ದ ಪಾಲಿಟಿಕ್

ಮರೆಯಬಾರದ ರಾಷ್ಟ್ರಪತಿಯ ಮತ್ತೊಂದು ಜನ್ಮದಿನ

ದ ಪಾಲಿಟಿಕ್

ದ ಪಾಲಿಟಿಕ್

“ನಮ್ಮಲ್ಲಿ ತಾಂತ್ರಿಕ ಪದವೀಧರರ ಭಾರೀ ದೊಡ್ಡ ಪಡೆ ಇದೆ. ಆದರೆ ಜಗತ್ತಿನ ಅತಿ ದೊಡ್ಡ ಅನಕ್ಷರಸ್ಥ ಪಡೆಯೂ ಇದೆ. ಹಸಿವೆಯಿಂದ ಬಳಲುವ ಮಕ್ಕಳ ಅತಿ ದೊಡ್ಡ ಪಡೆ, ಬಡತನದ ರೇಖೆಯ ಕೆಳಗಿರುವ ಜನರ ಅತಿ ದೊಡ್ಡ ಪಡೆಯೂ ನಮ್ಮಲ್ಲಿದೆ. ಭಾರೀ ಗಲೀಜಿನ ನಡುವೆಯೇ ನಮ್ಮ ಬೃಹತ್‌ ಫ್ಯಾಕ್ಟರಿಗಳು ತಲೆಯೆತ್ತಿ ನಿಂತಿವೆ; ನಮ್ಮ ಉಪಗ್ರಹಗಳು ಬಡವರ ಗುಡಿಸಲಿನ ನಡುವೆಯಿಂದಲೇ ಮೇಲಕ್ಕೆ ಚಿಮ್ಮುತ್ತಿವೆ….. ದ್ರೌಪದಿಯ ಕಾಲದಿಂದಲೂ ನಮ್ಮಲ್ಲಿ ಹೆಣ್ಣುಮಕ್ಕಳ ಬಹಿರಂಗ ವಸ್ತ್ರಾಪಹರಣ ನಡೆಯುತ್ತಿದೆ…”

ರಾಷ್ಟ್ರಪತಿ ಹುದ್ದೆಯಲ್ಲಿದ್ದ ಕೆ.ಆರ್‌. ನಾರಾಯಣನ್‌ ಭಾರತದ ೫೦ನೇ ಗಣರಾಜ್ಯೋತ್ಸವದ (೨೬ ಜನವರಿ ೨೦೦೦) ಮುನ್ನಾ ದಿನ ರಾಷ್ಟ್ರವನ್ನುದ್ದೇಶಿಸಿ ಮನಬಿಚ್ಚಿ ಹೇಳಿದ ಮಾತುಗಳು ಇವು.

ಇಂಥ ಸ್ಪಷ್ಟ, ಕಟುವಾಸ್ತವದ ಮಾತುಗಳನ್ನು ಬೇರೆ ಯಾವ ರಾಷ್ಟ್ರಾಧ್ಯಕ್ಷರೂ ಹೇಳಿರಲಿಲ್ಲ. ಹೊಸ ಸಹಸ್ರಮಾನದ ಹೊಸ್ತಿಲಲ್ಲಿ, ಸುವರ್ಣ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲ ಗಣ್ಯರಂತೆ ನಮ್ಮ ರಾಷ್ಟ್ರದ ಸಾಧನೆಗೆ ಶಹಬ್ಬಾಸ್‌ ಹೇಳಿಕೊಂಡು ಅವರೂ ಬೀಗಬಹುದಿತ್ತು. ಆದರೆ ಅವರು ಹಾಗಿರಲಿಲ್ಲ. ಇದುವರೆಗೆ ಆಗಿ ಹೋದ ರಾಷ್ಟ್ರಪತಿಗಳಲ್ಲಿ ನನ್ನ ಅಚ್ಚುಮೆಚ್ಚಿನವರು ಅವರು.

ಅದಕ್ಕೆ ನನ್ನ ವೈಯಕ್ತಿಕ ಕಾರಣಗಳೂ ಇದೆ ಅನ್ನಿ. ನಾನು ಜವಾಹರಲಾಲ್‌ ನೆಹರೂ ವಿ.ವಿ.ಯಲ್ಲಿ ಓದುತ್ತಿದ್ದಾಗ ಅವರು ನಮ್ಮ ಕುಲಪತಿಯಾಗಿದ್ದರು. ನನ್ನನ್ನು ತಮ್ಮ ಚೇಂಬರಿಗೆ ಕರೆಸಿ, ಕಿರು ಸನ್ಮಾನ ಮಾಡಿ, ನನ್ನದೇ ಹೆಸರಿನಲ್ಲಿದ್ದ ರೋಲಿಂಗ್‌ ಕಪ್‌* ಎತ್ತಿ ನನಗೆ ಹಸ್ತಾಂತರಿಸಿದವರು ಅವರು. ನಂತರವೂ ನನ್ನನ್ನು ಕಂಡಾಗಲೆಲ್ಲ ಆತ್ಮೀಯವಾಗಿ ಮಾತಾಡಿಸುತ್ತಿದ್ದರು.

ನನ್ನ ಮಿತ್ರ ಅನಿಲ್‌ ಅಗರ್ವಾಲ್‌ ರಾಜಸ್ತಾನದ ಸುಖ್ಮಾಜರಿ ಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿಯ ವಿಶಿಷ್ಟ ಮಾದರಿಯೊಂದನ್ನು ಸಾಕಾರಗೊಳಿಸಿದಾಗ ಈ ರಾಷ್ಟ್ರಪತಿ ಅಲ್ಲಿಗೇ ಬಂದು ಹಳ್ಳಿಯವರನ್ನು ಸನ್ಮಾನಿಸಿದ್ದರು. ಮಳೆನೀರ ಸಂಗ್ರಹದ ಮಹತ್ವ ಎಷ್ಟೆಂದು ಮನವರಿಕೆಯಾದ ಕೂಡಲೇ ಇಡೀ ರಾಷ್ಟ್ರಪತಿ ಭವನದಲ್ಲಿ ಮಳೆನೀರಿನ ಸಂಗ್ರಹದ ವ್ಯವಸ್ಥೆ ಮಾಡಿಸಿದವರು ಅವರು.

ಕ್ರಮೇಣ ಹೆಚ್ಚುತ್ತಿರುವ ಧಾರ್ಮಿಕ ಮೂಲವಾದದ ಬಗ್ಗೆ, ಕೊಳ್ಳುಬಾಕ ಸಂಸ್ಕೃತಿಯನ್ನು ಎಗ್ಗಿಲ್ಲದೆ ಹಬ್ಬಿಸುತ್ತಿರುವ ಜಾಹೀರಾತುಗಳ ಬಗ್ಗೆ, ಕೆಳಜಾತಿಯ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ, ಯಾಕೆ ರಾಜಕೀಯ ರಂಗದಲ್ಲಿ ಚರ್ಚೆಗಳಾಗುತ್ತಿಲ್ಲ ಎಂದು ಮತ್ತೆ ಮತ್ತೆ ಕೇಳುತ್ತಿದ್ದ ರಾಷ್ಟ್ರಪತಿಯಾಗಿದ್ದವರು ಅವರು.  

ಅವೆಲ್ಲ ಬಿಡಿ; ಸಂವಿಧಾನದ ರಕ್ಷಣೆಗೆ ಅವರಷ್ಟು ಕಟಿಬದ್ಧರಾಗಿ, ಖಡಕ್ಕಾಗಿ ನಿಂತವರು ನಮ್ಮ ಇತಿಹಾಸದಲ್ಲಿ ಬೇರೆ ಯಾವ ರಾಷ್ಟ್ರಪತಿಯೂ ಇಲ್ಲ. “ನಾನು ರಬ್ಬರ್‌ ಸ್ಟಾಂಪ್‌ ಆಗಲಾರೆ” I am a working President ಎಂದು ಹೇಳಿದವರು ಅವರು.

ಕೇರಳದ ಕೋಟಯಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ ಅವರು, ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಎಮ್‌ ಎ ಮುಗಿಸಿ, ಆಮೇಲೆ ಪತ್ರಕರ್ತರಾಗಿ (ನನ್ನ!) ವೃತ್ತಿಯನ್ನು ಪ್ರವೇಶಿಸಿ, ಇಂಗ್ಲಂಡಿನಲ್ಲಿ ಹೆಚ್ಚಿನ ಪದವಿ ಗಳಿಸಿ, ನೆಹರೂ ಅವರ ಒತ್ತಾಯದ ಮೇಲೆ ರಾಜತಾಂತ್ರಿಕ ವೃತ್ತಿ ಹಿಡಿದು ನಾನಾ ದೇಶಗಳಲ್ಲಿ ಭಾರತದ ರಾಜದೂತರಾಗಿ ಅಪಾರ ಶ್ಲಾಘನೆ ಪಡೆದವರು.

ಬರ್ಮಾದಲ್ಲಿದ್ದಾಗ ಮಾ ಟಿಂಟ್‌ ಟಿಂಟ್‌ ಎಂಬ ಮಹಿಳೆಯ ಆಹ್ವಾನದ ಮೇರೆಗೆ “ರಾಜಕೀಯ ಸ್ವಾತಂತ್ರ್ಯʼ ಎಂಬ ವಿಷಯದ ಮೇಲೆ ಭಾಷಣ ಮಾಡಲು ಹೋಗಿ ಅದೇ ಮಹಿಳೆಯನ್ನು ಆಮೇಲೆ ವಿವಾಹವಾದವರು ಅವರು ( ನಂತರ ಅವರ ಪತ್ನಿ ಭಾರತೀಯ ನಾಗರಿಕತ್ವ ಪಡೆದು ಉಷಾ ಎಂಬ ಹೆಸರನ್ನು ಧಾರಣ ಮಾಡಿದರು).

ಪ್ರಧಾನಿ ಹುದ್ದೆಗೇರಿದ ವಾಜಪೇಯಿಯವರಿಗೆ ಎರಡು ಬಾರಿ ಪ್ರತಿಜ್ಞಾ ವಿಧಿ ಬೋಧಿಸಿದ ಅವರು ಎಂಥ ರಾಜಕೀಯ ಒತ್ತಡದಲ್ಲೂ ಸಂವಿಧಾನಕ್ಕೆ ಹಸ್ತಕ್ಷೇಪ ಮಾಡಲು ಬಿಡಲಿಲ್ಲ. 

ವಾಜಪೇಯಿಯವರಿಗಿಂತ ಮುಂಚೆ ಐ.ಕೆ.ಗುಜ್ರಾಲ್‌ ಸರಕಾರ ಉತ್ತರ ಪ್ರದೇಶದಲ್ಲಿ ಕಲ್ಯಾಣ್‌ ಸಿಂಗ್‌ ಸರಕಾರವನ್ನು ಕಿತ್ತೊಗೆಯಬೇಕೆಂದು ಇವರಿಗೆ ಶಿಫಾರಸು ಮಾಡಿತ್ತು. ಇವರು ಬಗ್ಗಲಿಲ್ಲ. ಅಲ್ಲಿನ ರಾಜ್ಯಪಾಲ ಹುದ್ದೆಯಲ್ಲಿದ್ದ ರಮೇಶ್‌ ಭಂಡಾರಿಯ ʼಕಿವಿ ಹಿಂಡಿʼ ಸರಕಾರವನ್ನು ಉಳಿಸಿದ ಕೀರ್ತಿ ಇವರದ್ದಾಯಿತು. 

ಆಮೇಲೆ ಜಯಲಲಿತಾಳ ಕೈಗೊಂಬೆಯಂತೆ ವರ್ತಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾಗಿದ್ದ ಫಾತಿಮಾ ಬೀಬಿಯ ʼಕಿವಿ ಹಿಂಡಬೇಕುʼ ಎಂದು ವಾಜಪೇಯಿಯವರ ಮೇಲೆ ಒತ್ತಡ ಹೇರಿ ಅವರನ್ನು ವಾಪಸ್‌ ಕರೆಸಿ ರಾಜಭವನಗಳ ಘನತೆಯನ್ನು ಉಳಿಸಿದ ಖ್ಯಾತಿಯೂ ಇವರಿಗೆ ಬಂತು.

ವಾಜಪೇಯಿಯವರ ಎರಡನೆಯ ಅವಧಿಯಲ್ಲಿ ಸಂವಿಧಾನದ ಕೆಲವು ಅಂಶಗಳನ್ನು ಬದಲಿಸಲೆಂದು ಸಮಿತಿಯೊಂದರ ರಚನೆಯಾದಾಗ ʼಅದನ್ನು ಮುಟ್ಟಬೇಡಿʼ ಎಂದು ಪರೋಕ್ಷ ಎಚ್ಚರಿಕೆ ಕೊಟ್ಟವರು ಇವರು.

ಅವರು ರಾಷ್ಟ್ರಪತಿ ಹುದ್ದೆಯಲ್ಲಿದ್ದಷ್ಟು ವರ್ಷ ಯಾವ ಪೂಜಾಮಂದಿರವನ್ನೂ ಪ್ರವೇಶ ಮಾಡಲಿಲ್ಲ; ಯಾವ ಮಠಾಧೀಶ/ಮುಲ್ಲಾ/ಪಾದ್ರಿಗಳ ಭೇಟಿಗೂ ಅವಕಾಶ ಕಲ್ಪಿಸಲಿಲ್ಲ. ಸಂವಿಧಾನದ ರಕ್ಷಕರು ಧರ್ಮನಿರಪೇಕ್ಷ ನೀತಿಯನ್ನು ಮತ್ತು ರಾಜಕೀಯ ನಿರ್ಲಿಪ್ತತೆಯನ್ನು ಹೇಗೆ ಪಾಲಿಸಬೇಕು ಎಂಬುದನ್ನು ತೋರಿಸಿಕೊಟ್ಟ ಏಕೈಕ ರಾಷ್ಟ್ರಪತಿ ಅವರಾಗಿದ್ದರು.‌

~ ನಾಗೇಶ್ ಹೆಗಡೆ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!