ನಿನ್ನೆ (ಶುಕ್ರವಾರ) ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಸಿಜೆಪಿ (ಕಾಕ್ರೋಜ್ ಜನತಾ ಪಕ್ಷ) ಹೋರಾಟಕ್ಕೆ ಸಿಕ್ಕ ಜನಬೆಂಬಲ ಕಂಡು ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಎಸಿ ರೂಮಿನಲ್ಲಿ ಬೆವತ್ತಿರಬೇಕು.
ಶತಾಯಗತಾಯ ಜೆನ್-ಝೀಗಳ ದನಿ ಅಡಗಿಸಬೇಕೆಂದು ಕೇಂದ್ರ ಸರ್ಕಾರ ಶಪಥ ಮಾಡಿದಂತೆ ಜಂತರ್-ಮಂತರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ಆಟೋ – ಬಸ್ – ಟ್ಯಾಕ್ಸಿ ಓಡಾಟ ನಿರ್ಬಂಧಿಸಿದರು. ಸಮೀಪದ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನದ ಬಾಗಿಲುಗಳು ಬೆಳಿಗ್ಗೆಯೇ ಮುಚ್ಚಿಸಿದರು. ಇಂಟರ್‌ನೆಟ್ ಸಂಪರ್ಕ ಕಡಿತವಾಗಿತ್ತು.
ಪೂರ್ವಯೋಜಿತವಾಗಿ ಎಷ್ಟೇ ತಾಲೀಮು ನಡೆಸಿದರೂ ಸಾವಿರಾರು ಜನರು ಸೇರಿದರು. ರಾತ್ರಿಯಾದರೂ ಇನ್ನೂ ಬರುತ್ತಲೇ ಇದ್ದರು. ಜನರನ್ನು ಪೊಲೀಸರು ಬಲವಂತವಾಗಿ ವಾಹನದಲ್ಲಿ ಕುರಿಗಳಂತೆ ತುಂಬುತ್ತಿದ್ದರು {ಶಾಂತಿಯುತವಾಗಿ ಹೋರಾಟ ಮಾಡುವುದು ಪ್ರಜೆಗಳ ಹಕ್ಕು ಎಂದು ಹೇಳಿದ ಸುಪ್ರೀಂ ಕೋರ್ಟ್ ಆದೇಶವನ್ನು ದೆಹಲಿ ಪೊಲೀಸರು ಕಾಲಕಸ ಮಾಡಿದರು]. ಈ ಕೃತ್ಯ ಮತ್ತಷ್ಟು ಜನರನ್ನು ಹೋರಾಟಕ್ಕೆ ಎಳೆದು ತಂದಿತ್ತು.
ಮುಂಬೈ ಶಿವಾಜಿ ಪಾರ್ಕ್ ತುಂಬಾ ವಿಶಾಲವಾಗಿದೆ. ಸಿಜೆಪಿ ಮುಂದಾಳುಗಳು ಕಾಲುಮೇಲೆ, ತಲೆಕೆಳಗೆ ಮಾಡಿ ಸರ್ಕಸ್ ಮಾಡಿದರೂ ಪಾರ್ಕ್ ತುಂಬುವುದಿಲ್ಲ. ಐದಾರು ಸಾವಿರ ಜನರು ಬರಬಹುದು ಎಂದು ಲೆಕ್ಕಹಾಕಿ, ದನಿಯನ್ನು ಅಡಗಿಸಲು ಮಹಾರಾಷ್ಟ್ರ ಸರ್ಕಾರ ಪೊಲೀಸರಿಗೆ ರೆಡಿ ಮಾಡಿ ನಿಲ್ಲಿಸಿತ್ತು. ಆದರೆ, ಜೆನ್-ಝೀಗಳು ಸರ್ಕಾರದ ಲೆಕ್ಕ ತಲೆಕೆಳಗಾಗಿಸಿ, ಹತ್ತು ಪಟ್ಟು ಹರಿದು ಬಂದರು. ಎಲ್ಲಿ ನೋಡಿದರಲ್ಲಿ ಜನ. ಜನಸಾಗರ ಕಂಡು ಪೊಲೀಸರು ದಂಗಾಗಿ ನಿಂತರು. ಲಾಠಿ ಬೀಸುವುದು ದೂರವೇ ಉಳಿಯಿತು, ಉಸಿರು ಬಿಡಲು ಅಸಹಾಯಕರಾದರು. ದೇಶದ ಎರಡು ಪ್ರಮುಖ ನಗರಗಳಲ್ಲಿ ʻಜ್ಞಾನೇಶ್ ಹಟಾವೋʼ ಕೂಗು ಮುಗಿಲು ಮುಟ್ಟಿತ್ತು.
ಅರ್ಧ ರಾತ್ರಿಯಲ್ಲಿ ಎದ್ದು ಜೆನ್ – ಝೀಗಳಿಗೆ ʻಹಲೋ ಫ್ರೆಂಡ್ಸ್ʼ ಎಂದು ಸಂಬೋಧಿಸಿದ ಪ್ರಧಾನಿ ಮೋದಿಯವರು ಇದುವರೆಗೂ ಒಂದು ಪ್ರತಿಕ್ರಿಯೆ ನೀಡಿಲ್ಲ. ಸಿಜೆಪಿ ಪಕ್ಷದ ಮುಂದಾಳುಗಳು ಅಕ್ಟೋಬರ್ 10ಕ್ಕೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರ್ಣಾಯಕ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಈ ಹೋರಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ದೇಶದಲ್ಲಿ ಈಗ ಜೆನ್-ಝೀಗಳು ಮಾತ್ರ ಗ್ಯಾನೇಶ್ ಕುಮಾರ್ ಅವರ ಹಣೆಬರಹ ಬರೆಯಬಹುದು. ವಿರೋಧ ಪಕ್ಷಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಕ್ಯಾರೇ ಎನ್ನುವುದಿಲ್ಲ.
ಆಯೋಗದ ಬಂಡವಾಳವನ್ನು ತನಿಖಾ ವರದಿ ಬಯಲು ಮಾಡಿದ ಮೇಲೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಪಿಕಲಾಟ ಶುರುವಾಗಿದೆ. ಜೆನ್-ಝೀಗಳು ಮತ್ತೆ ಬೀದಿಗೆ ಬಂದದ್ದು ಅವರನ್ನು ಚಿಂತೆಗೆ ದೂಡಿದೆ. ಅವರು ಕೇವಲ ರಾಜೀನಾಮೆ ಮಾತ್ರ ಕೇಳುತ್ತಿಲ್ಲ. ಮುಖ್ಯ ಆಯುಕ್ತರನ್ನು ಆಯ್ಕೆ ಮಾಡುವ ವಿಧಾನವೂ ಬದಲಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೋರಾಟ ತೀವ್ರಗೊಂಡರೆ ಸಂಘಪರಿವಾರ ಮೋದಿಯವರ ಕಿವಿ ಹಿಂಡಬಹುದು. ಆಗ ಒತ್ತಡಕ್ಕೆ ಸಿಲುಕಿ ಮೋದಿಯವರು ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಯೂ ಪಡೆಯಬಹುದು.
ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಆಯೋಗದ ಮುಖ್ಯ ಆಯುಕ್ತರನ್ನು ಕುರ್ಚಿಯಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಹತ್ತಾರು ತೊಡಕುಗಳಿವೆ. ಆಯುಕ್ತರನ್ನು ರಕ್ಷಿಸಲೆಂದೇ 2023ರಲ್ಲಿ ಜಾರಿಗೆ ತಂದ ಕಾಯಿದೆಯ ಬಲವಿದೆ. ಸಂಸದೀಯ ಮಾರ್ಗದ ಮೂಲಕ ಅವರನ್ನು ತೆಗೆಯಲು ಇಂಡಿಯಾ ಕೂಟದ ಬಳಿ ಸಂಖ್ಯಾಬಲವಾದರೂ ಎಲ್ಲಿದೆ?
ಅವರನ್ನು ಕುರ್ಚಿಯಿಂದ ಖಾಲಿ ಮಾಡಿಸಲು ಎರಡೇ ದಾರಿಗಳಿವೆ. ಮೊದಲನೆಯದು, ಅವರಾಗಿಯೇ ರಾಜೀನಾಮೆ ನೀಡುವುದು (ಇದರ ಸಾಧ್ಯತೆ ಕಡಿಮೆ ಇದೆ) ಎರಡನೆಯದು, ಪ್ರಧಾನಿ ಮೋದಿಯವರು ಜೆನ್-ಝೀ ಹೋರಾಟಕ್ಕೆ ತಲೆಬಾಗಿ ಅವರಿಂದ ರಾಜೀನಾಮೆ ಪಡೆಯುವುದು. ಈ ಎರಡು ಮಾರ್ಗಗಳು ಬಿಟ್ಟರೆ ಬೇರಾವ ಮಾರ್ಗವೂ ಇಲ್ಲ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳುತ್ತಿರುವ ಮೂರನೆಯ ಮಾರ್ಗ [ಸಂಸದೀಯ ಮಾರ್ಗ] ಅದೊಂದು ವ್ಯರ್ಥ ಪ್ರಲಾಪ ಅಷ್ಟೇ.
ಕೆಪಿಎಸ್‌ಸಿ ಹಗರಣ: ಹೈಕೋರ್ಟ್ ಎಸ್‌ಐಟಿಗೆ ಸರ್ಕಾರದ ಭಯವೇ?

ಕೆಪಿಎಸ್‌ಸಿ ಹಗರಣದ ತನಿಖೆಗಾಗಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ. ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸರ್ಕಾರದ ಎಸ್‌ಐಟಿಗೆ ಹೈಕೋರ್ಟ್ ಪೂರ್ಣವಿರಾಮ ಹಾಕಿ, ಹೊಸ ಎಸ್‌ಐಟಿ ರಚಿಸಿತ್ತು. ಈಗ ಸರ್ಕಾರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ತಂದಿದೆ. ಸರ್ಕಾರದ ಈ ಆಸಕ್ತಿ ತರಹೇವಾರಿ ಪ್ರಶ್ನೆ ಹುಟ್ಟುಹಾಕಿದೆ.
ಸರ್ಕಾರ ರಚಿಸುವ ಬಹುತೇಕ ಎಸ್‌ಐಟಿಗಳು ಆಡಳಿತಾರೂಢ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತವೆ ಎಂಬ ಆರೋಪ ಇದೆ. ಅವು ನ್ಯಾಯಯುತವಾಗಿ ಕೆಲಸ ಮಾಡುತ್ತವೆ ಇಲ್ಲವೇ ಪ್ರಕರಣವನ್ನು ತಳವಿಲ್ಲದ ಬಾವಿಯಲ್ಲಿ ಮುಳುಗಿಸುತ್ತವೆ. ಸರ್ಕಾರದ ಇರಾದೆ ಏನಿದೆ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ ಎಂಬ ವಾದ ಜನಜನಿತವಾಗಿದೆ.
ಈ ಪ್ರಕರಣದಲ್ಲಿ ಎಸ್‌ಐಟಿ ಕಲೆಹಾಕುವ ಸಾಕ್ಷ್ಯ – ಸಾಕ್ಷಿಗಳೇ ಸರ್ಕಾರದ ಈ ನಡೆಯ ಹಿಂದೆ ಪ್ರಾಮಾಣಿಕತೆ ಇದೆಯೋ ಅಥವಾ ಯಾರನ್ನೋ ಉಳಿಸುವ ಇರಾದೆ ಇದೆಯೋ ಎಂಬುವುದನ್ನು ಹೇಳುತ್ತವೆ. ಈ ವರದಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವೂ ನಿರ್ಧರಿಸುತ್ತದೆ.
ಚುನಾವಣಾ ಆಯೋಗ ರಾಜ್ಯ ಸರ್ಕಾರದ ʻಧರಣಿʼಗೆ ಮಣಿದಿದೆಯೇ?

ಯಾರದೋ ಹೆಸರನ್ನು ಇನ್ನಾರೋ ಡಿಲೀಟ್ ಮಾಡಿಸಲು ಚುನಾವಣಾ ಆಯೋಗ ಅವಕಾಶ ನೀಡಿದ್ದೇ ಸರಿಯಲ್ಲ. ಆಯೋಗ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಮೋದಿ – ಶಾ ಹೇಳಿದ್ದನ್ನು ಮಾತ್ರ ಜಾರಿಗೆ ತರುತ್ತಿದೆ. ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಬಿಜೆಪಿ ಏಜೆಂಟ್ ಆಗಿದ್ದಾರೆ… ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಕೈಗೆ ತನಗೆ ಗೊತ್ತಿಲ್ಲದೆ ಆಯೋಗ ʻಫಾರಂ ೭ʼ ಎಂಬ ಸಾಕ್ಷ್ಯ ಒದಗಿಸಿದೆ. ರಾಜ್ಯದ ಬಬಲೇಶ್ವರ, ಭಾಲ್ಕಿ, ಬೆಳಗಾವಿ…ಹೀಗೆ ಅನೇಕ ಮತಕ್ಷೇತ್ರಗಳಲ್ಲಿ ಈ ಅರ್ಜಿ ಬಳಸಿಕೊಂಡು ಬಿಜೆಪಿ ವಿರುದ್ಧ ಮತ ಹಾಕಬಹುದಾದ ಸಮುದಾಯದ ಮತಗಳನ್ನು ಡಿಲೀಟ್ ಮಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರು ಯತ್ನಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಸಿಎಂ ಡಿಕೆಶಿ ಅವರು ʻರಾಜ್ಯದ ಒಬ್ಬ ಅರ್ಹ ಮತದಾರನ ಹೆಸರನ್ನು ನಮ್ಮ ಸರ್ಕಾರ ಡಿಲೀಟ್ ಆಗಲು ಬಿಡುವುದಿಲ್ಲʼ ಎಂದು ವೀರಾವೇಶದಿಂದ ಪುಂಖಾನುಪುಂಖವಾಗಿ ಹೇಳಿದರು. ಆಯೋಗ ರಾಜ್ಯದಲ್ಲಿ ಸುಮಾರು 1.7 ಕೋಟಿ ಮತದಾರರ ಹೆಸರು ತೆಗೆದುಹಾಕಿದೆ. 35 ಸಾವಿರ ಮತದಾರರಿಗೆ ನೋಟಿಸ್ ನೀಡಿದೆ. ಹೀಗಿದ್ದರೂ ಸಿಎಂ ಈ ಕಡೆಗೆ ತಿರುಗಿಯೂ ನೋಡಿಲ್ಲ. ಅಶಕ್ತ ಸಮುದಾಯದ ಮತದಾನದ ಹಕ್ಕು ಉಳಿಸಲು ಕಾಂಗ್ರೆಸ್ ಸರ್ಕಾರದ ಸಶಕ್ತ ಸಿಎಂ, ಘಟಾನುಘಟಿ ಮಂತ್ರಿಗಳು ಹಾಗೂ ಪಕ್ಷದ ಬಿಎಲ್‌ಎಗಳು ರಾಜ್ಯದಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ಡಿಲೀಟ್ ಆಗಿರುವ ಮತದಾರರ ಸಂಖ್ಯೆಯೇ ಹೇಳುತ್ತಿದೆ.
ಈಗ ದೆಹಲಿಯ ಅವರ ದೊರೆಗಳು ತಾಕೀತು ಮಾಡಿರುವುದರಿಂದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕೂತಿದ್ದಾರೆ. ಇದರಿಂದಾಗಿ ರಾಜ್ಯದ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಆಯೋಗ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಈ ಕೆಲಸ ರಾಜ್ಯ ಸರ್ಕಾರ ಎಂದೋ ಮಾಡಬೇಕಿತ್ತು. ಈಗ ಮಾಡಿದೆ. ಆಯೋಗ ನೀಡಿದ ಸೂಚನೆಗಳು ಬರೀ ಸೂಚನೆಗಳಾಗಿ ಕಾಗದದಲ್ಲಿ ಉಳಿಯುತ್ತದೋ ಅಥವಾ ಜಾರಿಗೆ ತರುತ್ತದೋ? ಗೊತ್ತಿಲ್ಲ.
ಆದರೆ, ಡಿಕೆಶಿ ಮಾತ್ರ ನಮ್ಮ ಹೋರಾಟಕ್ಕೆ ಆಯೋಗ ಮಣಿದಿದೆ ಎಂದು ಘೋಷಿಸಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ಹೆಸರು ಅಳಿಸಿಹೋದ ಹಾಗೂ ನೋಟಿಸ್ ಸ್ವೀಕರಿಸಿದ ಮತದಾರರ ಗತಿ ಏನು? ಇದಕ್ಕೆ ಯಾರು ಹೊಣೆ ಮುಖ್ಯಮಂತ್ರಿಗಳೇ?
ಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕಾ?

ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆಯಾಗಿ ಹತ್ತು ವರ್ಷವಾಯಿತು. ಹತ್ತು ವರ್ಷಗಳಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ದೂರು, ಕೇಸ್ ದಾಖಲು, ರಾಜಕೀಯ ಆರೋಪ – ಪ್ರತ್ಯಾರೋಪ, ಸಿಬಿಐ ಎಂಟ್ರಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾನೂನು ಹೋರಾಟ, ಕಾಂಗ್ರೆಸ್ ಶಾಸಕ ವಿನಯ್ ಕುಲಕುರ್ಣಿ ಸೇರಿದಂತೆ ಹದಿನಾರು ಜನರಿಗೆ ಜೀವಾವಧಿ ಶಿಕ್ಷೆ, ಹೈಕೋರ್ಟ್ ತಡೆ ನೀಡಿ, ಉಸಿರಾಡಲು ಜಾಮೀನು ಮಂಜೂರು ಮಾಡಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿದ್ದು…ಹೀಗೆ ಸಿನಿಮೀಯ ರೀತಿಯಲ್ಲಿ ಸಾಲುಸಾಲು ಬೆಳವಣಿಗೆಗಳು ಈ ಪ್ರಕರಣದಲ್ಲಿ ನಡೆದಿವೆ.
ಈಗ ಇದು ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ. ಇಂದು ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ʻಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕಾʼ ಎಂದು ಖಾರವಾಗಿ ಪ್ರಶ್ನಿಸಿದೆ. ಮುಂದುವರಿದು ʻಇಂದು ಕೊಲೆಯಾದವರಿದ್ದರೆ, ನಾಳೆ ದರೋಡೆ ಮಾಡಿದವರೂ ಬರುತ್ತಾರೆʼ ಎಂದು ಅಸಮಾಧಾನ ಹೊರ ಹಾಕಿ, ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಲಯದ ಇಂದಿನ ಮಾತುಗಳು ವಿನಯ್ ಕುಲಕರ್ಣಿ ಮತ್ತೆ ಶ್ರೀಕೃಷ್ಣ ಜನಿಸಿದ ಜಾಗಕ್ಕೆ (ಜೈಲಿಗೆ) ಹೋಗುವ ಸಾಧ್ಯತೆ ದಟ್ಟವಾಗಿಸಿದೆ. ಇದರಿಂದಾಗಿ ಅವರ ರಾಜಕೀಯ ಬದುಕಿಗೆ ಪೂರ್ಣವಿರಾಮ ಬೀಳಬಹುದು. ವಿನಯ್ ಕುಲಕುರ್ಣಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಎತ್ತುಹಿಡಿಯುತ್ತದೋ ಅಥವಾ ಜೀವದಾನ ಮಾಡುತ್ತದೋ ಎಂದು ಎಲ್ಲರ ಕಣ್ಣು ಈಗ ಸುಪ್ರೀಂ ಕೋರ್ಟ್ ಕಡೆಗಿವೆ.
ರಾಹುಲ್‌ಗೆ ಬಿ.ಆರ್. ಪಾಟೀಲ್ ಪತ್ರ: ಉದ್ದೇಶವೇನು?

ಕಾಂಗ್ರೆಸ್ ಪಕ್ಷದ ವರಿಷ್ಠ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಬರೆದ ಪತ್ರ ಅವರ ಪಕ್ಷದಲ್ಲಿ ತರಹೇವಾರಿ ಚರ್ಚೆ ಹುಟ್ಟು ಹಾಕಿದೆ.
ಪಾಟೀಲರು ಪಕ್ಷದ ಅತ್ಯಂತ ಹಿರಿಯ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪ್ತ ಸ್ನೇಹಿತರು. ಆದಾಗ್ಯೂ ಪಕ್ಷ ಅವರಿಗೆ ಒಮ್ಮೆಯೂ ಮಂತ್ರಿ ಮಾಡಿಲ್ಲ. ಅವರದ್ದೇ ಜಿಲ್ಲೆಯ ಶರಣಪ್ರಕಾಶ್ ಪಾಟೀಲರು ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಲಿಂಗಾಯತ ಕೋಟಾದಲ್ಲಿ ಮಂತ್ರಿಯಾಗುತ್ತಿದ್ದಾರೆ. ಇದರಿಂದಾಗಿ ಕೋಪಗೊಂಡಿರುವ ಅವರು ಆಗಾಗ ಪಕ್ಷ ಹಾಗೂ ಸರ್ಕಾರವನ್ನು ಬೆತ್ತಲೆ ಮಾಡುತ್ತಿದ್ದಾರೆ ಎಂದು ಎನ್ನುವವರಿದ್ದಾರೆ.
ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ದೇಶದಲ್ಲಿ ಎಲ್ಲಾದರೂ ರೈತಪರ ಹೋರಾಟ ನಡೆಯುತ್ತಿದ್ದರೆ ಈ ವಯಸ್ಸಿನಲ್ಲೂ ಭಾಗವಹಿಸುತ್ತಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಜಾಯಮಾನ ಅವರದಲ್ಲ ಎಂದೂ ಎನ್ನುವವರಿದ್ದಾರೆ.
ಅದೇನೇ ಇರಲಿ. 2020ರಲ್ಲಿ ಅಂದಿನ ಬಿಜೆಪಿ ಸರ್ಕಾರ ʻಕರ್ನಾಟಕ ಭೂ ಸುಧಾರಣಾ ಕಾಯಿದೆʼಗೆ ತಿದ್ದುಪಡಿ ಮಾಡಿದ್ದು ರೈತರಿಗೆ ಕಂಟಕವಾಗಿದೆ. ಇದರಿಂದಾಗಿ ರೈತರ 19.92 ಲಕ್ಷ ಎಕರೆ ಕೃಷಿ ಭೂಮಿ ಉದ್ಯಮಿಗಳ ಪಾಲಾಗಿದೆ. ಈಗ ರಾಜ್ಯದಲ್ಲಿ ಯಾರು ಬೇಕಾದರೂ ಎಷ್ಟಾದರೂ ಜಮೀನು ಖರೀದಿಸಬಹುದಾಗಿದೆ. ಸರ್ಕಾರದ ಅವಕೃಪೆಯಿಂದಾಗಿ ಸದಾ ಸಾಲದಲ್ಲಿಯೇ ಇರುವ ರೈತರಿಂದ ಜಮೀನು ಖರೀದಿಸಲು ಉದ್ಯಮಿಗಳಿಗೆ ವರವಾಗಿದೆ. ಈ ತಿದ್ದುಪಡಿ ಕಾಯಿದೆ ಸರ್ಕಾರ ಹಿಂಪಡೆಯದಿದ್ದರೆ ರಾಜ್ಯದ ರೈತರ ಜಮೀನು ಕೆಲವೇ ಕೆಲವು ಉದ್ಯಮಿಗಳ, ರಾಜಕಾರಣಿಗಳ, ದೊಡ್ಡ ದೊಡ್ಡ ಅಧಿಕಾರಿಗಳ ಪಾಲಾಗುತ್ತದೆ. ಇದರಿಂದಾಗಿ ಬಹುತೇಕ ರೈತರು ಮತ್ತೆ ಭೂಹೀನರಾಗುತ್ತಾರೆ. ರಾಜ್ಯದ ಆಹಾರ ಭದ್ರತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಕಾಂಗ್ರೆಸ್ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಈ ರೈತ ವಿರೋಧಿ ತಿದ್ದುಪಡಿ ಕಾಯಿದೆ ಹಿಂಪಡೆಯುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಸರ್ಕಾರದಲ್ಲಿ ಇದುವರೆಗೂ ಇದರ ಬಗ್ಗೆ ಒಂದು ಸಣ್ಣ ಚರ್ಚೆಯೂ ನಡೆದಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ʻಬಜೆಟ್‌ನಲ್ಲಿ ತಿದ್ದುಪಡಿ ಕಾಯಿದೆ ಹಿಂಪಡೆಯುವ ವಿಷಯ ಸೇರಿಸಿದೆ, ಮರುದಿನ ಬಜೆಟ್‌ನಿಂದ ಆ ವಿಷಯ ಮಾಯವಾಗಿದೆʼ ಎಂದಿರುವ ಪಾಟೀಲರ ಮಾತು, ಸರ್ಕಾರದಲ್ಲಿ ರೈತವಿರೋಧಿ ಯಾವುದೋ ಒಂದು ಶಕ್ತಿ ಲಾಬಿ ಮಾಡುತ್ತಿದೆ ಎಂಬುದು ಸ್ಪಷ್ಟಪಡಿಸುತ್ತದೆ.
ಇದನ್ನು ಕಂಡೇ ಅವರು ಪಕ್ಷದ ನಾಯಕ ರಾಹುಲ್ ಗಾಂಧಿಗೆ ತಾವು ಮಧ್ಯಪ್ರವೇಶ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರೈತಪರ ಕಾಳಜಿ ಇದೆ. ಕರ್ತವ್ಯದ ಅರಿವಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ನೀಡಿದ ಆಶ್ವಾಸನೆಯನ್ನು ಮರೆತಿರುವ ಸರ್ಕಾರಕ್ಕೆ ನೆನಪಿಸುವ ಜವಾಬ್ದಾರಿಯೂ ಇದೆ.
ಜೆನ್-ಝೀಗಳಿಗೆ ಪ್ರಧಾನಿ ಮೋದಿ ಮತ್ತೆ ತಲೆಬಾಗುವರೇ?

ಸಿಜೆಪಿ (ಕಾಕ್ರೋಜ್ ಜನತಾ ಪಾರ್ಟಿ), ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಗೆ 48 ಗಂಟೆಗಳೊಳಗೆ ರಾಜೀನಾಮೆ ನೀಡಬೇಕೆಂದು ಗಡುವು ನೀಡಿತ್ತು. ಮುಗಿದು ನಾಲ್ಕು ದಿನವಾಯಿತು. ಆಯುಕ್ತರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೋರಾಟದ ಮುಂದಾಳು ಅಭಿಜೀತ್ ದಿಪ್ಕೆ, ಸೌರವ್ ದಾಸ್, ಆಶುತೋಷ್ ರಾಕಾ, ರತ್ನಾ ಸಿಂಗ್….ಈ ಬಾರಿ ಗಾಂಧಿ ಜಯಂತಿಯಂದು (ಅ.2) ಮುಂಬೈಯಿಂದ ಹೋರಾಟ ಆರಂಭಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಜಂತರ್ ಮಂತರ್‌ನ ಜೆನ್-ಝೀ ಹೋರಾಟಕ್ಕೆ ಪ್ರಧಾನಿ ಮೋದಿ ತಲೆಬಾಗಿದರು. ಅದೇ ಮೊದಲ ಸಲ ಮೋದಿ ತಮ್ಮ ಸಚಿವರೊಬ್ಬರ ರಾಜೀನಾಮೆ ಪಡೆದರು. ಮೋದಿ ಹಾಗೂ ಅಮಿತ್ ಶಾ ವಿರುದ್ಧ ಉಸಿರು ಬಿಡಲು ವಿರೋಧ ಪಕ್ಷಗಳು ಹೆದರುತ್ತಿದ್ದವು. ಈ ಹೋರಾಟದಿಂದಾಗಿ ಜನರೇ ಈಗ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಈಗ ಮತ್ತೆ ಆಯುಕ್ತರ ವಿರುದ್ಧ ರಣಕಹಳೆ ಊದಿದೆ. ಆಗ ದೇಶದ ಯುವಜನತೆ ಜಾತಿ, ಧರ್ಮ, ಭಾಷೆ, ಪ್ರದೇಶ, ಪಕ್ಷ ಭೇದ ಮರೆತು ಹೋರಾಟಕ್ಕೆ ಸಾಥ್ ನೀಡಿದರು. ಮೋದಿ ಯುವಶಕ್ತಿಗೆ ಹೆದರಿ ಸಚಿವರಿಂದ ರಾಜೀನಾಮೆ ಪಡೆದಿದ್ದರು. ಈಗ ಆಯುಕ್ತರಿಂದ ರಾಜೀನಾಮೆ ಪಡೆಯುವುದು ಒಬ್ಬ ಮಂತ್ರಿಯ ರಾಜೀನಾಮೆ ಪಡೆದಷ್ಟು ಸುಲಭವಲ್ಲ. ಅವರಿಗೆ ಸಾಂವಿಧಾನಿಕ ರಕ್ಷಣೆ ನೀಡಲಾಗಿದೆ. ಅವರಾಗಿ ಅವರೇ ರಾಜೀನಾಮೆ ನೀಡುವ ಮಾರ್ಗ ಸರಳವಾಗಿದೆ. ಆದರೆ, ಇಂದು ಅವರ ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಅವರು ಮಾತ್ರ ಬಾಯಿಬಿಡುತ್ತಿಲ್ಲ. ಇನ್ನೂ ರಾಜೀನಾಮೆ ನೀಡುತ್ತಾರೆಯೇ?
ಈ ಬಾರಿಯೂ ಮೋದಿ ಯುವಶಕ್ತಿಗೆ ತಲೆಬಾಗಿ ಇವರಿಂದಲೂ ರಾಜೀನಾಮೆ ಪಡೆಯುತ್ತಾರೆಯೇ, ಜೆನ್-ಝೀಗಳು ಎಲ್ಲಾ ಗೋಡೆಗಳನ್ನು ದಾಟಿ ಹೋರಾಟಕ್ಕೆ ಬರುತ್ತಾರೆಯೇ… ಎಂಬಿತ್ಯಾದಿ ಪ್ರಶ್ನೆಗಳಿಗೆ ಹೋರಾಟ ಆರಂಭವಾದಾಗಲೇ ಉತ್ತರ ಸಿಗಬಹುದು.

