ದ ಪಾಲಿಟಿಕ್

ಇಂದು ‘ಅಕ್ಷರ ಸಂತ’ ಬಸವಲಿಂಗ ಪಟ್ಟದೇವರಿಗೆ 72ರ ಸಂಭ್ರಮ..!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ನನ್ನೆದೆಯಲ್ಲಿ ಮೊಟ್ಟಮೊದಲ ಬಾರಿಗೆ ‘ಬಸವ’ ಎಂಬ ಮೂರಕ್ಷರ ಬಿತ್ತಿದ ಬಸವಲಿಂಗ ಪಟ್ಟದೇವರಿಗೆ ಹುಟ್ಟುಹಬ್ಬದ ಮನದಾಳದ ಶುಭಾಶಯಗಳು!

ಈ ಕೆಡುಗಾಲದಲ್ಲಿ ಯಾರ ಹಂಗಿಗೆ ಒಳಗಾಗದೆ, ತಮ್ಮ ಪತ್ರಿಕಾ ಧರ್ಮ ಮರೆಯದೆ ಇದ್ದದ್ದು ಇದ್ದಂತೆ ಬರಯುವ ಪತ್ರಕರ್ತರು/ಬರಹಗಾರರು ಕೂಡಾ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡೇ ನಿರ್ಭೀತಿಯಿಂದ ಅವರ ಸಂಗಡ ನಾಲ್ಕು ಹೆಜ್ಜೆ ಸಾಗಬಹುದಾದ ಸ್ವಾಮೀಜಿಗಳು ಯಾರಾದರೂ ಇದ್ದಾರಾ ಎಂದು  ದುರ್ಬೀನು ಹಾಕಿ ಹುಡುಕಿದರೇ ಬೆರಳೆಣಿಕೆಯಷ್ಟು ಸ್ವಾಮೀಜಿಗಳು ಮಾತ್ರ ನಮಗೆ ಸಿಗುತ್ತಾರೆ. ಅವರಲ್ಲಿ ಡಾ. ಬಸವಲಿಂಗ ಪಟ್ಟದೇವರು ಒಬ್ಬರು. ‘ಸಿದ್ಧಾಂತವನ್ನು ಸಿದ್ಧಾಂತದಿಂದಲೇ ಎದುರಿಸಬೇಕು’. ‘ವಿಚಾರವನ್ನು ವಿಚಾರದಿಂದಲೇ ಹಣಿಯಬೇಕು’ ಎಂಬ ಅನುಭವ ಮಂಟಪದ ಮೂಲಪಾಠವನ್ನು  ಇವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಈ ನೆಲದ ಸಂವಿಧಾನ ನಿಷ್ಠೆಯ ಪ್ರತೀಕವಾಗಿದೆ.

ಪ್ರಾಯಶಃ ಅದು 2018ರಲ್ಲಿ ಇರಬಹುದು. ಅನುಭವ ಮಂಟಪದಿಂದ ನೀಡುವ ‘ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನೆ ಪ್ರಶಸ್ತಿ’ ಯನ್ನು ಕಲಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ(ಸಿಯುಕೆ) ಕುಲಪತಿಗಳಾಗಿದ್ದ ‘ಡಾ. ಎಚ್.ಎಂ. ಮಹೇಶ್ವರಯ್ಯ’ ನವರಿಗೆ ನೀಡುತ್ತಿದ್ದೆವೆಂದು ಅವರ ಪೂರ್ವಾಪರವನ್ನು ವಿಚಾರಿಸದೆ ದಿಢೀರನೆ ಘೋಷಣೆ ಮಾಡಿದ್ದರು. ಇದನ್ನು ಕೇಳಿ ನಾಡಿನ ಬಹುತೇಕ ಬಸವಾನುಯಾಯಿಗಳು ಮತ್ತು ವಿಶೇಷವಾಗಿ ಕಲಬುರ್ಗಿಯವರ ಶಿಷ್ಯಂದಿರು ಬೆಚ್ಚಿಬಿದ್ದರು. 

ನನಗಂತೂ ನಿಂತ ನೆಲವೇ ಕುಸಿದಂತಾಗಿತ್ತು. ಇನ್ನೂ ಕಲಬುರ್ಗಿಯವರ ಎದೆಯಿಂದ ಚಿಮ್ಮಿದ ರಕ್ತ ಹೆಪ್ಪುಗಟ್ಟಿಲ್ಲ, ಅದರ ನೋವಿನಿಂದ ನಾಡಿಗರು ಹೊರಗೆ ಬಂದಿರಲಿಲ್ಲ. ತನ್ನ ಜೀವನದುದ್ದಕ್ಕೂ ತನ್ನ ಉಪಜಾತಿ ನಿಷ್ಠೆಗೆ ಕಟ್ಟುಬಿದ್ದು ಕಲಬುರ್ಗಿಯರಿಗೆ ಮಾನಸಿಕ ಹಿಂಸೆ ನೀಡಿ, ಬೇತಾಳದಂತೆ ಕಾಡಿದ ವ್ಯಕ್ತಿಗೆ  ಅವರ ಹೆಸರಿನ ಪ್ರಶಸ್ತಿ ನೀಡುತ್ತಿರುವುದನ್ನು ಪ್ರತಿರೋಧಿಸಿ ‘ಅಂದು ಕಲಬುರ್ಗಿಯವರನ್ನ ಕಾಡಿದ ಎಚ್.ಎಮ್. ಮಹೇಶ್ವರಯ್ಯನಿಗೆ ಕಲಬುರ್ಗಿ ಹೆಸರಿನ ಪ್ರಶಸ್ತಿ’ ಎಂಬ ಶೀರ್ಷಿಕೆ ನೀಡಿ ಖಾರವಾಗಿಯೇ ನ್ಯಾಯಪಥ(ಗೌರಿ ಲಂಕೇಶ್) ಪತ್ರಿಕೆಗೆ ಒಂದು ಲೇಖನ ಬರೆದಿದ್ದೆ. ಬರೆದ ಕೆಲವು ದಿನದಲ್ಲೇ ಸ್ವಾಮೀಜಿಯವರು ಮುಖತಃ ಆಗಿ ಭೇಟಿ ಆದಾಗ ನನ್ನ ಬರೆಹದ ಬಗ್ಗೆ ಸಣ್ಣ ಅಸಮಾಧಾನವೂ  ವ್ಯಕ್ತಪಡಿಸದೆ, ಅದೇ ಮೊದಲಿನ ಪ್ರೀತಿಯಿಂದ ನನ್ನನ್ನು ಮಾತನಾಡಿಸಿದ್ದು ಕಂಡು ನಾನೇ ಅವಾಕ್ಕಾದೆ. ಆವೊತ್ತು ಇವರ ಬಗ್ಗೆ ನನಗಿದ್ದ ಗೌರವ ಇಮ್ಮಡಿ -ಮುಮ್ಮಡಿ ಆಗಿದ್ದು.

ಜನರ ಅಸಮಾಧಾನ, ಪ್ರತಿರೋಧ ಅರಿತು ಹಿಂದೆಮುಂದೆ ಯೋಚಿಸದೆ ಮಹೇಶ್ವರಯ್ಯನಿಗೆ ಪ್ರಶಸ್ತಿ ನೀಡುವ ನಿಲುವಿನಿಂದ ಹಿಂದೆ ಸರಿದು, ಅದನ್ನು ನಿವೃತ್ತ ಐಎಎಸ್ ಅಧಿಕಾರಿ, ಲಿಂಗಾಯತ ಹೋರಾಟಗಾರರ ಶಿವಾನಂದ ಜಾಮದಾರ್ ಅವರಿಗೆ ನೀಡುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದು ಐತಿಹಾಸಿಕ ನಡೆಯಾಗಿದೆ. ಇಂತಹ ಗುಣ ಬೇರೆ ಸ್ವಾಮೀಜಿಗಳಲ್ಲಿ ಕಾಣಲು ಸಾಧ್ಯವೇ? ಕೆಲ ಸ್ವಾಮೀಜಿಗಳು ತನ್ನ ವಿರುದ್ಧ ಯಾರೇನು ಬರೆಯಬಾರದೆಂದು ನ್ಯಾಯಾಲಯದ ಮೊರೆ ಹೋಗಿರುವ ಅನೇಕ ಉದಾಹರಣೆಗೆ ನಮಗಿಂದು ಸಿಗುತ್ತವೆ. 

ಇದನ್ನೂ ಓದಿ : ಮಹಾಬೆಳಗನ್ನು ಪಸರಿಸುತ್ತಿರುವ ಡಾ.ಬಸವಲಿಂಗ ಪಟ್ಟದ್ದೇವರಿಗೆ ೭೫ ರ ಹರೆಯ!

 ಇಂದು ನಮ್ಮ ಸುತ್ತಲೇ ಒಂದೇ ಧಾರ್ಮಿಕ ಸಂಸ್ಥೆಯಲ್ಲಿ ಹಾಗೂ ಒಂದೇ ತಟ್ಟೆಯಲ್ಲಿ ತಿಂದುಂಡು ಬೆಳೆದ ಕೆಲವು ಧಾರ್ಮಿಕ ವ್ಯಕ್ತಿಗಳು ಜುಜುಬಿ ಆಸ್ತಿ, ಸಂಪತ್ತು ಮತ್ತು ಐಡೆಂಟಿಟಿಗಾಗಿ ಜನರ ನಂಬಿಕೆ ಹುಸಿಗೊಳಿಸಿ ‘ತೂತು ಮೈಮೈ’ ಎಂದು ಕಿತ್ತಾಡುತ್ತಿದ್ದಾರೆ. ಡಾ. ಚನ್ನಬಸವ ಪಟ್ಟದೇವರು ತನ್ನ ಬೆವರು-ರಕ್ತ ಸುರಿಸಿ ಕಟ್ಟಿದ ಕೊಟ್ಯಾಂತರ ರೂಪಾಯಿ ಮೌಲ್ಯದ ಶಿಕ್ಷಣ ಸಂಸ್ಥೆಗಳು ಅವರ (ಚೆನ್ನಬಸವ ಪಟ್ಟದೇವರ) ಬೊಳೆತನ – ಅತಿನಂಬಿಕೆಯಿಂದಾಗಿ ಇವರ ಕೈಗೆ ಬರಲೇ ಇಲ್ಲ. ಇವರು ಜಗಳಕ್ಕಿಳಿಯದೆ, ಅದರ ಉಸಾಬರಿಗೆ ಹೋಗದೆ  ಛಲದಿಂದ ಮತ್ತೆ ಹೊಸ ಶಿಕ್ಷಣ ಸಂಸ್ಥೆ ಕಟ್ಟಿ, ಅದರಡಿಯಲ್ಲಿ ಹತ್ತಾರು ಶಾಲೆ-ಕಾಲೇಜು ಸ್ಥಾಪಿಸಿದ್ದಾರೆ. ಇಂದು ಇವರ ಶೈಕ್ಷಣಿಕ ಸಂಸ್ಥೆಗಳ ಕಡೆಗೆ  ಇಡೀ ನಾಡೇ ತಿರುಗಿ ನೋಡುವಂತೆ  ಅವುಗಳನ್ನು ಬಾನೆತ್ತರಕ್ಕೆ ಬೆಳೆಸಿರುವುದು ಅಸಾಮಾನ್ಯ ಸಂಗತಿಯಾಗಿದೆ. ಇದು ಇಂದು ಆಸ್ತಿಗಾಗಿ ಕಿತ್ತಾಡುತ್ತಿರುವರು ಬಸವಲಿಂಗ ಪಟ್ಟದೇವರ ಜೀವನದಿಂದ ಕಲೆಯಬೇಕಾಗಿರುವ ಬಹುದೊಡ್ಡ  ನೀತಿ ಪಾಠ!

ಇವರ ಬಸವ ಪ್ರೀತಿ, ಲಿಂಗಾಯತ  ತತ್ವ ನಿಷ್ಠೆ ಮತ್ತು ಲಿಂಗಾಯತ ಅಲ್ಪಸಂಖ್ಯಾತ ಮಾನ್ಯತೆಯ ಹೋರಾಟದ ಬದ್ಧತೆ ಇವರ  ತಾತ್ವಿಕ ವಿರೋಧಿಗಳು ಸಹ ಅಲ್ಲಗಳೆಯುದಿಲ್ಲ. ತನ್ನ ಆರೋಗ್ಯವನ್ನು ಲೆಕ್ಕಿಸದೇ ಈ ಇಳಿವಯಸ್ಸಿನಲ್ಲೂ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕರ್ನಾಟಕ ಒಳಗೊಂಡಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಾದಂತ್ಯ ಬಸವ ತತ್ವ ಪಸರಿಸುತ್ತಿದ್ದಾರೆ. ಹತ್ತಾರು ಉತ್ಕೃಷ್ಟ ಪುಸ್ತಕಗಳನ್ನು ಬರೆದು, ಬರೆಯಿಸಿ ಮತ್ತು ಅನುವಾದಿಸಿ ಅವುಗಳನ್ನು ತಮ್ಮ ಮಠದಿಂದ ಪ್ರಕಟಿಸಿ ಕಡಿಮೆ ದರದಲ್ಲಿ ಎಲ್ಲರಿಗೂ ತಲುಪಿಸುತ್ತಿದ್ದಾರೆ. ಇಂದಿಗೂ ‘ಪ್ರವಚನ ಮತ್ತು ಲಿಂಗದೀಕ್ಷೆ’ ಇವರ ಮೊದಲಾದ್ಯತೆಯ ಕಾರ್ಯವಾಗಿವೆ.  ಅನುದಿನವೂ ಅಂದಿನಿಂದ – ಇಂದಿನವರೆಗೂ ಒಂದಲ್ಲಾ ಒಂದು ಕಡೆ ಪ್ರವಚನ, ದೀಕ್ಷೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿವೆ. 

ಇಂದು ಬಹುತೇಕ ಸ್ವಾಮೀಜಿಗಳು ಲಿಂಗಾಯತ ಹೋರಾಟದ ವಿಷಯದಲ್ಲಿ ಮಳೆ ಬಂದಾಗ ಕೊಡೆ ಹಿಡಿಯುವ ಕೆಟ್ಟ ಚಾಳಿಯನ್ನ ಕಲಿತ ಪರಿಣಾಮವಾಗಿ ಇಂದು ಚಳವಳಿಗೆ ದೊಡ್ಡ ಹಿನ್ನಡೆಯಾಗಲೂ ಒಂದು ಕಾರಣವಾಗಿದೆ. ಆದರೆ ಬಸವಲಿಂಗ ಪಟ್ಟದೇವರು ಇದಕ್ಕೆ ತದ್ವಿರುದ್ಧವಾಗಿ ಇವೊತ್ತಿಗೂ ಹೋರಾಟದ ವಿಷಯದಲ್ಲಿ ಮುಂದಿಟ್ಟ ಹೆಜ್ಜೆ ಹಿಂದೆ ಸರೆಸಿಲ್ಲ. ದಣಿಯದೆ ಅದೇ ಉತ್ಸಾಹ, ಅದೇ ಬದ್ಧತೆ, ಅದೇ ನಿಷ್ಠೆಯಿಂದ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಪಡೆಯಲು ಶ್ರಮಿಸುತ್ತಿದ್ದಾರೆ.  ಲಿಂಗಾಯತ ಧರ್ಮದ  ವಿಷಯ ಬಂದಾಗ ಯಾವ ಮುಲಾಜಿಲ್ಲದೆ ಹೇಳಿಕೆ ನೀಡುತ್ತಾ ಹೋರಾಟದ ಕಾವು ಆರದಂತೆ ನೋಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಬರುವ ಫೆಬ್ರುವರಿ – ಮಾರ್ಚ್ ತಿಂಗಳಲ್ಲಿ ‘ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಥಮ ಅಧಿವೇಶನ’ವನ್ನು ಬಸವಕಲ್ಯಾಣದಲ್ಲಿ ನಡೆಸಲು ಮುಂದಡಿ ಇಟ್ಟಿದ್ದಾರೆ. ಜತೆಗೆ  ‘ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಅಧ್ಯಕ್ಷ’ರಾಗಿ ಬಸವಣ್ಣನವರನ್ನ ಗುರುವೆಂದು ನಂಬುವ ಎಲ್ಲಾ ಮಠಾಧೀಶರನ್ನು ಒಂದೆಡೆ ತರಲು ಗದಗ ಶ್ರೀಗಳ ಜತೆಗೆ ಸೇರಿ ಶ್ರಮಿಸುತ್ತಿದ್ದಾರೆ. 

ಇವರು ಜಾತಿಯ ಬಲದಿಂದ ಮಠದ ಪೀಠಾಧಿಪತಿ ಆದವರಲ್ಲ; ತತ್ವದ ಬಲದಿಂದ ಸ್ವಾಮೀಜಿಗಳಾದವರು. ಇಂದು ನಾಡಿನ ಬಹುತೇಕ ಮಠಾಧೀಶರು ತಮ್ಮ ಜಾತಿ, ಉಪಜಾತಿಗಳ ಮೋಹದಿಂದ ಇನ್ನೂ ಹೊರಗೆ ಬಂದಿಲ್ಲ. ಆ ಮಠಗಳಿಗೆ ಕಾಲಿಟ್ಟ ತಕ್ಷಣ ಜಾತಿ, ಉಪಜಾತಿಯ ಮೋಹಪಾಶ ಎಂಬ ಗಬ್ಬುನಾತ ನಮ್ಮ ಮೂಗಿಗೆ ಬಡೆಯುತ್ತದೆ. ವಾಸ್ತವವಾಗಿ ಇವು ಮಠಗಳಲ್ಲ, ಜಾತಿ-ಉಪಜಾತಿಗಳನ್ನ   ಪೋಷಿಸುವ ನರ್ಸರಿ ಸ್ಕೂಲ್ ಗಳಾಗಿವೆ. ಇಂತಹ ಮಠದ ಸ್ವಾಮಿಜಿಗಳು ಲಿಂಗಾಯತ ಸ್ವಾಮೀಜಿಗಳಲ್ಲ. ಅವರು ಜಾತಿ ಮತ್ತು ಉಪಜಾತಿ ಶ್ರೀಗಳು.   ಆದರೆ, ಭಾಲ್ಕಿಯ ಇಡೀ ಮಠಕ್ಕೆ ಭೂತಗನ್ನಡಿ ಹಾಕಿ ಹುಡುಕಿದರೂ ಜಾತಿ, ಉಪಜಾತಿಯ ಮೋಹದ ಸಣ್ಣ ಛಾಯೆಯೂ ಸಿಗುವುದಿಲ್ಲ. ಇದು ಈ ಮಠದ ಹೆಗ್ಗಳಿಕೆ ಮತ್ತು ವಿಶೇಷತೆ. ಇದರಿಂದಾಗಿಯೇ ಈ ಮಠಕ್ಕೆ ಸಮಾಜದಲ್ಲಿ ಒಂದು ನೆಲೆ, ಬೆಲೆ ಮತ್ತು ಗೌರವವಿದೆ. ಜತೆಗೆ ಮಠದ ಬಗ್ಗೆ ಬಸವಾನುಯಾಯಿಗಳಲ್ಲಿ ಒಂದು  ನಂಬಿಕೆ ಬೆಳೆದಿದೆ. 

ಇಂದು ಕ್ರಾಂತಿ ಭೂಮಿ ಬಸವಕಲ್ಯಾಣದಲ್ಲಿ ಭವ್ಯವಾದ ನೂತನ ಅನುಭವ ಮಂಟಪದ ಕಟ್ಟಣ ಆರಂಭವಾಗಿದೆ. ಈ ಐತಿಹಾಸಿಕ ಕಟ್ಟಡಕ್ಕಾಗಿ ಬಸವಲಿಂಗ ಪಟ್ಟದೇವರು ಹಾಕಿದ ಶ್ರಮ ಹೇಳತಿರದು. ಇದಕ್ಕಾಗಿ ಬೆಂಗಳೂರಿಗೆ ಅಡ್ಡಾಡಿದ್ದು ಲೆಕ್ಕವೇ ಇಲ್ಲ. ಜತೆಗೆ ತನ್ನ ಅಧೀನದಲ್ಲಿರುವ ನಾಲ್ಕಾರು ಕೋಟಿ ಬೆಲೆಬಾಳುವ ಎಂಟು ಎಕರೆ ಜಮೀನನ್ನು ಯಾವ ಷರತ್ತಿಲ್ಲದೆ ಅನುಭವ ಮಂಟಪ ಕಟ್ಟಲು ಸರ್ಕಾರಕ್ಕೆ ಪುಕ್ಕಟೆಯಾಗಿ ನೀಡಿದ್ದಾರೆ. ಇದು ಅವರ ಬಸವನಿಷ್ಠೆಯ ದ್ಯೋತಕವಾಗಿದೆ. ‘ಪೀರ್ ಪಾಷಾ ಬಂಗಲೆ’ಯೇ ಮೂಲ ಅನುಭವ ಮಂಟಪವಾಗಿದೆ. ಅಲ್ಲಿಯೇ ನೂತನ ಅನುಭವ ಮಂಟಪ ಕಟ್ಟಬೇಕೆಂದು ಕೆಲವರು ಕೋಮುವಾದದ ನಂಜು ನೆತ್ತಿಗೇರಿಸಿಕೊಂಡು ಆಧಾರರಹಿತವಾಗಿ ಗುಲ್ಲೆಬ್ಬಿಸಿದಾಗ ಅದನ್ನು ನಯವಾಗಿ, ಯಾವ ಮುಲಾಜಿಲ್ಲದೆ ಅಲ್ಲಗಳೆಯುವ ಮೂಲಕ ವಿವಾದಕ್ಕೆ ತಣ್ಣೀರು ಎರಚಿದ್ದು ಶ್ಲಾಘನೀಯವಾಗಿದೆ.

ತಮ್ಮ ಜೀವನದುದ್ದಕ್ಕೂ ಸಾವಿರಾರು ಬಡಬಗ್ಗರ ಮಕ್ಕಳನ್ನ ತಮ್ಮ ಮಠದಲ್ಲಿ ಉಚಿತವಾಗಿ ಅನ್ನ, ಅರಿವೆ ಮತ್ತು ವಸತಿ ನೀಡಿ, ಅವರ ಶಿಕ್ಷಣಕ್ಕೆ ಒತ್ತಾಸೆಯಾಗಿ ನಿಂತಿದ್ದ ಪರಿಣಾಮವಾಗಿ ಇಂದು ಸಾವಿರಾರು ಬಡಮಕ್ಕಳು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಗಡಿಭಾಗದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ತೆಗೆದು ಬಡ, ಮಧ್ಯಮ  ವರ್ಗದ ಮಕ್ಕಳಿಗೆ  ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅನೇಕರ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗಿದ್ದಾರೆ. ತನ್ನ ಮೈಕೈ, ಮನಸು ಗಟ್ಟಿಯಾಗಿರುವಾಗಲೇ  ಸೂಕ್ತ ವ್ಯಕ್ತಿಯನ್ನ ತನ್ನ ಉತ್ತರಾಧಿಕಾರಿಯಾಗಿ ಮಾಡಿದ್ದು ಬಸವ ಮೆಚ್ಚುವ ಕಾರ್ಯವಾಗಿದೆ. 

ಬಸವಲಿಂಗ ಪಟ್ಟದೇವರು ಉತ್ತಮ ಓದುಗರೂ, ಜನಭಾಷೆಯಲ್ಲಿ ಬರೆಯುವ ಉತ್ತಮ ಬರೆಹಗಾರರು ಹೌದು. ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲವುಗಳ ಜತೆಗೆ ತಮ್ಮ ಮಠದಲ್ಲಿ ಒಂದು ‘ಥಿಂಕ್ ಟ್ಯಾಂಕ್’ ಇಲ್ಲದ ಪರಿಣಾಮವಾಗಿ ಆಗಾಗ್ಗೆ ಕೆಲವು ನಿರ್ಣಯಗಳು ತೆಗೆದುಕೊಳ್ಳುವಲ್ಲಿ ಎಡವಿದ್ದು ಸುಳ್ಳಲ್ಲ. ಅದು, ಸರ್ಕಾರ ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಮೊಟ್ಟೆ ನೀಡಲು ಯೋಜನೆ ರೂಪಿಸಿದ್ದಾಗ, ಆ ಯೋಜನೆಯ ವಿರುದ್ಧ  ದನಿ ಎತ್ತುವುದರ ಮೂಲಕ ಶಿಕ್ಷಣ ತಜ್ಞರ, ಪ್ರಗತಿಪರರ ಮತ್ತು ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದು ಇರಬಹುದು, ಎಚ್ ಎಮ್ ಮಹೇಶ್ವನಂತಹ ವ್ಯಕ್ತಿಗೆ ಪ್ರಶಸ್ತಿ ಘೋಷಣೆ ಮಾಡಿರುವ ಘಟನೆಗಳು ಇರಬಹುದು. ಒಂದು ಥಿಂಕ್ ಟ್ಯಾಂಕ್ ಇದ್ದಿದ್ದರೆ ಖಂಡಿತಾ ಇಂತಹ ತಪ್ಪುಗಳು ಘಟಿಸುತ್ತಿರಲಿಲ್ಲ. ಇವುಗಳ ಜತೆಗೆ   ಕೆಲವು ಧನಾಡ್ಯ ಅಪಾತ್ರರನ್ನು  ವೇದಿಕೆಯಲ್ಲಿ ತಮ್ಮ ಅಕ್ಕಪಕ್ಕ ಕೂಡಿಸಿಕೊಂಡು ಅವರಲ್ಲಿ ಇಲ್ಲದ ಗುಣವಿಶೇಷಣದಿಂದ ಅವರನ್ನು ಹೋಗಳುವುದು  ಮತ್ತು ಲಿಂಗಾಯತ ತತ್ವವನ್ನು ನಿರ್ನಾಮ ಮಾಡಲು ಹಾಗೂ ದೇಶಭಕ್ತಿ, ರಾಷ್ಟ್ರೀಯತೆಯ ಮುಖವಾಡ ಧರಸಿ ಈ ನೆಲವನ್ನು ಹಿಂದೂ ರಾಷ್ಟ್ರವನ್ನಾಗಿಸಲು  ಅರ್ಥಾತ್ ಬ್ರಾಹ್ಮಣರ ಅಧಿಪತ್ಯವನ್ನು ಮರುಸ್ಥಾಪಿಸಲು ಶ್ರಮಿಸುತ್ತಿರುವ ಶಕ್ತಿಗಳ ಕಾಲಾಳುಗಳನ್ನು ತನ್ನ ಮಠದ ಅಂಗಳದಲ್ಲಿ ಆಗಾಗ್ಗೆ ಬಿಟ್ಟುಕೊಳ್ಳುತ್ತಿರುವುದು ಖಂಡಿತಾ ಶ್ರೀಗಳು ಮಾಡೀತ್ತಿರುವ ತಫ್ಪುಗಳಾಗಿವೆ. ಮುಂದೆಯಾದರೂ ಈ  ತಪ್ಪುಗಳು ಮರುಕಳಿಸದಿರಲಿ!

ಕೊನೆಗೆ ಒಂದು ಮಾತು : ಶ್ರೀಗಳು  ಬಸವಕಲ್ಯಾಣದಲ್ಲಿ ‘ವಚನ ವಿಶ್ವವಿದ್ಯಾಲಯ’ ಹಾಗೂ ಶಿವಯೋಗ ಮಂದಿರಕ್ಕೆ ಪರ್ಯಾಯವಾಗಿ ‘ಬಸವಯೋಗ ಮಂದಿರ’ ಸ್ಥಾಪಿಸುವ ಕನಸು ಕಟ್ಟಿದ್ದಾರೆ. ಇಂತಹ ಕನಸು ಪ್ರಸಕ್ತ ಬಸವಲಿಂಗ ಪಟ್ಟದೇವರು ಮಾತ್ರ ಕಾಣಲು ಸಾಧ್ಯ. ಅವರು ಕಂಡ ಕನಸುಗಳೆಲ್ಲವೂ ನನಸಾಗಲೆಂದು  ಪ್ರಾರ್ಥಿಸೋಣ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!