ಯಾವ ಪಕ್ಷ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ತಿರಸ್ಕರಿಸಿದೆಯೇ, ಅದೇ ಪಕ್ಷದ ಸಂಸದ, ಶಾಸಕರು ಲಿಂಗಾಯತ ಸಮಾವೇಶಗಳಲ್ಲಿ ರಾರಾಜಿಸುತ್ತಾರೆ. ಇಲ್ಲಿಗೆ ಇವರು ರಾಜಕಾರಣಿಯಾಗಿ ಬಂದಿಲ್ಲ, ಲಿಂಗಾಯತರಾಗಿ ಬಂದಿದ್ದಾರೆಂಬ ಸಮಜಾಯಿಷಿ ನೀಡುವವರೂ ಅಲ್ಲಿ ಇರುತ್ತಾರೆ. ರಾಜಕಾರಣಿಗೆ ಒಂದು ಜಾತಿ/ಧರ್ಮ ಹೇಗಿದೆಯೋ, ಹಾಗೇ ಆತನಿಗೊಂದು ಪಕ್ಷ ಮತ್ತು ರಾಜಕೀಯ ಸಿದ್ಧಾಂತವೂ ಇರುತ್ತದೆ.
ಸಮಾವೇಶಕ್ಕೆ ರತ್ನ ಗಂಬಳಿ ಹಾಸಿ ಕರೆಯಿಸಿದ ಬಿಜೆಪಿ ಶಾಸಕರು ಹಾಗೂ ಸಂಸದರು ಸದನದಲ್ಲಿ/ಸಂಸತ್ತಿನಲ್ಲಿ ಒಮ್ಮೆಯಾದರೂ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ದನಿ ಎತ್ತಿರುವ ಉದಾಹರಣೆ ಇದೆಯೇ?
ಒಳಗೊಳಗೇ ಬಿಜೆಪಿ ಮೇಲೆ ಪ್ರೀತಿ ಇಟ್ಟುಕೊಂಡು, ‘ಲಿಂಗಾಯತ ಧರ್ಮ, ಲಿಂಗಾಯತ ಧರ್ಮ’ ಎಂದು ಬಡಬಡಿಸುವುದರಿಂದ ಏನುಪಯೋಗ? ಬಿಜೆಪಿ ಸಂಘಪರಿವಾರದ ರಾಜಕೀಯ ಮುಖ. ಆರೆಸ್ಸೆಸ್ ಅಣತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಬಿಜೆಪಿಯಲ್ಲಿ ಅಲಗಾಡುವದಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಹವಣಿಸುತ್ತಿರುವ ಸಂಘಪರಿವಾರ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಸಾಧ್ಯವೇ? ಲಿಂಗಾಯತ ತತ್ವವನ್ನು ನಿರ್ನಾಮ ಮಾಡಲು ಶ್ರಮಿಸುತ್ತಿರುವವರಿಂದ ಅದನ್ನು ನಿರೀಕ್ಷಿಸುತ್ತಿರುವುದೇ ಒಂದು ಹಾಸ್ಯಾಸ್ಪದವಾಗಿದೆ.
ಇದನ್ನೂ ಓದಿ : ಶಾಸಕ ಪ್ರಭು ಚೌವ್ಹಾಣ್ ಹತ್ಯೆಗೆ ಬಿಜೆಪಿ ಸಂಸದ ಭಗವಂತ ಖೂಬಾ ಸಂಚು!
ಇನ್ನೂ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಗುವ ಜಾಗತಿಕ ಲಿಂಗಾಯತ ಮಹಾಸಭೆಯ ಕೇಲ ಮುಖಂಡರು ಮೊನ್ನೆ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ಪರವಾಗಿ ಬಹಿರಂಗವಾಗಿ ಕೆಲಸ ಮಾಡಿದ್ದಾರೆ. ಈ ಸಂಘಟನೆಗೆ ಒಂದು ಸ್ಪಷ್ಟ ರಾಜಕೀಯ ನಿಲುವೇ ಇಲ್ಲ. ಚುನಾವಣಾ ಬಂದಾಗಲೊಮ್ಮೆ ಎದ್ದು ಬರುವುದು, ಸಮಾವೇಶದ ಹೆಸರಿನಲ್ಲಿ ಜಾತ್ರೆ ಮಾಡುವುದು ಮತ್ತು ಆಗಾಗ್ಗೆ ಪ್ರೆಸ್ ಮೀಟ್ ಮಾಡುವುದೇ ಲಿಂಗಾಯತ ಹೋರಾಟವೆಂದು ಈ ಸಂಘಟನೆ ನಿರ್ಣಯಿಸಿದಂತಿದೆ.
ಮಾತೇ ಮಹಾದೇವಿ ಅವರು ಲಿಂಗಾಯತ ಹೋರಾಟಕ್ಕೆ ಮರುಜನ್ಮ ನೀಡಿ ಅದನ್ನು ಜೀವಂತವಾಗಿ ಇಟ್ಟಿದ್ದರು. ಆದರೀಗ ಆ ಸಂಘಟನೆಯ ಮುಖಂಡರ ಆಂತರಿಕ ಕಲಹದಿಂದಾಗಿ ‘ರಾಷ್ಟ್ರೀಯ ಬಸವ ದಳ’ ಎಂಬ ದೋಣಿ ದಾರಿ ತಪ್ಪಿ, ಬಿರುಗಾಳಿಯಲ್ಲಿ ಸಿಲುಕಿದೆ.
ಯಾವುದೇ ದೂರದೃಷ್ಟಿಯಾಗಲಿ, ಒಂದು ಸ್ಪಷ್ಟತೆಯಾಗಲಿ, ಒಂದು ಗೊತ್ತು- ಗುರಿಯಾಗಲಿ ಅಥವಾ ಒಂದು ಸ್ಪಷ್ಟ ರಾಜಕೀಯ ನಿಲುವು ಇಲ್ಲದೆ ಇಂತಹ ಸಂಘಟನೆಗಳಿಂದ ‘ಲಿಂಗಾಯತ ಹೋರಾಟಕ್ಕೆ’ ದೊಡ್ಡ ಹಿನ್ನಡೆ ಆಗುತ್ತಿದೆಯೇ ವಿನಾಃ ಒಂಚೂರು ಒಳಿತಾಗುತ್ತಿಲ್ಲ.
ಚಳುವಳಿಯನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿ, ಜನರನ್ನು ಹೋರಾಟಕ್ಕೆ ಅಣಿಗೊಳಿಸಿ ಒಂದು ವಿರೋಚಿತ ಹೋರಾಟ ರೂಪಿಸಿದಾಗ ಮಾತ್ರ ಸರ್ಕಾರಗಳು ನಡುಬಗ್ಗಿಸಿ ನಿಲ್ಲುತ್ತವೆ. ಒಂದು ರಾಜಕೀಯ ನಿಲುವು ಇಲ್ಲದೆ ಒಂದಲ್ಲ ಸಾವಿರಾರು ಸಮಾವೇಶಗಳು, ಪ್ರೆಸ್ ಮೀಟಗಳು ಮಾಡಿದರೂ ಸರ್ಕಾರಗಳು ಕ್ಯಾರೇ ಎನ್ನುವುದಿಲ್ಲ. ಮೂಗು ಮುಚ್ಚಿದರೆ ಮಾತ್ರ ಬಾಯಿ ತನ್ನಿಂತಾನೇ ತೆರೆಯುತ್ತದೆ.
ಲಿಂಗಾಯತ ಹೋರಾಟಕ್ಕೆ ರಾಜಕಾರಣಿಗಳ ಬೆಂಬಲವಿತ್ತು. ಹಾಗಾಗಿ ಅದಕ್ಕೊಂದು ಬಲವಿತ್ತು. ಅಂದು ವೀರಾವೇಶದಿಂದ ಮಾತನಾಡಿದ ಲಿಂಗಾಯತ ರಾಜಕಾರಣಿಗಳು ಈಗ ಸಾಲಾಗಿ ತಮ್ಮ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪಂಚಪೀಠಾಧೀಶರ ಪದತಲದಲ್ಲಿ ಐಕ್ಯರಾಗುತ್ತಿದ್ದಾರೆ.
ಹಳಿ ತಪ್ಪಿದ ಲಿಂಗಾಯತ ಹೋರಾಟವನ್ನು ಸರಿ ದಾರಿಗೆ ತರುವವರಾರು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.