ಮಂಜುನಾಥನ ಸನ್ನಿಧಿಯಲ್ಲಿ ಅದೇ ಕ್ಷೇತ್ರದ ಹೆಣ್ಣು ಮಗು ಉಜಿರೆಯ ಕಾಲೇಜಿನಿಂದ ಮನೆಗೆ ಬರುವ ದಾರಿಯಲ್ಲಿ ಮಾಯವಾಗುತ್ತಾಳೆ. ಕಾಲೇಜಿಗೆ ಹೋಗುವಾಗ ಅಮ್ಮನಿಗೆ ಹೀಗೆ ಸೌಜನ್ಯ ಹೇಳುತ್ತಾಳೆ “ಅಮ್ಮ ಮನೆಯಲ್ಲಿ ಪೂಜೆಯಿದೆಯಲ್ಲ. ಬೇಗ ಬಂದು ಊಟ ಮಾಡುವೆ” ಎಂದು ಕಾಲೇಜಿಗೆ ಹೋಗಿದ್ದ ಮಗಳು ಮರುದಿನ ನೇತ್ರಾವತಿ ದಂಡಯ ಪೊದೆಯಲ್ಲಿ ಮೈಮೇಲೆ ಒಂದಿಂಚೂ ಬಟ್ಟೆಯಿಲ್ಲದಂತೆ ಮೈತುಂಬ ಗಾಯ, ಎದೆಯನ್ನು ಕಚ್ಚಿದ ಗಾಯಗಳಿದ್ದ ಅವಳ ಕೈಗಳನ್ನು ಮರಕ್ಕೆ ಕಟ್ಟಿದ್ದು ಸತ್ತು ಶವವಾಗಿ ಸಿಗುತ್ತಾಳೆ. ಅವಳೆ ನಮ್ಮ ಮಗಳು ಸೌಜನ್ಯ. ಅವಳು ಒಬ್ಬ ತಾಯಿಯ ಮಗಳಲ್ಲ. ನಾಡಿನ ಸಮಸ್ತ ತಾಯಂದಿರ ಮಗಳು. 17 ವರ್ಷದ ಅಪ್ರಾಪ್ತ ಬಾಲಕಿ. ಕಣ್ಣಲ್ಲಿ ನೂರಾರು ಕನಸು ಹೊತ್ತ ಮಗು.
ಮಹೇಶ್ ಶೆಟ್ಟಿ ತಿಮರೋಡಿಯವರ ಹೇಳಿಕೆ ಪ್ರಕಾರ “ಸೌಜನ್ಯಳನ್ನು ಅಂದು ಕಾಲೇಜಿನಿಂದ ಬರುವುದನ್ನು ಕಂಡಿದ್ದ 03 ಜನ ಸಾಕ್ಷಿಗಳಿದ್ದರು. ಮರುದಿನ ಅವರು ಸಾಕ್ಷ್ಯ ನುಡಿಯಲು ಸಿದ್ಧರಿದ್ದರು. ಅವರೆಲ್ಲ ಒಬ್ಬೊಬ್ಬರಾಗಿ ಕೊಲೆಯಾಗುತ್ತಾರೆ. ಅವೆಲ್ಲವೂ ಆತ್ಮಹತ್ಯೆಯ ಪ್ರಕರಣಗಳೆಂದು ಪೋಲೀಸರ ಕಡತ ಸೇರುತ್ತವೆ. ಇಂತಹ ಕೊಲೆಗಡುಕ ಸಂಸ್ಥಾನದ ವಿರುದ್ದ ಯಾರೂ ಮಾತನಾಡುವಂತಿಲ್ಲ. ಕೊಲೆ ಬಲತ್ಕಾರ ಮಾಡುವವರು ಮಾತ್ರ ಮಂಜುನಾಥನ ಸನ್ನಿಧಿಯಲ್ಲಿ ಬದುಕಲು ಸಾಧ್ಯ. ಬಲತ್ಕಾರ, ಕೊಲೆಗಳನ್ನು ತಡೆಯುವವರನ್ನು ಇದೇ ರೀತಿ ಸಾಯಿಸಿ ಆತ್ಮಹತ್ಯೆಯೆಂದು ಬಿಂಬಿಸಲಾಗುತ್ತದೆ. ಇಂತಹ ಕೊಲೆಗಳಿಂದ, ಧರ್ಮಸ್ಥಳ, ಬೆಳ್ತಂಗಡಿ ತಾಲೂಕಿನಲ್ಲಿ ಭಯದ ವಾತಾವರಣವಿದೆ. ಧರ್ಮಾಧಿಕಾರಿಯೇ ಈ ಅಧರ್ಮದ ಕೆಲಸಗಳನ್ನು ಮಾಡಿಸುತ್ತಿದ್ದಾರೆಂದು. ಇವರ ಜೊತೆ ಸರ್ಕಾರ, ಪೋಲೀಸು, ಅಧಿಕಾರಿಗಳು ಎಲ್ಲರೂ ಇವರೊಂದಿಗಿದ್ದಾರೆ.” ಎನ್ನುತ್ತಾರೆ.
ಇದನ್ನೂ ಓದಿ : ʻಆಪರೇಷನ್ ಹಸ್ತʼಕ್ಕೆ ಚಾಲನೆ
ನಮ್ಮ ಗೃಹಮಂತ್ರಿಗಳು ಹೇಳುತ್ತಾರೆ. “ಈ ಕೇಸ್ ಕ್ಲೋಸ್ ಆಗಿದೆ.” ಅರೆ ಹ್ಯಾಂಗೆ ಕ್ಲೋಸ್ ಆಗುತ್ತೆ ಸರ್. ಸಂತೋಷ ರಾವ್ 11 ವರ್ಷಗಳ ಜೈಲುವಾಸ ಅನುಭವಿಸಿ ಜೈಲಿನಿಂದ ಹೊರಗೆ ನಿರಪರಾಧಿಯಾಗಿ ಬಂದಿದ್ದಾರೆ. ಪಾಪದ ನಿಷ್ಪಾಪಿ ವ್ಯಕ್ತಿಗೆ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿಡುವುದೇ? ಹಾಗಾದರೆ ಬಲತ್ಕರಿಸಿ ಸೌಜನ್ಯಳ ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಯಾರೂ ಇಲ್ಲ ಎಂದರೆ ಬಲತ್ಕರಿಸಿದ್ದು ಯಾರು? ಕೊಂದದ್ದು ಯಾರು? ಅದಕ್ಕಾಗಿಯೇ ಸೌಜನ್ಯ ಕೇಸ್ ಮರು ತನಿಖೆಗಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳು, ಪಕ್ಷಗಳೂ, ಸಿನಿಮಾ ನಟರು, ಸಾಹಿತಿಗಳು, ಮಹಿಳೆಯರು, ಯುವಜನರು, ವಿಧ್ಯಾರ್ಥಿಗಳು, ಕಾರ್ಮಿಕರು ಸೇರಿಕೊಂಡು 28-08-2023ರಂದು “ಬೆಳ್ತಂಗಡಿ ಚಲೋ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನ್ಯಾಯಪರ ಜನತೆ ಬೆಳ್ತಂಗಡಿಗೆ ಹೊರಡುತ್ತಿದ್ದಾರೆ. ಈಗಾಗಲೆ ರಾಜ್ಯದ ವಿವಿಧ ಕಡೆಗಳಲ್ಲಿ “ಬೆಳ್ತಂಗಡಿ ಚಲೊ” ಕಾರ್ಯಕ್ರಮ ಕುರಿತ ಪೋಸ್ಟರಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.
ದಿನಾಂಕ 09-10-2012 ರಂದು ಕೊಲೆ ಮತ್ತು ಅತ್ಯಾಚಾರ ಆಗುತ್ತದೆ. ಈ ಕುರಿತು ಸಿ.ಬಿ.ಐ.ವಿಶೇಷ ನ್ಯಾಯಾಲಯ ಅಪರಾಧಿ ಎಂದು ಬಂಧಿಸಿದ್ದ ನಿರಪರಾಧಿ ಸಂತೋಷ ರಾವ್‌ನನ್ನು 11 ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು. ಈಗ ಕೋರ್ಟು ಅವನನ್ನು ಬಿಡುಗಡೆ ಮಾಡಿದೆ. ಹಾಗಾದರೆ ಸೌಜನ್ಯ ಕೊಲೆ ಯಾರು ಮಾಡಿದರು. ಸೌಜನ್ಯ ತಂದೆ ತಾಯಿ 04 ಹುಡುಗರ ಹೆಸರು ಕೊಟ್ಟಿದ್ದರು. ಅದರಲ್ಲಿ ವೀರೇಂದ್ರ ಹೆಗಡೆಯವರು ಸೊದರನ ಮಗನಾದ ನಿಶ್ಚಲ್ ಜೈನ್ ಕೂಡ ಇದ್ದ. ಸೌಜನ್ಯ ಕೊಲೆಯ ಹಿಂದಿನ ಈ ನಾಲ್ಕು ಜನ ಚರ್ಚಿಸುತ್ತಿದ್ದುದನ್ನು ಸೌಜನ್ಯ ಸಂಬಂಧಿಯೊಬ್ಬರು ಕೇಳಿಸಿಕೊಂಡಿರುತ್ತಾರೆ. ಮುಂದೆ ನಿಶ್ಚಲ್ ಜೈನ್ ಈ ಘಟನೆ ನಡೆದಾಗ ನಿಶ್ಚಲ್ ಜೈನ್ ಊರಿನಲ್ಲಿರಲಿಲ್ಲವೆಂದು ನಂತರದಲ್ಲಿ ದಾಖಲೆಗಳನ್ನು ಸೃಷ್ಟಿಸಲಾಯಿತು.
ಅತ್ಯಂತ ಭೀಕರವಾಗಿ ಕೊಲೆಯಾದ ಸೌಜನ್ಯಳ ಕೊಲೆಗಡುಕರು, ಬಲತ್ಕಾರಿಗಳು ಯಾರು? ಜನ ಯಾಕೆ ಅವರ ಬಗ್ಗೆ ಬಾಯಿ ಬಿಡಲು ಭಯ ಪಡುತ್ತಾರೆ. ಊರಿನ ಜನರೆಲ್ಲರಿಗೂ ಗೊತ್ತು ಇದನ್ನು ಮಾಡಿದವರು ಯಾರು ಎಂದು. ಅವರು ಧರ್ಮಾಧಿಕಾರಿ, ಬಲಾಢ್ಯ ವ್ಯಕ್ತಿ. ಯಾಕೆ ಪೋಲೀಸು, ಅಧಿಕಾರಿ, ರಾಜಕಾರಣಿಗಳು ಅವರಿಗೆ ಹೆದರುತ್ತಾರೆ. ಮಠಗಳು, ಪೀಠಗಳೂ ಬಾಲ ಮುದುರಿಕೊಳ್ಳುತ್ತವೆ. ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬಾಯಿ ಬಿಟ್ಟರೆ ತಮಗೂ ಸಾವು ತಪ್ಪಿದ್ದಲ್ಲ ಎಂಬ ಭಯ ಜನರನ್ನು ಕಾಡಿದೆ. ಸ್ವಾಮಿಜಿಗಳೂ, ಬಿಜೆಪಿಗಳೂ, ಬಜರಂಗಿಗಳು ಯಾಕೆ ಬಾಯಿ ಬಿಡುತ್ತಿಲ್ಲ. ಹೋರಾಟ ಮಾಡುತ್ತಿಲ್ಲ.
ಸರ್ಕಾರಿ ದಾಖಲೆಗಳ ಪ್ರಕಾರವೇ ಧರ್ಮಸ್ಥಳದಲ್ಲಿ 462 ಇಂತಹ ಅಸಹಜ ಸಾವು ಮತ್ತು ಕೊಲೆ ಬಲಾತ್ಕಾರಗಳಾಗಿವೆ. ಅಮಾಯಕ ಹೆಣ್ಣುಗಳನ್ನು ಬಲತ್ಕರಿಸಿ ಸಾಯಿಸುತ್ತಿರುವವರು ಯಾರು? ಪೋಲೀಸಲು ಸೌಜನ್ಯಳ ಮರಣೋತ್ತರ ಪರೀಕ್ಷೆಯ ವರದಿಗಳಲ್ಲಿ ಗುರುತರ ಲೋಪಗಳನ್ನು ಎಸಗಿದೆ. ಹೊಟ್ಟೆಯಲ್ಲಿರಬಹುದಾದ ಆಹಾರದ ಶ್ಯಾಂಪಲ್ ಸಂಗ್ರಹಿಸಿಲ್ಲ. ಸಂತ್ರಸ್ಥಳ ಯೋನಿಯಿಂದ ಸಂಗ್ರಹಿಸಿದ ಸ್ಯಾಬ್ ಸಂರಕ್ಷಿಸಿ, ಸರಿಯಾಗಿಡದೇ ಅದಕ್ಕೆ ಬೂಜು ಬಂದಿತ್ತು. ಇದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಧರ್ಮಸ್ಥಳದ ನೇಚರ್ ಕ್ಯೂರ್ ಆಸ್ಪತ್ರೆಯ ಎದುರಿನ ಸಿ.ಸಿ.ಕ್ಯಾಮರಾದ ಫೂಟೇಜ್ ಸಂಗ್ರಹಿಸಿರುವುದಿಲ್ಲ. ಸೌಜನ್ಯ ದಿನವೂ ಬಸ್ಸಿನಿಂದ ಇಲ್ಲಿಯೇ ಇಳಿದು ಮನೆಗೆ ಬರುತ್ತಿದ್ದಳು. ಅವಳ ಚಪ್ಪಲಿ ಒಳ ಉಡುಪುಗಳನ್ನು ಪೋಲೀಸರು ಸಂಗ್ರಹಿಸಿಲ್ಲ. ಅವಳ ಮೃತ ದೇಹ ದೊರಕಿದ ನಂತರ ತಮ್ಮ ಮನೆಯಿಂದ ಪೋಲೀಸರು ಅವಳ ಒಳಉಡುಪನ್ನು ಸಂಗ್ರಹಿಸಿದ್ದಾರೆಂದು ಸೌಜನ್ಯಳ ತಂದೆ ಹೆಳುತ್ತಾರೆ. ಮರಣೋತ್ತರ ಪರೀಕ್ಷೆ ಕೂಡ ಸರಿಯಾಗಿ ನಡೆದಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಸಾಕ್ಷ್ಯ ನಾಶ ಪಡಿಸಿದ ತನಿಖಾ ತಂಡವು ಶಿಕ್ಷೆಗೆ ಅರ್ಹರೆಂದು ವಿಶೇಷ ನ್ಯಾಯಾಲಯ ಹೇಳಿದೆ. ಇಲ್ಲಿ ಬೆಂಕಿ ಹಚ್ಚಿದ ಕೈಗಳಿಗೆ ಶಿಕ್ಷೆಯನ್ನು ಘೋಷಿಸುತ್ತದೆ. ಆದರೆ ಬೆಂಕಿ ಅಚ್ಚಲು ಅವರ ಕೈಗೆ ಬೆಂಕಿ ಪೊಟ್ಟಣ ಕೊಟ್ಟವರನ್ನು ಹಿಡಿಯಬೇಕಾಗಿರುವುದು ಮಹತ್ವದ ಕೆಲಸ. ಧರ್ಮದ ಮರೆಯಲ್ಲಿರುವ ಇಂತಹ ಕಿರಾತಕರನ್ನು ಸರ್ಕಾರ ಮೊದಲು ಸದೆಬಡಿಯಬೇಕಾಗಿದೆ.
ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆಯಬೇಕಿದೆ. ಧರ್ಮಸ್ಥಳದ ಸುತ್ತ ನಡೆದ 462 ಅಸಹಜ ಸಾವು ಪ್ರಕರಣಗಳ ತನಿಖೆಯೂ ಆಗಬೇಕಿದೆ. ವಿಶೇಷ ತನಿಖಾದಳ ಎಸ್.ಐ.ಟಿ.ಯನ್ನು ರಚಿಸಿ, ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಬೇಕಿದೆ. ಮಂಜುನಾಥ ದೇವಸ್ಥಾನವನ್ನು ಮುಜರಾಯಿಯವರ ತಾಬೆ ಮಾಡಬೇಕು. ದೇವಸ್ಥಾನದ ಉಸ್ತುವಾರಿ ಖಾಸಗಿಯವರ ಕೈಯಲ್ಲಿ ಇರಬಾರದು. ಅದನ್ನು ಸರ್ಕಾರ ವಹಿಸಿಕೊಳ್ಳಬೇಕು. ಇಲ್ಲಿ ನಡೆಯುತ್ತಿರುವ ಕೊಲೆ ನಿರ್ವಹಿಸುತ್ತಿರುವ ತನಿಖಾ ತಂಡ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗುವುದಕ್ಕೆ ಕಾರಣವೇನು. ಯಾವ ಒತ್ತಡ ಮತ್ತು ಪ್ರಭಾವದಿಂದ ಸೌಜನ್ಯ ಕೊಲೆ, ಬಲತ್ಕಾರದ ಸಾಕ್ಷಿಗಳನ್ನು ನಾಶಪಡಿಸಲಾಯಿತು. ಅವರ ಮೇಲೆ ಕಾನೂನು ಕ್ರಮ ಜರುಗಿಸುವವರಾರು? ಸೌಜನ್ಯಳಿಗೆ ನ್ಯಾಯ ಕೊಡಿಸುವವರಾರು? ಅದಕ್ಕೀಗ ಜನತೆ ಜಾಗೃತವಾಗಿ ನಿಂತಿದ್ದಾರೆ. ನ್ಯಾಯ ಕೇಳುತ್ತಿದ್ದಾರೆ.
ದೆಹಲಿಯ ಮಹಿಳಾ ಆಯೋಗವು ಉಡುಪಿಗೆ ಬರುತ್ತಾರೆ. ಉಡುಪಿಯ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದಾರೆಯೇ? ಎಂಬುದನ್ನು ಹುಡುಕಲು ದೆಹಲಿಯಿಂದ ಮಹಿಳಾ ಆಯೋಗ ಬರುತ್ತಾರೆ. ಕೂಗಳತೆ ದೂರದಲ್ಲಿ ಸೌಜನ್ಯಳ ಮನೆಯಿತ್ತು. ಆದರೆ ಅಲ್ಲಿಗೆ ಭೇಟಿ ನೀಡದೇ, ಶೌಚಾಲಯದಲ್ಲಿ ಕ್ಯಾಮರಾ ಹುಡುಕುತ್ತ, ಹಿಂದು ಮುಸ್ಲಿಂ ಎಂದು ಪತ್ತೆ ಹಚ್ಚುವುದರಲ್ಲಿ ತೊಡಗಿದ್ದಾರೆ. ಅಲ್ಲಿ ದೂರದ ಮಣಿಪುರ ಹೊತ್ತಿ ಉರಿಯುತ್ತಿದೆ. ಮಹಿಳೆಯರ ಯೌನ ಶೋಷಣೆ, ಬೆತ್ತಲೆಗೊಳಿಸಿ, ಸಾಮೂಹಿಕ ಅತ್ಯಾಚಾರಗಳು ನಡೆದರೂ ಈ ಮಹಿಳಾ ಮಣಿಗಳು ಮಣಿಪುರಕ್ಕೆ ಹೋಗಿಲ್ಲ. ಉಡುಪಿಯ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ, ಹಿಂದು ಮುಸ್ಲಿಂ ಕ್ಯಾತೆ ತೆಗೆಯುವುದರಲ್ಲಿ ನಿರತರಾಗಿದ್ದಾರೆ. ಶೌಚಾಲಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಭಗತ್ ಸಿಂಗ್ ಕ್ರಾಂತಿಕಾರಿ ಸಮಾವೇಶದ ಭಾಷಣವೊಂದರಲ್ಲಿ ಹೇಳುತ್ತಾರೆ. “ಹಿಂದು ಮುಸ್ಲಿಮ್ ಎನ್ನುವವರನ್ನು ಮೊದಲು ಭಾರತದಿಂದ ಹೊರ ಹಾಕಬೇಕು. ಅನಂತರ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ಕಷ್ಟವಾಗದು” ಎಂದು. ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆಯ ಮತ್ತು ಬಲತ್ಕಾರಿಗಳನ್ನು ಸರ್ಕಾರ ಹಿಡಿಯಬೇಕು. ಅದನ್ನು ಬಿಟ್ಟು ಮೊಬೈಲ್‌ನಲ್ಲಿ ಚಿತ್ರಿಕರಣ ಮಾಡಿದವನಿಗೆ ಬಂಧಿಸಿದ್ದಾರೆ. ಮಣಿಪುರದ ಹಿಂಸಾಚಾರದ ಕುರಿತು ಯಾವುದೇ ವಿಡಿಯೋಗಳು ಹೊರಗೆ ಹೋಗಬಾರದೆಂದು ಅಲ್ಲಿಯ ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರು ಇಂಟರನೆಟನ್ನು ನಿರ್ಭಂಧಿಸಿದ್ದಾರೆ. ಇದೆಂತಹ ನ್ಯಾಯ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಲ್ಲವೆ?
ಸೌಜನ್ಯಳ ಪ್ರಕರಣದಲ್ಲಿ ಸಿಬಿಐನವರು ಬಂಧಿಸಿದ್ದ ಸಂತೋಷರಾವ್ ನಿರಪರಾಧಿ ಎಂದು 11 ವರ್ಷಗಳ ನಂತರ ದಿನಾಂಕ 16-06-2023 ರಂದು ಬಿಡುಗಡೆಗೊಂಡಿದ್ದಾರೆ. “ಅಕ್ಯುಸಜ್ಡ ಫ್ಯೌಂಡ್ ನಾಟ್ ಗಿಲ್ಟಿ” ಎಂದು ಹೇಳಿದ್ದಾರೆ. ಹಾಗಾದರೆ ಸೌಜನ್ಯಳ ಕೊಲೆ, ಬಲತ್ಕಾರ ನಡೆಯಲೇ ಇಲ್ಲವೇ? ಅವಳ ಬೆತ್ತಲೇ ದೇಹ ನೇತ್ರಾವತಿ ದಂಡೆಯ ಕಾಡಿನಲ್ಲಿ ಹೇಗೆ ತಲುಪಿತು? ಇದಕ್ಕೆ ಉತ್ತರವನ್ನು ಧರ್ಮಸ್ಥಳದ ಮಂಜುನಾಥ ಹುಡುಕಿ ಕೊಡುವನೇ? ಅಲ್ಲಿಯ ಸ್ಥಳೀಯ ಬಲಾಢ್ಯರು ಬೆತ್ತಲಾಗಬೇಕು. ಧರ್ಮಾಧಿಕಾರಿಗಳು, ರಾಜಕಾರಣಿಗಳು, ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯವನ್ನು ಪ್ರಕರಣವನ್ನು ಮುಚ್ಚಿಹಾಕಲು ನಡೆಸಿದ ನಡೆಯ ಸತ್ಯ ಇಲ್ಲಿ ಬಯಲಾಗಬೇಕಿದೆ. ಅಪರಾಧಿಗಳು ಬಲಾಢ್ಯರೇ ಆಗಿರಬಹುದು. ಮಣಿಪುರವನ್ನು ಅಲ್ಲಿಯ ಮುಖ್ಯ ಮಂತ್ರಿಯೇ ಬೆಂಕಿ ಹಚ್ಚಿರಬಹುದು. ಬೆಂಕಿ ಯಾರೆ ಹಚ್ಚಲಿ ಅವರ ಕೈಗೆ ಬೆಂಕಿ ಪೊಟ್ಟಣವನ್ನು ಕೊಟ್ಟವರು ಯಾರು? ಅಪರಾಧಿಗಳನ್ನು ಪೋಷಿಸುತ್ತಿರುವ ಕೈಗಳಿಗೆ ಮೊದಲು ಬರೆ ಹಾಕಬೇಕಿದೆ. ಸರ್ಕಾರ ತನ್ನ ಕರ್ತವ್ಯ ನಿರ್ವಹಿಸದಿದ್ದರೆ, ಜನರೇ ತಮ್ಮ ಕೈಗೆ ಅಧಿಕಾರ ತೆಗೆದುಕೊಳ್ಳತ್ತಾರೆ ಎಂಬುದು ನೆನಪಿರಲಿ.