ನಮ್ಮಲ್ಲಿ ಬಹಳ ಮಂದಿ ಈಗಾಗಲೇ ಅಶೋಕ್ ಗೆಹ್ಲೋತ್ ಅವರನ್ನು ಖಳನಾಯಕನನ್ನಾಗಿ ಮಾಡಿಯಾಗಿದೆ. ಅವರೊಬ್ಬ ಅಧಿಕಾರದ ಲಾಲಸಿ, ಯುವಕನೊಬ್ಬನಿಗೆ ಅವಕಾಶ ನೀಡದ ಮುದುಕ ಎಂದೆಲ್ಲಾ ಶಾಪ ಹಾಕಲು ಶುರುವಾಗಿದೆ. ಇದಕ್ಕೆ ಕಾರಣ ನಮ್ಮ ಕನ್ನಡ ಪತ್ರಿಕೆಗಳು ಮತ್ತು ಕನ್ನಡ ಚಾನೆಲ್ ಗಳಲ್ಲಿ ಬೇರೆ ರಾಜ್ಯಗಳ ರಾಜಕೀಯದ ಆಳ-ಅಗಲ ವಿಶ್ಲೇಷಣೆಗಳು ಇರುವುದಿಲ್ಲ. ಇಂಗ್ಲೀಷ್ ಪತ್ರಿಕೆ-ಚಾನೆಲ್ ಗಳಲ್ಲಿ ಬಂದರೂ ಅದನ್ನು ಗಮನಿಸುವವರು ಕಡಿಮೆ.
ರಾಜಸ್ತಾನದ ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ದೂರದಿಂದ ನೋಡುವವರು ಎರಡು ಕಾರಣಗಳಿಗಾಗಿ ಸಚಿನ್ ಪೈಲಟ್ ಬಗ್ಗೆ ಅನುಕಂಪ ಹೊಂದಿದ್ದಾರೆ. ಇವರಲ್ಲಿ ಮೊದಲನೆಯದಾಗಿ ಭಾರತದ ರಾಜಕೀಯ ‘ವೃದ್ಧಾಶ್ರಮ’ವಾಗುತ್ತಿದೆ ಎಂಬ ಅಸಮಾಧಾನ ಮತ್ತು ಯುವಜನರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಸಿಗಬೇಕೆಂಬ ಆಶಯ ಇದೆ. ಎರಡನೆಯದಾಗಿ ರಾಜಸ್ತಾನದ ವಿಧಾನಸಭಾ ಚುನಾವಣೆಯ ಗೆಲುವಿನ ರೂವಾರಿಯಾಗಿರುವ ಸಚಿನ ಪೈಲಟ್ ಅವರಿಗೆ ಅನ್ಯಾಯವಾಗುತ್ತಲೇ ಇದೆ ಎಂಬ ಅಭಿಪ್ರಾಯ.
ಮೊದಲನೆಯ ಕಾರಣದಲ್ಲಿ ಅರ್ಧ ಸತ್ಯ ಇದೆ, ಆದರೆ ಭಾರತದ ರಾಜಕೀಯದಲ್ಲಿ ಅವಕಾಶ ಪಡೆದುಕೊಂಡಿರುವ ಯುವನಾಯಕರು ಯಶಸ್ಸು ಗಳಿಸಿದ್ದು ಕಡಿಮೆ ಎನ್ನುವ ವಾಸ್ತವ ಕೂಡಾ ನಮ್ಮ ಮುಂದಿದೆ. ಅರವಿಂದ್ ಕೇಜ್ರಿವಾಲ್ ಒಬ್ಬರನ್ನು ಹೊರತುಪಡಿಸಿ, ರಾಜೀವ್ ಗಾಂಧಿಯವರಿಂದ ಹಿಡಿದು ಆರ್.ಗುಂಡೂರಾವ್, ಪ್ರಪುಲ್ ಕುಮಾರ್ ಮಹಂತ ವರೆಗೆ, ಒಮರ್ ಅಬ್ದುಲ್ಲಾ ಅವರಿಂದ ಹಿಡಿದು ಅಖಿಲೇಶ್ ಯಾದವ್ ವರೆಗೆ ಯಾವ ಯುವ ನಾಯಕರೂ ಯಶಸ್ವಿ ನಾಯಕರೆಂದು ತಮ್ಮನ್ನು ಸಾಬೀತುಪಡಿಸಿಲ್ಲ. ಜಗನ್ ಮೋಹನ್ ರೆಡ್ಡಿ ಬಗ್ಗೆ ತೀರ್ಮಾನಕ್ಕೆ ಬರಲು ಇನ್ನಷ್ಟು ಕಾಲವಕಾಶ ಬೇಕು. ಹೀಗಿರುವಾಗ ಯಾವ ಕ್ಷೇತ್ರದಲ್ಲಿಯೂ ಯುವಜನರಿಗೆ ಇಲ್ಲದ ಮೀಸಲಾತಿ ರಾಜಕೀಯದಲ್ಲಿ ಮಾತ್ರ ಯಾಕೆ ಬೇಕು ಎನ್ನುವ ಪ್ರಶ್ನೆ ಕೂಡಾ ಇದೆ.
ಸಚಿನ್ ಪೈಲಟ್ ಗೆ ಮೀಸಲಾತಿ ಬೇಕಾಗಿಲ್ಲ, ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ವಾದಿಸುವವರಿದ್ದಾರೆ. ಈ ರೀತಿ ವಾದಿಸುವವರು ಸಚಿನ್ ಪೈಲಟ್ ಮೊದಲು ಬಂಡೆದ್ದಾಗ ಅವರ ಬಳಿ ಇದ್ದದ್ದು 20ಕ್ಕಿಂತಲೂ ಕಡಿಮೆ ಶಾಸಕರು. ತಮ್ಮ ಜೊತೆ ಗೆಹ್ಲೋತ್ ಸರ್ಕಾರವನ್ನು ಉರುಳಿಸಲು ಬೇಕಾದ ಕನಿಷ್ಠ 30 ಮಂದಿ ಶಾಸಕರನ್ನು ಕರೆದೊಯ್ಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಮರೆತಿದ್ದಾರೆ. ಶಾಸಕಾಂಗ ಪಕ್ಷದಲ್ಲಿ 20 ಶಾಸಕರ ಬೆಂಬಲದ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಪೇಕ್ಷಿಸುವುದು ‘ಯುವಕ ಅವಸರದಲ್ಲಿದ್ದಾನೆ’ ಎಂದಷ್ಟೆ ತೋರಿಸುತ್ತದೆ ಹೊರತು ಅವರ ಶಕ್ತಿ-ಸಾಮರ್ಥ್ಯ ಅಲ್ಲ. ಈ ಬಾರಿ ಆ 20 ಮಂದಿಯಲ್ಲಿ ಅರ್ಧದಷ್ಟು ಶಾಸಕರನ್ನು ಕೂಡಾ ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲು ಪೈಲಟ್ ಗೆ ಸಾಧ್ಯವಾಗಿಲ್ಲ.
ಒಬ್ಬ ಯುವನಾಯಕ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುವುದು ಹೇಗೆ ಎನ್ನುವುದಕ್ಕೆ ರಾಜಸ್ತಾನದ ಇತಿಹಾಸದಲ್ಲಿಯೇ ಒಂದು ರೋಚಕವಾದ ಎಪಿಸೋಡ್ ಇದೆ. 2003ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗಾಗಿ ನಾನು ರಾಜಸ್ತಾನಕ್ಕೆ ಹೋಗಿದ್ದಾಗ, ಆ ಚುನಾವಣೆಯಲ್ಲಿ ಕಾಂಗ್ರೆಸ್ ವೀಕ್ಷಕರಾಗಿದ್ದ ಬಿ.ಕೆ.ಹರಿಪ್ರಸಾದ್ ಇದನ್ನು ಹೇಳಿದ್ದು. ಇದನ್ನು ನನ್ನ ಸಮೀಕ್ಷಾ ವರದಿಯಲ್ಲಿ ಬರೆದಿದ್ದೆ.
ಈಗಿನ ಪ್ರಕರಣದಲ್ಲಿ ‘ ಮುದುಕ’ ಎಂದು ಬಣ್ಣಿಸಲಾಗುವ ಅಶೋಕ್ ಗೆಹ್ಲೋತ್ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಕತೆ ಅದು. ಈಗಿನ 42ರ ಹರಯದ ಸಚಿನ್ ಪೈಲಟ್ ಸ್ಥಾನದಲ್ಲಿ ಅಂದು 49ರ ಹರಯದ ಅಶೋಕ್ ಗೆಹ್ಲೋತ್ ಇದ್ದರು. 1998ರಲ್ಲಿ ಅಶೋಕ್ ಗೆಹ್ಲೋತ್ ಕೂಡಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು.
ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಘಟಾನುಘಟಿಗಳ ಉದ್ದನೆಯ ಪಟ್ಟಿ ಇತ್ತು. ಅವರಲ್ಲಿ ನವಲ್ ಕಿಶೋರ್ ಶರ್ಮಾ, ನಟವರ್ ಸಿಂಗ್, ಬಲರಾಮ್ ಜಾಖಡ್, ಬೂಟಾ ಸಿಂಗ್, ಶಿವಚರಣ್ ಮಾಥುರ್, ರಾಮ್ ನಿವಾಸ್ ಮಿರ್ದಾ, ಹರದೇವ್ ಜೋಷಿ, ಪರಸ್ ರಾಮ್ ಮದ್ನೇರಾ ಮೊದಲಾದವರೆಲ್ಲರೂ ಸೇರಿದ್ದರು. ಇವರೆಲ್ಲರೂ ಸೇರಿ ಅಶೋಕ್ ಗೆಹ್ಲೋತ್ ಅವರನ್ನು ಸೋಲಿಸಬೇಕೆಂಬ ಸಮಾನ ಉದ್ದೇಶದಿಂದ ಕೆಲಸ ಮಾಡಿದ್ದರು. ಆ ಚುನಾವಣೆಯಲ್ಲಿಯೂ ವೀಕ್ಷಕರಾಗಿದ್ದ ಹರಿಪ್ರಸಾದ್ ಅವರಿಗೆ ಇದರ ವಿವರ ಗೊತ್ತು. ( ಯಾವುದೇ ಕಾರಣಕ್ಕೂ ಗೆಹ್ಲೋತ್ ಸೋಲಲು ಬಿಡಬಾರದು ಎಂದು ಸೋನಿಯಾಗಾಂಧಿ ಅವರಿಗೆ ಹೇಳಿ ಕಳಿಸಿದ್ದರಂತೆ) ಕೊನೆಗೂ ಆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಮುಖ್ಯಮಂತ್ರಿಯಾದವರು ಅಶೋಕ್ ಗೆಹ್ಲೋತ್.
ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷ ಅಧ್ಯಕ್ಷರಾಗಿ ಪ್ರೊಬೆಷನ್ ಅವಧಿ ಮುಗಿಸುತ್ತಿದ್ದ ಆ ಕಾಲದಲ್ಲಿ ಗೆಹ್ಲೋತ್ ಅವರಿಗೆ ಹೈಕಮಾಂಡ್ ಬೆಂಬಲ ಕೂಡಾ ಇರಲಿಲ್ಲ.
ಈಗ 2019ರ ವಿಧಾನಸಭಾ ಚುನಾವಣೆಗೆ ಬರೋಣ. ಈ ಚುನಾವಣೆಯ ಕಾಲದಲ್ಲಿ ಸಚಿನ್ ಪೈಲಟ್ ರಾಜಸ್ತಾನದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು. ಕಾಂಗ್ರೆಸ್ ಪಕ್ಷ ಗೆದ್ದ ನಂತರ ಪಕ್ಷದ ಶಾಸಕರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದು ಅಶೋಕ್ ಗೆಹ್ಲೊತ್ ಅವರನ್ನು. ಸಚಿನ್ ನಿಜಕ್ಕೂ ಗೆಲುವಿನ ರೂವಾರಿಯಾಗಿದ್ದರೆ ಬಹುಸಂಖ್ಯೆಯಲ್ಲಿ ಶಾಸಕರು ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಬೇಕಾಗಿತ್ತಲ್ಲಾ?
ಸಚಿನ್ ಪೈಲಟ್ ಅವರ ಬಹಳ ದೊಡ್ಡ ಶಕ್ತಿ ಮಾಧ್ಯಮ ನಿರ್ವಹಣೆ. ಒಂದಷ್ಟು ದಿನ ಬಿಬಿಸಿ ಯಲ್ಲಿಯೂ ಅವರು ಕೆಲಸ ಮಾಡಿದ್ದರಂತೆ. ‘’ ಲ್ಯೂಟಿನ್ ಡೆಲ್ಲಿ’ಯ ಪತ್ರಕರ್ತರಿಗೆ ‘ ಒಳ್ಳೆಯ ಇಂಗ್ಲೀಷ್ ಮಾತನಾಡುವ, ಆಕರ್ಷಕ ಟಿವಿ ಬೈಟ್ ನೀಡುವ, ಸುರದ್ರೂಪಿ’ಗಳೆಂದರೆ ಅಚ್ಚು ಮೆಚ್ಚು. ಈ ದೌರ್ಬಲ್ಯವನ್ನು ಚೆನ್ನಾಗಿಯೇ ಬಳಸಿಕೊಂಡ ಸಚಿನ್ ‘ಲ್ಯೂಟಿನ್ ಡೆಲ್ಲಿ’ ಪತ್ರಕರ್ತರ ಮುಂದೆ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದ ತನಗೆ ಅನ್ಯಾಯವಾಗಿದೆ ಎಂದು ಕಣ್ಣೀರು ಹಾಕುತ್ತಾ ಅನುಕಂಪ ಗಿಟ್ಟಿಸುತ್ತಾ ಬಂದಿದ್ದಾರೆ.
ಬಹಳ ಮಂದಿಗೆ ಅಶೋಕ್ ಗೆಹ್ಲೊತ್ ಎಂಬ ಜಾದೂಗಾರನ ಮಗನ ಶಕ್ತಿ ಗೊತ್ತಿಲ್ಲ. ಹಿಂದುಳಿದ ‘ಮಾಲಿ’ ಜಾತಿಗೆ ಸೇರಿರುವ ಅಶೋಕ್ ಗೆಹ್ಲೋತ್ ತಂದೆ ಊರೂರು ತಿರುಗಿ ಜಾದು ಪ್ರದರ್ಶನ ನೀಡುತ್ತಿದ್ದರಂತೆ. ರಾಜಸ್ತಾನದಲ್ಲಿ ಯುಪಿ,ಬಿಹಾರವನ್ನು ಮೀರಿಸಿದ ಜಾತಿ ರಾಜಕೀಯ ಇದೆ. ಜಾಟರು,ಗುಜ್ಜರ್,ಮೀನಾ, ರಜಪೂತರು ಹೀಗೆ ಎಲ್ಲವೂ ಶಕ್ತಿಶಾಲಿ ಜಾತಿಗಳು. ಅವುಗಳ ನಡುವೆ ಅಶೋಕ್ ಗೆಹ್ಲೋತ್ ಅವರದ್ದು ಸೂಕ್ಷ್ಮದರ್ಶಕದಲ್ಲಿ ಹುಡುಕಬೇಕಾದ ‘ಮಾಲಿ’ ಜಾತಿ.
ಈ ಅಶೋಕ್ ಗೆಹ್ಲೋತ್ ನಮ್ಮ ದೇವೇಗೌಡ, ಬಂಗಾರಪ್ಪ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪನವರಂತಹ ಚಾಣಾಕ್ಯ ರಾಜಕಾರಣಿ. ರಾಜ್ಯದ ಮೂಲೆಮೂಲೆಯಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಹೆಸರಿಡಿದು ಕರೆಯುವಷ್ಟರ ಮಟ್ಟಿಗೆ ಸಂಪರ್ಕ ಇಟ್ಟುಕೊಂಡವರು. ನಿಜ ಹೇಳಬೇಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಸಚಿನ್ ಪೈಲಟ್ ನನ್ನು ಗೆಹ್ಲೋತ್ ಸೋಲಿಸಿಬಿಟ್ಟಿದ್ದರು.
ಬಹುಸಂಖ್ಯಾತ ಶಾಸಕರ ಬೆಂಬಲ ಇದ್ದದ್ದು ಅಶೋಕ್ ಗೆಹ್ಲೋತ್ ಗೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಬೆಂಬಲಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ನಂಬಿದ್ದ ಈ ‘ಅವಸರದಲ್ಲಿರುವ ಯುವಕ’ನಿಗೆ ನಿರಾಶೆಯಾಗಿದೆ.
ಮುಖ್ಯಮಂತ್ರಿಯಾಗಲು ಎರಡು ಬಾರಿ ಪ್ರಯತ್ನ ಪಟ್ಟು ವಿಫಲರಾದ ಸಚಿನ್ ಪೈಲಟ್ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ. ಆದರೆ ಇವರಲ್ಲಿ ತಯಾರಿ ಇಲ್ಲ, ಈಗಲೂ ಇವರು ನಂಬಿದ್ದು ‘ಲ್ಯೂಟಿನ್ ಡೆಲ್ಲಿ’ಯ ಪತ್ರಕರ್ತರು ಮತ್ತು ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರ ಬೆಂಬಲವನ್ನು.
ರಾಹುಲ್ ಗಾಂಧಿಯವರಿಗೆ ಈ ಗೆಹ್ಲೋತ್ ಒಂದು ರೀತಿಯಲ್ಲಿ ರಾಜಕೀಯ ಗುರು ಇದ್ದ ಹಾಗೆ. ಅವರು ಇಕ್ಕಟ್ಟಿನಲ್ಲಿದ್ದಾರೆ, ಬೆಂಬಲಿಸದೆ ಇದ್ದರೆ ‘ ನೋಡಿ, ಈ ರಾಹುಲ್ ಕಾಂಗ್ರೆಸ್ ಪಕ್ಷದಲ್ಲಿ ಯುವನಾಯಕರು ಮೇಲೆ ಬರಲು ಬಿಡುತ್ತನೇ ಇಲ್ಲ, ಇದರಿಂದಾಗಿ ಜ್ಯೋತಿರಾದಿತ್ಯ ಸಿಂದಿಯಾ, ಜಿತೇನ್ ಪ್ರಸಾದ ಮೊದಲಾದ ಯುವನಾಯಕರೆಲ್ಲರೂ ಪಕ್ಷ ಬಿಟ್ಟು ಹೋದರು’ ಎಂದೆಲ್ಲ ಆಪಾದನೆ ಕೇಳಬೇಕಾಗುತ್ತದೆ.
ಈಗಿನ ವಿವಾದ ಸರಳ ಮತ್ತು ಸ್ಪಷ್ಟ. ಅಶೋಕ್ ಗೆಹ್ಲೋತ್ ಅವರಿಗೆ ಪಕ್ಷದ ಅಧ್ಯಕ್ಷರಾಗಲು ಖಂಡಿತ ಮನಸ್ಸಿರಲಿಲ್ಲ. ಹೀಗಿದ್ದರೂ ಅವರು ಹೈಕಮಾಂಡ್ ಆದೇಶಕ್ಕೆ ಮಣಿದು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಇನ್ನೊಂದು ಆದೇಶ ನೀಡಿದ್ದಾರೆ. ಅದನ್ನೂ ಗೆಹ್ಲೋತ್ ಒಪ್ಪಿಕೊಂಡಿದ್ದಾರೆ. ಆದರೆ ಮುಂದಿನ ಮುಖ್ಯಮಂತ್ರಿಯ ಆಯ್ಕೆಯನ್ನು ನನಗೆ ಬಿಡಬೇಕು ಎನ್ನುವ ಒಂದು ಷರತ್ತು ಹಾಕಿದ್ದಾರೆ. ಇದು ಸಹಜ ಅಲ್ಲವೇ? ಎರಡು ವರ್ಷಗಳ ಹಿಂದೆ 20 ಶಾಸಕರನ್ನು ಹಿಡಿದುಕೊಂಡು ಮುಖ್ಯಮಂತ್ರಿಯಾಗುತ್ತೇನೆಂದು ಸಚಿನ್ ಪೈಲಟ್ ಬಂಡೆದ್ದದ್ದನ್ನು ಗೆಹ್ಲೋತ್ ಮರೆತಿಲ್ಲ, ಅವರಿಗಿಂತಲೂ ಹೆಚ್ಚಾಗಿ ಗೆಹ್ಲೋತ್ ಜೊತೆ ನಿಂತ 80-90 ಶಾಸಕರೂ ಮರೆತಿಲ್ಲ. ಸಚಿನ್ ಮುಖ್ಯಮಂತ್ರಿಯಾದರೆ ತಮ್ಮನ್ನು ಕಡೆಗಣಿಸಬಹುದು ಎಂಬ ಸಹಜ ಅನುಮಾನ ಈ ಶಾಸಕರಲ್ಲಿದೆ. ಕಷ್ಟಕಾಲದಲ್ಲಿ ತನ್ನ ಬೆಂಬಲಕ್ಕೆ ನಿಂತಿದ್ದ ಶಾಸಕರ ಹಿತರಕ್ಷಣೆ ತನ್ನ ಕರ್ತವ್ಯ ಎಂದು ಗೆಹ್ಲೋತ್ ತಿಳಿದುಕೊಂಡಿದ್ದಾರೆ.
ಇದಕ್ಕೆ ಸುಲಭದ ಪರಿಹಾರವೆಂದರೆ ಹೈಕಮಾಂಡ್ ಮಧ್ಯಪ್ರವೇಶ ಮಾಡದೆ ಒಂದೊಮ್ಮೆ ಗೆಹ್ಲೋತ್ ಪಕ್ಷದ ಅಧ್ಯಕ್ಷರಾಗಲು ಒಪ್ಪಿ ಮುಖ್ಯಮಂತ್ರಿ ಸ್ಥಾ ನಕ್ಕೆ ರಾಜೀನಾಮೆ ನೀಡಿದರೆ ಶಾಸಕಾಂಗ ಪಕ್ಷ ಆಯ್ಕೆಮಾಡುವವರು ನೂತನ ಮುಖ್ಯಮಂತ್ರಿಯಾಗಬೇಕು. ಇದು ಪ್ರಜಾಪ್ರಭುತ್ವದ ಮಾದರಿ. ಇದನ್ನು ಬಿಟ್ಟು ಶಾಸಕರ ಬೆಂಬಲ ಇಲ್ಲದ ಪೈಲಟ್ ಅವರನ್ನು ಹೈಕಮಾಂಡ್ ಹೇರಿದರೆ ಅದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ.