ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಸಭೆ ಸೇರುವುದು, ಪ್ರತಿಭಟನೆ ಮಾಡುವುದು ಜನರ ಮೂಲಭೂತ ಹಕ್ಕು. ಅದನ್ನು ಗೌರವಿಸಿ, ಹೋರಾಟ ನಿರತ ಜನರ ಕೂಗಿಗೆ – ನೋವಿಗೆ ಕಿವಿಗೊಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಈ ದೇಶ ಹೋರಾಟದಿಂದಲೇ ಹುಟ್ಟಿದ್ದೆ. ನಮ್ಮ ಹೀರಿಕರು ಹೋರಾಡದಿದ್ದರೆ ನಾವಿನ್ನೂ ಬ್ರಿಟಿಷರ ದಾಸ್ಯದಲ್ಲಿ ಇರುತ್ತಿದ್ದೇವು.
ಭಾರತ ಇಂದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಮೋದಿ ಹಾಗೂ ಶಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರಾಡಿದ್ದೇ ಆಟ, ಅವರ ಮಾತೇ ಶಾಸನ ಎಂಬಂತಾಗಿದೆ. ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಂಡು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಮಾಡಿಕೊಳ್ಳಲಾಗಿದೆ. ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಜಗತ್ತಿನ ಬೇರಾವ ದೇಶದ ಆಯುಕ್ತರಿಗೆ ಇಲ್ಲದ ಅಧಿಕಾರ ನೀಡಿ, ಹದಿಮೂರು ಕೋಟಿ ಜನರ ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿ-ಯುವಜನರನ್ನು ಎಳೆದೊಯ್ದು ಪೊಲೀಸ್ ವ್ಯಾನ್ನಲ್ಲಿ ತುಂಬುತ್ತಿದ್ದಾರೆ. ದೇಶದ ರಾಜಧಾನಿಯನ್ನು ಜೈಲಾಗಿ ಪರಿವರ್ತಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ದೇಶವೇ?
ದೇಶದಲ್ಲಿ ನಡೆಯುತ್ತಿರುವ ಈ ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆಗಳನ್ನು ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್, ಫೈನಾನ್ಸಿಯಲ್ ಟೈಮ್ಸ್…ಹೀಗೆ ಜಗತ್ತಿನ ಅನೇಕ ಪ್ರಸಿದ್ಧ ಪತ್ರಿಕೆಗಳು ಎಳೆಎಳೆಯಾಗಿ ಬಿಚ್ಚಿಟ್ಟಿವೆ. ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ತಮ್ಮ ಕುರ್ಚಿಗಾಗಿ ಮೋದಿ-ಶಾ ಜೋಡಿ ಭಾರತದ ಮಾನ ಮಣ್ಣುಪಾಲು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹನಿ ಟ್ರ್ಯಾಪ್ ಸಂಚು?

ದೇಶದಾದ್ಯಂತ ಮತಗಳ್ಳತನದ ಬಗ್ಗೆ ಹೋರಾಟ ನಡೆಯುತ್ತಿದ್ದರೆ, ಕರ್ನಾಟಕ ಮಾತ್ರ ಮಾರುವೇಷದ ಕಾರ್ಯಾಚರಣೆಯ ಚರ್ಚೆಯಲ್ಲಿ ಮುಳುಗಿದೆ. ದಾಖಲೆಯ ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 2011ರಲ್ಲಿ ಹನಿ ಟ್ರ್ಯಾಪ್ ಬಲೆಗೆ ಸಿಲುಕಿಸಲು ಸಂಚು ನಡೆದಿತ್ತು ಎಂಬ ಸುದ್ದಿ ಹರಿದಾಡುತ್ತಿದೆ. ಅದು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಕುರಿತು ʻಅದು ಸ್ಟಿಂಗ್ ಅಲ್ಲ, ಅಪಪ್ರಚಾರದ ವಿಡಿಯೊʼ ಎಂದು ಸಿದ್ದರಾಮಯ್ಯ ಅವರ ಮಗ ಸಚಿವ ಡಾ. ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ವತಃ ಸಿದ್ದರಾಮಯ್ಯನವರೂ ಮೌನ ಮುರಿದು ʻರಾಜ್ಯದಲ್ಲಿ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ಗೊತ್ತಿದೆ. ಯಾರು ಮಾಡುತ್ತಿದ್ದಾರೆಂದು ತನಿಖೆ ಆಗಬೇಕುʼ ಎಂದಿದ್ದಾರೆ.
ಆದರೆ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರು ʻಸ್ಟಿಂಗ್ ಆಗಿರುವುದಕ್ಕೆ ಅವರು ಸ್ಟೇ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇಲ್ಲದಿದ್ದರೆ ಅವರು ಯಾಕೆ ತಡೆಯಾಜ್ಞೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗುತ್ತಿದ್ದರುʼ ಎಂದು ಆಡಿರುವ ಮಾತು ಕುತೂಹಲ ಮೂಡಿಸಿದೆ.
ಈ ಮಧ್ಯೆ ಇಂದು ಸಿದ್ದರಾಮಯ್ಯನವರು ನ್ಯಾಯಾಲಯದ ಕದ ತಟ್ಟಿದ್ದಾರೆ. ಜತೆಗೆ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಟಕಟೆಯಲ್ಲಿ ತಂದು ನಿಲ್ಲಿಸಿ, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
ಮಾರುವೇಷದ ಕಾರ್ಯಾಚರಣೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ – ಮಹಾರಾಜರ ಕಾಲದಲ್ಲಿ ಆರಂಭವಾಗಿ, ಈಗಲೂ ಮುಂದುವರಿದಿದೆ. ಎದುರಾಳಿ ಶತ್ರು ದೇಶದ ರಹಸ್ಯ ದಾಖಲೆ ಹಾಗೂ ಮಾಹಿತಿಯನ್ನು ಪಡೆಯಲು ಜಗತ್ತಿನ ಬಹುತೇಕ ದೇಶಗಳು ಇದೇ ದಾಳ ಎಸೆಯುತ್ತವೆ. ರಾಜಕಾರಣಿಗಳು ಅಧಿಕಾರಕ್ಕಾಗಿ ಬೇರೆ ಪಕ್ಷದ ನಾಯಕರನ್ನು ಅಥವಾ ತಮ್ಮ ಪಕ್ಷದ ರಾಜಕಾರಣಿಗಳನ್ನು ರಾಜಕೀಯವಾಗಿ ಮುಗಿಸಲು ಇದರ ಮೊರೆ ಹೋಗುತ್ತಾರೆ. ಈ ಮಾರುವೇಷದ ಕಾರ್ಯಾಚರಣೆಗೆ ಪ್ರಪಂಚದಾದ್ಯಂತ ಸಾವಿರಾರು ಜನರು ಆಹುತಿಯಾಗಿದ್ದಾರೆ. ನಮ್ಮ ದೇಶ–ರಾಜ್ಯದಲ್ಲೂ ಇದಕ್ಕೆ ಹಲವರು ಬಲಿಪಶುವಾಗಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಎರಡು ಹನಿ ಟ್ರ್ಯಾಪ್ಗಳು ಬಹಳ ಸದ್ದು ಮಾಡಿದವು.
ಮೊದಲನೆಯದು, 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಎಂಟು ಜನ ಸಚಿವರು ಸರ್ಕಾರ ಉರುಳಿಸಲು ಮುಂಬೈಯಲ್ಲಿ ಸುತ್ತಾಡಿ, ಬಿಜೆಪಿಗೆ ಹಾರಿದರು. ಮರುದಿನ ಅವರು ನ್ಯಾಯಾಲಯದಿಂದ ತಮ್ಮ ವಿರುದ್ಧ ವಿಡಿಯೊಗಳು ಪ್ರಸಾರ ಮಾಡದಂತೆ ಏಕಪಕ್ಷೀಯ ಆದೇಶ ಪಡೆದದ್ದು.
ಎರಡನೆಯದು, 2021ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿ, ಆಗಿನ ಬಿಜೆಪಿ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಅದಾದ ಮೇಲೆ ಅವರು ರಾಜ್ಯ ರಾಜಕಾರಣದಲ್ಲಾಗಲಿ ಅಥವಾ ಬೆಳಗಾವಿ ರಾಜಕಾರಣದಲ್ಲಾಗಲಿ ಮೊದಲಿನಷ್ಟು ಸಕ್ರಿಯವಾಗಿರದೆ, ಎಲ್ಲೋ ಕಳೆದುಹೋಗಿದ್ದಾರೆ.
ರಾಜ್ಯದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸುವ ಒಂದು ತಂಡವಿದೆ. ಆ ತಂಡ ತಮ್ಮ ಬಾಸ್ಗಾಗಿ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಆಗಾಗ ಎದ್ದು ಬಂದು ಸದ್ದು ಮಾಡುತ್ತಲೇ ಇದೆ. ಇದು ರಾಜಕೀಯ ವ್ಯಭಿಚಾರ. ಇದರಿಂದಾಗಿ ರಾಜ್ಯದ ಮಾನ ಮೂರಾಬಟ್ಟೆಯಾಗುತ್ತಿದೆ. ಕರಾವಳಿಯಲ್ಲಿ ಹೆಣದ ರಾಜಕೀಯ ನಡೆದರೆ, ಬೆಂಗಳೂರಿನಲ್ಲಿ ಈ ಮಾರುವೇಷದ ಕಾರ್ಯಾಚರಣೆ ರಾಜಕೀಯ ನಡೆಯುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ರಾಜ್ಯದ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಫೋಟೋಶೂಟ್ನಲ್ಲಿ ತಲ್ಲೀನರಾಗಿದ್ದರು ಎಂದು ಎನ್ನುವವರಿದ್ದಾರೆ. ಮಾರುವೇಷದ ಕಾರ್ಯಾಚರಣೆಯ ಬಗ್ಗೆ ಅವರು ತನಿಖೆ ಮಾಡಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಎನ್ನುವವರೂ ಇದ್ದಾರೆ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇದು ರಾಜ್ಯ ರಾಜಕೀಯುದಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಬಿಸುವ ಗಾಳಿ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷಕ್ಕೂ ತಟ್ಟುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದು ಚರ್ಚೆಯ ವಿಷಯವಾಗುತ್ತದೆ. ಸಿದ್ದರಾಮಯ್ಯ ಇದನ್ನು ಹೇಗೆ ಎದುರಿಸುತ್ತಾರೆ, ಅವರ ಮುಂದಿನ ನಡೆ ಏನು ಎಂಬ ಕುತೂಹಲ ರಾಜ್ಯದ ಜನರಲ್ಲಿ ಹುಟ್ಟಿಸಿದೆ.
ಕನ್ನೇರಿ ಶ್ರೀಗಳ ಮಾತುಗಳಲ್ಲಿನ ಸತ್ಯವನ್ನು ಹುಡುಕುತ್ತಾ….

ʻಬಸವಾದಿ ಶರಣರ ಹಿಂದೂ ಸಮಾವೇಶʼದ ರಥ ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಹೊರಟು, ಈಗ ಕಲಬುರ್ಗಿ ಜಿಲ್ಲೆಯಲ್ಲಿ ಬಂದು ನಿಂತಿದೆ. ಮಹಾರಾಷ್ಟ್ರದ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಈ ಸಮಾವೇಶಗಳಲ್ಲಿ ಪುಂಖಾನುಪುಂಖವಾಗಿ ಆಡಿದ ಮಾತುಗಳು ವಿವಾದಕ್ಕೀಡಾಗಿ ಭಿನ್ನ ರೂಪ, ಬಣ್ಣ, ವಾಸನೆಗಳನ್ನು ಪಡೆದು ಕನ್ನೇರಿ ಶ್ರೀಗಳಿಗಿದ್ದ ಅಷ್ಟೋ ಇಷ್ಟೋ ಗೌರವವೂ ಮೂರಾಬಟ್ಟೆಯಾಗಿದೆ.
ಸಾರ್ವಜನಿಕವಾಗಿ ತಿರುಗೇಟು ನೀಡಬೇಕಾದ ಲಿಂಗಾಯತ ಮಠಾಧೀಶರು ಕಾನೂನಿನ ಬಸ್ ಹತ್ತಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕನ್ನೇರಿ ಶ್ರೀಗಳ ಮಾನಕ್ಕೆ ಒಂದು ರೂಪಾಯಿಯೋ ಅಥವಾ ಎರಡು ರೂಪಾಯಿಯೋ ಬೆಲೆ ಕಟ್ಟದೆ, ಒಂದು ಕೋಟಿ ರೂಪಾಯಿ ಬೆಲೆ ಕಟ್ಟಿ ಅದರಲ್ಲೂ ಉದಾರತೆ ತೋರಿಸಿದ್ದಾರೆ ಎಂದು ಎನ್ನುವವರು ಇದ್ದಾರೆ. ಆದರೆ ಕನ್ನೇರಿ ಶ್ರೀಗಳು ಮಾತ್ರ ಲಿಂಗಾಯತ ಸ್ವಾಮಿಗಳ ಮಾನ ಬೀದಿಯಲ್ಲಿ ಹರಾಜು ಹಾಕುವ ಕಾಯಕ ಮುಂದುವರಿಸಿದ್ದಾರೆ. ಸತ್ಯ ಹೊಸ್ತಿಲು ದಾಟುವಷ್ಟರಲ್ಲಿ, ಅವರಾಡುತ್ತಿರುವ ಸುಳ್ಳು ರಾಜ್ಯವೆಲ್ಲಾ ಸುತ್ತಾಡಿ ಬಂದಿರುತ್ತದೆ ಎಂಬ ಸತ್ಯ ಲಿಂಗಾಯತ ಸ್ವಾಮಿಗಳಿಗೆ ಯಾರು ಹೇಳಬೇಕು ಎಂದು ಎನ್ನುವವರೂ ಇದ್ದಾರೆ.
ಕನ್ನೇರಿ ಶ್ರೀಗಳು ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿರುವ ಲಿಂಗಾಯತ ಸ್ವಾಮಿಗಳ ಮೇಲೆ ಮಾತ್ರ ಯಾಕೆ ಮುಗಿಬಿದ್ದಿದ್ದಾರೆ? ಸುಳ್ಳಿನ ದಾಳಿ ಮಾಡಿ, ಸುಳ್ಳಿನಿಂದ ಲಿಂಗಾಯತ ಸ್ವಾಮಿಗಳನ್ನು ಕುಗ್ಗಿಸಲು ಅವರು ಯಾರಿಂದ ಸುಪಾರಿ ಪಡೆದಿದ್ದಾರೆ? ಈ ಸಮಾವೇಶಗಳಿಗೆ ಫಂಡಿಂಗ್ ಯಾರು ಮಾಡುತ್ತಿದ್ದಾರೆ? ಬಿಜೆಪಿ ರಾಜಕಾರಣಿಗಳು ಯಾಕೆ ಈ ಸಮಾವೇಶಗಳು ಆಯೋಜಿಸುತ್ತಿದ್ದಾರೆ? ಇದರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿಗರು ಮಾತ್ರ ಯಾಕೆ ಭಾಗವಹಿಸುತ್ತಿದ್ದಾರೆ? ಹಿಂದೆ ಜಂಗಮೇತರ ಮಠಾಧೀಶರನ್ನು ಸಂಘಟಿಸಲು ʻಸಹೃದಯಿ ಮಠಾಧೀಶರ ಸಂಘʼ ಕಟ್ಟಿದವರು, ಈಗ ಅವರೆದುರು ಮಂಡಿಯೂರಿದ್ದು ಯಾಕೆ? (ಅವರು ಯಾವ ಸಮಾಜದ ಸ್ವಾಮೀಜಿಗಳ ವಿರುದ್ಧ ಸಂಘಟನೆ ಕಟ್ಟಲು ಮುಂದಾಗಿದ್ದರೋ, ಇಂದು ಬಹುತೇಕ ಅದೇ ಸಮಾಜದ ಕಾವಿಧಾರಿಗಳು ಅವರ ಸಮಾವೇಶದ ವೇದಿಕೆಗಳಲ್ಲಿದ್ದರು), ಅವರನ್ನು ದೇಶದ ಉನ್ನತ ನ್ಯಾಯಾಲಯ ʻಒಳ್ಳೆಯ ಪ್ರಜೆಯಾಗಿʼ ಎಂದು ತಾಕೀತು ಮಾಡಿದ್ದು ಯಾಕೆ? ಕಲಬುರ್ಗಿ ಹೈಕೋರ್ಟ್ ಬಸವಕಲ್ಯಾಣದಲ್ಲಿ ಅವರು ಮಾತಾಡದಂತೆ ಅವರ ಬಾಯಿಗೆ ಬೀಗ ಹಾಕಿದ್ದು ಯಾಕೆ? ಅವರದ್ದೇ ಮಠದ ಕಾಣಸಿದ್ದೇಶ್ವರರು ತಮ್ಮ ವಚನಗಳಲ್ಲಿ ಮನುಷ್ಯ ಪ್ರೇಮ, ಸಹಬಾಳ್ವೆ, ಸೌಹಾರ್ದತೆಯನ್ನು ಸಾರಿ, ಅದರಂತೆ ಬಾಳಿ ಬದುಕಿದರು. ಈಗ ನೀವ್ಯಾಕೆ ಪುಡಿ ಕೋಮುವಾದಿಗಳಂತೆ ಮುಸ್ಲಿಂ ಸಮುದಾಯದ ಮೇಲೆ ಬೆಂಕಿ ಕಾರುತ್ತಿದ್ದಿರಿ? ಕನ್ನೇರಿ ಶ್ರೀಗಳು ಉತ್ತರಿಸಬೇಕಾದ ಪ್ರಶ್ನೆಗಳು ಒಂದೆರಡಲ್ಲ.
ಲಿಂಗಾಯತ ಸ್ವಾಮಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಈಗ ಅವರೇ ಜನತಾ ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಯಾಗಿ ನಿಂತಿದ್ದಾರೆ. ಈಗ ಅವರ ಎದುರಿಗೆ ಎರಡು ಆಯ್ಕೆಗಳು ಇವೆ. ಒಂದು, ಲಿಂಗಾಯತ ಸ್ವಾಮೀಜಿಗಳ ಮೇಲೆ ಅವರು ಮಾಡಿದ ಆರೋಪಗಳಿಗೆ ಸಾಕ್ಷ್ಯಗಳನ್ನು ಬಹಿರಂಗಪಡಿಸುವುದು, ಇಲ್ಲವೇ ಸುಳ್ಳನ್ನು ಒಪ್ಪಿಕೊಳ್ಳುವುದು. ಸುಳ್ಳಿನ ಮೂಲಕ ಸತ್ಯಹರಿಶ್ಚಂದ್ರರಾಗಲು ಸಾಧ್ಯ ಇಲ್ಲ.
ಅವರಾಡುವ ಸುಳ್ಳು ಮಾತುಗಳನ್ನು ಕೇಳಿ, ಅವರನ್ನು ಸುಳ್ಳಿನ ಚಾಂಪಿಯನ್ ಅನ್ನಬೇಕೋ ಅಥವಾ ಸುಳ್ಳಿನ ಸಾಮ್ರಾಟ್ ಅನ್ನಬೇಕೋ ಎಂದು ಜನರಿಗೆ ಗೊಂದಲವಾಗುತ್ತಿದೆ. ಅವರ ಮಾತುಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಂದೂ ಸತ್ಯ ಸಿಗುವುದಿಲ್ಲ. ಅವರ ಹುಸಿ ಮಾತುಗಳು ಕೇಳಿ ʻಸುಳ್ಳುʼ ಸೋತು ಅವರ ಸ್ನೇಹ ಮಾಡಿದಂತಿದೆ.
ಸರ್ಕಾರದಿಂದ ಕಾನೂನುಬದ್ಧವಾಗಿ ಬೆಂಗಳೂರು ಹತ್ತಿರ ಜಮೀನು ಪಡೆದದ್ದು ಹಿಂದುಳಿದ ಸಮುದಾಯದ ಸ್ವಾಮೀಜಿಗಳು. ಆದರೆ, ಅವರು ಆರೋಪ ಮಾಡುತ್ತಿರುವುದು ಲಿಂಗಾಯತ ಸ್ವಾಮಿಗಳು ಬಸವ ಸಂಸ್ಕೃತಿ ಮಾಡಿ ಜಮೀನು ಪಡೆದಿದ್ದಾರೆ ಎಂದು.
ಹಿಂದೂ ಧರ್ಮವನ್ನು ವಿರೋಧಿಸುವ ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮದ ಕಾವಿ ಬಟ್ಟೆ ಧರಿಸಿದ್ದಾರೆ. ಅವರು ಕಾವಿ ಬಟ್ಟೆ ಧರಿಸಬಾರದೆಂದು ಫರ್ಮಾನು ಹೊರಡಿಸಿದ್ದಾರೆ (ಹಿಂದೂ ಒಂದು ಧರ್ಮ ಅಲ್ಲ ಎಂದು ದೇಶದ ಸುಪ್ರೀಂ ಕೋರ್ಟ್ ಹೇಳಿದೆ. ಸಾಕ್ಷಾತ್ ಪ್ರಧಾನಿ ಮೋದಿ ಅವರೂ ಹೇಳಿದ್ದಾರೆ). ಆದರೆ, ಸ್ವತಃ ಅವರೇ ಧರಿಸುವ ಕಾವಿ ಬಟ್ಟೆ ಮೂಲತಃ ಅವರು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮದ್ದಲ್ಲ. ಅದು ಬೌದ್ಧ ಬಿಕ್ಕುಗಳದ್ದು. ಶಂಕರಾಚಾರ್ಯರ ಕಾಲದಿಂದ ವೈದಿಕ ಸ್ವಾಮಿಗಳು ಕಾವಿ ಬಟ್ಟೆ ಧರಿಸಲು ಆರಂಭಿಸಿದ್ದಾರೆ. ಇತಿಹಾಸದ ಪುಟಗಳ ಮೇಲೆ ಶ್ರೀಗಳು ಒಂದು ಸಲ ಕಣ್ಣಾಡಿಸಲಿ.
ʻಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ’ ಎಂದು ಬೊಬ್ಬಿಡುತ್ತಾ ಮತ್ತೊಂದು ಸುಳ್ಳು ಉದರಿಸಿದ್ದಾರೆ. ಲಿಂಗಾಯತ ಸ್ವಾಮಿಗಳು ಹಿಂದೂ ಧರ್ಮವನ್ನು ವಿರೋಧ ಮಾಡುವುದಿಲ್ಲ. ಲಿಂಗಾಯತ ತತ್ವವನ್ನು ಅವರ ಧರ್ಮದ ಜನರಿಗೆ ಹೇಳುತ್ತಾರೆ. ಈ ನೆಲದಲ್ಲಿ ಹುಟ್ಟಿದ್ದ ಬೌದ್ಧ, ಸಿಖ್ ಜೈನ ಧರ್ಮದ ಪ್ರಸಾರಕರು ಹೇಗೆ ತಮ್ಮ ಧರ್ಮ ಪ್ರಸಾರ ಮಾಡುತ್ತಾರೋ ಹಾಗೇ ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ಪ್ರಸಾರ ಮಾಡುತ್ತಿದ್ದಾರೆ. ಈ ದೇಶದ ಸಂವಿಧಾನ ತಮ್ಮ ಧರ್ಮದ ಪ್ರಸಾರ ಮಾಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ನೀಡಿದೆ ಎಂಬ ಅರಿವು ಅವರಿಗಿಲ್ಲವೇ?
ʻಲಿಂಗಾಯತ ಮಠಗಳಲ್ಲಿ ದಾಸೋಹ ಇರುವುದಿಲ್ಲʼ. ʻಲಿಂಗಾಯತ ಸ್ವಾಮಿಗಳು ಕಾಯಕ ಮಾಡುವುದಿಲ್ಲʻ ಎಂದು ಅವರಾಡಿದ ಮಾತುಗಳು ಕೇಳಿ ಸಮಾವೇಶಗಳಲ್ಲಿ ಭಾಗವಹಿಸಿದ ಜನರೇ ಹೊರಬಂದು ನಗುತ್ತಿದ್ದರು.
ಮೆದುಳಿಲ್ಲದ ಹಾಗೂ ಹತಾಶನಾದ ಒಬ್ಬ ವ್ಯಕ್ತಿ ಮಾತ್ರ ವೈಯಕ್ತಿಕ ತೇಜೋವಧೆಗೆ ಮುಂದಾಗುತ್ತಾನೆ ಎಂಬ ಪ್ರಸಿದ್ಧ ಮಾತಿದೆ. ಗದಗಿನ ಈಗಿನ ತೋಂಟದಾರ್ಯ ಸ್ವಾಮೀಜಿಗಳಿಂದ ಹಿಡಿದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳವರೆಗೆ ಅವರ ವಿರುದ್ಧ ತಳಬುಡವಿಲ್ಲದ ಆರೋಪ ಮಾಡುತ್ತಿರುವ ಕನ್ನೇರಿ ಸ್ವಾಮೀಜಿ ಹತಾಶರಾಗಿ ಹೀಗೆ ಮಾತಾಡುತ್ತಿರಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಅವರಿಗೆ ಲಿಂಗಾಯತ ತತ್ವದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಒಂದಿನಿತೂ ಗೊತ್ತಿಲ್ಲ. ಅವರೊಬ್ಬ ಖಾಲಿ ತಲೆಯ ಸ್ವಾಮೀಜಿ ಎಂದು ಅವರಾಡುತ್ತಿರುವ ಮಾತುಗಳೇ ಹೇಳುತ್ತಿವೆ.
ಸಿದ್ದು-ಬಿಕೆ ತಂತ್ರಕ್ಕೆ ಡಿಕೆ ವಿರೋಧ…

ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿದ ಮೇಲೆ ಪಕ್ಷದ ಬಣ ರಾಜಕೀಯ ಬೀದಿಗೆ ಬಿದ್ದಿದೆ. ಸಂಬಂಧಗಳು ಕಿತ್ಮು ಹೋಗುತ್ತಿವೆ. ಒಂದಾಗಿ ಹೋಗಬೇಕಾಗಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಅಧ್ಯಕ್ಷ ಬಿಕೆ ಹರಿಪ್ರಸಾದ ಸಂಬಂಧ ಹಳಸಿದೆ. ಬಿಡದಿ ಟೌನ್ಶಿಪ್ ವಿಷಯದಲ್ಲಿ ಅವರೊಂದು ಹೇಳಿಕೆ ಕೊಟ್ಟರೆ, ಮರುಗಳಿಗೆಯಲ್ಲಿ ಅದಕ್ಕೆ ವಿರುದ್ಧವಾಗಿ ಇವರೊಂದು ಹೇಳಿಕೆ ಕೊಡುತ್ತಿದ್ದಾರೆ. ಡಿಕೆಶಿ ಅವರ ಆಡಳಿತ ಶೈಲಿ ಪಕ್ಷದಲ್ಲಿ ಹಲವರಿಗೆ ಅಸಮಾಧಾನ ಉಂಟುಮಾಡಿದೆ.
ಇದರಿಂದಾಗಿ ಪಕ್ಷದೊಳಗೆ ಎರಡು ಪ್ರಬಲ ಗುಂಪುಗಳು ಸೃಷ್ಟಿಯಾಗಿವೆ. ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಈಗಿನಿಂದಲೇ ಪೈಪೋಟಿ ಆರಂಭವಾಗಿದೆ. ಈ ಕಿತ್ತಾಟ ಸರಿದಾರಿಗೆ ತರಲು ಹೈಕಮಾಂಡ್ ದೂತರು ಕಿಚನ್ ಮೀಟಿಂಗ್ಗಳು ಮಾಡಿ ಸುಸ್ತಾಗಿದ್ದಾರೆ. ಪಕ್ಷದೊಳಗೆ ದಿನಕ್ಕೊಂದು ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ.
ಹಳಿ ತಪ್ಪಿದ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ತರಲು ʻರಾಜಕೀಯ ವ್ಯವಹಾರ ಸಮಿತಿʼ ರಚಿಸಲು ಕಾಂಗ್ರೆಸ್ ಮುಂದಾಗಿದೆ. ಬಿಕೆ ಹರಿಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಸ್ವಾಗತಿಸಿದರೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಈಗ ಚಂಡು ದೆಹಲಿಯ ಅಂಗಳದಲ್ಲಿದೆ. ಹೈಕಮಾಂಡ್ ಏನು ತೀರ್ಮಾನ ಮಾಡಲಿದೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ಚಳವಳಿಯ ರೂಪ ಪಡೆಯುತ್ತಿರುವ ಜೆನ್ ಝೀ ಹೋರಾಟ…

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ʻತಲೆದಂಡʼಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಜೆನ್ ಝೀಗಳಿಗೆ ಕೇಂದ್ರ ಸರ್ಕಾರ ಅಕ್ಷರಶಃ ಹೆದರಿದೆ. ತಮ್ಮೆಲ್ಲ ಶಕ್ತಿಯನ್ನು ಹೋರಾಟ ಹತ್ತಿಕ್ಕಲು ಹಾಕಿದೆ. ದೇಶದ ರಾಜಧಾನಿ ಈಗ ಪೊಲೀಸ್ ರಾಜ್ ಅಗಿದೆ. ಜೆನ್ ಝೀಗಳ ಈ ಹೋರಾಟ ಆರಂಭವಾಗುವ ಮುಂಚೆಯೇ ಕೇಂದ್ರ ಸರ್ಕಾರ ಗೆಲ್ಲಿಸಿದೆ.
ಭಾಗಶಃ ದೆಹಲಿ ಬಂದ್ ಮಾಡಿದ್ದಾರೆ. ಆದಾಗ್ಯೂ ವಿದ್ಯಾರ್ಥಿಗಳು ಪೊಲೀಸರ ಸರ್ಪಗಾವಲು ದಾಟಿ ನೇಹಾ ಬೋರಾ ನೇತೃತ್ವದಲ್ಲಿ ಸಾವಿರಾರು ಜನರು ಜಂತರ್ ಮಂತರ್ ತಲುಪಿದರು.
ಪೊಲೀಸರು ದೆಹಲಿಯ ಇಂಚಿಂಚು ಜಾಗ ಬಿಡದೆ ಪ್ರತಿಭಟನಾಕಾರರನ್ನು ನಿನ್ನೆ ರಾತ್ರಿಯಿಂದಲೇ ಅರೆಸ್ಟ್ ಮಾಡುತ್ತಿದ್ದಾರೆ. ಮಸೀದಿ, ಚರ್ಚ್, ದೇವಸ್ಥಾನ, ಪಿಜಿ ಹಾಸ್ಟೆಲ್ ಮತ್ತು ಕಾಲೇಜು – ವಿಶ್ವವಿದ್ಯಾಲಯದೊಳಗೆ ನುಗ್ಗಿ ʻನಾಳೆಯ ಹೋರಾಟಕ್ಕೆ ಬರಬೇಡಿʼ ಎಂದು ಥೇಟ್ ಪುಡಿ ರೌಡಿಗಳಂತೆ ಹೆದರಿಸಿದ್ದಾರೆ.
ಇಂದು ಕೂಡಾ ಪೊಲೀಸರು ಹೋರಾಟದ ಮುಂದಾಳುಗಳು ಸೇರಿದಂತೆ ಸಾವಿರಾರು ಜನರನ್ನು ಅರೆಸ್ಟ್ ಮಾಡಿದ್ದಾರೆ. ಹೋರಾಟಗಾರರನ್ನು ಅರೆಸ್ಟ್ ಮಾಡಬಹುದು ವಿನಾ ಹೋರಾಟವನ್ನಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿಭಟನೆ ಈಗ ಚಳವಳಿಯ ರೂಪ ಪಡೆಯುತ್ತಿದೆ. ದೇಶದ ಪ್ರಮುಖ ನಗರದಲ್ಲಿ ತಡರಾತ್ರಿಯಾದರೂ ಹೋರಾಟಗಳು ನಡೆಯುತ್ತಿವೆ. ಇದು ಮುಂದೆ ಯಾವ ರೂಪ ಪಡೆಯುತ್ತದೋ ಕಾದು ನೋಡಬೇಕಿದೆ.
ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದೇಗೆ?

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೇಜಿನಗರ ವಿಧಾನಸಭಾ ಕ್ಷೇತ್ರ ಮುಸ್ಲಿಂ ಬಾಹುಳ್ಯ ಹೊಂದಿದೆ. ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿ ಇಲ್ಲಿ ಒಮ್ಮೆಯೂ ಗೆದ್ದಿಲ್ಲ. ಈಗ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ 1,29,914 ಮತಗಳನ್ನು ಪಡೆದು, 76,816 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಕಣದಲ್ಲಿದ್ದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡ ಪಕ್ಷ ಸೇರಿದಂತೆ ಹದಿಮೂರು ಅಭ್ಯರ್ಥಿಗಳು ಕನಿಷ್ಠ ತಮ್ಮ ಠೇವಣಿಯನ್ನೂ ಉಳಿಸಿಕೊಂಡಿಲ್ಲ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಆಡಳಿತಾರೂಢ ಪಕ್ಷ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಹೊಸದೇನಲ್ಲ. ಆದರೆ ಇಲ್ಲಿ ಮುಸ್ಲಿಂ ಮತದಾರರು ಸುಮಾರು ಶೇಕಡಾ 70ರಷ್ಟಿದ್ದಾರೆ. ಆ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಬಿಜೆಪಿ ಯಾವ ಕಸರತ್ತು ಉಳಿಸಿಲ್ಲ. ಹಾಗಿದ್ದರೂ ಇಲ್ಲಿ ಹೇಗೆ ಗೆಲುವು ಸಾಧಿಸಿದೆ?
ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಭಯದ ವಾತಾವರಣ ನಿರ್ಮಿಸಿದ್ದು ಹಾಗೂ ಮುಸ್ಲಿಂ ಮತಗಳ ವಿಭಜನೆಯಾಗಿದ್ದು ಈ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದು ಅರ್ಧ ಸತ್ಯ.
ಶೇಕಡಾ 80ರಷ್ಟು ಮತದಾನವಾಗಿರುವುದು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬಂದು ಮತ ಚಲಾಯಿಸಿರುವುದನ್ನು ಹೇಳುತ್ತಿದೆ. ಮತ ವಿಭಜನೆ ಬಿಜೆಪಿಗೆ ಗೆಲುವು ತಂದು ಕೊಟ್ಟಿಲ್ಲವೆಂದು ಅಂಕಿಸಂಖ್ಯೆಗಳು ಸಾರುತ್ತಿವೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಕೋಮು ದ್ವೇಷದ ಮಾತಾಡದೆ ಅಭಿವೃದ್ಧಿಯ ಬಗ್ಗೆ ಮಾತಾಡಿತ್ತು. ಈ ಬದಲಾವಣೆಯೇ ಮುಸ್ಲಿಂ ಮತದಾರರನ್ನು ಬಿಜೆಪಿ ಸೆಳೆಯಿತೇ ಎಂಬ ಪ್ರಶ್ನೆಯನ್ನು ಈ ಗೆಲುವು ಹುಟ್ಟು ಹಾಕಿದೆ.


