ದ ಪಾಲಿಟಿಕ್

ಖೂಬಾ – ಚೌವ್ಹಾಣ ಜಗಳದ ಅಂತ್ಯವಲ್ಲ ಇದು ಆರಂಭ.

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಶಾಸಕ ಪ್ರಭು ಚೌವ್ಹಾಣ ಜಗಳದ ಇತಿಹಾಸದ ಚಕ್ರ ಒಂದು ಸುತ್ತು ಹಾಕಿ ನಿಂತಿದೆ. ಆರೋಪ – ಪ್ರತ್ಯಾರೋಪ, ಚುನಾವಣೆಯಲ್ಲಿ ಸೋಲಿಸುವ ಯತ್ನ, ಮಾನನಷ್ಟ ಮೊಕದ್ದಮೆಯ ಬೇದರಿಕೆ, ಹತ್ಯೆಗೆ ಸೂಪಾರಿ, ಆಣೆ-ಪ್ರಮಾಣ, ಕಣ್ಣಿರು, ಎಸ್‌ಪಿಗೆ ದೂರು –  ಪ್ರತಿದೂರು…ಇತ್ಯಾದಿಗಳೆಲ್ಲವೂ ಮುಗದಿವೆ. ಪಕ್ಷದ ರಾಜ್ಯ ನಾಯಕರಿಗೆ ಈ ಜಗಳಕ್ಕೆ ಸಸಿಯಲ್ಲೇ ಚಿವುಟಿ ಹಾಕುವ ಸಾಮರ್ಥ್ಯವಿದ್ದಿಲ್ಲ. ಕೇಂದ್ರ ನಾಯಕರಿಗೆ ಸಮಯ ಇದ್ದಿಲ್ಲ. ಹಾಗಾಗಿ ಜಗಳ ಈಗ ಜೋರಾಗಿ ಬಿಜೆಪಿ ಹೈಕಮಾಂಡ್‌ ಅಂಗಳಕ್ಕೆ ತಲುಪಿದೆ. ಭಾರಿ ಪ್ರಬಲವಾಗಿರುವ ಬಿಜೆಪಿ ಹೈಕಮಾಂಡ್‌ ಕ್ಷಣಮಾತ್ರದಲ್ಲಿ ಈ ಜಗಳ ಮುಗಿಸುತ್ತದೆ ಎಂದು ಎರಡು ಕಡೆಯ ಕಾರ್ಯಕರ್ತರು ನೀರಾಳರಾದಂತಿದೆ.

ಆದರೆ ಈ ಜಗಳ ಕಾರ್ಯಕರ್ತರು ನಿರೀಕ್ಷಿದಂತೆ ಸುಲಭದಲ್ಲಿ ಮುಗಿಯುವಂತದಲ್ಲ. ಎಲ್ಲವೂ ಅಳೆದು ತೂಗಿಯೇ ಲೆಕ್ಕ ಹಾಕುವ ಹೈಕಮಾಂಡ್‌ ಇಬ್ಬರ ಅಳಲನ್ನು ಆಲಿಸಿ, ಇಬ್ಬರ ಬಾಯಿಗೂ ಬೀಗ ಹಾಕಿಸಿ ಪಕ್ಷಕ್ಕೆ ಆಗುತ್ತಿರುವ ಮುಜುಗರ ಮತ್ತು ಡ್ಯಾಮೇಜ್‌ ತಡೆಯಲು ಯತ್ನಿಸಬಹುದು. ಹೆಚ್ಚೆಂದರೆ ಬಹಿರಂಗವಾಗಿ ಕಿತ್ತಾಡದಂತೆ ಇಬ್ಬರಿಗೂ ತಾಕೀತು ಮಾಡಬಹುದು ಅಷ್ಟೇ. ಈ ಚುನಾವಣಾ ಹೊಸ್ತಿಲಲ್ಲಿ  ಇಬ್ಬರಲ್ಲಿ ಯಾರದಾದರೂ ಒಬ್ಬರ ತಲೆದಂಡ ಪಡೆಯುದಾಗಲಿ, ಪಕ್ಷದಿಂದ ಉಚ್ಛಾಟನೆ ಮಾಡುವುದಾಗಲಿ ಮಾಡುವುದಿಲ್ಲ.

ಮೇಲಾಗಿ ಹೈಕಮಾಂಡ್‌ ಮಟ್ಟದಲ್ಲಿ ಇಬ್ಬರದೂ ಚಿರಪರಿಚಿತ ಮುಖವೆ. ಇಬ್ಬರೂ ಪಕ್ಷ ನಿಷ್ಟೆಗೆ ಹೆಸರಾದವರೇ. ಕೇಂದ್ರ ಸಚಿವ ಖೂಬಾಗೆ ಕೇಂದ್ರದ ವರಿಷ್ಠ ನಾಯಕರೊಂದಿಗೆ ಹೆಚ್ಚು ಒಡನಾಟ ಇದೆ. ಹಾಗಂತ ಇವರ ಮಾತೇ ವರಿಷ್ಠರು ಕಣ್ಣುಮುಚ್ಚಿ ಕೇಳುತ್ತಾರೆಂದು ನಂಬಲಾಗದು. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಔರಾದ ಹಾಗೂ ಬಸವಕಲ್ಯಾಣ ಶಾಸಕರಿಗೆ ಟಿಕೆಟ್‌ ತಪ್ಪಿಸಲು ಖೂಬಾ ತಮ್ಮ ಸಾಮರ್ಥ್ಯ ಮೀರಿ ಕೊನೆಗಳಿಗೆವರೆಗೂ ಯತ್ನಿಸಿ ವಿಫಲರಾಗಿರುವ ವಿದ್ಯಮಾನ ಕಣ್ಣೆದುರಿನಲ್ಲೇ ಇದೆ. ನಂತರ ಹತಾಶರಾಗಿ ಇಬ್ಬರನ್ನೂ ಅದರಲ್ಲೂ ಚೌವ್ಹಾಣ್ ಗೆ ಚುನಾವಣೆಯಲ್ಲಿ ಸೋಲಿಸಲು ತೆರೆಮರೆಯಲ್ಲಿ ಕೂತು ಯತ್ನಿಸಿದ್ದು ಗುಟ್ಟಾಗೇನು ಉಳಿದಿಲ್ಲ.

ಇದನ್ನೂ ಓದಿ : ಶಾಸಕ ಪ್ರಭು ಚೌವ್ಹಾಣ್ ಹತ್ಯೆಗೆ ಬಿಜೆಪಿ ಸಂಸದ ಭಗವಂತ ಖೂಬಾ ಸಂಚು!

ಹಾಗಾಗಿಯೇ ಇಬ್ಬರೂ ಶಾಸಕರು ಈಗ ತಿರುಮಂತ್ರ ಹೂಡಲು, ಸೇಡು ತಿರಿಸಿಕೊಳ್ಳಲು ಸಿದ್ಧರಾಗಿ ಕೂತಿದ್ದಾರೆ. ಇಬ್ಬರೂ ಕೂಡಾ ಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ಖೂಬಾಗೆ ಎಂಪಿ ಟಿಕಟ್‌ ತಪ್ಪಿಸಲು ತಮ್ಮೆಲ್ಲ ಶಕ್ತಿ ಸಾಮರ್ಥ್ಯ ಬಳಸುತ್ತಾರೆ. ಟಿಕೆಟ್‌ ಪಡೆದರೂ ತೆರೆಮರೆಯಲ್ಲಿ ಕೂತು ಸೋಲಿಸಲು ಏನೇನು ಮಾಡಬೇಕೋ ಅದೆಲ್ಲವೂ ಇವರೂ ಮಾಡುತ್ತಾರೆ. ಇದನ್ನು ತಪ್ಪಿಸಲು ಹೈಕಮಾಂಡ್‌ನಿಂದಲೂ ಸಾದ್ಯವಾಗಲಾರದೇನೋ?

ಲೋಕಸಭಾ ಚುನಾವಣೆಯಲ್ಲಿ ಖೂಬಾಗೆ ಸೋಲಿಸಲು ಈ ಜೋಡೆತ್ತುಗಳು ಸಫಲರಾದರೆ ಖೂಬಾ ರಾಜಕೀಯ ಬದುಕು ಕತ್ತಲಿಗೆ ಜಾರುತ್ತದೆ ಮತ್ತು ಜಗಳವೂ ತನ್ನ ಮಗ್ಗಲು ಬದಲಾಯಿಸುತ್ತದೆ.  ಎರಡು ಅವಧಿಯಲ್ಲಿ ಮೋದಿನಾಮಬಲದಿಂದ ಅನಾಯಾಸವಾಗಿ ಗೆದ್ದಂತೆ ಈ ಸಲವೂ ಸಂಸದರು ಮತ್ತೆ ಗೆದ್ದರೆ ಜಗಳ ಮತ್ತೆ ವೇಗ ಪಡೆದು ಅದು ಮತ್ತೊಂದು ಹಂತಕ್ಕೆ ತಲಪುತ್ತದೆ. ಆಗ ಔರಾದ ಶಾಸಕರು ಅನಿವಾರ್ಯವಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಕಡೆ ಮುಖ ಮಾಡಬಹುದು. ರಾಜಕೀಯ ಎಂಬುವುದು ನಿಂತ ನೀರಲ್ಲ. ಅದು ಚಲನಶೀಲವಾದದ್ದು. ಇಲ್ಲಿ ಸಿದ್ಧಾಂಕಾಗಿ ಯಾರೂ ರಾಜಕೀಯ ಮಾಡುತ್ತಿಲ್ಲ, ಅಧಿಕಾರಕ್ಕಾಗಿಯೇ ಎಲ್ಲರೂ ರಾಜಕೀಯ ಮಾಡುತ್ತಿರುವುದು. ಇಲ್ಲದಿದ್ದರೆ ಯಡಿಯೂರಪ್ಪ, ಲಕ್ಷ್ಮಣ ಸೌದಿ, ಜಗದೀಶ್‌ ಶಟ್ಟರ್‌ ಅಂತಹ ಘಟಾನುಘಟಿ ನಾಯಕರೇಕೆ ತಮ್ಮ ಮಾತೃ ಪಕ್ಷ ತೊರೆಯುತ್ತಿದ್ದರು?

ಆಗ ಚೌವ್ಹಾಣ್‌ಗೆ ಕಾಂಗ್ರೆಸ್‌ ನಾಯಕ, ಸಚಿವ ಈಶ್ವರ ಖಂಡ್ರೆ ಜೊತೆಗೆ ಇರುವ ಸಂಬಂಧವೂ ಸಹಾಯಕ್ಕೆ ಬರಬಹುದು. ಚೌವ್ಹಾಣ್‌ ಏನಾದರೂ ಬೆಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರೆ  ಕಾಂಗ್ರೆಸ್‌ ಪಕ್ಷಕ್ಕೂ, ಸ್ವತಃ ಚೌವ್ಹಾಣ್‌ಗೂ  ಲಾಭವಿದೆ.  ಕಳೆದ ಹದಿನೈದು ವರ್ಷಗಳಿಂದ ಔರಾದನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೆ ಇಲ್ಲ. ಬಲಿಷ್ಠವಾದ ಒಂದು ಟೀಂ ಕೂಡಾ ಇಲ್ಲ. ಹಾಗಾಗಿಯೇ ಮೂರು ಅವಧಿಯಿಂದಲೂ ಪಕ್ಷ ಇಲ್ಲಿ ಸೋಲುತ್ತಲೇ ಬರುತ್ತಿದೆ. ಚೌವ್ಹಾಣ್‌ ಕಾಂಗ್ರೆಸ್‌ಗೆ ಬಂದರೆ ಪಕ್ಷಕ್ಕೆ ಆನೆಬಲಬಂದತ್ತಾಗುತ್ತದೆ. ಕಾಂಗ್ರೆಸ್‌ ಪಕ್ಷದ ಸಾಂಪ್ರದಾಯಿಕ ಮತಗಳು  ತಮ್ಮ ಜಾತಿಬಲದಿಂದ ಚೌವ್ಹಾಣ್‌ ಕೂಡಾ ಇನ್ನೂ ಎರಡು ಅವಧಿಗೆ ಸುಲಭವಾಗಿ ಇಲ್ಲಿ ಗೆಲ್ಲಬಹುದು.

ಇವೆಲ್ಲವೂಗಳ ಮಧ್ಯೆ ಈ ಜಗಳಕ್ಕೆ ಅಸಲಿ ಕಾರಣವೇನು ಎಂಬುದು ಪ್ರಶೆಯಾಗಿಯೇ ಉಳದಿದೆ. ಈ ಪ್ರಶ್ನೆಗೆ ಉತ್ತರ ಅವರಿಬ್ಬರೆ ಹೇಳಬೇಕು. ಕಾರಣವೇನೆಂದು ಗೊತ್ತಾದರೆ ಮಾತ್ರ ಹೈಕಮಾಂಡ್‌ ಆಗಲಿ ಇಲ್ಲವೇ ಲೋ ಕಮಾಂಡ್‌ ಆಗಲಿ ಜಗಳಕ್ಕೆ ಚಿಕಿತ್ಸೆ ನೀಡಬಹುದು. ಕಾರಣವೆ ಗೊತ್ತಿಲ್ಲದೆ ಚಿಕಿತ್ಸೆ ನೀಡಲು ಮುಂದಾದರೆ ಚಿಕಿತ್ಸೆ ತಪ್ಪಾಗಿ ಗ್ಯಾಂಗ್ರಿನ್‌ ಆಗುವ ಸಾದ್ಯತೆಯೂ ಇರುತ್ತದೆ. ಹೈಕಮಾಂಡ್‌ಗೆ ಕಾರಣ ಗೊತ್ತಿದ್ದರೂ ಇವರಲ್ಲಿ ಒಬ್ಬರಾದರೂ ಬಾಯ್ಬಿಟ್ಟು ಹೇಳದಿದ್ದರೆ ಅವರಾದರೂ ಏನು ಮಾಡಲು ಸಾಧ್ಯ? ಇಬ್ಬರೂ ಜಗಳಕ್ಕೆ ಕಾರಣವೇನೆಂದು ಸಾರ್ವಜನಿಕವಾಗಿ ಹೇಳುವುದು ಬಿಟ್ಟು ಮಿಕ್ಕಿದೆಲ್ಲವೂ ಹೇಳುತ್ತಿದ್ದಾರೆ.

ಬಲ್ಲ ಮೂಲಗಳ ಪ್ರಕಾರ  2014ನೇ ಲೋಕಸಭಾ ಚುನಾವಣೆಯಲ್ಲಿ  ಖೂಬಾಗೆ ಚೌವ್ಹಾಣ್‌ ಭಾರಿ ಮೊತ್ತದ ಹಣ ನೀಡಿದ್ದಾರಂತೆ ಅದು ಮರಳಿ ಖೂಬಾ ನೀಡದಿರುವುದೇ ಈ ಜಗಳಕ್ಕೆ ಕಾರಣವಂತೆ. ಸತ್ಯಕ್ಕೆ ಇದು ಸ್ವಲ್ಪ ಸಮೀಪವೂ ಇದ್ದಂತಿದೆ. ಏಕೆಂದರೆ ಇದಲ್ಲದೆ ಬೇರೇನು ಕಾರಣವಿರಲು ಸಾಧ್ಯ? ಇವರಿಬ್ಬರೂ ರಾಜಕೀಯ ಎದುರಾಳಿಗಳಲ್ಲ, ಒಂದೇ ಪಕ್ಷದವರು. ಒಂದೇ ಪಕ್ಷದವರಾದರೂ ಎಮ್‌ಎಲ್‌ಎ ಅಥವಾ ಎಂಪಿ ಚುನಾವಣೆಯಲ್ಲಿ ಇಬ್ಬರೂ ಒಂದೇ ಟಿಕೆಟ್‌ಗಾಗಿ ಪರಸ್ಪರ ಸ್ಪರ್ಧಿಗಳಲ್ಲ. ಏಕೆಂದರೆ  ಚೌವ್ಹಾಣ್ ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿದವರು. ಖೂಬಾ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಖೂಬಾ ಚುನಾವಣೆಗೆ ಸಾಮಾನ್ಯ ಮತಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಚೌವ್ಹಾಣ್‌ ಮೀಸಲು ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ.

ಇನ್ನೂ ಮನಸ್ತಾಪ, ವೈಮನಸ್ಸು, ಅಹಮಿಕೆ…ಇತ್ಯಾದಿಗಳೇನೆ ಇದ್ದರೂ ಇವು ಒಬ್ಬ ರಾಜಕಾರಣಿಯ ಹತ್ಯೆಗೆ ʼಸೂಪಾರಿʼ ನೀಡುವ ಹಂತಕ್ಕೆ ಹೋಗುವಂತಹ ಕಾರಣಗಳಲ್ಲ.  2014ರ ಲೋಕಸಭಾ ಚುನಾವಣೆಯಲ್ಲಿ ಖೂಬಾಗೆ ಟಿಕೆಟ್‌ ಕೋಡಿಸಲು, ಗೆಲ್ಲಿಸಲು ಚೌವ್ಹಾಣ್‌ ಪಾತ್ರ ದೊಡ್ಡದಿದೆ. ಇದು ಸ್ವತಃ ಸಂಸದರು ಅಲ್ಲಗಳಿಯಲು ಆಗುವುದಿಲ್ಲ. ಹೀಗಿದ್ದವರು ಮುಂದೆ ಈ ಪರಿ ವೈರಿಗಳಾಗುತ್ತಾರೆಂದರೆ ಹಣಕಾಸಿನ ವ್ಯವಹಾರವಲ್ಲದೆ ಮತ್ತೇನು ಕಾರಣವಿರಲು ಸಾಧ್ಯ? ಹಣಕಾಸಿನ ವ್ಯವಹಾರದ ಜೊತೆಗೆ ನಂಬಿಕೆದ್ರೋಹ, ವಿಶ್ವಾಸಘಾತ, ಅಹಮಿಕೆಯೂ ಸೇರಿಕೊಂಡು ಜಗಳವೆ ನಾಚಿ ದೂರ ನಿಂತಿದೆ.

ಕಾರಣವೇನೇ ಇದ್ದರೂ ಇದರಿಂದ ಪಕ್ಷಕ್ಕೆ ಮುಜುಗರ ಮತ್ತು ಹಾನಿ ಆಗುತ್ತಿರುವುದು ಸುಳ್ಳಲ್ಲ. 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಜಗಳ ಹೀಗೆ ಮುಂದುವರೆದರೆ ಕರ್ನಾಟಕದಲ್ಲಿ ಎದುರಾಳಿ ಕಾಂಗ್ರೆಸ್ ಪಕ್ಷ‌ಕ್ಕೆ ಒಂದು ಅಸ್ತ್ರ ಸಿಕ್ಕಂತಾಗುತ್ತದೆ ಮತ್ತು ಇದನ್ನೇ  ಗುರಾಣಿಯಾಗಿಸಿಕೊಂಡು ಬಿಜೆಪಿ ಮೇಲೆ ದಾಳಿ ಮಾಡುತ್ತದೆ. ʻತಮ್ಮದೆ ಪಕ್ಷದ ಶಾಸಕನ ಹತ್ಯೆಗೆ ಸುಪಾರಿ ನೀಡುವ ಸಂಸದನ ಮೇಲೆ ಕ್ರಮ ಕೈಗೊಳ್ಳಲು ಅಸಮರ್ಥವಾಗಿರುವ ಪಕ್ಷ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾದ್ಯʼ ಎಂದು ಕಾಂಗ್ರೆಸ್‌ ಜೋರಾಗಿಯೇ ರಾಜ್ಯದಾದಂತ್ಯ ಸುತ್ತಾಡಿ ಹೇಳುತ್ತದೆ. ಇದು ಚುನಾವಣೆಯ ಈಶ್ಯೂ ಕೂಡಾ ಮಾಡುತ್ತದೆ. ಇದು ಮತದಾರರ ಮೇಲೆ  ಪರಿಣಾಮವೂ ಬೀರಬಹುದು.

ಕರ್ನಾಟಕ ಮತದಾರರು ಹೊಡಿ,ಬಡಿ,ಕಡಿ ಸಂಸ್ಕೃತಿಗೆ ಬೆಂಬಲಿಸಿದ ಉದಾಹರಣೆಗಳಿಲ್ಲ. ಹಾಗಾಗಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ ಆಗಲು ಈ ಈಶ್ಯೂ ಒಂದು ಕಾರಣವಾಗಬಹುದು. ಚೌವ್ಹಾಣ್‌ ಖೂಬಾ ಮೇಲೆ ಮಾಡಿರುವ ಹತ್ತಾರು ಆರೋಪಗಳಲ್ಲಿ ಇದು ಪ್ರಬಲವಾಗಿದೆ. ಖೂಬಾಗೆ ಈ ಆರೋಪ ವಿಚಲಿತಗೊಳಿಸಿದೆ. ಹಾಗಾಗಿಯೇ ಓಡೋಡಿ ಔರಾದ ಅಮರೇಶ್ವರ ದೇವಾಲಯಕ್ಕೆ ಬಂದು ಆಣೆ – ಪ್ರಮಾಣ ಇಟ್ಟಿದ್ದಾರೆ. ಆದರೂ ಅದೇನು ಜನರ ಮೇಲೆ ಪರಿಣಾಮ ಬಿದ್ದಂತೆ ಕಾಡುತ್ತಿಲ್ಲ. ಸಚಿವರಿಗೆ ʻಸುಪಾರಿʼ ಆರೋಪ ಚುನಾವಣೆಯಲ್ಲಿ ದುಬಾರಿಯಾಗುವ ಹಾಗೂ ಅವರ ರಾಜಕೀಯ ಜೀವನಕ್ಕೆ ಉರುಳಾಗುವ ಸಾದ್ಯತೆಯಿದೆ.  ಮೋದಲೇ  ಸ್ವಂತ ವರ್ಚಸ್ಸಿನ ಮೇಲೆ ಚುನಾವಣೆ ಗೆಲ್ಲುವ ಸಾಮರ್ಥ್ಯವಾಗಲಿ, ಬೆನ್ನುಹಿಂದೆ ಸ್ವಂತ ದೊಡ್ಡ ಕಾರ್ಯಕರ್ತರ ಪಡೆಯಾಗಲಿ ಅವರಿಗೆ ಇಲ್ಲ. ಮೋದಿ ನಾಮಬಲವೇ ಅವರ ರಾಜಕೀಯ ಪ್ರಾಣವಾಯು ಆಗಿದೆ. ಈಗ ಮೋದಿ ನಾಮವೂ ಮಸುಕಾಗಿದೆ. ಇನ್ನೊಂದೆಡೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೆ ಸಚಿವರ ಮೇಲೆ ಭಾರಿ ಅಸಮಧಾನವಿದಂತಿದೆ. ಇದೇ ಟ್ರೆಂಡ್‌ ಏನಾದರೂ ಮುಂದುವರೆದರೆ ಬೀದರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗೆ ಚುನಾವಣೆಯಲ್ಲಿ ವರವಾಗುವ ಸಾಧ್ಯತೆಯಿದೆ. ಚವ್ಹಾಣ್‌ನಿಂದ ದೂರ ಸರಿದು ಖೂಬಾ ಬಣಕ್ಕೆ ಸೇರಿರುವ ಮತ್ತು ಚವ್ಹಾಣ್‌ಗೆ ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿದವರಲ್ಲಿ ಛೋಟಾ- ಮೋಟಾ ಗುತ್ತಗೆದಾರರು ಇದ್ದರೇ ವಿನಾ ನೀಜವಾದ ಕಾರ್ಯಕರ್ತರಲ್ಲ. ನಿಸ್ವಾರ್ಥ ಕಾರ್ಯರ್ತರು ಚೌವ್ಹಾಣ್‌ ಜತೆಗೆ ಇದ್ದರೂ ಹಾಗಾಗಿಯೇ ಯಾರೇನೇ ತಂತ್ರ ಮಾಡಿದರೂ ಹಣಬಲ, ಜಾತಿಬಲ ಮತ್ತು ಕಾರ್ಯಕರ್ತರ ಬಲದಿಂದಾಗಿ ಶಾಸಕರಿಗೆ ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!