ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೇ ಸೀಮಿತವಾಗದೆ, “ವಿದೇಶಿ ಶಕ್ತಿಗಳು ನರೇಂದ್ರ ಮೋದಿ ಅವರನ್ನು ನಿಯಂತ್ರಿಸುತ್ತಿವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಫೋನ್ನಲ್ಲಿವೆ. ಆ ಕಾರಣಕ್ಕಾಗಿಯೇ ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ” ಎಂದು ಕದ್ದಾಲಿಕೆಗೆ ಕಾರಣವನ್ನೂ ನೀಡಿದ್ದಾರೆ.
ಫೋನ್ ಕದ್ದಾಲಿಕೆ ಒಂದು ರಾಜಕೀಯ ಅಪರಾಧ. ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಫೋನ್ ಕದ್ದಾಲಿಕೆ ವಿವಾದದ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಹುಲ್ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ತರಹೇವಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೋದಿ ಅವರನ್ನು ಮತ್ತೆ ಬಹಿರಂಗ ಚರ್ಚೆಗೆ ರಾಹುಲ್ ಆಹ್ವಾನಿಸಿದ್ದಾರೆ. ಈ ಚರ್ಚೆಗೆ ಉದ್ಯಮಿ ಗೌತಮ್ ಅದಾನಿ ಅಥವಾ ಮೋಹನ್ ಭಾಗವತ್ ಅವರೇ ತೀರ್ಪುಗಾರರಾಗಲಿ. ಜತೆಗೆ, ಬೇಕಿದ್ದರೆ ಟೆಲಿಪ್ರಾಂಪ್ಟರ್ ಮುಂದಿಟ್ಟುಕೊಂಡೇ ಮಾತನಾಡಲಿ ಎಂದು ಕಾಲೆಳೆದಿದ್ದಾರೆ. ರಾಹುಲ್ ಅವರ ಆರೋಪಗಳು, ಚರ್ಚೆಯ ಆಹ್ವಾನ ಹಾಗೂ ಮೋದಿ ಅವರ ಹಿಂದೇಟು ಮತ್ತು ನಿಗೂಢ ಮೌನವನ್ನು ದೇಶವೇ ಗಮನಿಸುತ್ತಿದೆ.
ಈ ಬೆಳವಣಿಗೆ ಮೋದಿಯವರ ವರ್ಚಸ್ಸು ಕುಗ್ಗಿಸಿ, ರಾಹುಲ್ ಅವರ ವರ್ಚಸ್ಸು ಹಿಗ್ಗಿಸುತ್ತಿದೆ.
ಅಲ್ಲಿ ರಾಹುಲ್ ಎಸ್ಐಆರ್ ವಿರುದ್ಧ, ಇಲ್ಲಿ ಡಿಕೆಶಿ ಎಸ್ಐಆರ್ ಪರ!

ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಎಸ್ಐಆರ್ ವಿರುದ್ಧದ ಹೋರಾಟವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ್ದಾರೆ. ಈ ಕುರಿತು ಅವರಾಡುತ್ತಿರುವ ಮಾತುಗಳು ಸಹಸ್ರಾರು ಜನರ ಎದೆಗೆ ಇಳಿದಿವೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅತಿರಥ ಮಹಾರಥರು ಮಾತ್ರ ತಮ್ಮ ನಾಯಕನ ಮಾತುಗಳನ್ನು ಎದೆಗಲ್ಲ, ಕಿವಿಗೂ ಹಾಕಿಕೊಂಡಂತೆ ಕಾಣುತ್ತಿಲ್ಲ. ಆರಂಭದಲ್ಲಿ ವಿರಾವೇಶದಿಂದ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ನುಗ್ಗಿ ಹೋರಾಟ ಮಾಡಿದವರು ಇವರೇನಾ ಎಂಬ ಸಂಶಯ ಬರುತ್ತಿದೆ.
ರಾಜ್ಯದಲ್ಲಿ ಅಹಿಂದ ರಥದ ಸಾರಥಿಯಾಗಲು ಕನವರಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ʻರಾಜ್ಯದಲ್ಲಿ ಎಸ್ಐಆರ್ ಕಾನೂನುಬದ್ಧವಾಗಿ ನಡೆದಿದೆʼ ಎಂದು ಷರಾ ಬರೆದಿದ್ದಾರೆ (ವಿರೋಧ ಬಂದ ಮೇಲೆ ಅದು ಹಾಗಲ್ಲ, ಹೀಗೆ ಎಂದು ಹೇಳಿ ಜಾರಿಕೊಂಡರು).
ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದ ಬಳಿಕ ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಈಗ ಎದ್ದು ಕೂತಿದೆ. ಬೆಂಗಳೂರಿನಲ್ಲಿ ಎಸ್ಐಆರ್ಗೂ ಮುನ್ನ 1.03 ಕೋಟಿ ಮತದಾರರಿದ್ದರು. ಎಸ್ಐಆರ್ ಬಳಿಕ ಸುಮಾರು 44,80,212 (ಶೇ. 43.13) ಮತದಾರರನ್ನು ಹೊರದಬ್ಬಿದೆ. ಈಗ 59.08 ಲಕ್ಷ ಮತದಾರರು ಮಾತ್ರ ಉಳಿದುಕೊಂಡಿದ್ದಾರೆ.
ಒಂದು ವಾರದ ಹಿಂದೆ ಸಚಿವ ಈಶ್ವರ ಖಂಡ್ರೆ ಅವರು ಹಳೆಯ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಆಲೋಚಿಸುತ್ತಿದೆ ಎಂದಿದ್ದರು. ಆದರೆ, ಈಗ ಸಣ್ಣ ಪ್ರತಿರೋಧವೂ ವ್ಯಕ್ತಪಡಿಸದೆ ಎಸ್ಐಆರ್ ನಂತರ ಅಂತಿಮಗೊಂಡ ಹೊಸ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲು ತಾಲೀಮು ನಡೆಸುತ್ತಿದೆ.
ಈ ಮೂಲಕ ಎಸ್ಐಆರ್ ಪಟ್ಟಿ ಬಳಸುತ್ತಿರುವ ದೇಶದ ಮೊದಲ ಬಿಜೆಪಿಯೇತರ ಸರ್ಕಾರ ಎಂಬ ಹೆಗ್ಗಳಿಕೆಯ ಕಿರೀಟವನ್ನು ತಲೆಯ ಮೇಲೆ ಇಟ್ಟುಕೊಳ್ಳಲು ಡಿ.ಕೆ. ಶಿವಕುಮಾರ್ ಸಾರಥ್ಯದ ಕಾಂಗ್ರೆಸ್ ಸರ್ಕಾರ ಸಿದ್ಧವಾದಂತಿದೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ವಿರೋಧಿಸುತ್ತಿರುವ ಎಸ್ಐಆರ್ ಪಟ್ಟಿಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಒಪ್ಪಿಕೊಳ್ಳುವುದಾದರೆ, ಆ ಪಕ್ಷದ ನಿಜವಾದ ನಿಲುವೇನು?
ರಾಹುಲ್ ಗಾಂಧಿ ಎಸ್ಐಆರ್ ವಿರೋಧಿ ಹೋರಾಟವನ್ನು ವಿಸ್ತರಿಸುವ ಆಲೋಚನೆಯಲ್ಲಿದ್ದಾರೆ. ಕರ್ನಾಟಕ ಸರ್ಕಾರದ ಈ ನಡೆ ಅವರ ಹೋರಾಟಕ್ಕೆ ತೊಡಕಾಗುವುದಿಲ್ಲವೇ? ಈ ಕುರಿತು ಅವರ ಮೇಲೆ ತೂರಿ ಬರುವ ಪ್ರಶ್ನೆಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ಈ ಆತ್ಮಘಾತುಕ ನಡೆಯನ್ನು ಎಡಬಿಡಂಗಿತನ ಎನ್ನದೆ ಇನ್ನೇನು ಅನ್ನಬೇಕು? ದೇಶದಾದ್ಯಂತ ಎಸ್ಐಆರ್ ವಿರೋಧಿ ಹೋರಾಟದ ಕಾವೇರಿರುವಾಗ ಶಸ್ತ್ರತ್ಯಾಗ ಮಾಡಿ ಶರಣಾಗುವ ಮನಸ್ಸಾದರೂ ಹೇಗೆ ಬಂತು? ಸುಪ್ರೀಂ ಕೋರ್ಟ್ ಕತ್ತಿ ತಲೆಯ ಮೇಲಿದೆ ಎಂಬ ಸಬೂಬು ನೀಡಿ ಸರ್ಕಾರ ಇದನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಒಂದು ಸಣ್ಣ ಪ್ರತಿರೋಧವನ್ನಾದರೂ ವ್ಯಕ್ತಪಡಿಸಲಾಗದಷ್ಟು ಅಸಹಾಯಕ ಸ್ಥಿತಿಗೆ ರಾಜ್ಯದಲ್ಲಿ ಕಾಂಗ್ರೆಸ್ ತಲುಪಿದೆಯೇ?
ಇಂತಹ ಸ್ಥಿತಿಯಲ್ಲಿರುವ ಪಕ್ಷ ಎಸ್ಐಆರ್ ಹೋರಾಟದ ರಥವನ್ನು ದಡ ಸೇರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ.
ನಿಗಮ ಮಂಡಳಿ ನೇಮಕ: ಮೂರೂವರೆ ವರ್ಷಗಳ ಬಳಿಕ ನೆನಪಾದ ಕಾರ್ಯಕರ್ತರು!

ಇಂದು ರಾಜಕೀಯದಲ್ಲಿ ಪಕ್ಷಾತೀತವಾಗಿ ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವಾತಾವರಣವೇ ಇಲ್ಲ. ಬ್ಯಾನರ್ ಕಟ್ಟಲು, ಪ್ಲೆಕ್ಸ್ ಹಾಕಲು, ಜೈಕಾರ ಹೊಡೆಯಲು, ಸಮಾವೇಶಗಳಿಗೆ ಜನರನ್ನು ಸೇರಿಸಲು, ಚುನಾವಣೆಯಲ್ಲಿ ಬೆವರು ಸುರಿಸಲು ಕಾರ್ಯಕರ್ತರು ಬೇಕು. ಆದರೆ, ಅಧಿಕಾರ ಹಂಚಿಕೊಳ್ಳುವಾಗ ಮಾತ್ರ ಕಾರ್ಯಕರ್ತರು ಬೇಡ! ನಿಗಮ ಮಂಡಳಿಗಳು ಬೀಕೋ ಎನ್ನುತ್ತಿವೆ. ನಮಗಾಗಿ ಬೆವರು ಸುರಿಸುವ ಕಾರ್ಯಕರ್ತರಿಗೆ ನೆಮಿಸಬೇಕೆಂಬ ಇರಾದೆಯಾಗಲಿ, ತಡಿತವಾಗಲಿ ನಾಯಕರಲ್ಲಿ ಇಲ್ಲ. ಇದ್ದಿದ್ದರೆ ಅವರೊಂದಿಗೆ ಕಾರ್ಯಕರ್ತರೂ ಅಧಿಕಾರದ ಪಡಸಾಲೆಯಲ್ಲಿ ಕಾಲಿಡುತ್ತಿದ್ದದರು.
ಚುನಾವಣೆ ಗೆದ್ದ ಬಳಿಕ ಕಾರ್ಯಕರ್ತರ ಅವಶ್ಯಕತೆ ನಾಯಕರಿಗೆ ಇರುವುದಿಲ್ಲ. ಆಗ ಚಮಚಾಗಳು, ಕುಲಬಾಂಧವರು, ಕುಟುಂಬದವರು ಅವರನ್ನು ಸುತ್ತುವರಿದುಕೊಳ್ಳುತ್ತಾರೆ. ಎಲ್ಲ ವ್ಯವಹಾರಗಳು ಮತ್ತು ಚಟುವಟಿಕೆಗಳು ಆಪ್ತರ ಕೈಯಲ್ಲೇ ಇರುತ್ತವೆ. ಮುಂದಿನ ಚುನಾವಣೆ ಬರುವವರೆಗೆ ಕಾರ್ಯಕರ್ತರಿಗೆ ನಾಯಕರು ಸಿಗುವುದೇ ಕಷ್ಟ.
ಸಿಕ್ಕರೂ ಹಾಂ, ಹೂಂ ಎಂದು ಮಾತನಾಡಿಸಿ ಜಾಗ ಖಾಲಿ ಮಾಡಿಸುತ್ತಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ, ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ನಿಗಮ ಮಂಡಳಿಗಳಲ್ಲಿ ಖಾಲಿ ಬಿದ್ದಿರುವ ಸ್ಥಾನಗಳನ್ನು ಭರ್ತಿ ಮಾಡುವ ಉಸಾಬರಿಗೆ ಹೋಗಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷಕ್ಕೆ ಕಾರ್ಯಕರ್ತರ ನೆನಪಾದಂತಿದೆ. ಸುಮಾರು 500 ಕಾರ್ಯಕರ್ತರನ್ನು ನಿಗಮ ಮಂಡಳಿಗಳ ಸದಸ್ಯರು, ನಿರ್ದೇಶಕರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುತ್ತೇವೆ ಎಂದು ಹೇಳಲಾಗುತ್ತಿದೆ.
ಇಷ್ಟು ದಿನ ಕಾರ್ಯಕರ್ತರನ್ನು ಮರೆತಿದ್ದ ನಾಯಕರಿಗೆ ಈಗ ಅವರ ನೆನಪಾಗಿದೆ. ತಡವಾಗಿಯಾದರೂ ಜ್ಞಾನೋದಯವಾಯಿತು ಎಂದು ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ನೇಮಕಾತಿ ನಿಜವಾಗಿಯೂ ಕಾರ್ಯಕರ್ತರಿಗೆ ಸಿಗುವ ಮನ್ನಣೆಯೇ ಅಥವಾ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ಸಿದ್ಧತೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುನಿಸು ಶಮನವಾಯಿತೆ?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೀಪಾವಳಿ ಹಬ್ಬದ ನಿಮಿತ್ತ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಹೊರಬಂದ ಮೇಲೆ ʻಸಿದ್ದರಾಮಯ್ಯನವರು ನಮ್ಮ ನಾಯಕರು. ನಮ್ಮಿಬ್ಬರ ನಡುವೆ ಸಣ್ಣ ಮುನಿಸೂ ಇಲ್ಲ, ದೊಡ್ಡ ಮುನಿಸೂ ಇಲ್ಲʼ ಎಂದು ಹೇಳಿರುವುದು, ಹೈಕಮಾಂಡ್ ಇಬ್ಬರ ನಡುವಿನ ಶೀತಲ ಸಮರಕ್ಕೆ ಫುಲ್ಸ್ಟಾಪ್ ಹಾಕಿದೆಯೇ ಅಥವಾ ಇದೊಂದು ತಿಪ್ಪೆ ಸಾರಿಸುವ ಯತ್ನವೇ ಎಂಬ ಚರ್ಚೆಯನ್ನು ರಾಜಕೀಯ ಕಾರಿಡಾರ್ನಲ್ಲಿ ಹುಟ್ಟುಹಾಕಿದೆ.
ಸಿದ್ದರಾಮಯ್ಯನವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ತಮ್ಮ ಪಾಡಿಗೆ ತಾವಿದ್ದರು. ಮೊದಲಿನಿಂದಲೂ ಇಬ್ಬರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಇದೆ. ಸ್ಟಿಂಗ್ ವಿಚಾರ ಅವರ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ಸ್ಟಿಂಗ್ ವಿಷಯದಲ್ಲಿ ನ್ಯಾಯಯುತವಾಗಿ, ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ ಎಂಬ ಅಸಮಾಧಾನ ಸಿದ್ದರಾಮಯ್ಯನವರಲ್ಲಿ ಹೆಪ್ಪುಗಟ್ಟಿದೆ. ಜತೆಗೆ, ಮೈಸೂರು ದಸರಾ ಮಹೋತ್ಸವದಲ್ಲಿ ಸಚಿವ ಹಾಗೂ ಅವರ ಮಗ ಡಾ. ಯತೀಂದ್ರ ಅವರನ್ನು ಗೌಣಗೊಳಿಸಿದ್ದು ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ರಚಿಸದಂತೆ ಡಿಕೆಶಿ ಅವರು ಅಡ್ಡಗಾಲು ಹಾಕಿದ್ದು ಅವರನ್ನು ರೊಚ್ಚಿಗೆಬ್ಬಿಸಿದೆ. ಹಾಗಾಗಿಯೇ ಅವರು ನೇರವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಖಾರವಾಗಿ ಮಾತಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಮ್ಮ ಸಂಬಂಧ ಚೆನ್ನಾಗಿದೆ ಎಂದು ಮುಖ್ಯಮಂತ್ರಿಗಳು ತಲೆ ಕೆಳಗೆ, ಕಾಲು ಮೇಲೆ ಮಾಡಿ ಹೇಳಿದರೂ ಜನರಾಗಲಿ, ಸಿದ್ದರಾಮಯ್ಯನವರ ಬೆಂಬಲಿಗರಾಗಲಿ ನಂಬುವುದಿಲ್ಲ. ಇಬ್ಬರನ್ನು ದಿನವಿಡೀ ಒಂದೇ ಕೋಣೆಯಲ್ಲಿ ಮಾತನಾಡಲು ಬಿಟ್ಟರೂ ಅವರ ನಡುವಿನ ಮನಸ್ತಾಪ ಸರಿಯಾಗುವುದಿಲ್ಲ. ಮರುದಿನ ಒಬ್ಬರೇ ಕೋಣೆಯಿಂದ ಹೊರಬರುತ್ತಾರೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಸ್ಟಿಂಗ್ ಆಪರೇಷನ್: ಬೇರೆಯದೇ ಕಥೆ ಹೇಳುತ್ತಿರುವ ಕೃಪಾ ಆಳ್ವಾ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನಡೆದಿದೆ ಎನ್ನಲಾಗುತ್ತಿರುವ ಕುಟುಕು ಕಾರ್ಯಾಚರಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ – ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಮತ್ತು ಸಂತ್ರಸ್ತೆ ಎನ್ನಲಾಗುತ್ತಿರುವ ಮುಸುಕುಧಾರಿ ಮಹಿಳೆ – ಮೂರು ಮಂದಿ ಪರದೆಯ ಮುಂದೆ ಇದ್ದಾರೆ. ಪರದೆಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಈಗ ಈ ಪ್ರಕರಣದಲ್ಲಿ ಹೊಸ ಪಾಲುದಾರರು ಸೇರ್ಪಡೆಯಾಗಿದ್ದಾರೆ.
ರಾಕೇಶ್ ಶೆಟ್ಟಿ ಆರಂಭದಲ್ಲಿ ಮಾತಾಡುವಾಗ ʻಸ್ಟಿಂಗ್ ಆಪರೇಷನ್ ಮಾಡಿದ್ದು ಬೇರಾರು ಅಲ್ಲ, ನಾನೇ. ಅದು ಜರ್ನಲಿಸಂ ಭಾಗವಾಗಿ ೨೦೨೩ರಲ್ಲಿ ಮಾಡಿದ್ದೇನೆ. ಸಿದ್ದರಾಮಯ್ಯನವರ ವಿರುದ್ಧ ಒಂದು ಗಂಭೀರ ಆರೋಪ ಹರಿದಾಡುತ್ತಿತ್ತು. ಸಂಚು ನಡೆಯುತ್ತಿತ್ತು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಈ ಸ್ಟಿಂಗ್ ಮಾಡಿದ್ದೇವೆ. ಅದು ಸುಳ್ಳು ಎಂದು ಗೊತ್ತಾಗಿ ಅದನ್ನು ಕೈಬಿಟ್ಟಿದ್ದೇವೆʼ ಎಂದು ಹೇಳಿದ್ದರು.
ಆಮೇಲೆ ನಾನು ಯಾವುದೇ ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ ಎಂದಿದ್ದರು. ಮರುದಿನ ನ್ಯಾಯಾಲಯದ ಕದ ತಟ್ಟಿ, ಜಾಮೀನು ಪಡೆದರು. ಈಗ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಿ ʻನನ್ನನ್ನು ಸಾಕ್ಷಿಯಾಗಿ ಪರಿಗಣಿಸಿ, ರಕ್ಷಣೆ ನೀಡಿ. ನಮ್ಮ ಕಚೇರಿಯ ಕಪಾಟಿನಲ್ಲಿರುವ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ಸಾಕ್ಷ್ಯವಾಗಿ ನೀಡುವೆʼ ಎಂದು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದಾರೆ. ತನಿಖೆ ಚುರುಕಾದಂತೆ ಅವರು ಹೊಸ ರೂಪ ಧರಿಸಲು ಸಿದ್ಧವಾಗಿದ್ದಾರೆ ಎಂದು ಇದನ್ನು ವ್ಯಾಖ್ಯಾನಿಸಲಾಗುತ್ತಿದೆ.
ರಾಕೇಶ್ ಶೆಟ್ಟಿ ತಮ್ಮ ಟಿವಿ ಕ್ಯಾಮೆರಾ ಮುಂದೆ ಕೂತು ಕುಮಾರಸ್ವಾಮಿ ಅವರ ವಿರುದ್ಧ ಸತತವಾಗಿ ಮೂರು ತಾಸು ವಾಗ್ದಾಳಿ ನಡೆಸಿದ್ದು ಇನ್ನೂ ಹಸಿಹಸಿಯಾಗಿಯೇ ಇದೆ. ಆಗ ಸ್ಟಿಂಗ್ ಬಗ್ಗೆಯೂ ವಿವರವಾಗಿ ಮಾತಾಡಿದರು. ಅವರು ಮಾತಾಡಿದ್ದೆ ಈಗ ಅವರಿಗೆ ಉರುಳಾಗಿ ಪರಿಣಿಮಿಸುವ ಸಾಧ್ಯತೆ ಇದೆ. ಮಾತಾಡುವ ಮಧ್ಯದಲ್ಲಿ ಸ್ಟಿಂಗ್ ವಿಡಿಯೊ ʻಎರಡು ತಾಸುʼ ಇದೆ ಎಂದು ಹೇಳಿದ್ದರು. ಕೃಪಾ ಆಳ್ವ ಅವರು ತಮ್ಮ ಹೇಳಿಕೆ ದಾಖಲಿಸಿದ ಮೇಲೆ ಅವರ ಈ ಮಾತು ಈಗ ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯ ಆರಂಭದಲ್ಲಿ ದೂರು ಸಲ್ಲಿಸಿ, ಮೌನಕ್ಕೆ ಶರಣಾಗಿದ್ದರು. ಆಗ ರಾಕೇಶ್ ಶೆಟ್ಟಿ ಅವರ ಕಿರುಚಾಟ, ಅಬ್ಬರ ಜೋರಾಗಿತ್ತು. ಆದರೆ, ಯಾವಾಗ ಸಿದ್ದರಾಮಯ್ಯನವರು ಮೌನ ಮುರಿದು ಈ ವಿಷಯದ ಬಗ್ಗೆ ಮಾತಾಡಲು ಆರಂಭಿಸಿದರೋ, ಅವರ ಹಾರಾಟ, ಚೀರಾಟ ಎಲ್ಲವೂ ಏಕಾಏಕಿ ಬಂದ್ ಆಗಿದೆ. ಇದ್ದಕ್ಕಿದ್ದಂತೆ ಅವರು ಯಾಕೆ ಆರ್ಭಟ ನಿಲ್ಲಿಸಿದ್ದಾರೆ ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.
ಕೃಪಾ ಆಳ್ವಾ ಅವರು ಮೊದಲು ಪೊಲೀಸರು ವಿಚಾರಣೆಗೆ ಕರೆಯುವ ಮುನ್ನ ತಾವಾಗಿ ತಾವೇ ವಿಚಾರಣೆಗೆ ಬಂದು ಹುಬ್ಬೇರಿಸುವಂತೆ ಮಾಡಿದರು. ಮರುದಿನ ಅವರೂ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾದರು. ಷರತ್ತುಬದ್ಧ ನಿರೀಕ್ಷಣಾ ಜಾಮೀನು ಸಿಕ್ಕ ಮೇಲೆ ಮರಳಿ ದೇಶಕ್ಕೆ ಕಾಲಿಟ್ಟಿದ್ದಾರೆ. ವಿದೇಶದಿಂದ ನೇರವಾಗಿ ತನಿಖಾಧಿಕಾರಿಗಳ ಮೇಜಿನ ಮುಂದೆ ಬಂದು ಕೂತಿದ್ದಾರೆ.
ತನಿಖಾಧಿಕಾರಿಗಳು ನಾಲ್ಕು ತಾಸು ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತರಹೇವಾರಿ ಪ್ರಶ್ನೆಗಳನ್ನು ಅವರ ಮುಂದಿಟ್ಟಾಗ, ಅವರು ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಉಸಾಬರಿಗೆ ಹೋಗದೆ ʻನನಗೆ ಗೊತ್ತಿಲ್ಲʼ ಎಂದು ಜಾರಿಕೊಂಡರೆ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರು ನೀಡಿದ ಪ್ರತಿಕ್ರಿಯೆಯೊಂದು ಸ್ಟಿಂಗ್ ಪ್ರಕರಣದ ಬಗ್ಗೆ ಬೇರೊಂದು ಕಥೆ ಹೇಳುತ್ತಿದೆ. ಅವರು ತನಿಖಾಧಿಕಾರಿಗಳ ಮುಂದೆ ʻಖಾಸಗಿ ಸುದ್ದಿ ವಾಹಿನಿಯೊಂದರ ಪತ್ರಕರ್ತ, ಸಂತ್ರಸ್ತೆ ಹಾಗೂ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಿದ್ದಾಗ ನಾನು ಸ್ಥಳದಲ್ಲಿ ಇದ್ದೆ. ಸುಮಾರು ಅರ್ಧ ತಾಸು ಸಂಭಾಷಣೆ ನಡೆದಿರಬಹುದು. ಆದರೆ, ಅದು ರೆಕಾರ್ಡ್ ಮಾಡಲಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಅಲ್ಲದೆ, ಈ ಹಿಂದೆ ನೀಡಿದ ಹೇಳಿಕೆಯಂತೆ ವಿಡಿಯೊದ ಉದ್ದೇಶ ಕೂಡ ನನಗೆ ತಿಳಿದಿಲ್ಲʼ ಎಂದು ಹೇಳಿದ್ದಾರೆ ಎಂದು ಸುದ್ದಿಯಾಗಿದೆ.
ಅವರು ನೀಡಿದ ಎರಡು ಹೇಳಿಕೆಗಳು ಗಮನ ಸೆಳೆದಿವೆ.
ಮೊದಲನೆಯದು, ಅರ್ಧ ತಾಸು ಸಂಭಾಷಣೆ ನಡೆದಿದೆ ಎಂದು ಹೇಳಿದ್ದು. ಆದರೆ, ರಾಕೇಶ್ ಶೆಟ್ಟಿ ಸುಮಾರು ಎರಡು ತಾಸಿನ ವಿಡಿಯೊ ಇದೆ ಎಂದು ಹೇಳಿದ್ದಾರೆ. ಎರಡು ಹೇಳಿಕೆಗಳಲ್ಲಿ ವಿರೋಧಾಭಾಸವಿದೆ.
ಎರಡನೆಯದು, ವಿಡಿಯೊ ರೆಕಾರ್ಡ್ ಮಾಡುವ ವಿಷಯ ನನಗೆ ಗೊತ್ತಿರಲಿಲ್ಲ ಎಂದದ್ದು. ರಾಕೇಶ್ ಶೆಟ್ಟಿ ಇವರಿಗೂ ಗೊತ್ತಿಲ್ಲದಂತೆ ವಿಡಿಯೊ ಮಾಡಿಕೊಂಡರಾ? ಹಾಗೂ ಇವರ ಮಾತು ನಿಜವೆಂದಾದರೆ, ಹೀಗೆ ಕದ್ದು ಯಾಕೆ ರೆಕಾರ್ಡ್ ಮಾಡಿಕೊಂಡರು ಎಂಬ ಪ್ರಶ್ನೆ ಕಾಡುತ್ತಿದೆ.
ಇಬ್ಬರಲ್ಲಿ ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮತ್ತು ಅವರಿಬ್ಬರೂ ಬೇರೆ ಬೇರೆ ಮಾತಾಡುತ್ತಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಹರಿದು ಬರುತ್ತಿದ್ದ ದೇಣಿಗೆಯಲ್ಲಿ ಭಾರಿ ಕುಸಿತ

ಕಾಂಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ವರೆಗೆ ಸುಮಾರು 54 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಇಂದು ಆ ಪಕ್ಷ ಸೋಲಿನ ಹಾದಿ ಹಿಡಿದಿದೆ. ಪರಿಣಾಮವಾಗಿ ಉದ್ಯಮಿಗಳಿಂದ ಬರುತ್ತಿದ್ದ ದೇಣಿಗೆಯ ಹರಿವು ತೀರಾ ಕುಸಿದಿದೆ. ಸೋಲು ಪಕ್ಷವನ್ನು ಅಧಿಕಾರದಿಂದ ಮಾತ್ರ ದೂರ ಮಾಡುವುದಿಲ್ಲ; ಆರ್ಥಿಕವಾಗಿಯೂ ಅನಾಥವಾಗಿಸುತ್ತದೆ. ಒಂದೇ ವರ್ಷದಲ್ಲಿ ಅದಕ್ಕೆ ಬರುತ್ತಿದ್ದ ದೇಣಿಗೆ ಪ್ರಮಾಣ ಶೇ. 75ರಷ್ಟು ಕುಸಿತವಾಗಿರುವುದು ಇದಕ್ಕೆ ಸಾಕ್ಷಿ.
ಕಾಂಗ್ರೆಸ್ ಈಗ ಶ್ರೀಮಂತ ನಾಯಕರಿರುವ ಬಡ ಪಕ್ಷ!
ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ 2024–25ನೇ ಸಾಲಿನಲ್ಲಿ 517.39 ಕೋಟಿ ದೇಣಿಗೆ ಪಡೆದರೆ, 2025–26ರಲ್ಲಿ 130.69 ಕೋಟಿ ಮಾತ್ರ ಪಡೆದಿದೆ. 2023–24ನೇ ಸಾಲಿನಲ್ಲಿ 281.48 ಕೋಟಿ ಪಡೆದಿತ್ತು (ಇದು ₹20,000ಕ್ಕಿಂತ ಹೆಚ್ಚಿನ ದೇಣಿಗೆಗಳಿಗೆ ಮಾತ್ರ ಸಂಬಂಧಿಸಿದ್ದು).
ಈಗ ಚುನಾವಣೆ ಗೆಲ್ಲಲು ಜನಬಲದ ಜತೆಗೆ ಹಣಬಲವೂ ಅನಿವಾರ್ಯ. ಚುನಾವಣಾ ಆಯೋಗ ನಿಗದಿಪಡಿಸಿರುವ ಲೋಕಸಭಾ ಚುನಾವಣೆಗೆ ₹95 ಲಕ್ಷ ಹಾಗೂ ವಿಧಾನಸಭಾ ಚುನಾವಣೆಗೆ ₹40 ಲಕ್ಷ ವೆಚ್ಚದ ಮಿತಿ ಕಾರ್ಯಕರ್ತರ ಚಹಾ, ಬಿಸ್ಕಿಟ್ಗೂ ಸಾಲುತ್ತಿಲ್ಲ. ಲೋಕಸಭಾ–ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಇಂದು ನೂರಾರು ಕೋಟಿ ರೂಪಾಯಿ ಸುರಿಯುತ್ತಾರೆ. ಈ ಅವಾಂತರಗಳು ಚುನಾವಣಾ ಆಯೋಗಕ್ಕೂ ಗೊತ್ತಿದೆ. ಅರ್ಹ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಬೆವರು ಸುರಿಸುತ್ತಿರುವ ಆಯೋಗದ ಕಣ್ಣಿಗೆ ಇದು ಬಿದ್ದರೂ ಕಣ್ಣು–ಕಿವಿ–ಬಾಯಿ ಮುಚ್ಚಿಕೊಂಡು ಕೂತಿದೆ.


