SUBSCRIBE

ದ ಪಾಲಿಟಿಕ್

ಗ್ಯಾನೇಶ್‌ ಕುಮಾರ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ?

ಗ್ಯಾನೇಶ್‌ ಕುಮಾರ್

ಎಸ್‌ಐಆರ್‌ದಿಂದಾಗಿ ವಿವಾದದ ಕೇಂದ್ರ ಬಿಂದುವಾಗಿರುವ ಚುನಾವಣಾ ಆಯೋಗ ಹಾಗೂ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ʻನಮ್ಮನ್ನು ಕತ್ತಲೆಯಲ್ಲಿಟ್ಟು ಆಗೋಗದಲ್ಲಿ ಏಕಪಕ್ಷೀಯವಾದ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆʼಎಂದು ಗ್ಯಾನೇಶ್‌ ಕುಮಾರ್‌ ಅವರಿಗೆ ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಹಾಗೂ ವಿವೇಕ್‌ ಜೋಷಿ ಅವರು ಹತ್ತು ತಿಂಗಳಲ್ಲಿ ಹದಿನಾಲ್ಕು ಸಲ ಪತ್ರ ಬರೆದು ತಮ್ಮ ಆಕ್ಷೇಪಗಳನ್ನು ಸಲ್ಲಿಸಿರುವ ಸಂಗತಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ತನಿಖಾ ವರದಿ ಬಹಿರಂಗಪಡಿಸಿದೆ. ಆಯುಕ್ತರನ್ನೇ ದೂರವಿಡುತ್ತಿರುವ  ಸಂಗತಿ  ಬೆಚ್ಚಿಬೀಳಿಸಿದೆ.

ಕಳೆದ ಹತ್ತು ವರ್ಷಗಳಿಂದ ಬಿಜೆಪಿಯೇತರ ಪಕ್ಷಗಳು ದೇಶದ ಚುನಾವಣಾ ಆಯೋಗದ  ಬಗ್ಗೆ ಆಕ್ಷೇಪ ಹಾಗೂ ಆರೋಪಗಳನ್ನು ಮಾಡುತ್ತಿವೆ.  ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲೆಂದೇ ಎಸ್‌ಐಆರ್‌ ಮಾಡುತ್ತಿದೆ ಎಂದು ಗಂಭೀರವಾದ ಆರೋಪ ಮಾಡಿವೆ. ಈಗ ಚುನಾವಣಾ ಆಯುಕ್ತರ ಆಕ್ಷೇಪಗಳು ಅವು ಧೃಢಪಡಿಸುವಂತಿವೆ. ಈಗ ಭಿನ್ನಮತ ವ್ಯಕ್ತಪಡಿಸಿರುವ ಸಿಂಗ್‌ ಹಾಗೂ ಜೋಷಿ ಅವರ  ನೇಮಕಾತಿಗೆ ಆಗ ಕಾಂಗ್ರೆಸ್‌ ವಿರೋಧಿಸಿತ್ತು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ಮುಖ್ಯ ಚುನಾವಣಾ ಆಯುಕ್ತರನ್ನು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಹೊರಗೆ ಹಾಕಿದ್ದು ಹಾಗೂ ಚುನಾವಣಾ ಆಯೋಗದ ಅಥವಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ಕೆಲಸದಲ್ಲಿ ಏನಾದರೂ ತಪ್ಪಾಗಿದ್ದರೂ ಅವರು ನಿವೃತ್ತರಾದ ಮೇಲೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು 2023ರಲ್ಲಿ ಕಾನೂನಿಗೆ ತಿದ್ದುಪಡಿ ತಂದದ್ದು –   ಚುನಾವಣಾ ಆಯೋಗದಿಂದ ತಮ್ಮ ಪಕ್ಷಕ್ಕೆ ಅನುಕೂಲವಾದ ಕೆಲಸ ಮಾಡಿಸಿಕೊಳ್ಳಲೆಂದು ಎಂಬ ವಾದ ಕೇಳಿ ಬರುತ್ತಿದೆ.

ಮತದಾನಕ್ಕೆ ಯಾರು ಅರ್ಹರು-ಅನರ್ಹರು, ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ, ಪಟ್ಟಿಯಲ್ಲಿ ಹೊಸದಾಗಿ ಸೇರಿಸುವ, ತಿದ್ದುಪಡಿ ಮಾಡುವ ಪರಮ ಅಧಿಕಾರ 1956ರಿಂದ ಇಲ್ಲಿಯವರೆಗೂ ದೇಶದ ಪ್ರತಿ ವಿಧಾನ ಕ್ಷೇತ್ರದಲ್ಲಿರುವ ಮತದಾರರ ನೋಂದಣಿ ಅಧಿಕಾರಿಗಳಿಗೆ  (ಇಆರ್‌ಒ) ಇತ್ತು. ಈಗ ಅವರಿಂದ ಕಿತ್ತುಕೊಂಡು, ಅದನ್ನು ದೆಹಲಿಯ ಮುಖ್ಯ ಚುನಾವಣಾ ಆಯೋಗ ತನ್ನ ಕಚೇರಿಗೆ ವರ್ಗಾಯಿಸಿಕೊಂಡಿದೆ. ಈ ಮೂಲಕ ಆಯೋಗವು ಮತದಾರರ ಪಟ್ಟಿಯ ದತ್ತಾಂಶಗಳನ್ನು ಕೇಂದ್ರೀಕರಣ ಮಾಡಿಕೊಂಡಿದೆ.

ದೇಶದಲ್ಲಿನ ಸಾವಿರಾರು ಇಆರ್‌ಒ ಮಾಡುತ್ತಿದ್ದ ಕೆಲಸವನ್ನು ಚುನಾವಣಾ ಆಯೋಗ ಸಿದ್ದಪಡಿಸಿದ ಎಐ ಒಂದೇ ಮಾಡುತ್ತಿದೆ. ಬಿಎಲ್‌ಒ, ಇಆರ್‌ಒ, ಜಿಲ್ಲಾ ಚುನಾವಣಾ ಅಧಿಕಾರಿಗಳು ಈಗ ಗುಮಾಸ್ತನ ಕೆಲಸ (ಪೋಸ್ಟ್‌ಮ್ಯಾನ್‌ ಕೆಲಸ) ಮಾತ್ರ ಮಾಡಬೇಕು. ಮತದಾರರ ಪಟ್ಟಿಯ ಕೇಂದ್ರೀಕರಣ ಅಪಾಯಕಾರಿಯಾಗಿದೆ. ಸಾವಿರಾರು ಜನರು ಮಾಡುವ ಕೆಲಸವನ್ನು ಕೇವಲ ಎಐ ಒಂದೇ ಮಾಡಿದರೆ ಸಮಯ, ಹಣ ಎಲ್ಲವೂ ಉಳಿಯುತ್ತದೆ, ಇದು ಒಳ್ಳಯದಲ್ಲವೇ ಎಂದು ಜನರಿಗೆ ಅನಿಸಬಹುದು.  ಜತೆಗೆ ಮತದಾರರ ಜಾತಿ, ಧರ್ಮ, ರಾಜಕೀಯ ನಿಲುವು ಏನೆಂದು ಚುನಾವಣಾ ಆಯೋಗಕ್ಕೆ ಗೊತ್ತಾಗುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರಿಂದಲೂ ಸಿದ್ಧ ಉತ್ತರ ಬರಬಹುದು.

ಆದರೆ, ಈ ಎಐ ಯಾರು ರಚಿಸಿದ್ದಾರೆ, ಹೇಗೆ ರಚಿಸಿದ್ದಾರೆ, ಇದು ಹೇಗೆ ಕೆಲಸ ಮಾಡುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ.

ಕೇಂದ್ರೀಕರಣಗೊಂಡ ದತ್ತಾಂಶದಿಂದಾಗಿ ಯಾವ ಮತದಾರ ಯಾವ ಪಕ್ಷದ, ಯಾವ ನಾಯಕರ ವಿಡಿಯೊಗಳನ್ನು ನೋಡುತ್ತಿದ್ದಾನೆ, ನೋಡುತ್ತಿಲ್ಲ, ನೋಡಿದರೂ ಎಷ್ಟು ಸಮಯ ನೋಡುತ್ತಿದ್ದಾನೆಂದು ಅಲ್ಗರಿದಮ್‌ ಮೂಲಕ ಕಂಡುಹಿಡಿದು, ಅವನ ರಾಜಕೀಯ ನಿಲುವು ಏನೆಂದು ಸುಲಭವಾಗಿ ಎಐ ಪತ್ತೆ ಹಚ್ಚುತ್ತದೆ.

ಎಐಗೆ ಬಿಜೆಪಿ ಪರವಾಗಿ ಹಾಗೂ ವಿರುದ್ಧವಾಗಿ ನಿಲುವಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಕಷ್ಟವೇನಲ್ಲ. ಸಿದ್ಧವಾದ ಮತದಾರರ ಪಟ್ಟಿಯಿಂದ  ಬಿಜೆಪಿಗೆ ಮತ ಹಾಕಬಹುದಾದವರ ಹೆಸರುಗಳನ್ನು ಉಳಿಸಿ, ಉಳಿದವರ ಹೆಸರುಗಳನ್ನು ಅಳಸಿ ಹಾಕಲು ಅದಕ್ಕೆ ಕ್ಷಣಹೊತ್ತು ಸಾಕು.

ಚುನಾವಣಾ ಆಯುಕ್ತರನ್ನು ಕತ್ತಲೆಯಲ್ಲಿಟ್ಟು ಬಿಜೆಪಿಗೆ ಚುನಾವಣೆಗಳಲ್ಲಿ ಅನುಕೂಲವಾಗುವಂತಹ ಕೆಲಸಗಳನ್ನು  ಗ್ಯಾನೇಶ್‌ ಕುಮಾರ್ ಮಾಡುತ್ತಿರಬಹುದು ಎಂಬ ಅನುಮಾನ ಈಗ ದೇಶದ ಜನರಲ್ಲೂ ಹುಟ್ಟಿಸಿದೆ. ಚುನಾವಣಾ ಆಯೋಗ ಏನೇ ತಪ್ಪು ಮಾಡಿದರೂ ಆಯುಕ್ತರಿಗೆ ಶಿಕ್ಷೆಯಿಂದ ವಿನಾಯಿತಿ ಯಾಕೆ ನೀಡಿದ್ದು? ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಸಮಿತಿಯಿಂದ ಮುಖ್ಯ ನ್ಯಾಯಾಧೀಶರನ್ನು ಹೊರಗೇಕೆ ಹಾಕಿದ್ದು? ಎಂದು ದೇಶದ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಧಾನಮಂತ್ರಿಗಳು ಪ್ರಾಮಾಣಿಕವಾಗಿ ಉತ್ತರಿಸುವರೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ತಪ್ಪು ಮಾಡಿದರೂ ಗ್ಯಾನೇಶ್‌ ಕುಮಾರ್‌ ಮೇಲೆ ಕೇಸ್‌ ಆಗಲ್ಲವೇ?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
2 min read

ದೇಶದಲ್ಲಿ ಪ್ರಜಾತಂತ್ರ ಉಳಿಸುವ ಮಹತ್ತರವಾದ ಸ್ಥಾನದಲ್ಲಿ ಕೂತಿರುವ ಗ್ಯಾನೇಶ್‌ ಕುಮಾರ್‌ ಈಗ ಜನತೆಯ ಕಟಕಟೆಯಲ್ಲಿ ಬಂದು ನಿಂತಿದ್ದಾರೆ.  ಅವರು ಚುನಾವಣಾ ಆಯೋಗದ ಮುಖ್ಯ  ಆಯುಕ್ತರಾದ ಮೇಲೆ ಎಸ್‌ಐಆರ್‌ ತಂದು,  ಬಿಜೆಪಿ ವಿರುದ್ಧ ಹಾಕಬಹುದಾದ ಮತಗಳನ್ನು ಯೋಜನಾಬದ್ಧವಾಗಿ ಡಿಲೀಟ್‌ ಮಾಡುತ್ತಿದ್ದಾರೆಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಬ್ಬರು ಚುನಾವಣಾ ಆಯುಕ್ತರು ಅವರ ವಿರುದ್ಧ ಕೇಂದ್ರ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದು ವಿಪಕ್ಷಗಳ ಆರೋಪಗಳಿಗೆ ಬಲ ತುಂಬಿದ್ದಾರೆ.

ಈಗ ಗ್ಯಾನೇಶ್‌ ಕುಮಾರ್‌ ವಿರುದ್ಧ ಕೇಸ್‌ ದಾಖಲಿಸಬೇಕು, ಜೈಲಿಗಟ್ಟಬೇಕು ಎಂಬ ಕೂಗು ನಾಲ್ಕು ದಿಕ್ಕಿನಿಂದಲೂ ಕೇಳಿಬರುತ್ತಿದೆ. ಆದರೆ, ಈಗ ಅದು ಅಸಾಧ್ಯ.  ಮುಖ್ಯ ಚುನಾವಣಾ ಆಯುಕ್ತರು ಆಯೋಗದಲ್ಲಿ ಕೂತು ಏನೇ ತಪ್ಪು ಮಾಡಿದರೂ ಅವರ ವಿರುದ್ಧ ಯಾವುದೇ ಸಿವಿಲ್‌ ಅಥವಾ ಕ್ರಿಮಿನಲ್‌ ಕೇಸ್‌ ದಾಖಲು ಮಾಡದಂತೆ ಕೇಂದ್ರ ಸರ್ಕಾರ `The Chief Election commissioner and Other Election commissioners Act – 2023’ ಜಾರಿಗೆ ತಂದಿದೆ.  ಈ ಕಾಯಿದೆ ಅವರು ನಿವೃತ್ತರಾದ ಮೇಲೂ ಅವರ ವಿರುದ್ಧ ಯಾವುದೇ ಕೇಸ್‌ ಹಾಕದಂತೆ ಅವರಿಗೆ ರಕ್ಷಣೆಯ ಖಾತರಿಪಡಿಸಿದೆ.

ಗ್ಯಾನೇಶ್‌ ಕುಮಾರ್‌ ಅವರಾಗಿ ಅವರೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಪದಚ್ಯುತಿಗೊಳಿಸುವುದೂ ಅಷ್ಟು ಸುಲಭವಲ್ಲ.  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಯಾವ ರಕ್ಷಣೆ ಇದೆಯೋ ಇವರಿಗೂ ಅಷ್ಟೇ ರಕ್ಷಣೆಯಿದೆ. ಇವರನ್ನು ತೆಗೆದು ಹಾಕಬೇಕಾದರೆ ಒಂದು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 50ರಷ್ಟು ಸದಸ್ಯರ ಒಪ್ಪಿಗೆ ಬೇಕು. ಇಲ್ಲವೇ  ಸದನದಲ್ಲಿ ಹಾಜರಿರುವ ಒಟ್ಟು ಸದಸ್ಯರಲ್ಲಿ 2/3ರಷ್ಟು ಸದಸ್ಯರು ಅವರ ವಿರುದ್ಧ ಮತ ಹಾಕಬೇಕು. ಆಗ ಇವರನ್ನು ರಾಷ್ಟ್ರಪತಿಗಳು ತೆಗೆದು ಹಾಕಬಹುದು.

ಈ ರಕ್ಷಣೆ ಅವರಿಗಿರುವ ಕಾರಣಕ್ಕೆ ಅವರ ಬಗ್ಗೆ ಇಡೀ ದೇಶದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಅವರು ಎಸಿ ರೂಮಿನಲ್ಲಿ ಯಾವ ಭಯವಿಲ್ಲದೆ  ಆರಾಮವಾಗಿ ಕೂತಿದ್ದಾರೆ. ಜನರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲವೆಂದು ಭಾವಿಸಿದಂತಿದೆ. ಹಾಗಾಗಿ, ಮಾಧ್ಯಮಗಳ ಮುಂದೆ ಬಂದು ಅವರು ಇದುವರೆಗೂ ಮಾತನಾಡಿಲ್ಲ.

ಪ್ರಜಾತಂತ್ರ ದೇಶದಲ್ಲಿ ಅಂತಿಮವಾಗಿ ಎಲ್ಲರೂ ಜನರಿಗೆ ಉತ್ತರದಾಯಿಗಳಾಗಿಬೇಕು. ಹೀಗೆ ಕೆಲವರಿಗೆ ವಿಶೇಷ ರಿಯಾಯಿತಿ ನೀಡಿದರೆ ಅವರು ಜನತೆಯ ತಲೆಯ ಮೇಲೆ ಕಾಲಿಡಿದೆ ಇರುತ್ತಾರೆಯೇ? ಈ ರೀತಿಯಾಗಿ ಅವರಿಗೆ ವಿಶೇಷವಾದ ರಕ್ಷಾ ಕವಚ ಹೋದಿಸಿದೇಕೆ? ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ ನ್ಯಾಯಧೀಶರನ್ನು ಹೊರಗೆ ಹಾಕಿದ್ದು ಯಾರ ಅನುಕೂಲಕ್ಕಾಗಿ? ದೇಶದ ಜನತೆ ಕೇಳುತ್ತಿರುವ ಈ ಪ್ರಶ್ನೆಗಳಿಗೆಲ್ಲ ಪ್ರಧಾನಿ ಮೋದಿಯವರ ಬಳಿ ಉತ್ತರವಿದೆಯೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಉತ್ತರ ನೀಡಬೇಕಾದ ಚುನಾವಣಾ ಆಯೋಗ, ಮೌನಕ್ಕೆ ಜಾರಿದೆ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಕಳೆದ ಕೆಲ ವರ್ಷಗಳಿಂದ ಕೇಂದ್ರ ಚುನಾವಣಾ ಆಯೋಗ ವಿವಾದಗಳು ಮೆತ್ತಿಕೊಂಡೇ ಬದುಕುತ್ತಿದೆ. ಈಗ ಮತ್ತೆ ವಿವಾದದಿಂದಾಗಿ ಸುದ್ದಿಯಲ್ಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಹಾಗೂ ವಿವೇಕ್‌ ಜೋಷಿ ಅವರು ಕೇಂದ್ರ ಸಂಪುಟ ಕಾರ್ಯದರ್ಶಿ ಟಿ. ವಿ. ಸೋಮನಾಥನ್‌ ಅವರಿಗೆ ಪತ್ರ ಬರೆದ ಬೆಳವಣಿಗೆ ಬೆಳಕಿಗೆ ಬಂದು ಚುನಾವಣಾ ಆಯೋಗ ಹಾಗೂ ಮುಖ್ಯ ಆಯುಕ್ತರನ್ನು ಜನತಾ ಕಟಕಟೆಯಲ್ಲಿ ತಂದು ನಿಲ್ಲಿಸಿದೆ.

ಇಬ್ಬರು ಆಯುಕ್ತರನ್ನು ಕತ್ತಲೆಯಲ್ಲಿಟ್ಟು ಅವರೊಬ್ಬರೇ ಕೆಲ ನಿರ್ಣಯಗಳನ್ನು ಮಾಡುತ್ತಿರುವ ಸುದ್ದಿ ದೇಶದ ಜನರನ್ನು ಅಲ್ಲಾಡಿಸಿದೆ. ಈ ದೇಶದಲ್ಲಿ ಯಾರಿಗೆ ಮತದಾನದ ಹಕ್ಕು ಇರಬೇಕು, ಯಾರಿಗೆ ಇರಬಾರದು ಎಂದು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ನಿರ್ಧರಿಸುವುದಾದರೆ ಇದನ್ನು ಪ್ರಜಾಪ್ರಭುತ್ವವೆಂದು ಏಕೆ ಕರೆಯಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಒಂದೇ ಸಮನೆ ದಾಳಿ ಮಾಡುತ್ತಿವೆ. ಮುಖ್ಯ ಚುನಾವಣಾ ಆಯುಕ್ತರು ೪೮ ಗಂಟೆಯಲ್ಲಿ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ  ಆಂದೋಲನ ಮಾಡುತ್ತೇವೆ ಎಂದು ಕಾಕ್ರೋಜ್‌ ಜನತಾ ಪಕ್ಷ ಸಾರಿದೆ.

ಆದಾಗ್ಯೂ ಚುನಾವಣಾ ಆಯೋಗ ಮಾಧ್ಯಮಗಳ ಮುಂದೆ ಬಂದು ʻಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ಸುದ್ದಿ ಸುಳ್ಳು ಸುದ್ದಿ ಎಂದು ಇದುವರೆಗೂ ಖಂಡಿಸಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರವೂ ನೀಡುತ್ತಿಲ್ಲ.  ಅನಾಮಧೇಯ ಅಧಿಕಾರಿಯಿಂದ ಒಂದು ಪ್ರೆಸ್‌ ನೋಟ್‌ ಹೊರಡಿಸಿ ಮೌನಕ್ಕೆ ಜಾರಿದೆ. ಆ ಪತ್ರದಲ್ಲೂ ಸುದ್ದಿಯನ್ನು ಖಂಡಿಸಿಲ್ಲ. ಆಯೋಗದ ಈ ನಿಗೂಢ ಮೌನ ಜನರ ಅನುಮಾನ ಮತ್ತಷ್ಟು ಹೆಚ್ಚಿಸಿದೆ

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಕೆಪಿಎಸ್‌ಸಿ ಮುಚ್ಚಿದರೆ ಎಲ್ಲವೂ ಸರಿಯಾಗುತ್ತದೆಯೇ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read
ಕೆಪಿಎಸ್‌ಸಿ ಮುಚ್ಚುವೆ

ʻಕೆಪಿಎಸ್‌ಸಿಯಲ್ಲಿ ಖದೀಮರು ಬಂದು ಕೂರುತ್ತಿದ್ದಾರೆ. ಹಾಗಾಗಿ ಅದನ್ನು ಮುಚ್ಚಲು ಕಾನೂನು ತಜ್ಞರ ಜತೆಗೆ ಚರ್ಚೆ ನಡೆಸುತ್ತಿದ್ದೇನೆʼ ಎಂದು ವಿರಾವೇಶದಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಅಣಿಮುತ್ತುಗಳು ಉದುರಿಸಿದ್ದಾರೆ. ಇವರ ಪ್ರಕಾರ ಕೆಪಿಎಸ್‌ಸಿಯಲ್ಲಿ ಮಾತ್ರ ಲಂಚವಿದೆ. ಉಳಿದ ಇಲಾಖೆಗಳು, ಸಂಸ್ಥೆಗಳು ಪ್ರಾಮಾಣಿಕವಾಗಿವೆ.

ಭ್ರಷ್ಟಾಚಾರ ಹೆಚ್ಚಾದ ಕಾರಣಕ್ಕೆ ಕೆಪಿಎಸ್‌ಸಿ ಮುಚ್ಚುವುದಾದರೆ, ಮೊದಲು ವಿಧಾನಸೌಧದ ಬಾಗಿಲು ಮುಚ್ಚಬೇಕಾಗುತ್ತದೆ.  ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲಿ, ಇಲಾಖೆಗಳಲ್ಲಿ ಅಧಿಕಾರಿಗಳು ಲಂಚದ ಅಂಗಡಿ ತೆರೆಯಲು ಕಾರಣರಾರು? ಈ ಅಂಗಡಿಗಳಿಗೆಲ್ಲ ಪರವಾನಗಿ ನೀಡಿದ್ದವರಾರು? ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತಿದ್ದ, ಕೂತಿರುವ ರಾಜಕಾರಣಿಗಳಲ್ಲವೇ?

ಇಂದು ಸರ್ಕಾರದ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲ? ನಮ್ಮದು ಲಂಚಮುಕ್ತ ಇಲಾಖೆಯೆಂದು ಹೇಳಲು ಯಾರಾದರೂ ಒಬ್ಬ ಮಂತ್ರಿ ಕೈ ಎತ್ತುವರೇ? ಹೋಗಲಿ, ನಮ್ಮದು ಲಂಚಮುಕ್ತ ಸರ್ಕಾರ ಎಂದು ಡಿಕೆ ಅವರೇ ಘೋಷಿಸುವರೇ? ಅಥವಾ ಡಿಕೆ ಸರ್ಕಾರದ ಮಂತ್ರಿಗಳು ಹಾಗೂ ಸ್ವತಃ ಡಿಕೆ ಅವರೇ ನಾವು ಲಂಚವೇ ಮುಟ್ಟಿಲ್ಲ, ಮುಟ್ಟುವುದಿಲ್ಲವೆಂದು ಎದೆಮೇಲೆ ಕೈಯಿಟ್ಟು ಹೇಳುತ್ತಾರೆಯೇ? ಆಯೋಗದ ಅಧ್ಯಕ್ಷನನ್ನು, ಸದಸ್ಯರನ್ನು ಹಾಗೂ ಪರೀಕ್ಷಾ ನಿಯಂತ್ರಕರನ್ನು ಯಾರು ನೇಮಿಸುತ್ತಾರೆ? ಅವರೆಲ್ಲ ಹೇಗೆ ನೇಮಕವಾಗುತ್ತಾರೆ ಎಂಬುದು ಡಿಕೆ ಅವರಿಗೆ  ಗೊತ್ತಿಲ್ಲವೆ?

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ – ಕಾಂಗ್ರೆಸ್‌, ಜೆಡಿಎಸ್‌ – ಬಿಜೆಪಿ ಹೀಗೆ ಎಲ್ಲಾ ಕಾಲದ ಸರ್ಕಾರಗಳ ಅಸ್ಥಿಪಂಜರಗಳು ಕೆಪಿಎಸ್‌ಸಿ ಕಪಾಟಿನಲ್ಲಿವೆ. ಅವು ಹೊರತೆಗೆದರೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತಿದ್ದ, ಕೂತಿರುವ ಬಹುತೇಕ ರಾಜಕಾರಣಿಗಳು ನಡುಬೀದಿಯಲ್ಲಿ ಬೆತ್ತಲೆಯಾಗುತ್ತಾರೆ.

ನಾವು ಎಐ ಕಾಲದಲ್ಲಿದ್ದೇವೆ. ಸರ್ಕಾರದ ಹುದ್ದೆಗಳಿಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸಿ, ನೇಮಕಾತಿ ಮಾಡಿಕೊಳ್ಳಲು ಕಷ್ಟವೇನಲ್ಲ. ಮೊದಲು ಸರ್ಕಾರ, ಮತ್ತದರ ಮಂತ್ರಿಗಳ ಕೈ ಶುದ್ಧವಾಗಿಟ್ಟುಕೊಂಡರೆ, ಆಗ ಎಲ್ಲೆಡೆ, ಎಲ್ಲವೂ ಸರಿಯಾಗಬಹುದು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಎಸ್‌ಐಟಿ ಹೆಗಲಿಗೆ ತನಿಖೆ: ಬಸವರಾಜ ಕನ್ನಾಳೆಗೆ ಹೆಚ್ಚಿದ ಸಂಕಷ್ಟ!

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಪಶು ವೈದ್ಯಾಧಿಕಾರಿಗಳ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿತ್ತು. ಅದು ತನ್ನ ಕೆಲಸ ಆರಂಭಿಸಿ, ಸಾಕಷ್ಟು ದಾಖಲೆಗಳನ್ನೂ ಕಲೆ ಹಾಕಿದೆ. ಆದರೆ, ನಿನ್ನೆ (ಸೋಮವಾರ) ಹೈಕೋರ್ಟ್‌ ಸಿಐಡಿ ತನಿಖೆಗೆ ಫುಲ್‌ಸ್ಟಾಪ್‌ ಹಾಕಿ,‌ ಐವರು ಐಪಿಎಸ್‌ ಅಧಿಕಾರಿಗಳ ಎಸ್‌ಐಟಿ ರಚಿಸಿದೆ. ಇದು ಕೆಪಿಎಸ್‌ಸಿ ಹಗರಣಗಳ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

ʻಸಿಐಡಿ ಈತನಕ ನಡೆಸಿರುವ ತನಿಖೆಯ ವರದಿಯನ್ನು ಮತ್ತು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಎಸ್‌ಐಟಿ ಪಡೆದು ಸ್ವತಂತ್ರವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ಮಾಡಬೇಕು. ಕೇವಲ ನೂರು ದಿನಗಳಲ್ಲಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಹಾಗೂ ಕಾಲಕಾಲದ ಪ್ರಗತಿ ವರದಿಯನ್ನೂ ಪ್ರತಿ 30 ದಿನಗಳಿಗೊಮ್ಮೆ ನ್ಯಾಯಾಲಯದ ಮುಂದಿಡಬೇಕುʼ ಎಂದು ಆದೇಶ ಮಾಡಿದೆ. ಮುಂದುವರಿದು ʻಈ ತನಿಖೆಯಲ್ಲಿ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ಮೂಗು ತೂರಿಸಬಾರದುʼ ಎಂದು ಎಚ್ಚರಿಸಿದೆ.

ಈ ಹಿಂದೆ ಡಾ.ಎಚ್.ಎನ್.‌ ಕೃಷ್ಣ ಮತ್ತು ಗೋನಾಳ ಭೀಮಪ್ಪ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದಾಗ 2011 ಹಾಗೂ 2013ರಲ್ಲಿ ಹಗರಣಗಳು ದೊಡ್ಡ ಸದ್ದು ಮಾಡಿದ್ದವು. ಆದರೆ, ಸಿಐಡಿ ತನಿಖೆ ಹಳ್ಳ ಹಿಡಿದು, ಯಾರಿಗೂ ಶಿಕ್ಷೆಯಾಗಿರಲಿಲ್ಲ. ಇದೂ ಸಹ ಹಾಗೆ ಹಳ್ಳ ಹಿಡಿದು, ಕೆಲದಿನಗಳಲ್ಲೇ ಮಧ್ಯವರ್ತಿ ಬಸವರಾಜ ಕನ್ನಾಳೆ ಮತ್ತು ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಹಾಗೂ ಮತ್ತಿತರರು ಬಹಳ ಸುಲಭವಾಗಿ ಹೊರಗಡೆ ಬರುತ್ತಾರೆ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಆದರೆ, ನ್ಯಾಯಾಲಯದ ಈ ಹೆಜ್ಜೆ ಜನರು ಆಸೆಗಣ್ಣಿನಿಂದ ಎಸ್‌ಐಟಿ ಕಡೆ ನೋಡುವಂತಾಗಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಬಿಎಸ್‌ಎಸ್‌ಕೆ: ರಾಜಕೀಯ ಗುದ್ದಾಟದಲ್ಲಿ ಬಡವಾಯಿತ್ತೆ?

ಸಿದ್ರಾಮ ಶಟಕಾರ
ಸಿದ್ರಾಮ ಶಟಕಾರ
1 min read

ಬೀದರ ಸಹಕಾರಿ ಸಕ್ಕರೆ (ಬಿಎಸ್‌ಎಸ್‌ಕೆ) ರೈತರ ಹಿತಾಸಕ್ತಿಗಾಗಿ ಸಹಕಾರಿ ತತ್ವದಡಿಯಲ್ಲಿ 70ರ ದಶಕದಲ್ಲಿ ಆರಂಭವಾದ ಜಿಲ್ಲೆಯ ಮೊಟ್ಟ ಮೊದಲ ಸಕ್ಕರೆ ಕಾರ್ಖಾನೆಯಾಗಿದೆ. ಇಂದು ಜಿಲ್ಲೆಯ ರಾಜಕಾರಣಿಗಳ  ಬೇಜವಾಬ್ದಾರಿಯಿಂದಾಗಿ ಈ ಕಾರ್ಖಾನೆ ತಣ್ಣಗೆ ಮಲಗಿದೆ. ಜಿಲ್ಲೆಯ ರೈತರ ಆರ್ಥಿಕ ಬದುಕು ಸುಧಾರಿಸಬೇಕಾದ ಈ ಕಾರ್ಖಾನೆ ಡಿಸಿಸಿ ಬ್ಯಾಂಕ್‌  ಮತ್ತು  ಇತರ ಬ್ಯಾಂಕ್‌ಗಳಿಂದ  ಸುಮಾರು  353 ಕೋಟಿ ರೂಪಾಯಿಗಳು ಸಾಲ ಪಡೆದು, ಅದು ತೀರಿಸಲಾಗದ ಸ್ಥಿತಿಯಿಂದಾಗಿ ಇಂದು ಬಾಗಿಲು ಬಂದ ಮಾಡಿಕೊಂಡಿದೆ.  ಇದರಿಂದಾಗಿ ಸುಮಾರು 25000  ಕಾರ್ಖಾನೆಯ  ಸದಸ್ಯರ ಬದುಕು ರಸ್ತೆಗೆ ಬಂದಿದೆ.

ಜಿಲ್ಲೆಯ ರಾಜಕಾರಣಿಗಳು ಮಾತ್ರ ಒಬ್ಬರ ಮೇಲೆ ಮತ್ತೊಬ್ಬರು ಆರೋಪ -ಪ್ರತ್ಯಾರೋಪ ಮಾಡಿಕೊ೦ಡು ರಾಜಕಾರಣ ಮಾಡುತ್ತಿದ್ದಾರೆ.   ರೈತರ ಹಿತಕ್ಕಾಗಿ ಕಾರ್ಖಾನೆ ಉಳಿಸಿಕೊಳ್ಳಲು ಯಾವ ರಾಜಕಾರಣಿಯೂ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲವೆಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಸುಮಾರು 11 ಕೋಟಿ  ಸಾಲ ಪಡೆದು ಕಾರ್ಖಾನೆ ಪುನರಾರಂಭಿಸಲು ಪ್ರಯತ್ನಿಸಲಾಗಿತ್ತು. ಆದರದು ಯಶಸ್ವಿಯಾಗಲಿಲ್ಲ.  ಮಾಜಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಧಿಕಾರದಲ್ಲಿದ್ದಾಗ ಕಾರ್ಖಾನೆ ಸೂಮಾರು 175 ಎಕರೆ ಜಮೀನು ಹೊಂದಿದೆ, ಅಗತ್ಯವಿರುವಷ್ಟು ಉಳಿಸಿಕೊಂಡು, ಮಿಕ್ಕ ಜಮೀನನ್ನು ಮಾರಾಟ ಮಾಡಿ ಸಾಲ ತೀರಿಸಿ. ಉಳಿದ ಹಣದಿಂದ ಹೊಸ ಯಂತ್ರೋಪಕರಣಗಳನ್ನು ಖರೀದಿಸಿ ಕಾರ್ಖಾನೆ ಪುನರಾರಂಭಿಸಲು ಸೂಚಿಸಿದರು. ಆದರೆ ಅದು ಅಪ್ರಾಯೋಗಿಕವಾಗಿತ್ತು.

ಜಿಲ್ಲೆಯ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಹಾಗೂ ಸಿದ್ದು ಪಾಟೀಲರು ಇಂದಿನ ಸಕ್ಕರೆ ಸಚಿವರಾದ ರುದ್ರಪ್ಪ ಲಮ್ಮಾಣಿಯವರಿಗೆ ಭೇಟಿಯಾಗಿ, ಯಾವುದಾದರೂ  ಖಾಸಗಿ ಸಂಸ್ಥೆಗೆ  ಕಾರ್ಖಾನೆಯನ್ನು  ಗುತ್ತಿಗೆ ನೀಡಿ, ಕಾರ್ಖಾನೆಯನ್ನು ಮತ್ತೇ  ಆರಂಭಿಸುವಂತೆ  ಮನವಿ ಮಾಡಿದ್ದಾರೆ. ಆದರೆ, ಖಾಸಗಿ ಸಂಸ್ಥೆ ರೈತ ಹಿತ ಕಾಪಾಡುತ್ತದೆಯೆ? ಜಿಲ್ಲೆಯ ಎಲ್ಲಾ ಪಕ್ಷದ ರಾಜಕಾರಣಿಗಳು ಈ ಕಾರ್ಖಾನೆಯ ಮೇಲೆ ತಂತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ನಿರತರಾಗಿದ್ದಾರೆ. ರೈತರ ಬವಣೆ, ಗೋಳು ಅವರಿಗೆ  ಲೆಕ್ಕಕ್ಕಿಲ್ಲದಂತಾಗಿದೆ. ಹುಮನಾಬಾದ ರಾಜಕೀಯ ಚಟುವಟಿಕೆಗಳು ಇಂದು ಈ ಕಾರ್ಖಾನೆಯ ಸುತ್ತಲೆ ಗಿರಕಿ ಹೊಡೆಯುತ್ತಿದೆ. ಶಾಸಕರು ಹಾಗೂ ವಿಧಾಸ ಸಭಾ ಸದಸ್ಯರು ಪಾದಯಾತ್ರೆ ಮೇಲೆ ಪಾದಯಾತ್ರೆ ಮಾಡುತ್ತಿದ್ದಾರೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್