ದ ಪಾಲಿಟಿಕ್

ಶಾಸಕ ಪ್ರಭು ಚೌವ್ಹಾಣ್ ಹತ್ಯೆಗೆ ಬಿಜೆಪಿ ಸಂಸದ ಭಗವಂತ ಖೂಬಾ ಸಂಚು!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಬಿಜೆಪಿ ನಾಯಕರು ಮಾತೆತ್ತಿದರೆ ನಮ್ಮದು ಬಹುಶಿಸ್ತಿನ ಪಕ್ಷವೆಂದು ಬೀಗುತ್ತಾರೆ.  ‘ನನ್ನ ಹತ್ಯೆಗೆ ಕೇಂದ್ರ ಸಚಿವ ಭಗವಂತ ಖೂಬಾ ಸಂಚು ರೂಪಿಸಿದ್ದಾರೆ’ ಎಂದು ಸ್ವಪಕ್ಷದ ಔರಾದ ಶಾಸಕ ಪ್ರಭು ಚೌವ್ಹಾಣ್ ಬಹಿರಂಗವಾಗಿಯೆ ಪಕ್ಷದ ವೇದಿಕೆಯಲ್ಲೇ ತಮ್ಮ ಅಳಲು ತೋಡಿಕೊಂಡರೂ ಪಕ್ಷ  ಅವರನ್ನು ಕ್ಯಾರೇ ಎನ್ನುತ್ತಿಲ್ಲ . ಈವರೆಗೂ ಪಕ್ಷದಿಂದ ಸಂಸದನಿಗೆ ಒಂದೇ ಒಂದು ನೋಟಿಸ್ ಸಹ ಜಾರಿ ಮಾಡಿಲ್ಲ ಅಥವಾ ಬಿಜೆಪಿ ರಾಜ್ಯ ಅಧ್ಯಕ್ಷ/ ನಾಯಕರು ಇಬ್ಬರನ್ನೂ ಮುಖಾಮುಖಿಯಾಗಿ ಕೂಡಿಸಿಕೊಂಡು ವಿಕೋಪಕ್ಕೆ ಹೋಗಿರುವ ಇವರ ಜಗಳಕ್ಕೆ ಇತಿಶ್ರೀ ಹಾಡಲು  ಗಂಭೀರವಾಗಿ ಪ್ರಯತ್ನಿಸಿಲ್ಲ. ಇದು ಜಿಲ್ಲಾ ಬಿಜೆಪಿಯಲ್ಲಿ ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿಯಲ್ಲೂ ಎಲ್ಲವೂ ಸರಿ ಇಲ್ಲ ಎಂಬುವುದು ಸಾರಿ ಸಾರಿ ಹೇಳುತ್ತಿದೆ.  ಈಗ ಪಕ್ಷದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಶಾಸಕರು ಬರೀ ಅಳಲು ತೋಡಿಕೊಳ್ಳುತ್ತಿದ್ದಾರೆ ವಿನಾಃ ಸಚಿವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರೇಕೆ ದಾಖಲಿಸುತ್ತಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಪೋಲಿಸ್‌ ಇಲಾಖೆಯಾದರೂ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಈ ಪ್ರಕರಣದ ಕುರಿತು ತನಿಖೆ ಏಕೆ ನಡೆಸುತ್ತಿಲ್ಲ. ಇದೇ ತರಹ ಆರೋಪ ಒಬ್ಬ ಸಾಮಾನ್ಯ ನಾಗರಿಕನ ಮೇಲೆ ಬಂದಿದ್ದರೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರಲಿಲ್ಲವೇ? ರಾಜ್ಯದಲ್ಲಿ ಜನಸಾಮಾನ್ಯರಿಗೊಂದು ಸಚಿವರಿಗೊಂದು ಕಾನೂನು ಇದೆಯೇ?

ಶಾಸಕ ಪ್ರಭು ಚೌವ್ಹಾಣ್ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಮಾಡುತ್ತಿರುವುದು ಗಂಭೀರ ಆರೋಪ. ಒಬ್ಬ ಕೇಂದ್ರ ಸಚಿವ, ಸ್ವಪಕ್ಷದ ಶಾಸಕನ ಕೊಲೆಗೆ ರೌಡಿಗಳಿಗೆ ಸುಪಾರಿ ನೀಡುತ್ತಾರೆಂದರೆ ಏನರ್ಥ. ಇವರೇನು ಸಂಸದರೋ ಅಥವಾ ಪುಡಿ ರೌಡಿಯೋ? ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಗತಿಯೇನು? ಇದರ ಸತ್ಯಾಸತ್ಯತೆಯ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ, ಶಾಸಕರ ಆರೋಪದಲ್ಲಿ ಹುರುಳಿದ್ದರೆ ಸಂಸದನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಘಟನೆ ರಾಜ್ಯದಲ್ಲಿ ರೌಡಿಗಳು ಸುಪಾರಿ ಪಡೆದು ಕಂಡಕಂಡವರನ್ನ ಕೊಲೆ ಮಾಡಲು ಪೋಲಿಸ್ ಇಲಾಖೆಯೇ ಕೇಂದ್ರ ಸಚಿವರ ಹಸ್ತದಿಂದಲೇ ಅವರಿಗೆ ಲೈಸೆನ್ಸ್ ನೀಡಿದಂತಾಗುವುದಿಲ್ಲವೇ?

ಈ ಹಿಂದೆ 2021ರಲ್ಲಿ ಪಕ್ಷದ ಜನಾರ್ಶೀದ ಯಾತ್ರೆ ಯಾದಗಿರಿ ಜಿಲ್ಲೆಗೆ ಬಂದಾಗ ಇದೇ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಅವರ ಕಾರ್ಯಕರ್ತರು ಬಹಿರಂಗವಾಗಿ ಗುಂಡು ಹಾರಿಸಿ ಸ್ವಾಗತಿಸಿದರು. ಆಗ ಪೊಲೀಸ್ ಇಲಾಖೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆಗಲೇ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರೆ ಪ್ರಾಯಶಃ ಸಚಿವರು ಇವತ್ತು ಈ ಹಂತಕ್ಕೆ ಬರುತ್ತಿರಲಿಲ್ಲವೇನೋ.

ಇವರಿಬ್ಬರ ಸ್ನೇಹಕ್ಕೂ ಮತ್ತು ಜಗಳಕ್ಕೂ ಸುದೀರ್ಘ ಇತಿಹಾಸವಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಭಗವಂತ ಖೂಬಾಗೆ ಟಿಕೆಟ್ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಗವರು ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಆಗ ತಾನೇ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿ, ಅದು ದಕ್ಕದೆ ನಿರಾಶೆಯಾಗಿದ್ದರು. ಆದರೆ ರಾಮದೇವ್ ಬಾಬಾ ಅವರ ಕೃಪಾಕಟಾಕ್ಷೆ ಮತ್ತು ಇದೇ ಶಾಸಕ ಪ್ರಭು ಚೌವ್ಹಾಣ್ ಒತ್ತಾಸೆಯ ಫಲವಾಗಿ ಖೂಬಾಗೆ ಲೋಕಸಭಾ ಚುನಾವಣೆಗೆ ಬಿದರಿನಿಂದ ಸ್ಪರ್ಧಿಸಲು ಟಿಕೆಟ್ ದೊರೆತು, ಮೋದಿ ನಾಮಬಲದಿಂದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ವಿರುದ್ಧ ಸಲೀಸಾಗಿ ಗೆದ್ದಿದ್ದರು .

ಆಗ ಚೌವ್ಹಾಣ್ ಮತ್ತು ಭಗವಂತ ಖೂಬಾ ಇಬ್ಬರೂ ಆಪ್ತರಾಗಿಯೆ ಇದ್ದರು. ಖುಬಾಗೆ ಟಿಕೆಟ್ ಕೊಡಿಸಲು ಹಾಗೂ ಅವರು ಚುನಾವಣೆಯಲ್ಲಿ ಗೆಲ್ಲಲು ಚೌವ್ಹಾಣ್ ಪಾತ್ರ ದೊಡ್ಡದಿತ್ತು. ಆಗ ಖೂಬಾ ಬೆನ್ನಿಗೆ ಜಿಲ್ಲೆಯಲ್ಲಿ ಚೌವ್ಹಾಣ್ ಮಾತ್ರ ಗಟ್ಟಿಯಾಗಿ ನಿಂತಿದ್ದರು. ಆ ಚುನಾವಣೆಗೆ ಚೌವ್ಹಾಣ್ ದೊಡ್ಡ ಮೊತ್ತದ ಹಣವನ್ನು ಖೂಬಾಗೆ  ನೀಡಿದರು.  ಅದು ವಾಪಸ್ ನೀಡದಿರುವುದೇ ಇವರ ಜಗಳಕ್ಕೆ ಮೂಲ ಕಾರಣವಾಗಿದೆಯೆಂದು ಬಲ್ಲ ಮೂಲಗಳು ಹೇಳುತ್ತಿವೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಲನಗರ ಭಾಗದ ಸಂಸದರ ಕೆಲ ಆಪ್ತರು ಬಿಜೆಪಿ ಬಾವುಟ ಕೆಳಗಿಟ್ಟು, ಕಾಂಗ್ರೆಸ್ ಬಾವುಟ ಹಿಡಿದು ಚೌವ್ಹಾಣ್ ಸೋಲಿಗೆ ಇನ್ನಿಲ್ಲದಂತೆ ಬಹಿರಂಗವಾಗಿಯೇ ಪ್ರಯತ್ನಿಸಿದ್ದರು. ಈ ಧಿಡೀರ್ ಬೆಳವಣಿಗೆ ಚೌವ್ಹಾಣ್ ಗೆ ಎರಡು ರೀತಿಯಲ್ಲಿ ವರವಾಗಿ ಕೆಲಸ ಮಾಡಿತ್ತು. ಒಂದು, ಶಾಸಕರ ಪರವಾಗಿ ಕ್ಷೇತ್ರದಲ್ಲಿ ಒಂದು ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಮತ್ತೊಂದು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯ ತಲೆಯಲ್ಲಿ ‘ನಾನೇ ಗೆಲ್ಲುವುದು’ ಎಂಬ ಭ್ರಮೆ ಸೃಷ್ಟಿಸಿ, ಅವರ ಎಚ್ಚರ ತಪ್ಪಿಸಿತ್ತು.   ಫಲವಾಗಿ ತಾಲೂಕಿನಲ್ಲಿ ಮತ್ತೊಮ್ಮೆ ಕಮಲ  ಸಲೀಸಾಗಿ ಅರಳಿತು. 

ಚುನಾವಣೆ ಹೊಸ್ತಿಲಲ್ಲಿ ಇದು ಬೇಕಿತ್ತಾ?

ಭಗವಂತ ಖೂಬಾ ಅವರಿಗೆ ಜಿಲ್ಲೆಯಲ್ಲಿ ಜನರು ‘ಲಕ್ಕಿ ಎಂಪಿ’ ಎನ್ನುತ್ತಾರೆ. ಮೋದಿ ನಾಮಬಲದ ಮೇಲೆ ಎರಡು ಸಲ ಸಲೀಸಾಗಿ ಗೆದ್ದಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಕಾಲಿಕ ನಿಧನದಿಂದಾಗಿ ಮಂತ್ರಿಯೂ ಆಗಿದ್ದಾರೆ. ಎರಡೆರಡು ಬಾರಿ ಗೆದ್ದು ಮಂತ್ರಿಯಾದರೂ ನಾಯಕನಾಗಿ ಹೊರಹೊಮ್ಮಲು, ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಅವರಿಂದ ಈವರೆಗೂ ಸಾಧ್ಯವಾಗಿಲ್ಲ.  ಈಗಲೂ ಮೋದಿ ನಾಮಬಲ ಮಸುಕಾದರೆ  ಚುನಾವಣೆ ಎದುರಿಸಲು ಅವರಿಗೆ ಕಷ್ಟವಾಗುತ್ತದೆ. ಕೇವಲ ಔರಾದ ಶಾಸಕರ ಜತೆ ಮಾತ್ರವಲ್ಲದೆ ಬಸವಕಲ್ಯಾಣ ಶಾಸಕರ ಜೊತೆಗೂ ರಗಳೆ ಮಾಡಿಕೊಂಡಿದ್ದಾರೆ.  ಈ ಇಬ್ಬರೂ ಶಾಸಕರಿಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ದೊಡ್ಡ ನಿಷ್ಠಾವಂತ ಕಾರ್ಯಕರ್ತರ ಪಡೆಯಿದೆ. ಚುನಾವಣೆಯಲ್ಲಿ ಇವರೇನಾದರೂ ಮಸಲತ್ತು ನಡೆಸಿದರೆ ಸಂಸದರು ಮತ್ತೊಮ್ಮೆ ಗೆಲುವಿನ ನಗೆ ಬೀರಲು ಕಷ್ಟವಾಗುವ ಸಾಧ್ಯತೆ ಇದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!