SUBSCRIBE

ದ ಪಾಲಿಟಿಕ್

ಹೋರಾಟದ ಚಾಂಪಿಯನ್ ಅಣ್ಣಾ ಹಜಾರೆ ಎಲ್ಲಿದ್ದಾರೆ?

ದೇಶದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 2011ರಲ್ಲಿ ದೆಹಲಿಯ ʻಜಂತರ್ ಮಂತರ್‌ʼನಿಂದ ಎದ್ದು ಹೋಗಿ, ಅದೆಲ್ಲೋ ಕಳೆದುಹೋಗಿದ್ದಾರೆ. ಸಾರ್ವಜನಿಕವಾಗಿ ಮತ್ತೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಅಭಿಮಾನಿಗಳು ಅವರನ್ನು ಹುಡುಕುತ್ತಿದ್ದಾರೆ.

ದೇಶದ ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಹಲ್ಲಿಲ್ಲದ ಹಾವಿನಂತಾಗಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಇವುಗಳ ರಿಪೇರಿಗಾಗಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಡುತ್ತಿವೆ. ಆದಾಗ್ಯೂ ಅಣ್ಣಾ ಎದ್ದು ಬರಲು ಸಿದ್ಧರಿಲ್ಲ.

ಅವರ ಹೋರಾಟದಿಂದಾಗಿ ʻಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ -2013ʼ ಜಾರಿಗೆ ಬಂದಿದೆ. ಮೋದಿ-ಶಾ ಅವರು ಐದು ವರ್ಷಗಳ ಕಾಲ ಲೋಕಪಾಲರನ್ನೇ ನೇಮಕ ಮಾಡಿಲ್ಲ. ಆಮೇಲೆ 2019ರಲ್ಲಿ ನೇಮಕ ಮಾಡಿದರೂ ವಿರೋಧ ಪಕ್ಷದ ನಾಯಕನನ್ನು ಸಮಿತಿಯಿಂದ ಹೊರಗಿಟ್ಟು ತಮ್ಮ ಆಪ್ತರನ್ನೇ ನೇಮಿಸಿದರು. ಆಗಲೂ ಅವರು ಮಾತಾಡಲಿಲ್ಲ.

ದೇಶದಲ್ಲಿ ರಫೇಲ್‌ ಹಗರಣ ಹಾಗೂ ಎಲೆಕ್ಟೋರಲ್‌ ಬಾಂಡ್‌ ದೊಡ್ಡ ಸದ್ದು ಮಾಡಿವೆ. ಕನಿಷ್ಠ ತನಿಖೆ ಮಾಡಲು ಈ ಸಂಸ್ಥೆ ಮುಂದಾಗಲಿಲ್ಲ. ಹುಟ್ಟಿದಾಗಿನಿಂದಲೇ  ರೋಗಗ್ರಸ್ಥವಾಗಿರುವ ಈ ಸಂಸ್ಥೆಗೆ ಪೋಲಿಯೋ ಹನಿ ಹಾಕಿಸಲು ಅವರು ಇಂದಲ್ಲ ನಾಳೆ ಎದ್ದು ಬರಬಹುದೆಂದು ಜನರು ಹನ್ನೆರಡು ವರ್ಷಗಳಿಂದ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಅಣ್ಣಾ ಹನಿ ಹಾಕಿಸಲು ಹೊರಬರುವುದು ದೂರವೇ ಉಳಿಯಿತು, ಉಸಿರು ಬಿಡದೆ ಬಾಯಿಮುಚ್ಚಿಕೊಂಡೇ ಇದ್ದಾರೆ.

ಅವರ ಈ ಸುದೀರ್ಘ ಮೌನ ಜನರಿಗೆ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಮುಖ್ಯಮಂತ್ರಿ ಡಿಕೆಶಿ ಒಂಟಿಯಾದರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ದಿನ ಬೆಳಗಾದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸರಣಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮೊದಲು ʻನೈಸ್‌ ಹಗರಣʼ, ಆಮೇಲೆ ʻಬಿಡದಿ ಟೌನ್‌ಶಿಪ್‌, ಈಗ ʻಮಾರುವೇಷದ ಕಾರ್ಯಾಚರಣೆʼ ವಿಷಯ ಕೈಗೆತ್ತಿಕೊಂಡು ಮುಖ್ಯಮಂತ್ರಿ ವಿರುದ್ಧ ಯುದ್ಧವೇ ಸಾರಿದ್ದಾರೆ.

ನೈಸ್‌ ಹಗರಣ ಮತ್ತು ಬಿಡದಿ ಟೌನ್‌ಶಿಪ್‌ ವಿಷಯವನ್ನು ಹೇಗೋ ನಿಭಾಯಿಸುತ್ತಿದ್ದರು. ಆದರೆ, ಮಾರುವೇಷದ ಕಾರ್ಯಾಚರಣೆ ಅವರನ್ನು ಒಂಟಿಯಾಗಿಸಿದೆ. ʻಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾರುವೇಶದ ಕಾರ್ಯಾಚರಣೆ ನಡೆಸಿ, ಸಿಎಂ ಕುರ್ಚಿಯಿಂದ ಅವರನ್ನು ಡಿಕೆಶಿ ಕೆಳಗೆ ಇಳಿಸಿದ್ದಾರೆʼ ಎಂದು ಕುಮಾರಸ್ವಾಮಿ ಸಿಡಿಸಿದ ಬಾಂಬ್‌ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಡಿಕೆಶಿ ಅವರನ್ನು ಸಾರ್ವಜನಿಕ ಕಟಕಟೆಯಲ್ಲಿ ತಂದು ನಿಲ್ಲಿಸಿದೆ.

ಡಿಕೆಶಿ ಸಿಎಂ ಕುರ್ಚಿ ಮೇಲೆ ಕೂತು ಕೇವಲ ನಾಲ್ಕು ತಿಂಗಳಾಯಿತು. ಆ ಕಡೆ ಹೆಚ್‌ಡಿಕೆ, ಈ ಕಡೆ ಬಿಜೆಪಿ ನಾಯಕರು ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ರಾಜಕೀಯ ಯುದ್ಧದಲ್ಲಿ  ಒಕ್ಕಲಿಗ ಸಮುದಾಯದ ಒಂದಿಬ್ಬರು ಸಚಿವರು ಮಾತ್ರ ಅವರ ಜತೆಗೆ ನಿಂತಿದ್ದಾರೆ. ಉಳಿದ ಸಚಿವರು ಇದು ತಮಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಭಾವಿಸಿ ದೂರ ನಿಂತಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಅವರು ಯುದ್ಧದಲ್ಲಿ ಅರ್ಧ ಗೆದ್ದಂತಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

 

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಗ್ಯಾನೇಶ್ ಕುಮಾರ್ ಸುತ್ತಾ ಮತ್ತೊಂದು ವಿವಾದ…

ದ ಪಾಲಿಟಿಕ್
ದ ಪಾಲಿಟಿಕ್
2 min read
ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿ ಕುರಿತು ಈಗಾಗಲೇ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದರ ನಡುವೆಯೇ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರು ಜ್ಞಾನೇಶ್ ಕುಮಾರ್ ಅವರಿಗೆ ನೇರ ಅಥವಾ ಪರೋಕ್ಷ ಸಂಬಂಧವಿರುವ ಎರಡು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರ ಪುತ್ರ ಸಿದ್ಧಾರ್ಥ್ ಶರ್ಮಾ ಅವರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗದ ಪರ ವಕೀಲರಾಗಿ (Standing Counsel) ನೇಮಕಗೊಂಡಿದ್ದಾರೆ. ಗ್ಯಾನೇಶ್ ಕುಮಾರ್ ಅವರು ಚುನಾವಣಾ ಆಯೋಗದಲ್ಲಿದ್ದಾಗಲೇ (ಜುಲೈ 2024 ರಲ್ಲಿ) ಈ ನೇಮಕಾತಿ ನಡೆದಿದೆ.
ಆದರೆ, ಚುನಾವಣಾ ಆಯೋಗ ಮತ್ತು ಜ್ಞಾನೇಶ್ ಕುಮಾರ್ ಅವರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡುವಾಗ ನ್ಯಾಯಮೂರ್ತಿಗಳು ತಮ್ಮ ಮಗ ಚುನಾವಣಾ ಆಯೋಗದ ವಕೀಲರಾಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸಲಿಲ್ಲ.
ಈ ವಿಚಾರವನ್ನು ಮೊದಲ ಬಾರಿಗೆ ಕಾನೂನು ವೆಬ್‌ಸೈಟ್ ‘ಲೈವ್ ಲಾ’ ವರದಿ ಮಾಡಿದ ನಂತರವಷ್ಟೇ ವಕೀಲರಿಗೂ ಸಾರ್ವಜನಿಕರಿಗೂ ತಿಳಿಯಿತು.
ನ್ಯಾಯಮೂರ್ತಿ ಶರ್ಮಾ ವಿಚಾರಣೆ ನಡೆಸಿದ ಎರಡು ಪ್ರಕರಣಗಳು
ಪ್ರಕರಣ 1: ಮುಖ್ಯ ಚುನಾವಣಾ ಆಯುಕ್ತರ (CEC) ನೇಮಕಾತಿ ಕಾನೂನು 2023: ಕೇಂದ್ರ ಸರ್ಕಾರ 2023 ರಲ್ಲಿ ತಂದ ಹೊಸ ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ಸಲ್ಲಿಕೆಯಾಗಿದ್ದವು. ಈ ಪ್ರಕರಣದಲ್ಲಿ ಗ್ಯಾನೇಶ್ ಕುಮಾರ್ ಅವರೇ ಸ್ವತಃ 3ನೇ ಪ್ರತಿವಾದಿಯಾಗಿದ್ದರು.ನ್ಯಾಯಮೂರ್ತಿ ದತ್ತಾ ಮತ್ತು ನ್ಯಾಯಮೂರ್ತಿ ಶರ್ಮಾ ಅವರಿದ್ದ ಪೀಠವು ಇದರಲ್ಲಿ ಭಿನ್ನ ತೀರ್ಪು (Split Verdict) ನೀಡಿತು.
ನ್ಯಾಯಮೂರ್ತಿ ಶರ್ಮಾ ಅವರ ಅಭಿಪ್ರಾಯದಿಂದಾಗಿ ಈ ಪ್ರಕರಣ ಈಗ ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾವಣೆಯಾಗಿದೆ. ಇದರ ಪರಿಣಾಮವಾಗಿ, ಕಾನೂನಿನ ಸಿಂಧುತ್ವದ ಮೇಲಿನ ತೀರ್ಪು ಮತ್ತಷ್ಟು ವರ್ಷಗಳು ಮುಂದೂಡಲ್ಪಟ್ಟಿದೆ.
ಪ್ರಕರಣ 2: ಗ್ಯಾನೇಶ್ ಕುಮಾರ್ ಅವರ ಪುತ್ರಿ ಮೇಧಾ ರೂಪಮ್ ಅವರ ಪ್ರಕರಣ
ನೋಯ್ಡಾದಲ್ಲಿ ಅಧಿಕಾರಿಯಾಗಿರುವ ಗ್ಯಾನೇಶ್ ಕುಮಾರ್ ಅವರ ಪುತ್ರಿ ಮೇಧಾ ರೂಪಮ್ (ಐಎಎಸ್ ಅಧಿಕಾರಿ) ಅವರ ವಿರುದ್ಧದ ಪ್ರಕರಣವನ್ನೂ ಇದೇ ನ್ಯಾಯಮೂರ್ತಿ ಶರ್ಮಾ ಅವರ ಪೀಠ ವಿಚಾರಣೆ ನಡೆಸಿತು. ವಿದ್ಯಾರ್ಥಿನಿ ಆಕೃತಿ ಚೌಧರಿ ಅವರ ಎನ್‌ಎಸ್‌ಎ (NSA) ಬಂಧನವನ್ನು ರದ್ದುಪಡಿಸಿ, ಅಧಿಕಾರಿಗಳ ಸಂಬಳದಿಂದ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಈ ಪರಿಹಾರ ಪಾವತಿಗೆ ಮಧ್ಯಂತರ ತಡೆ ನೀಡಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ವ್ಯಕ್ತವಾಗಿವೆ.
1. ರೋಸ್ಟರ್ (Roster) ಉಲ್ಲಂಘನೆ: ಈ ಪ್ರಕರಣವನ್ನು ವಾಡಿಕೆಯಂತೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಪೀಠ ವಿಚಾರಣೆ ನಡೆಸಬೇಕಿತ್ತು. ಆದರೆ ಹಠಾತ್ತನೆ ನ್ಯಾಯಮೂರ್ತಿ ಶರ್ಮಾ ಅವರ ಪೀಠಕ್ಕೆ ಇದು ಹೇಗೆ ವರ್ಗಾವಣೆಯಾಯಿತು ಎಂಬ ಪ್ರಶ್ನೆ ಎದ್ದಿದೆ.
2. ಮೈಕ್ ಮ್ಯೂಟ್ ಮಾಡಿದ್ದು: ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಯುವಾಗ ಆನ್‌ಲೈನ್‌ನಲ್ಲಿ ಮೈಕ್ ಮ್ಯೂಟ್ ಮಾಡಲಾಗಿತ್ತು .
3. ಆದೇಶ ತಿದ್ದುಪಡಿ: ಮೊದಲ ಆದೇಶದಲ್ಲಿ ಇಡೀ ಹೈಕೋರ್ಟ್ ತೀರ್ಪಿಗೆ ತಡೆ ನೀಡಲಾಗಿತ್ತು (ಇದರಿಂದ ಸಂತ್ರಸ್ತ ವಿದ್ಯಾರ್ಥಿ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಇತ್ತು). ನಂತರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ತರಾತುರಿಯಲ್ಲಿ ಕೇವಲ ಸಂಬಳದಿಂದ ಪರಿಹಾರ ಕಡಿತಕ್ಕೆ ಮಾತ್ರ ತಡೆ ಎಂದು ಆದೇಶವನ್ನು ಪರಿಷ್ಕರಿಸಲಾಯಿತು.
ವಿಷಯ ಏನೇ ಇರಲಿ, ನ್ಯಾಯಾಲಯಗಳಲ್ಲಿ “ನ್ಯಾಯ ಸಿಕ್ಕರೆ ಮಾತ್ರ ಸಾಲದು, ನ್ಯಾಯ ನಿಷ್ಪಕ್ಷಪಾತವಾಗಿ ನಡೆದಿದೆ ಎಂದು ಜನರಿಗೆ ತೋರಬೇಕು.” ಅನ್ನುವುದು ಮುಖ್ಯ. ತಮ್ಮ ಮಗ ಚುನಾವಣಾ ಆಯೋಗದ ಪ್ಯಾನೆಲ್‌ನಲ್ಲಿದ್ದಾರೆ ಎಂಬ ವಿಷಯವನ್ನು ನ್ಯಾಯಮೂರ್ತಿಗಳು ಮೊದಲೇ ಮುಕ್ತ ನ್ಯಾಯಾಲಯದಲ್ಲಿ ಹೇಳಬೇಕಿತ್ತು ಅಥವಾ ತಾವೇ ಸ್ವತಃ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕಿತ್ತು ಅನ್ನುವುದು ಹಲವರ ಅಭಿಪ್ರಾಯ. ಯಾರ ನೇಮಕಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆಯೋ (ಗ್ಯಾನೇಶ್ ಕುಮಾರ್), ಅವರೇ ನ್ಯಾಯಮೂರ್ತಿಗಳ ಪುತ್ರನನ್ನು ವಕೀಲರನ್ನಾಗಿ ನೇಮಿಸಿರುವಾಗ ಈ ವಿಷಯವನ್ನು ಮುಚ್ಚಿಟ್ಟಿದ್ದು ಅತ್ಯಂತ ವಿಷಾದನೀಯ.
ನ್ಯಾಯಮೂರ್ತಿಗಳ ಮಕ್ಕಳು ವಕೀಲ ವೃತ್ತಿಯಲ್ಲಿ ಇರುವುದು ತಪ್ಪಲ್ಲ, ಆದರೆ ಅಂತಹ ಸಂಬಂಧಗಳು ಇರುವಾಗ ನ್ಯಾಯಾಲಯದಲ್ಲಿ ಅದನ್ನು ಮುಂಚಿತವಾಗಿಯೇ ಬಹಿರಂಗಪಡಿಸುವುದು ಕಡ್ಡಾಯವಾಗಿರಬೇಕು.
ಪ್ರಜಾಪ್ರಭುತ್ವದ ಎರಡು ಪ್ರಮುಖ ಆಧಾರಸ್ತಂಭಗಳಾದ ಚುನಾವಣೆ ಆಯೋಗ ಮತ್ತು ಸುಪ್ರೀಂ ಕೋರ್ಟ್ ಎರಡೂ ನಿಷ್ಪಕ್ಷಪಾತವಾಗಿರಬೇಕು. ಪಾರದರ್ಶಕತೆ ಕೊರತೆಯಾಗಿರುವುದು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನ ಮೂಡಿಸುತ್ತದೆ. ಇಂತಹ ಘಟನೆಗಳು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುತ್ತವೆ.‌
– ಟಿ. ಎಸ್‌. ವೇಣು ಗೋಪಾಲ್‌

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಸಿದ್ದರಾಮಯ್ಯ ವಿರುದ್ಧ ಹನಿ ಟ್ರ್ಯಾಪ್‌ ಸಂಚು?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ದೇಶದಾದ್ಯಂತ ಮತಗಳ್ಳತನದ ಬಗ್ಗೆ ಹೋರಾಟ ನಡೆಯುತ್ತಿದ್ದರೆ, ಕರ್ನಾಟಕ ಮಾತ್ರ ಮಾರುವೇಷದ ಕಾರ್ಯಾಚರಣೆಯ ಚರ್ಚೆಯಲ್ಲಿ ಮುಳುಗಿದೆ. ದಾಖಲೆಯ ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 2011ರಲ್ಲಿ ಹನಿ ಟ್ರ್ಯಾಪ್‌ ಬಲೆಗೆ ಸಿಲುಕಿಸಲು ಸಂಚು ನಡೆದಿತ್ತು ಎಂಬ ಸುದ್ದಿ ಹರಿದಾಡುತ್ತಿದೆ. ಅದು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ಕುರಿತು ʻಅದು ಸ್ಟಿಂಗ್‌ ಅಲ್ಲ, ಅಪಪ್ರಚಾರದ ವಿಡಿಯೊʼ ಎಂದು ಸಿದ್ದರಾಮಯ್ಯ ಅವರ ಮಗ ಸಚಿವ ಡಾ. ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ವತಃ ಸಿದ್ದರಾಮಯ್ಯನವರೂ ಮೌನ ಮುರಿದು ʻರಾಜ್ಯದಲ್ಲಿ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ಗೊತ್ತಿದೆ. ಯಾರು ಮಾಡುತ್ತಿದ್ದಾರೆಂದು ತನಿಖೆ ಆಗಬೇಕುʼ ಎಂದಿದ್ದಾರೆ.

ಆದರೆ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಸಚಿವ ಕೆ. ಎನ್‌. ರಾಜಣ್ಣ ಅವರು ʻಸ್ಟಿಂಗ್‌ ಆಗಿರುವುದಕ್ಕೆ ಅವರು ಸ್ಟೇ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇಲ್ಲದಿದ್ದರೆ ಅವರು ಯಾಕೆ ತಡೆಯಾಜ್ಞೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗುತ್ತಿದ್ದರುʼ ಎಂದು ಆಡಿರುವ ಮಾತು ಕುತೂಹಲ ಮೂಡಿಸಿದೆ.

ಈ ಮಧ್ಯೆ ಇಂದು ಸಿದ್ದರಾಮಯ್ಯನವರು ನ್ಯಾಯಾಲಯದ ಕದ ತಟ್ಟಿದ್ದಾರೆ.  ಜತೆಗೆ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಕಟಕಟೆಯಲ್ಲಿ ತಂದು ನಿಲ್ಲಿಸಿ, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಮಾರುವೇಷದ ಕಾರ್ಯಾಚರಣೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ – ಮಹಾರಾಜರ ಕಾಲದಲ್ಲಿ ಆರಂಭವಾಗಿ, ಈಗಲೂ ಮುಂದುವರಿದಿದೆ. ಎದುರಾಳಿ ಶತ್ರು ದೇಶದ ರಹಸ್ಯ ದಾಖಲೆ ಹಾಗೂ ಮಾಹಿತಿಯನ್ನು ಪಡೆಯಲು ಜಗತ್ತಿನ ಬಹುತೇಕ ದೇಶಗಳು ಇದೇ ದಾಳ ಎಸೆಯುತ್ತವೆ. ರಾಜಕಾರಣಿಗಳು ಅಧಿಕಾರಕ್ಕಾಗಿ ಬೇರೆ ಪಕ್ಷದ ನಾಯಕರನ್ನು ಅಥವಾ ತಮ್ಮ ಪಕ್ಷದ ರಾಜಕಾರಣಿಗಳನ್ನು ರಾಜಕೀಯವಾಗಿ ಮುಗಿಸಲು ಇದರ ಮೊರೆ ಹೋಗುತ್ತಾರೆ. ಈ ಮಾರುವೇಷದ ಕಾರ್ಯಾಚರಣೆಗೆ ಪ್ರಪಂಚದಾದ್ಯಂತ ಸಾವಿರಾರು ಜನರು ಆಹುತಿಯಾಗಿದ್ದಾರೆ. ನಮ್ಮ ದೇಶ–ರಾಜ್ಯದಲ್ಲೂ ಇದಕ್ಕೆ ಹಲವರು ಬಲಿಪಶುವಾಗಿದ್ದಾರೆ.‌

ರಾಜ್ಯದಲ್ಲಿ  ಇತ್ತೀಚೆಗೆ ಎರಡು  ಹನಿ ಟ್ರ್ಯಾಪ್‌ಗಳು ಬಹಳ ಸದ್ದು ಮಾಡಿದವು.

ಮೊದಲನೆಯದು, 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಎಂಟು ಜನ ಸಚಿವರು ಸರ್ಕಾರ ಉರುಳಿಸಲು ಮುಂಬೈಯಲ್ಲಿ ಸುತ್ತಾಡಿ, ಬಿಜೆಪಿಗೆ ಹಾರಿದರು. ಮರುದಿನ ಅವರು ನ್ಯಾಯಾಲಯದಿಂದ ತಮ್ಮ ವಿರುದ್ಧ ವಿಡಿಯೊಗಳು ಪ್ರಸಾರ ಮಾಡದಂತೆ ಏಕಪಕ್ಷೀಯ ಆದೇಶ ಪಡೆದದ್ದು.

ಎರಡನೆಯದು, 2021ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿ, ಆಗಿನ ಬಿಜೆಪಿ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಅದಾದ ಮೇಲೆ ಅವರು ರಾಜ್ಯ ರಾಜಕಾರಣದಲ್ಲಾಗಲಿ ಅಥವಾ ಬೆಳಗಾವಿ ರಾಜಕಾರಣದಲ್ಲಾಗಲಿ ಮೊದಲಿನಷ್ಟು ಸಕ್ರಿಯವಾಗಿರದೆ, ಎಲ್ಲೋ ಕಳೆದುಹೋಗಿದ್ದಾರೆ.

ರಾಜ್ಯದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸುವ ಒಂದು ತಂಡವಿದೆ. ಆ ತಂಡ ತಮ್ಮ ಬಾಸ್‌ಗಾಗಿ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಆಗಾಗ ಎದ್ದು ಬಂದು ಸದ್ದು ಮಾಡುತ್ತಲೇ ಇದೆ. ಇದು ರಾಜಕೀಯ ವ್ಯಭಿಚಾರ. ಇದರಿಂದಾಗಿ ರಾಜ್ಯದ ಮಾನ ಮೂರಾಬಟ್ಟೆಯಾಗುತ್ತಿದೆ. ಕರಾವಳಿಯಲ್ಲಿ ಹೆಣದ ರಾಜಕೀಯ ನಡೆದರೆ, ಬೆಂಗಳೂರಿನಲ್ಲಿ ಈ ಮಾರುವೇಷದ ಕಾರ್ಯಾಚರಣೆ ರಾಜಕೀಯ ನಡೆಯುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ರಾಜ್ಯದ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಫೋಟೋಶೂಟ್‌ನಲ್ಲಿ ತಲ್ಲೀನರಾಗಿದ್ದರು ಎಂದು ಎನ್ನುವವರಿದ್ದಾರೆ. ಮಾರುವೇಷದ ಕಾರ್ಯಾಚರಣೆಯ ಬಗ್ಗೆ ಅವರು ತನಿಖೆ ಮಾಡಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಎನ್ನುವವರೂ ಇದ್ದಾರೆ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇದು ರಾಜ್ಯ ರಾಜಕೀಯುದಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಬಿಸುವ ಗಾಳಿ ಕಾಂಗ್ರೆಸ್‌ ಸರ್ಕಾರ ಹಾಗೂ ಪಕ್ಷಕ್ಕೂ ತಟ್ಟುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದು ಚರ್ಚೆಯ ವಿಷಯವಾಗುತ್ತದೆ. ಸಿದ್ದರಾಮಯ್ಯ ಇದನ್ನು ಹೇಗೆ ಎದುರಿಸುತ್ತಾರೆ, ಅವರ ಮುಂದಿನ ನಡೆ ಏನು ಎಂಬ ಕುತೂಹಲ ರಾಜ್ಯದ ಜನರಲ್ಲಿ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ದೇಶದ ಮಾನ ಹರಾಜು ಹಾಕಿದ ಮೋಶಾ ಜೋಡಿ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಸಭೆ ಸೇರುವುದು, ಪ್ರತಿಭಟನೆ ಮಾಡುವುದು ಜನರ ಮೂಲಭೂತ ಹಕ್ಕು. ಅದನ್ನು ಗೌರವಿಸಿ, ಹೋರಾಟ ನಿರತ ಜನರ  ಕೂಗಿಗೆ – ನೋವಿಗೆ ಕಿವಿಗೊಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಈ ದೇಶ ಹೋರಾಟದಿಂದಲೇ ಹುಟ್ಟಿದ್ದೆ. ನಮ್ಮ ಹೀರಿಕರು ಹೋರಾಡದಿದ್ದರೆ ನಾವಿನ್ನೂ ಬ್ರಿಟಿಷರ ದಾಸ್ಯದಲ್ಲಿ ಇರುತ್ತಿದ್ದೇವು.

ಭಾರತ ಇಂದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಮೋದಿ ಹಾಗೂ ಶಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರಾಡಿದ್ದೇ ಆಟ, ಅವರ ಮಾತೇ ಶಾಸನ ಎಂಬಂತಾಗಿದೆ. ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಂಡು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಮಾಡಿಕೊಳ್ಳಲಾಗಿದೆ. ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಜಗತ್ತಿನ ಬೇರಾವ ದೇಶದ ಆಯುಕ್ತರಿಗೆ ಇಲ್ಲದ ಅಧಿಕಾರ ನೀಡಿ, ಹದಿಮೂರು ಕೋಟಿ ಜನರ ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿ-ಯುವಜನರನ್ನು ಎಳೆದೊಯ್ದು ಪೊಲೀಸ್‌ ವ್ಯಾನ್‌ನಲ್ಲಿ ತುಂಬುತ್ತಿದ್ದಾರೆ. ದೇಶದ ರಾಜಧಾನಿಯನ್ನು ಜೈಲಾಗಿ ಪರಿವರ್ತಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ದೇಶವೇ?

ದೇಶದಲ್ಲಿ ನಡೆಯುತ್ತಿರುವ ಈ ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆಗಳನ್ನು ದಿ ನ್ಯೂಯಾರ್ಕ್‌ ಟೈಮ್ಸ್‌, ದಿ ಗಾರ್ಡಿಯನ್‌, ಫೈನಾನ್ಸಿಯಲ್‌ ಟೈಮ್ಸ್‌…ಹೀಗೆ ಜಗತ್ತಿನ ಅನೇಕ ಪ್ರಸಿದ್ಧ ಪತ್ರಿಕೆಗಳು ಎಳೆಎಳೆಯಾಗಿ ಬಿಚ್ಚಿಟ್ಟಿವೆ. ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ತಮ್ಮ ಕುರ್ಚಿಗಾಗಿ ಮೋದಿ-ಶಾ ಜೋಡಿ ಭಾರತದ ಮಾನ ಮಣ್ಣುಪಾಲು ಮಾಡುತ್ತಿದ್ದಾರೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಕನ್ನೇರಿ ಶ್ರೀಗಳ ಮಾತುಗಳಲ್ಲಿನ ಸತ್ಯವನ್ನು ಹುಡುಕುತ್ತಾ….

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
3 min read

ʻಬಸವಾದಿ ಶರಣರ ಹಿಂದೂ ಸಮಾವೇಶʼದ ರಥ ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಹೊರಟು, ಈಗ ಕಲಬುರ್ಗಿ ಜಿಲ್ಲೆಯಲ್ಲಿ ಬಂದು ನಿಂತಿದೆ. ಮಹಾರಾಷ್ಟ್ರದ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಈ ಸಮಾವೇಶಗಳಲ್ಲಿ ಪುಂಖಾನುಪುಂಖವಾಗಿ ಆಡಿದ ಮಾತುಗಳು ವಿವಾದಕ್ಕೀಡಾಗಿ ಭಿನ್ನ ರೂಪ, ಬಣ್ಣ, ವಾಸನೆಗಳನ್ನು ಪಡೆದು ಕನ್ನೇರಿ ಶ್ರೀಗಳಿಗಿದ್ದ ಅಷ್ಟೋ ಇಷ್ಟೋ ಗೌರವವೂ ಮೂರಾಬಟ್ಟೆಯಾಗಿದೆ.

ಸಾರ್ವಜನಿಕವಾಗಿ ತಿರುಗೇಟು ನೀಡಬೇಕಾದ ಲಿಂಗಾಯತ ಮಠಾಧೀಶರು ಕಾನೂನಿನ ಬಸ್‌ ಹತ್ತಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕನ್ನೇರಿ ಶ್ರೀಗಳ ಮಾನಕ್ಕೆ ಒಂದು ರೂಪಾಯಿಯೋ ಅಥವಾ ಎರಡು ರೂಪಾಯಿಯೋ ಬೆಲೆ ಕಟ್ಟದೆ, ಒಂದು ಕೋಟಿ ರೂಪಾಯಿ ಬೆಲೆ ಕಟ್ಟಿ ಅದರಲ್ಲೂ ಉದಾರತೆ ತೋರಿಸಿದ್ದಾರೆ ಎಂದು ಎನ್ನುವವರು ಇದ್ದಾರೆ.  ಆದರೆ ಕನ್ನೇರಿ ‍ಶ್ರೀಗಳು ಮಾತ್ರ ಲಿಂಗಾಯತ ಸ್ವಾಮಿಗಳ ಮಾನ ಬೀದಿಯಲ್ಲಿ ಹರಾಜು ಹಾಕುವ ಕಾಯಕ ಮುಂದುವರಿಸಿದ್ದಾರೆ. ಸತ್ಯ ಹೊಸ್ತಿಲು ದಾಟುವಷ್ಟರಲ್ಲಿ, ಅವರಾಡುತ್ತಿರುವ ಸುಳ್ಳು ರಾಜ್ಯವೆಲ್ಲಾ ಸುತ್ತಾಡಿ ಬಂದಿರುತ್ತದೆ ಎಂಬ ಸತ್ಯ ಲಿಂಗಾಯತ ಸ್ವಾಮಿಗಳಿಗೆ ಯಾರು ಹೇಳಬೇಕು ಎಂದು ಎನ್ನುವವರೂ ಇದ್ದಾರೆ.

ಕನ್ನೇರಿ ಶ್ರೀಗಳು ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿರುವ ಲಿಂಗಾಯತ ಸ್ವಾಮಿಗಳ ಮೇಲೆ ಮಾತ್ರ ಯಾಕೆ ಮುಗಿಬಿದ್ದಿದ್ದಾರೆ? ಸುಳ್ಳಿನ ದಾಳಿ ಮಾಡಿ, ಸುಳ್ಳಿನಿಂದ ಲಿಂಗಾಯತ ಸ್ವಾಮಿಗಳನ್ನು ಕುಗ್ಗಿಸಲು ಅವರು ಯಾರಿಂದ ಸುಪಾರಿ ಪಡೆದಿದ್ದಾರೆ? ಈ ಸಮಾವೇಶಗಳಿಗೆ ಫಂಡಿಂಗ್‌ ಯಾರು ಮಾಡುತ್ತಿದ್ದಾರೆ?  ಬಿಜೆಪಿ ರಾಜಕಾರಣಿಗಳು ಯಾಕೆ ಈ ಸಮಾವೇಶಗಳು ಆಯೋಜಿಸುತ್ತಿದ್ದಾರೆ? ಇದರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿಗರು ಮಾತ್ರ ಯಾಕೆ ಭಾಗವಹಿಸುತ್ತಿದ್ದಾರೆ?  ಹಿಂದೆ ಜಂಗಮೇತರ ಮಠಾಧೀಶರನ್ನು ಸಂಘಟಿಸಲು ʻಸಹೃದಯಿ ಮಠಾಧೀಶರ ಸಂಘʼ ಕಟ್ಟಿದವರು, ಈಗ ಅವರೆದುರು ಮಂಡಿಯೂರಿದ್ದು ಯಾಕೆ? (ಅವರು ಯಾವ ಸಮಾಜದ ಸ್ವಾಮೀಜಿಗಳ ವಿರುದ್ಧ ಸಂಘಟನೆ ಕಟ್ಟಲು ಮುಂದಾಗಿದ್ದರೋ, ಇಂದು ಬಹುತೇಕ ಅದೇ ಸಮಾಜದ ಕಾವಿಧಾರಿಗಳು ಅವರ ಸಮಾವೇಶದ ವೇದಿಕೆಗಳಲ್ಲಿದ್ದರು), ಅವರನ್ನು ದೇಶದ ಉನ್ನತ ನ್ಯಾಯಾಲಯ ʻಒಳ್ಳೆಯ ಪ್ರಜೆಯಾಗಿʼ ಎಂದು ತಾಕೀತು ಮಾಡಿದ್ದು ಯಾಕೆ? ಕಲಬುರ್ಗಿ ಹೈಕೋರ್ಟ್   ಬಸವಕಲ್ಯಾಣದಲ್ಲಿ ಅವರು ಮಾತಾಡದಂತೆ ಅವರ ಬಾಯಿಗೆ ಬೀಗ ಹಾಕಿದ್ದು ಯಾಕೆ? ಅವರದ್ದೇ ಮಠದ ಕಾಣಸಿದ್ದೇಶ್ವರರು ತಮ್ಮ ವಚನಗಳಲ್ಲಿ ಮನುಷ್ಯ ಪ್ರೇಮ, ಸಹಬಾಳ್ವೆ, ಸೌಹಾರ್ದತೆಯನ್ನು ಸಾರಿ, ಅದರಂತೆ ಬಾಳಿ ಬದುಕಿದರು. ಈಗ ನೀವ್ಯಾಕೆ ಪುಡಿ ಕೋಮುವಾದಿಗಳಂತೆ ಮುಸ್ಲಿಂ ಸಮುದಾಯದ ಮೇಲೆ ಬೆಂಕಿ ಕಾರುತ್ತಿದ್ದಿರಿ?  ಕನ್ನೇರಿ ಶ್ರೀಗಳು ಉತ್ತರಿಸಬೇಕಾದ ಪ್ರಶ್ನೆಗಳು ಒಂದೆರಡಲ್ಲ.

ಲಿಂಗಾಯತ ಸ್ವಾಮಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಈಗ ಅವರೇ ಜನತಾ ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಯಾಗಿ ನಿಂತಿದ್ದಾರೆ. ಈಗ ಅವರ ಎದುರಿಗೆ ಎರಡು ಆಯ್ಕೆಗಳು ಇವೆ. ಒಂದು, ಲಿಂಗಾಯತ ಸ್ವಾಮೀಜಿಗಳ ಮೇಲೆ ಅವರು ಮಾಡಿದ ಆರೋಪಗಳಿಗೆ ಸಾಕ್ಷ್ಯಗಳನ್ನು ಬಹಿರಂಗಪಡಿಸುವುದು, ಇಲ್ಲವೇ ಸುಳ್ಳನ್ನು ಒಪ್ಪಿಕೊಳ್ಳುವುದು. ಸುಳ್ಳಿನ ಮೂಲಕ ಸತ್ಯಹರಿಶ್ಚಂದ್ರರಾಗಲು ಸಾಧ್ಯ ಇಲ್ಲ.

ಅವರಾಡುವ ಸುಳ್ಳು ಮಾತುಗಳನ್ನು ಕೇಳಿ, ಅವರನ್ನು ಸುಳ್ಳಿನ ಚಾಂಪಿಯನ್ ಅನ್ನಬೇಕೋ ಅಥವಾ ಸುಳ್ಳಿನ ಸಾಮ್ರಾಟ್‌ ಅನ್ನಬೇಕೋ ಎಂದು ಜನರಿಗೆ ಗೊಂದಲವಾಗುತ್ತಿದೆ. ಅವರ ಮಾತುಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಂದೂ ಸತ್ಯ ಸಿಗುವುದಿಲ್ಲ. ಅವರ ಹುಸಿ ಮಾತುಗಳು ಕೇಳಿ ʻಸುಳ್ಳುʼ ಸೋತು ಅವರ ಸ್ನೇಹ ಮಾಡಿದಂತಿದೆ.

ಸರ್ಕಾರದಿಂದ ಕಾನೂನುಬದ್ಧವಾಗಿ ಬೆಂಗಳೂರು ಹತ್ತಿರ ಜಮೀನು ಪಡೆದದ್ದು ಹಿಂದುಳಿದ ಸಮುದಾಯದ ಸ್ವಾಮೀಜಿಗಳು. ಆದರೆ, ಅವರು ಆರೋಪ ಮಾಡುತ್ತಿರುವುದು ಲಿಂಗಾಯತ ಸ್ವಾಮಿಗಳು ಬಸವ ಸಂಸ್ಕೃತಿ ಮಾಡಿ ಜಮೀನು ಪಡೆದಿದ್ದಾರೆ ಎಂದು.

ಹಿಂದೂ ಧರ್ಮವನ್ನು ವಿರೋಧಿಸುವ ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮದ ಕಾವಿ ಬಟ್ಟೆ ಧರಿಸಿದ್ದಾರೆ. ಅವರು ಕಾವಿ ಬಟ್ಟೆ ಧರಿಸಬಾರದೆಂದು ಫರ್ಮಾನು ಹೊರಡಿಸಿದ್ದಾರೆ (ಹಿಂದೂ ಒಂದು ಧರ್ಮ ಅಲ್ಲ ಎಂದು ದೇಶದ ಸುಪ್ರೀಂ ಕೋರ್ಟ್‌ ಹೇಳಿದೆ. ಸಾಕ್ಷಾತ್‌ ಪ್ರಧಾನಿ ಮೋದಿ ಅವರೂ ಹೇಳಿದ್ದಾರೆ). ಆದರೆ, ಸ್ವತಃ ಅವರೇ ಧರಿಸುವ ಕಾವಿ ಬಟ್ಟೆ ಮೂಲತಃ ಅವರು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮದ್ದಲ್ಲ. ಅದು ಬೌದ್ಧ ಬಿಕ್ಕುಗಳದ್ದು. ಶಂಕರಾಚಾರ್ಯರ ಕಾಲದಿಂದ ವೈದಿಕ ಸ್ವಾಮಿಗಳು ಕಾವಿ ಬಟ್ಟೆ ಧರಿಸಲು ಆರಂಭಿಸಿದ್ದಾರೆ. ಇತಿಹಾಸದ ಪುಟಗಳ ಮೇಲೆ ಶ್ರೀಗಳು ಒಂದು ಸಲ ಕಣ್ಣಾಡಿಸಲಿ.

ʻಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ’ ಎಂದು ಬೊಬ್ಬಿಡುತ್ತಾ ಮತ್ತೊಂದು ಸುಳ್ಳು ಉದರಿಸಿದ್ದಾರೆ. ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧ ಮಾಡುವುದಿಲ್ಲ. ಲಿಂಗಾಯತ ತತ್ವವನ್ನು ಅವರ ಧರ್ಮದ ಜನರಿಗೆ ಹೇಳುತ್ತಾರೆ.  ಈ ನೆಲದಲ್ಲಿ ಹುಟ್ಟಿದ್ದ ಬೌದ್ಧ, ಸಿಖ್ ಜೈನ ಧರ್ಮದ ಪ್ರಸಾರಕರು ಹೇಗೆ ತಮ್ಮ ಧರ್ಮ ಪ್ರಸಾರ ಮಾಡುತ್ತಾರೋ ಹಾಗೇ ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ಪ್ರಸಾರ ಮಾಡುತ್ತಿದ್ದಾರೆ. ಈ ದೇಶದ ಸಂವಿಧಾನ ತಮ್ಮ ಧರ್ಮದ ಪ್ರಸಾರ ಮಾಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ನೀಡಿದೆ ಎಂಬ ಅರಿವು ಅವರಿಗಿಲ್ಲವೇ?

ʻಲಿಂಗಾಯತ ಮಠಗಳಲ್ಲಿ ದಾಸೋಹ ಇರುವುದಿಲ್ಲʼ. ʻಲಿಂಗಾಯತ ಸ್ವಾಮಿಗಳು ಕಾಯಕ ಮಾಡುವುದಿಲ್ಲʻ ಎಂದು ಅವರಾಡಿದ ಮಾತುಗಳು ಕೇಳಿ ಸಮಾವೇಶಗಳಲ್ಲಿ ಭಾಗವಹಿಸಿದ ಜನರೇ ಹೊರಬಂದು ನಗುತ್ತಿದ್ದರು.

ಮೆದುಳಿಲ್ಲದ ಹಾಗೂ ಹತಾಶನಾದ ಒಬ್ಬ ವ್ಯಕ್ತಿ ಮಾತ್ರ ವೈಯಕ್ತಿಕ ತೇಜೋವಧೆಗೆ ಮುಂದಾಗುತ್ತಾನೆ ಎಂಬ ಪ್ರಸಿದ್ಧ ಮಾತಿದೆ. ಗದಗಿನ ಈಗಿನ ತೋಂಟದಾರ್ಯ ಸ್ವಾಮೀಜಿಗಳಿಂದ ಹಿಡಿದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳವರೆಗೆ ಅವರ ವಿರುದ್ಧ ತಳಬುಡವಿಲ್ಲದ ಆರೋಪ ಮಾಡುತ್ತಿರುವ ಕನ್ನೇರಿ ಸ್ವಾಮೀಜಿ ಹತಾಶರಾಗಿ ಹೀಗೆ ಮಾತಾಡುತ್ತಿರಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಅವರಿಗೆ ಲಿಂಗಾಯತ ತತ್ವದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಒಂದಿನಿತೂ ಗೊತ್ತಿಲ್ಲ. ಅವರೊಬ್ಬ ಖಾಲಿ ತಲೆಯ ಸ್ವಾಮೀಜಿ ಎಂದು ಅವರಾಡುತ್ತಿರುವ ಮಾತುಗಳೇ ಹೇಳುತ್ತಿವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್