ದ ಪಾಲಿಟಿಕ್

ವಿಶ್ವಾಸದ್ರೋಹಿಗಳೆಲ್ಲ ನೆಹರೂ ಕುಟುಂಬದ ಆಪ್ತರೆ : ಸದಾನಂದ ಗಂಗನಬೀಡು

ದ ಪಾಲಿಟಿಕ್

ದ ಪಾಲಿಟಿಕ್

ಕಾಂಗ್ರೆಸ್ ಪಕ್ಷ ಉಳಿಯಬೇಕಿರುವುದು ಯಾರಿಗಾಗಿ? ನೆಹರೂ ಕುಟುಂಬಕ್ಕಾಗಿಯೊ ಅಥವಾ ದೇಶದ ಭವಿಷ್ಯಕ್ಕಾಗಿಯೊ? – ಈ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರ ಮುಂದಿಟ್ಟರೆ ಅವರು ಥಟ್ಟನೆ ನೀಡುವ ಪ್ರತಿಕ್ರಿಯೆ: “ಕಾಂಗ್ರೆಸ್ ಪಕ್ಷ ಉಳಿಯಬೇಕಿರುವುದು ಸ್ವತಃ ಕಾಂಗ್ರೆಸ್ ಗಾಗಿ ಮತ್ತು ದೇಶದ ಭವಿಷ್ಯಕ್ಕಾಗಿ” ಎಂದು. 

ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಸ್ವಾತಂತ್ರ್ಯಾನಂತರ ಈವರೆಗೆ ಮೂರು ಬಾರಿ ಮಾತ್ರ ಚುನಾವಣೆ ನಡೆದಿದ್ದು, ನಾಲ್ಕನೆ ಬಾರಿಯ ಚುನಾವಣೆಗೆ ಅಣಿಯಾಗಿದೆ. 1950ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂಬಿಕಸ್ಥ ಪುರುಷೋತ್ತಮ್ ದಾಸ್ ಟಂಡನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಾದ 47 ವರ್ಷಗಳ ಬಳಿಕ ನಡೆದ 1997ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬೆಂಬಲಿತ ಸೀತಾರಾಮ್ ಕೇಸರಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಇದಾದ ಮೂರು ವರ್ಷದ ನಂತರ ನಡೆದಿದ್ದ 2000ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅಭೂತಪೂರ್ವ ಗೆಲುವು ದಾಖಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದ ಅತ್ಯಂತ ದೀರ್ಘ ಅವಧಿಯ ಅಧ್ಯಕ್ಷರು ಎಂಬ ಖ್ಯಾತಿಗೂ ಅವರು ಭಾಜನರಾಗಿದ್ದಾರೆ. 

ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಾನಂತರವೂ ನೆಹರೂ ಕುಟುಂಬದ ಪ್ರಭಾವಳಿಯಿಂದ ಹೊರಬರಲು ಸಾಧ್ಯವಾಗದ ಕಾರಣ, ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷ ವಂಶಾಡಳಿತ ರಾಜಕಾರಣವನ್ನು ಪೋಷಿಸುತ್ತಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದವು. ಅದರಲ್ಲೂ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರವಂತೂ ಈ ಹುಯಿಲು ಮುಗಿಲು ಮುಟ್ಟಿತು. ಈ ಹುಯಿಲಿಗೆ ಕಾಂಗ್ರೆಸ್ ಪಕ್ಷದೊಳಗಿನ ಕೆಲವು ನಾಯಕರೇ ಅಂತರಂಗದ ಕುಮ್ಮಕ್ಕು ನೀಡಿದ್ದರಿಂದ ಸೋನಿಯಾ ಗಾಂಧಿ ಇರಸುಮುರಸಿಗೆ ಒಳಗಾಗುವುದರ ಜೊತೆಗೆ ಕಾಂಗ್ರೆಸ್ ಕೂಡಾ ದೇಶಾದ್ಯಂತ ದುರ್ಬಲವಾಗತೊಡಿತು. ಹೀಗಾಗಿ ಈ ಬಾರಿ ನೆಹರೂ ಕುಟುಂಬದ ಯಾವ ಸದಸ್ಯರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಿರುವ ನಿರ್ಧಾರವನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೈಗೊಂಡಿದ್ದಾರೆ. ಹೀಗಿದ್ದೂ ತಮ್ಮ ಕುಟುಂಬದ ಆಪ್ತವಲಯದಲ್ಲಿರುವ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನು ಪಕ್ಷದ ಅಧ್ಯಕ್ಷ ಗಾದಿಗೆ ತರಲು ಸೋನಿಯಾ ಗಾಂಧಿ ಉತ್ಸುಕರಾಗಿದ್ದರು. 

ಆದರೆ, ರಾಜಸ್ತಾನ ಮುಖ್ಯಮಂತ್ರಿ ಗಾದಿಯನ್ನು ತೊರೆಯಲೊಲ್ಲದ ‘ಘಾಟಿ ಮುದುಕ’ ಅಶೋಕ್ ಗೆಹಲೋತ್, ತಮ್ಮ ಆಪ್ತರ ಮೂಲಕ ನಡೆಸಿದ ಅನಿರೀಕ್ಷಿತ ಬಂಡಾಯ ಸೋನಿಯಾ ಗಾಂಧಿಯನ್ನು ತೀವ್ರವಾಗಿ ವಿಚಲಿತಗೊಳಿಸಿದೆ. ಅಶೋಕ್ ಗೆಹಲೋತ್ ಅವರ ವಿಶ್ವಾಸದ್ರೋಹದಿಂದ ಸೋನಿಯಾ ಗಾಂಧಿ ಕೆಂಡಾಮಂಡಲರಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಹಾಗೆ ನೋಡಿದರೆ ನೆಹರೂ ಕುಟುಂಬಕ್ಕೆ ವಿಶ್ವಾಸ ದ್ರೋಹ ಎಸಗಿದವರಲ್ಲಿ ಅಶೋಕ್ ಗೆಹಲೋತ್ ಮೊದಲಿಗರೂ ಅಲ್ಲ; ಕೊನೆಯವರೂ ಆಗಲಾರರು. ಈ ವಿಶ್ವಾಸ ದ್ರೋಹಕ್ಕೊಂದು ಸುದೀರ್ಘ ಇತಿಹಾಸವಿದೆ. ಅದಕ್ಕೆ ಮುನ್ನುಡಿ ಬರೆದಿದ್ದು, ನೆಹರೂ ಕುಟುಂಬದ ಆಪ್ತಬಳಗದಲ್ಲಿದ್ದ ಬಹುಭಾಷಾ ಪಂಡಿತ ಪಿ.ವಿ. ನರಸಿಂಹ ರಾವ್!!!

ಚುನಾವಣಾ ಪ್ರಚಾರ ನಡೆಸುತ್ತಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ತಮಿಳು ನಾಡಿನ ಶ್ರೀ ಪೆರಂಬದೂರಿನಲ್ಲಿ ಮೇ 21, 1991ರಲ್ಲಿ ಎಲ್ ಟಿ ಟಿ ಇ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗುತ್ತಾರೆ. ಈ ಅನಿರೀಕ್ಷಿತ ಹತ್ಯೆಯಿಂದ ತೀವ್ರ ಆಘಾತಕ್ಕೊಳಗಾಗುವ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರು ಎಷ್ಟೇ ಅತ್ತು ಕರೆದರೂ ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಾರೆ. ಹೀಗಿದ್ದೂ 1991ರಲ್ಲಿ ತಮ್ಮ ಕುಟುಂಬಕ್ಕೆ ನಿಷ್ಠರಾಗಿದ್ದ ಬಹುಭಾಷಾ ಪಂಡಿತ ಪಿ.ವಿ. ನರಸಿಂಹ ರಾವ್ ಅವರನ್ನು ಪ್ರಧಾನಿ ಹುದ್ದೆಗೆ ಸೂಚಿಸುತ್ತಾರೆ. ಅದರಂತೆ ಪಿ.ವಿ. ನರಸಿಂಹ ರಾವ್ ಪ್ರಧಾನಿಯೂ ಆಗುತ್ತಾರೆ. ಆದರೆ, ಪ್ರಧಾನಿ ಹುದ್ದೆಗೇರುತ್ತಲೇ ಪಿ.ವಿ.ನರಸಿಂಹ ರಾವ್ ಅವರು ತಮ್ಮ ವರಸೆಯನ್ನೇ ಬದಲಿಸುತ್ತಾರೆ. ಬೋಫೋರ್ಸ್ ಹಗರಣವನ್ನು ಮುಂದಿಟ್ಟುಕೊಂಡು ವಿಧವೆ ಸೋನಿಯಾ ಗಾಂಧಿಯವರನ್ನು ಇನ್ನಿಲ್ಲದಂತೆ ಕಾಡುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ, ಪಿ.ವಿ. ನರಸಿಂಹ ರಾವ್ ಅವರು ನಿಧನರಾದಾಗ ಅವರ ಕಳೇಬರವನ್ನು ಕಾಂಗ್ರೆಸ್ ಕಚೇರಿಗೆ ತರಬೇಡಿ ಎಂದು ಸೋನಿಯಾ ಗಾಂಧಿ ತಾಕೀತು ಮಾಡುವಷ್ಟು!!

ಇದಾದ ನಂತರ 1997ರಲ್ಲಿ ಸೋನಿಯಾ ಗಾಂಧಿ ಬೆಂಬಲಿತ ಸೀತಾರಾಂ ಕೇಸರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಾರೆ. ಅವರ ಅವಧಿಯಲ್ಲಿ ಕಾಂಗ್ರೆಸ್ ಬಲಿಷ್ಠವಾಗುವ ಬದಲು ಮತ್ತಷ್ಟು ದುರ್ಬಲವಾಗುತ್ತದೆ. 2000ರಲ್ಲಿ ಪಕ್ಷದಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಸೋನಿಯಾ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿಗೆ ಎದುರಾಗಿ ಸ್ಪರ್ಧಿಸುವ ಜಿತೇಂದ್ರ ಪ್ರಸಾದ್ ಕೇವಲ 94 ಮತ ಪಡೆದರೆ, ಸೋನಿಯಾ ಗಾಂಧಿ 7400ಕ್ಕೂ ಹೆಚ್ಚು ಮತ ಪಡೆದು ಭರ್ಜರಿ ಜಯ ಸಾಧಿಸುತ್ತಾರೆ. ಈ ಗೆಲುವನ್ನು ಅರಗಿಸಿಕೊಳ್ಳಲಾಗದ ನೆಹರೂ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಶರದ್ ಪವಾರ್, ಪಿ.ಎ. ಸಂಗ್ಮಾ, ಬಲರಾಂ ಜಾಖಡ್ ಥರದವರು ಪಕ್ಷ ತೊರೆಯುತ್ತಾರೆ. 

ಇದನ್ನೂ ಓದಿ: ಗೆಹ್ಲೋತ್ ಅವರನ್ನು ಖಳನನ್ನಾಗಿ ಮಾಡುವ ಮುನ್ನ : ಅಮೀನ್ ಮಟ್ಟು

ಇದಾದ ನಾಲ್ಕು ವರ್ಷಗಳ ಅಂತರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳ ಯಶಸ್ವಿ ಆಡಳಿತ ನಡೆಸುತ್ತದೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಆಯಕಟ್ಟಿನ ಅಧಿಕಾರ ಸ್ಥಾನಗಳನ್ನು ಅನುಭವಿಸುವ ಕಾಂಗ್ರೆಸ್ ನಾಯಕರು ಅಧಿಕಾರ ಕಳೆದುಕೊಂಡ ಕೂಡಲೇ ನೆಹರೂ ಕುಟುಂಬದ ವಿರುದ್ಧ ಕತ್ತಿ ಮಸೆಯತೊಡಗುತ್ತಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರವಂತೂ ಈ ನಾಯಕರು ನೆಹರೂ ಕುಟುಂಬದ ವಿರುದ್ಧ ಒಳಗೊಳಗೇ ಕತ್ತಿ ಮಸೆಯತೊಡಗುತ್ತಾರೆ. ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ಧ ಸಾಂಘಿಕ ಹೋರಾಟ ನಡೆಸುವ ಬದಲು ಪಕ್ಷದ ಚುನಾವಣಾ ವೈಫಲ್ಯವನ್ನು ರಾಹುಲ್ ಗಾಂಧಿ ತಲೆಗೆ ಕಟ್ಟುವ ಮೂಲಕ ವಿಘ್ನ ಸಂತೋಷ ಅನುಭವಿಸುತ್ತಾರೆ. ಇದರಿಂದ ಘಾಸಿಗೊಳಗಾಗುವ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. 

ಕಾಂಗ್ರೆಸ್ ನೇತೃತ್ವದ ಯುಪಿಎ ಸತತ ಎರಡು ಅವಧಿಗೆ ಅಧಿಕಾರ ವಂಚಿತರಾದಾಗ ಹೆಚ್ಚು ವಿಚಲಿತರಾಗುವುದು ಆ ಪಕ್ಷದಲ್ಲಿ ಗೂಟ ಹೊಡೆದುಕೊಂಡು ಕೂತಿದ್ದ ಮುದುಕ ನಾಯಕರು. ಈವರೆಗೆ ಒಂದೇ ಒಂದು ನೇರ ಚುನಾವಣೆ ಗೆಲ್ಲಲಾಗದ ಗುಲಾಂ ನಬಿ ಆಜಾದ್ ತರದ ನಾಯಕರು ಜಮ್ಮು ಕಾಶ್ಮೀಡರದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿದ್ದೇ ನೆಹರೂ ಕುಟುಂಬದ ಕೃಪಾಕಟಾಕ್ಷದಿಂದ. ಯಾವಾಗ ಸತತ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿರುವವರುಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಲು ಅವಕಾಶ ನೀಡುವುದಿಲ್ಲ. ಅಂಥವರು ನೇರ ಚುನಾವಣೆಯ ಮೂಲಕ ಗೆದ್ದು ಬರಬೇಕು ಎಂಬ ಕಠಿಣ ನಿರ್ಣಯವನ್ನು ಸೋನಿಯಾ ಗಾಂಧಿ ಕೈಗೊಂಡರೊ ಆಗ ಗುಲಾಂ ನಬಿ ಆಜಾದ್ ಬಂಡಾಯ ನಾಯಕರಾದರು. ಕೊನೆಗೆ ಪ್ರಧಾನಿ ನರೇಂದ್ರ ಮೋದಿಯ ಕಣ್ಸನ್ನೆಯನ್ನು ಅನುಸರಿಸಿ, ಕಾಂಗ್ರೆಸ್ ತೊರೆದು ಪ್ರತ್ಯೇಕ ಪ್ರಾದೇಶಿಕ ಸ್ಥಾಪಿಸಿದ್ದಾರೆ. 

ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಗಾದಿಗೆ ಸೋನಿಯಾ ಮತ್ತೆ ಹಂಗಾಮಿಯಾಗಿ ನೇಮಕಗೊಂಡಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಾನಂತರ ನಾಲ್ಕನೆಯ ಬಾರಿ ಚುನಾಯಿತ ಅಧ್ಯಕ್ಷನನ್ನು ಹೊಂದುವ ತಯಾರಿಯಲ್ಲಿದ್ದು, ಈ ತಯಾರಿಯ ಹಂತದಲ್ಲೇ ನೆಹರೂ ಕುಟುಂಬ ನಿಷ್ಠ ಎಂದೇ ಗುರುತಿಸಿಕೊಂಡಿದ್ದ ‘ಘಾಟಿ ಮುದುಕ’ ಅಶೋಕ್ ಗೆಹಲೋತ್ ಬಂಡಾಯದ ಬಾವುಟ ಹಾರಿಸುವ ಮೂಲಕ ನೆಹರೂ ಕುಟುಂಬಕ್ಕೆ ವಿಶ್ವಾಸ ದ್ರೋಹದ ಉಡುಗೊರೆ ನೀಡಿದ್ದಾರೆ. ಇದು ಸಹಜವಾಗಿಯೇ ಸೋನಿಯಾ ಗಾಂಧಿಯವರನ್ನು ವಿಚಲಿತರನ್ನಾಗಿಸಿದ್ದು, ಗೆಹಲೋತ್ ಸ್ಪರ್ಧೆ ಸಾಧ್ಯರತೆಯನ್ನು ದೂರವಾಗಿಸಿದೆ. ಗೆಹಲೋತ್ ಬದಲಿಗೆ ನೆಹರೂ ಕುಟುಂಬದ ಬೆಂಬಲ ಪಡೆದು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ 2024ರಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸಾಂಘಿಕ ಪ್ರಯತ್ನದಿಂದ ಮರಳಿ ಅಧಿಕಾರಕ್ಕೆ ಬಂದರೆ, ಪ್ರಧಾನಿಯಾಗುವ ಅವಕಾಶ ಪಡೆದರೂ ಅಚ್ಚರಿಯಿಲ್ಲ. 

ಆದರೆ, ಅಶೋಕ್ ಗೆಹಲೋತ್ ತರದ ಘಾಟಿ ಮುದುಕರ ಅಧಿಕಾರ ದಾಹ ರಾಜಕೀಯ ವಲಯದಲ್ಲಿ ವಾಕರಿಕೆ ಮೂಡಿಸಿದೆ. ಅದರಲ್ಲೂ ಕಾಂಗ್ರೆಸ್ ಅತ್ಯಂತ ದುರ್ಬಲಗೊಂಡಿರುವ ಈ ವಿಷಮ ಕಾಲಘಟ್ಟದಲ್ಲಿ ಸಣ್ಣ ತ್ಯಾಗಕ್ಕೂ ಸಿದ್ಧರಿಲ್ಲದ ಇಂತಹ ಮುದುಕರು ನೆಹರೂ ಕುಟುಂಬ ನಿಷ್ಠರೇ ಆಗಿರುವುದು ರಾಜಕೀಯ ವಿಶ್ಲೇಷಕರ ಹುಬ್ಬೇರುವಂತೆ ಮಾಡಿದೆ. 

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಂತರ ಯುವಕರಿಗೆ ಹೆಚ್ಚು ಆದ್ಯತೆ ನೀಡಲು ಮುಂದಾದರು. ಇದು ಸಹಜವಾಗಿಯೇ ಮುದಿ ನಾಯಕರಲ್ಲಿ ತೊಳಲಾಟ ಸೃಷ್ಟಿಸಿತು. ರಾಹುಲ್ ಗಾಂಧಿ ಅತ್ಯಂತ ಭರವಸೆ ಇಟ್ಟಿದ್ದ ಯುವನಾಯಕರ ಪೈಕಿ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಜಿತಿನ್ ಕುಮಾರ್ ಪ್ರಮುಖರು. ಈ ಪೈಕಿ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಜಿತಿನ್ ಕುಮಾರ್ ಕೂಡಾ ಅಧಿಕಾರ ದಾಹದ ಕಾರಣಕ್ಕೆ ರಾಹುಲ್ ಗಾಂಧಿಗೆ ವಿಶ್ವಾಸ ದ್ರೋಹವೆಸಗಿ ಬಿಜೆಪಿ ಪಾಲಾದರು. ಇಂತಹ ಹೊತ್ತಿನಲ್ಲಿ ಯುವ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಲು ಉಳಿದಿರುವ ಮತ್ತೊಬ್ಬ ಯುವ ನಾಯಕ ಸಚಿನ್ ಪೈಲಟ್ ಅವರನ್ನು ಅಶೋಕ್ ಗೆಹಲೋತ್ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಇರಾದೆ ರಾಹುಲ್ ಗಾಂಧಿಯವರದ್ದಾಗಿತ್ತು. ಈ ಆಶಯಕ್ಕೆ ಮತ್ತೆ ಭಂಗ ತಂದಿರುವುದು ನೆಹರೂ ಕುಟುಂಬ ನಿಷ್ಠ ಅಶೋಕ್ ಗೆಹಲೋತ್ ಎಂಬುದು ನಿಜಕ್ಕೂ ಚೋದ್ಯದ ಸಂಗತಿ. 

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸುತ್ತಿರುವ ಕೆಲವು ಹಿರಿಯ ಪತ್ರಕರ್ತರು, ಅಶೋಕ್ ಗೆಹಲೋತ್ ಪರ ವಾದ ಮಂಡಿಸುತ್ತಿದ್ದಾರೆ. ಅಶೋಕ್ ಗೆಹಲೋತ್ ಪರ 90 ಶಾಸಕರು ಇರುವುದರಿಂದ ಅವರು ಸೂಚಿಸುವ ವ್ಯಕ್ತಿ ಅಥವಾ ಚುನಾಯಿತ ಶಾಸಕಾಂಗ ಪಕ್ಷದ ನಾಯಕನನ್ನು ಮುಖ್ಯಮಂತ್ರಿ ಮಾಡುವುದು ಮಾತ್ರ ಪ್ರಜಾಸತ್ತಾತ್ಮಕವಾಗಲಿದೆ ಎಂದು ವಾದಿಸುತ್ತಿದ್ದಾರೆ. ಈ ವಾದ ಎಷ್ಟು ಬಾಲಿಶವೆಂಬುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯಲ್ಲೇ ಉತ್ತರವಿದೆ. ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿದ್ದ ಸಂದರ್ಭದಲ್ಲಿ ಆ ಪಕ್ಷದಲ್ಲಿನ ಯಾವ ನಾಯಕರೂ ಪ್ರಜಾಸತ್ತಾತ್ಮಕ ಆಯ್ಕೆಯ ಬಗ್ಗೆ ತುಟಿಯನ್ನು ಬಿಚ್ಚಿದ ನಿದರ್ಶನವೇ ಇಲ್ಲ. ಹೀಗಿದ್ದೂ ಹಲವಾರು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದೆ. ಇಂತಹ ಆಯ್ಕೆಯ ಕಾರಣಕ್ಕೇ ಶಾಸಕರ ಬೆಂಬಲವಿಲ್ಲದಿದ್ದ ಹಿಂದುಳಿದ ಈಡಿಗ ಸಮುದಾಯದ ಎಸ್. ಬಂಗಾರಪ್ಪ, ಕ್ಷೌರಿಕ ಸಮುದಾಯದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು. 

ಸಾಮಾಜಿಕ ನ್ಯಾಯ ಜಾರಿಗೊಳಿಸುವಾಗ ಬಹುಸಂಖ್ಯಾತರ ಅಭಿಪ್ರಾಯಕ್ಕೇ ಮನ್ನಣೆ ನೀಡಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಬಹುಸಂಖ್ಯಾತರ ಅಭಿಪ್ರಾಯದ ಆಧಾರದಲ್ಲಿ ರಾಜಕಾರಣ ಮಾಡಲು ಹೊರಟರೆ ಅವಕಾಶ ವಂಚಿತ ಸಮುದಾಯಗಳು ಇನ್ನು ಒಂದು ಶತಮಾನ ಕಳೆದರೂ ರಾಜಕೀಯ ಅಧಿಕಾರ ವಂಚಿತವಾಗಿಯೇ ಉಳಿಯಲಿವೆ. ಹಾಗಾದರೆ, ಸಚಿನ್ ಪೈಲಟ್ ಅವಕಾಶ ವಂಚಿತ ಸಮುದಾಯದವರೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ನಿಜ, ಸಚಿನ್ ಪೈಲಟ್ ಬಲಿಷ್ಠ ರಜಪೂತ ಸಮುದಾಯಕ್ಕೆ ಸೇರಿದವರು. ಅವರ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ, ಕೇಂದ್ರ ಸಚಿವ ಪದವಿಗಳನ್ನೆಲ್ಲ ಅನುಭವಿಸಿದೆ. ಆದರೆ, ಸಾಮಾಜಿಕ ನ್ಯಾಯದ ಮಾನದಂಡವನ್ನು ಬಳಸಿದಾಗ ಸಚಿನ್ ಪೈಲಟ್ ಕೂಡಾ ಅವಕಾಶ ವಂಚಿತರೇ ಆಗಿದ್ದಾರೆ. ಯಾಕೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ಈವರೆಗೆ ಎಲ್ಲ ಪ್ರಮುಖ ರಾಜಕೀಯ ಹುದ್ದೆಗಳು ಒಲಿದಿರುವುದು ಮುದುಕರು ಹಾಗೂ ಅನುಭವಿಗಳಿಗೇನೆ. ಇದರಿಂದ ಸಹಜವಾಗಿಯೇ ಯುವ ಸಮೂಹ ಕಾಂಗ್ರೆಸ್ ಪಕ್ಷದಿಂದ ವಿಮುಖವಾಗುತ್ತಿದೆ. ಯುವ ಸಮೂಹದಲ್ಲಿ ಕಾಂಗ್ರೆಸ್ ಬಗ್ಗೆ ಮತ್ತೆ ಭರವಸೆ ಮೂಡಿಸಬೇಕಿದ್ದರೆ, ಸಂಖ್ಯಾಬಲ ರಾಜಕಾರಣವನ್ನು ಬದಿಗೊತ್ತಿ ಸಚಿನ್ ಪೈಲಟ್ ಅವರಿಗೆ ಆಡಳಿತ ನಡೆಸುವ ಒಂದು ಅವಕಾಶ ಒದಗಿಸಬೇಕಿದ್ದದ್ದು ಸಾಮಾಜಿಕ ನ್ಯಾಯದ ಭಾಗವೇ ಆಗಿದೆ. 

ಕೊನೆಯದಾಗಿ, ರಾಜಸ್ತಾನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹಲೋತ್ ಮುಂದುವರಿಯಬಲ್ಲರಾದರೂ, ಅವರು ಮತ್ತೆಂದೂ ನೆಹರೂ ಕುಟುಂಬದ ಆಪ್ತವಲಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಇದರಿಂದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆ ಅಧಿಕವಾಗಿದೆ. ಅವರು ಅಂತಹ ಅವಕಾಶ ಒದಗಿ ಬಂದರೆ, ಸಮರ್ಥವಾಗಿ ಬಳಸಿಕೊಂಡು ತಮ್ಮ ದಕ್ಷತೆ ಹಾಗೂ ಬದ್ಧತೆಯನ್ನು ನಿರೂಪಿಸಲಿ ಎಂಬುದು ಈ ಹೊತ್ತಿನ ಹಾರೈಕೆ…

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!