ನೇರವಾಗಿ ಹೇಳೋಣ: ಮುರುಘಾ ಸ್ವಾಮಿಯ ವಿರುದ್ಧ ಈಗ ದನಿ ಎತ್ತಿ ಎಫ್ಐಆರ್ ದಾಖಲಿಸಿರುವ ಈ ನಾಲ್ಕು ಮಕ್ಕಳಿಗೆ ಮಾತ್ರವಲ್ಲ; ಆತನ ವಿಕೃತ ಲೈಂಗಿಕತೆಗೆ ಬಲಿಯಾಗಿರುವ ಎಲ್ಲಾ ಮಕ್ಕಳಿಗೂ, ಮಹಿಳೆಯರಿಗೂ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಇಲ್ಲಿ ನ್ಯಾಯ ಸತ್ತಂತೆ!
ವಿಶ್ವಾಸನೀಯ ಮೂಲಗಳು ಪ್ರಸಕ್ತ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಮಕ್ಕಳು ‘ಇನ್ನೂ ಅನೇಕ ನಮ್ಮ ಗೆಳತಿಯರು (12 – 13 ) ನಮ್ಮಂತೆಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ’ ಎಂದು ಹೇಳುತ್ತಿದ್ದಾರೆಂದು ಹೇಳುತ್ತಿವೆ. ಕೆಲ ಮೈನೆರೆಯದ ಪುಟ್ಟ ಮಕ್ಕಳೂ ಇಲ್ಲಿ ಬಲಿಯಾಗಿದ್ದಾರೆಂಬ ಸುದ್ದಿ ಇಡೀ ನಾಡಿಗರನ್ನು ಅಲ್ಲಾಡಿಸಿದೆ. ತುಮಕೂರು ಸನಿಹದ ಶಾಖಾ ಮಠದ 12 ಎಕರೆ ಜಮೀನು, 99 ಆಕಳುಗಳು ಒಂದು ಹುಡುಗಿಯ ಸುಪರ್ದಿಗೆ ಒಪ್ಪಿಸಿರುವ ಸುದ್ದಿ ಎಲ್ಲರೂ ಹುಬ್ಬೆರುಸುವಂತೆ ಮಾಡಿದೆ.
ಸಂತ್ರಸ್ತರೆಲ್ಲರಿಗೂ ನ್ಯಾಯ ಕೊಡಿಸಲು ಚಿತ್ರದುರ್ಗದ ‘ಮಕ್ಕಳ ಕಲ್ಯಾಣ ಸಮಿತಿ’ ಹಾಗೂ ‘ಪೊಲೀಸ್ ಇಲಾಖೆ’ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯೇ ಎನ್ನುವ ಅನುಮಾನದ ಜತೆಗೆ ಇವೆರಡೂ ಇಲಾಖೆಯ ಮೇಲೂ ಕೆಲ ಪ್ರಶ್ನೆಗಳು ಎದ್ದಿ, ಅವೀಗ ಮುನ್ನೆಲೆಗೆ ಬಂದಿವೆ!
ಒಂದನೆಯದು: ಚಿತ್ರದುರ್ಗದ ಪೊಲೀಸರು ಎಫ್ಐಆರ್ ದಾಖಲಾದ ತಕ್ಷಣ ಮುರುಘಾ ಶ್ರೀಯನ್ನು ಬಂದಿಸಲಿಲ್ಲವೇಕೆ? ಇದರಿಂದ ಆರೋಪಿಗೆ ಸಾಕ್ಷಿ ನಾಶ ಮಾಡಲು ಅನುಕೂಲ ಆಗಿಲ್ಲವೇ? ಪೊಲೀಸರೇ ಸಾಕ್ಷಿ ನಾಶಕ್ಕೆ ಅನುಕೂಲ ಮಾಡಿಕೊಟ್ಟಂತೆ ಆಗುವುದಿಲ್ಲವೇ?
ಎರಡನೆಯದು : ಆಗೋ ಈಗೋ ಬಂಧನವಾಗಬಹುದು ಎನ್ನುವ ಭೀತಿದಿಂದ ಪರಾರಿ ಆಗುತ್ತಿದ್ದ ಆರೋಪಿಯನ್ನು ಪೊಲೀಸರು ಗೌರವಿತವಾಗಿ ಮಠಕ್ಕೆ ಕರೆತಂದು ಬಿಟ್ಟದ್ದು ಯಾವ ಋಣಸಂದಾಯಕ್ಕಾಗಿ? ಒಬ್ಬ ಸಾಮಾನ್ಯ ಫೋಕ್ಸೋ ಆರೋಪಿ ಜತೆಗೂ ಪೊಲೀಸರು ಇದೇ ರೀತಿ ನಡೆದುಕೊಳ್ಳುತ್ತಾರೆಯೇ? (ಅದೇ ದಿನ ಪೊಲೀಸರ ಮತ್ತು ಮಾಧ್ಯಮಗಳ ಸಮ್ಮುಖದಲ್ಲೇ ‘ನಾನು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ’ ಎಂದು ದನಿ ಎತ್ತಿದ ಮಕ್ಕಳ ವಿರುದ್ಧ ಬಹಿರಂಗವಾಗಿವೇ ಮುರುಘಾ ಶ್ರೀ ಕತ್ತಿ ಝಳಪಿಸಿದ್ದು)
ಮೂರನೆಯದು: ಮೊದಲನೇ ಪ್ರಕರಣದ ಸಂದರ್ಭದಲ್ಲಿ ಆರೋಪಿ ಮಠದಲ್ಲಿ ಇದ್ದಾಗಲೇ ಮಕ್ಕಳನ್ನು ಮಠಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದು ಸರಿಯೇ?
ನಾಲ್ಕನೆಯದು: ಒಬ್ಬ ತಾಯಿ ತನ್ನಿಬ್ಬರ ಮಕ್ಕಳ ಮೇಲೆ ಜರುಗಿದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತುವುದು, ತನ್ನ ಮಕ್ಕಳು ಎಫ್ಐಆರ್ ದಾಖಲಿಸಲು ಸಹಕರಿಸುವುದು ‘ಕುಮ್ಮಕ್ಕು’ ನೀಡಿದಂತೆ ಆಗುತ್ತದೆಯೇ? ಅವಳನ್ನು ಇಷ್ಟು ದೀರ್ಘ ವಿಚಾರಣೆ ಒಳಪಡಿಸಲು ಅವಳೇನು ಭಯೋತ್ಪಾದಕೀಯೋ? ಕೊಲೆಗಾರ್ತಿಯೋ ? ಇದರಿಂದ ಸಂತ್ರಸ್ತ ಮಕ್ಕಳೂ, ತಾಯಿಯೂ ಆಘಾತಕ್ಕೆ ಒಳಗಾಗುವುದಿಲ್ಲವೇ? ಇಲ್ಲಿಯವರೆಗೆ ಅವಳ ವಿರುದ್ಧ ಎಫ್ಐಆರ್ ದಾಖಲಿಸಿ, ನ್ಯಾಯಾಧೀಶರ ಎದುರು ಹಾಜರು ಪಡಿಸಲಿಲ್ಲವೇಕೆ?
ಐದನೆಯದು : ಒಡನಾಡಿಯ ಪರಶುರಾಮ್ ವಿರುದ್ಧ ಫಟ್ ಅಂತ ನೋಟಿಸ್ ಜಾರಿ ಮಾಡುವ ಪೊಲೀಸ್ ಇಲಾಖೆ, ಅದೇ ಸಂಸ್ಥೆಯ ವಿರುದ್ಧ ಕೋಮು ಆಧಾರಿತ ಪೇಲವ ಆರೋಪ ಹೊರೆಸಿದವರ ಮೇಲೆ ನೋಟಿಸ್ ನಿಡಲು ಮುಂದಾಗಲಿಲ್ಲವೇಕೆ? ಪರಶುರಾಮ್ ಮತ್ತು ಸ್ಟ್ಯಾನ್ಲಿಗೆ ಮೇಲಿಂದ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ಬೆದರಿಕೆ ಹಾಕಿದ್ದವರ ಹೆಡೆಮುರಿ ಕಟ್ಟಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲವೇಕೆ?
ಆರನೆಯದು : ಮೊನ್ನೆ ಒಡನಾಡಿಗೆ 10 – 12 ಜನ ಪೊಲೀಸರ ತಂಡ ಅಕ್ರಮವಾಗಿ ನುಸುಳಿದ್ದೇಕೆ? ಅಲ್ಲೇ ಆಶ್ರಯ ಪಡೆದಿರುವ ಸಂತ್ರಸ್ತ ಮಕ್ಕಳಿಗೆ ಹೆದರಿಸಲೋ ಅಥವಾ ಅವರನ್ನು ಅಲ್ಲಿಂದ ಕರೆದು ಕೊಂಡು ಹೋಗಲೋ? ಅಥವಾ ಬೇರೆ ಏನಾದರೂ ಕಾರಣವಿತ್ತೋ? ಪೊಲೀಸ್ ಇಲಾಖೆ ಉತ್ತರಿಸಲೇಬೇಕು.
ಏಳನೆಯದು: ಒಂದೆಡೆ, ತಂದೆತಾಯಿಯ ಸುಳಿವು ಇಲ್ಲದೆ, ಕೆಲ ಎಳೆಯ ಮಕ್ಕಳು ಇದ್ದಕ್ಕಿದ್ದಂತೆ ಮಠದಲ್ಲಿ ಪ್ರತ್ಯಕ್ಷವಾಗುತ್ತವೆ. ಮತ್ತೊಂದೆಡೆ, 12 ಹೆಣ್ಣು, 10 ಗಂಡು ಅನಾಥ ಮಕ್ಕಳು ಮಠದಿಂದ ಕಾಣೆಯಾಗಿದ್ದಾವೆಂಬ ಕೂಗು ಕೇಳಿ ಬರುತ್ತಿದೆ. ಈ ಮೋದಲೇ ಪೊಲೀಸರು ತನಿಖೆ ಯಾಕೆ ಕೈಗೆತ್ತಿಕೊಂಡಿಲ್ಲ!
ಎಂಟನೆಯದು : ದುರ್ಗದ ‘ಮಕ್ಕಳ ಕಲ್ಯಾಣ ಸಮಿತಿ’ ಮಠದಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ಮಕ್ಕಳಿಗೂ ಸರಿಯಾದ ವಿಚಾರಣೆ ನಡೆಸದೆ/ ಕೌನ್ಸಿಲಿಂಗ್ ನಡೆಸದೆ ಅವರವರ ಜಿಲ್ಲೆಗೆ ಕಳುಹಿಸಿದ್ದೇಕೆ? ನಿಷ್ಪಕ್ಷಪಾತ ವಿಚಾರಣೆ ನಡೆಸಿದರೇ ಎರಡನೆ ಪ್ರಕರಣವೂ ಮತ್ತೆ ಮೈಸೂರಿನಲ್ಲೇಕೆ ದಾಖಲಾಗುತ್ತಿತ್ತು?
ಕೊನೆಗೆ ಒಂದು ಮಾತು: ಒಡನಾಡಿಗೆ ಅಕ್ರಮವಾಗಿ ನುಗ್ಗಿದ್ದ ‘ಪೊಲೀಸರ’ ಹಾಗೂ ದುರ್ಗದ ‘ಮಕ್ಕಳ ಕಲ್ಯಾಣ ಸಮಿತಿ’ಯ ಮೇಲೆ ಎಫ್ಐಆರ್ ದಾಖಲಿಸಿ, ಅವರನ್ನು ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಈಗ ಬೆಳಕಿಗೆ ಬಂದಿರುವ ಪ್ರಕರಣಗಳ ದಿಕ್ಕು ತಪ್ಪುವ ಅಥವಾ ಇವೆರಡೇ ಪ್ರಕರಣಕ್ಕೆ ಈ ಹಗರಣ ಸೀಮಿತವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಹಾಗೇನಾದರೂ ಆದರೆ ಅದು ಈ ನೆಲದ ಸಂವಿಧಾನ ಮತ್ತು ಕಾನೂನಿಗೆ ಒಂದು ಅಣಕ.
ಇದು ಸಹಜವಾಗಿ ಅಥವಾ ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲ. ಇದೊದು ವ್ಯವಸ್ಥಿತವಾಗಿ ಸುಮಾರು ವರ್ಷಗಳಿಂದ ನಡೆದ ಲೈಂಗಿಕ ಹಗರಣ. ಇಲ್ಲೊಂದು ಟೀಂ ವರ್ಕ್ ಇದೆ. ಆದರಿಂದ, ರಾಷ್ಟ್ರೀಯ ತನಿಖಾ ಸಂಸ್ಥೆ ಅಥವಾ ಹೈಕೋರ್ಟ್ ನ್ಯಾಯಾಲಯದ ಕಣ್ಗಾವಲಿನಲ್ಲಿ ಈ ಹಗರಣದ ಕುರಿತು ನಿಷ್ಪಕ್ಷಪಾತ ತನಿಖೆ ಆಗಿ, ಸಂತ್ರಸ್ತರೆಲ್ಲರಿಗೂ ನ್ಯಾಯ ಸಿಗಬೇಕು. ಜತೆಗೆ ಆರೋಪಿಗೆ ಸೂಕ್ತ ಶಿಕ್ಷೆ ಆಗಬೇಕು. ಇವೆರಡೂ ಇಲಾಖೆಗಳು ಮುಕ್ತ, ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾವೆಯೇ/ಮಾಡುತ್ತಿವೆಯೇ ಎನ್ನುವುದೇ ಈಗ ಯಕ್ಷ ಪ್ರಶ್ನೆಯಾಗಿದೆ.