2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ʻಇಂದು ಮಧ್ಯರಾತ್ರಿಯಿಂದಲೇ ಒಂದು ಸಾವಿರ ಹಾಗೂ ಐದು ನೂರು ರೂಪಾಯಿ ಮುಖಬೆಲೆಯ ನೋಟುಗಳು ದೇಶದಲ್ಲಿ ಬ್ಯಾನ್ ಮಾಡಲಾಗಿದೆʻ ಎಂದು ದಿಢೀರ್ ಘೋಷಿಸಿದರು.
ಇದನ್ನು ಕೇಳಿ ಇಡೀ ದೇಶವೇ ಶಾಕ್ಗೆ ಒಳಗಾಗಿತ್ತು. ʻಇದರಿಂದಾಗಿ ನಿಮಗೆ ತಾತ್ಕಾಲಿಕವಾಗಿ ತೊಂದರೆ ಆಗಬಹುದು. ಆದರೆ, ನಕಲಿ ನೋಟಿನ ಹಾವಳಿ, ಕಪ್ಪು ಹಣದ ರೋಗ ಹಾಗೂ ಭಯೋತ್ಪಾದನೆ ಮೂಲೋತ್ಪಾಟನೆಯಾಗುತ್ತದೆʼ ಎಂದು ದೇಶದ ಜನರಿಗೆ ಭರವಸೆ ನೀಡಿದರು. ಅವರ ಮಾತನ್ನು ನಂಬಿ ಜನಸಾಮಾನ್ಯರು ಪಡಬಾರದ ಕಷ್ಟಪಟ್ಟರು. ಆದರೆ, ಆರ್ಬಿಐ ಅಂಕಿಅಂಶಗಳ ಪ್ರಕಾರ ಶೇ. 99.3ರಷ್ಟು ಅಮಾನ್ಯವಾದ ನೋಟುಗಳು ಮರಳಿ ಬ್ಯಾಂಕಿಗೆ ವಾಪಸ್ ಬಂದಿವೆ. ಅಂದೇ ಈ ಅಂಕಿಅಂಶಗಳು ಮೋದಿ ಅವರ ಘೋಷಿತ ಉದ್ದೇಶ ಪೊಳ್ಳು ಎಂದು ದೇಶದ ಮುಂದೆ ಸಾಬೀತುಪಡಿಸಿದವು.
ಹತ್ತು ವರ್ಷ ಕಳೆದರೂ ದೇಶದಲ್ಲಿ ಕಪ್ಪು ಹಣದ ರೋಗ ಕಡಿಮೆಯಾಗಿದೆಯೇ? ನಕಲಿ ನೋಟುಗಳ ಹಾವಳಿ ನಿಂತಿದೆಯೇ? ಭಯೋತ್ಪಾದನೆ ಮೂಲೋತ್ಪಾಟನೆ ಆಗಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಅವರ ಬಾಲಬಡುಕ ಸಮರ್ಥಕರು ಉತ್ತರಿಸಬೇಕಾಗುತ್ತದೆ.
ಇದು ಇಲಿ ಹಿಡಿಯಲು ಬೆಟ್ಟ ಅಗೆದ ಹಾಗೆ ಆಗಿದೆ. ಪ್ರಧಾನಿ ಮೋದಿ ಅವರ ಈ ಹುಚ್ಚಾಟಕ್ಕೆ ದೇಶದ ಜನರು ಬೆಲೆ ತೆತ್ತಿದ್ದಾರೆ.
ಸ್ಟಿಂಗ್ ಆಪರೇಷನ್: ಬೇರೆಯದೇ ಕಥೆ ಹೇಳುತ್ತಿರುವ ಕೃಪಾ ಆಳ್ವಾ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನಡೆದಿದೆ ಎನ್ನಲಾಗುತ್ತಿರುವ ಕುಟುಕು ಕಾರ್ಯಾಚರಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ – ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಮತ್ತು ಸಂತ್ರಸ್ತೆ ಎನ್ನಲಾಗುತ್ತಿರುವ ಮುಸುಕುಧಾರಿ ಮಹಿಳೆ – ಮೂರು ಮಂದಿ ಪರದೆಯ ಮುಂದೆ ಇದ್ದಾರೆ. ಪರದೆಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಈಗ ಈ ಪ್ರಕರಣದಲ್ಲಿ ಹೊಸ ಪಾಲುದಾರರು ಸೇರ್ಪಡೆಯಾಗಿದ್ದಾರೆ.
ರಾಕೇಶ್ ಶೆಟ್ಟಿ ಆರಂಭದಲ್ಲಿ ಮಾತಾಡುವಾಗ ʻಸ್ಟಿಂಗ್ ಆಪರೇಷನ್ ಮಾಡಿದ್ದು ಬೇರಾರು ಅಲ್ಲ, ನಾನೇ. ಅದು ಜರ್ನಲಿಸಂ ಭಾಗವಾಗಿ ೨೦೨೩ರಲ್ಲಿ ಮಾಡಿದ್ದೇನೆ. ಸಿದ್ದರಾಮಯ್ಯನವರ ವಿರುದ್ಧ ಒಂದು ಗಂಭೀರ ಆರೋಪ ಹರಿದಾಡುತ್ತಿತ್ತು. ಸಂಚು ನಡೆಯುತ್ತಿತ್ತು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಈ ಸ್ಟಿಂಗ್ ಮಾಡಿದ್ದೇವೆ. ಅದು ಸುಳ್ಳು ಎಂದು ಗೊತ್ತಾಗಿ ಅದನ್ನು ಕೈಬಿಟ್ಟಿದ್ದೇವೆʼ ಎಂದು ಹೇಳಿದ್ದರು.
ಆಮೇಲೆ ನಾನು ಯಾವುದೇ ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ ಎಂದಿದ್ದರು. ಮರುದಿನ ನ್ಯಾಯಾಲಯದ ಕದ ತಟ್ಟಿ, ಜಾಮೀನು ಪಡೆದರು. ಈಗ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಿ ʻನನ್ನನ್ನು ಸಾಕ್ಷಿಯಾಗಿ ಪರಿಗಣಿಸಿ, ರಕ್ಷಣೆ ನೀಡಿ. ನಮ್ಮ ಕಚೇರಿಯ ಕಪಾಟಿನಲ್ಲಿರುವ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ಸಾಕ್ಷ್ಯವಾಗಿ ನೀಡುವೆʼ ಎಂದು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದಾರೆ. ತನಿಖೆ ಚುರುಕಾದಂತೆ ಅವರು ಹೊಸ ರೂಪ ಧರಿಸಲು ಸಿದ್ಧವಾಗಿದ್ದಾರೆ ಎಂದು ಇದನ್ನು ವ್ಯಾಖ್ಯಾನಿಸಲಾಗುತ್ತಿದೆ.
ರಾಕೇಶ್ ಶೆಟ್ಟಿ ತಮ್ಮ ಟಿವಿ ಕ್ಯಾಮೆರಾ ಮುಂದೆ ಕೂತು ಕುಮಾರಸ್ವಾಮಿ ಅವರ ವಿರುದ್ಧ ಸತತವಾಗಿ ಮೂರು ತಾಸು ವಾಗ್ದಾಳಿ ನಡೆಸಿದ್ದು ಇನ್ನೂ ಹಸಿಹಸಿಯಾಗಿಯೇ ಇದೆ. ಆಗ ಸ್ಟಿಂಗ್ ಬಗ್ಗೆಯೂ ವಿವರವಾಗಿ ಮಾತಾಡಿದರು. ಅವರು ಮಾತಾಡಿದ್ದೆ ಈಗ ಅವರಿಗೆ ಉರುಳಾಗಿ ಪರಿಣಿಮಿಸುವ ಸಾಧ್ಯತೆ ಇದೆ. ಮಾತಾಡುವ ಮಧ್ಯದಲ್ಲಿ ಸ್ಟಿಂಗ್ ವಿಡಿಯೊ ʻಎರಡು ತಾಸುʼ ಇದೆ ಎಂದು ಹೇಳಿದ್ದರು. ಕೃಪಾ ಆಳ್ವ ಅವರು ತಮ್ಮ ಹೇಳಿಕೆ ದಾಖಲಿಸಿದ ಮೇಲೆ ಅವರ ಈ ಮಾತು ಈಗ ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯ ಆರಂಭದಲ್ಲಿ ದೂರು ಸಲ್ಲಿಸಿ, ಮೌನಕ್ಕೆ ಶರಣಾಗಿದ್ದರು. ಆಗ ರಾಕೇಶ್ ಶೆಟ್ಟಿ ಅವರ ಕಿರುಚಾಟ, ಅಬ್ಬರ ಜೋರಾಗಿತ್ತು. ಆದರೆ, ಯಾವಾಗ ಸಿದ್ದರಾಮಯ್ಯನವರು ಮೌನ ಮುರಿದು ಈ ವಿಷಯದ ಬಗ್ಗೆ ಮಾತಾಡಲು ಆರಂಭಿಸಿದರೋ, ಅವರ ಹಾರಾಟ, ಚೀರಾಟ ಎಲ್ಲವೂ ಏಕಾಏಕಿ ಬಂದ್ ಆಗಿದೆ. ಇದ್ದಕ್ಕಿದ್ದಂತೆ ಅವರು ಯಾಕೆ ಆರ್ಭಟ ನಿಲ್ಲಿಸಿದ್ದಾರೆ ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.
ಕೃಪಾ ಆಳ್ವಾ ಅವರು ಮೊದಲು ಪೊಲೀಸರು ವಿಚಾರಣೆಗೆ ಕರೆಯುವ ಮುನ್ನ ತಾವಾಗಿ ತಾವೇ ವಿಚಾರಣೆಗೆ ಬಂದು ಹುಬ್ಬೇರಿಸುವಂತೆ ಮಾಡಿದರು. ಮರುದಿನ ಅವರೂ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾದರು. ಷರತ್ತುಬದ್ಧ ನಿರೀಕ್ಷಣಾ ಜಾಮೀನು ಸಿಕ್ಕ ಮೇಲೆ ಮರಳಿ ದೇಶಕ್ಕೆ ಕಾಲಿಟ್ಟಿದ್ದಾರೆ. ವಿದೇಶದಿಂದ ನೇರವಾಗಿ ತನಿಖಾಧಿಕಾರಿಗಳ ಮೇಜಿನ ಮುಂದೆ ಬಂದು ಕೂತಿದ್ದಾರೆ.
ತನಿಖಾಧಿಕಾರಿಗಳು ನಾಲ್ಕು ತಾಸು ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತರಹೇವಾರಿ ಪ್ರಶ್ನೆಗಳನ್ನು ಅವರ ಮುಂದಿಟ್ಟಾಗ, ಅವರು ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಉಸಾಬರಿಗೆ ಹೋಗದೆ ʻನನಗೆ ಗೊತ್ತಿಲ್ಲʼ ಎಂದು ಜಾರಿಕೊಂಡರೆ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರು ನೀಡಿದ ಪ್ರತಿಕ್ರಿಯೆಯೊಂದು ಸ್ಟಿಂಗ್ ಪ್ರಕರಣದ ಬಗ್ಗೆ ಬೇರೊಂದು ಕಥೆ ಹೇಳುತ್ತಿದೆ. ಅವರು ತನಿಖಾಧಿಕಾರಿಗಳ ಮುಂದೆ ʻಖಾಸಗಿ ಸುದ್ದಿ ವಾಹಿನಿಯೊಂದರ ಪತ್ರಕರ್ತ, ಸಂತ್ರಸ್ತೆ ಹಾಗೂ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಿದ್ದಾಗ ನಾನು ಸ್ಥಳದಲ್ಲಿ ಇದ್ದೆ. ಸುಮಾರು ಅರ್ಧ ತಾಸು ಸಂಭಾಷಣೆ ನಡೆದಿರಬಹುದು. ಆದರೆ, ಅದು ರೆಕಾರ್ಡ್ ಮಾಡಲಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಅಲ್ಲದೆ, ಈ ಹಿಂದೆ ನೀಡಿದ ಹೇಳಿಕೆಯಂತೆ ವಿಡಿಯೊದ ಉದ್ದೇಶ ಕೂಡ ನನಗೆ ತಿಳಿದಿಲ್ಲʼ ಎಂದು ಹೇಳಿದ್ದಾರೆ ಎಂದು ಸುದ್ದಿಯಾಗಿದೆ.
ಅವರು ನೀಡಿದ ಎರಡು ಹೇಳಿಕೆಗಳು ಗಮನ ಸೆಳೆದಿವೆ.
ಮೊದಲನೆಯದು, ಅರ್ಧ ತಾಸು ಸಂಭಾಷಣೆ ನಡೆದಿದೆ ಎಂದು ಹೇಳಿದ್ದು. ಆದರೆ, ರಾಕೇಶ್ ಶೆಟ್ಟಿ ಸುಮಾರು ಎರಡು ತಾಸಿನ ವಿಡಿಯೊ ಇದೆ ಎಂದು ಹೇಳಿದ್ದಾರೆ. ಎರಡು ಹೇಳಿಕೆಗಳಲ್ಲಿ ವಿರೋಧಾಭಾಸವಿದೆ.
ಎರಡನೆಯದು, ವಿಡಿಯೊ ರೆಕಾರ್ಡ್ ಮಾಡುವ ವಿಷಯ ನನಗೆ ಗೊತ್ತಿರಲಿಲ್ಲ ಎಂದದ್ದು. ರಾಕೇಶ್ ಶೆಟ್ಟಿ ಇವರಿಗೂ ಗೊತ್ತಿಲ್ಲದಂತೆ ವಿಡಿಯೊ ಮಾಡಿಕೊಂಡರಾ? ಹಾಗೂ ಇವರ ಮಾತು ನಿಜವೆಂದಾದರೆ, ಹೀಗೆ ಕದ್ದು ಯಾಕೆ ರೆಕಾರ್ಡ್ ಮಾಡಿಕೊಂಡರು ಎಂಬ ಪ್ರಶ್ನೆ ಕಾಡುತ್ತಿದೆ.
ಇಬ್ಬರಲ್ಲಿ ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮತ್ತು ಅವರಿಬ್ಬರೂ ಬೇರೆ ಬೇರೆ ಮಾತಾಡುತ್ತಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಹರಿದು ಬರುತ್ತಿದ್ದ ದೇಣಿಗೆಯಲ್ಲಿ ಭಾರಿ ಕುಸಿತ

ಕಾಂಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ವರೆಗೆ ಸುಮಾರು 54 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಇಂದು ಆ ಪಕ್ಷ ಸೋಲಿನ ಹಾದಿ ಹಿಡಿದಿದೆ. ಪರಿಣಾಮವಾಗಿ ಉದ್ಯಮಿಗಳಿಂದ ಬರುತ್ತಿದ್ದ ದೇಣಿಗೆಯ ಹರಿವು ತೀರಾ ಕುಸಿದಿದೆ. ಸೋಲು ಪಕ್ಷವನ್ನು ಅಧಿಕಾರದಿಂದ ಮಾತ್ರ ದೂರ ಮಾಡುವುದಿಲ್ಲ; ಆರ್ಥಿಕವಾಗಿಯೂ ಅನಾಥವಾಗಿಸುತ್ತದೆ. ಒಂದೇ ವರ್ಷದಲ್ಲಿ ಅದಕ್ಕೆ ಬರುತ್ತಿದ್ದ ದೇಣಿಗೆ ಪ್ರಮಾಣ ಶೇ. 75ರಷ್ಟು ಕುಸಿತವಾಗಿರುವುದು ಇದಕ್ಕೆ ಸಾಕ್ಷಿ.
ಕಾಂಗ್ರೆಸ್ ಈಗ ಶ್ರೀಮಂತ ನಾಯಕರಿರುವ ಬಡ ಪಕ್ಷ!
ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ 2024–25ನೇ ಸಾಲಿನಲ್ಲಿ 517.39 ಕೋಟಿ ದೇಣಿಗೆ ಪಡೆದರೆ, 2025–26ರಲ್ಲಿ 130.69 ಕೋಟಿ ಮಾತ್ರ ಪಡೆದಿದೆ. 2023–24ನೇ ಸಾಲಿನಲ್ಲಿ 281.48 ಕೋಟಿ ಪಡೆದಿತ್ತು (ಇದು ₹20,000ಕ್ಕಿಂತ ಹೆಚ್ಚಿನ ದೇಣಿಗೆಗಳಿಗೆ ಮಾತ್ರ ಸಂಬಂಧಿಸಿದ್ದು).
ಈಗ ಚುನಾವಣೆ ಗೆಲ್ಲಲು ಜನಬಲದ ಜತೆಗೆ ಹಣಬಲವೂ ಅನಿವಾರ್ಯ. ಚುನಾವಣಾ ಆಯೋಗ ನಿಗದಿಪಡಿಸಿರುವ ಲೋಕಸಭಾ ಚುನಾವಣೆಗೆ ₹95 ಲಕ್ಷ ಹಾಗೂ ವಿಧಾನಸಭಾ ಚುನಾವಣೆಗೆ ₹40 ಲಕ್ಷ ವೆಚ್ಚದ ಮಿತಿ ಕಾರ್ಯಕರ್ತರ ಚಹಾ, ಬಿಸ್ಕಿಟ್ಗೂ ಸಾಲುತ್ತಿಲ್ಲ. ಲೋಕಸಭಾ–ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಇಂದು ನೂರಾರು ಕೋಟಿ ರೂಪಾಯಿ ಸುರಿಯುತ್ತಾರೆ. ಈ ಅವಾಂತರಗಳು ಚುನಾವಣಾ ಆಯೋಗಕ್ಕೂ ಗೊತ್ತಿದೆ. ಅರ್ಹ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಬೆವರು ಸುರಿಸುತ್ತಿರುವ ಆಯೋಗದ ಕಣ್ಣಿಗೆ ಇದು ಬಿದ್ದರೂ ಕಣ್ಣು–ಕಿವಿ–ಬಾಯಿ ಮುಚ್ಚಿಕೊಂಡು ಕೂತಿದೆ.
ಸಿಎಂ ಮೇಲೆ ಚಪ್ಪಲಿ ಎಸೆತ: ಸಂಭ್ರಮಿಸುತ್ತಿರುವುದು ಯಾವ ಸಾಧನೆಗಾಗಿ?

ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ತಮ್ಮ ಕುಟುಂಬ ಸಮೇತ ಬಂದ ಡಿ.ಕೆ. ಶಿವಕುಮಾರ್ ದೇವಾಲಯದೊಳಗೆ ಸಲೀಸಾಗಿ ಪ್ರವೇಶಿಸಿ ಗಂಟೆಗಟ್ಟಲೆ ಠಿಕಾಣಿ ಹೂಡಿದ್ದು ಒಳ್ಳೆಯ ನಡೆಯಲ್ಲ. ಗಂಟೆಗಟ್ಟಲೆ ದರ್ಶನಕ್ಕಾಗಿ ಸರದಿಯಲ್ಲಿ ಕಾಯುತ್ತಿದ್ದ ಭಕ್ತರು ಇದರಿಂದ ಆಕ್ರೋಶಗೊಂಡಿದ್ದರಲ್ಲಿ ಒಂದು ನ್ಯಾಯವಿದೆ (ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದ್ದ ಎಲ್ಇಡಿ (LED) ಪರದೆಗೆ ಭಕ್ತರು ಚಪ್ಪಲಿ ತೂರಿದ್ದಾರೆ). ಆದರೆ, ಅಧಿದೇವತೆಯ ಸನ್ನಿಧಿಯಲ್ಲಿ ಮುಖ್ಯಮಂತ್ರಿಯ ಮೇಲೆ ಚಪ್ಪಲಿ ಎಸೆದದ್ದು ಅದು ಯಾವ ಸಂಸ್ಕೃತಿ? ಅದು ಎಂತಹ ಭಕ್ತಿ? ಅದನ್ನು ಜೆಡಿಎಸ್ನ ಕೆಲ ನಾಯಕರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿರುವುದು ಯಾವ ಸಾಧನೆಗಾಗಿ?
ಎರಡು ದಿನಗಳ ಹಿಂದೆ ಸಿದ್ದರಾಮಯ್ಯನವರು ಬಂದಾಗ ಅವರ ವಿರುದ್ಧವೂ ಕುಮಾರಸ್ವಾಮಿಯವರ ಅಭಿಮಾನಿಗಳು ಉತ್ಸುಕರಾಗಿ ಧಿಕ್ಕಾರ ಕೂಗಿದ್ದರು. ಇದು ಜೆಡಿಎಸ್ ಕಾರ್ಯಕರ್ತರ ಹತಾಶೆ ಹಾಗೂ ದ್ವೇಷದ ರಾಜಕೀಯ ಸಂಸ್ಕೃತಿ ಬಯಲು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬದವರೆಲ್ಲರೂ ಅದೇ ದೇವಸ್ಥಾನದೊಳಗೆ ಡಿಕೆಶಿ ಹಾಗೂ ಸಿದ್ದರಾಮಯ್ಯನವರಂತೆ ಸುಲಭವಾಗಿ ಪ್ರವೇಶಿಸಿ ದರ್ಶನ ಪಡೆದಾಗ ಅವರ ವಿರುದ್ಧ ಯಾರೂ ಕೆಮ್ಮಲಿಲ್ಲ ಯಾಕೆ?
ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಅದೀಗ ಜೆಡಿಎಸ್ ಕಾರ್ಯಕರ್ತರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೋ, ಯಾವ ಹಾದಿ ತುಳಿಸುತ್ತದೋ ಎಂಬುದು ಕುತೂಹಲ ಮೂಡಿಸಿದೆ.
ರಾಜಕೀಯದಲ್ಲಿ ಟೀಕೆ, ಆರೋಪ – ಪ್ರತ್ಯಾರೋಪ, ಹೋರಾಟ, ಹಾರಾಟ, ಚೀರಾಟ ಇರಬೇಕು. ಇದ್ದರೆ ರಾಜಕಾರಣಕ್ಕೆ ಒಂದು ಕಳೆ. ಆದರೆ, ಅವು ದ್ವೇಷದ ಹಾದಿ ಹಿಡಿದರೆ ಈ ನಾಡಿನ ಗತಿಯೇನು?
ಪಕ್ಷವನ್ನು ಸ್ಥಾಪಿಸಿ, ಬೆಳೆಸಿದ ನಾಯಕನನ್ನೇ ಮರೆತ ಬಿಜೆಪಿ!

ಇಂದು ಬಿಜೆಪಿ ಪಕ್ಷದ ಭೀಷ್ಮ ಎಂದೇ ಗುರುತಿಸಿಕೊಂಡಿರುವ ಎಲ್.ಕೆ. ಅಡ್ವಾಣಿ ಅವರ ಹುಟ್ಟುಹಬ್ಬ. 99 ವರ್ಷಗಳನ್ನು ಪೂರೈಸಿ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇಂದು ಮಾತ್ರ ಅವರ ಪಕ್ಷ ಅವರನ್ನು ನೆನಪಿಸಿಕೊಳ್ಳುತ್ತದೆ. ಹೊಗಳಿ ಅಟ್ಟಕ್ಕೇರಿಸುತ್ತದೆ. ಉಳಿದ ದಿನಗಳಲ್ಲಿ ಅವರಿಗೂ ಪಕ್ಷಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಬಿಜೆಪಿಯ ಘಟಾನುಘಟಿ ನಾಯಕರು ಅವರ ಮನೆಯ ಕಡೆಗೆ ತಲೆ ಹಾಕುವುದಿಲ್ಲ. ಇಂದು ಅವರನ್ನು ಹೊಗಳುವ ನಾಯಕರ ಸಾಮಾಜಿಕ ಜಾಲತಾಣಗಳ ಹಳೆಯ ಪೋಸ್ಟ್ಗಳನ್ನು ಕೆದಕಿದರೆ ಈ ಸತ್ಯ ಗೊತ್ತಾಗುತ್ತದೆ.
ತಮ್ಮ ತಲೆಯ ಮೇಲೆ ಕಲ್ಲು, ಮಣ್ಣು ಹೊತ್ತು ಬಿಜೆಪಿ ಎಂಬ ಬಲಿಷ್ಠ ಮನೆಯನ್ನು ಕಟ್ಟಿದವರು ಅಡ್ವಾಣಿ. ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದ್ದ ಪಕ್ಷವನ್ನು ಅಧಿಕಾರದ ಗದ್ದುಗೆವರೆಗೆ ತಂದವರು. ರಥಯಾತ್ರೆ ಮೂಲಕ ಬಿಜೆಪಿಯ ರಾಜಕೀಯ ದಿಕ್ಕನ್ನೇ ಬದಲಿಸಿದವರು. ಪಕ್ಷವನ್ನು ಕೋಟ್ಯಂತರ ಜನರ ಪಕ್ಷವಾಗಿ ಬೆಳೆಸಿದವರು. ಆದರೆ, ವಿಪರ್ಯಾಸ ನೋಡಿ. ಅವರು ಕಟ್ಟಿದ ಮನೆಯಲ್ಲೇ ಇಂದು ಅವರಿಗೆ ಜಾಗವಿಲ್ಲ. ಅವರಾಗಿ ಅವರೇ ಕೆಲವು ಸಲ ಪಡಸಾಲೆಯವರೆಗೆ ಬಂದರೂ ಒಳಮನೆಗೆ ಕರೆಯುವವರಿಲ್ಲ.
ಚುನಾವಣಾ ರಾಜಕೀಯದಿಂದ ಅವರನ್ನು ದೂರ ಸರಿಸಿದ್ದು, ಪಕ್ಷದ ನೀತಿ-ನಿರ್ಧಾರಗಳಿಂದ ಅವರನ್ನು ಹೊರಗಿಟ್ಟಿದ್ದು – ಇವೆಲ್ಲಕ್ಕಿಂತ ದೊಡ್ಡ ನೋವು ರಾಮಮಂದಿರ ಉದ್ಘಾಟನೆಯ ದಿನ ಅವರ ಅನುಪಸ್ಥಿತಿ. ರಾಮಮಂದಿರಕ್ಕಾಗಿ ರಥಯಾತ್ರೆ ನಡೆಸಿ, ಅದನ್ನೇ ಬಿಜೆಪಿಯ ರಾಜಕೀಯದ ಪ್ರಮುಖ ಅಸ್ತ್ರವನ್ನಾಗಿ ಮಾಡಿದ ನಾಯಕ ಅಂದು ರಾಮಮಂದಿರದಲ್ಲಿ ಇರಲಿಲ್ಲ. ರಾಮಮಂದಿರದ ಕನಸನ್ನು ರಾಜಕೀಯ ಹೋರಾಟವಾಗಿಸಿದವರೇ ಅದರ ಉದ್ಘಾಟನೆಯ ದಿನ ದೂರ ಉಳಿಯಬೇಕಾದದ್ದು ಎಂತಹ ವಿಪರ್ಯಾಸ! ಇದನ್ನು ಇತಿಹಾಸ ಮರೆಯಲು ಸಾಧ್ಯವೇ?
ಪ್ರಧಾನಿಯಾಗಬೇಕೆಂಬ ಅವರ ಕನಸು ನನಸಾಗಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಅಡ್ವಾಣಿಯವರನ್ನು ರಾಷ್ಟ್ರಪತಿಯಾಗಲು ಬಿಡಲಿಲ್ಲ ಎಂಬ ವಾದವೂ ಇದೆ.
ಈ ಎಲ್ಲದರ ಬಗ್ಗೆ ಅಡ್ವಾಣಿಯವರೇ ಎಂದಾದರೂ ಮಾತನಾಡಬಹುದೆಂದು ದೇಶ ಕಾಯುತ್ತಿದೆ.
ಅವರ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಭಾರತ ರತ್ನ ನೀಡಿ ಗೌರವಿಸಲಾಯಿತು. ಆ ಮೂಲಕ ಅವರ ಅಸಮಾಧಾನ ತಣಿಸುವ ಪ್ರಯತ್ನವೂ ನಡೆಯಿತು. ಆದರೆ, ಈ ಗೌರವದಿಂದ ಅವರ ಮನದ ನೋವು ಕಡಿಮೆಯಾಗಿದೆಯೇ?
ಯಾರಾದರೂ ಈಗ ಅಡ್ವಾಣಿಯವರನ್ನು ಮುಕ್ತವಾಗಿ ಸಂದರ್ಶನ ಮಾಡಿದರೆ, ಅವರ ಮನಸ್ಸಿನಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ನೋವು ಹೊರಬರಬಹುದು. ಬಿಜೆಪಿಯನ್ನು ಕಟ್ಟಿದ ದಿನಗಳು, ಅಧಿಕಾರದಲ್ಲಿದ್ದ ಕಾಲ, ನಂತರ ಅದೇ ಪಕ್ಷದಲ್ಲಿ ಮೂಲೆಗುಂಪಾದ ಸಂದರ್ಭಗಳ ಬಗ್ಗೆ ಅವರು ಮಾತನಾಡಬಹುದು. ಅಷ್ಟೇ ಅಲ್ಲ, ಅವರ ರಥಯಾತ್ರೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ನಡೆದ ಕೋಮು ಸಂಘರ್ಷಗಳಲ್ಲಿ ಬಿದ್ದ ಹೆಣಗಳ ಬಗ್ಗೆ ಇಂದು ಪಶ್ಚಾತ್ತಾಪ ಪಡುತ್ತಾರೆಯೇ ಎಂಬುದನ್ನೂ ತಿಳಿಯಬಹುದು.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕನನ್ನೇ ಇಂದು ಆ ಪಕ್ಷ ಮರೆತಿದೆ. ಅಧಿಕಾರಕ್ಕೆ ತಂದ ನಾಯಕನನ್ನು ಕಡೆಗಣಿಸುವುದು ಎಷ್ಟು ಸರಿ? ವರ್ಷಕ್ಕೊಮ್ಮೆ ಹುಟ್ಟುಹಬ್ಬದಂದು ಹೊಗಳಿ ಅಟ್ಟಕ್ಕೇರಿಸಿದರೆ ಅವರು ಸುರಿಸಿದ ಬೆವರಿಗೆ ನ್ಯಾಯ ಸಿಕ್ಕಂತಾಗುತ್ತದೆಯೇ? ಅಡ್ವಾಣಿಯವರನ್ನು ಅವರ ಪಕ್ಷ ನಡೆಸಿಕೊಂಡ ರೀತಿ ದೇಶದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ.
ಅಂದು ಜಾತಿ ಇದ್ದವರಿಗೆ ಶಿಕ್ಷಣ, ಇಂದು ಹಣ ಇದ್ದವರಿಗ ಶಿಕ್ಷಣ!

ರಾಜ್ಯ ಸರ್ಕಾರ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ನುಂಗಿ ನೀರು ಕುಡಿಯಲು ಮುಂದಾಗಿದೆ. ಜನರ ಕಣ್ಣಿಗೆ ಮಣ್ಣೆರಚಿ, ಸಿಎಸ್ಆರ್ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಆದರೆ, ಅದು ಮಾರಾಟವೆಂದು ಕರೆಯದೆ ದತ್ತು ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಸರ್ಕಾರ ನೇರವಾಗಿ ಶಿಕ್ಷಣ ಖಾಸಗಿಯವರ ಕೈಗೆ ಒಪ್ಪಿಸುತ್ತಿದೆ. ಆದಾಗ್ಯೂ, ಗುಣಮಟ್ಟದ ಶಿಕ್ಷಣ, ಅದು, ಇದು, ಹಾಗೇ, ಹೀಗೇ ಎಂದು ಪುಂಗಿ ಊದುತಿದೆ. ಎಂತಹ ಠಕ್ಕುತನ?
ʻಶಿಕ್ಷಣʼ ಪಡೆಯುವುದು ಮೂಲಭೂತ ಹಕ್ಕು. ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹಿಂದೆ ಸರ್ಕಾರಿ ಶಾಲೆಗಳು ಆರೋಗ್ಯಪೂರ್ಣವಾಗಿದ್ದವು. ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳಾಗಿದ್ದವು. ಆದರೆ, ಇಂದು ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ರೋಗಪಿಡಿತವಾಗಿವೆ. ಸರಿಯಾದ ಕಟ್ಟಡವಿಲ್ಲ. ಕಟ್ಟಡವಿದ್ದರೆ ಶುದ್ಧ ಕುಡಿಯುವ ನೀರಿಲ್ಲ. ನೀರಿದ್ದರೆ ಶೌಚಾಲಯವಿಲ್ಲ. ಶೌಚಾಲಯವಿದ್ದರೆ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ಗುಣಮಟ್ಟದ ಶಿಕ್ಷಣವಿಲ್ಲ. ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು, ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ರೋಗವನ್ನು ಉಲ್ಬಣಗೊಳಿಸಿದ್ದಾರೆ ವಿನಾ ರೋಗಕ್ಕೆ ಔಷಧಿ ಹಾಕಿಲ್ಲ.
ಹಿಂದೆ ಜಾತಿ ಇದ್ದವರಿಗೆ (ಮೇಲುಜಾತಿಯವರಿಗೆ ಶಿಕ್ಷಣ) ಮಾತ್ರ ಶಿಕ್ಷಣ ಪಡೆಯಲು ಅವಕಾಶವಿತ್ತು. ಈಗ ಹಣವಿದ್ದವರು ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯುವ ವ್ಯವಸ್ಥೆ ನಿರ್ಮಾಣವಾಗಿದೆ. ಗಲ್ಲಿಗೊಂದರಂತೆ ನಾಯಿಕೋಡೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳು ಎಲ್ಕೆಜಿ, ಯುಕೆಜಿಗೆ ಎರಡು ಲಕ್ಷದಿಂದ ಹಿಡಿದು ಐದಾರು ಲಕ್ಷದವರೆಗೆ ಪಾಲಕರಿಂದ ಮನಬಂದಂತೆ ಫೀಸು ವಸೂಲಿ ಮಾಡುತ್ತಿವೆ. ವಿಧಾನಸೌಧದ ಮೂರನೆಯ ಮಹಡಿಯಲ್ಲಿ ಕೂತವರು ಇದಕ್ಕೆ ಮೂಗುದಾರ ಹಾಕಬೇಕು. ಈ ನಾಡಿನ ದುರಂತವೆಂದರೆ ಮೂರನೆಯ ಮಹಡಿಯ ಮೆಟ್ಟಿಲು ಹತ್ತುವವರಲ್ಲಿ ಬಹುತೇಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಮ್ರಾಜ್ಯದ ಒಡೆಯರು. ಪರಿಣಾಮವಾಗಿ ಇಂದು ಶಿಕ್ಷಣ ಎಂಬುದು ಒಂದು ದೊಡ್ಡ ಉದ್ಯಮವಾಗಿ, ಮಾಫಿಯಾವಾಗಿ ಬೆಳೆದಿದೆ.
ಈಗಿನ ಸರ್ಕಾರಗಳ ದೃಷ್ಟಿಯಲ್ಲಿ ಜನರು ಪ್ರಜೆಗಳಲ್ಲ, ಗ್ರಾಹಕರು.
ಹಣ ನೀಡಿ ಶಿಕ್ಷಣ ಪಡೆಯಬೇಕು. ನಿಮ್ಮ ಬಳಿ ಹಣವಿದ್ದರೆ ಮಾತ್ರ ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ. ಇಲ್ಲವೆಂದರೆ ಇಲ್ಲ.
ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ನೀರಿನಂತೆ ಚೆಲ್ಲಿ, ಅಧಿಕಾರಕ್ಕೆ ಬರುವ ರಾಜಕಾರಣಿಗಳಿಗೆ ನಾಡಿನ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾಳಜಿಯಾಗಲಿ, ಯೋಗ್ಯತೆಯಾಗಲಿ ಇಲ್ಲ. ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದೊಂದು ದಿನ ಇವರು ವಿಧಾನಸೌಧ ಕೂಡಾ ಮಾರಾಟ ಮಾಡಬಹುದು ಅಥವಾ ಬಾಡಿಗೆಗೆ ನೀಡಬಹುದು. ಖಾಸಗಿ ಏಜೆನ್ಸಿಗಳಿಗೆ ರಾಜ್ಯದ ಆಡಳಿತವನ್ನೂ ಗುತ್ತಿಗೆಗೆ ನೀಡಬಹುದು.
ಶಿಕ್ಷಣ ಎಂಬುದು ದೇಶದ ಹೃದಯ ಬಡಿತ ಇದ್ದಂತೆ. ಹೃದಯ ಬಡಿತ ನಿಂತರೆ ಮನುಷ್ಯ ಕ್ಷಣಕಾಲವೂ ಬದುಕುಳಿಯುವುದಿಲ್ಲ. ಶಿಕ್ಷಣವನ್ನು ಮಾರಾಟದ ವಸ್ತುವಾಗಿಸಿದ ರಾಜ್ಯವನ್ನು ರಾಜ್ಯವೆಂದು, ದೇಶವನ್ನು ದೇಶವೆಂದು ಕರೆಯಲು ಸಾಧ್ಯವೇ?


