SUBSCRIBE

ದ ಪಾಲಿಟಿಕ್

ಚುನಾವಣಾ ಆಯೋಗ ರಾಜ್ಯ ಸರ್ಕಾರದ ʻಧರಣಿʼಗೆ ಮಣಿದಿದೆಯೇ?

ಯಾರದೋ ಹೆಸರನ್ನು ಇನ್ನಾರೋ ಡಿಲೀಟ್‌ ಮಾಡಿಸಲು ಚುನಾವಣಾ ಆಯೋಗ ಅವಕಾಶ ನೀಡಿದ್ದೇ ಸರಿಯಲ್ಲ.  ಆಯೋಗ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಮೋದಿ – ಶಾ ಹೇಳಿದ್ದನ್ನು ಮಾತ್ರ ಜಾರಿಗೆ ತರುತ್ತಿದೆ. ಮುಖ್ಯ ಆಯುಕ್ತ ಗ್ಯಾನೇಶ್‌ ಕುಮಾರ್ ಬಿಜೆಪಿ ಏಜೆಂಟ್‌ ಆಗಿದ್ದಾರೆ… ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಕೈಗೆ ತನಗೆ ಗೊತ್ತಿಲ್ಲದೆ ಆಯೋಗ ʻಫಾರಂ ೭ʼ ಎಂಬ ಸಾಕ್ಷ್ಯ ಒದಗಿಸಿದೆ. ‌ರಾಜ್ಯದ ಬಬಲೇಶ್ವರ, ಭಾಲ್ಕಿ, ಬೆಳಗಾವಿ…ಹೀಗೆ ಅನೇಕ ಮತಕ್ಷೇತ್ರಗಳಲ್ಲಿ ಈ ಅರ್ಜಿ ಬಳಸಿಕೊಂಡು ಬಿಜೆಪಿ ವಿರುದ್ಧ ಮತ ಹಾಕಬಹುದಾದ ಸಮುದಾಯದ ಮತಗಳನ್ನು ಡಿಲೀಟ್‌ ಮಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರು ಯತ್ನಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಸಿಎಂ ಡಿಕೆಶಿ ಅವರು ʻರಾಜ್ಯದ ಒಬ್ಬ ಅರ್ಹ ಮತದಾರನ ಹೆಸರನ್ನು ನಮ್ಮ ಸರ್ಕಾರ ಡಿಲೀಟ್‌ ಆಗಲು ಬಿಡುವುದಿಲ್ಲʼ ಎಂದು ವೀರಾವೇಶದಿಂದ ಪುಂಖಾನುಪುಂಖವಾಗಿ ಹೇಳಿದರು. ಆಯೋಗ ರಾಜ್ಯದಲ್ಲಿ ಸುಮಾರು 1.7 ಕೋಟಿ ಮತದಾರರ ಹೆಸರು ತೆಗೆದುಹಾಕಿದೆ. 35 ಸಾವಿರ ಮತದಾರರಿಗೆ ನೋಟಿಸ್‌ ನೀಡಿದೆ.  ಹೀಗಿದ್ದರೂ ಸಿಎಂ ಈ ಕಡೆಗೆ ತಿರುಗಿಯೂ ನೋಡಿಲ್ಲ. ಅಶಕ್ತ ಸಮುದಾಯದ ಮತದಾನದ ಹಕ್ಕು ಉಳಿಸಲು  ಕಾಂಗ್ರೆಸ್‌ ಸರ್ಕಾರದ ಸಶಕ್ತ ಸಿಎಂ, ಘಟಾನುಘಟಿ ಮಂತ್ರಿಗಳು ಹಾಗೂ ಪಕ್ಷದ  ಬಿಎಲ್‌ಎಗಳು ರಾಜ್ಯದಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ಡಿಲೀಟ್‌ ಆಗಿರುವ ಮತದಾರರ ಸಂಖ್ಯೆಯೇ ಹೇಳುತ್ತಿದೆ.

ಈಗ ದೆಹಲಿಯ ಅವರ ದೊರೆಗಳು ತಾಕೀತು ಮಾಡಿರುವುದರಿಂದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕೂತಿದ್ದಾರೆ. ಇದರಿಂದಾಗಿ ರಾಜ್ಯದ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಆಯೋಗ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಈ ಕೆಲಸ ರಾಜ್ಯ ಸರ್ಕಾರ ಎಂದೋ ಮಾಡಬೇಕಿತ್ತು. ಈಗ ಮಾಡಿದೆ. ಆಯೋಗ ನೀಡಿದ ಸೂಚನೆಗಳು ಬರೀ ಸೂಚನೆಗಳಾಗಿ ಕಾಗದದಲ್ಲಿ ಉಳಿಯುತ್ತದೋ ಅಥವಾ ಜಾರಿಗೆ ತರುತ್ತದೋ? ಗೊತ್ತಿಲ್ಲ.

ಆದರೆ, ಡಿಕೆಶಿ ಮಾತ್ರ ನಮ್ಮ ಹೋರಾಟಕ್ಕೆ ಆಯೋಗ ಮಣಿದಿದೆ ಎಂದು ಘೋಷಿಸಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ಹೆಸರು ಅಳಿಸಿಹೋದ ಹಾಗೂ ನೋಟಿಸ್‌ ಸ್ವೀಕರಿಸಿದ ಮತದಾರರ ಗತಿ ಏನು? ಇದಕ್ಕೆ ಯಾರು ಹೊಣೆ ಮುಖ್ಯಮಂತ್ರಿಗಳೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕಾ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆಯಾಗಿ ಹತ್ತು ವರ್ಷವಾಯಿತು. ಹತ್ತು ವರ್ಷಗಳಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ದೂರು, ಕೇಸ್‌ ದಾಖಲು, ರಾಜಕೀಯ ಆರೋಪ – ಪ್ರತ್ಯಾರೋಪ, ಸಿಬಿಐ ಎಂಟ್ರಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾನೂನು ಹೋರಾಟ, ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕುರ್ಣಿ ಸೇರಿದಂತೆ ಹದಿನಾರು ಜನರಿಗೆ ಜೀವಾವಧಿ ಶಿಕ್ಷೆ, ಹೈಕೋರ್ಟ್‌ ತಡೆ ನೀಡಿ, ಉಸಿರಾಡಲು ಜಾಮೀನು ಮಂಜೂರು ಮಾಡಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿದ್ದು…ಹೀಗೆ ಸಿನಿಮೀಯ ರೀತಿಯಲ್ಲಿ ಸಾಲುಸಾಲು ಬೆಳವಣಿಗೆಗಳು ಈ ಪ್ರಕರಣದಲ್ಲಿ ನಡೆದಿವೆ.

ಈಗ ಇದು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದೆ. ಇಂದು ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ʻಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕಾʼ ಎಂದು ಖಾರವಾಗಿ ಪ್ರಶ್ನಿಸಿದೆ.  ಮುಂದುವರಿದು ʻಇಂದು ಕೊಲೆಯಾದವರಿದ್ದರೆ, ನಾಳೆ ದರೋಡೆ ಮಾಡಿದವರೂ ಬರುತ್ತಾರೆʼ ಎಂದು ಅಸಮಾಧಾನ ಹೊರ ಹಾಕಿ, ವಿಚಾರಣೆಯನ್ನು ಮುಂದೂಡಿದೆ.

ನ್ಯಾಯಾಲಯದ ಇಂದಿನ ಮಾತುಗಳು ವಿನಯ್‌ ಕುಲಕರ್ಣಿ ಮತ್ತೆ ಶ್ರೀಕೃಷ್ಣ  ಜನಿಸಿದ ಜಾಗಕ್ಕೆ (ಜೈಲಿಗೆ) ಹೋಗುವ ಸಾಧ್ಯತೆ ದಟ್ಟವಾಗಿಸಿದೆ. ಇದರಿಂದಾಗಿ ಅವರ ರಾಜಕೀಯ ಬದುಕಿಗೆ ಪೂರ್ಣವಿರಾಮ ಬೀಳಬಹುದು.  ವಿನಯ್‌ ಕುಲಕುರ್ಣಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಎತ್ತುಹಿಡಿಯುತ್ತದೋ ಅಥವಾ ಜೀವದಾನ ಮಾಡುತ್ತದೋ ಎಂದು ಎಲ್ಲರ ಕಣ್ಣು ಈಗ ಸುಪ್ರೀಂ ಕೋರ್ಟ್‌ ಕಡೆಗಿವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ರಾಹುಲ್‌ಗೆ ಬಿ.ಆರ್.‌ ಪಾಟೀಲ್‌ ಪತ್ರ: ಉದ್ದೇಶವೇನು?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
2 min read

ಕಾಂಗ್ರೆಸ್‌ ಪಕ್ಷದ ವರಿಷ್ಠ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌ ಬರೆದ ಪತ್ರ ಅವರ ಪಕ್ಷದಲ್ಲಿ ತರಹೇವಾರಿ ಚರ್ಚೆ ಹುಟ್ಟು ಹಾಕಿದೆ.

ಪಾಟೀಲರು ಪಕ್ಷದ ಅತ್ಯಂತ ಹಿರಿಯ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪ್ತ ಸ್ನೇಹಿತರು. ಆದಾಗ್ಯೂ ಪಕ್ಷ ಅವರಿಗೆ ಒಮ್ಮೆಯೂ ಮಂತ್ರಿ ಮಾಡಿಲ್ಲ.  ಅವರದ್ದೇ ಜಿಲ್ಲೆಯ ಶರಣಪ್ರಕಾಶ್‌ ಪಾಟೀಲರು ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಲಿಂಗಾಯತ ಕೋಟಾದಲ್ಲಿ ಮಂತ್ರಿಯಾಗುತ್ತಿದ್ದಾರೆ. ಇದರಿಂದಾಗಿ ಕೋಪಗೊಂಡಿರುವ ಅವರು ಆಗಾಗ ಪಕ್ಷ ಹಾಗೂ ಸರ್ಕಾರವನ್ನು ಬೆತ್ತಲೆ ಮಾಡುತ್ತಿದ್ದಾರೆ ಎಂದು ಎನ್ನುವವರಿದ್ದಾರೆ.

ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ದೇಶದಲ್ಲಿ ಎಲ್ಲಾದರೂ ರೈತಪರ ಹೋರಾಟ ನಡೆಯುತ್ತಿದ್ದರೆ ಈ ವಯಸ್ಸಿನಲ್ಲೂ ಭಾಗವಹಿಸುತ್ತಿದ್ದಾರೆ.  ರೈತರಿಗೆ ಅನ್ಯಾಯವಾಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಜಾಯಮಾನ ಅವರದಲ್ಲ ಎಂದೂ ಎನ್ನುವವರಿದ್ದಾರೆ.

ಅದೇನೇ ಇರಲಿ. 2020ರಲ್ಲಿ ಅಂದಿನ ಬಿಜೆಪಿ ಸರ್ಕಾರ ʻಕರ್ನಾಟಕ ಭೂ ಸುಧಾರಣಾ ಕಾಯಿದೆʼಗೆ ತಿದ್ದುಪಡಿ ಮಾಡಿದ್ದು ರೈತರಿಗೆ ಕಂಟಕವಾಗಿದೆ. ಇದರಿಂದಾಗಿ ರೈತರ 19.92 ಲಕ್ಷ ಎಕರೆ ಕೃಷಿ ಭೂಮಿ ಉದ್ಯಮಿಗಳ ಪಾಲಾಗಿದೆ. ಈಗ ರಾಜ್ಯದಲ್ಲಿ ಯಾರು ಬೇಕಾದರೂ ಎಷ್ಟಾದರೂ ಜಮೀನು ಖರೀದಿಸಬಹುದಾಗಿದೆ. ಸರ್ಕಾರದ ಅವಕೃಪೆಯಿಂದಾಗಿ ಸದಾ ಸಾಲದಲ್ಲಿಯೇ ಇರುವ ರೈತರಿಂದ ಜಮೀನು ಖರೀದಿಸಲು ಉದ್ಯಮಿಗಳಿಗೆ ವರವಾಗಿದೆ. ‌ಈ ತಿದ್ದುಪಡಿ ಕಾಯಿದೆ ಸರ್ಕಾರ ಹಿಂಪಡೆಯದಿದ್ದರೆ ರಾಜ್ಯದ  ರೈತರ ಜಮೀನು ಕೆಲವೇ ಕೆಲವು ಉದ್ಯಮಿಗಳ, ರಾಜಕಾರಣಿಗಳ, ದೊಡ್ಡ ದೊಡ್ಡ ಅಧಿಕಾರಿಗಳ ಪಾಲಾಗುತ್ತದೆ. ಇದರಿಂದಾಗಿ ಬಹುತೇಕ ರೈತರು ಮತ್ತೆ ಭೂಹೀನರಾಗುತ್ತಾರೆ. ರಾಜ್ಯದ ಆಹಾರ ಭದ್ರತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಕಾಂಗ್ರೆಸ್‌ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಈ ರೈತ ವಿರೋಧಿ ತಿದ್ದುಪಡಿ ಕಾಯಿದೆ ಹಿಂಪಡೆಯುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಸರ್ಕಾರದಲ್ಲಿ ಇದುವರೆಗೂ ಇದರ ಬಗ್ಗೆ ಒಂದು ಸಣ್ಣ ಚರ್ಚೆಯೂ ನಡೆದಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ʻಬಜೆಟ್‌ನಲ್ಲಿ ತಿದ್ದುಪಡಿ ಕಾಯಿದೆ ಹಿಂಪಡೆಯುವ ವಿಷಯ ಸೇರಿಸಿದೆ, ಮರುದಿನ ಬಜೆಟ್‌ನಿಂದ ಆ ವಿಷಯ ಮಾಯವಾಗಿದೆʼ ಎಂದಿರುವ ಪಾಟೀಲರ ಮಾತು, ಸರ್ಕಾರದಲ್ಲಿ ರೈತವಿರೋಧಿ ಯಾವುದೋ ಒಂದು ಶಕ್ತಿ ಲಾಬಿ ಮಾಡುತ್ತಿದೆ ಎಂಬುದು ಸ್ಪಷ್ಟಪಡಿಸುತ್ತದೆ.

ಇದನ್ನು ಕಂಡೇ ಅವರು ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ತಾವು ಮಧ್ಯಪ್ರವೇಶ ಮಾಡಬೇಕೆಂದು ಪತ್ರ ಬರೆದಿದ್ದಾರೆ.  ಈ ಪತ್ರದಲ್ಲಿ ರೈತಪರ ಕಾಳಜಿ ಇದೆ. ಕರ್ತವ್ಯದ ಅರಿವಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ನೀಡಿದ ಆಶ್ವಾಸನೆಯನ್ನು ಮರೆತಿರುವ ಸರ್ಕಾರಕ್ಕೆ ನೆನಪಿಸುವ ಜವಾಬ್ದಾರಿಯೂ ಇದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಜೆನ್‌-ಝೀಗಳಿಗೆ ಪ್ರಧಾನಿ ಮೋದಿ ಮತ್ತೆ ತಲೆಬಾಗುವರೇ?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಸಿಜೆಪಿ (ಕಾಕ್ರೋಜ್‌ ಜನತಾ ಪಾರ್ಟಿ), ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರಿಗೆ 48 ಗಂಟೆಗಳೊಳಗೆ ರಾಜೀನಾಮೆ ನೀಡಬೇಕೆಂದು ಗಡುವು ನೀಡಿತ್ತು. ಮುಗಿದು ನಾಲ್ಕು ದಿನವಾಯಿತು. ಆಯುಕ್ತರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಹೋರಾಟದ ಮುಂದಾಳು ಅಭಿಜೀತ್‌ ದಿಪ್ಕೆ, ಸೌರವ್‌ ದಾಸ್‌, ಆಶುತೋಷ್‌ ರಾಕಾ, ರತ್ನಾ ಸಿಂಗ್‌….ಈ ಬಾರಿ ಗಾಂಧಿ ಜಯಂತಿಯಂದು (ಅ.2) ಮುಂಬೈಯಿಂದ ಹೋರಾಟ ಆರಂಭಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಜಂತರ್‌ ಮಂತರ್‌ನ ಜೆನ್‌-ಝೀ ಹೋರಾಟಕ್ಕೆ ಪ್ರಧಾನಿ ಮೋದಿ ತಲೆಬಾಗಿದರು. ಅದೇ ಮೊದಲ ಸಲ ಮೋದಿ ತಮ್ಮ ಸಚಿವರೊಬ್ಬರ ರಾಜೀನಾಮೆ ಪಡೆದರು. ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಉಸಿರು ಬಿಡಲು ವಿರೋಧ ಪಕ್ಷಗಳು ಹೆದರುತ್ತಿದ್ದವು. ಈ ಹೋರಾಟದಿಂದಾಗಿ ಜನರೇ ಈಗ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಈಗ ಮತ್ತೆ ಆಯುಕ್ತರ ವಿರುದ್ಧ ರಣಕಹಳೆ ಊದಿದೆ. ಆಗ ದೇಶದ ಯುವಜನತೆ ಜಾತಿ, ಧರ್ಮ, ಭಾಷೆ, ಪ್ರದೇಶ, ಪಕ್ಷ ಭೇದ ಮರೆತು ಹೋರಾಟಕ್ಕೆ ಸಾಥ್‌ ನೀಡಿದರು. ಮೋದಿ ಯುವಶಕ್ತಿಗೆ ಹೆದರಿ ಸಚಿವರಿಂದ ರಾಜೀನಾಮೆ ಪಡೆದಿದ್ದರು. ಈಗ ಆಯುಕ್ತರಿಂದ ರಾಜೀನಾಮೆ ಪಡೆಯುವುದು ಒಬ್ಬ ಮಂತ್ರಿಯ ರಾಜೀನಾಮೆ ಪಡೆದಷ್ಟು ಸುಲಭವಲ್ಲ. ಅವರಿಗೆ ಸಾಂವಿಧಾನಿಕ ರಕ್ಷಣೆ ನೀಡಲಾಗಿದೆ. ಅವರಾಗಿ ಅವರೇ ರಾಜೀನಾಮೆ ನೀಡುವ ಮಾರ್ಗ ಸರಳವಾಗಿದೆ. ಆದರೆ, ಇಂದು ಅವರ ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಅವರು ಮಾತ್ರ ಬಾಯಿಬಿಡುತ್ತಿಲ್ಲ. ಇನ್ನೂ ರಾಜೀನಾಮೆ ನೀಡುತ್ತಾರೆಯೇ?

ಈ ಬಾರಿಯೂ ಮೋದಿ ಯುವಶಕ್ತಿಗೆ ತಲೆಬಾಗಿ ಇವರಿಂದಲೂ ರಾಜೀನಾಮೆ ಪಡೆಯುತ್ತಾರೆಯೇ, ಜೆನ್‌-ಝೀಗಳು ಎಲ್ಲಾ ಗೋಡೆಗಳನ್ನು ದಾಟಿ ಹೋರಾಟಕ್ಕೆ ಬರುತ್ತಾರೆಯೇ… ಎಂಬಿತ್ಯಾದಿ ಪ್ರಶ್ನೆಗಳಿಗೆ ಹೋರಾಟ ಆರಂಭವಾದಾಗಲೇ ಉತ್ತರ ಸಿಗಬಹುದು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಬಂಧನದ ಭೀತಿಯಲ್ಲಿ ಸತೀಶ್‌ ಜಾರಕಿಹೊಳಿ…

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ವಿದೇಶದಲ್ಲಿ ಕಾನೂನುಬಾಹಿರವಾಗಿ ಹಣ ಹೂಡಿಕೆ ಮಾಡಿದ್ದಾರೆ ಹಾಗೂ ಲಂಚ ಪಡೆದು ಅನರ್ಹ ಕಂಪನಿಗೆ ತಮ್ಮ ಇಲಾಖೆಯ ಕೆಲಸ ನೀಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಮೇಲೆ ಇ.ಡಿ. ದಾಳಿ ಮಾಡಿ 20 ದಿನವಾಯಿತು. ದಾಳಿಯಲ್ಲಿ ಸಿಕ್ಕ ದಾಖಲೆಗಳನ್ನು ಪರಿಶೀಲಿಸಲು ಸಾಕ್ಷಾತ್‌ ಇ.ಡಿ. ನಿರ್ದೇಶಕರೇ ಬೆಂಗಳೂರಿಗೆ ಬಂದಿಳಿದಿದ್ದರು. ಈಗ ತನಿಖೆ ದೆಹಲಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ರಾಜಕೀಯ ಕಾರಿಡಾರ್‌ನಲ್ಲಿ ಚರ್ಚೆ ನಡೆದು, ಬೆಳಗಾವಿಯ ಮಾರ್ಕಂಡೇಯ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.

ಇತ್ತೀಚಿನ ಸತೀಶ್‌ ಅವರ ಮಾತಿನ ವರಸೆ ಹಾಗೂ ನಡೆಗಳು ಗಮನಿಸಿದರೆ ಅವರಿಗೆ ಬಂಧನದ ಭೀತಿ ಶುರುವಾದಂತೆ ಕಾಣುತ್ತಿದೆ.ಬಲ್ಲ ರಾಜಕೀಯ ಮೂಲಗಳ ಪ್ರಕಾರ ಅವರಿಗೆ ಇ.ಡಿ.  ಯಾವಾಗ ಬೇಕಾದರೂ  ನೋಟಿಸ್‌ ನೀಡಿ, ಅವರನ್ನು ಅರೆಸ್ಟ್‌ ಮಾಡುವ ಸಾಧ್ಯತೆ ಇದೆ. ಆರಂಭದಿಂದಲೂ ಅವರು ಈ ವಿಷಯದಲ್ಲಿ ಮೆಲು ದನಿಯಲ್ಲೇ ಮಾತಾಡುತ್ತಿದ್ದಾರೆ. ಅವರ ಮಾತಿನಲ್ಲಿ ಅಂತಹ ಆತ್ಮವಿಶ್ವಾಸ ಇದ್ದಿಲ್ಲ. ʻನಾವು ಅವಸಸರ ಮಾಡಿ ಸ್ವಲ್ಪ ತಪ್ಪು ಮಾಡಿದ್ದೇವೆʼ ಎಂದು ಅವರು ಹೇಳದಿದ್ದರೂ, ಅವರ ಮಾತುಗಳು ಹೇಳುತ್ತಿದ್ದವು.

ಈಗ ತಮ್ಮ ಸಮುದಾಯದ ಆತ್ಯಾಪ್ತ ನಾಯಕರ ಜತೆಗೆ ಕಿಚನ್‌ ಮೀಟಿಂಗ್‌ಗಳು ಮಾಡಿ, ಚಿತ್ರದುರ್ಗದಲ್ಲಿ ʻವೀರ ಮದಕರಿ ನಾಯಕ ಉತ್ಸವʼ ಮಾಡಲು ರೆಡಿಯಾಗಿದ್ದಾರೆ. ಇದು ಅವರು ಸಂಕಷ್ಟದಿಂದ ಪಾರಾಗಲು ರಕ್ಷಣಾತ್ಮಕ ರಾಜಕಾರಣದ ಛತ್ರಿ ಕೆಳಗೆ ಅಡಗದೆ, ಆಕ್ರಮಣಶೀಲ ರಾಜಕಾರಣ ಮಾಡಲು ಮುಂದಡಿ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವೇದಿಕೆ ಮೂಲಕ ತಮ್ಮ ಬಲ ಪ್ರದರ್ಶನ ನಡೆಸಿ, ʻನನಗೆ ಮುಟ್ಟಿದರೆ ಹುಷಾರ್‌ʼ ಎಂಬ ಸಂದೇಶವನ್ನು ದೆಹಲಿಯ ಬಿಜೆಪಿ ನಾಯಕರಿಗೆ ನೀಡಲು ಹಾಗೂ ʻಇದೊಂದು ರಾಜಕೀಯ ಪ್ರೇರಿತ ದಾಳಿʼ ಎಂದು ಸಮಾಜಕ್ಕೆ ಸಾರಲು ಮುಂದಾಗಿದ್ದಾರೆ ಎನ್ನುವವರಿದ್ದಾರೆ. ಈ ವೇದಿಕೆಗೆ ರಾಹುಲ್‌ ಗಾಂಧಿ ಅವರನ್ನೂ ಕರೆಯಿಸುವ ಇರಾದೆಯಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪ ಮೆತ್ತಿಕೊಂಡಿರುವ ಜಾರಕಿಹೊಳಿ ಅವರ ಈ ಶಕ್ತಿ ಪ್ರದರ್ಶನದ ವೇದಿಕೆಗೆ ಅವರು ಬರುವುದು ಸ್ವಲ್ಪ ಅನುಮಾನವಿದೆ ಎಂದು ಎನ್ನುವವರೂ ಇದ್ದಾರೆ.

ಅದೇನೇ ಇರಲಿ. ವಾಲ್ಮೀಕಿ ಸಮುದಾಯದಲ್ಲಿ ಸತೀಶ್‌ ಅವರೇ ಈಗಲೂ ಪ್ರಬಲ ನಾಯಕರು. ಸಮುದಾಯದಲ್ಲಿ ಕಾಂಗ್ರೆಸ್‌ ನಾಯಕರನ್ನು ರಾಜಕೀಯವಾಗಿ ಮುಗಿಸಲೆಂದೇ ಮೊನ್ನೆ ಬಿ. ನಾಗೇಂದ್ರ, ಇಂದು ಸತೀಶ್‌ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದೆ ಎಂದು ಬಿಜೆಪಿ ಮೇಲೆ ಆಕ್ರೋಶ ಮಡುಗಟ್ಟಿದೆ. ನಾಳೆ ಯಾರು? ಎಂಬ ಆತಂಕವೂ ಹುಟ್ಟಿಸಿದೆ.

ಜತೆಗೆ ಕಾಂಗ್ರೆಸ್‌ ಪಕ್ಷ ತೀರಾ ಅವಮಾನಕಾರಿಯಾಗಿ ಕೆ. ಎನ್‌. ರಾಜಣ್ಣ ಅವರನ್ನು ಸಚಿವ ಕುರ್ಚಿಯಿಂದ ಕೆಳಗೆ ತಳ್ಳಿದ್ದು, ವಾಲ್ಮೀಕಿ ಸಮುದಾಯದ ಕಾಂಗ್ರೆಸ್‌ ನಾಯಕರನ್ನು ಗಾಯಗೊಳಿಸಿದೆ.  ಇ.ಡಿ. ಇಡುವ ಮುಂದಿನ ಹೆಜ್ಜೆಯ ಮೇಲೆ ಸತೀಶ್‌ ಅವರ ರಾಜಕೀಯ ಭವಿಷ್ಯ ಹಾಗೂ ಸೋತು ಮೂಲೆ ಸೇರಿರುವ ಬಿಜೆಪಿಯ ಶ್ರೀರಾಮೂಲು ಅವರ ರಾಜಕೀಯ ಭವಿಷ್ಯವೂ ನಿಂತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸಿದ್ದರಾಮಯ್ಯ ತೊಂದರೆ ಕೊಡಲ್ಲ ಎಂಬ ಡಿಕೆಶಿ ಮಾತಿನ ಹಿಂದೇನಿದೆ?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಸಿಎಂ ಡಿಕೆಶಿ ತನ್ನದೇ ಶೈಲಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಏಕಮೇವ ನಾಯಕನೆಂದು ಬಿಂಬಿಸಿಕೊಳ್ಳುವ ಕಸರತ್ತು ಮುಂದುವರಿಸಿದ್ದಾರೆ. ಮಾಧ್ಯಮಗಳು ಅವರ ಪರವಾಗಿ ತುತ್ತೂರಿ ಊದುತ್ತಿವೆ. ಹೈಕಮಾಂಡ್‌ ಭಯವೂ ಅವರಿಗಿಲ್ಲ. ಇದ್ದಿದ್ದರೆ ಬಿಕೆ ಹರಿಪ್ರಸಾದರನ್ನು ದೂರವಿಡುತ್ತಿರಲಿಲ್ಲ. ಅದಾನಿಗೆ ಸ್ವಾಗತಿಸಲು ತಮ್ಮ ಮನೆಯ ಬಾಗಿಲಲ್ಲಿ ಕಾಯುತ್ತಿರಲಿಲ್ಲ.

ಡಿಕೆಶಿ ಅವರು ʻಎಲ್ಲವೂ ಸರಿ ಇದೆʼ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಸಿದ್ದರಾಮಯ್ಯ ಅವರು ಬಂಡಾಯದ ಬಾವುಟ ಹಾರಿಸಬಹುದೇನೋ ಎಂಬ ಭಯ ಒಳಗೊಳಗೆ ಕಾಡುತ್ತಿದ್ದಂತಿದೆ. ಇಲ್ಲದಿದ್ದರೆ ʻನಮ್ಮಿಬ್ಬರ ನಡುವೆ ರಾಜಕೀಯ ಸಂಬಂಧ ಚೆನ್ನಾಗಿದೆ. ಅವರ ಹಿಂದೆ ಬಂಡೆಯಂತೆ ನಿಂತಿದ್ದೆ. ಅವರೂ ಈಗ ನಿಲ್ಲುತ್ತಾರೆ. ಅವರಿಂದ ನನಗೆ ಯಾವುದೇ ತೊಂದರೆಯಿಲ್ಲʼ ಎಂದು ಅವರು ಒತ್ತಿ ಒತ್ತಿ ಮಾತಾಡುತ್ತಿರಲಿಲ್ಲ.

ಸಿದ್ದರಾಮಯ್ಯ ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ದ್ವಾರದ ಪೋರ್ಟಿಕೊದಲ್ಲಿ ತಮ್ಮ ಕಾರು ಇಲ್ಲದಿರುವುದನ್ನು ಕಂಡು ಡಿಸಿಪಿ ಯೋಗೇಶ್‌ಗೆ ʻನನ್ನ ಕಾರು ಬಿಡಬಾರ್ದು ಅಂತ ಹೇಳಿದ್ಯಾ, ಬೇಡ ಅಂದ್ರೆ ನೀವೇ ಮಾಡ್ಕೊಳ್ಳಿʼ ಎಂದದ್ದು ಹಾಗೂ ಸತೀಶ್‌ ಜಾರಕಿಹೊಳಿ ʻನಾನೂ ಸಿಎಂ ಆಕಾಂಕ್ಷಿ. ಆದರೆ, ಡಿಕೆಶಿ ಮತ್ತೆ ನಾನೇ ಸಿಎಂ ಆಗುವೆ ಅಂತಿದ್ದಾರೆ. 2028ಕ್ಕೂ ಅವರೇ ಸಿಎಂ ಆಗಲಿ. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿʼ ಎಂದು ಹೇಳಿದ್ದು ಪಕ್ಷದೊಳಗೆ ಎಲ್ಲವೂ ಸರಿ ಇಲ್ಲವೆಂದು ಹೇಳುತ್ತಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್