SUBSCRIBE

ದ ಪಾಲಿಟಿಕ್

ಕುಮಾರಸ್ವಾಮಿ ರಾಕೇಶ್‌ ಶೆಟ್ಟಿ ವಿರುದ್ಧ ದೂರು ಏಕೆ ನೀಡುತ್ತಿಲ್ಲ?

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮದೇ ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್‌ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಣ್ತುಂಬ ನಿದ್ದೆ ಮಾಡಿಲ್ಲ ಅನಿಸುತ್ತಿದೆ. ದಿನಬೆಳಗಾದರೆ ಮಾಧ್ಯಮದವರ ಮುಂದೆ ಒಂದು ಫೈಲ್‌ ಹಿಡಿದು ಕೂತಿರುತ್ತಿದ್ದಾರೆ.

ಮೊದಲು ನೈಸ್‌ ಹಗರಣದ ಮೇಲೆ ಮುಗಿಬಿದ್ದಿದ್ದರು. ಮರುದಿನ ಬಿಡದಿ ಟೌನ್‌ಶಿಪ್‌ ಹಾಗೂ ಕೆಪಿಎಸ್‌ಸಿ ಹಗರಣದ ಕಡೆ ತಿರುಗಿದರು. ಈಗ ಅವೆಲ್ಲವೂ ಮರೆತು ಸಿದ್ದರಾಮಯ್ಯನವರ ವಿರುದ್ಧ ನಡೆದಿದೆ ಎನ್ನಲಾಗುತ್ತಿರುವ ಸ್ಟಿಂಗ್‌ ಕಾರ್ಯಾಚರಣೆಯ ಹಿಂದೆ ಬಿದ್ದಿದ್ದಾರೆ. ಇಂದು ಈ ಸ್ಟಿಂಗ್ ವಿಚಾರ ಮುನ್ನೆಲೆಗೆ ಬಂದು, ದೇಶದ ಗಮನ ಸೆಳೆಯಲು ಕುಮಾರಸ್ವಾಮಿ ಅವರೇ ಕಾರಣಕರ್ತರು ಎನ್ನುವುದು ನಿರ್ವಿವಾದ.

ಕುಮಾರಸ್ವಾಮಿ ಅವರನ್ನು ಬಹುತೇಕರು ʻಹಿಟ್‌ ಅಂಡ್‌ ರನ್ ಗಿರಾಕಿʼ  ಎನ್ನುತ್ತಾರೆ. ಆದರೆ, ಸ್ಟಿಂಗ್‌ ವಿಚಾರದಲ್ಲಿ ಅದನ್ನು ಸುಳ್ಳು ಮಾಡಲು ಅವರು ಹೊರಟಿದ್ದಾರೆ.

ಮುಖ್ಯಮಂತ್ರಿ ಡಿಕೆಶಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕೃಪಾ ಆಳ್ವಾ ಮತ್ತು ರಾಕೇಶ್‌ ಶೆಟ್ಟಿ ಅವರನ್ನು ಸ್ಟಿಂಗ್‌ ವಿಚಾರದಲ್ಲಿ ಎಳೆದು ತಂದು ಕಟಕಟೆಯಲ್ಲಿ ನಿಲ್ಲಿಸಲು ಯಶಸ್ವಿಯಾಗಿದ್ದಾರೆ. ಅವರ ಮಾತಿನ ಪ್ರವಾಹಕ್ಕೆ ಸಾಕ್ಷಾತ್‌ ಡಿಕೆಶಿ ಅವರೇ ಮೌನಕ್ಕೆ ಶರಣಾಗಿದ್ದಾರೆ. ಗೃಹ ಸಚಿವರು ಆಗಾಗ್ಗೆ ಟಕ್ಕರ್‌ ನೀಡುತ್ತಿದ್ದಾರೆ. ಕೃಪಾ ಆಳ್ವಾ ಅವರು ಕ್ಯಾಮೆರಾ ಕಣ್ಣಿಗೂ ಬೀಳದೆ ಅದೆಲ್ಲೋ ಕಾಣೆಯಾಗಿದ್ದಾರೆ.

ಆದರೆ, ರಾಕೇಶ್‌ ಶೆಟ್ಟಿ ಮಾತ್ರ ತಮ್ಮ ಟಿವಿ ಸ್ಟುಡಿಯೊದಲ್ಲಿ ಕೂತು ಕುಮಾರಸ್ವಾಮಿ ಅವರ ಜನ್ಮ ಜಾಲಾಡುತ್ತಿದ್ದಾರೆ. ಒಂದಲ್ಲ, ಎರಡಲ್ಲ ವಾರಗಟ್ಟಲೆ ಏಕವಚನದಲ್ಲೇ ದಾಳಿ ಮಾಡುತ್ತಿದ್ದಾರೆ. ಮುಂದುವರಿದು ಛೀ, ಥೂ ಎಂದು ಒಂದೇ ಸಮನೆ ಉಗಿದು ಉಪ್ಪು ಹಾಕುತ್ತಿದ್ದಾರೆ. ಆದಾಗ್ಯೂ ಕುಮಾರಸ್ವಾಮಿ ಅವರು ಶೆಟ್ಟಿ ವಿರುದ್ಧ ಒಂದು ದೂರು ಸಲ್ಲಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.

ಅಶೋಕ ಖೇಣಿ, ಡಿಕೆಶಿ, ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆ, ಜಮೀರ್ ಅಹ್ಮದ್‌ ಖಾನ್… ಹೀಗೆ ಅನೇಕ ಘಟಾನುಘಟಿಗಳ ಬೆವರಿಳಿಸಿದ ಕುಮಾರಸ್ವಾಮಿ ಅವರು ಈ ರಾಕೇಶ್‌ ಶೆಟ್ಟಿ ವಿರುದ್ಧ ಒಂದು ದೂರು ಸಲ್ಲಿಸಲು ದಮ್ಮು – ತಾಕತ್ತು ಇಲ್ಲವೇ ಎಂದು ಜನರು ಪಿಸುಮಾತಿನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ಪ್ರಿಯಾಂಕ್‌ ಖರ್ಗೆ ಅವರ ಮೇಲೆ ತೊಳೆರಿಸಿ ಜಗಳಕ್ಕೆ ಬರುವ ಕುಮಾರಸ್ವಾಮಿ ಅವರು ರಾಕೇಶ್‌ ಶೆಟ್ಟಿ ವಿರುದ್ಧ ಕಾನೂನು ಹೋರಾಟ ಮಾಡಲು ಸಾವಿರ ಬಾರಿ ಯೋಚಿಸುತ್ತಿದ್ದಾರೆ ಎಂದು ಎನ್ನುವವರು ಇದ್ದಾರೆ.

ದೂರು ಸಲ್ಲಿಸದಿರಲು ಎರಡೇ ಕಾರಣ ಇರಬಹುದು. ಒಂದು, ರಾಕೇಶ್‌ ಶೆಟ್ಟಿ ಮಾತಾಡುತ್ತಿರುವುದೆಲ್ಲ ನಿಜ ಇರಬಹುದು. ಇಲ್ಲವೇ, ರಾಕೇಶ್‌ ಶೆಟ್ಟಿ ಕುಮಾರಸ್ವಾಮಿ ಅವರ ಮೇಲೂ ಸ್ಟಿಂಗ್‌ ಮಾಡಿ, ತಮ್ಮ ಕಪಾಟಿನಲ್ಲಿ ಒಂದು ಸಿಡಿ ಇಟ್ಟುಕೊಂಡಿರಬಹುದು ಎಂದೂ ಎನ್ನುವವರು ಇದ್ದಾರೆ.

ರಾಕೇಶ್‌ ಶೆಟ್ಟಿ ವಿರುದ್ಧ ದೂರು ಸಲ್ಲಿಸದಿರುವುದು ಸಾರ್ವಜನಿಕರಲ್ಲಿ ಮಾತ್ರವಲ್ಲದೆ, ಅವರ ಕಾರ್ಯಕರ್ತರಲ್ಲೂ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಈ ತನಿಖೆ ಸಿದ್ದರಾಮಯ್ಯನವರ ಮೇಲಿನ ಆಪಾದನೆ ತೊಳೆಯಲೋ, ಹೆಚ್ಚಿಸಲೋ?

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ಸಿದ್ದರಾಮಯ್ಯನವರ ವಿರುದ್ಧ ನಡೆದಿದೆ ಎನ್ನಲಾಗುತ್ತಿರುವ ಸ್ಟಿಂಗ್‌ ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸುತ್ತಿರುವುದು ಸಿದ್ದರಾಮಯ್ಯನವರ ಮೇಲಿನ ಆಪಾದನೆಯನ್ನು ತೊಳೆಯಲೋ ಅಥವಾ ಹೆಚ್ಚಿಸಲೋ? ಎಂಬ ಪ್ರಶ್ನೆ ಚರ್ಚೆ ಹುಟ್ಟು ಹಾಕಿದೆ. ತನಿಖೆ ಎಲ್ಲಿಂದ ಆರಂಭಿಸಿದೆಯೋ, ಎಲ್ಲೊಲ್ಲೋ ಸುತ್ತು ಹಾಕಿ ಮತ್ತೇ ಅಲ್ಲಿಗೆ ಬಂದು ನಿಂತಿದೆ. ಇದು ಕಾಟಾಚಾರದ ತನಿಖೆಯಾಗಿದೆ ಎಂದು ಅರಿಯದಷ್ಟು ಜನರೇನು ಹೆಬ್ಬೆಟ್ಟುಗಿರಾಕಿಗಳಲ್ಲ.

ಸಿದ್ದರಾಮಯ್ಯನವರು ನನ್ನ ವಿರುದ್ಧ ಸ್ಟಿಂಗ್‌ ಯಾರು ಮಾಡಿದ್ದಾರೆ? ಅವರ ಹಿಂದೆ ಯಾರಿದ್ದಾರೆ? ನನ್ನನ್ನು ಯಾಕೆ ಟಾರ್ಗೆಟ್‌ ಮಾಡಿದ್ದಾರೆ? ಎಂದು ಗೊತ್ತಾಗಬೇಕೆಂದು ಪದೇ ಪದೇ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಮೂರು ಪ್ರಶ್ನೆಗಳನ್ನು ಎತ್ತಿಕೊಂಡು ತನಿಖೆ ನಡೆಸಬೇಕಾದ ಸರ್ಕಾರ, ಈ ಮೂರು ಪ್ರಶ್ನೆಗಳನ್ನು ಬಿಟ್ಟು ಉಳಿದೆಲ್ಲ ಮಗ್ಗಲಿನಿಂದ ತನಿಖೆ ಮಾಡಿ ಮುಗಿಸಿದೆ.

ಮಾಡಬೇಕಾದ ತನಿಖೆ ಮಾಡದೆ ತರಾತುರಿಯಲ್ಲಿ ತನಿಖೆ ಮುಗಿಸಿ, ಸಿದ್ದರಾಮಯ್ಯನವರು ಏನೇನು ತಪ್ಪು ಮಾಡಿಲ್ಲವೆಂದು ಸಾರಿ, ಅವರಿಗೆ ಕ್ಲೀನ್ ಚಿಟ್‌ ನೀಡಿದೆ. ಆದಾಗ್ಯೂ, ನ್ಯಾಯಯುತವಾಗಿ ತನಿಖೆ ಮಾಡಿಲ್ಲವೆಂದು  ಸಿದ್ದರಾಮಯ್ಯನವರು ಯಾಕೆ ಸರ್ಕಾರದ ವಿರುದ್ಧ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಎದುರಿಗೆ ಆಕ್ರೋಶ ಹೊರಹಾಕಿದ್ದಾರೆ? ರಾಹುಲ್‌ ಗಾಂಧಿ ಅವರನ್ನು ಮಧ್ಯಪ್ರವೇಶಿಸಿ ಎಂದು ಯಾಕೆ ಮನವಿ ಮಾಡಿದ್ದಾರೆ? ಆ ವಿಡಿಯೊ ದೊಡ್ಡ ಬೋಗಸ್‌ ಮತ್ತು ಅದೊಂದು ಕಟ್ಟುಕಥೆ ಅಂದಮೇಲೆ ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಯಾಕೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದು? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗುತ್ತದೆ.

ಸಿದ್ದರಾಮಯ್ಯನವರು ಮಾತ್ರವಲ್ಲ, ಅವರ ಬಹುತೇಕ ಬೆಂಬಲಿಗರು ಕೂಡಾ ಈ ತನಿಖೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಆ ಕಡೆ ಪೊಲೀಸ್‌ ಕಮಿಷನರ್‌ ಅವರು ಜೆಡಿಎಸ್‌ ಕಡೆಗೆ ಬೆರಳು ತೋರಿಸುತ್ತಿದ್ದರೆ, ಅದೇ ಸಮಯದಲ್ಲಿ ಈ ಕಡೆ ಸಾಕ್ಷಾತ್‌ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ʻಸ್ಟಿಂಗ್‌ ಆಪರೇಷನ್‌ ಸೂತ್ರಧಾರರ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ಅಸಹ್ಯವಾದ ಸ್ಟಿಂಗ್‌ ಕೆಲಸ ಮಾಡಿದ್ದು ಯಾರು ಎಂಬುದು ಗೊತ್ತಾಗಬೇಕು. ಮೊದಲು ಸೂತ್ರಧಾರರನ್ನು ಪತ್ತೆ ಹಚ್ಚಬೇಕು. ಪಾತ್ರಧಾರಿಗಳು ಬಹಳ ಜನ ಇರುತ್ತಾರೆʼ ಎಂದು ಹೇಳುವ ಮೂಲಕ ಸರ್ಕಾರ ನ್ಯಾಯಯುತವಾಗಿ ತನಿಖೆ ಮಾಡಿಲ್ಲವೆಂದು ಬಹಿರಂಗವಾಗಿ ಹೇಳುತ್ತಿದ್ದಾರೆ.

ಸರ್ಕಾರ ಸ್ಟಿಂಗ್‌ ಮಾಡಿದವರನ್ನು ಬಿಂದಾಸ್‌ ಆಗಿ ತಿರುಗಾಡಲು ಬಿಟ್ಟು ವಿಡಿಯೊ ಅಪ್‌ಲೋಡ್‌ ಮಾಡಿದವರ ಹಾಗೂ ಹಂಚಿದವರ ಹಿಂದೆ ಮಾತ್ರ ಯಾಕೆ ಬಿದ್ದಿದೆ? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದವರಾರು ಹಾಗೂ ಅದನ್ನು ಹಂಚಿದವರಾರು ಎಂದು ಪತ್ತೆ ಹಚ್ಚಿ, ಬಹಿರಂಗಪಡಿಸಿದೆ, ಆದರೆ, ಸ್ಟಿಂಗ್‌ ಮಾಡಿದವರು ಯಾರು? ಏಕೆ ಮಾಡಿದ್ದಾರೆ? ಅವರ ಹಿಂದೆ ಯಾರಿದ್ದಾರೆ? ಎಂದು ಏಕೆ ತನಿಖೆ ಮಾಡಿ ಬಹಿರಂಗ ಪಡಿಸುತ್ತಿಲ್ಲ? ಎಂಬ ಪ್ರಶ್ನೆ ತಲೆ ತಿನ್ನುತ್ತಿವೆ.

ಜೆಡಿಎಸ್‌ ಪಕ್ಷದ ವಾರ್‌ ರೂಂ ಹುಡುಗರನ್ನು ಅರೆಸ್ಟ್‌ ಮಾಡುವ ಮುನ್ನ ಆ ವಿಡಿಯೊ ಮಾಡಿದವರು ಯಾರು ಹಾಗೂ ಅದರ ಹಿಂದೆ ಯಾರಿದ್ದಾರೆ ಎಂಬ ಮೂಲ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.

ಸಾಕ್ಷಾತ್‌ ಸಿದ್ದರಾಮಯ್ಯನವರೇ ರಾಕೇಶ್‌ ಶೆಟ್ಟಿ ಹಾಗೂ ಕೃಪಾ ಆಳ್ವಾ ಅವರು ಷಡ್ಯಂತ್ರ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಆದರೂ ಅವರನ್ನು  ಯಾಕೆ ಬಂಧಿಸುವ ಉಸಾಬರಿಗೆ ಹೋಗಿಲ್ಲ? ಅವರನ್ನು ಶಾಸ್ತ್ರಕ್ಕಾಗಿ ತನಿಖೆ ಮಾಡಿ ಮುಗಿಸಿದ್ದು ಯಾಕೆ? ಅವರು ಇಷ್ಟು ಸಲೀಸಾಗಿ ನಿರೀಕ್ಷಣಾ ಜಾಮೀನು ಹೇಗೆ ಪಡೆದರು? ಕೃಪಾ ಆಳ್ವಾ ವಿದೇಶಕ್ಕೆ ಪರಾರಿಯಾಗದಂತೆ ಯಾಕೆ ತಡೆಯಲಿಲ್ಲ? ರಾಕೇಶ್‌ ಶೆಟ್ಟಿ ಅವರ ಮನೆ ಹಾಗೂ ಕಚೇರಿ ಮೇಲೆ ಮೊದಲೇ ದಾಳಿ ಮಾಡದೆ, ಈಗ ಯಾಕೆ ಮಾಡಿದ್ದು? (ಸಿದ್ದರಾಮಯ್ಯನವರು ರಾಹುಲ್‌ ಗಾಂಧಿಯವರ ಭೇಟಿಗಾಗಿ ದೆಹಲಿಗೆ ಹೋದ ಸಂದರ್ಭದಲ್ಲಿ) ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಮುಖ್ಯವಾಗಿ ಕೃಪಾ ಆಳ್ವಾ ಅವರಿಗೂ, ಕೇರಳದಲ್ಲಿರುವ ಈ ಕಟ್ಟುಕಥೆಯ ಚಿತ್ರದ ನಾಯಕಿಗೂ ಇರುವ ಸಂಬಂಧವೇನು? ಆಳ್ವಾ ಅವರು ಮಕ್ಕಳ ಆಯೋಗದ ಅಧ್ಯಕ್ಷೆಯಾಗಿದ್ದಾಗ ಆ ನಾಯಕಿ ಇ-ಮೇಲ್‌ ಮೂಲಕ ದೂರು ಸಲ್ಲಿಸಿದರು ಎಂಬ ಹೊಸ ಸುದ್ದಿ ಹರಿದಾಡುತ್ತಿದೆ. ಈಗ ಆ ಇ-ಮೇಲ್‌ ಎಲ್ಲಿದೆ? ಮೇಲ್‌ ಬಂದಿದ್ದು ನಿಜವೋ, ಸುಳ್ಳೋ? ನಿಜವೆಂದಾದರೆ, ಆಗ ಇದನ್ನು ಏಕೆ ಬಹಿರಂಗಪಡಿಸಿಲ್ಲ? ಸುಳ್ಳು ಎಂದಾದರೆ 2023ರಲ್ಲಿ ಯಾಕೆ ಸ್ಟಿಂಗ್‌ ಮಾಡಿದ್ದು? (ಅದು 2011ರಲ್ಲಿ ನಡೆದ ಘಟನೆ ಬಗ್ಗೆ) ಈ ರಾಕೇಶ್‌ ಶೆಟ್ಟಿ ಹಾಗೂ ಕೃಪಾ ಆಳ್ವಾ ಅವರೇ ಯಾಕೆ ಸ್ಟಿಂಗ್‌ ಮಾಡಿದ್ದಾರೆ? ರಾಕೇಶ್‌ ಶೆಟ್ಟಿ ಮೇಲೆ ಈ ಸರ್ಕಾರಕ್ಕೆ ಏಕೆ ಇಷ್ಟು ಪ್ರೀತಿ ಇದೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ಸಿದ್ದರಾಮಯ್ಯನವರ ವರ್ಚಸ್ಸಿಗೆ ಹಾನಿ ಮಾಡುತ್ತಿರುವ ಈ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆ ಮಾಡಬೇಕಾದ ಸರ್ಕಾರವೇ ತನಿಖೆ ಮಾಡದೆ ಅವರ ಮೇಲಿನ ಆಪಾದನೆಯನ್ನು ಹೆಚ್ಚಿಸುತ್ತಿದೆ.

ಈ ಕುಟಿಲ ನೀತಿಯನ್ನು ಅರಿತೇ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸಿದ್ದರಾಮಯ್ಯ ಮಾತಿಗೆ ರಾಹುಲ್‌ ಗಾಂಧಿ ತಬ್ಬಿಬ್ಬು…

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ನಿನ್ನೆ ಸೋಮವಾರ ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ. ಸಿ. ವೇಣುಗೋಪಾಲ್‌ ಹಾಗೂ ಪಕ್ಷದ ವರಿಷ್ಠ ರಾಹುಲ್‌ ಗಾಂಧಿಯನ್ನು ಭೇಟಿಯಾಗಿ ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವಿರುದ್ಧ ಆಕ್ರೋಶ ಹೊರಹಾಕಿರುವ ಕುರಿತು ತರಹೇವಾರಿ ಚರ್ಚೆ ಹುಟ್ಟುಹಾಕಿದೆ.

ರಾಹುಲ್‌ ಗಾಂಧಿಯವರ ಮುಂದೆ ʻನಿಮ್ಮ ಮಾತಿಗೆ ಬೆಲೆಕೊಟ್ಟು ನಾನು ಸಿಎಂ ಕುರ್ಚಿ ಬಿಟ್ಟುಕೊಟ್ಟೆ. ನಮ್ಮ ಪಕ್ಷದವರೇ ಷಡ್ಯಂತ್ರ ಮಾಡಿ ನನ್ನ ರಾಜಕೀಯ ಬದುಕಿಗೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ತನಿಖೆ ಎಲ್ಲಿಂದ ಆರಂಭವಾಗಿದೆಯೋ ಅಲ್ಲೇ ಬಂದು ನಿಂತಿದೆ. ಸ್ಟಿಂಗ್‌ ಯಾರು ಮಾಡಿದ್ದಾರೆ? ಅವರ ಹಿಂದೆ ಯಾರಿದ್ದಾರೆ? ಎಂದು ಬಹಿರಂಗಪಡಿಸುವ ಇರಾದೆ ಸರ್ಕಾರಕ್ಕಿಲ್ಲ. ಇದರ ಹಿಂದೆ ಬೇರಾರೂ ಅಲ್ಲ, ಡಿ.ಕೆ. ಶಿವಕುಮಾರ್‌ ಅವರೇ ಇದ್ದಾರೆ. ಅದಕ್ಕೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ತಾವು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುವೆʼ ಎಂದು ತುಸು ಕೋಪದಿಂದಲೇ ಮಾತಾಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಸಿದ್ದರಾಮಯ್ಯನವರ ಈ ಮಾತುಗಳಿಂದ ರಾಹುಲ್‌ ಗಾಂಧಿ ತಬ್ಬಿಬ್ಬಾಗಿ, ʻತಮ್ಮ ಗೌರವಕ್ಕೆ ಧಕ್ಕೆಯಾಗಲು ನಮ್ಮ ಪಕ್ಷ ಬಿಡುವುದಿಲ್ಲʼ ಎಂದು ಆಶ್ವಾಸನೆ ನೀಡಿ, ಅವರನ್ನು ಸಮಾಧಾನಪಡಿಸಲು ಯತ್ನಿಸಿದರು ಎಂದು ಮೂಲಗಳು ಹೇಳುತ್ತಿವೆ.

ಆ ಕಡೆ ಸಿದ್ದರಾಮಯ್ಯನವರು ದೆಹಲಿಗೆ ಹೋದರೆ, ಈ ಕಡೆ ರಾಕೇಶ್‌ ಶೆಟ್ಟಿ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು ಕುತೂಹಲ ಮೂಡಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ರಾಹುಲ್‌ ಗಾಂಧಿ ಹೋರಾಟಕ್ಕೆ ಹರಿದುಬಂದ ಜೆನ್‌ – ಝೀಗಳು…

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ನಿನ್ನೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ʻಮತ ಬಚಾವೋʼ, ʻದೇಶ ಬಚಾವೋʼ ಹೋರಾಟದಲ್ಲಿ ಭಾರಿ ಪ್ರಮಾಣದಲ್ಲಿ ಜನರು ಭಾಗವಹಿಸಿದರು. ಈ ಹೋರಾಟದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಮತ್ತು ನಾಯಕರು ಮಾತ್ರ ಇರಲಿಲ್ಲ. ಸಾವಿರಾರು ಜೆನ್‌ ಝೀಗಳೂ ಪಾಲ್ಗೊಂಡು, ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಘೋಷಣೆಗಳುಳ್ಳ ನಾಮಫಲಕಗಳು ಹಿಡಿದು ರಾಹುಲ್‌ ಹೋರಾಟದ ಕಳೆ ಹೆಚ್ಚಿಸಿದರು.

ಈ ಹೋರಾಟಕ್ಕೆ ಸಿಜೆಪಿ (ಕಾಕ್ರೋಜ್‌ ಜನತಾ ಪಾರ್ಟಿ) ನೈತಿಕ ಬೆಂಬಲವಷ್ಟೇ ಘೋಷಿಸಿತ್ತು. ಅದರ ಮುಂಚೂಣಿ ನಾಯಕರಾದ ಅಭಿಜೀತ್‌ ದೀಪ್ಕೆ, ಸೌರವ್‌ ದಾಸ್‌, ಅಶುತೋಷ್‌ ರಾಂಕಾ ಅವರು ಹೋರಾಟದಲ್ಲಿ ಪಾಲ್ಗೊಳ್ಳದೆ ಅಂತರ ಕಾಪಾಡಿಕೊಂಡಿದ್ದರು. ಇದರಿಂದಾಗಿ ಜೆನ್‌ – ಝೀಗಳು ರಾಮಲೀಲಾ ಮೈದಾನದ ಕಡೆಗೆ ಬರುತ್ತಾರೋ ಇಲ್ಲವೋ ಎಂದು ಕುತೂಹಲ ಮೂಡಿತ್ತು. ಆದರೆ, ಜೆನ್‌ – ಝೀಗಳು ಪಾಲ್ಗೊಳ್ಳುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.

ರಾಹುಲ್‌ ಗಾಂಧಿಯ ವರ್ಚಸ್ಸು ಹಾಗೂ ಜೆನ್‌ – ಝೀ ಪೀಳಿಗೆಯ ಐಕಾನ್‌ ನೇಹಾ ಬೋರಾ ಹೋರಾಟದ ಮುಂಚೂಣಿಯಲ್ಲಿದ್ದ ಕಾರಣಕ್ಕೆ ಯುವಜನತೆ ರಾಮಲೀಲಾ ಮೈದಾನಕ್ಕೆ ಹರಿದು ಬಂದರು ಎಂದು ವಿಶ್ಲೇಷಿಸಲಾಗುತ್ತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಬಿಜೆಪಿಯ ಬಣ್ಣ ಬಯಲು ಮಾಡಿದ ಮತದಾರರ ಅಂತಿಮ ಪಟ್ಟಿ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಮುಖ್ಯ ಚುನಾವಣಾ ಆಯುಕ್ತರು ಆಯುಕ್ತರಾಗಿ ಕೆಲಸ ಮಾಡದೆ, ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆನ್‌ – ಝೀ ಪಿಳಿಗೆ ಹಾಗೂ ಬಿಜೆಪಿಯೇತರ ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಡುತ್ತಿವೆ. ಜನರ ಪ್ರಶ್ನೆಗಳಿಗೆ ಚುನಾವಣಾ ಮುಖ್ಯ ಆಯಕ್ತರು ಉತ್ತರಿಸಲು ತಿಣುಗಾಡುತ್ತಿದ್ದಾರೆ.

ಮರುದಿನ ಬಿಜೆಪಿ ನಾಯಕರು ಓಡೋಡಿ ಬಂದು ಅವರ ಪರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಲ್ಲಿ ಬಿಜೆಪಿ ವಕ್ತಾರ ಗ್ಯಾನೇಶ್ ಕುಮಾರ್‌ ಅವರೋ ಅಥವಾ ಗ್ಯಾನೇಶ್‌ ಕುಮಾರ್‌ ವಕ್ತಾರ ಬಿಜೆಪಿಯೋ ಎಂಬುದು ಜನರಿಗೆ ಗೊಂದಲ ಹುಟ್ಟು ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಶತಾಯಗತಾಯ ಹೋರಾಟವನ್ನು ಮುಗಿಸಲು ಸುಪಾರಿ ಪಡೆವರಂತೆ ತಮ್ಮದೇ ದೇಶದ ತಮ್ಮದೇ ಪ್ರಜೆಗಳ ಮೇಲೆ ತರಹೇವಾರಿ ಪ್ರಯೋಗಗಳು ಮಾಡುತ್ತಿದ್ದಾರೆ. ಅದಾಗ್ಯೂ ಹೋರಾಟ ಮೇಲಗೈ ಸಾಧಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ಕಟಕಟೆಯಲ್ಲಿ ತಂದು ನಿಲ್ಲಿಸಲು ಯಶ್ವಸಿಯಾಗಿದೆ.

ಬಿಜೆಪಿ ಕಾರ್ಯಕರ್ತರು ಹಾಗೂ ಸಮರ್ಥಕರು ಎಸ್‌ಐಆರ್‌ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಹಚ್ಚಿ ಅವರನ್ನು ದೇಶದಿಂದ ಹೊರಹಾಕಲು ಎಸ್‌ಐಆರ್‌ ಮಾಡುತ್ತಿದ್ದಾರೆ ಎಂದು ಪುಂಗಿ ಊದಿದರು. ಆದರೆ, ರಾಜ್ಯದಾದ್ಯಂತ ಬಾಂಗ್ಲಾದೇಶದ ಒಬ್ಬ ಪ್ರಜೆಯಷ್ಟೇ ಪತ್ತೆಯಾಗಿದ್ದಾನೆ. ಇದು ಬಿಜೆಪಿ ಕಾರ್ಯಕರ್ತರ ಹುಸಿ ಮಾತು ಬಯಲು ಮಾಡಿದೆ.

ಇಡೀ ಪ್ರಕ್ರಿಯೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಒಟ್ಟು 771 ವಿದೇಶಿ ಪ್ರಜೆಗಳು  ಪತ್ತೆಯಾಗಿದ್ದಾರೆ. ಇದರಲ್ಲಿ ನೇಪಾಳದ ಪ್ರಜೆಗಳೇ 688 ಇದ್ದಾರೆ.  580 ವಿದೇಸಿ ಪ್ರಜೆಗಳು ಬೆಂಗಳೂರು ಉತ್ತರ ಚುನಾವಣಾ ಕ್ಷೇತ್ರವೊಂದರಲ್ಲೇ ವಾಸವಾಗಿದ್ದಾರೆ. ಮತ್ತೇ ಕೆಲವು ಕಡೆ ಕೆನಡಾ, ಆಸ್ಟ್ರೇಲಿಯಾ, ಅಮೇರಿಕಾ, ರಷ್ಯಾದ ಪ್ರಜೆಗಳೂ ಪತ್ತೆಯಾಗಿದ್ದಾರೆ. ಒಬ್ಬ ಬಾಂಗ್ಲಾದೇಶದ ಪ್ರಜೆಯನ್ನು ಪತ್ತೇ ಹಚ್ಚಲು 78.53 ಲಕ್ಷ ಅರ್ಹ ಮತದಾರರ ಹೆಸರು ಅಳಿಸಿಹಾಕಲಾಗಿದೆ.

ದೇಶದಲ್ಲಿ ಹತ್ತಾರು ಕೋಟಿ ಮತದಾರರ ಹೆಸರನ್ನು ರಾತ್ರಿಬೆಳಗಾಗುವುದರೊಳಗೆ ಅಳಿಸಿಹಾಕಲಾಗಿದೆ. ಇದೊಂದು ಪ್ರಜಾಪ್ರಭುತ್ವ ದೇಶವೇ? ಜಗತ್ತಿನ ಬಹುತೇಕ ದೇಶಗಳಲ್ಲಿ ಜನರನ್ನು ಹುಡುಕಿ ಹುಡುಕಿ ಮತದಾರರ ಪಟ್ಟಿಯಲ್ಲಿ ಸೇರಿಸುತ್ತಾರೆ. ಆದರೆ, ಭಾರತದಲ್ಲಿ ಹುಡುಕಿ ಕುಡುಕಿ ಮತದಾರರ ಹೆಸರನ್ನು ಮಂಗಮಾಯ ಮಾಡಿದ್ದಾರೆ. ಇದನ್ನು ತಡೆಯಬೇಕಾದ ದೇಶದ ಸರ್ವೋಚ್ಚ ನ್ಯಾಯಾಲಯ ತಡೆಯದೆ ಚುನಾವಣಾ ಆಯೋಗದ ಸಾಥ್‌ ನೀಡಿದೆ. ದೇಶದ ಒಬ್ಬ ಪ್ರಜೆಯೂ ಮತದಾನ ಹಕ್ಕಿನಿಂದ ವಂಚಿತನಾದರೆ ಅದು ಸಂಸದೀಯ ಪ್ರಜಾಪ್ರಭುತ್ವದ ಸೋಲಾಗುತ್ತದೆ.

ಕಳೆದ ಹನ್ನೆರಡು ವರ್ಷಗಳಿಂದ ನರೇಂದ್ರ ಮೋದಿಯವರೇ ಅಧಿಕಾರದಲ್ಲಿದ್ದಾರೆ. ದೇಶದಾದ್ಯಂತ ಇರುವ ವಿದೇಶಿ ಪ್ರಜೆಗಳನ್ನು ಪತ್ತೇ ಹಚ್ಚಲು ಆಗದಿರುವುದು ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಎಮ್‌ಎಲ್‌ಸಿ ಚುನಾವಣೆ: ಸಿಎಂ ಡಿಕೆಶಿಗೆ ಭಾರಿ ರಾಜಕೀಯ ಹಿನ್ನಡೆ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ (ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರ) ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗಿದೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಜೆಡಿಎಸ್‌ ಕಸಿದುಕೊಂಡಿದ್ದು ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜಕೀಯ ಹಿನ್ನಡೆ ಎಂಬುದು ನಿರ್ವಿವಾದ. ಇದು ಡಿಕೆಶಿ ಅವರ ತವರು ಕ್ಷೇತ್ರ. ಅವರು ತಮ್ಮ ತವರು ಕ್ಷೇತ್ರದ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಲು ಸಾಕಷ್ಟು ಬೆವರು ಸುರಿಸಿದರು. ಆದಾಗ್ಯೂ ಮತದಾರರು ಅವರ ಕೈಹಿಡಿಯಲಿಲ್ಲ.

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಇದೇ ಮೊದಲ ಬಾರಿಗೆ ಸೋತಿದ್ದಾರೆ. ಈ ಹಿಂದೆ ಅವರು ಸತತವಾಗಿ ಐದು ಬಾರಿ ಗೆದ್ದಿದ್ದರು (ಮೂರು ಬಾರಿ ಜೆಡಿಎಸ್‌ನಿಂದ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ತಲಾ ಒಂದು ಬಾರಿ). ಮೇಲಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ. ಆದಾಗ್ಯೂ ಅವರ ಈ ಸೋಲು ಡಿಕೆಶಿ ಅವರ ಜಂಘಾಬಲ ಉಡುಗಿಹೋದಂತಾಗಿದೆ. ಇದು ಅವರ ನಾಯಕತ್ವಕ್ಕೆ ಎಚ್ಚರಿಕೆಯ ಗಂಟೆಯೂ ಆಗಿದೆ.

ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಎರಡು ಚುನಾವಣೆಗಳು ನಡೆದಿವೆ. ಜೂನ್‌ ತಿಂಗಳಲ್ಲಿ ವಿಧಾನ ಪರಿಷತ್ತಿನ ಏಳು ಕ್ಷೇತ್ರಗಳಲ್ಲಿ ನಡೆದಾಗ ಕಾಂಗ್ರೆಸ್‌ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿತು. ಡಿಕೆಶಿ ಅವರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಪಕ್ಷದ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಅವರನ್ನು ಅನಾಯಾಸವಾಗಿ ಗೆಲ್ಲಿಸಿಕೊಂಡು ಬಂದಿದ್ದರು.

ಆಗ ಬಿಜೆಪಿಯ ಏಳು ಜನ ಶಾಸಕರು ಹಾಗೂ ಜೆಡಿಎಸ್‌ನ ನಾಲ್ಕು ಜನ ಶಾಸಕರು ಅಡ್ಡ ಮತದಾನ ಮಾಡಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಮಾಡುತ್ತಿರುವುದನ್ನೇ ರಾಜ್ಯದಲ್ಲಿ ಡಿಕೆಶಿ ಅವರು ಮುಂದುವರಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು. ಬೇಸರವಾಗಲಿ, ಟೀಕೆಯಾಗಲಿ ಏನೇ ಇದ್ದರೂ ಗೆಲುವು ಗೆಲುವೆ. ಇದು ಡಿ.ಕೆ. ಶಿವಕುಮಾರ್‌ ನಾಯಕತ್ವಕ್ಕೆ ಬಲ ನೀಡಿದ ಫಲಿತಾಂಶವಾಗಿತ್ತು.

ಈಗ ಎಲ್ಲವೂ ತಿರುವುಮುರುವು ಆಗಿದೆ.

ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅವರು ಒಂದು ದಿನವೂ ಪ್ರಚಾರಕ್ಕೆ ಬಂದಿಲ್ಲ. ಇದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಬಳಿಕ ಅವರ ವಿರುದ್ಧ ನಡೆದ ಕುಟುಕು ಕಾರ್ಯಾಚರಣೆ ಬಗ್ಗೆ ಅವರು ಬೇಸರಗೊಂಡು ಚುನಾವಣೆಯ ಪ್ರಚಾರಕ್ಕೆ ಬಂದಿಲ್ಲ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೊದಲಿನಿಂದಲೂ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತದೆ. ಈ ಬಾರಿಯೂ ಬ್ಯಾಲೆಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸಲಾಗಿದೆ. ದೇಶದಲ್ಲಿ ವಿರೋಧ ಪಕ್ಷಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ. ಈ ಗೆಲುವು ರಾಜ್ಯದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಇವಿಎಂ ಅನ್ನು ಸಮರ್ಥಿಕೊಳ್ಳಲು ಹಾಗೂ ಕಾಂಗ್ರೆಸ್‌ ಕಾಲೆಳೆಯಲು ಒಂದು ಅವಕಾಶ ನೀಡಿದಂತಾಗಿದೆ.

ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಬೀಗುತ್ತಿವೆ. ಆದರೆ, ರಾಜ್ಯದಲ್ಲಿ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶಗಳು ವಿಧಾನಸಭಾ ಚುನಾವಣೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವೆಂದು ಹಿಂದಿನ ವಿಧಾನಸಭಾ ಚುನಾವಣೆಗಳ ಇತಿಹಾಸ ಹೇಳುತ್ತದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್