SUBSCRIBE

ದ ಪಾಲಿಟಿಕ್

ಹೆಚ್ ಡಿ ದೇವೇಗೌಡ : ಇಡೀ ನಾಡೆ ಹೆಮ್ಮೆ ಪಡುವ ರೈತಪರ ಜೀವ.

ದೇವೇಗೌಡರು ದೇಶದ ಪ್ರಧಾನ ಮಂತ್ರಿ ಆಗಿದ್ದವರು. ಇವರನ್ನು ಕೇವಲ ಜೆಡಿಎಸ್ ಮುಖಂಡರಾಗಿಯೋ ಅಥವಾ ಕೇವಲ ಒಕ್ಕಲಿಗರ ನಾಯಕರಾಗಿಯೋ ಕಾಣುವುದು ಸರಿಯಲ್ಲ. ಯಾರು ಹೇಗಾದರೂ ಕಾಣಲಿ ಆದರೆ ಕನ್ನಡಿಗರಾದ ನಾವುಗಳು ಮಾತ್ರ ಅವರನ್ನು ಕಾಣುತ್ತಿರುವ ರೀತಿಗಳೇ ಬೇರೆ ಇವೆ. ಅದಕ್ಕೆ ಪ್ರಬಲ ಕಾರಣಗಳೂ ಇವೆ.ಇಲ್ಲಿ ಅಸಹನೆ ಇಲ್ಲದ ಜಾಗವೇ ಇಲ್ಲ. ಜಾತಿ-ಧರ್ಮಗಳ ನಡುವೆ ಮಾತ್ರವಲ್ಲ ಅವರವರ ಕುಟುಂಬದವರ ಬೆಳವಣಿಗೆಗಳನ್ನ ಸಹಿಸದ ಲೆಕ್ಕವಿಲ್ಲದಷ್ಟು ಅಸಹನೆಯ ಮನಸುಗಳಿಂದಲೇ ಈ ನಾಡು ತುಂಬಿ ತುಳುಕುತ್ತಿದೆ. ಈ ಸಮಾಜದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಕನ್ನಡದ ನೆಲ ಮೂಲದಿಂದ ಹೋಗಿ ದೇಶದ ಅತ್ಯುನ್ನತವಾದ ಪ್ರಧಾನ ಮಂತ್ರಿ ಸ್ಥಾನದವರೆಗೆ ಏರಿರುವುದು ಕನ್ನಡಿಗರ ಪಾಲಿಗೆ ಮತ್ತು ದಕ್ಷಿಣದ ಭಾರತೀಯರ ಪಾಲಿಗೆ ಅದೇ ಪ್ರಥಮ, ಮುಂದೆ ಯಾರಾಗುತ್ತಾರೊ ಗೊತ್ತಿಲ್ಲ. ಪ್ರಾಯಶಃ ಇವರೇ ಕೊನೆಯವರು ಆದರು ಆಗಬಹುದು.ಕನ್ನಡಿಗನೊಬ್ಬ ಪ್ರಧಾನ ಮಂತ್ರಿಯಾದದ್ದು ಪ್ರತಿಯೊಬ್ಬ ಕನ್ನಡಿಗನು ಸಂತೋಷ ಪಡಬೇಕಾಗಿರುವ ವಿಷಯ. ದಕ್ಷಿಣ ಭಾರತದ ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂದ್ರಪ್ರದೇಶದ ಜನರು ಸಹ ದೇವೇಗೌಡರನ್ನ ದಕ್ಷಿಣದವರೆಂಬ ಕಾರಣಕ್ಕೆ ಅವರೂ ಸಹ ನಮ್ಮವರೆಂದೇ ಸ್ವೀಕರಿಸಲಿ.ಏಕೆಂದರೆ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದಿಂದ ಪ್ರಥಮ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದು ಇವರೇ ಮೊದಲಿಗರು. ಪ್ರಾಯಶಃ ಇವರೇ ಕೊನೆಯವರು ಆದರು ಆಶ್ಚರ್ಯವೇನಿಲ್ಲ.ದಕ್ಷಿಣ ಭಾರತೀಯರು ದೇಶದ ರಾಜಕಾರಣದಲ್ಲಿ ಮುನ್ನೆಲೆಗೆ ಬರಲು ಉತ್ತರ ಭಾರತದವರು ದೊಡ್ಡ ಅಡ್ಡಗಾಲು ಆಗಿದ್ದಾರೆ. ಇದು ಸಮಗ್ರ ಭಾರತದ ಕಲ್ಪನೆಗೆ ಅಪಮಾನ. ದಕ್ಷಿಣದ ಈ ಅಪಮಾನಕ್ಕೆ ಸವಲೆಂಬಂತೆ ದೇವೇಗೌಡರು ಪ್ರಧಾನಮಂತ್ರಿ ಆದದ್ದು. ದೇವೇಗೌಡರನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಧಾನ ಮಂತ್ರಿಗಳು ಉತ್ತರ ಭಾರತದವರೇ ಆಗಿದ್ದಾರೆ.ಇದೇ ದೇವೇಗೌಡರು ಏನಾದರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೆ ಅವರನ್ನು “ವಿಶ್ವ ರೈತ ನಾಯಕ”ನ ಸ್ಥಾನಕ್ಕೆ ಏರಿಸಿ ಜಾಗತಿಕ ಮಟ್ಟದ ಪ್ರಚಾರ ಕೊಡುತ್ತಿದ್ದರು. ರಾಷ್ಟ್ರ ನಾಯಕರಾಗಲು ಮತ್ತು ರಾಷ್ಟ್ರ ನಾಯಕರಾಗಿಯೇ ಉಳಿಯಲು ಅ ಭಾರತದಲ್ಲಿ ಬ್ರಾಹ್ಮಣ್ಯ ಪಡೆಯ ಸಹಾಯ ಬೇಕೇ ಬೇಕು ಇತಿಹಾಸದ ಪುಟಗಳೆ ಹೇಳುತ್ತಿವೆ. ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರ ಬಡವ, ಶ್ರಮಿಕ, ರೈತಪರ ಸರ್ಕಾರವಾಗಿತ್ತೆಂಬ ಭಾವ ದೇಶದ ದುಡಿಯುವ ವರ್ಗದ ಜನರಲ್ಲಿ ಮೂಡಿತ್ತು. ಅವರ ‘ಮಣ್ಣಿನ ಮಗ’ ಎಂಬ ಬಿರುದಾಂಕಿತ ವಿಶೇಷವಾಗಿ ರೈತರಲ್ಲಿ ಒಂದು ಭರವಸೆಯನ್ನು ಹುಟ್ಟಿ ಹಾಕಿತ್ತು.ದೆಹಲಿ ಕೇಂದ್ರೀತ ಉತ್ತರ ಭಾರತದ ಥಿಂಕರ್ಸ್ ಗಳ ಒಂದು ವರ್ಗ ದೇವೇಗೌಡರು ಪ್ರಧಾನಿ ಆಗಿದ್ದಾಗ ಸತತವಾಗಿ ಟೀಕಿಸಿ ಹೀಯಾಳಿಸಿದ್ದು ಉಂಟು. ಇಂಗ್ಲಿಷ್, ಹಿಂದಿ ಭಾಷಾಜ್ಞಾನ ಇಲ್ಲವೆಂದು ಜರಿದದ್ದು ಇದೆ. ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು, ಜಾತ್ಯಾತೀತ ಮನಸ್ಥಿತಿಯನ್ನು ದೇಶದ ಮಾಧ್ಯಮಗಳು ಪ್ರಚಾರಕ್ಕೆ ತರಲೇ ಇಲ್ಲ. ಕಾರಣ ಎಲ್ಲಿ ದೇವೇಗೌಡರು ತನ್ನ ರೈತ ತನದಿಂದ ಈ ದೇಶದ ಬಹು ದೊಡ್ಡ ನಾಯಕರಾಗಿ ಹೊರಹೊಮ್ಮಬಹುವುದು ಎಂಬ ಅಸಹನೆಯಿಂದ ಅವರ ಮೇಲೆ ಟೀಕಾಪ್ರಹಾರವೇ ನಡೆದಿವೆ.ಅವರೊಟ್ಟಿಗೆ ಯಾವಾಗಲೂ ಪಂಚೆ, ಜುಬ್ಬ, ಟವಲ್, ಹವಾಯಿ ಚಪ್ಪಲಿ, ಸೊಪ್ಪಿನ ಸಾರು, ರಾಗಿ ಮುದ್ದೆ ಮತ್ತು ಕೃಷಿ ಚಿಂತನೆಗಳು ಇರುತ್ತಿದ್ದವು. ಇವೆಲ್ಲವೂ ಭಾರತದ ನೆಲಮೂಲ ಸಂಸ್ಕೃತಿಯ ಪ್ರತೀಕಗಳಾಗಿವೆ.ಇಂದು ದೇವೇಗೌಡರ 91ನೆಯ ಹುಟ್ದಬ್ಬ. ಅವರು ನೂರಾರು ಕಾಲ ನಮ್ಮೊಂದಿಗೆ ಇರಲೆಂದು ಪ್ರಾರ್ಥಿಸುತ್ತೇನೆ.- ಮನಸುಳಿ ಮೋಹನ್

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಈ ವಾರ

ಈ ವಾರದ ರಾಜಕೀಯ ವಿದ್ಯಮಾನಗಳು | ಸೆ. 21-27

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
2 min read
ಕೆಪಿಎಸ್‌ಸಿ ಸುಧಾರಣೆ

ಈ ವಾರ ರಾಜ್ಯ ರಾಜಕೀಯದಲ್ಲಿ  ಪ್ರಮುಖವಾಗಿ ಮೂರು ರಾಜಕೀಯ ವಿದ್ಯಮಾನಗಳು ನಡೆದಿವೆ.

ಸಚಿವ ಸತೀಶ್‌ ಜಾರಕಿಹೊಳಿ ಮೇಲೆ ಇ.ಡಿ. ದಾಳಿ: ಪರವಾನಗಿ ಪಡೆಯದೆ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್‌ ಪಕ್ಷದ ಪ್ರಭಾವಿ ಸಚಿವ ಸತೀಶ್‌ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದೆ. ಇದರಿಂದಾಗಿ ರಾಜ್ಯ ರಾಜಕೀಯದಲ್ಲಿ ತರಾವರಿ ಬೆಳವಣಿಗೆಗಳು ನಡೆದವು. ಕಾಂಗ್ರೆಸ್‌ ಪಕ್ಷದವರೇ ಯಾರೋ ಇ.ಡಿಗೆ ಎಲ್ಲಾ ದಾಖಲೆಗಳು ನೀಡಿ, ದಾಳಿ ಮಾಡಿಸಿದ್ದಾರೆ ಎಂದು ಸತೀಶ್‌ ಜಾರಕಿಹೊಳಿಯವರು ಆಡಿದ ಮಾತು ಸದ್ದು ಮಾಡಿದೆ.  ಮೊದಲು 2028ರಲ್ಲಿ ನಾನೂ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಎನ್ನುತ್ತಿದ್ದರು. ದಾಳಿಯಾದ ಮೇಲೆ ವರಸೆ ಬದಲಾಯಿಸಿ, ಡಿಕೆಶಿಯವರು 2028ರಲ್ಲೂ ನಾನೇ ಸಿಎಂ ಆಗುವೆ ಎನ್ನುತ್ತಿದ್ದಾರೆ. ಅವರೇ ಆಗಲಿ. ನನಗಿನ್ನು ವಯಸ್ಸಿದೆ, ಮುಂದೆ ನೋಡೋಣ ಎಂದು ಹೇಳಿದ್ದು ಕಾಂಗ್ರೆಸ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಸೌಜನ್ಯ ಪ್ರಕರಣದ ಮರು ತನಿಖೆ:  ಧರ್ಮಸ್ಥಳದ ಸೌಜನ್ಯಳನ್ನು ಕಿಡಿಗೇಡಿಗಳು ರೇಪ್‌ ಮಾಡಿ, ಅವಳನ್ನು ಬರ್ಬರವಾಗಿ ಹತ್ಯೆ ಮಾಡಿ ೧೪ ವರ್ಷವಾಯಿತು. ಬೆಳ್ತಂಗಡಿ ಪೊಲೀಸರು, ಎಸ್‌ಐಟಿ, ಸಿಬಿಐ… ಹೀಗೆ ಎಲ್ಲರೂ ಈ ಪ್ರಕರಣದ ತನಿಖೆ ಮಾಡಿದ್ದಾರೆ. ಆದರೆ, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ಎಲ್ಲರೂ ವಿಫಲರಾಗಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದ್ದರು. ನ್ಯಾಯಾಲಯ ಎಸ್‌ಐಟಿ ರಚಿಸಿ ಮರು ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದೆ. ಸರ್ಕಾರ ಎಸ್‌ಐಟಿ ರಚಿಸಿದೆ. ಎಸ್‌ಐಟಿ ತಂಡದ ಇಬ್ಬರು ಸದಸ್ಯರ ಮೇಲೆ ಗಂಭೀರವಾದ ಭ್ರಷ್ಟಾಚಾರದ ಆರೋಪಗಳಿವೆ. ಅವರನ್ನು ಬದಲಾಯಿಸಿ ಎಸ್‌ಐಟಿ ಪುನರ್‌ರಚಿಸಬೇಕೆಂದು  ಸೌಜನ್ಯ ತಾಯಿ ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿ ಹಗರಣದ ಚಂಡು ಸುಪ್ರೀಂ ಕೋರ್ಟ್‌ ಅಂಗಳಕ್ಕೆ:  ಕೆಪಿಎಸ್‌ಸಿ ಹಗರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಅದು ಕೆಲಸ ಆರಂಭಿಸಿ, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯೂ ನಡೆಸುತ್ತಿತ್ತು. ಸಾಕಷ್ಟು ಸಾಕ್ಷ್ಯಗಳನ್ನೂ ಕಲೆಹಾಕಿತ್ತು. ಈ ಮಧ್ಯೆ ಬಸನಗೌಡ್‌ ಪಾಟೀಲ್‌ ಯತ್ನಾಳ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಹೋಗಿದರು. ನ್ಯಾಯಾಲಯ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ರದ್ದುಪಡಿಸಿ, ಹೊಸ ಎಸ್‌ಐಟಿ ರಚಿಸಿದೆ. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿದೆ. ಈ ತೀರ್ಪು ಬಂದ ದಿನವೇ ಸಿಎಂ ಡಿಕೆಶಿಯವರು, ʼತಂಡದಲ್ಲಿ ಯಾರಿರಬೇಕು ಎಂದು ನಿರ್ಧರಿಸುವುದು ಸರ್ಕಾರದ ಕೆಲಸ. ನ್ಯಾಯಾಲಯ ಹೆಸರು ಸೂಚಿಸಿದ್ದು ಸರಿಯಲ್ಲʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೈಕೋರ್ಟ್‌ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ತಮ್ಮದೇ ಸರ್ಕಾರದ ಬಣ್ಣ ಬಯಲು ಮಾಡಿದ ಶಾಸಕ ಬಿ.ಆರ್.‌ ಪಾಟೀಲ್

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಆಳಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌ ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಪಕ್ಷ ಮಂತ್ರಿ ಮಾಡಿಲ್ಲ, ಹಾಗಾಗಿ ಅವರು ಕೋಪದಲ್ಲಿ ಹೀಗೆ ಮಾತಾಡುತ್ತಿದ್ದಾರೆ ಎಂದು ಎನ್ನುವವರಿದ್ದಾರೆ.  ಅವರು ಅಧಿಕಾರದಲ್ಲಿರಲಿ, ಇಲ್ಲದಿರಲಿ ಯಾವಾಗಲೂ ರೈತರ ಪರ ಧ್ವನಿ ಎತ್ತುತ್ತಾರೆ ಎಂದು ಎನ್ನುವವರೂ ಇದ್ದಾರೆ. ಅದೇನೇ ಇರಲಿ, ಅವರ ಈ ದನಿ ರೈತಪರವಾಗಿದೆ. ಅವರ ಆಕ್ರೋಶದಲ್ಲಿ ರೈತರ ಹಾಗೂ ನಾಡಿನ ಹಿತ ಅಡಗಿದೆ.

2023ರ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ “ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ʻಕರ್ನಾಟಕ ಭೂ ಸುಧಾರಣೆ ಕಾಯ್ದೆʼಗೆ ತಿದ್ದುಪಡಿ ತರುವುದಾಗಿ” ಜನರಿಗೆ ಪಕ್ಷದ ಘಟಾನುಘಟಿ ನಾಯಕರು ಮಾತು ಕೊಟ್ಟಿದ್ದರು. ಪ್ರಣಾಳಿಕೆಯಲ್ಲೂ ಘೋಷಿಸಿದರು. ಇವರ ಮಾತನ್ನು ನಂಬಿ ರೈತರು ಮತ ಹಾಕಿ ಇವರನ್ನು ಅಧಿಕಾರಕ್ಕೆ ತಂದರು. ಆದರೆ, ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಈ ಕುರಿತು ಯಾರೂ ಚಕಾರೇ ಎತ್ತುತ್ತಿಲ್ಲ.

ಬಿಡದಿ ಟೌನ್‌ಶಿಪ್‌ಗಾಗಿ ಫಲವತ್ತಾದ ಲಕ್ಷಾಂತರ ಎಕರೆ ಜಮೀನನ್ನು ರೈತರಿಂದ ಕಿತ್ತುಕೊಳ್ಳಲು ಈ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ.  ತಮ್ಮ ಜಮೀನು ಉಳಿಸಿಕೊಳ್ಳಲು ರೈತರು ಬೀದಿಗೆ ಬಂದು ಹೋರಾಡುತ್ತಿದ್ದಾರೆ. ಆದಾಗ್ಯೂ, ಸರ್ಕಾರ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದೆ. ಇದು ಜನತಂತ್ರ ವ್ಯವಸ್ಥೆಯಲ್ಲಿ ಒಂದು ನಾಗರಿಕ ಸರ್ಕಾರ ರೈತರೊಂದಿಗೆ ನಡೆದುಕೊಳ್ಳುವ ರೀತಿಯೇ?

ರಾಜ್ಯದಲ್ಲಿ 1961ರಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಯಲ್ಲಿದೆ.  ದೇವರಾಜ ಅರಸರು 1974ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಸುಮಾರು ಎಂಟು ಲಕ್ಷ ಬಡ ಗೇಣಿದಾರರಿಗೆ ಭೂ ಮಾಲೀಕರನ್ನಾಗಿಸಿದರು. ಸುಮಾರು 30 ಲಕ್ಷ ಎಕರೆ ಜಮೀನು ಬಡವರಿಗೆ ಸಿಗುವಂತೆ ಮಾಡಿದರು. ಜತೆಗೆ ವಾರ್ಷಿಕ 25 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಕೃಷಿಯೇತರ ಮೂಲಗಳಿಂದ ಆದಾಯ ಉಳ್ಳವರಿಗೆ, ಕೃಷಿಕರಲ್ಲದವರಿಗೆ, ಕಂಪನಿಗಳಿಗೆ, ಸಂಸ್ಥೆಗಳಿಗೆ ಜಮೀನು ಖರೀದಿಸದಂತೆ ಬೇಲಿ ಹಾಕಿದರು.

ರೈತಪರವಾಗಿದ್ದ ಈ ಕಾಯ್ದೆಗೆ ಬಿ. ಎಸ್‌. ಯಡಿಯೂರಪ್ಪ 2020ರಲ್ಲಿ ಗುಂಡಿ ತೋಡಿದರು. ಈಗ ರಾಜ್ಯದಲ್ಲಿ ಯಾರಾದರೂ ಜಮೀನು ಖರೀದಿಸಬಹುದು. ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಕಂಪನಿಗಳು ರೈತರಿಗೆ ಪುಡಿಗಾಸು ಕೊಟ್ಟು ರಾಜ್ಯದ ಲಕ್ಷಾಂತರ ಎಕರೆ ಜಮೀನು ದೋಚಿದ್ದಾರೆ.

ಇದನ್ನು ನಮ್ಮ ಸರ್ಕಾರವಾದರೂ ತಡೆಯಬಹುದು ಎಂದು ಬಿ.ಅರ್.‌ ಪಾಟೀಲರ  ನಿರೀಕ್ಷಿಸುವುದೇ  ಕಾಂಗ್ರೆಸ್‌ ಪಕ್ಷದ ಕಣ್ಣು ಕೆಂಪಾಗಿಸಬಹುದು. ನಾವೀಗ ಉದ್ಯಮಿಗಳಿಗಾಗಿಯೇ ಅಧಿಕಾರಿದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಉದ್ಯಮಿಗಳನ್ನು ತಮ್ಮ ಮನೆಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರ  ಕಾಲದಲ್ಲಿದ್ದೇವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಕೆಪಿಎಸ್‌ಸಿ ಹಗರಣ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಬಾಗಿಲಿಗೆ ಕರ್ನಾಟಕ ಸರ್ಕಾರ!

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಕರ್ನಾಟಕ ಹೈಕೋರ್ಟ್‌ ಕೆಪಿಎಸ್‌ಸಿ ಹಗರಣದ ಬಗ್ಗೆ ತನಿಖೆ ಮಾಡಲು ಸರ್ಕಾರ ರಚಿಸಿದ ಎಸ್‌ಐಟಿ ರದ್ದುಪಡಿಸಿ, ಹೊಸ ಎಸ್‌ಐಟಿ ತಂಡ ರಚಿಸಿತ್ತು. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿತ್ತು. ಅಂದೇ ಮುಖ್ಯಮಂತ್ರಿ ಡಿಕೆಶಿ ಅವರು ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈಗ ಈ ತೀರ್ಪಿನ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಈ ಕುರಿತು ಸರ್ಕಾರದ ಪರ-ವಿರುದ್ಧದ ಚರ್ಚೆ ನಡೆಯುತ್ತಿವೆ. ತಂಡದಲ್ಲಿ ಯಾರಿರಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂಬ ಸರ್ಕಾರದ ವಾದ ಮೇಲ್ನೋಟಕ್ಕೆ ಸರಿ ಅನಿಸಬಹುದು. ಆದರೆ, ಸರ್ಕಾರಗಳು ರಚಿಸುವ ಎಸ್‌ಐಟಿಗಳಾಗಲಿ ಅಥವಾ ಸರ್ಕಾರದ ಸಿಐಡಿಯಾಗಲಿ ಬಹುತೇಕ ಪ್ರಕರಣಗಳನ್ನು ಹಳ್ಳ ಹಿಡಿಸಿ, ಆರೋಪಿಗಳಿಗೆ ಕ್ಲೀನ್‌ ಚೀಟ್‌ ನೀಡಿದ ಸಾಕಷ್ಟು ಉದಾಹರಣೆಗಳು ಜನರ ಮುಂದಿವೆ. ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂ ಕೋರ್ಟ್‌ ಕಟ್ಟು ನಿಟ್ಟಿನ ಸೂಚನೆ ನೀಡಿದ್ದದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸುವಲ್ಲಿ ಸರ್ಕಾರ ಎಡವಿದೆ. ಈ ಬಗ್ಗೆ ಸ್ವತಃ ಸೌಜನ್ಯ ತಾಯಿ ಕುಸುಮಾವತಿ ಅವರೇ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಹಗರಣದ ತನಿಖೆ ಸರ್ಕಾರದ ಸುಪರ್ದಿಯಲ್ಲಿ ನಡೆಯುತ್ತಿದ್ದಾಗ ಜನರಲ್ಲಿ ಇದು ಸಹ ಹಾಗೇ ಹಳ್ಳ ಹಿಡಿಯಬಹುದೆಂಬ ಅನುಮಾನ ವ್ಯಕ್ತವಾಗುತ್ತಿತ್ತು. ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ಮುಂದುವರೆದದ್ದು ವಿದ್ಯಾರ್ಥಿಗಳಲ್ಲಿ ತುಸು ಸಮಾಧಾನ ತಂದಿತ್ತು. ಈಗ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಕಡೆಗೆ ಎಲ್ಲರ ಕಣ್ಣುಗಳಿವೆ. ಕರ್ನಾಟಕ ಸರ್ಕಾರದ ಈ ನಡೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ರಾಜಕೀಯ ಲೆಕ್ಕಾಚಾರ ನಿಂತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸೌಜನ್ಯ ಪ್ರಕರಣ: ಡಿಕೆಶಿ ಈಗಲಾದರೂ ಸೌಜನ್ಯ ಪರ ನಿಲ್ಲುವವರೇ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ತಮ್ಮದೇ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆ ನಡೆಸುತ್ತಿದ್ದಾಗ (ಸಿದ್ದರಾಮಯ್ಯನವರು ಸೌಜನ್ಯ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿದಾಗ) ಆಗ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆಶಿ ಸದನದ ಒಳಗೂ ಹೊರಗೂ ವೀರೇಂದ್ರ ಹೆಗ್ಗಡೆ ಪರವಾಗಿ ಬ್ಯಾಟಿಂಗ್‌ ಮಾಡಿದರು. ಆಮೇಲೆ ಆ ಎಸ್‌ಐಟಿ ಬಗ್ಗೆ ಒಂದು ಸುದ್ದಿಯೂ ಬಂದಿಲ್ಲ ಜತೆಗೆ ಒಂದು ವರ್ಷವಾದರೂ ಅದು ಇದುವರೆಗೂ ವರದಿ ಸಲ್ಲಿಸಿಲ್ಲ.

ಈಗ ಅವರೇ ಮುಖ್ಯಮಂತ್ರಿ. ಸುಪ್ರೀಂ ಕೋರ್ಟ್‌ ಆದೇಶದಂತೆ ಎಸ್‌ಐಟಿ ರಚಿಸಿದ್ದಾರೆ.   ರಚಿಸಿದ ತಂಡದಲ್ಲಿ ಭ್ರಷ್ಟಾಚಾರಕ್ಕಾಗಿ ಇಲಾಖೆ ತನಿಖೆ ಎದುರಿಸಿದ ವೆಂಕಟೇಶ್‌ ಪ್ರಸನ್ ಇದ್ದಾರೆ. ಡಿಜಿ ಅಥವಾ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೂ ನೇಮಿಸದೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸೌಜನ್ಯ ತಾಯಿ ಕುಸುಮಾವತಿಯೂ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ʻಕೊಂದವರು ಯಾರುʼ ಆಂದೋಲನ  ಸುಪ್ರೀಂ ಕೋರ್ಟ್‌ಗೆ ಪತ್ರವೂ ಬರೆದಿದೆ.

ಒಂದು ಹುಡುಗಿಯನ್ನು ಹಾಡುಹಗಲೇ ರೇಪ್‌ ಮಾಡಿ, ಕೊಲೆ ಮಾಡಿ ಬಿಸಾಡುತ್ತಾರೆ. 14 ವರ್ಷದಿಂದ ಕೊಂದವರು ಯಾರೆಂದು ಪತ್ತೆಹಚ್ಚಲು ಇದುವರೆಗೂ ಬೆಳ್ತಂಗಡಿ ಪೊಲೀಸರಿಗಾಗಲಿ, ಸಿಬಿಐಗಾಗಲಿ, ಎಸ್‌ಐಟಿಗಾಗಲಿ ಆಗಿಲ್ಲ. ಇದು ನಮ್ಮ ರಾಜ್ಯಕ್ಕೊಂದು ಕಪ್ಪು ಚುಕ್ಕೆ.

ನ್ಯಾಯಾಲಯ ಈಗ ಮತ್ತೊಂದು ಅವಕಾಶ ನೀಡಿದೆ. ಆದರೆ, ಸಿಎಂ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸಲು ಎಡವಿದ್ದಾರೆ. ವಿರೋಧ ಎದುರಿಸುತ್ತಿರುವ ಎಸ್‌ಐಟಿ ತಂಡದ ಸದಸ್ಯರು ಅವರಾಗಿಯೇ ತಂಡದಿಂದ ಹೊರಬರುತ್ತಾರೋ ಅಥವಾ ಸಿಎಂ ಅವರು ಬದಲಾವಣೆ ಮಾಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.  ಇದೇ ತಂಡ ತನಿಖೆ ನಡೆಸಿದರೆ ರಾಜ್ಯದಲ್ಲಿ ಸಿಎಂ ಹಾಗೂ ಎಸ್‌ಐಟಿ ವಿರುದ್ಧವೇ ಹೋರಾಟ ಭುಗಿಲೇಳುವ ಸಾಧ್ಯತೆಯಿದೆ. ಈ ವಿಷಯ ಸುಪ್ರೀಂ ಕೋರ್ಟ್‌ ಹಾಗೂ ಕಾಂಗ್ರೆಸ್‌ ಹೈಕಮಾಂಡ್ ಅಂಗಳಕ್ಕೂ ತಲುಪಬಹುದು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ತಪ್ಪು ಮಾಡಿದರೂ ಗ್ಯಾನೇಶ್‌ ಕುಮಾರ್‌ ಮೇಲೆ ಕೇಸ್‌ ಆಗಲ್ಲವೇ?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
2 min read

ದೇಶದಲ್ಲಿ ಪ್ರಜಾತಂತ್ರ ಉಳಿಸುವ ಮಹತ್ತರವಾದ ಸ್ಥಾನದಲ್ಲಿ ಕೂತಿರುವ ಗ್ಯಾನೇಶ್‌ ಕುಮಾರ್‌ ಈಗ ಜನತೆಯ ಕಟಕಟೆಯಲ್ಲಿ ಬಂದು ನಿಂತಿದ್ದಾರೆ.  ಅವರು ಚುನಾವಣಾ ಆಯೋಗದ ಮುಖ್ಯ  ಆಯುಕ್ತರಾದ ಮೇಲೆ ಎಸ್‌ಐಆರ್‌ ತಂದು,  ಬಿಜೆಪಿ ವಿರುದ್ಧ ಹಾಕಬಹುದಾದ ಮತಗಳನ್ನು ಯೋಜನಾಬದ್ಧವಾಗಿ ಡಿಲೀಟ್‌ ಮಾಡುತ್ತಿದ್ದಾರೆಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಬ್ಬರು ಚುನಾವಣಾ ಆಯುಕ್ತರು ಅವರ ವಿರುದ್ಧ ಕೇಂದ್ರ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದು ವಿಪಕ್ಷಗಳ ಆರೋಪಗಳಿಗೆ ಬಲ ತುಂಬಿದ್ದಾರೆ.

ಈಗ ಗ್ಯಾನೇಶ್‌ ಕುಮಾರ್‌ ವಿರುದ್ಧ ಕೇಸ್‌ ದಾಖಲಿಸಬೇಕು, ಜೈಲಿಗಟ್ಟಬೇಕು ಎಂಬ ಕೂಗು ನಾಲ್ಕು ದಿಕ್ಕಿನಿಂದಲೂ ಕೇಳಿಬರುತ್ತಿದೆ. ಆದರೆ, ಈಗ ಅದು ಅಸಾಧ್ಯ.  ಮುಖ್ಯ ಚುನಾವಣಾ ಆಯುಕ್ತರು ಆಯೋಗದಲ್ಲಿ ಕೂತು ಏನೇ ತಪ್ಪು ಮಾಡಿದರೂ ಅವರ ವಿರುದ್ಧ ಯಾವುದೇ ಸಿವಿಲ್‌ ಅಥವಾ ಕ್ರಿಮಿನಲ್‌ ಕೇಸ್‌ ದಾಖಲು ಮಾಡದಂತೆ ಕೇಂದ್ರ ಸರ್ಕಾರ `The Chief Election commissioner and Other Election commissioners Act – 2023’ ಜಾರಿಗೆ ತಂದಿದೆ.  ಈ ಕಾಯಿದೆ ಅವರು ನಿವೃತ್ತರಾದ ಮೇಲೂ ಅವರ ವಿರುದ್ಧ ಯಾವುದೇ ಕೇಸ್‌ ಹಾಕದಂತೆ ಅವರಿಗೆ ರಕ್ಷಣೆಯ ಖಾತರಿಪಡಿಸಿದೆ.

ಗ್ಯಾನೇಶ್‌ ಕುಮಾರ್‌ ಅವರಾಗಿ ಅವರೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಪದಚ್ಯುತಿಗೊಳಿಸುವುದೂ ಅಷ್ಟು ಸುಲಭವಲ್ಲ.  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಯಾವ ರಕ್ಷಣೆ ಇದೆಯೋ ಇವರಿಗೂ ಅಷ್ಟೇ ರಕ್ಷಣೆಯಿದೆ. ಇವರನ್ನು ತೆಗೆದು ಹಾಕಬೇಕಾದರೆ ಒಂದು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 50ರಷ್ಟು ಸದಸ್ಯರ ಒಪ್ಪಿಗೆ ಬೇಕು. ಇಲ್ಲವೇ  ಸದನದಲ್ಲಿ ಹಾಜರಿರುವ ಒಟ್ಟು ಸದಸ್ಯರಲ್ಲಿ 2/3ರಷ್ಟು ಸದಸ್ಯರು ಅವರ ವಿರುದ್ಧ ಮತ ಹಾಕಬೇಕು. ಆಗ ಇವರನ್ನು ರಾಷ್ಟ್ರಪತಿಗಳು ತೆಗೆದು ಹಾಕಬಹುದು.

ಈ ರಕ್ಷಣೆ ಅವರಿಗಿರುವ ಕಾರಣಕ್ಕೆ ಅವರ ಬಗ್ಗೆ ಇಡೀ ದೇಶದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಅವರು ಎಸಿ ರೂಮಿನಲ್ಲಿ ಯಾವ ಭಯವಿಲ್ಲದೆ  ಆರಾಮವಾಗಿ ಕೂತಿದ್ದಾರೆ. ಜನರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲವೆಂದು ಭಾವಿಸಿದಂತಿದೆ. ಹಾಗಾಗಿ, ಮಾಧ್ಯಮಗಳ ಮುಂದೆ ಬಂದು ಅವರು ಇದುವರೆಗೂ ಮಾತನಾಡಿಲ್ಲ.

ಪ್ರಜಾತಂತ್ರ ದೇಶದಲ್ಲಿ ಅಂತಿಮವಾಗಿ ಎಲ್ಲರೂ ಜನರಿಗೆ ಉತ್ತರದಾಯಿಗಳಾಗಿಬೇಕು. ಹೀಗೆ ಕೆಲವರಿಗೆ ವಿಶೇಷ ರಿಯಾಯಿತಿ ನೀಡಿದರೆ ಅವರು ಜನತೆಯ ತಲೆಯ ಮೇಲೆ ಕಾಲಿಡಿದೆ ಇರುತ್ತಾರೆಯೇ? ಈ ರೀತಿಯಾಗಿ ಅವರಿಗೆ ವಿಶೇಷವಾದ ರಕ್ಷಾ ಕವಚ ಹೋದಿಸಿದೇಕೆ? ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ ನ್ಯಾಯಧೀಶರನ್ನು ಹೊರಗೆ ಹಾಕಿದ್ದು ಯಾರ ಅನುಕೂಲಕ್ಕಾಗಿ? ದೇಶದ ಜನತೆ ಕೇಳುತ್ತಿರುವ ಈ ಪ್ರಶ್ನೆಗಳಿಗೆಲ್ಲ ಪ್ರಧಾನಿ ಮೋದಿಯವರ ಬಳಿ ಉತ್ತರವಿದೆಯೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್