ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಕಮಿಷನರ್ ‘ನಳಿನ್ ಅತುಲ್’ ಅವರು ಆಂತರಿಕ ಸಮೀಕ್ಷೆ ನಡೆಸಿ, ಕಲ್ಯಾಣ ಕರ್ನಾಟಕದ(ಹೈದರಾಬಾದ್ ಕರ್ನಾಟಕದ) ಶೇ.80 ರಷ್ಟು ಮಕ್ಕಳು ತಮಗೆ ಮೊಟ್ಟೆ ಬೇಕೆಂದು ಬಯಸುತ್ತಿದ್ದಾರೆಂದು ಕಂಡುಕೊಂಡ ಮೇಲೆಯೇ ಆ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು,ವಿಶೇಷ ಮುತುವರ್ಜಿಯಿಂದ ಸರ್ಕಾರದ ಮನವೊಲಿಸಿ ಮಧ್ಯಾಹ್ನ ಬಿಸಿಯೂಟದಲ್ಲಿ ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಕೋಳಿ ಮೊಟ್ಟೆ ನೀಡುವ ತೀರ್ಮಾನ ಮಾಡಿಸಿದ್ದಾರೆ!
ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಬೇಕೆಂದು ಸರ್ಕಾರ ಸೂತ್ತೋಲೆ ಹೊರಡಿಸಿ,ಅಧಿಕೃತವಾಗಿ ನಿನ್ನೆಯಿಂದ ಒಂದನೆಯ ತರಗತಿಯಿಂದ ಎಂಟನೆಯ ತರಗತಿಯವರೆಗಿನ ಎಲ್ಲಾ ಸರ್ಕಾರಿ-ಅನುದಾನಿತ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ. ನಿನ್ನೆ ಎಲ್ಲೆಡೆ ಮಧ್ಯಾಹ್ನ ಸಾವಿರಾರು ಬಡ ಮಕ್ಕಳು ಖುಷಿಖುಷಿಯಾಗಿ ಮೊಟ್ಟೆ ಸೇವಿಸಿದ್ದಾರೆ.ಮೊಟ್ಟೆ ತಿನ್ನದ ಮಕ್ಕಳಿಗೆ ಅವರ ಇಚ್ಛೆಗನುಸಾರವಾಗಿ ಬಾಳೆಹಣ್ಣು ನೀಡಿದ್ದಾರೆ. ಎಲ್ಲಿಯೂ ಸಹ ಇದರ ವಿರುದ್ಧ ಮಕ್ಕಳಿಂದಾಗಲಿ,ಪಾಲಕರಿಂದಾಗಲಿ ಸಣ್ಣ ಅಪಸ್ವರವೂ ಬಂದಿಲ್ಲ!
(ಇದನ್ನು ನಿನ್ನೆಯೇ ಯೋಜನೆ ಜಾರಿಯಲ್ಲಿರುವ ಏಳು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ)
ಮೊಟ್ಟೆ ಯೋಜನೆಗೆ ಇಡೀ ಲಿಂಗಾಯತರ ವಿರೋಧವಿದೆಯೇ?!
ಖಂಡಿತಾ ಇಲ್ಲ. ಅಧಿಕೃತವಾಗಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಜಾಗತಿಕ ಲಿಂಗಾಯತ ಮಹಾಸಭೆ ನಿನ್ನೆಯೇ ಈ ಯೋಜನೆಗೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.ಸಂಘಟನೆಯ ಮುಂಚೂಣಿ ನಾಯಕ ಶಿವಾನಂದ ಜಾಮದಾರ್ ಅವರು ಮಾಧ್ಯಮಗಳಿಗೆ ‘ಸರ್ಕಾರಿ ಆದೇಶದಲ್ಲಿ ಶಾಖಾಹಾರಿಗಳಿಗೆ ಬಾಳೆಹಣ್ಣು ಮಾಂಸಾಹಾರಿಗಳಿಗೆ ತತ್ತಿಯನ್ನು ನೀಡುತ್ತಿದೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದ್ದರಿಂದ ಜೆ ಎಲ್ ಎಮ್ ಸದರಿ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತದೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಮೊಟ್ಟೆ ಯೋಜನೆಗೆ ನಮ್ಮ(ಜಾಗತಿಕ ಲಿಂಗಾಯತ ಮಹಾಸಭೆಯ) ವಿರೋಧವಿಲ್ಲವೆಂದು ಸಾರ್ವಜನಿಕವಾಗಿಯೇ ಸ್ಪಷ್ಟಪಡಿಸಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ!
ಜತೆಗೆ, ಸದಾ ಮನುಷ್ಯಮುಖಿಯಾಗಿ ಯೋಚಿಸುವ-ಮಾತಾಡುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ‘ದಿ ಪೊಲಿಟಿಕ್ ಡಾಟ್ ಇನ್’ ಜೊತೆಗೆ ಮಾತಾಡಿ ‘ಆಹಾರ ಅವರವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ನಮ್ಮಲ್ಲಿ ಸಸ್ಯಹಾರಿಗಳು ಇರುವಂತೆ ಮಾಂಸಹಾರಿಗಳೂ ಇದ್ದಾರೆ. ಒಬ್ಬರ ಆಹಾರ ಪದ್ಧತಿಯನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ. ಮೊಟ್ಟೆ ಬಯಸುವವರಿಗೆ ಅದನ್ನು ಕೊಡುವಲ್ಲಿ ತಪ್ಪಿಲ್ಲ. ಮೊಟ್ಟೆ ಬೇಡ ಎನ್ನುವವರಿಗೆ ಉತ್ತಮ ಪೋಷಕಾಂಶಗಳಿರುವ ಹಣ್ಣುಗಳನ್ನು ಕೊಡಬಹುದು. ಇದು ನಮ್ಮ ಸ್ಪಷ್ಟ ಅಭಿಪ್ರಾಯ/ನಿಲುವಾಗಿದೆ’ ಎಂದು ತಮ್ಮ ನಿಲುವು ವ್ಯಕ್ತಪಡಿಸುವ ಮೂಲಕ ಬಡ ಮಕ್ಕಳ ಪರವಾಗಿ ಗಟ್ಟಿಯಾಗಿ ಧ್ವನಿಗೂಡಿಸಿದ್ದಾರೆ!
ಇನ್ನೂ ಲಿಂಗಾಯತ ಮಠಾಧೀಶರ ಒಕ್ಕೂಟದಿಂದಲ್ಲೂ ಸಣ್ಣ ಅಪಸ್ವರವೂ ಬಂದಿಲ್ಲ. ಒಕ್ಕೂಟದ ಗದಗ ಶ್ರೀಗಳ ಜೊತೆಗೆ ‘ದಿ ಪೊಲಿಟಿಕ್ ಡಾಟ್ ಇನ್’ ಇದೇ ವಿಚಾರವಾದ ಕುರುತು ಮಾತನಾಡಿಸಿದಾಗ, ಅವರು ಸಹ ತಮ್ಮ ಮಾತಿನಲ್ಲಿ ಎಲ್ಲಿಯೂ ಈ ಯೋಜನೆಯನ್ನು ವಿರೋಧಿಸಿ ಮಾತನಾಡಿಲ್ಲ.( ಈಗಾಗಲೇ ಶಿವಾನಂದ ಜಾಮದಾರ್ ಮತ್ತು ಸಾಣೇಹಳ್ಳಿ ಶ್ರೀಗಳಿಂದ ಪ್ರತಿಕ್ರಿಯೆ ಬಂದಿರುವುದರಿಂದ,ಅವರ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ)
ಸಾಮಾಜಿಕ ಜಾಲತಾಣಗಳಲ್ಲಿ ‘ರಾಷ್ಟ್ರೀಯ ಬಸವದಳ’ ದವರನ್ನು ಹೊರತು ಪಡಿಸಿ ಬಹುತೇಕ ಲಿಂಗಾಯತರು ‘ಬಡಮಕ್ಕಳ ಪೌಷ್ಟಿಕ ಆಹಾರ ಕಸಿದುಕೊಳ್ಳಲು ನಾವ್ಯಾರು’ ಎಂಬರ್ಥದಲ್ಲೆಯೇ ಪ್ರತಿಕ್ರಿಯೆಸಿದ್ದಾರೆ.ಜತೆಗೆ ಬಹುತೇಕ ಪ್ರಗತಿಪರ ಲಿಂಗಾಯತರು ‘ರಾಬದ’ ನಡೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದಾರೆ.
ಎಲ್ಲರೂ ದೇವರು – ಧರ್ಮದ ಬಗ್ಗೆ ಮಾತನಾಡುತ್ತಿದ್ದಾಗ ಮನುಷ್ಯನ ಬಗ್ಗೆ ಮಾತನಾಡಿದ್ದು ಮಹಾದಾರ್ಶನಿಕ ಬಸವಣ್ಣನವರು.ಈಗ ಇದೇ ಬಸವ ಪ್ರಣೀತ ಲಿಂಗಾಯತರು ಬಡ ಮಕ್ಕಳ ಬಟ್ಟಲಿಗೆ ಕೈ ಹಾಕಿ ಪೌಷ್ಟಿಕ ಆಹಾರ ಮೊಟ್ಟೆ ಕಸಿದುಕೊಳ್ಳಲು ಮುಂದಾಗಿರುವುದು ಕಂಡು ನೆಟ್ಟಿಗರು (ದಲಿತರೂ,ಲಿಂಗಾಯತರೂ,ಅಲ್ಪಸಂಖ್ಯಾತರೂ,ಹಿಂದುಳಿದ ವರ್ಗದವರೂ ಮತ್ತು ಪ್ರಗತಿಪರ ಲಿಂಗಾಯತರು) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈಗ ಸಮುದಾಯದಿಂದ ಅಧಿಕೃತವಾಗಿ ಪ್ರತಿಕ್ರಿಯೆ ಬಂದಮೇಲೆ ಇದಕ್ಕೆ ಇಡೀ ಲಿಂಗಾಯತರ ವಿರೋಧವಿಲ್ಲವೆಂಬ ಸತ್ಯ ಸಮಾಜಕ್ಕೆ ಮನದಟ್ಟಾಗಿದೆ.
ಕೊನೆಯ ಮಾತು:ಲಿಂಗಾಯತ ಸಮುದಾಯದ ಪ್ರಗತಿಪರರು ಸರ್ಕಾರದ ಈ ನಡೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಏಕೆಂದರೆ ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ’ಯ ಕೂಗು ಎದ್ದಮೇಲೆ ನಮ್ಮ ನೈಜ ಶತ್ರುಗಳು ಯಾರು-ನಮ್ಮ ಮಿತ್ರರು ಯಾರು ಎನ್ನುವ ಸತ್ಯ ಅವರಿಗೂ ಬಹಳ ಸ್ಪಷ್ಟವಾಗಿ ಮನದಟ್ಟಾಗಿದೆ. ಈ ಆಹಾರದ ಚರ್ಚೆ ಕೊನೆಗೆ ರಕ್ತಪಿಪಾಸು ‘ಕೋಮುವಾದಿಗಳಿಗೆ’ ಲಾಭ ತಂದುಕೊಡುತ್ತದೆ ಎನ್ನುವ ಅರಿವು ಅವರಲ್ಲಿದೆ.ಹಾಗಾಗಿಯೇ, ಸರ್ಕಾರದ ಈ ನಿರ್ಧಾರವನ್ನು ಬಹಿರಂಗವಾಗಿಯೆ ಸ್ವಾಗತಿಸುತ್ತಿದ್ದಾರೆ!