ಸಾರೆಕೊಪ್ಪ ಬಂಗಾರಪ್ಪ ಅವರ ಪಾಲಿಗೆ 2009 ರ ಲೋಕಸಭಾ ಚುನಾವಣೆ ತಮ್ಮ ರಾಜಕೀಯ ಜೀವನದ ಕೊನೆಯ ಹೋರಾಟವಾಗಿತ್ತು. ಪಕ್ಷದಿಂದ ಪಕ್ಷ ಬದಲಿಸುತ್ತಾ, ಪಕ್ಷಗಳನ್ನುಕಟ್ಟುತ್ತಾ,ಕೆಡವುತ್ತಾ ಆಯಸ್ಸು ಪೂರ್ತಿ ಚುನಾವಣೆಗಳನ್ನೆ ಯುದ್ಧೋಪಾದಿಯಲ್ಲಿ ಮೈಮೇಲೆಳೆದುಕೊಂಡು, ವಯೋಸಹಜ ಅನಾರೋಗ್ಯದಿಂದ ಹೈರಾಣಾಗಿದ್ದ ಬಂಗಾರಪ್ಪ ಅವರು ಯಾವತ್ತೂ ತಾನು ಇಳಿವಯಸ್ಸಿನಲ್ಲೂ ಬಸವಳಿದಿದ್ದೇನೆ ಎಂದು ಕಿಂಚಿತ್ತೂ ತೋರಿಸಿಕೊಂಡವರಲ್ಲ. ವೇದಿಕೆ ಮೇಲೆ ಕಣ್ಣೀರಿಡುವುದಿರಲಿ, ಕನಿಷ್ಟ ಭಾವುಕತೆಯನ್ನು ತೋರುಗೊಡದ ಸ್ವಾಭಿಮಾನಿ.
ಹಾಗಂತ ಅವರೊಳಗೆ ಏನೆಲ್ಲಾ ನೋವು ಇರಲಿಲ್ಲವೆಂದಲ್ಲ. ತಾನೆ ಬೆಳೆಸಿದವರ ದ್ರೋಹ, ಉಪಕಾರ ಪಡೆದವರ ಕೃತಘ್ನಗೇಡಿತನ, ಕೌಟುಂಬಿಕ ಕಲಹ , ಹಣಕಾಸಿನ ಮುಗ್ಗಟ್ಟು….ಅವರನ್ನು ಬಾಧಿಸುತ್ತಿದ್ದರೂ ಯಾರೊಂದಿಗೂ ಒಂದು ಮಾತುಹಂಚಿಕೊಳ್ಳದೆ ಒಳಗೊಳಗೆ ಇಟ್ಟಿಗೆ ಗುಮ್ಮಿಯಂತೆ ಬೇಯುತ್ತಿದ್ದರು. ಕಟ್ಟಕಡೆಯ ಚುನಾವಣೆಯಲ್ಲಿ ಅಧಿಕಾರ ರೂಢ ಯಡಿಯೂರಪ್ಪ ಅವರ ಕೈಲಿದ್ದ ಅಧಿಕಾರ ಬಲ,ಹಣ ಬಲದ ಎದುರು ಬಂಗಾರಪ್ಪ ನಂಬಿದ್ದು ಕೇವಲ ಜನಬಲ ಮಾತ್ರ.
ಶಿವಮೊಗ್ಗದ ಬಾಡಿಗೆ ಮನೆಯೊಂದರಲ್ಲಿದ್ದ ಬಂಗಾರಪ್ಪ ಅವರ ಕರೆದಿದ್ದ ಪತ್ರಿಕಾಗೋಷ್ಟಿಗೆ ಹೊರಟಿದ್ದ ನನಗೆ ಬಂಗಾರಪ್ಪ ಅವರಿದ್ದ ಮನೆಯ ಕೂಗಳತೆಯಲ್ಲಿದ್ದ ಸರ್ಕೀಟ್ ಹೌಸ್ ನ ಗೇಟಿನ ಮುಂದೆ ಸುಮಾರು ಅರವತ್ತರ ಅಸುಪಾಸಿನ ವಯಸ್ಸಿನ ವ್ಯಕ್ತಿಗಳಿಬ್ಬರು ಬಂಗಾರಪ್ಪ ಅವರ ಮನೆಯ ದಾರಿ ಕೇಳುತ್ತಾ ನಿಂತಿರುವುದು ಕಾಣಿಸಿತು. ಬಿಳಿ ಬಣ್ಣದ ಧೋತಿ .ಜುಬ್ಬಾ,ತಲೆಯ ಮೇಲೆ ದಪ್ಪನೆಯ ಮುಂಡಾಸು ಸುತ್ತಿಕೊಂಡಿದ್ದ ಈ ಇಬ್ಬರಲ್ಲಿ ಒಬ್ಬರ ಕೈಲಿ ತುಂಬಿದ ಬಟ್ಟೆ ಚೀಲವೊಂದು ಇತ್ತು. ಕೆಮ್ಮಣ್ಣು ಧೂಳಿ ನ ಲ್ಲಿ ಒದ್ದಾಡಿ ಎದ್ದು ಬಂದವರಂತೆ ಕಾಣುತ್ತಿದ್ದ ಈ ಇಬ್ಬರನ್ನೂ ಉತ್ತರ ಕರ್ನಾಟಕದವರು ಎಂಬುದು ಕರಾರುವಕ್ಕಾಗಿ ಯಾರಾದರೂ ಗುರುತಿಸಿಯೇ ಗುರುತಿಸಿ ಬಿಡುವಂತಿದ್ದರು.
ನಾನೆ ಕೈ ತೋರಿಸಿ ಅಲ್ಲಿದೆ ಮನೆ ಎಂದೆ. ನನ್ನೊಂದಿಗೆ ಆ ಇಬ್ಬರೂ ಬಂಗಾರಪ್ಪ ಅವರ ಮನೆಗೆ ಬಂದು ಮಂಬಾಗಿಲ ಗೇಟ್ ಬಳಿ ಅಪರಿಚಿತರಾಗಿ ನಿಂತಿದ್ದರು. ಚುನಾವಣೆ ಸಮಯ ಕಾಸು ಕೇಳುವ ಗಿರಾಕಿಗಳೆ ಜಾಸ್ತಿ. ಅಂತವರಲ್ಲಿ ಈ ಇಬ್ಬರೂ ಇರಬಹುದೇನೋ ಅಂದು ಕೊಂಡೆ ನಾನೂ ತಾತ್ಸಾರ ಮಾಡಿದೆ. ಅಲ್ಲಿದ್ದ ನಾಯಕರುಗಳು ಕೂಡ ಈ ಮಾಸಲು ಬಟ್ಟೆಯವರನ್ನು ಗಂಭೀರವಾಗಿ ಗಮನಿಸಲಿಲ್ಲ.
ಪತ್ರಿಕಾ ಗೋಷ್ಟಿ ಮುಗಿದು ಬಹುತೇಕ ಪತ್ರಕರ್ತರು ಜಾಗ ಖಾಲಿ ಮಾಡಿದ್ದರು. ನಾನು ಹೊರಡು ಕ್ಷಣ . ಹೊರಗಿದ್ದ ಆ ಇಬ್ಬರು ಒಳಗೆ ಬಂದು ಸೋಫಾ ಮೇಲೆ ಕುಂತಿದ್ದ ಬಂಗಾರಪ್ಪ ಅವರಿಗೆ ಅಡ್ಡಬಿದ್ದು ನಮಸ್ಕರಿಸಿದರು. ‘ಸರಾ, ನಾವ್ ಕುರಿಗಾಯಿಗಳು, ಬೀದರ್ ನಿಂದ ಬಂದೀವಿ ನಿಮ್ಮ ನ್ನ ನೋಡಾಕ ‘ ಅಂದ್ರು.
‘ಓ..ಅಲ್ಲಿಂದ ಬಂದ್ರಾ….’ ಎಂದ ಬಂಗಾರಪ್ಪನವರು ಎಕ್ಸ್ಟ್ರಾ ಎನರ್ಜಿ ಬಂದವರಂತೆ ತನ್ನ ಅಭಿಮಾನಿಗಳು ಬಂದ ಹೆಮ್ಮೆ ಯಿಂದ ಸುತ್ತ ನೆರೆದಿದ್ದವರತ್ತ ಎಂದಿನಂತೆ ಪೋಸ್ ಕೊಟ್ಟರು.
ಅಷ್ಟರೊಳಗೆ ಆ ಇಬ್ಬರು ತಮ್ಮ ಕೈಲಿದ್ದ ಧೂಳು ಹಿಡಿದ ಬಟ್ಟೆ ಚೀಲದಿಂದ ನೂರು ರೂಪಾಯಿಗಳ ಮುಖಬೆಲೆಯ ಎರಡ್ಮೂರು ಕಟ್ಟುಗಳನ್ನು ತೆಗೆದು ಬಂಗಾರಪ್ಪ ಅವರ ಮುಂದಿದ್ದ ಟೀ ಪಾಯಿ ಮೇಲಿಟ್ಟು, ‘ಸಾಹೇಬ್ರಾ ನಮ್ ಸಕ್ತಿ ಇಷ್ಟೆಯಾ, ಇಟ್ಕೊಳಿ. ನೀವು ಗೆದ್ದು ಬರ್ಬೇಕು ಅಷ್ಟೆರಾ’ ಎಂದು ನಡುಬಗ್ಗಿಸಿ ಕೈಮುಗಿದರು.
ಕ್ಷಣ ಕಾಲ ಮೌನಕ್ಕೆ ಜಾರಿದ ಬಂಗಾರಪ್ಪನವರು,’ಹೆಂಗ್ ಬಂದ್ರಿ’ ವಿಚಾರಿಸಿದ್ರು.
ಬಸ್ನಾಗ್ ಬಂದ್ವಿ ಸರ ….
ಒಂದು ನಗು ನಕ್ಕ ಬಂಗಾರಪ್ಪನವರು ‘ಹೇ ಹುಚ್ಚಪ್ಪಗಳ್ರಾ ಅಷ್ಟು ದೂರ್ದಿಂದ ಬರ್ಬೇಕೇನು…, ? ನಿಮ್ ಪ್ರೀತಿ ಇರ್ವಾಗ ಈ ಬಂಗಾರಪ್ಪ ನಾ ಸೋಲೋ ಮಗನೆ ಅಲ್ಲ.’ ಎಂದು ಇನ್ನಷ್ಟು ಯುದ್ದೋತ್ಸಾಹ ತುಂಬಿದ ಯೋಧನಂತೆ ಎದೆಯುಬ್ಬಿಸಿದರು. ಅವರ್ಯಾರು ಬಂಗಾರಪ್ಪ ಅವರಿಗೆ ನೇರ ಪರಿಚಯವಿರಲಿಲ್ಲ . ಆದರೆ ಬಂಗಾರಪ್ಪ ಮಾತ್ರ ಕೋಟ್ಯಾಂತರ ಜನರಿಗೆ ಬಂಧುವಾಗಿ, ಭಗವಂತನ ರೂಪಾಗಿ ಪ್ರಭಾವಿಸಿದ್ದರಲ್ಲ ಅದೇ ಅವರ ನಾಯಕತ್ವದ ಧ್ಯೋತಕ ಎಂಬುದು ಕಾಣುತ್ತಿತ್ತು. ಒಬ್ಬ ಜನನಾಯಕ ಬಡವರ, ಸಾಮಾನ್ಯ ಜನರ ಹೃದಯದಲ್ಲಿ ಶಾಶ್ವತವಾಗಿ ಬದುಕುವುದು ಎಂದರೆ ಹೀಗೆಯೆ…
ಬಂಗಾರಪ್ಪ ಅವರ ನಾಮಬಲದಿಂದಲೆ ಅಧಿಕಾರ ,ಹಣ ಆಸ್ತಿ ಮಾಡಿಕೊಂಡ ಸೋ ಕಾಲ್ಡ್ ರಾಜಕಾರಣಿಗಳು ಈ ಚುನಾವಣೆಯಲ್ಲಿ ಬಂಗಾರಪ್ಪ ಅವರ ಬೆನ್ನಿಗೆ ಬರ್ಬರವಾಗಿ ಇರಿದರು. ಕೆಲವರು ಮಾರಿಕೊಂಡರು ಹೀಗೆ ಮಾರಿಕೊಂಡವರಲ್ಲಿ ಬಂಗಾರಪ್ಪ ಅವರಿಂದ ಯಥೇಚ್ಛವಾಗಿ ಉಪಕಾರ ಪಡೆದು ಬದುಕಿದ ಶಿವಮೊಗ್ಗದ ನಿಸ್ಸೀಮ ಪತ್ರಕರ್ತರೂ(?) ಇದ್ದರು ಅನ್ನೋದು ಕೂಡ ದೌಭಾರ್ಗ್ಯ.
ಚುನಾವಣೆಯಲ್ಲಿ ಬಂಗಾರಪ್ಪ ನಂಬರ್ ಗೇಮ್ ನಲ್ಲಿ ಸೋತಿದ್ದರು, ನೈತಿಕವಾಗಿ, ಜನರ ಮನದಲ್ಲಿ ಗೆದ್ದಿದ್ದರು. ಬಂಗಾರಪ್ಪ ಅವರಿಲ್ಲದೆ ದಶಕವೆ ಕಳೆದು ಹೋದವು. ಬಂಗಾರಪ್ಪ ಎಂಬ ಅಪ್ಪಟ ಜನನಾಯಕ ನನ್ನ ನೆನಪಿನ ಡೈರಿಯಲ್ಲಿ ಬದುಕಿದ್ದಾರೆ . ಅದೆಷ್ಟೋ ಬಡವರಲ್ಲೂ ಕೂಡ.
- ಎನ್. ರವಿಕುಮಾರ್