕಾಚಾರದಿಂದಾಗಿಯೇ ಶೆಟ್ಟರ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಅವರು ‘ಕೈ’ ಸೇರ್ಪಡೆಯಿಂದಾಗಿ ಜಾತಿ ಸಮೀಕರಣವೂ ಅವರಿಗೆ ಅನುಕೂಲಕರವಾಗಿಯೇ ಇದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 45 ಸಾವಿರ ಮತ್ತು ಕ್ರೈಸ್ತರ 15 ಸಾವಿರ ಮತಗಳಿವೆ. ಇವು ವಿಭಜನೆಯಾದರೆ ಮತ್ತು ಈವೆರಡೂ ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡದಿದ್ದರೆ ಶೆಟ್ಟರಿಗೆ ದುಬಾರಿ ಆಗಬಹುದು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಜಿತ್ ಉಳ್ಳಾಗಡ್ಡಿಮಠ ಮತ್ತು ಅನಿಲ್ ಕುಮಾರ್ ಪಾಟೀಲ್, ಶೆಟ್ಟರ್ ಬಿಜೆಪಿ ಸೇರ್ಪಡೆ ಸ್ವಾಗತಿಸಿ ಅವರ ಪರ ಕ್ಯಾನ್ವಾಸ್ ಮಾಡುತ್ತಿರುವುದು ಅವರಿಗೆ ಬಲ ತುಂಬಿದೆ. ಬಿಜೆಪಿ ಟಿಕೆಟ್ ನಿರಾಕರಿಸಿದಾಗಿನಿಂದಲೂ ಅವರೊಬ್ಬ ಪ್ರಬುದ್ಧ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಒಂದೊಂದು ಹೆಜ್ಜೆಯೂ ಅಳೆದು ತೂಗಿ ಇಡುತ್ತಿದ್ದಾರೆ. ಅವರು ‘ಕೈ’ ಸೇರ್ಪಡೆಯಾಗಿದ್ದು, ನನಗೆ ಟಿಕೆಟ್ ಕೈ ತಪ್ಪಲು ಬ್ರಾಹ್ಮಣ ಸಮುದಾಯದ ಬಿ.ಎಲ್ ಸಂತೋಷ ಮತ್ತು ಪ್ರಲ್ಹಾದ ಜೋಶಿಯವರೇ ಕಾರಣವೆಂದು ಬಹಿರಂಗವಾಗಿಯೇ ಸಾರಿ, ಅವರಿಬ್ಬರನ್ನೂ ‘ಲಿಂಗಾಯತ’ ಕಟಕಟೆಯಲ್ಲಿ ತಂದು ನಿಲ್ಲಿಸಿದ್ದು, ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅದು ಕೇವಲ ನನಗೆ ಮಾಡಿದ ಅನ್ಯಾಯವಲ್ಲ, ಇಡೀ ಲಿಂಗಾಯತರಿಗೆ ಮಾಡಿದ ಅವಮಾನವೆಂದು ಪದೇ ಪದೇ ಹೇಳುತ್ತಾ ಜನಾಭಿಪ್ರಾಯ ರೂಪಿಸಲು ಯತ್ನಿಸುತ್ತಿರುವುದು, ‘ಅವಮಾನದ’ ಮತ್ತು ‘ಲಿಂಗಾಯತ’ ಅಸ್ತ್ರ ಪ್ರಯೋಗಿಸಿ ಬಿಜೆಪಿ ವರಿಷ್ಠರಿಗೆ ಶಾಕ್ ನೀಡಿದ್ದು, ಕ್ಷೇತ್ರವನ್ನು ಶೆಟ್ಟರ್ ವರ್ಸಸ್ ಬಿಜೆಪಿ ಕಣವಾಗಿ ಮಾರ್ಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದು, ಯಡಿಯೂರಪ್ಪನವರು ತನ್ನ ಮೇಲೆ ದಾಳಿ ಮಾಡಿದರೂ ಪ್ರತಿದಾಳಿ ಮಾಡದೆ ಅವರ ಟೀಕೆಗಳು ನನಗೆ ಆಶೀರ್ವಾದವಿದ್ದಂತೆ ಎಂದು ಪ್ರತಿಕ್ರಿಯಿಸಿದ್ದು… ಇತ್ಯಾದಿ ಅವರ ಜಾಣ ನಡೆಯಾಗಿವೆ.
ಜನಸಂಘ ಮತ್ತು ಬಿಜೆಪಿಯಲ್ಲೇ ತನ್ನೀಡಿ ರಾಜಕೀಯ ಜೀವನ ಕಳೆದಿದ್ದರೂ ಒಬ್ಬ ಹಾರ್ಡ್ ಕೋರ್ ಕಮ್ಯುನಲ್ ನಂತೆ ಎಂದೂ ವರ್ತಿಸದೆ ಕ್ಷೇತ್ರದ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಸಾಗಿಬಂದಿದ್ದರ ಫಲವಾಗಿ ಇವತ್ತು ಮುಸ್ಲಿಂ ಸಮುದಾಯ ಅವರ ಜತೆ ನಿಂತಿದೆ. ಇಲ್ಲದಿದ್ದರೆ ಅವರು ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದರೂ ಮುಸ್ಲಿಂ ಸಮುದಾಯ ಜೆಡಿಎಸ್ ಕಡೆಗೆ ಮುಖ ಮಾಡುವ ಸಾಧ್ಯತೆಯಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಜನರ ಮದುವೆ ಸಮಾರಂಭ, ಶವ ಸಂಸ್ಕಾರ… ಹೀಗೆ ಏನೇ ಇರಲಿ, ಅವರಿವರ ಎನ್ನದೆ ಅಲ್ಲಿ ಶೆಟ್ಟರ್ ಹಾಜರ್ ಇರ್ತಾರೆ. ನಾವು (ಮುಸ್ಲಿಂರು) ಅವರಿಗಲ್ಲದೆ ಇನ್ಯಾರಿಗೆ ಮತ ಹಾಕೋಣವೆಂದು ಆಟೋ ಚಾಲಕ ಅಬ್ದುಲ್ ಮುನಾಫ್ ಸ್ವಲ್ಪ ಭಾವುಕರಾಗಿಯೇ ‘ದ ಪಾಲಿಟಿಕ್’ಗೆ ಪ್ರತಿಕ್ರಿಯಿಸಿದ್ದಾರೆ.
ಶೆಟ್ಟರ್ ಕ್ಷೇತ್ರದಲ್ಲಿ ಮಾಡಿದ ನೀರಿನ ಸೌಕರ್ಯದಿಂದಾಗಿಯೋ ಅಥವಾ ರಸ್ತೆಗಳನ್ನು ನಿರ್ಮಿಸಿದ್ದರ ಫಲವಾಗಿಯೋ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಅಷ್ಟೇನಿಲ್ಲ. ಇಲ್ಲಿ ಕಾರ್ಖಾನೆಗಳು ಸ್ಥಾಪಿಸಿದರೆ ನಮಗೆಲ್ಲ ಉದ್ಯೋಗ ಸಿಗುತ್ತಿತ್ತು. ಆದರವರು ಅದು ಮಾಡದೆ ತಮ್ಮ ಉದ್ಧಾರ ಮಾತ್ರ ಮಾಡಿಕೊಂಡಿದ್ದಾರೆಂಬ ಆರೋಪದ ಜತೆಗೆ ಶಾಸಕರ ಆಡಳಿತದಲ್ಲಿ ಅವರ ಹೆಂಡತಿ ‘ಶಿಲ್ಪಾ ಶೆಟ್ಟರ್’ ಅಗತ್ಯಕ್ಕಿಂತ ಹೆಚ್ಚೇ ಹಸ್ತಕ್ಷೇಪ ಮಾಡುತ್ತಾರೆಂಬ ಸಣ್ಣ ಅಸಮಾಧಾನವೂ ಜನರಲ್ಲಿದೆ. ಬಿಜೆಪಿ ಅವರಿಗೆ ಎಲ್ಲವೂ ನೀಡಿದೆ ಅವರೇಕೆ ಪಕ್ಷ ತೊರೆದು ಕಾಂಗ್ರೆಸಿಗೆ ಸೇರ್ಪಡೆ ಆಗಬೇಕಾಗಿತ್ತೆಂಬ ಆಕ್ರೋಶವೂ ಬಿಜಿಪಿ ಕಾರ್ಯಕರ್ತರಲ್ಲಿ ಮಡುಗಟ್ಟಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸದ್ಯಸರು, ಬಿಜೆಪಿಯ ಕೇಡರ್ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಶೆಟ್ಟರ್ ಜತೆಗೆ ಹೆಜ್ಜೆ ಹಾಕದೆ ಇರುವುದು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿಗೆ ಪ್ಲಸ್ ಪಾಯಿಂಟ್ ಆಗಿದೆ. ಪ್ರಲ್ಹಾದ ಜೋಷಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಯಡಿಯೂರಪ್ಪ, ಬಿ. ಎಲ್. ಸಂತೋಷ, ಅಮಿತ್ ಶಾ ಅವರನ್ನು ಟೆಂಗಿನಕಾಯಿ ನೆಚ್ಚಿಕೊಂಡಿದ್ದು ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಕಾರ್ಪೋರೇಟರ್ ಗಳನ್ನೇ ಅವಲಂಬಿಸಿದ್ದು ಎದ್ದು ಕಾಣುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಸಾಂಪ್ರದಾಯಿಕ ಮತದಾರರಾದ ಕ್ಷತ್ರಿಯ, ಬ್ರಾಹ್ಮಣ ಮತ್ತು ಮಾರವಾಡಿ ಸಮುದಾಯಗಳ 40 ಸಾವಿರ ಮತಗಳು ಇದ್ದದ್ದು ಬಿಜೆಪಿಗೆ ಬಲ ತುಂಬಿದೆ.
ಈದ್ಗಾ ಮೈದಾನದ ವಿವಾದದಿಂದಾಗಿ ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್ ಗಟ್ಟಿಯಾಗಿ ತಳವೂರಿದೆ. ಕರ್ನಾಟಕದಲ್ಲಿ ಕರಾವಳಿ ಭಾಗ, ಶಿವಮೊಗ್ಗ ಬಿಟ್ಟರೆ ಹುಬ್ಬಳಿಯಲ್ಲಿ ಸಂಘಪರಿವಾರ ಬೇರು ಬಿಟ್ಟಿದೆ. 1989 ರಿಂದ ತಮ್ಮ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ – ಆರೆಸ್ಸೆಸ್ ಕಾರ್ಯಕರ್ತರು ಬೆವರು ಸುರಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಸೋತರೆ ಅದು ಬಿಜೆಪಿ ಸೋಲು ಮಾತ್ರವಲ್ಲ, ಅದು ಹಿಂದೂತ್ವದ ಸೋಲೂ ಆಗುತ್ತದೆ.
ಶೆಟ್ಟರ್ ಸ್ವಾಭಿಮಾನಕ್ಕಾಗಿ ಸ್ಪರ್ಧಿಸುತ್ತಿದ್ದೇನೆ ಮತ್ತು ಇದು ನನ್ನ ಕೊನೆ ಚುನಾವಣೆಯೆಂದು ಹೇಳುತ್ತಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅವರ ಅಬ್ಬರದ ಮುಂದೆ ಬಿಜೆಪಿ ಇಲ್ಲಿ ಸಪ್ಪೆಯಾದಂತಿದೆ. ಅನಾಯಾಸವಾಗಿ ಗೆಲ್ಲುತ್ತಾ ಬಂದಿರುವ ಅವರು ಇದೇ ಫಸ್ಟ್ ಟೈಮ್ ಬೆವರು ಸುರಿಸುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕೆ ಬೇಕಾಗುವ, ಬೇಡದಾಗಿರುವ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಲಿಂಗಾಯತರು ವ್ಯಕ್ತಿಗಿಂತ ಪಕ್ಷವೇ ಮುಖ್ಯವೆಂದು ಬಿಜೆಪಿ ಜತೆ ಗಟ್ಟಿಯಾಗಿ ನಿಂತರೆ ಶೆಟ್ಟರ್ ಸೋಲು ಯಾರಿಂದಲೂ ತಡೆಯಲು ಆಗುವುದಿಲ್ಲ. ಅದೇ ಕ್ಷೇತ್ರದಲ್ಲಿ ಮೂವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ ಶೆಟ್ಟರಿಗೆ ಶೇ. 20-30 ಪ್ರತಿಶತ ಲಿಂಗಾಯತರು ಮತ ಹಾಕಿದರೂ ಅವರು ಸಲೀಸಾಗಿ ದಡ ಸೇರುತ್ತಾರೆ. ಜತೆಗೆ ಅವರು ಪ್ರಯೋಗಿಸಿದ ‘ಅವಮಾನದ ಅಸ್ತ್ರ’ ಮತವಾಗಿ ಪರಿವರ್ತನೆಯಾದರೆ ಬಿಜೆಪಿಗೆ ದುಬಾರಿ ಆಗುತ್ತದೆ. ಎಲ್ಲದಕ್ಕೂ ಮೇ ಹದಿಮೂರರಂದೇ ಉತ್ತರ ಸಿಗುತ್ತದೆ. ಅಂದೇ ಇದು ಬಿಜೆಪಿ ಕ್ಷೇತ್ರವೋ ಅಥವಾ ಶೆಟ್ಟರ್ ವರ್ಚಸ್ಸಿನ ಕ್ಷೇತ್ರವೋ ಎಂಬ ಕುತೂಹಲಕ್ಕೂ ತೆರೆಬೀಳುತ್ತದೆ.