SUBSCRIBE

ದ ಪಾಲಿಟಿಕ್

ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗದಿದ್ದರೆ ಹೊಣೆ ಯಾರು?

ಶಿಕ್ಷಣ ಹಕ್ಕು ಕಾಯಿದೆ ಜಾರಿಯಲ್ಲಿದೆ ಎಂದು ಹೇಳುವ ಸರ್ಕಾರ, ಕಾಯಿದೆಯಲ್ಲಿರುವ ಎಲ್ಲ ಮಾನದಂಡಗಳನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಅನುಷ್ಠಾನಗೊಳಿಸಿದೆಯೇ? 16 ವರ್ಷಗಳಾದರೂ ಮಕ್ಕಳಿಗೆ ಸಿಗದ ಶಿಕ್ಷಣದ ಹಕ್ಕು! ಸರ್ಕಾರಿ ಶಾಲೆಗಳ ಸ್ಥಿತಿಗತಿಗೆ ಉತ್ತರಿಸುವವರು ಯಾರು?

ಭಾರತದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಉದ್ದೇಶದಿಂದ 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂತು. 2010ರ ಏಪ್ರಿಲ್ 1ರಿಂದ ಈ ಕಾಯಿದೆ ಅನುಷ್ಠಾನಕ್ಕೆ ಬಂದಿದೆ. ಶಿಕ್ಷಣವು ದಯೆ, ದಾನ ಅಥವಾ ಸರ್ಕಾರದ ಕೊಡುಗೆಯಲ್ಲ; ಅದು ಪ್ರತಿಯೊಂದು ಮಗುವಿನ ಹಕ್ಕು ಎಂಬ ಮಹತ್ವದ ಆಶಯವನ್ನು ಈ ಕಾಯಿದೆ ಹೊಂದಿದೆ.

ಆದರೆ ಕಾಯಿದೆ ಜಾರಿಗೆ ಬಂದು 16 ವರ್ಷಗಳಾದರೂ ಅದರಲ್ಲಿರುವ ಮೂಲಭೂತ ಮಾನದಂಡಗಳು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿವೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಗಿದೆ.

ಶಿಕ್ಷಣ ಹಕ್ಕು ಎಂದರೆ ಮಕ್ಕಳನ್ನು ಶಾಲೆಗೆ ದಾಖಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ, ಗುಣಮಟ್ಟದ ಬೋಧನೆ, ಸುರಕ್ಷಿತ ಶಾಲಾ ವಾತಾವರಣ, ಅಗತ್ಯ ಮೂಲಸೌಕರ್ಯ ಮತ್ತು ಸಮಗ್ರ ಕಲಿಕೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕಡ್ಡಾಯ ಜವಾಬ್ದಾರಿಯಾಗಿದೆ.

ಶಾಲೆ ಇದೆ, ಆದರೆ ಸೌಲಭ್ಯಗಳಿವೆಯೇ?

ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ ಪ್ರತಿಯೊಂದು ಶಾಲೆಯೂ ಸುಸಜ್ಜಿತ ಕಟ್ಟಡವನ್ನು ಹೊಂದಿರಬೇಕು. ಪ್ರತಿ ಶಿಕ್ಷಕರಿಗೂ ಕನಿಷ್ಠ ಒಂದು ತರಗತಿ ಕೊಠಡಿ, ಕಚೇರಿ ಮತ್ತು ಮುಖ್ಯಶಿಕ್ಷಕರ ಕೊಠಡಿ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಸುರಕ್ಷಿತ ಕುಡಿಯುವ ನೀರು, ಅಡುಗೆಮನೆ, ಆಟದ ಮೈದಾನ ಹಾಗೂ ಶಾಲೆಯ ಸುರಕ್ಷತೆಗೆ ಆವರಣ ಗೋಡೆ ಅಥವಾ ಬೇಲಿ ಇರಬೇಕು. ಅಂಗವಿಕಲ ಮಕ್ಕಳಿಗೂ ಯಾವುದೇ ಅಡೆತಡೆಯಿಲ್ಲದೆ ಶಾಲೆಗೆ ಪ್ರವೇಶಿಸಲು ಅನುಕೂಲವಾಗುವ ವ್ಯವಸ್ಥೆ ಇರಬೇಕು.

ಆದರೆ ಈ ಮಾನದಂಡಗಳನ್ನು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೂರೈಸಲಾಗಿದೆಯೇ? ಎಷ್ಟು ಶಾಲೆಗಳಲ್ಲಿ ಶೌಚಾಲಯಗಳಿವೆ? ಎಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ? ಎಷ್ಟು ಶಾಲೆಗಳಲ್ಲಿ ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡಗಳಿವೆ? ಎಂಬುದರ ಕುರಿತು ಸಮಗ್ರ ಶಾಲಾವಾರು ಪರಿಶೀಲನೆ ನಡೆಸುವುದು ಇಂದಿನ ಅಗತ್ಯವಾಗಿದೆ.

ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಸಾಧ್ಯವೇ?

ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶ ಶಿಕ್ಷಕರ ಲಭ್ಯತೆ. ಶಿಕ್ಷಣ ಹಕ್ಕು ಕಾಯಿದೆಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿಗೆ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. 1ರಿಂದ 5ನೇ ತರಗತಿಯವರೆಗೆ 60 ಮಕ್ಕಳಿಗೆ ಕನಿಷ್ಠ ಇಬ್ಬರು, 61ರಿಂದ 90 ಮಕ್ಕಳಿಗೆ ಮೂವರು, 91ರಿಂದ 120 ಮಕ್ಕಳಿಗೆ ನಾಲ್ವರು ಹಾಗೂ 121ರಿಂದ 200 ಮಕ್ಕಳಿಗೆ ಐವರು ಶಿಕ್ಷಕರು ಇರಬೇಕು. 6ರಿಂದ 8ನೇ ತರಗತಿಗಳಿಗೆ ಪ್ರತಿ ತರಗತಿಗೆ ಕನಿಷ್ಠ ಒಬ್ಬ ಶಿಕ್ಷಕರ ಜೊತೆಗೆ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಭಾಷಾ ಬೋಧನೆಗೆ ಅಗತ್ಯ ಶಿಕ್ಷಕರಿರಬೇಕು. ಪ್ರತಿ 35 ಮಕ್ಕಳಿಗೆ ಕನಿಷ್ಠ ಒಬ್ಬ ಶಿಕ್ಷಕರಿರಬೇಕು.

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಶಿಕ್ಷಕರ ವ್ಯವಸ್ಥೆಯೂ ಇರಬೇಕು. ಆದರೆ ವಾಸ್ತವದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು, ಏಕೋಪಾಧ್ಯಾಯ ಶಾಲೆಗಳು, ಅತಿಥಿ ಶಿಕ್ಷಕರ ಅವಲಂಬನೆ ಮತ್ತು ಶಿಕ್ಷಕರ ಮೇಲಿನ ಬೋಧನೇತರ ಕೆಲಸಗಳ ಹೊರೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುವುದು ಹೇಗೆ?

ಮಕ್ಕಳ ಕಲಿಕೆಯ ಸಮಯವನ್ನೇ ಖಚಿತಪಡಿಸದಿದ್ದರೆ ಶಿಕ್ಷಣದ ಹಕ್ಕು ಹೇಗೆ?

ಶಿಕ್ಷಣ ಹಕ್ಕು ಕಾಯಿದೆಯು ಮಕ್ಕಳ ಕಲಿಕೆಗೆ ಅಗತ್ಯವಾದ ಕನಿಷ್ಠ ಕೆಲಸದ ದಿನಗಳು ಮತ್ತು ಬೋಧನಾ ಗಂಟೆಗಳನ್ನು ನಿಗದಿಪಡಿಸಿದೆ. 1ರಿಂದ 5ನೇ ತರಗತಿಗಳಿಗೆ ವರ್ಷದಲ್ಲಿ ಕನಿಷ್ಠ 200 ಕೆಲಸದ ದಿನಗಳು ಮತ್ತು 800 ಬೋಧನಾ ಗಂಟೆಗಳು ಇರಬೇಕು. 6ರಿಂದ 8ನೇ ತರಗತಿಗಳಿಗೆ ಕನಿಷ್ಠ 220 ಕೆಲಸದ ದಿನಗಳು ಮತ್ತು 1,000 ಬೋಧನಾ ಗಂಟೆಗಳು ಕಡ್ಡಾಯವಾಗಿವೆ. ಪ್ರತಿಯೊಬ್ಬ ಶಿಕ್ಷಕರಿಗೂ ಬೋಧನೆ, ಪಾಠದ ಸಿದ್ಧತೆ ಸೇರಿದಂತೆ ವಾರಕ್ಕೆ ಕನಿಷ್ಠ 45 ಕೆಲಸದ ಗಂಟೆಗಳಿರಬೇಕು.

ಇದರ ಜೊತೆಗೆ ಪ್ರತಿಯೊಂದು ತರಗತಿಗೂ ಅಗತ್ಯವಾದ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು. ಮಕ್ಕಳಿಗೆ ಪಠ್ಯಪುಸ್ತಕ ನೀಡಿದ ಮಾತ್ರಕ್ಕೆ ಗುಣಮಟ್ಟದ ಶಿಕ್ಷಣ ದೊರೆತಂತಾಗುವುದಿಲ್ಲ. ಕಲಿಕೆಗೆ ಪೂರಕವಾದ ಸಂಪನ್ಮೂಲಗಳು ಮತ್ತು ಸೂಕ್ತ ಬೋಧನಾ ವಾತಾವರಣವೂ ಅಗತ್ಯ.

ಗ್ರಂಥಾಲಯ ಮತ್ತು ಕ್ರೀಡೆ ಐಷಾರಾಮಿ ಸೌಲಭ್ಯಗಳಲ್ಲ!

ಶಾಲಾ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು, ವಿವಿಧ ವಿಷಯಗಳ ಪುಸ್ತಕಗಳು ಮತ್ತು ಮಕ್ಕಳ ಸಾಹಿತ್ಯ ಲಭ್ಯವಿರಬೇಕು. ಪ್ರತಿಯೊಂದು ತರಗತಿಗೂ ಅಗತ್ಯವಾದ ಆಟದ ಸಾಮಗ್ರಿ ಮತ್ತು ಕ್ರೀಡಾ ಉಪಕರಣಗಳನ್ನು ಒದಗಿಸಬೇಕು. ಮಕ್ಕಳ ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಲ್ಲ. ಓದುವ ಅಭ್ಯಾಸ, ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ದೈಹಿಕ ಬೆಳವಣಿಗೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದೂ ಶಿಕ್ಷಣದ ಭಾಗವಾಗಿದೆ. ಆದ್ದರಿಂದ ಗ್ರಂಥಾಲಯ ಮತ್ತು ಆಟದ ಮೈದಾನಗಳು ಶಾಲೆಯ ಹೆಚ್ಚುವರಿ ಸೌಲಭ್ಯಗಳಲ್ಲ; ಅವು ಮಕ್ಕಳ ಸಮಗ್ರ ಬೆಳವಣಿಗೆಯ ಅವಿಭಾಜ್ಯ ಅಂಗಗಳಾಗಿವೆ.

ಶಾಲೆಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುವುದೇಕೆ?

ಇಂದು ಸರ್ಕಾರಿ ಶಾಲೆಗಳ ಉಳಿವು ಮತ್ತು ಬಲವರ್ಧನೆ ದೊಡ್ಡ ಸವಾಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಶಿಕ್ಷಕರನ್ನು ನೇಮಿಸಿ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನರ ವಿಶ್ವಾಸವನ್ನು ಹೆಚ್ಚಿಸಬೇಕಾದ ಸರ್ಕಾರ, ಶಾಲೆಗಳ ವಿಲೀನ, ಮುಚ್ಚುವಿಕೆ ಮತ್ತು ಖಾಸಗೀಕರಣಕ್ಕೆ ಪೂರಕವಾಗುವ ನೀತಿಗಳ ಬಗ್ಗೆ ಗಂಭೀರವಾಗಿ ಮರುಚಿಂತನೆ ಮಾಡಬೇಕಾಗಿದೆ.

ಬಡವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶಿಕ್ಷಣದ ಪ್ರಮುಖ ಆಸರೆಯಾಗಿವೆ. ಸರ್ಕಾರಿ ಶಾಲೆಗಳು ದುರ್ಬಲಗೊಂಡರೆ ಅದರ ನೇರ ಪರಿಣಾಮ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಮೇಲೆ ಬೀಳುತ್ತದೆ. ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ.

ಶಾಲಾಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡಿ, ಸರ್ಕಾರ ಹೊಣೆಗಾರಿಕೆ ವಹಿಸಲಿ!

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC) ಶಾಲೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯ ಅಗತ್ಯಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.

ಆದರೆ ಸಮಿತಿಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ, ಅವುಗಳಿಗೆ ಅಗತ್ಯ ಮಾಹಿತಿ, ಅಧಿಕಾರ ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸೂಕ್ತ ಪಾತ್ರ ನೀಡಬೇಕು. ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿಯೂ ಶಿಕ್ಷಣ ಹಕ್ಕು ಕಾಯಿದೆಯ ಮಾನದಂಡಗಳ ಅನುಷ್ಠಾನವನ್ನು ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು.

ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ…

1. ಶಿಕ್ಷಣ ಹಕ್ಕು ಕಾಯಿದೆಯ ಎಲ್ಲ ಮಾನದಂಡಗಳನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆಯೇ?
2. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಕರ ಲಭ್ಯತೆಯ ಕುರಿತು ಶಾಲಾವಾರು ಸಮಗ್ರ ಸಮೀಕ್ಷೆ ನಡೆಸಲಾಗಿದೆಯೇ?
3. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಕಾಲಮಿತಿಯ ಯೋಜನೆ ಏನು?
4. ಎಲ್ಲ ಶಾಲೆಗಳಲ್ಲೂ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡದ ವ್ಯವಸ್ಥೆ ಕಲ್ಪಿಸಲಾಗಿದೆಯೇ?
5. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ಸೌಲಭ್ಯ ಮತ್ತು ವಿಶೇಷ ಶಿಕ್ಷಕರನ್ನು ಒದಗಿಸಲಾಗಿದೆಯೇ?
6. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಕಾಯಿದೆಯ ಆಶಯದಂತೆ ಅಧಿಕಾರ ಮತ್ತು ಜವಾಬ್ದಾರಿ ನೀಡಲಾಗಿದೆಯೇ?
7. ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದ ಕುರಿತು ಸರ್ಕಾರ ಸಾರ್ವಜನಿಕ ವರದಿ ಬಿಡುಗಡೆ ಮಾಡುತ್ತದೆಯೇ?

ಕುರ್ಚಿ ಮೇಲೆ ಕೂತು ನಮ್ಮದು ಜನಪರ ಸರ್ಕಾರ ಎಂದು ಬೀಗುವವರು…

– ಶಿಕ್ಷಣ ಹಕ್ಕು ಕಾಯಿದೆಯ ಸಮಗ್ರ ಅನುಷ್ಠಾನಕ್ಕೆ ಸರ್ಕಾರ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಬೇಕು.
– ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ಕಾಯಿದೆಯ ಮಾನದಂಡಗಳ ಅನುಷ್ಠಾನದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು.
– ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
– ಮೂಲಸೌಕರ್ಯಗಳ ಕೊರತೆಯನ್ನು ಆದ್ಯತೆಯ ಮೇರೆಗೆ ನಿವಾರಿಸಬೇಕು.
– ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬದಲು ಬಲಪಡಿಸುವ ನೀತಿಯನ್ನು ಅನುಸರಿಸಬೇಕು.
– ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಸಬಲೀಕರಣಗೊಳಿಸಬೇಕು.

ಶಿಕ್ಷಣ ಹಕ್ಕು ಕಾಗದದ ಮೇಲಿನ ಭರವಸೆಯಾಗಬಾರದು!

ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನವು ಕೇವಲ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ವಿಚಾರವಲ್ಲ. ಇದು ಮಕ್ಕಳ ಭವಿಷ್ಯ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಸರ್ಕಾರಗಳು ಬದಲಾದರೂ ಮಕ್ಕಳ ಶಿಕ್ಷಣದ ಹಕ್ಕು ಬದಲಾಗುವುದಿಲ್ಲ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ಶಾಲೆಗಳನ್ನು ಉಳಿಸುವುದು ಎಂದರೆ ಕೇವಲ ಕಟ್ಟಡಗಳನ್ನು ಉಳಿಸುವುದಲ್ಲ; ಬಡ ಮಕ್ಕಳ ಭವಿಷ್ಯವನ್ನು, ಸಾಮಾಜಿಕ ಸಮಾನತೆಯನ್ನು ಮತ್ತು ಸಂವಿಧಾನದ ಆಶಯವನ್ನು ಉಳಿಸುವುದಾಗಿದೆ. ಶಿಕ್ಷಣ ಹಕ್ಕು ಕಾಯಿದೆಯನ್ನು ಕಾಗದದಿಂದ ಶಾಲೆಯ ತರಗತಿಗೆ ತರೋಣ. ಸರ್ಕಾರಿ ಶಾಲೆಗಳನ್ನು ಉಳಿಸೋಣ, ಬಲಪಡಿಸೋಣ. ಪ್ರತಿಯೊಂದು ಮಗುವಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಒಗ್ಗಟ್ಟಿನಿಂದ ಧ್ವನಿ ಎತ್ತೋಣ.

ಸರ್ಕಾರಿ ಶಾಲೆ ಉಳಿಯಲಿ – ಸಮಾನ ಶಿಕ್ಷಣ ಎಲ್ಲರಿಗೂ ಸಿಗಲಿ!

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಬಿಜೆಪಿ ರಾಜ್ಯಾಧ್ಯಕ್ಷ: ವಿಜಯೇಂದ್ರಗೆ ಸವಾಲಾದ ಶ್ರೀರಾಮುಲು ಲಾಬಿ!

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ರಾಜ್ಯದಲ್ಲಿ ಎ.ಕೆ. ಸುಬ್ಬಯ್ಯ ಅವರಿಂದ ಹಿಡಿದು ಬಿ.ವೈ. ವಿಜಯೇಂದ್ರವರೆಗೆ ಹದಿನಾಲ್ಕು ಜನರು ರಾಜ್ಯಾಧ್ಯಕ್ಷರಾಗಿ ಬಿಜೆಪಿಯನ್ನು ಮುನ್ನಡೆಸಿದ್ದಾರೆ. ಇವರಲ್ಲಿ ಕೆ.ಎಸ್‌. ಈಶ್ವರಪ್ಪ ಎರಡು ಬಾರಿ ಹಾಗೂ ಯಡಿಯೂರಪ್ಪ ಮೂರು ಬಾರಿ ಪಕ್ಷದ ಸಾರಥಿಯಾಗಿದ್ದರೆ, ಬಿ.ವಿ. ಶಿವಪ್ಪ ಐದು ವರ್ಷ, ಡಿ.ವಿ. ಸದಾನಂದ ಗೌಡ ನಾಲ್ಕು ವರ್ಷ ಮತ್ತು ನಳಿನ್‌ ಕುಮಾರ್‌ ಕಟೀಲ್‌ ನಾಲ್ಕು ವರ್ಷ ದುಡಿದಿದ್ದಾರೆ. ಉಳಿದವರು ಮೂರು ವರ್ಷಗಳ ಅವಧಿಗೆ ಸೀಮಿತರಾಗಿದ್ದರು.

ನವೆಂಬರ್‌ 15ಕ್ಕೆ ವಿಜಯೇಂದ್ರ ಅವರ ಮೂರು ವರ್ಷದ ಅಧಿಕಾರಾವಧಿ ಮುಗಿದಿದೆ. ಈಗ ವಿ. ಸೋಮಣ್ಣ, ಮುರುಗೇಶ್‌ ನಿರಾಣಿ, ಸುನಿಲ್‌ ಕುಮಾರ್‌, ಅರವಿಂದ್‌ ಬೆಲ್ಲದ, ಅಶ್ವತ್ಥನಾರಾಯಣ ಹೀಗೆ ಹಲವರು ‍ಅಧ್ಯಕ್ಷ ಗಾದಿಗೆ  ಟವೆಲ್‌ ಹಾಕಿ  ಮರೆಯಲ್ಲಿ ನಿಂತಿದ್ದಾರೆ.

ಬಿ.ವೈ. ವಿಜಯೇಂದ್ರ ಎರಡನೇ ಅವಧಿಗೂ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ. ಪಕ್ಷದಲ್ಲಿ ಒಂದು ಗುಂಪು ಇವರನ್ನು ಕೆಳಗಿಳಿಸಲು ಸತತವಾಗಿ ಯತ್ನಿಸುತ್ತಿದೆ. ಆದರೆ, ಯಡಿಯೂರಪ್ಪ ನಾಮಬಲ ಹಾಗೂ ಜಾತಿಬಲ ಅಡ್ಡಿಯಾಗಿದೆ.

ಈ ಕಡೆ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಈ ಬಾರಿ ಕುರ್ಚಿ ಏರಲು  ದೆಹಲಿಯಲ್ಲಿ ಮೊಕ್ಕಾಂ ಹೂಡಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಇವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಬೆಂಬಲ ಇದೆ ಎಂಬ ಚರ್ಚೆಯೂ ಇದೆ. ಜತೆಗೆ, ರಾಜ್ಯದಲ್ಲಿ ಇದುವರೆಗೆ ಎಸ್‌ಟಿ ಸಮುದಾಯದಿಂದ ಯಾರೂ ಅಧ್ಯಕ್ಷರಾಗಿಲ್ಲ. ಇದು ಕೈಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಈ ಬೆಳವಣಿಗೆ ವಿಜಯೇಂದ್ರಗೆ ತಲೆನೋವು ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಮುಲು ಅವರಿಗೆ ಮಣೆ ಹಾಕಿದರೆ ಲಾಭ – ನಷ್ಟ ಎರಡೂ ಇವೆ.  ವಾಲ್ಮೀಕಿ ಸಮುದಾಯದ ಮತಗಳು ಕಾಂಗ್ರೆಸ್‌ ಬುಟ್ಟಿಯಿಂದ ಚದುರಬಹುದು ಹಾಗೂ ಪಕ್ಷದೊಳಗಿನ ಬಂಡುಕೋರರು ಬಂಡಾಯದ ಬಾವುಟ ಕೆಳಗಿಳಿಸಬಹುದು. ಇದರಿಂದಾಗಿ ಪಕ್ಷದ ಬಣ ರಾಜಕೀಯ ಕೆಲವು ದಿನ ವಿಶ್ರಾಂತಿಗೆ ಜಾರಬಹುದು. ಆದರೆ, ಲಿಂಗಾಯತ ಸಮುದಾಯಕ್ಕೆ ಇದು ಬೇರೆಯದೇ ಸಂದೇಶ ಹೋಗುವ ಅಪಾಯವೂ ಇದೆ.

ಈಗ ಚಂಡು ಹೈಕಮಾಂಡ್‌ ಅಂಗಳದಲ್ಲಿದೆ. ಜಾತಿ ಸಮೀಕರಣಕ್ಕೆ ಆದ್ಯತೆ ನೀಡುತ್ತದೋ, ಸಂಘಟನೆಗೆ ಮಣೆ ಹಾಕುತ್ತದೋ ಅಥವಾ ಪ್ರಬಲ ಜಾತಿಗೆ ಶರಣಾಗುತ್ತದೋ ಎಂಬುದು ಕುತೂಹಲ ಮೂಡಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಡಿಕೆಶಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಮಣೆ!

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಮೂರೂವರೆ ವರ್ಷಗಳಾಯಿತು. ಪಕ್ಷ ಅಧಿಕಾರಕ್ಕೆ ಬರಲು ಬೆವರು ಸುರಿಸಿದ ಕಾರ್ಯಕರ್ತರು ನೆನಪೇ ಆಗಲಿಲ್ಲ.  ಚುನಾವಣೆ ತಲೆಯ ಮೇಲೆ ಬರುತ್ತಿದ್ದಂತೆ, ಈಗ ಅವರ ನೆನಪಾಗಿ ವಿವಿಧ ನಿಗಮ-ಮಂಡಳಿಗಳಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.  ನೇಮಕವಾದವರ ಪಟ್ಟಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಸರಿರುವುದು ಬೆಳಕಿಗೆ ಬಂದಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಡಿಕೆಶಿ ಮುಖ್ಯಮಂತ್ರಿ ಕುರ್ಚಿ ಏರಿದ ಮರುದಿನವೇ ಆರ್‌ಎಸ್‌ಎಸ್‌ನಿಷ್ಠ ವ್ಯಕ್ತಿಯೊಬ್ಬರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ವಿರೋಧ ವ್ಯಕ್ತವಾದ ಬಳಿಕ ನೇಮಕಾತಿಯನ್ನು ವಾಪಸ್ ಪಡೆದಿದ್ದು ಇನ್ನೂ ಹಸಿಹಸಿಯಾಗಿಯೇ ಇದೆ. ಈಗ ಮತ್ತೆ ಅಂತಹದ್ದೇ ಮತ್ತೊಂದು ಅವಾಂತರ ನಡೆದಿದೆ.

ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌  ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಆದರೆ, ಅವರದ್ದೇ ಪಕ್ಷದ ಸರ್ಕಾರದಲ್ಲಿ ಆರ್‌ಎಸ್‌ಎಸ್ ಜನರಿಗೆ ಮಣೆ ಹಾಕಲಾಗುತ್ತಿದೆ. ಮತ್ತೊಂದೆಡೆ, ಅವರದ್ದೇ ಪಕ್ಷದ ಮುಖ್ಯಮಂತ್ರಿಯೊಬ್ಬರು ಪ್ರಧಾನಿ ‌ನರೇಂದ್ರ ಮೋದಿ ಅವರ  ಕಾರ್ಯಶೈಲಿ, ದಿರಿಸು ಮತ್ತು ಪ್ರಚಾರ ಶೈಲಿಯನ್ನು ಅನುಸರಿಸುತ್ತಿದ್ದಾರೆ ಎಂಬ ಚರ್ಚೆಯೂ ಇದೆ.

ಈ ಬೆಳವಣಿಗೆಗಳು ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಕೇವಲ ಭಾಷಣಕ್ಕೆ ಸೀಮಿತವೇ ಎಂಬ ಪ್ರಶ್ನೆಯನ್ನೂ ಮುನ್ನೆಲೆಗೆ ತಂದಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಫೋನ್‌ ಕದ್ದಾಲಿಕೆ: ರಾಹುಲ್‌ ಗಂಭೀರ ಆರೋಪ, ಮೋದಿ ನಿಗೂಢ ಮೌನ!

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read
ಪ್ರಧಾನಿ ಮೋದಿ ಅವರು ನನ್ನ ಫೋನ್‌ ಕದ್ದಾಲಿಕೆ ಮಾಡಿದ್ದಾರೆ - ರಾಹುಲ್‌ ಗಾಂಧಿ ಆರೋಫ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಫೋನ್‌ ಕದ್ದಾಲಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೇ ಸೀಮಿತವಾಗದೆ, “ವಿದೇಶಿ ಶಕ್ತಿಗಳು ನರೇಂದ್ರ ಮೋದಿ ಅವರನ್ನು ನಿಯಂತ್ರಿಸುತ್ತಿವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಫೋನ್‌ನಲ್ಲಿವೆ. ಆ ಕಾರಣಕ್ಕಾಗಿಯೇ ನನ್ನ ಫೋನ್‌ ಕದ್ದಾಲಿಕೆ ಮಾಡಿದ್ದಾರೆ” ಎಂದು ಕದ್ದಾಲಿಕೆಗೆ ಕಾರಣವನ್ನೂ ನೀಡಿದ್ದಾರೆ.

ಫೋನ್‌ ಕದ್ದಾಲಿಕೆ ಒಂದು ರಾಜಕೀಯ ಅಪರಾಧ. ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಫೋನ್‌ ಕದ್ದಾಲಿಕೆ ವಿವಾದದ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಹುಲ್‌ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ತರಹೇವಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೋದಿ ಅವರನ್ನು ಮತ್ತೆ ಬಹಿರಂಗ ಚರ್ಚೆಗೆ ರಾಹುಲ್‌ ಆಹ್ವಾನಿಸಿದ್ದಾರೆ. ಈ ಚರ್ಚೆಗೆ ಉದ್ಯಮಿ ಗೌತಮ್‌ ಅದಾನಿ ಅಥವಾ ಮೋಹನ್‌ ಭಾಗವತ್‌ ಅವರೇ ತೀರ್ಪುಗಾರರಾಗಲಿ. ಜತೆಗೆ, ಬೇಕಿದ್ದರೆ ಟೆಲಿಪ್ರಾಂಪ್ಟರ್‌ ಮುಂದಿಟ್ಟುಕೊಂಡೇ ಮಾತನಾಡಲಿ ಎಂದು ಕಾಲೆಳೆದಿದ್ದಾರೆ. ರಾಹುಲ್‌ ಅವರ ಆರೋಪಗಳು, ಚರ್ಚೆಯ ಆಹ್ವಾನ ಹಾಗೂ ಮೋದಿ ಅವರ ಹಿಂದೇಟು ಮತ್ತು ನಿಗೂಢ ಮೌನವನ್ನು ದೇಶವೇ ಗಮನಿಸುತ್ತಿದೆ.

ಈ ಬೆಳವಣಿಗೆ ಮೋದಿಯವರ ವರ್ಚಸ್ಸು ಕುಗ್ಗಿಸಿ, ರಾಹುಲ್‌ ಅವರ ವರ್ಚಸ್ಸು ಹಿಗ್ಗಿಸುತ್ತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಅಲ್ಲಿ ರಾಹುಲ್‌ ಎಸ್‌ಐಆರ್‌ ವಿರುದ್ಧ, ಇಲ್ಲಿ ಡಿಕೆಶಿ ಎಸ್‌ಐಆರ್‌ ಪರ!

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಕಾಂಗ್ರೆಸ್‌ ಪಕ್ಷದ ಅಧಿನಾಯಕ ರಾಹುಲ್‌ ಗಾಂಧಿ ಎಸ್‌ಐಆರ್‌ ವಿರುದ್ಧದ ಹೋರಾಟವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ್ದಾರೆ. ಈ ಕುರಿತು ಅವರಾಡುತ್ತಿರುವ ಮಾತುಗಳು ಸಹಸ್ರಾರು ಜನರ ಎದೆಗೆ ಇಳಿದಿವೆ. ಆದರೆ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಅತಿರಥ ಮಹಾರಥರು ಮಾತ್ರ ತಮ್ಮ ನಾಯಕನ ಮಾತುಗಳನ್ನು ಎದೆಗಲ್ಲ, ಕಿವಿಗೂ ಹಾಕಿಕೊಂಡಂತೆ ಕಾಣುತ್ತಿಲ್ಲ. ಆರಂಭದಲ್ಲಿ ವಿರಾವೇಶದಿಂದ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ನುಗ್ಗಿ ಹೋರಾಟ ಮಾಡಿದವರು ಇವರೇನಾ ಎಂಬ ಸಂಶಯ ಬರುತ್ತಿದೆ.

ರಾಜ್ಯದಲ್ಲಿ ಅಹಿಂದ ರಥದ ಸಾರಥಿಯಾಗಲು ಕನವರಿಸುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ ಅವರು ʻರಾಜ್ಯದಲ್ಲಿ ಎಸ್‌ಐಆರ್‌ ಕಾನೂನುಬದ್ಧವಾಗಿ ನಡೆದಿದೆʼ ಎಂದು ಷರಾ ಬರೆದಿದ್ದಾರೆ (ವಿರೋಧ ಬಂದ ಮೇಲೆ ಅದು ಹಾಗಲ್ಲ, ಹೀಗೆ ಎಂದು ಹೇಳಿ ಜಾರಿಕೊಂಡರು).

ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್  ಕಪಾಳಮೋಕ್ಷ ಮಾಡಿದ ಬಳಿಕ ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಈಗ ಎದ್ದು ಕೂತಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ಗೂ ಮುನ್ನ 1.03 ಕೋಟಿ ಮತದಾರರಿದ್ದರು. ಎಸ್‌ಐಆರ್‌ ಬಳಿಕ ಸುಮಾರು 44,80,212 (ಶೇ. 43.13) ಮತದಾರರನ್ನು ಹೊರದಬ್ಬಿದೆ. ಈಗ 59.08 ಲಕ್ಷ ಮತದಾರರು ಮಾತ್ರ ಉಳಿದುಕೊಂಡಿದ್ದಾರೆ.

ಒಂದು ವಾರದ ಹಿಂದೆ ಸಚಿವ ಈಶ್ವರ ಖಂಡ್ರೆ ಅವರು ಹಳೆಯ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಆಲೋಚಿಸುತ್ತಿದೆ ಎಂದಿದ್ದರು. ಆದರೆ, ಈಗ ಸಣ್ಣ ಪ್ರತಿರೋಧವೂ ವ್ಯಕ್ತಪಡಿಸದೆ ಎಸ್‌ಐಆರ್‌ ನಂತರ ಅಂತಿಮಗೊಂಡ ಹೊಸ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲು ತಾಲೀಮು ನಡೆಸುತ್ತಿದೆ.

ಈ ಮೂಲಕ ಎಸ್‌ಐಆರ್‌ ಪಟ್ಟಿ ಬಳಸುತ್ತಿರುವ ದೇಶದ ಮೊದಲ ಬಿಜೆಪಿಯೇತರ ಸರ್ಕಾರ ಎಂಬ ಹೆಗ್ಗಳಿಕೆಯ ಕಿರೀಟವನ್ನು ತಲೆಯ ಮೇಲೆ ಇಟ್ಟುಕೊಳ್ಳಲು ಡಿ.ಕೆ. ಶಿವಕುಮಾರ್‌ ಸಾರಥ್ಯದ ಕಾಂಗ್ರೆಸ್‌ ಸರ್ಕಾರ ಸಿದ್ಧವಾದಂತಿದೆ.

ದೆಹಲಿಯಲ್ಲಿ ರಾಹುಲ್‌ ಗಾಂಧಿ ವಿರೋಧಿಸುತ್ತಿರುವ ಎಸ್‌ಐಆರ್‌ ಪಟ್ಟಿಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವೇ ಒಪ್ಪಿಕೊಳ್ಳುವುದಾದರೆ, ಆ ಪಕ್ಷದ ನಿಜವಾದ ನಿಲುವೇನು?

ರಾಹುಲ್‌ ಗಾಂಧಿ ಎಸ್‌ಐಆರ್‌ ವಿರೋಧಿ ಹೋರಾಟವನ್ನು ವಿಸ್ತರಿಸುವ ಆಲೋಚನೆಯಲ್ಲಿದ್ದಾರೆ. ಕರ್ನಾಟಕ ಸರ್ಕಾರದ ಈ ನಡೆ ಅವರ ಹೋರಾಟಕ್ಕೆ ತೊಡಕಾಗುವುದಿಲ್ಲವೇ?  ಈ ಕುರಿತು ಅವರ ಮೇಲೆ ತೂರಿ ಬರುವ ಪ್ರಶ್ನೆಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಪಕ್ಷದ ಈ ಆತ್ಮಘಾತುಕ ನಡೆಯನ್ನು ಎಡಬಿಡಂಗಿತನ ಎನ್ನದೆ ಇನ್ನೇನು ಅನ್ನಬೇಕು? ದೇಶದಾದ್ಯಂತ ಎಸ್‌ಐಆರ್‌ ವಿರೋಧಿ ಹೋರಾಟದ ಕಾವೇರಿರುವಾಗ ಶಸ್ತ್ರತ್ಯಾಗ ಮಾಡಿ ಶರಣಾಗುವ ಮನಸ್ಸಾದರೂ ಹೇಗೆ ಬಂತು? ಸುಪ್ರೀಂ ಕೋರ್ಟ್‌ ಕತ್ತಿ ತಲೆಯ ಮೇಲಿದೆ ಎಂಬ ಸಬೂಬು ನೀಡಿ ಸರ್ಕಾರ ಇದನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಒಂದು ಸಣ್ಣ ಪ್ರತಿರೋಧವನ್ನಾದರೂ ವ್ಯಕ್ತಪಡಿಸಲಾಗದಷ್ಟು ಅಸಹಾಯಕ ಸ್ಥಿತಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ತಲುಪಿದೆಯೇ?

ಇಂತಹ ಸ್ಥಿತಿಯಲ್ಲಿರುವ ಪಕ್ಷ ಎಸ್‌ಐಆರ್‌ ಹೋರಾಟದ ರಥವನ್ನು ದಡ ಸೇರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ನಿಗಮ ಮಂಡಳಿ ನೇಮಕ: ಮೂರೂವರೆ ವರ್ಷಗಳ ಬಳಿಕ ನೆನಪಾದ ಕಾರ್ಯಕರ್ತರು!

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಇಂದು ರಾಜಕೀಯದಲ್ಲಿ ಪಕ್ಷಾತೀತವಾಗಿ ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವಾತಾವರಣವೇ ಇಲ್ಲ. ಬ್ಯಾನರ್ ಕಟ್ಟಲು, ಪ್ಲೆಕ್ಸ್ ಹಾಕಲು, ಜೈಕಾರ ಹೊಡೆಯಲು, ಸಮಾವೇಶಗಳಿಗೆ ಜನರನ್ನು ಸೇರಿಸಲು, ಚುನಾವಣೆಯಲ್ಲಿ ಬೆವರು ಸುರಿಸಲು ಕಾರ್ಯಕರ್ತರು ಬೇಕು. ಆದರೆ, ಅಧಿಕಾರ ಹಂಚಿಕೊಳ್ಳುವಾಗ ಮಾತ್ರ ಕಾರ್ಯಕರ್ತರು ಬೇಡ! ನಿಗಮ ಮಂಡಳಿಗಳು ಬೀಕೋ ಎನ್ನುತ್ತಿವೆ. ನಮಗಾಗಿ ಬೆವರು ಸುರಿಸುವ ಕಾರ್ಯಕರ್ತರಿಗೆ ನೆಮಿಸಬೇಕೆಂಬ ಇರಾದೆಯಾಗಲಿ, ತಡಿತವಾಗಲಿ ನಾಯಕರಲ್ಲಿ ಇಲ್ಲ. ಇದ್ದಿದ್ದರೆ ಅವರೊಂದಿಗೆ ಕಾರ್ಯಕರ್ತರೂ ಅಧಿಕಾರದ ಪಡಸಾಲೆಯಲ್ಲಿ ಕಾಲಿಡುತ್ತಿದ್ದದರು.

ಚುನಾವಣೆ ಗೆದ್ದ ಬಳಿಕ ಕಾರ್ಯಕರ್ತರ ಅವಶ್ಯಕತೆ ನಾಯಕರಿಗೆ ಇರುವುದಿಲ್ಲ. ಆಗ ಚಮಚಾಗಳು, ಕುಲಬಾಂಧವರು, ಕುಟುಂಬದವರು ಅವರನ್ನು ಸುತ್ತುವರಿದುಕೊಳ್ಳುತ್ತಾರೆ. ಎಲ್ಲ ವ್ಯವಹಾರಗಳು ಮತ್ತು ಚಟುವಟಿಕೆಗಳು ಆಪ್ತರ ಕೈಯಲ್ಲೇ ಇರುತ್ತವೆ. ಮುಂದಿನ ಚುನಾವಣೆ ಬರುವವರೆಗೆ ಕಾರ್ಯಕರ್ತರಿಗೆ ನಾಯಕರು ಸಿಗುವುದೇ ಕಷ್ಟ.

ಸಿಕ್ಕರೂ ಹಾಂ, ಹೂಂ ಎಂದು ಮಾತನಾಡಿಸಿ ಜಾಗ ಖಾಲಿ ಮಾಡಿಸುತ್ತಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ, ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ನಿಗಮ ಮಂಡಳಿಗಳಲ್ಲಿ ಖಾಲಿ ಬಿದ್ದಿರುವ ಸ್ಥಾನಗಳನ್ನು ಭರ್ತಿ ಮಾಡುವ ಉಸಾಬರಿಗೆ ಹೋಗಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷಕ್ಕೆ ಕಾರ್ಯಕರ್ತರ ನೆನಪಾದಂತಿದೆ. ಸುಮಾರು 500 ಕಾರ್ಯಕರ್ತರನ್ನು ನಿಗಮ ಮಂಡಳಿಗಳ ಸದಸ್ಯರು, ನಿರ್ದೇಶಕರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುತ್ತೇವೆ ಎಂದು ಹೇಳಲಾಗುತ್ತಿದೆ.

ಇಷ್ಟು ದಿನ ಕಾರ್ಯಕರ್ತರನ್ನು ಮರೆತಿದ್ದ ನಾಯಕರಿಗೆ ಈಗ ಅವರ ನೆನಪಾಗಿದೆ. ತಡವಾಗಿಯಾದರೂ ಜ್ಞಾನೋದಯವಾಯಿತು ಎಂದು ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ನೇಮಕಾತಿ ನಿಜವಾಗಿಯೂ ಕಾರ್ಯಕರ್ತರಿಗೆ ಸಿಗುವ ಮನ್ನಣೆಯೇ ಅಥವಾ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ಸಿದ್ಧತೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್