ದಿನ ಬೆಳಗಾದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸರಣಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮೊದಲು ʻನೈಸ್ ಹಗರಣʼ, ಆಮೇಲೆ ʻಬಿಡದಿ ಟೌನ್‌ಶಿಪ್, ಈಗ ʻಮಾರುವೇಷದ ಕಾರ್ಯಾಚರಣೆʼ ವಿಷಯ ಕೈಗೆತ್ತಿಕೊಂಡು ಮುಖ್ಯಮಂತ್ರಿ ವಿರುದ್ಧ ಯುದ್ಧವೇ ಸಾರಿದ್ದಾರೆ.
ನೈಸ್ ಹಗರಣ ಮತ್ತು ಬಿಡದಿ ಟೌನ್‌ಶಿಪ್ ವಿಷಯವನ್ನು ಹೇಗೋ ನಿಭಾಯಿಸುತ್ತಿದ್ದರು. ಆದರೆ, ಮಾರುವೇಷದ ಕಾರ್ಯಾಚರಣೆ ಅವರನ್ನು ಒಂಟಿಯಾಗಿಸಿದೆ. ʻಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾರುವೇಶದ ಕಾರ್ಯಾಚರಣೆ ನಡೆಸಿ, ಸಿಎಂ ಕುರ್ಚಿಯಿಂದ ಅವರನ್ನು ಡಿಕೆಶಿ ಕೆಳಗೆ ಇಳಿಸಿದ್ದಾರೆʼ ಎಂದು ಕುಮಾರಸ್ವಾಮಿ ಸಿಡಿಸಿದ ಬಾಂಬ್ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಡಿಕೆಶಿ ಅವರನ್ನು ಸಾರ್ವಜನಿಕ ಕಟಕಟೆಯಲ್ಲಿ ತಂದು ನಿಲ್ಲಿಸಿದೆ.
ಡಿಕೆಶಿ ಸಿಎಂ ಕುರ್ಚಿ ಮೇಲೆ ಕೂತು ಕೇವಲ ನಾಲ್ಕು ತಿಂಗಳಾಯಿತು. ಆ ಕಡೆ ಹೆಚ್‌ಡಿಕೆ, ಈ ಕಡೆ ಬಿಜೆಪಿ ನಾಯಕರು ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ರಾಜಕೀಯ ಯುದ್ಧದಲ್ಲಿ ಒಕ್ಕಲಿಗ ಸಮುದಾಯದ ಒಂದಿಬ್ಬರು ಸಚಿವರು ಮಾತ್ರ ಅವರ ಜತೆಗೆ ನಿಂತಿದ್ದಾರೆ. ಉಳಿದ ಸಚಿವರು ಇದು ತಮಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಭಾವಿಸಿ ದೂರ ನಿಂತಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಅವರು ಯುದ್ಧದಲ್ಲಿ ಅರ್ಧ ಗೆದ್ದಂತಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಮತ್ತೇ ತುರ್ತು ಪರಿಸ್ಥಿತಿಯತ್ತ ಸಾಗುತ್ತಿರುವ ಭಾರತ?

ಇಂದಿರಾ ಗಾಂಧಿಯವರಿಗೆ ಅಧಿಕಾರ ಕೈ ತಪ್ಪುವ ಆತಂಕ ಹಾಗೂ ಸರ್ವಾಧಿಕಾರ ಧೋರಣೆಯ ಫಲವಾಗಿ ಈ ದೇಶ 1975 ರಲ್ಲಿ 21 ತಿಂಗಳುಗಳ ಕಾಲ ಅಕ್ಷರಶಃ ಕತ್ತಲೆಗೆ ತಳ್ಳಲ್ಪಟ್ಟಿತ್ತು. ಅದು ಕತ್ತಲೆಯ ಯುಗ ಅಥವಾ ಭಾರತದ ಪ್ರಜಾಪ್ರಭುತ್ವದ ಕಗ್ಗೋಲೆಯ ಕಾಲ ಎಂದು ಕುಖ್ಯಾತಿ ಪಡೆದಿದೆ.
ಇಂದಿರಾ ಅವರು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದ ರಾಜಕಾರಣಿಗಳಾದಿಯಾಗಿ ಜನಸಾಮಾನ್ಯರನ್ನು, ಅಸಂವಿಧಾನಿಕ ದಾರಿ ಹಾಗೂ ತಂತ್ರಗಳು ಬಳಸುವುದರ ಮೂಲಕ ಎಲ್ಲರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಪ್ರಜಾಪ್ರಭುತ್ವದ ನೆರಳಿನ ಅಡಿಯಲ್ಲಿಯೇ ಜರುಗಿಸಿರುವುದು ದೇಶದ ಚರಿತ್ರೆಯಲ್ಲಿ ಕಪ್ಪು ಪುಟದ ದಾಖಲೆಯಾಗಿ ಉಳಿಯಲಿದೆ. ಕೇಂದ್ರ ಸರ್ಕಾರದ ನಡೆಗಳು ಇಂದಿರಾ ಅವರ 1975ರ ತುರ್ತು ಪರಿಸ್ಥಿತಿ ನೆನಪಿಸುವಂತಿದೆ. Gen Zಗಳ NEET ಪರೀಕ್ಷೆಯ ಅಕ್ರಮದ ವಿರುದ್ಧ ನಡೆದ ಹೋರಾಟ ಹಾಗೂ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗಾಗಿ ನಡೆದ ಹೋರಾಟ. ಈಗ SIR ಅಕ್ರಮಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಕ್ಷಾತೀತವಾಗಿ ದೇಶದ ಜನರು ಭಾಗಿಯಾಗುತ್ತಿದ್ದಾರೆ.
ಇದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂದು ಪೊಲೀಸರನ್ನು ಮುಂದೆ ಬಿಟ್ಟು ಗಾಂಧಿ ತೋರಿಸಿದ ಅಹಿಂಸಾ ಮೂಲಕ ಹೋರಾಡುತ್ತಿರುವ ಯುವಜನತೆಯ ಮೇಲೆ ಪ್ರಹಾರ ಮಾಡುತ್ತಿದೆ. ಪ್ರತಿಭಟನಾಕಾರರ ಜತೆಗೆ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಅನಿಸುತ್ತಿದೆ.
ಶಾಂತಿಯುತವಾಗಿ ಸಭೆ ಸೇರುವುದು ಹಾಗೂ ಪ್ರತಿಭಟನೆ ಮಾಡುವುದು ಜನರ ಮೂಲಭೂತ ಹಕ್ಕು. ಸರ್ಕಾರ ಜನರ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ ರಾಠಿಯನ್ನು ಯಾವುದೆ ಕಾರಣ ನೀಡದೆ ಬೆಳ್ಳಂಬೆಳಿಗ್ಗೆ ಅವರ ಗುರಗಾಂವ್ ಮನೆಗೆ ನುಗ್ಗಿ ಕಾನೂನು ಬಾಹಿರವಾಗಿ ಬಂಧಿಸಿ ಎಳೆದುಕೊಂಡು ಹೋಗಿರುವುದು, ದೆಹಲಿಯ ಕನಾಟ್ ಪ್ಲೇಸನ್ ಸೆಂಟ್ರಲ್ ಪಾರ್ಕನಲ್ಲಿ ಶುಕ್ರವಾರ ಆಯೋಜಿಸಿದ್ದ “ಲೇಹರಾ ದೋ ತಿರಂಗಾ” ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ CJP ಮುಖ್ಯಸ್ಥ ಅಭಿಜೀತ ದಿಪ್ಕೆ ಹಾಗೂ AISA ಸಂಘಟನೆ ಮುಖ್ಯಸ್ಥೆ ನೇಹಾ ಬೋರಾ ಅವರನ್ನು ದೆಹಲಿ ಪೋಲಿಸರು ಬಂಧಿಸಿರುವುದು ಏನೇನು ಸೂಚಿಸುತ್ತದೆ?
ಒಂದೇ ದಿನ ಏಳು ಸಾವಿರ ಜನರನ್ನು ಸಾಮೂಹಿಕವಾಗಿ ಬಂಧಿಸಿರುವ ಸರ್ಕಾರದ ಈ ಸರ್ವಾಧಿಕಾರ ಧೋರಣೆ 1975ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ.
ED, CBI ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುವುದು, ಜನಪರ ಮಾಧ್ಯಮಗಳ ಧ್ವನಿಗಳನ್ನು ಹತ್ತಿಕ್ಕುವುದು, ಇಲ್ಲವೇ ಬಗ್ಗದಿದ್ದರೆ ಹಣಬಲದಿಂದ ಖರಿದಿಸುವುದು ದೇಶದಲ್ಲಿ ನಡೆಯುತ್ತಿದೆ. ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿಯ ನಡೆ ಎಂದು ಸಾರ್ಜಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರು. ಈ ಜೆನ್ ಝೀ ಹೋರಾಟ ಯಾವ ಪರಿಣಾಮ ಬಿರಲಿದೆ ಎಂಬುದು ಜನರಲ್ಲಿ ಕುತೂಹಲ ಹುಟ್ಟಿಸಿದೆ.
ಕುಮಾರಸ್ವಾಮಿ ಹೋರಾಟದಲ್ಲಿ ಬಿಜೆಪಿ ಎಲ್ಲಿದೆ?

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಇದೆ. ಈ ಮೈತ್ರಿ ಕಳೆದ ಲೋಕಸಭಾ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಜಯ ತಂದುಕೊಟ್ಟಿದೆ (ಬಿಜೆಪಿ 17, ಜೆಡಿಎಸ್ 2). ಈ ರಾಜಕೀಯ ದೋಸ್ತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. ಆದರೆ, ಅದು ಕೇವಲ ಮಾತಿಗೆ ಸೀಮಿತವಾಗಿದೆ.
ಕುಮಾರಸ್ವಾಮಿ ಮಾರುವೇಷದ ಕಾರ್ಯಾಚರಣೆಯ ಚಾಂಪಿಯನ್ ರಾಕೇಶ್ ಶೆಟ್ಟಿ ವಿರುದ್ಧ ರಸ್ತೆಗಿಳಿದು ಹೋರಾಡುತ್ತಿದ್ದಾರೆ. ಮೈತ್ರಿ ಧರ್ಮ ಪಾಲಿಸಬೇಕಾದ ಬಿಜೆಪಿ ಈ ಕಡೆಗೆ ತಲೆ ಹಾಕುತ್ತಿಲ್ಲ. ಇದು ಬಿಜೆಪಿಗೆ ಬೇಕಾಗಿದ್ದು ಒಕ್ಕಲಿಗರ ಮತಗಳು ವಿನಾ ದೇವೇಗೌಡರ ಕುಟುಂಬವಾಗಲಿ, ಜೆಡಿಎಸ್ ಪಕ್ಷವಾಗಲಿ ಅಲ್ಲ ಎಂದು ಹೇಳುತ್ತಿದೆ. ಕುಮಾರಸ್ವಾಮಿ ಇಮೇಜ್ ಕಡಿಮೆಯಾದಷ್ಟು ನಮಗೆ ಒಳ್ಳೆಯದು ಎಂದು ನಿರ್ಧರಿಸಿ, ದೂರವೇ ಉಳಿದು ಸೇಫ್ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟಪಡಿಸುತ್ತಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆ ಮತ್ತು ಅವಕಾಶವಾದಿ ರಾಜಕಾರಣ ಇದೆ ಎಂಬ ಆರೋಪವನ್ನು ನಿಜವಾಗಿಸುತ್ತಿದ್ದಾರೆ.
ʻಯಡಿಯೂರಪ್ಪ ಪೋಕ್ಸೊ ಕೇಸ್‌ನಲ್ಲಿ ಜೈಲಿಗೆ ಹೋಗುತ್ತಿದ್ದರು. ಅವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ. ಅವರನ್ನು ರಕ್ಷಿಸಿದವರೇ ಸಿದ್ದರಾಮಯ್ಯ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೌನವಾಗಿದ್ದಾರೆʼ ಎಂದು ಎನ್ನುವವರಿದ್ದಾರೆ. ʻರಾಜ್ಯದ ಬಹುತೇಕ ರಾಜಕಾರಣಿಗಳ ʻಸಿಡಿಗಳುʼ ರಾಕೇಶ್ ಶೆಟ್ಟಿಯ ಕಪಾಟಿನಲ್ಲಿ ಭದ್ರವಾಗಿವೆ. ಶೆಟ್ಟಿಗೆ ಹೆದರಿ ಅವರಾರೂ ಮಾತಾಡುವ ಧೈರ್ಯ ಮಾಡುತ್ತಿಲ್ಲʼ ಎಂದೂ ಎನ್ನುವವರಿದ್ದಾರೆ. ಇವು ನಿಜ ಇರಲಿಕ್ಕಿಲ್ಲ. ಸುಳ್ಳೂ ಇರಲಿಕ್ಕಿಲ್ಲ.
ಹೋರಾಟದ ಚಾಂಪಿಯನ್ ಅಣ್ಣಾ ಹಜಾರೆ ಎಲ್ಲಿದ್ದಾರೆ?

ದೇಶದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 2011ರಲ್ಲಿ ದೆಹಲಿಯ ʻಜಂತರ್ ಮಂತರ್ʼನಿಂದ ಎದ್ದು ಹೋಗಿ, ಅದೆಲ್ಲೋ ಕಳೆದುಹೋಗಿದ್ದಾರೆ. ಸಾರ್ವಜನಿಕವಾಗಿ ಮತ್ತೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಅಭಿಮಾನಿಗಳು ಅವರನ್ನು ಹುಡುಕುತ್ತಿದ್ದಾರೆ.
ದೇಶದ ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಹಲ್ಲಿಲ್ಲದ ಹಾವಿನಂತಾಗಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಇವುಗಳ ರಿಪೇರಿಗಾಗಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಡುತ್ತಿವೆ. ಆದಾಗ್ಯೂ ಅಣ್ಣಾ ಎದ್ದು ಬರಲು ಸಿದ್ಧರಿಲ್ಲ.
ಅವರ ಹೋರಾಟದಿಂದಾಗಿ ʻಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ -2013ʼ ಜಾರಿಗೆ ಬಂದಿದೆ. ಮೋದಿ-ಶಾ ಅವರು ಐದು ವರ್ಷಗಳ ಕಾಲ ಲೋಕಪಾಲರನ್ನೇ ನೇಮಕ ಮಾಡಿಲ್ಲ. ಆಮೇಲೆ 2019ರಲ್ಲಿ ನೇಮಕ ಮಾಡಿದರೂ ವಿರೋಧ ಪಕ್ಷದ ನಾಯಕನನ್ನು ಸಮಿತಿಯಿಂದ ಹೊರಗಿಟ್ಟು ತಮ್ಮ ಆಪ್ತರನ್ನೇ ನೇಮಿಸಿದರು. ಆಗಲೂ ಅವರು ಮಾತಾಡಲಿಲ್ಲ.
ದೇಶದಲ್ಲಿ ರಫೇಲ್ ಹಗರಣ ಹಾಗೂ ಎಲೆಕ್ಟೋರಲ್ ಬಾಂಡ್ ದೊಡ್ಡ ಸದ್ದು ಮಾಡಿವೆ. ಕನಿಷ್ಠ ತನಿಖೆ ಮಾಡಲು ಈ ಸಂಸ್ಥೆ ಮುಂದಾಗಲಿಲ್ಲ. ಹುಟ್ಟಿದಾಗಿನಿಂದಲೇ ರೋಗಗ್ರಸ್ಥವಾಗಿರುವ ಈ ಸಂಸ್ಥೆಗೆ ಪೋಲಿಯೋ ಹನಿ ಹಾಕಿಸಲು ಅವರು ಇಂದಲ್ಲ ನಾಳೆ ಎದ್ದು ಬರಬಹುದೆಂದು ಜನರು ಹನ್ನೆರಡು ವರ್ಷಗಳಿಂದ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಅಣ್ಣಾ ಹನಿ ಹಾಕಿಸಲು ಹೊರಬರುವುದು ದೂರವೇ ಉಳಿಯಿತು, ಉಸಿರು ಬಿಡದೆ ಬಾಯಿಮುಚ್ಚಿಕೊಂಡೇ ಇದ್ದಾರೆ.
ಅವರ ಈ ಸುದೀರ್ಘ ಮೌನ ಜನರಿಗೆ ಕುತೂಹಲ ಹುಟ್ಟಿಸಿದೆ.
ಗ್ಯಾನೇಶ್ ಕುಮಾರ್ ಸುತ್ತಾ ಮತ್ತೊಂದು ವಿವಾದ…

ಸಿದ್ದರಾಮಯ್ಯ ವಿರುದ್ಧ ಹನಿ ಟ್ರ್ಯಾಪ್ ಸಂಚು?

ದೇಶದಾದ್ಯಂತ ಮತಗಳ್ಳತನದ ಬಗ್ಗೆ ಹೋರಾಟ ನಡೆಯುತ್ತಿದ್ದರೆ, ಕರ್ನಾಟಕ ಮಾತ್ರ ಮಾರುವೇಷದ ಕಾರ್ಯಾಚರಣೆಯ ಚರ್ಚೆಯಲ್ಲಿ ಮುಳುಗಿದೆ. ದಾಖಲೆಯ ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 2011ರಲ್ಲಿ ಹನಿ ಟ್ರ್ಯಾಪ್ ಬಲೆಗೆ ಸಿಲುಕಿಸಲು ಸಂಚು ನಡೆದಿತ್ತು ಎಂಬ ಸುದ್ದಿ ಹರಿದಾಡುತ್ತಿದೆ. ಅದು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಕುರಿತು ʻಅದು ಸ್ಟಿಂಗ್ ಅಲ್ಲ, ಅಪಪ್ರಚಾರದ ವಿಡಿಯೊʼ ಎಂದು ಸಿದ್ದರಾಮಯ್ಯ ಅವರ ಮಗ ಸಚಿವ ಡಾ. ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ವತಃ ಸಿದ್ದರಾಮಯ್ಯನವರೂ ಮೌನ ಮುರಿದು ʻರಾಜ್ಯದಲ್ಲಿ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ಗೊತ್ತಿದೆ. ಯಾರು ಮಾಡುತ್ತಿದ್ದಾರೆಂದು ತನಿಖೆ ಆಗಬೇಕುʼ ಎಂದಿದ್ದಾರೆ.
ಆದರೆ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರು ʻಸ್ಟಿಂಗ್ ಆಗಿರುವುದಕ್ಕೆ ಅವರು ಸ್ಟೇ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇಲ್ಲದಿದ್ದರೆ ಅವರು ಯಾಕೆ ತಡೆಯಾಜ್ಞೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗುತ್ತಿದ್ದರುʼ ಎಂದು ಆಡಿರುವ ಮಾತು ಕುತೂಹಲ ಮೂಡಿಸಿದೆ.
ಈ ಮಧ್ಯೆ ಇಂದು ಸಿದ್ದರಾಮಯ್ಯನವರು ನ್ಯಾಯಾಲಯದ ಕದ ತಟ್ಟಿದ್ದಾರೆ. ಜತೆಗೆ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಟಕಟೆಯಲ್ಲಿ ತಂದು ನಿಲ್ಲಿಸಿ, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
ಮಾರುವೇಷದ ಕಾರ್ಯಾಚರಣೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ – ಮಹಾರಾಜರ ಕಾಲದಲ್ಲಿ ಆರಂಭವಾಗಿ, ಈಗಲೂ ಮುಂದುವರಿದಿದೆ. ಎದುರಾಳಿ ಶತ್ರು ದೇಶದ ರಹಸ್ಯ ದಾಖಲೆ ಹಾಗೂ ಮಾಹಿತಿಯನ್ನು ಪಡೆಯಲು ಜಗತ್ತಿನ ಬಹುತೇಕ ದೇಶಗಳು ಇದೇ ದಾಳ ಎಸೆಯುತ್ತವೆ. ರಾಜಕಾರಣಿಗಳು ಅಧಿಕಾರಕ್ಕಾಗಿ ಬೇರೆ ಪಕ್ಷದ ನಾಯಕರನ್ನು ಅಥವಾ ತಮ್ಮ ಪಕ್ಷದ ರಾಜಕಾರಣಿಗಳನ್ನು ರಾಜಕೀಯವಾಗಿ ಮುಗಿಸಲು ಇದರ ಮೊರೆ ಹೋಗುತ್ತಾರೆ. ಈ ಮಾರುವೇಷದ ಕಾರ್ಯಾಚರಣೆಗೆ ಪ್ರಪಂಚದಾದ್ಯಂತ ಸಾವಿರಾರು ಜನರು ಆಹುತಿಯಾಗಿದ್ದಾರೆ. ನಮ್ಮ ದೇಶ–ರಾಜ್ಯದಲ್ಲೂ ಇದಕ್ಕೆ ಹಲವರು ಬಲಿಪಶುವಾಗಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಎರಡು ಹನಿ ಟ್ರ್ಯಾಪ್‌ಗಳು ಬಹಳ ಸದ್ದು ಮಾಡಿದವು.
ಮೊದಲನೆಯದು, 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಎಂಟು ಜನ ಸಚಿವರು ಸರ್ಕಾರ ಉರುಳಿಸಲು ಮುಂಬೈಯಲ್ಲಿ ಸುತ್ತಾಡಿ, ಬಿಜೆಪಿಗೆ ಹಾರಿದರು. ಮರುದಿನ ಅವರು ನ್ಯಾಯಾಲಯದಿಂದ ತಮ್ಮ ವಿರುದ್ಧ ವಿಡಿಯೊಗಳು ಪ್ರಸಾರ ಮಾಡದಂತೆ ಏಕಪಕ್ಷೀಯ ಆದೇಶ ಪಡೆದದ್ದು.
ಎರಡನೆಯದು, 2021ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿ, ಆಗಿನ ಬಿಜೆಪಿ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಅದಾದ ಮೇಲೆ ಅವರು ರಾಜ್ಯ ರಾಜಕಾರಣದಲ್ಲಾಗಲಿ ಅಥವಾ ಬೆಳಗಾವಿ ರಾಜಕಾರಣದಲ್ಲಾಗಲಿ ಮೊದಲಿನಷ್ಟು ಸಕ್ರಿಯವಾಗಿರದೆ, ಎಲ್ಲೋ ಕಳೆದುಹೋಗಿದ್ದಾರೆ.
ರಾಜ್ಯದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸುವ ಒಂದು ತಂಡವಿದೆ. ಆ ತಂಡ ತಮ್ಮ ಬಾಸ್‌ಗಾಗಿ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಆಗಾಗ ಎದ್ದು ಬಂದು ಸದ್ದು ಮಾಡುತ್ತಲೇ ಇದೆ. ಇದು ರಾಜಕೀಯ ವ್ಯಭಿಚಾರ. ಇದರಿಂದಾಗಿ ರಾಜ್ಯದ ಮಾನ ಮೂರಾಬಟ್ಟೆಯಾಗುತ್ತಿದೆ. ಕರಾವಳಿಯಲ್ಲಿ ಹೆಣದ ರಾಜಕೀಯ ನಡೆದರೆ, ಬೆಂಗಳೂರಿನಲ್ಲಿ ಈ ಮಾರುವೇಷದ ಕಾರ್ಯಾಚರಣೆ ರಾಜಕೀಯ ನಡೆಯುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ರಾಜ್ಯದ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಫೋಟೋಶೂಟ್‌ನಲ್ಲಿ ತಲ್ಲೀನರಾಗಿದ್ದರು ಎಂದು ಎನ್ನುವವರಿದ್ದಾರೆ. ಮಾರುವೇಷದ ಕಾರ್ಯಾಚರಣೆಯ ಬಗ್ಗೆ ಅವರು ತನಿಖೆ ಮಾಡಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಎನ್ನುವವರೂ ಇದ್ದಾರೆ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇದು ರಾಜ್ಯ ರಾಜಕೀಯುದಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಬಿಸುವ ಗಾಳಿ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷಕ್ಕೂ ತಟ್ಟುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದು ಚರ್ಚೆಯ ವಿಷಯವಾಗುತ್ತದೆ. ಸಿದ್ದರಾಮಯ್ಯ ಇದನ್ನು ಹೇಗೆ ಎದುರಿಸುತ್ತಾರೆ, ಅವರ ಮುಂದಿನ ನಡೆ ಏನು ಎಂಬ ಕುತೂಹಲ ರಾಜ್ಯದ ಜನರಲ್ಲಿ ಹುಟ್ಟಿಸಿದೆ.


