ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದೆ. ಪ್ರಗತಿಪರ ಗೆಳೆಯರಲ್ಲಿ ಆತಂಕವೂ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭಜರಂಗದಳ ಮತ್ತು ಪಿಎಫ್‌ಐ ಸಂಘಟನೆಗಳ ಪ್ರಸ್ತಾಪ. ನಿನ್ನೆಯಿಂದ ಸುಮಾರು ನಾಲ್ಕೈದು ಮಂದಿ ಗೆಳೆಯರು ಫೋನ್ ಮಾಡಿ, ಆತಂಕದೊಟ್ಟಿಗೆ ಮಾತಾಡಿದರು. ಸಲೀಸಾಗಿದ್ದ ಚುನಾವಣೆಯನ್ನು ಕಾಂಗ್ರೆಸ್ ಸ್ವತಃ ಕಗ್ಗಂಟು ಮಾಡಿಕೊಂಡಿದೆ, ಬಿಜೆಪಿಗೆ ತಾನಾಗಿಯೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಿದೆ, ಇದರಿಂದ ಬರಲಿದ್ದ ಫಲಿತಾಂಶ ಏರುಪೇರಾಗಲಿದೆ ಎಂದು ಗಾಬರಿಗೊಂಡಿದ್ದರು. ಅವರ ಆತಂಕ, ಕಾಳಜಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಯಾಕೆಂದರೆ, ಈ ನಾಡಿನ ಒಳಿತಿಗಾಗಿ ಮತ್ತು ಸಂವಿಧಾನದ ನೆಲೆಗಟ್ಟಿನ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಲ ಬಿಜೆಪಿ ಸೋಲಬೇಕು ಎಂಬುದು ಅವರ ಆಶಯ. ಇದು ನನ್ನದೂ ಹೌದು. ಆದರೆ ಭಜರಂಗದಳದ ಇಶ್ಯೂ ಆಧರಿಸಿ ಅವರಲ್ಲಿ ಹುಟ್ಟಿರುವ ಆತಂಕದ ಬಗ್ಗೆ ನನಗೆ ಅಷ್ಟೇನೂ ಆಸಕ್ತಿಯಿಲ್ಲ!
ನನ್ನ ಈ ಅಭಿಪ್ರಾಯಕ್ಕೆ ಖಂಡಿತ ಒಂದು ಕಾರಣವಿದೆ.
ಕರ್ನಾಟಕದ ಚುನಾವಣಾ ರಾಜಕೀಯ ಇತಿಹಾಸವನ್ನು ನೀವು ಗಮನಿಸಿದರೆ, ಹಿಂದೂತ್ವದ ಅಲೆ ಮೇಲೆ ಇಲ್ಲಿ ಇದುವರೆಗೆ ಯಾವ ವಿಧಾನಸಭಾ ಚುನಾವಣೆಯೂ ನಡೆದಿಲ್ಲ. ಇಲ್ಲಿ ಜಾತಿಯೇ ಪ್ರಧಾನ. ಆ ಜಾತಿಯನ್ನು ಪ್ರತಿನಿಧಿಸುವ ನಾಯಕನಿಗೆ ಎರಡನೇ ಸ್ಥಾನ. ಹಣಕ್ಕೆ ಮೂರನೇ ಸನ್ಮಾನ. ಸ್ವಾತಂತ್ರ್ಯಾನಂತರದ ಕರ್ನಾಟಕದ ಮುಖ್ಯಮಂತ್ರಿಗಳ ಆಳ್ವಿಕೆಯ ವರ್ಷಗಳನ್ನು ಗಣನೆಗೆ ತೆಗೆದುಕೊಂಡಾಗ ಶೇ.70ರಷ್ಟು ವರ್ಷಗಳ (ಅಂದರೆ 76 ವರ್ಷಗಳಲ್ಲಿ ಸುಮಾರು 50 ವರ್ಷಗಳಷ್ಟು ಕಾಲ) ಆಳ್ವಿಕೆಯನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಗಳೇ ಆಳಿದ್ದಾರೆ! ಇಲ್ಲಿ ಜಾತಿಯೇ ಪ್ರಧಾನ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ? ಬಿಜೆಪಿ ಗಮನಾರ್ಹ ಸಾಧನೆ ತೋರಲು ಶುರು ಮಾಡಿದ 1994ರ ಚುನಾವಣೆಯಿಂದ ಮೊದಲ್ಗೊಂಡು ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಶಕ್ತಿಯಾದದ್ದು ಲಿಂಗಾಯತ ಸಮುದಾಯದ ಯಡಿಯೂರಪ್ಪನವರೇ ಹೊರತು, ಹಿಂದೂತ್ವವಲ್ಲ. 2013ರ ಚುನಾವಣೆಯಲ್ಲಿ ಯಡಿಯೂರಪ್ಪನವರು ಪಕ್ಷದಿಂದ ಹೊರನಡೆದು ಕೆಜೆಪಿ ಕಟ್ಟಿಕೊಂಡಾಗ, ಬಿಜೆಪಿ ತಲುಪಿದ ಪಾತಾಳ ಸ್ಥಿತಿಯೇ ಇದಕ್ಕೆ ಸಾಕ್ಷಿ. ಹಾಗಂತ ಕರ್ನಾಟಕದಲ್ಲಿ ಹಿಂದೂತ್ವ ಬಲಗೊಂಡಿಲ್ಲ ಎಂದು ನಾನು ಹೇಳುತ್ತಿಲ್ಲ. ಸಮಾಜದ ನಡುವೆ ಅದು ತುಂಬಾ ವ್ಯವಸ್ಥಿತವಾಗಿ, ವೇಗವಾಗಿ ಪಸರಿಸುತ್ತಿದೆ. ಆದರೆ ಚುನಾವಣೆಯನ್ನು ಏಕಾಏಕಿ ನಿರ್ಧರಿಸುವಷ್ಟು ಬಲಾಢ್ಯವಾಗಿ ರೂಪುಗೊಳ್ಳಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕರ್ನಾಟಕದ ಮಟ್ಟಿಗೆ ಅದಕ್ಕೊಂದು ಕೊರತೆ ಕಾಡುತ್ತಿದೆ.
ಹಿಂದೂತ್ವವಿರಬಹುದು ಅಥವಾ ಬೇರಾವುದೇ ಪಂಥೀಯ ಸಿದ್ಧಾಂತವಿರಬಹುದು, ಸಮಾಜದಲ್ಲಿ ಅದಕ್ಕೆ ಎಷ್ಟೇ ಸಹಮತವಿದ್ದರೂ, ಆ ಸಹಮತವನ್ನು ಶಕ್ತಿಯಾಗಿ ಕ್ರೋಢೀಕರಿಸುವ ಮಾಸ್ ಲೀಡರಿಕೆಯ ‘ನಾಯಕ’ನ ಒಂದು ಮುಖ ಬೇಕಾಗುತ್ತದೆ. ಹಿಂದಿ ಭಾಷೆಗಳ ಪ್ರಭಾವವಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೂತ್ವದ ಮಾಸ್ ಲೀಡರ್ ನಾಯಕನ ಸ್ಥಾನವನ್ನು ಮೋದಿ ನಿರಾಯಾಸವಾಗಿ ತುಂಬುತ್ತಾರೆ. ಆದರೆ, ಕರ್ನಾಟಕವೂ ಸೇರಿದಂತೆ ಭಾಷಾ ವೈವಿಧ್ಯತೆಯಿರುವ ದಕ್ಷಿಣ ಭಾರತದ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮಟ್ಟಿಗೆ ಮೋದಿ ಕೂಡಾ ಹೊರಗಿನವರೆನಿಸುತ್ತಾರೆ. ಶಾಖೆಗಳು, ಬೈಠಕ್‌ಗಳ ಹಂತದಲ್ಲಿ ಹಿಂದೂತ್ವಕ್ಕೆ ಕರ್ನಾಟಕದಲ್ಲಿ ಒಳ್ಳೆಯ ಹರವು ಸಿಕ್ಕಿರಬಹುದು, ಆದರೆ ಅದನ್ನು ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಕ್ರೋಢೀಕರಿಸುವಂತಹ ಪೊಲಿಟಿಕಲ್ ಮಾಸ್ ಲೀಡರ್ ಇದುವರೆಗೆ ಬಿಜೆಪಿಗೆ ಸಿಕ್ಕಿಲ್ಲ; ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸಿಕ್ಕಂತೆ.
ಅದನ್ನು ಸಾಧಿಸಿಕೊಳ್ಳುವ ಸಲುವಾಗಿಯೇ ಅನಂತಕುಮಾರ್ ಹೆಗಡೆಯನ್ನು ಕೇಂದ್ರ ಮಂತ್ರಿ ಮಾಡಿದ್ದು, ನಳೀನ್‌ಕುಮಾರ್ ಕಟೀಲರನ್ನು ರಾಜ್ಯ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿದ್ದು. ಆದರೆ ಅವರಿಬ್ಬರೂ ಸಂಘ ಪರಿವಾರದ ಆ ನಿರೀಕ್ಷೆಯನ್ನು ಇದುವರೆಗೆ ಈಡೇರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಜಾತಿಯನ್ನು ಓವರ್‌ಟೇಕ್ ಮಾಡಿ ಸ್ಥಳೀಯ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ‘ಪೊಲಿಟಿಕಲ್ ಶಕ್ತಿ ಹಿಂದೂತ್ವಕ್ಕೆ ಕರ್ನಾಟಕದಲ್ಲಿ ಇದುವರೆಗೆ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ. ನಾವೀಗ ಕರ್ನಾಟಕದಲ್ಲಿ ಕಾಣುತ್ತಿರುವ ಸಂಘ ಪರಿವಾರ ಅಥವಾ ಕೋಮುವಾದದ ವಿಸ್ತಾರಕ್ಕೆ ಜಾತಿಯ ಅಡಿಪಾಯದ ಪೊಲಿಟಿಕಲ್ ಪವರ್ ಆಧಾರವಾಗಿದೆ. ಈ ಜಾತಿ ಅಡಿಪಾಯದ ಜಾಗದಲ್ಲಿ (ಪ್ರಧಾನವಾಗಿ ಲಿಂಗಾಯತ ಸಮುದಾಯದ) ಪ್ಯೂರ್ ಹಿಂದೂತ್ವದ (ಅಲಿಯಾಸ್ ಬ್ರಾಹ್ಮಣ್ಯದ) ಅಡಿಪಾಯವನ್ನು ಪುನರ್‌ಸ್ಥಾಪಿಸಬೇಕೆಂದು ಬಿಜೆಪಿ ಈ ಸಲ ಲಿಂಗಾಯತ ಸಮುದಾಯದ ಲೀಡರ್‌ಗಳನ್ನು ಸೈಡ್‌ಲೈನ್ ಮಾಡುವ ಪ್ರಯೋಗಕ್ಕೆ ಮುಂದಾಗಿತ್ತು. ಆದರೆ, ಕರ್ನಾಟಕದ ವಿಚಾರದಲ್ಲಿ ಹಿಂದೂತ್ವಕ್ಕೆ ತಾನು ಅನುಭವಿಸುತ್ತಿರುವ ನಾಯಕನ ಕೊರತೆ ಅರ್ಥವಾಗುತ್ತಿದ್ದಂತೆಯೇ, ಅದು ಲಿಂಗಾಯತರ ಮತಗಳಿಗಾಗಿ ‘ವಯೋವೃದ್ಧ’ (ಬಿಎಸ್‌ವೈ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಬಿಜೆಪಿ ಇದೇ ಕಾರಣ ಮುಂದೊಡ್ಡಿತ್ತು) ಯಡಿಯೂರಪ್ಪನವರನ್ನು ಮತ್ತೆ ವೇದಿಕೆಯ ಮೇಲೆ ಎಳೆದಾಡಲು ಶುರು ಮಾಡಿದೆ.
ಹಿಂದೂತ್ವಕ್ಕಿರುವ ಈ ಸ್ಥಳಿಯ ಕೊರತೆಯ ಕಾರಣಕ್ಕೆ, ಕರ್ನಾಟಕದ ಈ ಹಿಂದಿನ ಯಾವ ಸ್ಥಳೀಯ ಚುನಾವಣೆಗಳೂ ಹಿಂದೂತ್ವದ ಪ್ರಧಾನ ಚರ್ಚೆಯ ಮೇಲೆ ನಡೆದಿಲ್ಲ. ಈ ಸಲದ ಚುನಾವಣೆಯೂ ಹಿಂದೂತ್ವದ ಮೇಲೆ ನಡೆಯುತ್ತಿಲ್ಲ. ಹಿಂದೂತ್ವದ ನೆಲೆಗಟ್ಟಿನ ಮೇಲೆ 2023ರ ಅಸೆಂಬ್ಲಿ ಚುನಾವಣೆಯನ್ನು ನಡೆಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನಿಸಿದ ಹಲಾಲ್ ಕಟ್ ಅಭಿಯಾನ, ಹಿಜಾಬ್ ನಿಷೇಧದ ಹುನ್ನಾರ, ಟಿಪ್ಪೂ ವರ್ಸಸ್ ಸಾವರ್ಕರ್ ನೆರೇಷನ್, ಉರೀಗೌಡ ಮತ್ತು ನಂಜೇಗೌಡ ಕಟ್ಟುಕಥೆಗಳು, ಮಸೀದಿ ಮೈಕ್‌ಗಳಿಗೆ ಕಲ್ಲು ಹೊಡೆಯಿರಿ ಎಂಬ ಈಶ್ವರಪ್ಪನ ಕರೆಗಳು ಸತತವಾಗಿ ಮಕಾಡೆ ಮುಗ್ಗರಿಸುತ್ತಾ ಬಂದದ್ದು, ಈ ಚುನಾವಣೆಯಲ್ಲಿ ಹಿಂದೂತ್ವಕ್ಕೆ ಯಾವ ಪ್ರಭಾವವೂ ಇಲ್ಲ ಅನ್ನೋದನ್ನು ಸಾಬೀತು ಮಾಡಿವೆ. ಸ್ವತಃ ಸಿಎಂ ಬೊಮ್ಮಾಯಿಯವರೇ, ಹಲಾಲ್-ಹಿಜಾಬ್‌ಗಳು ಮುಗಿದ ಅಧ್ಯಾಯ, ಅವು ಚುನಾವಣೆಯ ವಿಷಯಗಳಲ್ಲ ಎಂದು ಘೋಷಿಸಿಯಾಗಿದೆ. ಹಿಂದೂತ್ವದ ಇಶ್ಯೂಗಳಿಗೆ ಈಗ ಅಷ್ಟು ಮಾತ್ರ ಶಕ್ತಿ ಇದ್ದಿದ್ದರೆ, ಇವ್ಯಾವುವೂ ನೆಲಕಚ್ಚಲು ಬಿಜೆಪಿ ಬಿಟ್ಟುಕೊಡುತ್ತಿರಲಿಲ್ಲ. ಬೊಮ್ಮಾಯಿಯವರೇ ಅವುಗಳನ್ನು ಕೈಚೆಲ್ಲಿ ಮಾತಾಡುತ್ತಾರೆಂದರೆ, ಈ ಚುನಾವಣೆಯ ಸಾಗುತ್ತಿರುವ ದಿಕ್ಕನ್ನು ನಾವು ಗ್ರಹಿಸಬಹುದಾಗಿದೆ.
ಹಾಗಾಗಿ, ಭಜರಂಗದಳದ ಇಶ್ಯೂವನ್ನು ಬಿಜೆಪಿಯವರು, ಸಂಘ ಪರಿದಾವರು ಮತ್ತು ಮಾನಗೆಟ್ಟ ಮಾರಿಕೊಂಡ ಮೀಡಿಯಾಗಳು ದೊಡ್ಡ ದನಿಯಲ್ಲಿ ಚರ್ಚಿಸಿದ ಮಾತ್ರಕ್ಕೆ ಜನರ ವೋಟಿಂಗ್ ಸೈಕಾಲಜಿಯ ಮೇಲೆ ಭಾರೀ ಪರಿಣಾಮವನ್ನೇನೂ ಬೀರದು. ಅಖಂಡ ಭ್ರಷ್ಟಾಚಾರ, ಅಗಾಧ ಆಡಳಿತ ವೈಫಲ್ಯ ಮತ್ತು ವಿಪರೀತ ಬೆಲೆಯೇರಿಕೆಯ ಹೊರತಾಗಿಯೂ ಯಾರೆಲ್ಲ ಬಿಜೆಪಿಗೇ ಮತ ಹಾಕಬೇಕೆಂದು ನಿರ್ಧರಿಸಿಕೊಂಡಿದ್ದ ಖಟ್ಟರ್ ಬಿಜೆಪಿ ಮತದಾರರಿದ್ದರೋ, ಅಂತವರಿಗೆ ತಾವು ಭ್ರಷ್ಟ ಬಿಜೆಪಿಗೆ ಯಾಕೆ ಮತ ಹಾಕುತ್ತಿದ್ದೇವೆಂದು ಸಮರ್ಥಿಸಿಕೊಳ್ಳಲು ಒಂದು ಕಾರಣ ಸಿಕ್ಕಂತಾಗಿದೆಯಷ್ಟೆ. ಅದೇರೀತಿ, ಪ್ರಚಾರಕ್ಕೆ ಯಾವ ಸಾಮಗ್ರಿಯೂ ಇಲ್ಲದೆ ಜೋಲು ಮೋರೆ ಹಾಕಿಕೊಂಡಿದ್ದ ಬಿಜೆಪಿಯವರಿಗೆ ಮತ್ತು ಅವರ ಕೃಪಾಪೋಷಿತ ಮೀಡಿಯಾದವರಿಗೆ ಗಂಟಲು ಹರಿದುಕೊಳ್ಳಲು ಒಂದು ಸರಕು ಸಿಕ್ಕಿದೆಯಷ್ಟೆ. ಸೋಶಿಯಲ್ ಮೀಡಿಯಾವೂ ಸೇರಿದಂತೆ, ಬಹುತೇಕ ಸಂವಹನ ಮಾಧ್ಯಮಗಳನ್ನು ಅವರೇ ಕಬ್ಜಾ ಮಾಡಿಕೊಂಡಿರುವುದರಿಂದ ಅವರ ಆ ಧ್ವನಿ, ನಮಗೆ ದೊಡ್ಡ ಪ್ರತಿಧ್ವನಿಯಾಗಿ ಅಪ್ಪಳಿಸಿ, ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್‌ನ ಕೊನೆಯ ಓವರ್‌ಗೆ ಆತಂಕಗೊಂಡಂತೆ, ಭಯಗೊಳ್ಳುತ್ತಿದ್ದೇವೆ. ಇದು ನನ್ನ ಅಭಿಪ್ರಾಯ.
ಹಾಗಂತ, ಬಿಜೆಪಿ ಈ ಚುನಾವಣೆಯಲ್ಲಿ ಸೋತು ಮನೆ ಸೇರುತ್ತದೆ, ಕಾಂಗ್ರೆಸ್ ಸಿಂಪಲ್ ಮೆಜಾರಿಟಿಯನ್ನು ದಾಟಿ ಅಧಿಕಾರಕ್ಕೇರುತ್ತದೆ ಎಂಬ ಭ್ರಮೆ ನನಗಿಲ್ಲ! ಬಿಜೆಪಿ ಪಾಲಿಗೆ ಕರ್ನಾಟಕ ಕೇವಲ ಒಂದು ರಾಜ್ಯ ಮಾತ್ರವಲ್ಲ, ತನ್ನ ಹಿಂದಿ-ಹಿಂದೂತ್ವದ (ಬ್ರಾಹ್ಮಣ್ಯ) ಅಜೆಂಡಾವನ್ನು ದಕ್ಷಿಣ ಭಾರತದ ಮೇಲೆ ಹೇರಲು ಒಂದು ಕೀಲಿಕೈ ಕೂಡಾ ಹೌದು. ಕರ್ನಾಟಕದ ಮೂಲಕ ತಮಿಳುನಾಡಿಗೆ ಎಂಟ್ರಿ ಕೊಡಬೇಕೆಂಬ ದೂರಾಲೋಚನೆಯಿಂದಲೇ ಕರ್ನಾಟಕದ ಚುನಾವಣೆಯ ಉಸ್ತುವಾರಿಯನ್ನು ಬಿಜೆಪಿಯು ಅನುಭವವಿಲ್ಲದ ಅಣ್ಣಾಮಲೈ ಕೈಗೆ ಒಪ್ಪಿಸಿದೆ. ಹಾಗಾಗಿ ಅದು ಅಷ್ಟು ಸುಲಭವಾಗಿ ಕರ್ನಾಟಕವನ್ನು ಬಿಟ್ಟುಕೊಡಲೊಲ್ಲದು. ಎಲ್ಲಾ ಬಾಗಿಲುಗಳು ಮುಚ್ಚಿದರೂ, ಚುನಾವಣಾ ಅಕ್ರಮವೆಂಬ ಕಿಂಡಿಯ ಮೂಲಕ ಅದು ಗೆಲ್ಲಲು ಹವಣಿಸುತ್ತದೆ. ಆ ಚುನಾವಣಾ ಅಕ್ರಮಗಳು ಹೇಗೆಲ್ಲಾ ಇರಬಹುದೆಂಬ ಅಂದಾಜು ಬಹುಶಃ ನಮಗೆ ಊಹಿಸಲಿಕ್ಕೂ ಆಗದಿರಬಹುದು. ಅಷ್ಟು ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ.
ಸಿದ್ದರಾಮಯ್ಯನವರ ಹೇಳಿಕೆ, ಭಜರಂಗದಳದ ಈ ಅರ್ಥವಿಲ್ಲದ ಚರ್ಚೆಗಳು ಜನರ ವೋಟಿಂಗ್ ಸೈಕಾಲಜಿಯ ಮೇಲೆ ಪ್ರಭಾವ ಬೀರದೇ ಹೋದರೂ, ಫಲಿತಾಂಶದ ನಂತರ ಬಿಜೆಪಿ ತನ್ನ ಚುನಾವಣಾ ಅಕ್ರಮವನ್ನು ಮುಚ್ಚಿಕೊಳ್ಳಲು ಇವುಗಳನ್ನು ಖಂಡಿತ ಬಳಸಿಕೊಳ್ಳುತ್ತದೆ. ಅದಕ್ಕೆ ಪೂರಕವಾಗಿಯೇ ಇಂಥಾ ಚರ್ಚೆಗಳನ್ನು, ಮೀಡಿಯಾ ಬಳಸಿಕೊಂಡು ಈಗ ಜೋರು ದನಿಯಲ್ಲಿ ನಡೆಸುತ್ತಿದ್ದಾರೆ. ಇನ್ನು ಮೂರ‍್ನಾಲ್ಕು ದಿನಗಳಲ್ಲಿ ಅಂತಹ ಇನ್ನಷ್ಟು ಚರ್ಚೆಗಳು ಬಂದರೂ ಅಚ್ಚರಿಯಿಲ್ಲ. ಫಲಿತಾಂಶದ ನಂತರ ಬಲಪಂಥೀಯರಿರಲಿ, ಜಾತ್ಯತೀತರು-ಪ್ರಗತಿಪರರು ಅನ್ನಿಸಿಕೊಂಡ ನಾವೇ, ಸಿದ್ದರಾಮಯ್ಯನವರ ಹೇಳಿಕೆಯಿಂದ ಇಷ್ಟು ಸೀಟು ಕಳೆದುಕೊಳ್ಳಬೇಕಾಯ್ತು, ಭಜರಂಗದಳದ ಚರ್ಚೆಯಿಂದ ಅಷ್ಟು ಸೀಟುಗಳು ಕೈಬಿಟ್ಟುಹೋದವು, ಡಿಕೆ ಶಿವಕುಮಾರ್ ಅವಾಂತರದಿಂದ ಹೀಗಾಯ್ತು, ರಾಹುಲ್‌ಗಾಂಧಿ ಮೀನಿನ ಪ್ರಕರಣ ನಮಗೆ ಮುಳ್ಳಾಯ್ತು, ಹಿಂದೂತ್ವದ ಅಮಲು ಜನರ ಮಿದುಳನ್ನು ಇನ್ಫೆಕ್ಟ್ ಮಾಡಿದೆ, ಶೆಟ್ಟರ್ ಸಹಿತ ಘಟಾನುಘಟಿ ನಾಯಕರಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಟಿಕೆಟ್ ಕೊಟ್ಟಿದ್ದರಿಂದ ಬಿಜೆಪಿಯು ಆಡಳಿತ ವಿರೋಧಿ ಅಲೆಯಿಂದ ಬಚಾವಾಗಿ ಗೆಲ್ಲಲು ಸಾಧ್ಯವಾಯ್ತು ಅಂತ ಲೆಕ್ಕಹಾಕುತ್ತಾ ಕೂರುತ್ತೇವೆ. ಆಗ ಬಿಜೆಪಿಯ ಅಕ್ರಮಗಳು ತೆರೆಮರೆಗೆ ಸರಿದುಹೋಗುತ್ತವೆ. ಅದು ಆಗಲೆಂದೇ ಅವರು ಈಗ ಭಜರಂಗದಳದಂತಹ ಇಶ್ಯೂವನ್ನು ದೊಡ್ಡ ಚುನಾವಣೆಯ ವಿಚಾರದಂತೆ ಜೋರಾಗಿ ಅಬ್ಬರಿಸುತ್ತಿದ್ದಾರೆ. ಹಿಂದೂತ್ವವೇ ಆಬ್ಸೆಂಟ್ ಆಗಿರುವ ಈ ಚುನಾವಣೆಯಲ್ಲಿ, ಭಜರಂಗದಳದ ಚರ್ಚೆ ಹೇಗೆ ತಾನೇ ಪ್ರಭಾವ ಬೀರೀತು? ಹಲಾಲ್, ಹಿಜಾಬ್, ಟಿಪ್ಪೂ-ಉರಿನಂಜು ಮಲಗಿದಂತೆ ಅದೂ ಮಕಾಡೆ ಮಲಗುವ ಅರಚಾಟವಷ್ಟೆ. ಹಾಗೇನಾದರೂ ನಾವು ನಿಜಕ್ಕೂ ಆತಂಕಗೊಳ್ಳಬೇಕಿದ್ದರೆ, ಎಚ್ಚರಿಕೆ ತೆಗೆದುಕೊಳ್ಳಬೇಕಿದ್ದರೆ, ಅದು ಬಿಜೆಪಿ ನಡೆಸಬಹುದಾದ ಚುನಾವಣಾ ಅಕ್ರಮಗಳ ವಿಚಾರದ ಬಗ್ಗೆ ಮಾತ್ರ!
ಸುದೀರ್ಘ ಬರಹಕ್ಕೆ ಒಂದು ಸೇರ್ಪಡೆ
ಕರ್ನಾಟಕದಲ್ಲಿ ಅದುವರೆಗೆ ಕೇವಲ 2, 4 ಎಂಬ ಬಿಡಿ ಅಂಕಿಗಳಿಗಷ್ಟೇ ಸೀಮಿತವಾಗಿದ್ದ ಬಿಜೆಪಿ ಮೊಟ್ಟಮೊದಲ ಬಾರಿಗೆ 40 ಸ್ಥಾನಗಳ ಗಮನಾರ್ಹ ಸೀಟು ದಕ್ಕಿಸಿಕೊಂಡದ್ದು 1994ರ ವಿಧಾನಸಭಾ ಚುನಾವಣೆಯಲ್ಲಿ. 1992ರ ಬಾಬ್ರೀ ಮಸೀದಿ ಧ್ವಂಸದ ನಂತರ ನಡೆದ ಈ ಚುನಾವಣೆಯಲ್ಲಿ ಬಿಜೆಪಿಗೆ ಹಿಂದೂತ್ವದ ಬಲ ಸಿಕ್ಕಿದ್ದರಿಂದಲೇ ಅದು ಆ ಸಾಧನೆ ಮಾಡಿತು, ಹಾಗಾಗಿ ಕರ್ನಾಟಕದ ಸ್ಥಳೀಯ ಚುನಾವಣೆಯಲ್ಲಿ ಹಿಂದೂತ್ವದ ಪಾತ್ರವನ್ನು ನಿರ್ಲಕ್ಷಿಸಲಿಕ್ಕಾಗದು ಎಂದು ಕೆಲವರು ಹೇಳಬಹುದು. ಜನಸಂಘ ಅಥವಾ ಬಿಜೆಪಿ ಎಂಬ ಪೊಲಿಟಿಕಲ್ ಪಾರ್ಟಿ ಜನ್ಮವೆತ್ತಿದ್ದೆ ಕೋಮುವಾದದ ಅಜೆಂಡಾದ ಮೇಲೆ. ಹಾಗಾಗಿ ಅದರ ಏಳುಬೀಳಿನಲ್ಲಿ ಕೋಮುವಾದಿ ಕೃತ್ಯಗಳ ಛಾಯೆ ಇದ್ದೇ ಇರುತ್ತೆ. ಹಾಗಂತ 1994ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಸಾಧನೆಯನ್ನು ಸಾರಾಸಗಟಾಗಿ ಬಾಬ್ರೀ ಮಸೀದಿ ಧ್ವಂಸದ ಮೇಲೆ ಆರೋಪಿಸುವುದಕ್ಕು ಮುನ್ನ, ಆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೀರೇಂದ್ರ ಪಾಟೀಲರ ಪದಚ್ಯುತಿ ಪ್ರಕರಣವನ್ನು ನಾವು ನೆನಪಿಸಿಕೊಳ್ಳಲೇಬೇಕು. ಲಿಂಗಾಯತ ಸಮುದಾಯದ ಪಾಟೀಲರನ್ನು ಕಾಂಗ್ರೆಸ್ ಅವಮಾನಕರವಾಗಿ ನಡೆಸಿಕೊಂಡಿತು ಎಂದು ಹುಟ್ಟಿಕೊಂಡ ಪೊಲಿಟಿಕಲ್ ನೆರೇಷನ್ ಅನ್ನು, ಅಷ್ಟರಲ್ಲಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪನವರು ತಮ್ಮ ವಿಸ್ತಾರಕ್ಕೆ ವ್ಯವಸ್ಥಿತವಾಗಿ ಬಳಸಿಕೊಂಡಿದ್ದರಿಂದ, ಲಿಂಗಾಯತ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯತ್ತ ಚಲಿಸಿತು. ಅದರ ಪರಿಣಾಮವಾಗಿ ಆ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನ ಗಳಿಸಿತು, ಯಡಿಯೂರಪ್ಪನವರೂ ವಿರೋಧ ಪಕ್ಷದ ನಾಯಕನಾಗಿ ಹೊಮ್ಮಲು ಸಾಧ್ಯವಾಯ್ತು. ಅಕಸ್ಮಾತ್, ಆ ಫಲಿತಾಂಶದಲ್ಲಿ ಬಾಬ್ರೀ ಮಸೀದಿ ಧ್ವಂಸದ ಕೋಮುವಾದಿ ಪ್ರಭಾವ ಸಣ್ಣ ಮಟ್ಟಿಗೆ ಇದ್ದಿದ್ದು ಸಂಘಪರಿವಾರಕ್ಕೆ ಮನದಟ್ಟಾಗಿದ್ದರೂ, ಅದು ಯಡಿಯೂರಪ್ಪನವರನ್ನು ‘ಲಿಂಗಾಯತ ಲೀಡರ್ ಇಮೇಜಿನಲ್ಲಿ ಇಷ್ಟು ಪ್ರಬಲವಾಗಿ ಬೆಳೆಯಲು ಅವಕಾಶ ಕೊಡುತ್ತಲೇ ಇರಲಿಲ್ಲ. ಸಾರಾಂಶದಲ್ಲಿ ಹೇಳಬೇಕೆಂದರೆ, ಅಂದಿನಿಂದ ಇಂದಿನವರೆಗೆ ಕರ್ನಾಟಕದ ಸ್ಥಳೀಯ ಚುನಾವಣೆಗಳಲ್ಲಿ ಹಿಂದೂತ್ವಕ್ಕೆ ಹೇಳಿಕೊಳ್ಳುವ ಮಹತ್ವ ಸಿಕ್ಕಿಲ್ಲ. ಈ ಚುನಾವಣೆಯಲ್ಲೂ ಸಹಾ….
– ಮಾಚಯ್ಯ ಎಂ ಹಿಪ್ಪರಗಿ
ಈ ವಾರದ ರಾಜಕೀಯ ವಿದ್ಯಮಾನಗಳು | ಸೆ. 21-27

ಈ ವಾರ ರಾಜ್ಯ ರಾಜಕೀಯದಲ್ಲಿ ಪ್ರಮುಖವಾಗಿ ಮೂರು ರಾಜಕೀಯ ವಿದ್ಯಮಾನಗಳು ನಡೆದಿವೆ.
ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇ.ಡಿ. ದಾಳಿ: ಪರವಾನಗಿ ಪಡೆಯದೆ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದೆ. ಇದರಿಂದಾಗಿ ರಾಜ್ಯ ರಾಜಕೀಯದಲ್ಲಿ ತರಾವರಿ ಬೆಳವಣಿಗೆಗಳು ನಡೆದವು. ಕಾಂಗ್ರೆಸ್ ಪಕ್ಷದವರೇ ಯಾರೋ ಇ.ಡಿಗೆ ಎಲ್ಲಾ ದಾಖಲೆಗಳು ನೀಡಿ, ದಾಳಿ ಮಾಡಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿಯವರು ಆಡಿದ ಮಾತು ಸದ್ದು ಮಾಡಿದೆ. ಮೊದಲು 2028ರಲ್ಲಿ ನಾನೂ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಎನ್ನುತ್ತಿದ್ದರು. ದಾಳಿಯಾದ ಮೇಲೆ ವರಸೆ ಬದಲಾಯಿಸಿ, ಡಿಕೆಶಿಯವರು 2028ರಲ್ಲೂ ನಾನೇ ಸಿಎಂ ಆಗುವೆ ಎನ್ನುತ್ತಿದ್ದಾರೆ. ಅವರೇ ಆಗಲಿ. ನನಗಿನ್ನು ವಯಸ್ಸಿದೆ, ಮುಂದೆ ನೋಡೋಣ ಎಂದು ಹೇಳಿದ್ದು ಕಾಂಗ್ರೆಸ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಸೌಜನ್ಯ ಪ್ರಕರಣದ ಮರು ತನಿಖೆ: ಧರ್ಮಸ್ಥಳದ ಸೌಜನ್ಯಳನ್ನು ಕಿಡಿಗೇಡಿಗಳು ರೇಪ್ ಮಾಡಿ, ಅವಳನ್ನು ಬರ್ಬರವಾಗಿ ಹತ್ಯೆ ಮಾಡಿ ೧೪ ವರ್ಷವಾಯಿತು. ಬೆಳ್ತಂಗಡಿ ಪೊಲೀಸರು, ಎಸ್‌ಐಟಿ, ಸಿಬಿಐ… ಹೀಗೆ ಎಲ್ಲರೂ ಈ ಪ್ರಕರಣದ ತನಿಖೆ ಮಾಡಿದ್ದಾರೆ. ಆದರೆ, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ಎಲ್ಲರೂ ವಿಫಲರಾಗಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು. ನ್ಯಾಯಾಲಯ ಎಸ್‌ಐಟಿ ರಚಿಸಿ ಮರು ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದೆ. ಸರ್ಕಾರ ಎಸ್‌ಐಟಿ ರಚಿಸಿದೆ. ಎಸ್‌ಐಟಿ ತಂಡದ ಇಬ್ಬರು ಸದಸ್ಯರ ಮೇಲೆ ಗಂಭೀರವಾದ ಭ್ರಷ್ಟಾಚಾರದ ಆರೋಪಗಳಿವೆ. ಅವರನ್ನು ಬದಲಾಯಿಸಿ ಎಸ್‌ಐಟಿ ಪುನರ್‌ರಚಿಸಬೇಕೆಂದು ಸೌಜನ್ಯ ತಾಯಿ ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.
ಕೆಪಿಎಸ್‌ಸಿ ಹಗರಣದ ಚಂಡು ಸುಪ್ರೀಂ ಕೋರ್ಟ್ ಅಂಗಳಕ್ಕೆ: ಕೆಪಿಎಸ್‌ಸಿ ಹಗರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಅದು ಕೆಲಸ ಆರಂಭಿಸಿ, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯೂ ನಡೆಸುತ್ತಿತ್ತು. ಸಾಕಷ್ಟು ಸಾಕ್ಷ್ಯಗಳನ್ನೂ ಕಲೆಹಾಕಿತ್ತು. ಈ ಮಧ್ಯೆ ಬಸನಗೌಡ್ ಪಾಟೀಲ್ ಯತ್ನಾಳ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಹೋಗಿದರು. ನ್ಯಾಯಾಲಯ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ರದ್ದುಪಡಿಸಿ, ಹೊಸ ಎಸ್‌ಐಟಿ ರಚಿಸಿದೆ. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿದೆ. ಈ ತೀರ್ಪು ಬಂದ ದಿನವೇ ಸಿಎಂ ಡಿಕೆಶಿಯವರು, ʼತಂಡದಲ್ಲಿ ಯಾರಿರಬೇಕು ಎಂದು ನಿರ್ಧರಿಸುವುದು ಸರ್ಕಾರದ ಕೆಲಸ. ನ್ಯಾಯಾಲಯ ಹೆಸರು ಸೂಚಿಸಿದ್ದು ಸರಿಯಲ್ಲʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ತಮ್ಮದೇ ಸರ್ಕಾರದ ಬಣ್ಣ ಬಯಲು ಮಾಡಿದ ಶಾಸಕ ಬಿ.ಆರ್. ಪಾಟೀಲ್

ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಪಕ್ಷ ಮಂತ್ರಿ ಮಾಡಿಲ್ಲ, ಹಾಗಾಗಿ ಅವರು ಕೋಪದಲ್ಲಿ ಹೀಗೆ ಮಾತಾಡುತ್ತಿದ್ದಾರೆ ಎಂದು ಎನ್ನುವವರಿದ್ದಾರೆ. ಅವರು ಅಧಿಕಾರದಲ್ಲಿರಲಿ, ಇಲ್ಲದಿರಲಿ ಯಾವಾಗಲೂ ರೈತರ ಪರ ಧ್ವನಿ ಎತ್ತುತ್ತಾರೆ ಎಂದು ಎನ್ನುವವರೂ ಇದ್ದಾರೆ. ಅದೇನೇ ಇರಲಿ, ಅವರ ಈ ದನಿ ರೈತಪರವಾಗಿದೆ. ಅವರ ಆಕ್ರೋಶದಲ್ಲಿ ರೈತರ ಹಾಗೂ ನಾಡಿನ ಹಿತ ಅಡಗಿದೆ.
2023ರ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ʻಕರ್ನಾಟಕ ಭೂ ಸುಧಾರಣೆ ಕಾಯ್ದೆʼಗೆ ತಿದ್ದುಪಡಿ ತರುವುದಾಗಿ” ಜನರಿಗೆ ಪಕ್ಷದ ಘಟಾನುಘಟಿ ನಾಯಕರು ಮಾತು ಕೊಟ್ಟಿದ್ದರು. ಪ್ರಣಾಳಿಕೆಯಲ್ಲೂ ಘೋಷಿಸಿದರು. ಇವರ ಮಾತನ್ನು ನಂಬಿ ರೈತರು ಮತ ಹಾಕಿ ಇವರನ್ನು ಅಧಿಕಾರಕ್ಕೆ ತಂದರು. ಆದರೆ, ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಈ ಕುರಿತು ಯಾರೂ ಚಕಾರೇ ಎತ್ತುತ್ತಿಲ್ಲ.
ಬಿಡದಿ ಟೌನ್‌ಶಿಪ್‌ಗಾಗಿ ಫಲವತ್ತಾದ ಲಕ್ಷಾಂತರ ಎಕರೆ ಜಮೀನನ್ನು ರೈತರಿಂದ ಕಿತ್ತುಕೊಳ್ಳಲು ಈ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ತಮ್ಮ ಜಮೀನು ಉಳಿಸಿಕೊಳ್ಳಲು ರೈತರು ಬೀದಿಗೆ ಬಂದು ಹೋರಾಡುತ್ತಿದ್ದಾರೆ. ಆದಾಗ್ಯೂ, ಸರ್ಕಾರ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದೆ. ಇದು ಜನತಂತ್ರ ವ್ಯವಸ್ಥೆಯಲ್ಲಿ ಒಂದು ನಾಗರಿಕ ಸರ್ಕಾರ ರೈತರೊಂದಿಗೆ ನಡೆದುಕೊಳ್ಳುವ ರೀತಿಯೇ?
ರಾಜ್ಯದಲ್ಲಿ 1961ರಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಯಲ್ಲಿದೆ. ದೇವರಾಜ ಅರಸರು 1974ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಸುಮಾರು ಎಂಟು ಲಕ್ಷ ಬಡ ಗೇಣಿದಾರರಿಗೆ ಭೂ ಮಾಲೀಕರನ್ನಾಗಿಸಿದರು. ಸುಮಾರು 30 ಲಕ್ಷ ಎಕರೆ ಜಮೀನು ಬಡವರಿಗೆ ಸಿಗುವಂತೆ ಮಾಡಿದರು. ಜತೆಗೆ ವಾರ್ಷಿಕ 25 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಕೃಷಿಯೇತರ ಮೂಲಗಳಿಂದ ಆದಾಯ ಉಳ್ಳವರಿಗೆ, ಕೃಷಿಕರಲ್ಲದವರಿಗೆ, ಕಂಪನಿಗಳಿಗೆ, ಸಂಸ್ಥೆಗಳಿಗೆ ಜಮೀನು ಖರೀದಿಸದಂತೆ ಬೇಲಿ ಹಾಕಿದರು.
ರೈತಪರವಾಗಿದ್ದ ಈ ಕಾಯ್ದೆಗೆ ಬಿ. ಎಸ್. ಯಡಿಯೂರಪ್ಪ 2020ರಲ್ಲಿ ಗುಂಡಿ ತೋಡಿದರು. ಈಗ ರಾಜ್ಯದಲ್ಲಿ ಯಾರಾದರೂ ಜಮೀನು ಖರೀದಿಸಬಹುದು. ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಕಂಪನಿಗಳು ರೈತರಿಗೆ ಪುಡಿಗಾಸು ಕೊಟ್ಟು ರಾಜ್ಯದ ಲಕ್ಷಾಂತರ ಎಕರೆ ಜಮೀನು ದೋಚಿದ್ದಾರೆ.
ಇದನ್ನು ನಮ್ಮ ಸರ್ಕಾರವಾದರೂ ತಡೆಯಬಹುದು ಎಂದು ಬಿ.ಅರ್. ಪಾಟೀಲರ ನಿರೀಕ್ಷಿಸುವುದೇ ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಾಗಿಸಬಹುದು. ನಾವೀಗ ಉದ್ಯಮಿಗಳಿಗಾಗಿಯೇ ಅಧಿಕಾರಿದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಉದ್ಯಮಿಗಳನ್ನು ತಮ್ಮ ಮನೆಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಕಾಲದಲ್ಲಿದ್ದೇವೆ.
ಕೆಪಿಎಸ್‌ಸಿ ಹಗರಣ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಬಾಗಿಲಿಗೆ ಕರ್ನಾಟಕ ಸರ್ಕಾರ!

ಕರ್ನಾಟಕ ಹೈಕೋರ್ಟ್ ಕೆಪಿಎಸ್‌ಸಿ ಹಗರಣದ ಬಗ್ಗೆ ತನಿಖೆ ಮಾಡಲು ಸರ್ಕಾರ ರಚಿಸಿದ ಎಸ್‌ಐಟಿ ರದ್ದುಪಡಿಸಿ, ಹೊಸ ಎಸ್‌ಐಟಿ ತಂಡ ರಚಿಸಿತ್ತು. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿತ್ತು. ಅಂದೇ ಮುಖ್ಯಮಂತ್ರಿ ಡಿಕೆಶಿ ಅವರು ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈಗ ಈ ತೀರ್ಪಿನ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಈ ಕುರಿತು ಸರ್ಕಾರದ ಪರ-ವಿರುದ್ಧದ ಚರ್ಚೆ ನಡೆಯುತ್ತಿವೆ. ತಂಡದಲ್ಲಿ ಯಾರಿರಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂಬ ಸರ್ಕಾರದ ವಾದ ಮೇಲ್ನೋಟಕ್ಕೆ ಸರಿ ಅನಿಸಬಹುದು. ಆದರೆ, ಸರ್ಕಾರಗಳು ರಚಿಸುವ ಎಸ್‌ಐಟಿಗಳಾಗಲಿ ಅಥವಾ ಸರ್ಕಾರದ ಸಿಐಡಿಯಾಗಲಿ ಬಹುತೇಕ ಪ್ರಕರಣಗಳನ್ನು ಹಳ್ಳ ಹಿಡಿಸಿ, ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಿದ ಸಾಕಷ್ಟು ಉದಾಹರಣೆಗಳು ಜನರ ಮುಂದಿವೆ. ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ಸೂಚನೆ ನೀಡಿದ್ದದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸುವಲ್ಲಿ ಸರ್ಕಾರ ಎಡವಿದೆ. ಈ ಬಗ್ಗೆ ಸ್ವತಃ ಸೌಜನ್ಯ ತಾಯಿ ಕುಸುಮಾವತಿ ಅವರೇ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್‌ಸಿ ಹಗರಣದ ತನಿಖೆ ಸರ್ಕಾರದ ಸುಪರ್ದಿಯಲ್ಲಿ ನಡೆಯುತ್ತಿದ್ದಾಗ ಜನರಲ್ಲಿ ಇದು ಸಹ ಹಾಗೇ ಹಳ್ಳ ಹಿಡಿಯಬಹುದೆಂಬ ಅನುಮಾನ ವ್ಯಕ್ತವಾಗುತ್ತಿತ್ತು. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಮುಂದುವರೆದದ್ದು ವಿದ್ಯಾರ್ಥಿಗಳಲ್ಲಿ ತುಸು ಸಮಾಧಾನ ತಂದಿತ್ತು. ಈಗ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಕಡೆಗೆ ಎಲ್ಲರ ಕಣ್ಣುಗಳಿವೆ. ಕರ್ನಾಟಕ ಸರ್ಕಾರದ ಈ ನಡೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ರಾಜಕೀಯ ಲೆಕ್ಕಾಚಾರ ನಿಂತಿದೆ.
ಸೌಜನ್ಯ ಪ್ರಕರಣ: ಡಿಕೆಶಿ ಈಗಲಾದರೂ ಸೌಜನ್ಯ ಪರ ನಿಲ್ಲುವವರೇ?

ತಮ್ಮದೇ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆ ನಡೆಸುತ್ತಿದ್ದಾಗ (ಸಿದ್ದರಾಮಯ್ಯನವರು ಸೌಜನ್ಯ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿದಾಗ) ಆಗ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆಶಿ ಸದನದ ಒಳಗೂ ಹೊರಗೂ ವೀರೇಂದ್ರ ಹೆಗ್ಗಡೆ ಪರವಾಗಿ ಬ್ಯಾಟಿಂಗ್ ಮಾಡಿದರು. ಆಮೇಲೆ ಆ ಎಸ್‌ಐಟಿ ಬಗ್ಗೆ ಒಂದು ಸುದ್ದಿಯೂ ಬಂದಿಲ್ಲ ಜತೆಗೆ ಒಂದು ವರ್ಷವಾದರೂ ಅದು ಇದುವರೆಗೂ ವರದಿ ಸಲ್ಲಿಸಿಲ್ಲ.
ಈಗ ಅವರೇ ಮುಖ್ಯಮಂತ್ರಿ. ಸುಪ್ರೀಂ ಕೋರ್ಟ್ ಆದೇಶದಂತೆ ಎಸ್‌ಐಟಿ ರಚಿಸಿದ್ದಾರೆ. ರಚಿಸಿದ ತಂಡದಲ್ಲಿ ಭ್ರಷ್ಟಾಚಾರಕ್ಕಾಗಿ ಇಲಾಖೆ ತನಿಖೆ ಎದುರಿಸಿದ ವೆಂಕಟೇಶ್ ಪ್ರಸನ್ ಇದ್ದಾರೆ. ಡಿಜಿ ಅಥವಾ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೂ ನೇಮಿಸದೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸೌಜನ್ಯ ತಾಯಿ ಕುಸುಮಾವತಿಯೂ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ʻಕೊಂದವರು ಯಾರುʼ ಆಂದೋಲನ ಸುಪ್ರೀಂ ಕೋರ್ಟ್‌ಗೆ ಪತ್ರವೂ ಬರೆದಿದೆ.
ಒಂದು ಹುಡುಗಿಯನ್ನು ಹಾಡುಹಗಲೇ ರೇಪ್ ಮಾಡಿ, ಕೊಲೆ ಮಾಡಿ ಬಿಸಾಡುತ್ತಾರೆ. 14 ವರ್ಷದಿಂದ ಕೊಂದವರು ಯಾರೆಂದು ಪತ್ತೆಹಚ್ಚಲು ಇದುವರೆಗೂ ಬೆಳ್ತಂಗಡಿ ಪೊಲೀಸರಿಗಾಗಲಿ, ಸಿಬಿಐಗಾಗಲಿ, ಎಸ್‌ಐಟಿಗಾಗಲಿ ಆಗಿಲ್ಲ. ಇದು ನಮ್ಮ ರಾಜ್ಯಕ್ಕೊಂದು ಕಪ್ಪು ಚುಕ್ಕೆ.
ನ್ಯಾಯಾಲಯ ಈಗ ಮತ್ತೊಂದು ಅವಕಾಶ ನೀಡಿದೆ. ಆದರೆ, ಸಿಎಂ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸಲು ಎಡವಿದ್ದಾರೆ. ವಿರೋಧ ಎದುರಿಸುತ್ತಿರುವ ಎಸ್‌ಐಟಿ ತಂಡದ ಸದಸ್ಯರು ಅವರಾಗಿಯೇ ತಂಡದಿಂದ ಹೊರಬರುತ್ತಾರೋ ಅಥವಾ ಸಿಎಂ ಅವರು ಬದಲಾವಣೆ ಮಾಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ. ಇದೇ ತಂಡ ತನಿಖೆ ನಡೆಸಿದರೆ ರಾಜ್ಯದಲ್ಲಿ ಸಿಎಂ ಹಾಗೂ ಎಸ್‌ಐಟಿ ವಿರುದ್ಧವೇ ಹೋರಾಟ ಭುಗಿಲೇಳುವ ಸಾಧ್ಯತೆಯಿದೆ. ಈ ವಿಷಯ ಸುಪ್ರೀಂ ಕೋರ್ಟ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಬಹುದು.
ತಪ್ಪು ಮಾಡಿದರೂ ಗ್ಯಾನೇಶ್ ಕುಮಾರ್ ಮೇಲೆ ಕೇಸ್ ಆಗಲ್ಲವೇ?

ದೇಶದಲ್ಲಿ ಪ್ರಜಾತಂತ್ರ ಉಳಿಸುವ ಮಹತ್ತರವಾದ ಸ್ಥಾನದಲ್ಲಿ ಕೂತಿರುವ ಗ್ಯಾನೇಶ್ ಕುಮಾರ್ ಈಗ ಜನತೆಯ ಕಟಕಟೆಯಲ್ಲಿ ಬಂದು ನಿಂತಿದ್ದಾರೆ. ಅವರು ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಮೇಲೆ ಎಸ್‌ಐಆರ್ ತಂದು, ಬಿಜೆಪಿ ವಿರುದ್ಧ ಹಾಕಬಹುದಾದ ಮತಗಳನ್ನು ಯೋಜನಾಬದ್ಧವಾಗಿ ಡಿಲೀಟ್ ಮಾಡುತ್ತಿದ್ದಾರೆಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಬ್ಬರು ಚುನಾವಣಾ ಆಯುಕ್ತರು ಅವರ ವಿರುದ್ಧ ಕೇಂದ್ರ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದು ವಿಪಕ್ಷಗಳ ಆರೋಪಗಳಿಗೆ ಬಲ ತುಂಬಿದ್ದಾರೆ.
ಈಗ ಗ್ಯಾನೇಶ್ ಕುಮಾರ್ ವಿರುದ್ಧ ಕೇಸ್ ದಾಖಲಿಸಬೇಕು, ಜೈಲಿಗಟ್ಟಬೇಕು ಎಂಬ ಕೂಗು ನಾಲ್ಕು ದಿಕ್ಕಿನಿಂದಲೂ ಕೇಳಿಬರುತ್ತಿದೆ. ಆದರೆ, ಈಗ ಅದು ಅಸಾಧ್ಯ. ಮುಖ್ಯ ಚುನಾವಣಾ ಆಯುಕ್ತರು ಆಯೋಗದಲ್ಲಿ ಕೂತು ಏನೇ ತಪ್ಪು ಮಾಡಿದರೂ ಅವರ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಕೇಸ್ ದಾಖಲು ಮಾಡದಂತೆ ಕೇಂದ್ರ ಸರ್ಕಾರ `The Chief Election commissioner and Other Election commissioners Act – 2023’ ಜಾರಿಗೆ ತಂದಿದೆ. ಈ ಕಾಯಿದೆ ಅವರು ನಿವೃತ್ತರಾದ ಮೇಲೂ ಅವರ ವಿರುದ್ಧ ಯಾವುದೇ ಕೇಸ್ ಹಾಕದಂತೆ ಅವರಿಗೆ ರಕ್ಷಣೆಯ ಖಾತರಿಪಡಿಸಿದೆ.
ಗ್ಯಾನೇಶ್ ಕುಮಾರ್ ಅವರಾಗಿ ಅವರೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಪದಚ್ಯುತಿಗೊಳಿಸುವುದೂ ಅಷ್ಟು ಸುಲಭವಲ್ಲ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಯಾವ ರಕ್ಷಣೆ ಇದೆಯೋ ಇವರಿಗೂ ಅಷ್ಟೇ ರಕ್ಷಣೆಯಿದೆ. ಇವರನ್ನು ತೆಗೆದು ಹಾಕಬೇಕಾದರೆ ಒಂದು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 50ರಷ್ಟು ಸದಸ್ಯರ ಒಪ್ಪಿಗೆ ಬೇಕು. ಇಲ್ಲವೇ ಸದನದಲ್ಲಿ ಹಾಜರಿರುವ ಒಟ್ಟು ಸದಸ್ಯರಲ್ಲಿ 2/3ರಷ್ಟು ಸದಸ್ಯರು ಅವರ ವಿರುದ್ಧ ಮತ ಹಾಕಬೇಕು. ಆಗ ಇವರನ್ನು ರಾಷ್ಟ್ರಪತಿಗಳು ತೆಗೆದು ಹಾಕಬಹುದು.
ಈ ರಕ್ಷಣೆ ಅವರಿಗಿರುವ ಕಾರಣಕ್ಕೆ ಅವರ ಬಗ್ಗೆ ಇಡೀ ದೇಶದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಅವರು ಎಸಿ ರೂಮಿನಲ್ಲಿ ಯಾವ ಭಯವಿಲ್ಲದೆ ಆರಾಮವಾಗಿ ಕೂತಿದ್ದಾರೆ. ಜನರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲವೆಂದು ಭಾವಿಸಿದಂತಿದೆ. ಹಾಗಾಗಿ, ಮಾಧ್ಯಮಗಳ ಮುಂದೆ ಬಂದು ಅವರು ಇದುವರೆಗೂ ಮಾತನಾಡಿಲ್ಲ.
ಪ್ರಜಾತಂತ್ರ ದೇಶದಲ್ಲಿ ಅಂತಿಮವಾಗಿ ಎಲ್ಲರೂ ಜನರಿಗೆ ಉತ್ತರದಾಯಿಗಳಾಗಿಬೇಕು. ಹೀಗೆ ಕೆಲವರಿಗೆ ವಿಶೇಷ ರಿಯಾಯಿತಿ ನೀಡಿದರೆ ಅವರು ಜನತೆಯ ತಲೆಯ ಮೇಲೆ ಕಾಲಿಡಿದೆ ಇರುತ್ತಾರೆಯೇ? ಈ ರೀತಿಯಾಗಿ ಅವರಿಗೆ ವಿಶೇಷವಾದ ರಕ್ಷಾ ಕವಚ ಹೋದಿಸಿದೇಕೆ? ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಧೀಶರನ್ನು ಹೊರಗೆ ಹಾಕಿದ್ದು ಯಾರ ಅನುಕೂಲಕ್ಕಾಗಿ? ದೇಶದ ಜನತೆ ಕೇಳುತ್ತಿರುವ ಈ ಪ್ರಶ್ನೆಗಳಿಗೆಲ್ಲ ಪ್ರಧಾನಿ ಮೋದಿಯವರ ಬಳಿ ಉತ್ತರವಿದೆಯೇ?

