SUBSCRIBE

ದ ಪಾಲಿಟಿಕ್

ಕುಮಾರಸ್ವಾಮಿ ಹೋರಾಟದಲ್ಲಿ ಬಿಜೆಪಿ ಎಲ್ಲಿದೆ?

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಇದೆ. ಈ ಮೈತ್ರಿ ಕಳೆದ ಲೋಕಸಭಾ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಜಯ ತಂದುಕೊಟ್ಟಿದೆ (ಬಿಜೆಪಿ 17, ಜೆಡಿಎಸ್ 2). ಈ ರಾಜಕೀಯ ದೋಸ್ತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. ಆದರೆ, ಅದು ಕೇವಲ ಮಾತಿಗೆ ಸೀಮಿತವಾಗಿದೆ.

ಕುಮಾರಸ್ವಾಮಿ ಮಾರುವೇಷದ ಕಾರ್ಯಾಚರಣೆಯ ಚಾಂಪಿಯನ್ ರಾಕೇಶ್‌ ಶೆಟ್ಟಿ ವಿರುದ್ಧ ರಸ್ತೆಗಿಳಿದು ಹೋರಾಡುತ್ತಿದ್ದಾರೆ. ಮೈತ್ರಿ ಧರ್ಮ ಪಾಲಿಸಬೇಕಾದ ಬಿಜೆಪಿ ಈ ಕಡೆಗೆ ತಲೆ ಹಾಕುತ್ತಿಲ್ಲ. ಇದು ಬಿಜೆಪಿಗೆ ಬೇಕಾಗಿದ್ದು ಒಕ್ಕಲಿಗರ ಮತಗಳು ವಿನಾ ದೇವೇಗೌಡರ ಕುಟುಂಬವಾಗಲಿ, ಜೆಡಿಎಸ್‌ ಪಕ್ಷವಾಗಲಿ ಅಲ್ಲ ಎಂದು ಹೇಳುತ್ತಿದೆ. ಕುಮಾರಸ್ವಾಮಿ ಇಮೇಜ್‌ ಕಡಿಮೆಯಾದಷ್ಟು ನಮಗೆ ಒಳ್ಳೆಯದು ಎಂದು ನಿರ್ಧರಿಸಿ, ದೂರವೇ ಉಳಿದು ಸೇಫ್‌ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟಪಡಿಸುತ್ತಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆ ಮತ್ತು ಅವಕಾಶವಾದಿ ರಾಜಕಾರಣ ಇದೆ ಎಂಬ ಆರೋಪವನ್ನು ನಿಜವಾಗಿಸುತ್ತಿದ್ದಾರೆ.

ʻಯಡಿಯೂರಪ್ಪ ಪೋಕ್ಸೊ ಕೇಸ್‌ನಲ್ಲಿ ಜೈಲಿಗೆ ಹೋಗುತ್ತಿದ್ದರು. ಅವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ. ಅವರನ್ನು ರಕ್ಷಿಸಿದವರೇ ಸಿದ್ದರಾಮಯ್ಯ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೌನವಾಗಿದ್ದಾರೆʼ ಎಂದು ಎನ್ನುವವರಿದ್ದಾರೆ. ʻರಾಜ್ಯದ ಬಹುತೇಕ ರಾಜಕಾರಣಿಗಳ ʻಸಿಡಿಗಳುʼ ರಾಕೇಶ್‌ ಶೆಟ್ಟಿಯ ಕಪಾಟಿನಲ್ಲಿ ಭದ್ರವಾಗಿವೆ. ಶೆಟ್ಟಿಗೆ ಹೆದರಿ ಅವರಾರೂ ಮಾತಾಡುವ ಧೈರ್ಯ ಮಾಡುತ್ತಿಲ್ಲʼ ಎಂದೂ ಎನ್ನುವವರಿದ್ದಾರೆ. ಇವು ನಿಜ ಇರಲಿಕ್ಕಿಲ್ಲ. ಸುಳ್ಳೂ ಇರಲಿಕ್ಕಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಮಾರುವೇಷದ ಕಾರ್ಯಾಚರಣೆ ʻಚಾಂಪಿಯನ್‌ʼ ಹಿಂದೆ ಯಾರಿದ್ದಾರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಮಾರುವೇಷದ ಕಾರ್ಯಚರಣೆ ಈಗ ರಾಜ್ಯದ ಪ್ರತಿ ಮನೆಯ ಮಾತಾಗಿದೆ.  ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಕೇವಲ ನಾಲ್ಕು ತಿಂಗಳಾಯಿತು.  ಅವರು ತಮ್ಮ ಮೊದಲಿನ ಖದರ್‌ ಕಳೆದುಕೊಂಡು ಮೈಸೂರು ಕಡೆಗೆ ಹೆಚ್ಚೆ ಹಾಕಿದ್ದಾರೆ.  ಈಗ ಅವರ ವಿರುದ್ಧವೇ ಷಡ್ಯಂತ್ರ ನಡಿದಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ.

ಪುರಾಣ ಕಾಲದಲ್ಲಿಯೂ ಸ್ಟಿಂಗ್ ನಡೆಯುತ್ತಿದ್ದವು. ಆಗ ವಿಷಕನ್ನೆಯರು ಇದ್ದರು. ಅವರ ಮೂಲಕ ನಡೆಸುತ್ತಿದ್ದರು. ಈ ಆಧುನಿಕ ಕಾಲದಲ್ಲಿ ರಾಜಕಾರಣದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಯುವುದು ಎರಡೇ ಕಾರಣಕ್ಕಾಗಿ. ಒಂದು, ಅಧಿಕಾರ ಪಡೆಯಲು. ಇಲ್ಲವೇ ಪಡೆದ ಅಧಿಕಾರ ಉಳಿಸಿಕೊಳ್ಳಲು. ಕೆಲವೊಮ್ಮೆ ತಮಗಾಗದವರನ್ನು ರಾಜಕೀಯವಾಗಿ ಮುಗಿಸಲು ಅವರ ವಿರುದ್ಧ ಮಾಡಿಸುತ್ತಾರೆ.

ಸಿದ್ದರಾಮಯ್ಯನವರ ವಿರುದ್ಧ ಮಾರುವೇಷದ ಕಾರ್ಯಾಚರಣೆ ಯಾರು ನಡೆಸಿದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ.  ಆದಾಗ್ಯೂ ಸರ್ಕಾರ ಆ ವ್ಯಕ್ತಿಯನ್ನು ಬಂಧಿಸುವುದು ದೂರವೇ ಉಳಿಯಿತು, ವಿಚಾರಣೆ ನಡೆಸಲು ಅವನಿಗೆ ಒಂದು ನೋಟಿಸ್‌ ಸಹ ಇದುವರೆಗೆ ನೀಡದಿರುವುದು ಕುತೂಹಲ ಹುಟ್ಟಿಸಿದೆ. ಸಾಕ್ಷಾತ್‌ ಅವನೇ ಬಹಿರಂಗವಾಗಿ ʻನಾನೇ ಮಾಡಿದ್ದು, ಏನಿವಾಗʼ? ʻಏನು ಮಾಡುತ್ತಿಯಾʼ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಮಕಿ ಹಾಕುತ್ತಿದ್ದಾನೆ. ಅವನ ಈ ಧೈರ್ಯಕ್ಕೆ ಕಾರಣವೇನು? ಅವನ ಬೆನ್ನು ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆ ರಾಜ್ಯದ ಪ್ರತಿಯೊಬ್ಬರಿಗೂ ಕಾಡುತ್ತಿದೆ.

ಈ ಮಾರುವೇಷದ ಕಾರ್ಯಚರಣೆಯ ʻಚಾಂಪಿಯನ್‌ʼ ಎಂಬ ಭಸ್ಮಾಸುರನನ್ನು ಹುಟ್ಟುಹಾಕಿದ್ದು ಯಾರು? ಅವನನ್ನು ಸಾಕುತ್ತಿರುವವರು ಯಾರು? ಸರ್ಕಾರ ಏಕೆ ಅವನ ವಿಚಾರದಲ್ಲಿ ಮೌನಕ್ಕೆ ಜಾರಿದೆ? ಎಂಬ ಪ್ರಶ್ನೆಗಳು ತಲೆ ತಿನ್ನುತ್ತಿವೆ. ಈ ಭಸ್ಮಾಸುರ ತನ್ನ ಸ್ವಭಾವಕ್ಕನುಗುಣವಾಗಿ ತನಗೆ ಹುಟ್ಟಿಸಿದವರ ತಲೆಯ ಮೇಲೆ ಕೈ ಇಡದೆ ಇರುತ್ತಾನೆಯೆ?

ʻಸ್ಟಿಂಗ್‌ ಚಾಂಪಿಯನ್‌ʼ ಇದು ತಮ್ಮ ಬುಡಕ್ಕೆ ಬರುತ್ತಿರುವುದು ಗಮನಿಸಿ, ಒಂದು ವಾರದ ನಂತರ ಪರದೆ ಮುಂದೆ ಬಂದು ಸಿದ್ದರಾಮಯ್ಯನವರ ಒಳಿತಿಗಾಗಿ ನಾನೇ ಸ್ಟಿಂಗ್‌ ಮಾಡಿದ್ದೇನೆ, ಅವರು ನನಗೆ ತಂದೆಯ ಸಮಾನ, ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಬೊಗಳೆ ಮಾತಾಡಿ, ತಿಪ್ಪೆ ಸಾರಿಸಲು ಯತ್ನಿಸಿದ್ದಾನೆ.

ಅವನ ವೀರಾವೇಷದ ಮಾತುಗಳು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸ್ಟಿಂಗ್‌ ಅನ್ನು ಒಳಿತಿಗಾಗಿ ಮಾಡಿದ್ದಾನೋ ಅಥವಾ ಕೆಡುಕಿಗಾಗಿ ಮಾಡಿದ್ದಾನೋ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಅದಕ್ಕೂ ಮೊದಲು ಸ್ಟಿಂಗ್‌ ವಿಡಿಯೊ, ಸ್ವಿಂಗ್‌ ಮಾಡಿದವನ ಸ್ವತ್ತು. ಆ ವಿಡಿಯೊ ಹಲವರ ಕೈಗೆ ತಲುಪಿದ್ದು ಹೇಗೆ? ಯಾರು ತಲುಪಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಇಡೀ ರಾಜ್ಯ ಕಾಯುತ್ತಿದೆ. ವಿಡಿಯೊ ಕಳುವಾಗಿದೆ ಎಂದು ಸಮಜಾಯಿಷಿ ನೀಡಬಹುದು. ಕಳುವಾಗಿದ್ದರೆ ದೂರು ಏಕೆ ನೀಡಿಲ್ಲ? ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಮಾರುವೇಷದ ಕಾರ್ಯಾಚರಣೆಯ ವಿಷಯದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರನ್ನು ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ. ದಿನಬೆಳಗಾದರೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮಾಧ್ಯಮದ ಮುಸುಕು ಹಾಕಿಕೊಂಡಿರುವ ರಾಕೇಶ್‌ ಶೆಟ್ಟಿಯನ್ನು ಅರೆಸ್ಟ್‌ ಮಾಡಿಸಲು ಬೀದಿಗಿಳಿದಿದ್ದಾರೆ. ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಲೂ ಆಗದ, ಸ್ವೀಕರಿಸಲೂ ಆಗದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ನೇತೃತ್ವದ ಸರ್ಕಾರ ಸಿಲುಕಿದೆ.

ಡಿ.ಕೆ. ಶಿವಕುಮಾರ್‌ ಈ ವಿಷಯದಲ್ಲಿ ಮೇಲುದನಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಹಾಗೂ ʼಕಾಲವೇ ಉತ್ತರಿಸುತ್ತದೆʼ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಕುಮಾರಸ್ವಾಮಿ ಆರೋಪಗಳಿಗೆ ಬಲ ತಂದಿದೆ. ಸಂಘಪರಿವಾರದ ವಿರುದ್ಧ ಧೈರ್ಯವಾಗಿ ಮಾತಾಡುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಜೋರಾಗಿ ಮಾತಾಡುತ್ತಿಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರು ಅದೆಲ್ಲೋ ಕಳೆದುಹೋಗಿದ್ದಾರೆ.

ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿದರೆ ಪಕ್ಷಾತೀತವಾಗಿ ಈ ವಿಷಯದ ಕುರಿತು ಬಹಿರಂಗವಾಗಿ ಮಾತಾಡಲು ಬಹುತೇಕ ರಾಜಕಾರಣಿಗಳು ಭಯ ಪಡುತ್ತಿದ್ದಾರೆ. ಅವರ ಈ ಭಯಕ್ಕೆ ಕಾರಣವೇನಿರಬಹುದು? ಈ ಸ್ಟಿಂಗ್‌ ಚಾಂಪಿಯನ್‌ನ ಕಪಾಟಿನಲ್ಲಿ ಇನ್ನೂ ಯಾರ್ಯಾರ ವಿಡಿಯೊ ಇವೆಯೋ ಅವನ ಭಗವಂತನೇ ಬಲ್ಲ.

ಸ್ಟಿಂಗ್‌ ಚಾಂಪಿಯನ್‌ ಹಿಂದೆ ಯಾರಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಈ  ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ,  ಈ ವಿಚಾರದಲ್ಲಿ ರಾಜ್ಯದ ಸಿಎಂ ಹಾಗೂ  ಸರ್ಕಾರವೇ ಆರೋಪಿ ಸ್ಥಾನದಲ್ಲಿ ನಿಂತಿದೆ. ಸರ್ಕಾರದ ಅಡಿಯಲ್ಲಿರುವ ಪೊಲೀಸರು ಈ ಮಾರುವೇಷದ ಕಾರ್ಯಾಚರಣೆಯ ಚಾಂಪಿಯನ್‌ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಕಾದು ನೋಣೋಣ!

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಈಶ್ವರಪ್ಪ – ಯತ್ನಾಳ್ ಮರಳಿ ಬಿಜೆಪಿಗೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆಗಲೇ ಬಿಜೆಪಿ ತಾಲೀಮು ಆರಂಭಿಸಿದೆ. ಬಿಜೆಪಿ ಪಕ್ಷದ ಫೈರ್‌ ಬ್ರಾಂಡ್‌ಗಳಾದ ಕೆ. ಎಸ್‌. ಈಶ್ವರಪ್ಪ ಹಾಗೂ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಸದ್ದಿಲ್ಲದೆ ಘರ್ ವಾಪಸಿ ಮಾಡಿಕೊಳ್ಳಲು ಪಕ್ಷ ಮುಂದಾಗಿದೆ.

ಹಾವು ಮುಂಗಸಿಯಂತಾಗಿದ್ದ ಈಶ್ವರಪ್ಪ ಹಾಗೂ ಯಡಿಯೂರಪ್ಪ ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ನಗುಮುಖದಿಂದ ಮಾತಾಡಿದ್ದು ಮತ್ತು ಬಿ. ವೈ. ವಿಜಯೇಂದ್ರ ಹಾಗೂ ಯತ್ನಾಳ್ ಹುಬ್ಬಳಿಯ ಛಬ್ಬಿ ಗ್ರಾಮದಲ್ಲಿ ಪರಸ್ಪರ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದ್ದು ರಾಜಕೀಯವಾಗಿ ಗಮನ ಸೆಳೆದಿವೆ.

ತಮ್ಮ ಮಗ ಕಾಂತೇಶ್‌ಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದಿರುವುದಕ್ಕೆ ಯಡಿಯೂರಪ್ಪ ಕಾರಣ ಎಂದು ಟೀಕಿಸಿದಲ್ಲದೇ, ಬಿ. ವೈ. ರಾಘವೇಂದ್ರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.  ಪರಿಣಾಮವಾಗಿ ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿತ್ತು. ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದು ಯಡಿಯೂರಪ್ಪ ಕುಟುಂಬದ ಮೇಲೆ ಬೆಂಕಿಕಾರುತ್ತಿದ್ದ ಯತ್ನಾಳ್ ಅವರಿಗೆ ಪಕ್ಷದಿಂದ ಗೇಟ್‌ಪಾಸ್‌ ನೀಡಲಾಗಿತ್ತು.

ಈಗ ಸಾಕ್ಷಾತ್‌ ಪ್ರಧಾನಿ ಮೋದಿ- ಶಾ ಅವರು ಬಿ.ಎಸ್.‌ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಮೂಲಕವೇ ಅವರನ್ನು ಪಕ್ಷಕ್ಕೆ ಮರಳಿ ಕರೆತರಲು ಮುಂದಾಗಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಮತ್ತೇ ತುರ್ತು ಪರಿಸ್ಥಿತಿಯತ್ತ ಸಾಗುತ್ತಿರುವ ಭಾರತ?

ಸಿದ್ರಾಮ ಶಟಕಾರ
ಸಿದ್ರಾಮ ಶಟಕಾರ
2 min read

ಇಂದಿರಾ ಗಾಂಧಿಯವರಿಗೆ ಅಧಿಕಾರ ಕೈ ತಪ್ಪುವ ಆತಂಕ  ಹಾಗೂ ಸರ್ವಾಧಿಕಾರ ಧೋರಣೆಯ ಫಲವಾಗಿ ಈ ದೇಶ 1975 ರಲ್ಲಿ 21 ತಿಂಗಳುಗಳ ಕಾಲ ಅಕ್ಷರಶಃ ಕತ್ತಲೆಗೆ ತಳ್ಳಲ್ಪಟ್ಟಿತ್ತು. ಅದು ಕತ್ತಲೆಯ ಯುಗ ಅಥವಾ ಭಾರತದ ಪ್ರಜಾಪ್ರಭುತ್ವದ ಕಗ್ಗೋಲೆಯ ಕಾಲ ಎಂದು ಕುಖ್ಯಾತಿ ಪಡೆದಿದೆ.

ಇಂದಿರಾ ಅವರು ದೇಶದ ಮೇಲೆ  ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದ ರಾಜಕಾರಣಿಗಳಾದಿಯಾಗಿ ಜನಸಾಮಾನ್ಯರನ್ನು, ಅಸಂವಿಧಾನಿಕ ದಾರಿ ಹಾಗೂ  ತಂತ್ರಗಳು ಬಳಸುವುದರ ಮೂಲಕ ಎಲ್ಲರ ಧ್ವನಿಯನ್ನು ಹತ್ತಿಕ್ಕುವ  ಕೆಲಸ ಪ್ರಜಾಪ್ರಭುತ್ವದ ನೆರಳಿನ ಅಡಿಯಲ್ಲಿಯೇ ಜರುಗಿಸಿರುವುದು  ದೇಶದ ಚರಿತ್ರೆಯಲ್ಲಿ ಕಪ್ಪು ಪುಟದ ದಾಖಲೆಯಾಗಿ ಉಳಿಯಲಿದೆ. ಕೇಂದ್ರ ಸರ್ಕಾರದ ನಡೆಗಳು ಇಂದಿರಾ ಅವರ 1975ರ ತುರ್ತು ಪರಿಸ್ಥಿತಿ ನೆನಪಿಸುವಂತಿದೆ.  Gen Zಗಳ NEET ಪರೀಕ್ಷೆಯ ಅಕ್ರಮದ ವಿರುದ್ಧ ನಡೆದ ಹೋರಾಟ ಹಾಗೂ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗಾಗಿ ನಡೆದ ಹೋರಾಟ. ಈಗ SIR ಅಕ್ರಮಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಕ್ಷಾತೀತವಾಗಿ ದೇಶದ ಜನರು ಭಾಗಿಯಾಗುತ್ತಿದ್ದಾರೆ.

ಇದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂದು ಪೊಲೀಸರನ್ನು ಮುಂದೆ ಬಿಟ್ಟು ಗಾಂಧಿ ತೋರಿಸಿದ ಅಹಿಂಸಾ ಮೂಲಕ ಹೋರಾಡುತ್ತಿರುವ ಯುವಜನತೆಯ ಮೇಲೆ ಪ್ರಹಾರ  ಮಾಡುತ್ತಿದೆ.  ಪ್ರತಿಭಟನಾಕಾರರ ಜತೆಗೆ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಅನಿಸುತ್ತಿದೆ.

ಶಾಂತಿಯುತವಾಗಿ ಸಭೆ ಸೇರುವುದು ಹಾಗೂ ಪ್ರತಿಭಟನೆ ಮಾಡುವುದು ಜನರ ಮೂಲಭೂತ ಹಕ್ಕು. ಸರ್ಕಾರ ಜನರ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ ರಾಠಿಯನ್ನು ಯಾವುದೆ ಕಾರಣ ನೀಡದೆ ಬೆಳ್ಳಂಬೆಳಿಗ್ಗೆ ಅವರ  ಗುರಗಾಂವ್‌  ಮನೆಗೆ ನುಗ್ಗಿ ಕಾನೂನು ಬಾಹಿರವಾಗಿ ಬಂಧಿಸಿ ಎಳೆದುಕೊಂಡು ಹೋಗಿರುವುದು, ದೆಹಲಿಯ ಕನಾಟ್ ಪ್ಲೇಸನ್ ಸೆಂಟ್ರಲ್ ಪಾರ್ಕನಲ್ಲಿ  ಶುಕ್ರವಾರ ಆಯೋಜಿಸಿದ್ದ “ಲೇಹರಾ ದೋ ತಿರಂಗಾ” ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ CJP ಮುಖ್ಯಸ್ಥ ಅಭಿಜೀತ ದಿಪ್ಕೆ ಹಾಗೂ AISA ಸಂಘಟನೆ ಮುಖ್ಯಸ್ಥೆ ನೇಹಾ ಬೋರಾ ಅವರನ್ನು  ದೆಹಲಿ ಪೋಲಿಸರು ಬಂಧಿಸಿರುವುದು ಏನೇನು ಸೂಚಿಸುತ್ತದೆ?

ಒಂದೇ ದಿನ ಏಳು ಸಾವಿರ ಜನರನ್ನು ಸಾಮೂಹಿಕವಾಗಿ ಬಂಧಿಸಿರುವ ಸರ್ಕಾರದ ಈ ಸರ್ವಾಧಿಕಾರ ಧೋರಣೆ 1975ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ.

ED, CBI ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುವುದು, ಜನಪರ ಮಾಧ್ಯಮಗಳ ಧ್ವನಿಗಳನ್ನು ಹತ್ತಿಕ್ಕುವುದು, ಇಲ್ಲವೇ ಬಗ್ಗದಿದ್ದರೆ ಹಣಬಲದಿಂದ ಖರಿದಿಸುವುದು ದೇಶದಲ್ಲಿ ನಡೆಯುತ್ತಿದೆ.  ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿಯ ನಡೆ ಎಂದು ಸಾರ್ಜಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರು.  ಈ ಜೆನ್‌ ಝೀ ಹೋರಾಟ ಯಾವ ಪರಿಣಾಮ ಬಿರಲಿದೆ ಎಂಬುದು ಜನರಲ್ಲಿ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಹೋರಾಟದ ಚಾಂಪಿಯನ್ ಅಣ್ಣಾ ಹಜಾರೆ ಎಲ್ಲಿದ್ದಾರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ದೇಶದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 2011ರಲ್ಲಿ ದೆಹಲಿಯ ʻಜಂತರ್ ಮಂತರ್‌ʼನಿಂದ ಎದ್ದು ಹೋಗಿ, ಅದೆಲ್ಲೋ ಕಳೆದುಹೋಗಿದ್ದಾರೆ. ಸಾರ್ವಜನಿಕವಾಗಿ ಮತ್ತೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಅಭಿಮಾನಿಗಳು ಅವರನ್ನು ಹುಡುಕುತ್ತಿದ್ದಾರೆ.

ದೇಶದ ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಹಲ್ಲಿಲ್ಲದ ಹಾವಿನಂತಾಗಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಇವುಗಳ ರಿಪೇರಿಗಾಗಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಡುತ್ತಿವೆ. ಆದಾಗ್ಯೂ ಅಣ್ಣಾ ಎದ್ದು ಬರಲು ಸಿದ್ಧರಿಲ್ಲ.

ಅವರ ಹೋರಾಟದಿಂದಾಗಿ ʻಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ -2013ʼ ಜಾರಿಗೆ ಬಂದಿದೆ. ಮೋದಿ-ಶಾ ಅವರು ಐದು ವರ್ಷಗಳ ಕಾಲ ಲೋಕಪಾಲರನ್ನೇ ನೇಮಕ ಮಾಡಿಲ್ಲ. ಆಮೇಲೆ 2019ರಲ್ಲಿ ನೇಮಕ ಮಾಡಿದರೂ ವಿರೋಧ ಪಕ್ಷದ ನಾಯಕನನ್ನು ಸಮಿತಿಯಿಂದ ಹೊರಗಿಟ್ಟು ತಮ್ಮ ಆಪ್ತರನ್ನೇ ನೇಮಿಸಿದರು. ಆಗಲೂ ಅವರು ಮಾತಾಡಲಿಲ್ಲ.

ದೇಶದಲ್ಲಿ ರಫೇಲ್‌ ಹಗರಣ ಹಾಗೂ ಎಲೆಕ್ಟೋರಲ್‌ ಬಾಂಡ್‌ ದೊಡ್ಡ ಸದ್ದು ಮಾಡಿವೆ. ಕನಿಷ್ಠ ತನಿಖೆ ಮಾಡಲು ಈ ಸಂಸ್ಥೆ ಮುಂದಾಗಲಿಲ್ಲ. ಹುಟ್ಟಿದಾಗಿನಿಂದಲೇ  ರೋಗಗ್ರಸ್ಥವಾಗಿರುವ ಈ ಸಂಸ್ಥೆಗೆ ಪೋಲಿಯೋ ಹನಿ ಹಾಕಿಸಲು ಅವರು ಇಂದಲ್ಲ ನಾಳೆ ಎದ್ದು ಬರಬಹುದೆಂದು ಜನರು ಹನ್ನೆರಡು ವರ್ಷಗಳಿಂದ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಅಣ್ಣಾ ಹನಿ ಹಾಕಿಸಲು ಹೊರಬರುವುದು ದೂರವೇ ಉಳಿಯಿತು, ಉಸಿರು ಬಿಡದೆ ಬಾಯಿಮುಚ್ಚಿಕೊಂಡೇ ಇದ್ದಾರೆ.

ಅವರ ಈ ಸುದೀರ್ಘ ಮೌನ ಜನರಿಗೆ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಮುಖ್ಯಮಂತ್ರಿ ಡಿಕೆಶಿ ಒಂಟಿಯಾದರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ದಿನ ಬೆಳಗಾದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸರಣಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮೊದಲು ʻನೈಸ್‌ ಹಗರಣʼ, ಆಮೇಲೆ ʻಬಿಡದಿ ಟೌನ್‌ಶಿಪ್‌, ಈಗ ʻಮಾರುವೇಷದ ಕಾರ್ಯಾಚರಣೆʼ ವಿಷಯ ಕೈಗೆತ್ತಿಕೊಂಡು ಮುಖ್ಯಮಂತ್ರಿ ವಿರುದ್ಧ ಯುದ್ಧವೇ ಸಾರಿದ್ದಾರೆ.

ನೈಸ್‌ ಹಗರಣ ಮತ್ತು ಬಿಡದಿ ಟೌನ್‌ಶಿಪ್‌ ವಿಷಯವನ್ನು ಹೇಗೋ ನಿಭಾಯಿಸುತ್ತಿದ್ದರು. ಆದರೆ, ಮಾರುವೇಷದ ಕಾರ್ಯಾಚರಣೆ ಅವರನ್ನು ಒಂಟಿಯಾಗಿಸಿದೆ. ʻಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾರುವೇಶದ ಕಾರ್ಯಾಚರಣೆ ನಡೆಸಿ, ಸಿಎಂ ಕುರ್ಚಿಯಿಂದ ಅವರನ್ನು ಡಿಕೆಶಿ ಕೆಳಗೆ ಇಳಿಸಿದ್ದಾರೆʼ ಎಂದು ಕುಮಾರಸ್ವಾಮಿ ಸಿಡಿಸಿದ ಬಾಂಬ್‌ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಡಿಕೆಶಿ ಅವರನ್ನು ಸಾರ್ವಜನಿಕ ಕಟಕಟೆಯಲ್ಲಿ ತಂದು ನಿಲ್ಲಿಸಿದೆ.

ಡಿಕೆಶಿ ಸಿಎಂ ಕುರ್ಚಿ ಮೇಲೆ ಕೂತು ಕೇವಲ ನಾಲ್ಕು ತಿಂಗಳಾಯಿತು. ಆ ಕಡೆ ಹೆಚ್‌ಡಿಕೆ, ಈ ಕಡೆ ಬಿಜೆಪಿ ನಾಯಕರು ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ರಾಜಕೀಯ ಯುದ್ಧದಲ್ಲಿ  ಒಕ್ಕಲಿಗ ಸಮುದಾಯದ ಒಂದಿಬ್ಬರು ಸಚಿವರು ಮಾತ್ರ ಅವರ ಜತೆಗೆ ನಿಂತಿದ್ದಾರೆ. ಉಳಿದ ಸಚಿವರು ಇದು ತಮಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಭಾವಿಸಿ ದೂರ ನಿಂತಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಅವರು ಯುದ್ಧದಲ್ಲಿ ಅರ್ಧ ಗೆದ್ದಂತಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

 

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್