ಭಾರತದಲ್ಲಿ ಜಾತೀಯತೆ ಅದೆಷ್ಟು ಬೇರು ಬಿಟ್ಟಿದೆ ಎಂದರೆ ಅದೇಷ್ಟೇ ಬುಡಕ್ಕೆ ಕೈ ಹಾಕಿ ಕೆತ್ತಿದರು ಸಹ ಅದು ಚಿಗುರೊಡೆಯುತ್ತಾ ಸಾಗುತ್ತಿದೆ. ಇತಿಹಾಸ ತೆಗೆದು ನೋಡಿದಾಗ ಅದೆಷ್ಟೋ ಮಹಾನ್ ಪುರುಷರು ಅದರಲ್ಲಿ ಪ್ರಮುಖವಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ್, ಫುಲೆ ದಂಪತಿಗಳು, ಪೆರಿಯಾರ್… ಹೀಗೆ ಮುಂತಾದ ಮಹಾಪುರುಷರು ಜಾತೀಯತೆಯನ್ನು ಬುಡಸಹಿತ ಕಿತ್ತೆಸೆಯಲು ಪ್ರಯತ್ನಿಸಿದ್ದು ನೋಡಬಹುದು. ಆದರೆ ಇಲ್ಲಿನ ಜಾತೀಯತೆ ಮಾತ್ರ ಜಾತಿವಾದಿಗಳ ಮನಸಲ್ಲಿ ಹಾಗೆ ಬೇರೂರಿ ಬೆಳೆಯುತ್ತಾ ಬಂದಿದೆ.
ನಿನ್ನೆ (ರವಿವಾರ) ಕನ್ನಡ ಚಲನಚಿತ್ರದ ಮೇರು ನಟ ಉಪೇಂದ್ರ ಅವರು ಒಂದು ಫೇಸ್ಬುಕ್ ಲೈವನಲ್ಲಿ ‘ಸಮಾಜದಲ್ಲಿ ಕೆಟ್ಟ ಜನರು ಇದ್ದಾರೆ, ಊರು ಎಂದರೆ ಹೊಲಗೇರಿ ಇರುತ್ತಲ್ಲ ಹಾಗೆ ಇವರು’ ಎಂದು ಆ ಕೆಟ್ಟ ಜನರಿಗೆ ಭಾರತದ ಒಂದು ದೊಡ್ಡ ಅಸ್ಪೃಶ್ಯ ಸಮುದಾಯಕ್ಕೆ ಹೋಲಿಕೆ ಮಾಡಿ ಹೇಳಿದ್ದರು. ಅದೇ ಸಮುದಾಯದಲ್ಲಿ ಸಂವಿಧಾನವನ್ನೇ ಬರೆದಂತಹ ಡಾ. ಬಿ. ಆರ್. ಅಂಬೇಡ್ಕರ್ ಅವರು ಹುಟ್ಟಿದ್ದಾರೆ. ಅಂತಹ ಸಮುದಾಯವನ್ನು ಉಪೇಂದ್ರ ಅವರು ಕೆಟ್ಟ ಜನರಿಗೆ ಹೋಲಿಕೆ ಮಾಡಿ ಹೇಳಿದ್ದಾರೆ.
ಇದನ್ನು ವಿರೋಧಿಸಿ ಅವರು ಹೀಯಾಳಿಸಿದ ಸಮುದಾಯದ ಜನ ಮತ್ತು ಪ್ರಗತಿಪರರೆಲ್ಲ ಹೋರಾಟಕ್ಕಿಳಿದಿದ್ದು ನೋಡಿ ಉಪೇಂದ್ರ ಅವರು ಕಾಟಾಚಾರಕ್ಕೆ ಎನ್ನುವ ಹಾಗೆ ಕ್ಷಮೆ ಕೇಳಿದ್ದಾರೆ. ಆದರೆ ಅವರ ಮೇಲೆ ಸುಮಾರು ಐದು ಎಫ್ ಐ ಆರ್ ಕೂಡ ದಾಖಲಿಸಿದ್ದು, ಇದಕ್ಕೆ ಅನುಗುಣವಾಗಿ ಪೊಲೀಸರು ಉಪೇಂದ್ರ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಬಂದ ಕೂಡಲೇ ಉಪೇಂದ್ರ ಅವರು ತಲೆಮಾರೆಸಿಕೊಂಡು ಇವತ್ತು ಹೈಕೋರ್ಟ್ ಮೋರೆ ಹೋಗಿ ಒಂದು FIR ಗೆ ತಡೆಯಾಜ್ಞೆ ತಂದಿದ್ದಾರೆ.
ಇದನ್ನೂ ಓದಿ : ಬೀದರ ಲೋಕಸಭಾ : ಶಾಸಕರ ವೈಲೆಂಟ್; ಖೂಬಾಗೆ ʼಲೋಕʼ ಕಂಟಕ
ನಾವು ಇದಕ್ಕಿಂತ ಮುಂಚೆ ನಡೆದ ನಟ ಚೇತನ್ ಮತ್ತು ಹಂಸಲೇಖ ಅವರ ಪ್ರಕರಣಗಳು ಈ ಉಪೇಂದ್ರ ಅವರ ಪ್ರಕರಣಕ್ಕೆ ತಾಳೆ ಹಾಕಿ ನೋಡಿದರೆ ತುಂಬಾನೇ ವ್ಯತ್ಯಾಸ ಕಂಡುಬರುತ್ತದೆ. ನಟ ಚೇತನ್ ಅವರು ಒಂದು ಟ್ವಿಟ್ಟಲ್ಲಿ ‘ಬ್ರಾಹ್ಮಣ್ಯ’ ಎನ್ನುವ ಶಬ್ದ ಬಳಸಿದಕ್ಕೆ ಮಾತ್ರ ಅವರ ಕುಟುಂಬದವರಿಗೆ ಬಂಧನ ಕಾರಣವೂ ನೀಡದೆ ಪೋಲಿಸ್ ಇಲಾಖೆ ಸ್ವಯಂ ಪ್ರೇರಿತರಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡು, ಬಂಧಿಸಿದರ. ಅದೇ ರೀತಿ ಹಂಸಲೇಖ ಒಬ್ಬ ಸ್ವಾಮಿಗೆ ಅವರು ‘ಕುರಿಯ ಬ್ಲಡ್ ಫ್ರೈ ಕೊಟ್ಟರೆ ತಿಂತಾರಾ?’ ಎಂದು ಕೇಳಿದಕ್ಕೆ ಅವರನ್ನು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಹಾಗೆ ಮಾಡಲಾಗಿತ್ತು. ಈ ಇಬ್ಬರ ಹೇಳಿಕೆಗಳು ಸಮಾನತೆಯ ಪರವಾಗಿದ್ದವು. ಆದರೂ ಕೂಡ ಇವರನ್ನು ಕಾನೂನಿನ ಕುಣಿಕೆಗೆ ಸಿಲುಕಿಸಲು ಇನ್ನಿಲ್ಲದ ಪ್ರಯತ್ನ ನಡೆದಿದ್ದವು. ಆದರೆ ಉಪೇಂದ್ರ ಅವರು ಒಂದು ಜಾತಿಗೆ ಅವಮಾನ ಮಾಡಿ ಹೀಯಾಳಿಸಿದರು ಕೂಡ ಅವರನ್ನು ಬಂಧನವಂತೂ ದೂರವೇ ಉಳಿಯಿತು. ಅವರ ಹುಡುಕಾಟ ಕೂಡ ಕಾಟಾಚಾರಕ್ಕೆ ಎಂಬಂತೆ ಮಾಡಿದಂತಿದೆ. (ಇಲ್ಲದಿದ್ದರೆ ಅವರನ್ನು ಅರೆಸ್ಟ್ ಮಾಡುತ್ತಿದ್ದರು) ಕ ಹಾಗಾದರೆ ಸಮಾನತೆ ಎಲ್ಲಿದೆ? ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯವೇ? ನ್ಯಾಯ ಕೂಡಾ ಜಾತಿ ನೋಡುತ್ತಿದೆಯೇ? ಎನ್ನುವ ಸಂಶಯ ಮೂಡುತ್ತಿದೆ.
ಉಪೇಂದ್ರ ಅವರು ಅದನ್ನು ಗಾದೆ ಮಾತು ಎಂದು ಹೇಳುತ್ತಾರೆ. ಒಂದು ಸಮುದಾಯವನ್ನು ಹೀಯಾಳಿಸುವುದು ಗಾದೆಯೇ? ಒಂದು ವೇಳೆ ಗಾದೆ ಇದ್ದರು ಸಹಿತ ಆ ಅಸಮಾನತೆಯನ್ನು, ಕೋಮುದ್ವೆಷವನ್ನು ಬಿತ್ತುವ ಗಾದೆಗೆ ನಿರ್ಭಂಧ ಏಕೆ ಮಾಡಲಿಲ್ಲ? ಅಸಮಾನತೆ, ಕೋಮುದ್ವೇಷ ಬಿತ್ತುವ ಇಂತಹ ಹಲವಾರು ಪದಗಳಿಗೆ, ವಾಕ್ಯಗಳಿಗೆ ಬ್ಯಾನ್ ಮಾಡುವ ಅಗತ್ಯವಿದೆ. ಹಾಗೆಯೇ ಉಪೇಂದ್ರ ಅಂತಹ ಕೆಟ್ಟ ಮನಸ್ಥಿತಿ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಆದರೆ ಇಂದಿನ ಪರಿಸ್ಥಿತಿ ಬೇಲಿಯೇ ಎದ್ದು ಹೊಲ ಮೇಯಿದಂಗೆ ಆಗಿದೆ. ವ್ಯವಸ್ಥೆಯೇ ಜಾತಿವಾದಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ದುರಂತ.
ಉಪೇಂದ್ರಗೆ ಹೈಕೋರ್ಟ್ ನಿಂದ ರಿಲೀಸ್ ಸಿಕ್ಕ ತಕ್ಷಣವೇ, ಮತ್ತೊಂದು ಫೇಸ್ಬುಕ್ ಪೋಸ್ಟ್ ಹಾಕ್ತಾರೆ, ಅದರಲ್ಲಿ ಈ ಹೋರಾಟಗಾರರನ್ನು ಹೆಡೆ ಬಿಚ್ಚಿದ ಹಾವು ಅಂದರೆ ವಿಷ ಸರ್ಪಗಳಿಗೆ ಹೋಲಿಕೆ ಮಾಡಿದ್ದಾರೆ! ಇದೇ ಅಲ್ಲವೇ ಫ್ಯೂಡಲ್ ಮನಸ್ಥಿತಿ. ನಾನು ತಪ್ಪಾಗಿ ಹೇಳಿದ್ದೀನಿ ಇನ್ಮುಂದೆ ನಾನು ಬದಲಾಗುತ್ತೇನೆ ಎನ್ನುವ ಗೋಜಿಗೆ ಅವರು ಹೋಗಲಿಲ್ಲ. ಅದೆಷ್ಟು ಜಾತಿವಾದ ಬೇರು ಬಿಟ್ಟಿರಬಹುದು ಅವರಲ್ಲಿ?
ಸ್ವತಂತ್ರ ಬಂದು 75 ವರ್ಷಗಳಾದರೂ ಕೂಡ ಇಂತಹ ಸೆಲೆಬ್ರಿಟಿಗಳೇ ಇನ್ನು ಜಾತಿಯೆಂಬ ಕೊಚ್ಚೆಯಿಂದ ಇನ್ನೂ ಹೊರಗೆ ಬಂದಿಲ್ಲ. ಇನ್ನೂ ಹಳ್ಳಿಯ ಜನಸಾಮಾನ್ಯರ ಕಥೆಯೇನು? ಇಂತಹ ಜಾತಿವಾದಿ ಮನಸ್ಥಿತಿಯವರು ತಮ್ಮ ಮೆದುಳನ್ನು ತಾವೇ ಶುಚಿಗೊಳಿಸಕೊಳ್ಳಬೇಕಿದೆ. ಅವರು ಮೆದಳು ಅವರೇ ಶುಚಿಗೊಳಿಸಿಕೊಳ್ಳುವ ಹಾಗೆ ಸಮಾನತಾವಾದಿಗಳು ಮಾಡಬೇಕಾಗಿದೆ. ಆವಾಗ ಮಾತ್ರ ಈ ಜಾತಿ ಎನ್ನುವ ಭೂತ ಹೋಗಲಾಡಿಸಲು ಸಾಧ್ಯ. ಇಲ್ಲದಿದ್ದರೆ ಖಂಡಿತವಾಗಿಯೂ ಈ ನೆಲದಿಂದ ಜಾತಿಯತೆ, ಅವಮಾನ, ಕೋಮುದ್ವೇಷ… ಎನ್ನುವುದು ಎಂದೆಂದಿಗೂ ನಾಶವಾಗುವುದಿಲ್ಲ.
– ಚಿತ್ರಶೇನ ಫುಲೆ