ʻಬಸವಾದಿ ಶರಣರ ಹಿಂದೂ ಸಮಾವೇಶʼದ ರಥ ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಹೊರಟು, ಈಗ ಕಲಬುರ್ಗಿ ಜಿಲ್ಲೆಯಲ್ಲಿ ಬಂದು ನಿಂತಿದೆ. ಮಹಾರಾಷ್ಟ್ರದ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಈ ಸಮಾವೇಶಗಳಲ್ಲಿ ಪುಂಖಾನುಪುಂಖವಾಗಿ ಆಡಿದ ಮಾತುಗಳು ವಿವಾದಕ್ಕೀಡಾಗಿ ಭಿನ್ನ ರೂಪ, ಬಣ್ಣ, ವಾಸನೆಗಳನ್ನು ಪಡೆದು ಕನ್ನೇರಿ ಶ್ರೀಗಳಿಗಿದ್ದ ಅಷ್ಟೋ ಇಷ್ಟೋ ಗೌರವವೂ ಮೂರಾಬಟ್ಟೆಯಾಗಿದೆ.
ಸಾರ್ವಜನಿಕವಾಗಿ ತಿರುಗೇಟು ನೀಡಬೇಕಾದ ಲಿಂಗಾಯತ ಮಠಾಧೀಶರು ಕಾನೂನಿನ ಬಸ್ ಹತ್ತಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕನ್ನೇರಿ ಶ್ರೀಗಳ ಮಾನಕ್ಕೆ ಒಂದು ರೂಪಾಯಿಯೋ ಅಥವಾ ಎರಡು ರೂಪಾಯಿಯೋ ಬೆಲೆ ಕಟ್ಟದೆ, ಒಂದು ಕೋಟಿ ರೂಪಾಯಿ ಬೆಲೆ ಕಟ್ಟಿ ಅದರಲ್ಲೂ ಉದಾರತೆ ತೋರಿಸಿದ್ದಾರೆ ಎಂದು ಎನ್ನುವವರು ಇದ್ದಾರೆ. ಆದರೆ ಕನ್ನೇರಿ ಶ್ರೀಗಳು ಮಾತ್ರ ಲಿಂಗಾಯತ ಸ್ವಾಮಿಗಳ ಮಾನ ಬೀದಿಯಲ್ಲಿ ಹರಾಜು ಹಾಕುವ ಕಾಯಕ ಮುಂದುವರಿಸಿದ್ದಾರೆ. ಸತ್ಯ ಹೊಸ್ತಿಲು ದಾಟುವಷ್ಟರಲ್ಲಿ, ಅವರಾಡುತ್ತಿರುವ ಸುಳ್ಳು ರಾಜ್ಯವೆಲ್ಲಾ ಸುತ್ತಾಡಿ ಬಂದಿರುತ್ತದೆ ಎಂಬ ಸತ್ಯ ಲಿಂಗಾಯತ ಸ್ವಾಮಿಗಳಿಗೆ ಯಾರು ಹೇಳಬೇಕು ಎಂದು ಎನ್ನುವವರೂ ಇದ್ದಾರೆ.
ಕನ್ನೇರಿ ಶ್ರೀಗಳು ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿರುವ ಲಿಂಗಾಯತ ಸ್ವಾಮಿಗಳ ಮೇಲೆ ಮಾತ್ರ ಯಾಕೆ ಮುಗಿಬಿದ್ದಿದ್ದಾರೆ? ಸುಳ್ಳಿನ ದಾಳಿ ಮಾಡಿ, ಸುಳ್ಳಿನಿಂದ ಲಿಂಗಾಯತ ಸ್ವಾಮಿಗಳನ್ನು ಕುಗ್ಗಿಸಲು ಅವರು ಯಾರಿಂದ ಸುಪಾರಿ ಪಡೆದಿದ್ದಾರೆ? ಈ ಸಮಾವೇಶಗಳಿಗೆ ಫಂಡಿಂಗ್ ಯಾರು ಮಾಡುತ್ತಿದ್ದಾರೆ? ಬಿಜೆಪಿ ರಾಜಕಾರಣಿಗಳು ಯಾಕೆ ಈ ಸಮಾವೇಶಗಳು ಆಯೋಜಿಸುತ್ತಿದ್ದಾರೆ? ಇದರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿಗರು ಮಾತ್ರ ಯಾಕೆ ಭಾಗವಹಿಸುತ್ತಿದ್ದಾರೆ? ಹಿಂದೆ ಜಂಗಮೇತರ ಮಠಾಧೀಶರನ್ನು ಸಂಘಟಿಸಲು ʻಸಹೃದಯಿ ಮಠಾಧೀಶರ ಸಂಘʼ ಕಟ್ಟಿದವರು, ಈಗ ಅವರೆದುರು ಮಂಡಿಯೂರಿದ್ದು ಯಾಕೆ? (ಅವರು ಯಾವ ಸಮಾಜದ ಸ್ವಾಮೀಜಿಗಳ ವಿರುದ್ಧ ಸಂಘಟನೆ ಕಟ್ಟಲು ಮುಂದಾಗಿದ್ದರೋ, ಇಂದು ಬಹುತೇಕ ಅದೇ ಸಮಾಜದ ಕಾವಿಧಾರಿಗಳು ಅವರ ಸಮಾವೇಶದ ವೇದಿಕೆಗಳಲ್ಲಿದ್ದರು), ಅವರನ್ನು ದೇಶದ ಉನ್ನತ ನ್ಯಾಯಾಲಯ ʻಒಳ್ಳೆಯ ಪ್ರಜೆಯಾಗಿʼ ಎಂದು ತಾಕೀತು ಮಾಡಿದ್ದು ಯಾಕೆ? ಕಲಬುರ್ಗಿ ಹೈಕೋರ್ಟ್ ಬಸವಕಲ್ಯಾಣದಲ್ಲಿ ಅವರು ಮಾತಾಡದಂತೆ ಅವರ ಬಾಯಿಗೆ ಬೀಗ ಹಾಕಿದ್ದು ಯಾಕೆ? ಅವರದ್ದೇ ಮಠದ ಕಾಣಸಿದ್ದೇಶ್ವರರು ತಮ್ಮ ವಚನಗಳಲ್ಲಿ ಮನುಷ್ಯ ಪ್ರೇಮ, ಸಹಬಾಳ್ವೆ, ಸೌಹಾರ್ದತೆಯನ್ನು ಸಾರಿ, ಅದರಂತೆ ಬಾಳಿ ಬದುಕಿದರು. ಈಗ ನೀವ್ಯಾಕೆ ಪುಡಿ ಕೋಮುವಾದಿಗಳಂತೆ ಮುಸ್ಲಿಂ ಸಮುದಾಯದ ಮೇಲೆ ಬೆಂಕಿ ಕಾರುತ್ತಿದ್ದಿರಿ? ಕನ್ನೇರಿ ಶ್ರೀಗಳು ಉತ್ತರಿಸಬೇಕಾದ ಪ್ರಶ್ನೆಗಳು ಒಂದೆರಡಲ್ಲ.
ಲಿಂಗಾಯತ ಸ್ವಾಮಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಈಗ ಅವರೇ ಜನತಾ ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಯಾಗಿ ನಿಂತಿದ್ದಾರೆ. ಈಗ ಅವರ ಎದುರಿಗೆ ಎರಡು ಆಯ್ಕೆಗಳು ಇವೆ. ಒಂದು, ಲಿಂಗಾಯತ ಸ್ವಾಮೀಜಿಗಳ ಮೇಲೆ ಅವರು ಮಾಡಿದ ಆರೋಪಗಳಿಗೆ ಸಾಕ್ಷ್ಯಗಳನ್ನು ಬಹಿರಂಗಪಡಿಸುವುದು, ಇಲ್ಲವೇ ಸುಳ್ಳನ್ನು ಒಪ್ಪಿಕೊಳ್ಳುವುದು. ಸುಳ್ಳಿನ ಮೂಲಕ ಸತ್ಯಹರಿಶ್ಚಂದ್ರರಾಗಲು ಸಾಧ್ಯ ಇಲ್ಲ.
ಅವರಾಡುವ ಸುಳ್ಳು ಮಾತುಗಳನ್ನು ಕೇಳಿ, ಅವರನ್ನು ಸುಳ್ಳಿನ ಚಾಂಪಿಯನ್ ಅನ್ನಬೇಕೋ ಅಥವಾ ಸುಳ್ಳಿನ ಸಾಮ್ರಾಟ್ ಅನ್ನಬೇಕೋ ಎಂದು ಜನರಿಗೆ ಗೊಂದಲವಾಗುತ್ತಿದೆ. ಅವರ ಮಾತುಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಂದೂ ಸತ್ಯ ಸಿಗುವುದಿಲ್ಲ. ಅವರ ಹುಸಿ ಮಾತುಗಳು ಕೇಳಿ ʻಸುಳ್ಳುʼ ಸೋತು ಅವರ ಸ್ನೇಹ ಮಾಡಿದಂತಿದೆ.
ಸರ್ಕಾರದಿಂದ ಕಾನೂನುಬದ್ಧವಾಗಿ ಬೆಂಗಳೂರು ಹತ್ತಿರ ಜಮೀನು ಪಡೆದದ್ದು ಹಿಂದುಳಿದ ಸಮುದಾಯದ ಸ್ವಾಮೀಜಿಗಳು. ಆದರೆ, ಅವರು ಆರೋಪ ಮಾಡುತ್ತಿರುವುದು ಲಿಂಗಾಯತ ಸ್ವಾಮಿಗಳು ಬಸವ ಸಂಸ್ಕೃತಿ ಮಾಡಿ ಜಮೀನು ಪಡೆದಿದ್ದಾರೆ ಎಂದು.
ಹಿಂದೂ ಧರ್ಮವನ್ನು ವಿರೋಧಿಸುವ ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮದ ಕಾವಿ ಬಟ್ಟೆ ಧರಿಸಿದ್ದಾರೆ. ಅವರು ಕಾವಿ ಬಟ್ಟೆ ಧರಿಸಬಾರದೆಂದು ಫರ್ಮಾನು ಹೊರಡಿಸಿದ್ದಾರೆ (ಹಿಂದೂ ಒಂದು ಧರ್ಮ ಅಲ್ಲ ಎಂದು ದೇಶದ ಸುಪ್ರೀಂ ಕೋರ್ಟ್ ಹೇಳಿದೆ. ಸಾಕ್ಷಾತ್ ಪ್ರಧಾನಿ ಮೋದಿ ಅವರೂ ಹೇಳಿದ್ದಾರೆ). ಆದರೆ, ಸ್ವತಃ ಅವರೇ ಧರಿಸುವ ಕಾವಿ ಬಟ್ಟೆ ಮೂಲತಃ ಅವರು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮದ್ದಲ್ಲ. ಅದು ಬೌದ್ಧ ಬಿಕ್ಕುಗಳದ್ದು. ಶಂಕರಾಚಾರ್ಯರ ಕಾಲದಿಂದ ವೈದಿಕ ಸ್ವಾಮಿಗಳು ಕಾವಿ ಬಟ್ಟೆ ಧರಿಸಲು ಆರಂಭಿಸಿದ್ದಾರೆ. ಇತಿಹಾಸದ ಪುಟಗಳ ಮೇಲೆ ಶ್ರೀಗಳು ಒಂದು ಸಲ ಕಣ್ಣಾಡಿಸಲಿ.
ʻಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ’ ಎಂದು ಬೊಬ್ಬಿಡುತ್ತಾ ಮತ್ತೊಂದು ಸುಳ್ಳು ಉದರಿಸಿದ್ದಾರೆ. ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧ ಮಾಡುವುದಿಲ್ಲ. ಲಿಂಗಾಯತ ತತ್ವವನ್ನು ಅವರ ಧರ್ಮದ ಜನರಿಗೆ ಹೇಳುತ್ತಾರೆ. ಈ ನೆಲದಲ್ಲಿ ಹುಟ್ಟಿದ್ದ ಬೌದ್ಧ, ಸಿಖ್ ಜೈನ ಧರ್ಮದ ಪ್ರಸಾರಕರು ಹೇಗೆ ತಮ್ಮ ಧರ್ಮ ಪ್ರಸಾರ ಮಾಡುತ್ತಾರೋ ಹಾಗೇ ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ಪ್ರಸಾರ ಮಾಡುತ್ತಿದ್ದಾರೆ. ಈ ದೇಶದ ಸಂವಿಧಾನ ತಮ್ಮ ಧರ್ಮದ ಪ್ರಸಾರ ಮಾಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ನೀಡಿದೆ ಎಂಬ ಅರಿವು ಅವರಿಗಿಲ್ಲವೇ?
ʻಲಿಂಗಾಯತ ಮಠಗಳಲ್ಲಿ ದಾಸೋಹ ಇರುವುದಿಲ್ಲʼ. ʻಲಿಂಗಾಯತ ಸ್ವಾಮಿಗಳು ಕಾಯಕ ಮಾಡುವುದಿಲ್ಲʻ ಎಂದು ಅವರಾಡಿದ ಮಾತುಗಳು ಕೇಳಿ ಸಮಾವೇಶಗಳಲ್ಲಿ ಭಾಗವಹಿಸಿದ ಜನರೇ ಹೊರಬಂದು ನಗುತ್ತಿದ್ದರು.
ಮೆದುಳಿಲ್ಲದ ಹಾಗೂ ಹತಾಶನಾದ ಒಬ್ಬ ವ್ಯಕ್ತಿ ಮಾತ್ರ ವೈಯಕ್ತಿಕ ತೇಜೋವಧೆಗೆ ಮುಂದಾಗುತ್ತಾನೆ ಎಂಬ ಪ್ರಸಿದ್ಧ ಮಾತಿದೆ. ಗದಗಿನ ಈಗಿನ ತೋಂಟದಾರ್ಯ ಸ್ವಾಮೀಜಿಗಳಿಂದ ಹಿಡಿದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳವರೆಗೆ ಅವರ ವಿರುದ್ಧ ತಳಬುಡವಿಲ್ಲದ ಆರೋಪ ಮಾಡುತ್ತಿರುವ ಕನ್ನೇರಿ ಸ್ವಾಮೀಜಿ ಹತಾಶರಾಗಿ ಹೀಗೆ ಮಾತಾಡುತ್ತಿರಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಅವರಿಗೆ ಲಿಂಗಾಯತ ತತ್ವದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಒಂದಿನಿತೂ ಗೊತ್ತಿಲ್ಲ. ಅವರೊಬ್ಬ ಖಾಲಿ ತಲೆಯ ಸ್ವಾಮೀಜಿ ಎಂದು ಅವರಾಡುತ್ತಿರುವ ಮಾತುಗಳೇ ಹೇಳುತ್ತಿವೆ.
ಕಾಂಗ್ರೆಸ್ ಮೇಲಿನ ಕೋಪಕ್ಕೆ ಕ್ಷೇತ್ರ ಮರುವಿಂಗಡಣೆಗೆ ಡಿಎಂಕೆ ಸಾಥ್!

ಕ್ಷೇತ್ರ ಮರುವಿಂಗಡಣೆಗಾಗಿ ಬಿಜೆಪಿ ನಡೆಸಿದ ತಾಲೀಮು ಈಗ ಗೆಲುವಿನ ಹೊಸ್ತಿಲಿನಲ್ಲಿ ತಂದು ನಿಲ್ಲಿಸಿದೆ. ನಾಳೆಯ ಅಧಿವೇಶನದಲ್ಲಿ ಸಂವಿಧಾನಕ್ಕೆ 131ನೇ ತಿದ್ದುಪಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಾಯ್ದೆಗಾಗಿ ಮೋದಿ–ಶಾ ಜೋಡಿ ದೇಶದ ಕೆಲ ಪಕ್ಷಗಳನ್ನು ಒಡೆದು ಚಿಂದಿ–ಚೂರಿ ಮಾಡಿದ್ದಾರೆ. ವಿರೋಧ ಪಕ್ಷಗಳ ಸಂಸದರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು, ಅವರನ್ನು ರಾತ್ರಿಬೆಳಗಾಗುವುದರೊಳಗೆ ಎನ್ಡಿಎ ಭಾಗವಾಗಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೇನು ಮಾಡಬಾರದೋ ಅದೆಲ್ಲವನ್ನೂ ಮಾಡಿ ಮುಗಿಸಿದ್ದಾರೆ.
ಅಂದು ಡಿಎಂಕೆ ಮಸೂದೆಯ ವಿರುದ್ಧ ಸಂಸತ್ತಿನ ಒಳಗೂ ಹೊರಗೂ ದೊಡ್ಡ ಮಟ್ಟದಲ್ಲಿ ಹೋರಾಡಿತ್ತು. ಅದರ ಫಲವಾಗಿ ಹಿಂದಿನ ಅಧಿವೇಶನದಲ್ಲಿ ಬಿಜೆಪಿ ಕಪಾಟಿನಲ್ಲಿ ಈ ಮಸೂದೆ ತಣ್ಣಗೆ ಮಲಗಿತ್ತು. ಈಗ ಅದು ಯೂಟರ್ನ್ ಹೊಡೆದಿದೆ. ಅದರ ನಿಲುವಿನಲ್ಲಿ ದಿಢೀರ್ ಬದಲಾವಣೆಯಾಗಲು ಕಾರಣವೂ ಇದೆ. ಮೊದಲನೆಯದು, ಡಿಎಂಕೆ ಪಕ್ಷದ ಜತೆಗಿನ ಗೆಳೆತನವನ್ನು ರಾಹುಲ್ ಗಾಂಧಿ ಆತುರಾತುರವಾಗಿ ಕಡಿದುಕೊಂಡಿದ್ದರ ಕೋಪ. ಎರಡನೆಯದು, ತಮ್ಮ ರಾಜಕೀಯ ಲಾಭ.
ಈ ಹಿಂದೆ ರಾಜ್ಯದಲ್ಲಿ ಜಯಲಲಿತಾ ಅವರ ಪಕ್ಷದ ಜತೆ ಕಾಂಗ್ರೆಸ್ ಗೆಳೆತನ ಮಾಡಿದಾಗಲೂ ಡಿಎಂಕೆ ಇದೇ ಕೋಪದಿಂದ ಎನ್ಡಿಎ ಬಸ್ ಹತ್ತಿ, ವಾಜಪೇಯಿ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿತ್ತು. ಈಗ ಅದೇ ಇತಿಹಾಸದ ಪುಟದಲ್ಲಿ ಮತ್ತೆ ಹೊಸದಾಗಿ ನಾಲ್ಕು ಸಾಲು ಸೇರಿಸಲು ಮುಂದಾಗಿದ್ದಾರೆ ಅಷ್ಟೇ.
ಡಿಎಂಕೆ ತನ್ನ ನಿಲುವು ಬದಲಿಸದಿದ್ದರೆ ಮಹಾರಾಷ್ಟ್ರದ ಶರದ್ ಪವಾರ್ ಅವರ ರಾಜಕೀಯ ಆಟ ಮತ್ತು ಪಶ್ಚಿಮ ಬಂಗಾಳದ ಟಿಎಂಸಿಯ ಬಂಡಾಯ ಸಂಸದರ ಬೆಂಬಲ ಬಿಜೆಪಿಯನ್ನು ಮ್ಯಾಜಿಕ್ ನಂಬರ್ ತಲುಪಿಸುವುದಿಲ್ಲ.
ಈ ಮಸೂದೆ ಕಾಯ್ದೆಯಾದರೆ ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರಗಳು ಮಾತ್ರ ಹೆಚ್ಚಾಗುವುದಿಲ್ಲ. ದೇಶದ ಹಾಗೂ ರಾಜ್ಯಗಳ ಚುನಾವಣಾ ನಕಾಶೆಯೂ ಬದಲಾಗುತ್ತದೆ. ಈ ನಕಾಶೆ ಸಿದ್ಧಪಡಿಸುವವರು ಬೇರೆ ಯಾರೂ ಅಲ್ಲ, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್. ಈ ಕಾರಣಕ್ಕಾಗಿ ಮೋದಿ–ಶಾ ಅವರು ಶತಾಯಗತಾಯ ಮಸೂದೆಯನ್ನು ಪಾಸು ಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ ಎಂದು ರಾಜಕೀಯ ಕಾರಿಡಾರ್ನಲ್ಲಿ ಚರ್ಚೆಯಾಗುತ್ತಿದೆ.
ಆಶಾ ಕಾರ್ಯಕರ್ತೆಯರು: ಕಣ್ಣು, ಕಿವಿ ಮತ್ತು ಹೃದಯವಿಲ್ಲದ ಸರ್ಕಾರ!

ಯಾವುದೇ ದೇಶದಲ್ಲಿ ಅಥವಾ ಯಾವುದೇ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಕಣ್ಣು, ಕಿವಿ ಮತ್ತು ಹೃದಯ ಇರಬೇಕು. ಕುರ್ಚಿಯ ಮೇಲೆ ಕೂತವರಿಗೆ ತಮ್ಮ ಕರ್ತವ್ಯದ ಅರಿವು ಇರಬೇಕು. ಅಂದಾಗಲೇ ಅದು ನಾಗರಿಕ ಸರ್ಕಾರ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದನ್ನು ಸರ್ಕಾರವೆಂದು ಯಾಕೆ ಕರೆಯಬೇಕು? ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಯನ್ನು ಹೊತ್ತುಕೊಂಡು ಹತ್ತು ದಿನದಿಂದ ಕೊರೆಯುವ ಚಳಿಯಲ್ಲಿ ರಸ್ತೆ ಮೇಲೆ ನಿಂತಿದ್ದಾರೆ. ಸರ್ಕಾರ ಕಂಡು ಕಾಣದಂತೆ ವರ್ತಿಸುತ್ತಿದೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಣ್ಣು ಮಂಜಾಗಿದೆ, ಕಿವಿ ಕಿವುಡಾಗಿವೆ. ಮಂತ್ರಿಗಳಿಗೆ ಅಧಿಕಾರದ ಅಹಂ ನೆತ್ತಿಗೇರಿದೆ. ಒಂದೆಡೆ, ರಾಜ್ಯದ ಆರೋಗ್ಯ ಸಚಿವರು ‘ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ’ ಎಂದು ಫ್ಯೂಡಲ್ ಗತ್ತಿನಲ್ಲಿ ಮಾತನಾಡಿದರೆ, ಮತ್ತೊಂದೆಡೆ ಸಚಿವ ನರೇಂದ್ರ ಸ್ವಾಮಿಯವರು ‘ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ’ ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಬಿಡದಿ ಟೌನ್ಶಿಪ್ ವಿಷಯದಲ್ಲಿ ವಿಶೇಷ ಮುತುವರ್ಜಿ ವಹಿಸುವ ನಾಡಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಿಷ್ಠ ಸೌಜನ್ಯಕ್ಕಾದರೂ ಹೋರಾಟನಿರತರ ಬಳಿಗೆ ಹೋಗಿ ಅವರ ಅಹವಾಲುಗಳಿಗೆ ಕಿವಿಯಾಗುತ್ತಿಲ್ಲ. ಇದನ್ನು ಅಧಿಕಾರದಲ್ಲಿ ವಿರಾಜಮಾನರಾದವರ ದುರಹಂಕಾರದ ಪರಮಾವಧಿ ಎನ್ನದೆ ಏನೆಂದು ಕರೆಯಬೇಕು?
ತಪ್ಪದೆ ವರ್ಷ ವರ್ಷವೂ ತಮ್ಮ ವೇತನ ಹಾಗೂ ಭತ್ಯೆಯನ್ನು ಹೆಚ್ಚಿಸಿಕೊಳ್ಳುವ ಶಾಸಕರು–ಮಂತ್ರಿಗಳು, ಆಶಾ ಕಾರ್ಯಕರ್ತೆಯರು ಕೇಳುತ್ತಿರುವ ಹದಿನೈದು ಸಾವಿರ ರೂಪಾಯಿ ಗೌರವಧನದ ಬೇಡಿಕೆಗೆ ಸಿಡಿಮಿಡಿಗೊಳ್ಳುತ್ತಿರುವುದು ಅಣಕವಾಗಿದೆ. ಅಷ್ಟಕ್ಕೂ ಅವರು ಕಂಠಿಹಾರ ಬೇಕೆಂದು ಒತ್ತಾಯಿಸುತ್ತಿಲ್ಲ, ನಮ್ಮನ್ನು ಕಾಯಂ ಮಾಡಿ ಎಂದು ಬೇಡಿಕೆ ಮುಂದಿಟ್ಟಿಲ್ಲ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಗೌರವಧನವನ್ನು ಸ್ವಲ್ಪ ಹೆಚ್ಚಿಸಬೇಕು ಹಾಗೂ ನಿವೃತ್ತರಾದ ಮೇಲೆ ಐದು ಲಕ್ಷ ರೂಪಾಯಿ ಇಡುಗಂಟು ನೀಡಬೇಕು ಎಂದು ಕೇಳುತ್ತಿದ್ದಾರೆ. ಅವರು ಕೇಳುತ್ತಿರುವುದರಲ್ಲಿ ಒಂದು ನ್ಯಾಯವಿದೆ. ಅವರು ತಮ್ಮ ದುಡಿಮೆಗೆ ತಕ್ಕ ಕೂಲಿ ಕೇಳುತ್ತಿದ್ದಾರೆಯೇ ಹೊರತು ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ.
ಆಶಾ ಕಾರ್ಯಕರ್ತೆಯರ ಯೋಜನೆಯನ್ನು ಕೇಂದ್ರ ಸರ್ಕಾರ 2005ರಲ್ಲಿ ಜಾರಿಗೆ ತಂದಿದೆ. ಆದರೆ, ಗೌರವಧನ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಹೆಗಲಿಗೆ ಹಾಕಿ, ಪ್ರೋತ್ಸಾಹಧನದ ರೂಪದಲ್ಲಿ ಪುಡಿಗಾಸು ನೀಡುತ್ತಿದೆ. ರಾಜ್ಯದ ವಿರೋಧ ಪಕ್ಷದ ನಾಯಕರು ಶಾಮಿಯಾನದ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ವಿನಾ ಕೇಂದ್ರ ಸರ್ಕಾರ ತಮ್ಮ ಪ್ರೋತ್ಸಾಹಧನದ ಪಾಲು ಹೆಚ್ಚಿಸಬೇಕೆಂದು ಒಂದು ಮನವಿ ಪತ್ರ ಬರೆಯುವ ಉಸಾಬರಿಗೆ ಹೋಗಿಲ್ಲ. ಈ ಮೂಲಕ ತಮ್ಮ ಬುಡುಬುಡಿಕೆತನವನ್ನು ತಾವೇ ಜಗಜ್ಜಾಹೀರು ಮಾಡಿಕೊಂಡಿದ್ದಾರೆ.
ಗೋವಾ ಮತ್ತು ಚಂಡೀಗಢ ಹೊರತುಪಡಿಸಿ ಭಾರತದ ಉಳಿದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಇದೆ. ಕರ್ನಾಟಕದಲ್ಲಿ 41,013 ಆಶಾ ಕಾರ್ಯಕರ್ತೆಯರಿದ್ದಾರೆ. ಕೇರಳ 12,000 ರೂಪಾಯಿ, ಪಶ್ಚಿಮ ಬಂಗಾಳ 11,250 ರೂಪಾಯಿ, ತೆಲಂಗಾಣ 7,500 ರೂಪಾಯಿ ಅವರಿಗೆ ಗೌರವಧನ ನೀಡುತ್ತಿವೆ. ಸಿಕ್ಕಿಂ ಮತ್ತು ಆಂಧ್ರಪ್ರದೇಶ ತಲಾ 10,000 ರೂಪಾಯಿ ಕೊಡುತ್ತಿವೆ. ಕರ್ನಾಟಕ ಕೇವಲ 5,000 ರೂಪಾಯಿ ಮಾತ್ರ ನೀಡುತ್ತಿರುವುದು ಅನ್ಯಾಯವಲ್ಲವೇ?
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜನರು ಹೆದರಿ ಮನೆ ಬಾಗಿಲು ಹಾಕಿಕೊಂಡು ಕೂತಿದ್ದರು. ಆಗ ಇದೇ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮನೆಮನೆಗೆ ಅಲೆದಾಡಿ ಜನರಿಗೆ ಆರೋಗ್ಯ ಸೇವೆ ಮಾಡಿದ್ದು ಈ ನಾಡು ಇನ್ನೂ ಮರೆತ್ತಿಲ್ಲ.
ಅಷ್ಟಕ್ಕೂ ಆಶಾ ಕಾರ್ಯಕರ್ತೆಯರಾಗಿ ನೇಮಕವಾಗುವವರು ಗ್ರಾಮೀಣ ಭಾಗದ ವಿಧವೆಯರು, ವಿಚ್ಛೇದಿತರು ಹಾಗೂ ಎರಡು ಮಕ್ಕಳ ತಾಯಂದಿರು. ಹಳ್ಳಿಗಳ ಬಾಣಂತಿಯರ, ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಮಾಡುವುದು ಬಹಳ ಜತನದಿಂದ ಮಾಡುತ್ತಿರುವುದು ಇದೇ ಆಶಾ ಕಾರ್ಯಕರ್ತೆಯರು. ಇವರಿಗೆ ಸರ್ಕಾರ ನೀಡುತ್ತಿರುವ 5,000 ರೂಪಾಯಿಗೆ ಮಳೆ, ಚಳಿ, ಗಾಳಿ, ಬಿಸಿಲು ಎನ್ನದೆ ದಿನವಿಡೀ ಸೇವೆಗೆ ಸಿದ್ಧರಾಗಿ ನಿಂತಿರುತ್ತಾರೆ. ಕೆಲವು ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡಿದ ಫಲವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇವರ ಗೌರವಧನ ಹೆಚ್ಚಿಸಿದರೆ ಬಿಸಿಯೂಟ ತಯಾರಕರು, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬರುತ್ತಾರೆಂದು ಸಬೂಬು ಹೇಳುತ್ತಿದ್ದಾರೆ. ಅವರದ್ದು ಮಾಡಿ. ಇವರದ್ದು ಮಾಡಿ.
ಆಶಾ ಕಾರ್ಯಕರ್ತೆಯರು ಇದೇ ಮೊದಲ ಬಾರಿಗೆ ಹೋರಾಟ ಮಾಡುತ್ತಿಲ್ಲ. ಈ ಹಿಂದೆ 2020ರಲ್ಲಿ ಹೋರಾಟ ಮಾಡಿದ್ದರು. 2025ರಲ್ಲಿ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಮಾಡಿದರು. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 10,000 ರೂಪಾಯಿ ಗೌರವಧನ ಹೆಚ್ಚಿಸುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ, ಅದು ಜಾರಿಗೆ ಬರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿ ಅವರು, ‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುತ್ತೇವೆ’ ಎಂದು ಮಾತು ಕೊಟ್ಟಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದ ಆಶ್ವಾಸನೆಗೆ ಹಾಗೂ ತಮ್ಮ ಪಕ್ಷದ ಅಧಿನಾಯಕಿ ಕೊಟ್ಟ ಮಾತಿಗಾದರೂ ಬೆಲೆ ಕೊಡಲಿ!
ವೀರಶೈವ ಮಹಾಸಭೆಯ ನ್ಯಾಯ: ಬಿದರಿಗೆ ಮೌನ, ಆರಾಧ್ಯಗೆ ಉಚ್ಚಾಟನೆ!

ಜಾತಿವಾದಿ ಲೇಖಕ ರವಿ ಹಂಜ್ ಅಲಿಯಾಸ್ ಹಂಜಗಿಮಠ ದುರುದ್ದೇಶದಿಂದ ಬಸವಣ್ಣನವರಿಗೆ ಕಪ್ಪುಮಸಿ ಬಳಿಯಲು ಬರೆದಿರುವ ʻಬಸವ ಮಂಟಪʼ ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರಿ ಬಿದರಿ ಭಾಗವಹಿಸಿದ್ದಲ್ಲದೆ, ಲೇಖಕನನ್ನು ಹೊಗಳಿ ಮಹಾಸಭೆಯಿಂದ ಅಭಿನಂದಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಮಹಾಸಭಾದೊಳಗೂ ತೀವ್ರ ಆಕ್ರೋಶ ಹುಟ್ಟುಹಾಕಿದೆ.
ಈಗ ʻನಾನು ಬಸವ ಮಂಟಪ ಕೃತಿ ಓದಿರಲಿಲ್ಲʼ ಹಾಗಾಗಿ ಪುಸ್ತಕ ಬಿಡುಗಡೆಗೆ ಹೋಗಿದ್ದೆ ಎಂದು ಸಬೂಬು ನೀಡುತ್ತಿದ್ದಾರೆ. ಅವರ ಈ ಸಮಜಾಯಿಷಿಗೆ ರಾಷ್ಟ್ರೀಯ ಅಧ್ಯಕ್ಷರು ಮುದ್ರೆ ಒತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಸವಣ್ಣನವರ, ಲಿಂಗಾಯತರ ಮತ್ತು ಲಿಂಗಾಯತ ಮಠಾಧೀಶರ ವಿರುದ್ಧ ವಿಶ್ವವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ಹಂಜಗಿಮಠ ಬರೆಯುತ್ತಿದ್ದಾರೆ. ಇದು ಮಹಾಸಭಾದ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲವೇ? ಹೊತ್ತಿಲ್ಲವೆಂದಾದರೆ ಮಹಾಸಭಾದ ಕಾರ್ಯವೈಖರಿ ಹಾಗೂ ಆದ್ಯತೆ ಪ್ರಶ್ನಾರ್ಹವಾಗಿದೆ.
ಸಾಕ್ಷಾತ್ ತಮ್ಮದೇ ರಾಜ್ಯವೊಂದರ ಅಧ್ಯಕ್ಷ ಪುಸ್ತಕ ಬಿಡುಗಡೆಗೆ ಹೋಗಿ, ಲೇಖಕನಿಗೆ ಬಹುಪರಾಕ್ ಹಾಕಿ ಬಂದಿದ್ದಾರೆ. ಆದಾಗ್ಯೂ, ಅವರಿಗೆ ಇದುವರೆಗೆ ಕಾರಣ ಕೇಳಿ ಒಂದು ನೋಟಿಸ್ ಸಹ ನೀಡಿಲ್ಲ. ಆದರೆ, ಶಂಕರ ಬಿದರಿ ರಾಜೀನಾಮೆ ನೀಡಬೇಕೆಂದು ಧ್ವನಿ ಎತ್ತಿರುವ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಹರಿಶ್ ಆರಾಧ್ಯ ಅವರನ್ನು ಮಹಾಸಭಾದಿಂದ ಉಚ್ಚಾಟನೆ ಮಾಡಿದ್ದಾರೆ.
ಬಿದರಿ ಅವರ ರಾಜೀನಾಮೆ ಕೇಳಿದ್ದೇ ಅಪರಾಧ ಎಂದು ನಿರ್ಣಯಿಸಿರುವ ವೀರಶೈವ ಮಹಾಸಭೆಯ ಆಯಕಟ್ಟಿನ ಜಾಗದಲ್ಲಿ ಕೂತವರ ಬಸವ ಪ್ರೀತಿ ಎಂತಹದ್ದು ಎಂದು ಇದು ಜಗಜ್ಜಾಹೀರು ಮಾಡಿದೆ.
ಈ ಬೆಳವಣಿಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನಿಜಕ್ಕೂ ಲಿಂಗಾಯತ ಸಮುದಾಯದ ಹಿತ ಕಾಯುವ ಬಸವಪರ ಸಂಘಟನೆಯೇ ಅಥವಾ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಹಾಗೂ ರಾಜ್ಯಾಧ್ಯಕ್ಷ ಶಂಕರಿ ಬಿದರಿ ಅವರ ಪ್ರೈವೇಟ್ ಲಿಮಿಟೆಡ್ ಕಂಪನಿಯೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ವಿನಯ್ ಕುಲಕರ್ಣಿಗೆ ಸುಪ್ರೀಂ ಶಾಕ್: ಮತ್ತೆ ಜೈಲು ಹಕ್ಕಿ?

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ಸರ್ವೋಚ್ಚ ನ್ಯಾಯಾಲಯ, ಎರಡು ವಾರಗಳಲ್ಲಿ ಶರಣಾಗುವಂತೆ ಆದೇಶಿಸಿದೆ. ಇದರಿಂದ ನಾಲ್ಕು ತಿಂಗಳ ಜಾಮೀನಿನ ಬಳಿಕ ಕುಲಕರ್ಣಿ ಮತ್ತೆ ಜೈಲು ಸೇರುವ ಸ್ಥಿತಿ ನಿರ್ಮಾಣವಾಗಿದೆ.
ಈ ತೀರ್ಪು ಕುಲಕರ್ಣಿ ಬೆಂಬಲಿಗರಲ್ಲಿ ಆಘಾತ ಮೂಡಿಸಿದರೆ, ಯೋಗೇಶ್ ಗೌಡ ಕುಟುಂಬಕ್ಕೆ ನಿರಾಳತೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕುಲಕರ್ಣಿ ಮುಂದಿರುವ ಹಾದಿ..
ಸುಪ್ರೀಂ ಕೋರ್ಟ್ ಆದೇಶದಂತೆ ಎರಡು ವಾರಗಳಲ್ಲಿ ಶರಣಾಗುವುದು ಅವರಿಗೆ ಅನಿವಾರ್ಯವಾಗಿದೆ. ಜೈಲು ಪಾಲಾಗುವುದು ತಡೆಯಲು ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶವಿದೆ. ಅದು ವಜಾಗೊಂಡರೆ ಕ್ಯುರೇಟಿವ್ ಅರ್ಜಿ ಸಲ್ಲಿಸಲೂ ಅವಕಾಶವಿದೆ. ಇವರೆಡೂ ಮಾರ್ಗಗಳು ಇದ್ದರೂ ಇವು ಅವರ ಜೈಲುಹಾದಿಗೆ ತಡೆ ನೀಡುತ್ತದೆ ಎಂಬ ಖಾತರಿ ಇರುವುದಿಲ್ಲ.
ವಿನಯ್ ಜೈಲು ಹಕ್ಕಿಯಾದರೆ ಕಿತ್ತೂರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಪ್ರಬಲ ಧ್ವನಿಯೊಂದು ಸರಕುಗಳ ಹಿಂದೆ ಕಳೆದುಹೋಗುತ್ತದೆ. ರಾಜಕೀಯದಲ್ಲಿ ಕೆಲಕಾಲವಾದರೂ ಅವರ ಅನುಪಸ್ಥಿತಿ ಎದ್ದುಕಾಣುತ್ತದೆ.
ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗದಿದ್ದರೆ ಹೊಣೆ ಯಾರು?

ಶಿಕ್ಷಣ ಹಕ್ಕು ಕಾಯಿದೆ ಜಾರಿಯಲ್ಲಿದೆ ಎಂದು ಹೇಳುವ ಸರ್ಕಾರ, ಕಾಯಿದೆಯಲ್ಲಿರುವ ಎಲ್ಲ ಮಾನದಂಡಗಳನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಅನುಷ್ಠಾನಗೊಳಿಸಿದೆಯೇ? 16 ವರ್ಷಗಳಾದರೂ ಮಕ್ಕಳಿಗೆ ಸಿಗದ ಶಿಕ್ಷಣದ ಹಕ್ಕು! ಸರ್ಕಾರಿ ಶಾಲೆಗಳ ಸ್ಥಿತಿಗತಿಗೆ ಉತ್ತರಿಸುವವರು ಯಾರು?
ಭಾರತದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಉದ್ದೇಶದಿಂದ 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂತು. 2010ರ ಏಪ್ರಿಲ್ 1ರಿಂದ ಈ ಕಾಯಿದೆ ಅನುಷ್ಠಾನಕ್ಕೆ ಬಂದಿದೆ. ಶಿಕ್ಷಣವು ದಯೆ, ದಾನ ಅಥವಾ ಸರ್ಕಾರದ ಕೊಡುಗೆಯಲ್ಲ; ಅದು ಪ್ರತಿಯೊಂದು ಮಗುವಿನ ಹಕ್ಕು ಎಂಬ ಮಹತ್ವದ ಆಶಯವನ್ನು ಈ ಕಾಯಿದೆ ಹೊಂದಿದೆ.
ಆದರೆ ಕಾಯಿದೆ ಜಾರಿಗೆ ಬಂದು 16 ವರ್ಷಗಳಾದರೂ ಅದರಲ್ಲಿರುವ ಮೂಲಭೂತ ಮಾನದಂಡಗಳು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿವೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಗಿದೆ.
ಶಿಕ್ಷಣ ಹಕ್ಕು ಎಂದರೆ ಮಕ್ಕಳನ್ನು ಶಾಲೆಗೆ ದಾಖಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ, ಗುಣಮಟ್ಟದ ಬೋಧನೆ, ಸುರಕ್ಷಿತ ಶಾಲಾ ವಾತಾವರಣ, ಅಗತ್ಯ ಮೂಲಸೌಕರ್ಯ ಮತ್ತು ಸಮಗ್ರ ಕಲಿಕೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕಡ್ಡಾಯ ಜವಾಬ್ದಾರಿಯಾಗಿದೆ.
ಶಾಲೆ ಇದೆ, ಆದರೆ ಸೌಲಭ್ಯಗಳಿವೆಯೇ?
ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ ಪ್ರತಿಯೊಂದು ಶಾಲೆಯೂ ಸುಸಜ್ಜಿತ ಕಟ್ಟಡವನ್ನು ಹೊಂದಿರಬೇಕು. ಪ್ರತಿ ಶಿಕ್ಷಕರಿಗೂ ಕನಿಷ್ಠ ಒಂದು ತರಗತಿ ಕೊಠಡಿ, ಕಚೇರಿ ಮತ್ತು ಮುಖ್ಯಶಿಕ್ಷಕರ ಕೊಠಡಿ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಸುರಕ್ಷಿತ ಕುಡಿಯುವ ನೀರು, ಅಡುಗೆಮನೆ, ಆಟದ ಮೈದಾನ ಹಾಗೂ ಶಾಲೆಯ ಸುರಕ್ಷತೆಗೆ ಆವರಣ ಗೋಡೆ ಅಥವಾ ಬೇಲಿ ಇರಬೇಕು. ಅಂಗವಿಕಲ ಮಕ್ಕಳಿಗೂ ಯಾವುದೇ ಅಡೆತಡೆಯಿಲ್ಲದೆ ಶಾಲೆಗೆ ಪ್ರವೇಶಿಸಲು ಅನುಕೂಲವಾಗುವ ವ್ಯವಸ್ಥೆ ಇರಬೇಕು.
ಆದರೆ ಈ ಮಾನದಂಡಗಳನ್ನು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೂರೈಸಲಾಗಿದೆಯೇ? ಎಷ್ಟು ಶಾಲೆಗಳಲ್ಲಿ ಶೌಚಾಲಯಗಳಿವೆ? ಎಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ? ಎಷ್ಟು ಶಾಲೆಗಳಲ್ಲಿ ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡಗಳಿವೆ? ಎಂಬುದರ ಕುರಿತು ಸಮಗ್ರ ಶಾಲಾವಾರು ಪರಿಶೀಲನೆ ನಡೆಸುವುದು ಇಂದಿನ ಅಗತ್ಯವಾಗಿದೆ.
ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಸಾಧ್ಯವೇ?
ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶ ಶಿಕ್ಷಕರ ಲಭ್ಯತೆ. ಶಿಕ್ಷಣ ಹಕ್ಕು ಕಾಯಿದೆಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿಗೆ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. 1ರಿಂದ 5ನೇ ತರಗತಿಯವರೆಗೆ 60 ಮಕ್ಕಳಿಗೆ ಕನಿಷ್ಠ ಇಬ್ಬರು, 61ರಿಂದ 90 ಮಕ್ಕಳಿಗೆ ಮೂವರು, 91ರಿಂದ 120 ಮಕ್ಕಳಿಗೆ ನಾಲ್ವರು ಹಾಗೂ 121ರಿಂದ 200 ಮಕ್ಕಳಿಗೆ ಐವರು ಶಿಕ್ಷಕರು ಇರಬೇಕು. 6ರಿಂದ 8ನೇ ತರಗತಿಗಳಿಗೆ ಪ್ರತಿ ತರಗತಿಗೆ ಕನಿಷ್ಠ ಒಬ್ಬ ಶಿಕ್ಷಕರ ಜೊತೆಗೆ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಭಾಷಾ ಬೋಧನೆಗೆ ಅಗತ್ಯ ಶಿಕ್ಷಕರಿರಬೇಕು. ಪ್ರತಿ 35 ಮಕ್ಕಳಿಗೆ ಕನಿಷ್ಠ ಒಬ್ಬ ಶಿಕ್ಷಕರಿರಬೇಕು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಶಿಕ್ಷಕರ ವ್ಯವಸ್ಥೆಯೂ ಇರಬೇಕು. ಆದರೆ ವಾಸ್ತವದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು, ಏಕೋಪಾಧ್ಯಾಯ ಶಾಲೆಗಳು, ಅತಿಥಿ ಶಿಕ್ಷಕರ ಅವಲಂಬನೆ ಮತ್ತು ಶಿಕ್ಷಕರ ಮೇಲಿನ ಬೋಧನೇತರ ಕೆಲಸಗಳ ಹೊರೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುವುದು ಹೇಗೆ?
ಮಕ್ಕಳ ಕಲಿಕೆಯ ಸಮಯವನ್ನೇ ಖಚಿತಪಡಿಸದಿದ್ದರೆ ಶಿಕ್ಷಣದ ಹಕ್ಕು ಹೇಗೆ?
ಶಿಕ್ಷಣ ಹಕ್ಕು ಕಾಯಿದೆಯು ಮಕ್ಕಳ ಕಲಿಕೆಗೆ ಅಗತ್ಯವಾದ ಕನಿಷ್ಠ ಕೆಲಸದ ದಿನಗಳು ಮತ್ತು ಬೋಧನಾ ಗಂಟೆಗಳನ್ನು ನಿಗದಿಪಡಿಸಿದೆ. 1ರಿಂದ 5ನೇ ತರಗತಿಗಳಿಗೆ ವರ್ಷದಲ್ಲಿ ಕನಿಷ್ಠ 200 ಕೆಲಸದ ದಿನಗಳು ಮತ್ತು 800 ಬೋಧನಾ ಗಂಟೆಗಳು ಇರಬೇಕು. 6ರಿಂದ 8ನೇ ತರಗತಿಗಳಿಗೆ ಕನಿಷ್ಠ 220 ಕೆಲಸದ ದಿನಗಳು ಮತ್ತು 1,000 ಬೋಧನಾ ಗಂಟೆಗಳು ಕಡ್ಡಾಯವಾಗಿವೆ. ಪ್ರತಿಯೊಬ್ಬ ಶಿಕ್ಷಕರಿಗೂ ಬೋಧನೆ, ಪಾಠದ ಸಿದ್ಧತೆ ಸೇರಿದಂತೆ ವಾರಕ್ಕೆ ಕನಿಷ್ಠ 45 ಕೆಲಸದ ಗಂಟೆಗಳಿರಬೇಕು.
ಇದರ ಜೊತೆಗೆ ಪ್ರತಿಯೊಂದು ತರಗತಿಗೂ ಅಗತ್ಯವಾದ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು. ಮಕ್ಕಳಿಗೆ ಪಠ್ಯಪುಸ್ತಕ ನೀಡಿದ ಮಾತ್ರಕ್ಕೆ ಗುಣಮಟ್ಟದ ಶಿಕ್ಷಣ ದೊರೆತಂತಾಗುವುದಿಲ್ಲ. ಕಲಿಕೆಗೆ ಪೂರಕವಾದ ಸಂಪನ್ಮೂಲಗಳು ಮತ್ತು ಸೂಕ್ತ ಬೋಧನಾ ವಾತಾವರಣವೂ ಅಗತ್ಯ.
ಗ್ರಂಥಾಲಯ ಮತ್ತು ಕ್ರೀಡೆ ಐಷಾರಾಮಿ ಸೌಲಭ್ಯಗಳಲ್ಲ!
ಶಾಲಾ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು, ವಿವಿಧ ವಿಷಯಗಳ ಪುಸ್ತಕಗಳು ಮತ್ತು ಮಕ್ಕಳ ಸಾಹಿತ್ಯ ಲಭ್ಯವಿರಬೇಕು. ಪ್ರತಿಯೊಂದು ತರಗತಿಗೂ ಅಗತ್ಯವಾದ ಆಟದ ಸಾಮಗ್ರಿ ಮತ್ತು ಕ್ರೀಡಾ ಉಪಕರಣಗಳನ್ನು ಒದಗಿಸಬೇಕು. ಮಕ್ಕಳ ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಲ್ಲ. ಓದುವ ಅಭ್ಯಾಸ, ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ದೈಹಿಕ ಬೆಳವಣಿಗೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದೂ ಶಿಕ್ಷಣದ ಭಾಗವಾಗಿದೆ. ಆದ್ದರಿಂದ ಗ್ರಂಥಾಲಯ ಮತ್ತು ಆಟದ ಮೈದಾನಗಳು ಶಾಲೆಯ ಹೆಚ್ಚುವರಿ ಸೌಲಭ್ಯಗಳಲ್ಲ; ಅವು ಮಕ್ಕಳ ಸಮಗ್ರ ಬೆಳವಣಿಗೆಯ ಅವಿಭಾಜ್ಯ ಅಂಗಗಳಾಗಿವೆ.
ಶಾಲೆಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುವುದೇಕೆ?
ಇಂದು ಸರ್ಕಾರಿ ಶಾಲೆಗಳ ಉಳಿವು ಮತ್ತು ಬಲವರ್ಧನೆ ದೊಡ್ಡ ಸವಾಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಶಿಕ್ಷಕರನ್ನು ನೇಮಿಸಿ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನರ ವಿಶ್ವಾಸವನ್ನು ಹೆಚ್ಚಿಸಬೇಕಾದ ಸರ್ಕಾರ, ಶಾಲೆಗಳ ವಿಲೀನ, ಮುಚ್ಚುವಿಕೆ ಮತ್ತು ಖಾಸಗೀಕರಣಕ್ಕೆ ಪೂರಕವಾಗುವ ನೀತಿಗಳ ಬಗ್ಗೆ ಗಂಭೀರವಾಗಿ ಮರುಚಿಂತನೆ ಮಾಡಬೇಕಾಗಿದೆ.
ಬಡವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶಿಕ್ಷಣದ ಪ್ರಮುಖ ಆಸರೆಯಾಗಿವೆ. ಸರ್ಕಾರಿ ಶಾಲೆಗಳು ದುರ್ಬಲಗೊಂಡರೆ ಅದರ ನೇರ ಪರಿಣಾಮ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಮೇಲೆ ಬೀಳುತ್ತದೆ. ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ.
ಶಾಲಾಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡಿ, ಸರ್ಕಾರ ಹೊಣೆಗಾರಿಕೆ ವಹಿಸಲಿ!
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC) ಶಾಲೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯ ಅಗತ್ಯಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.
ಆದರೆ ಸಮಿತಿಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ, ಅವುಗಳಿಗೆ ಅಗತ್ಯ ಮಾಹಿತಿ, ಅಧಿಕಾರ ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸೂಕ್ತ ಪಾತ್ರ ನೀಡಬೇಕು. ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿಯೂ ಶಿಕ್ಷಣ ಹಕ್ಕು ಕಾಯಿದೆಯ ಮಾನದಂಡಗಳ ಅನುಷ್ಠಾನವನ್ನು ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು.
ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ…
1. ಶಿಕ್ಷಣ ಹಕ್ಕು ಕಾಯಿದೆಯ ಎಲ್ಲ ಮಾನದಂಡಗಳನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆಯೇ?
2. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಕರ ಲಭ್ಯತೆಯ ಕುರಿತು ಶಾಲಾವಾರು ಸಮಗ್ರ ಸಮೀಕ್ಷೆ ನಡೆಸಲಾಗಿದೆಯೇ?
3. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಕಾಲಮಿತಿಯ ಯೋಜನೆ ಏನು?
4. ಎಲ್ಲ ಶಾಲೆಗಳಲ್ಲೂ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡದ ವ್ಯವಸ್ಥೆ ಕಲ್ಪಿಸಲಾಗಿದೆಯೇ?
5. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ಸೌಲಭ್ಯ ಮತ್ತು ವಿಶೇಷ ಶಿಕ್ಷಕರನ್ನು ಒದಗಿಸಲಾಗಿದೆಯೇ?
6. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಕಾಯಿದೆಯ ಆಶಯದಂತೆ ಅಧಿಕಾರ ಮತ್ತು ಜವಾಬ್ದಾರಿ ನೀಡಲಾಗಿದೆಯೇ?
7. ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದ ಕುರಿತು ಸರ್ಕಾರ ಸಾರ್ವಜನಿಕ ವರದಿ ಬಿಡುಗಡೆ ಮಾಡುತ್ತದೆಯೇ?
ಕುರ್ಚಿ ಮೇಲೆ ಕೂತು ನಮ್ಮದು ಜನಪರ ಸರ್ಕಾರ ಎಂದು ಬೀಗುವವರು…
– ಶಿಕ್ಷಣ ಹಕ್ಕು ಕಾಯಿದೆಯ ಸಮಗ್ರ ಅನುಷ್ಠಾನಕ್ಕೆ ಸರ್ಕಾರ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಬೇಕು.
– ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ಕಾಯಿದೆಯ ಮಾನದಂಡಗಳ ಅನುಷ್ಠಾನದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು.
– ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
– ಮೂಲಸೌಕರ್ಯಗಳ ಕೊರತೆಯನ್ನು ಆದ್ಯತೆಯ ಮೇರೆಗೆ ನಿವಾರಿಸಬೇಕು.
– ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬದಲು ಬಲಪಡಿಸುವ ನೀತಿಯನ್ನು ಅನುಸರಿಸಬೇಕು.
– ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಸಬಲೀಕರಣಗೊಳಿಸಬೇಕು.
ಶಿಕ್ಷಣ ಹಕ್ಕು ಕಾಗದದ ಮೇಲಿನ ಭರವಸೆಯಾಗಬಾರದು!
ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನವು ಕೇವಲ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ವಿಚಾರವಲ್ಲ. ಇದು ಮಕ್ಕಳ ಭವಿಷ್ಯ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಸರ್ಕಾರಗಳು ಬದಲಾದರೂ ಮಕ್ಕಳ ಶಿಕ್ಷಣದ ಹಕ್ಕು ಬದಲಾಗುವುದಿಲ್ಲ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ಶಾಲೆಗಳನ್ನು ಉಳಿಸುವುದು ಎಂದರೆ ಕೇವಲ ಕಟ್ಟಡಗಳನ್ನು ಉಳಿಸುವುದಲ್ಲ; ಬಡ ಮಕ್ಕಳ ಭವಿಷ್ಯವನ್ನು, ಸಾಮಾಜಿಕ ಸಮಾನತೆಯನ್ನು ಮತ್ತು ಸಂವಿಧಾನದ ಆಶಯವನ್ನು ಉಳಿಸುವುದಾಗಿದೆ. ಶಿಕ್ಷಣ ಹಕ್ಕು ಕಾಯಿದೆಯನ್ನು ಕಾಗದದಿಂದ ಶಾಲೆಯ ತರಗತಿಗೆ ತರೋಣ. ಸರ್ಕಾರಿ ಶಾಲೆಗಳನ್ನು ಉಳಿಸೋಣ, ಬಲಪಡಿಸೋಣ. ಪ್ರತಿಯೊಂದು ಮಗುವಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಒಗ್ಗಟ್ಟಿನಿಂದ ಧ್ವನಿ ಎತ್ತೋಣ.
ಸರ್ಕಾರಿ ಶಾಲೆ ಉಳಿಯಲಿ – ಸಮಾನ ಶಿಕ್ಷಣ ಎಲ್ಲರಿಗೂ ಸಿಗಲಿ!


