ಇವತ್ತೇ ನಾನು ಈ ಹೆಸರನ್ನು ಕೇಳುತ್ತಿರುವುದು. “ಅಮೀರ್ ಏ ಶರೀಯತ್ ಆಫ್ ಕರ್ನಾಟಕ”ವಂತೆ! ಇದು ಮೌಲ್ವಿಗಳ ಸಂಘಟನೆಯಂತೆ!! “ಹಿಜಾಬ್ ಕುರಿತಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಒಪ್ಪಲಾಗದು” ಎಂದು ಈ ಸಂಘಟನೆ ರಾಜ್ಯ ಬಂದ್ ಗೆ ಕರೆ ಕೊಟ್ಟಿದೆ. ಮೊದಲಿಗೆ ಈ ಕರೆಯನ್ನು ನಾನು ವಿರೋಧಿಸುತ್ತೇನೆ. ಮತ್ತು ಮೌಲ್ವಿಗಳಾದವರು ಈ ಬಗೆಯ ಸಾಮಾಜಿಕ ಅವಿವೇಕದ ಕರೆಯನ್ನು ಕೊಟ್ಟಿರುವುದನ್ನು ಖಂಡಿಸುತ್ತೇನೆ.
ಮೌಲ್ವಿಗಳಾದವರು ತಮ್ಮ ಧಾರ್ಮಿಕ ಶ್ರದ್ಧೆ ಆಚರಣೆಗಳಲ್ಲಿ ತೊಡಗಿಸಿಕೊಂಡು ಅಷ್ಟು ಮಾತ್ರಕ್ಕೆ ತಮ್ಮನ್ನು ಸೀಮಿತವಾಗಿಟ್ಡುಕೊಳ್ಳುವುದು ಒಳ್ಳೆಯದು. ಯಾವುದೇ ಧರ್ಮದ ನಾಯಕರಾಗಿರಲಿ. ಅವರು ಮಾಡಿದ್ದಾರೆ ನಾವು ಮಾಡುತ್ತಿದ್ದೇವೆ ಎಂದು ಇನ್ನೊಬ್ಬರ ಕಡೆ ಬೆರಳು ತೋರಿಸುವುದೂ ಬಾಲಿಶತನ. ಅಷ್ಟಕ್ಕೂ ರಾಜಕೀಯ ಪ್ರತಿಕ್ರಿಯೆ ಚಟುವಟಿಕೆ ಬೇಡವೇ ಬೇಡ ಎಂದು ನಾನು ಹೇಳುತ್ತಿಲ್ಲ.
ಆದರೆ ಅಷ್ಟನ್ನು ನಿಭಾಯಿಸಬೇಕೆಂದರೆ ಕನಿಷ್ಟ ಅರಿವು ಅರ್ಹತೆಯ ಸ್ವಯಂ ಪ್ರಜ್ಞೆ ಇರಬೇಕು. ಅದಿಲ್ಲದೇ ತೋರಿಸುವ ಉತ್ಸಾಹ ಉಪದ್ವಾಪಿತನ ಮಾತ್ರವಲ್ಲ ಸಮಾಜ ಪೀಡಕವೂ ಆಗುತ್ತದೆ. ಬಂದ್ ಗೆ ಕರೆ ಕೊಟ್ಟಿರುವ ಮೌಲ್ವಿಗಳಿಂದ ಹೇಳಿಕೆಯಿಂದ ಬಂದಂತೂ ಆಗುವುದಿಲ್ಲ. ಆದರೆ ಆಗುವುದಾದರೆ ಅದು ಒಟ್ಟಾರೆ ಸಮಾಜಕ್ಕೆ, ನಿರ್ದಿಷ್ಟವಾಗಿ ಇವರೇ ಪ್ರತಿನಿಧಿಸುವ ಮುಸ್ಲಿಂ ಸಮುದಾಯಕ್ಕೆ ಒಂದು ಕೇಡು ಅಷ್ಟೇ.
ಈ ಮೌಲ್ವಿಗಳಿಗೆ ಕನಿಷ್ಟ ಜ್ಞಾನವಾದರೂ ಇರಬೇಕು. ತೀರ್ಪು ಬಂದಿರುವುದು ಹೈಕೋರ್ಟಿನಿಂದ. “ಇದನ್ನು ಒಪ್ಪುವುದಿಲ್ಲ” ಎಂದರೆ ಯಾವ ಸಂದೇಶ ನೀಡಿದಂತಾಗುತ್ತದೆ? ನನಗೂ ಈ ತೀರ್ಪಿನಿಂದ ಅಸಮಾಧಾನವಾಗಿದೆ. ಆದರೆ ಕೊರ್ಟ್ ಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನುವುದು ತಾಂತ್ರಿಕವಾಗಿಯಾದರೂ ಸತ್ಯವಾಗಿರುವುದರಿಂದ ಸಂವಿಧಾನವನ್ನು ಗೌರವಿಸುವವರು ಕೋರ್ಟ್ ತೀರ್ಪನ್ನು ಗೌರವಿಸಬೇಕಾಗುತ್ತದೆ. ಹೈಕೋರ್ಟ್ ತೀರ್ಪನ್ನು ಒಪ್ಪದಿದ್ದಲ್ಲಿ ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಅವಕಾಶವಿದೆ.
ಇದನ್ನೂ ಓದಿ : ಬಿಜೆಪಿಯ ಗೆಲುವುಗಳು, ದೇಶದ ಪ್ರಜಾಪ್ರಭುತ್ವದ ಪ್ರಶ್ನೆಗಳೂ…!
ಅಷ್ಟನ್ನು ಮಾಡಬಹುದೇ ಹೊರತು ಬಂದ್ ಗೆ ಕರೆಕೊಟ್ಟರೆ ಮೌಲ್ವಿಗಳು ಸಾಂವಿಧಾನಿಕ ಸಂಸ್ಥೆಯನ್ನು, ನ್ಯಾಯಾಂಗವನ್ನು ಪ್ರಶ್ನಿಸಿದಂತಾಗುತ್ತದೆ. ಮುಸ್ಲಿಮರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ವಿರೋಧಿಗಳು ಹುಯಿಲು ಎಬ್ಬಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಷ್ಟು ಮಾತ್ರವಲ್ಲ, ಈಗಾಗಲೆ ಕೋಮುವಾದ ಚಾಲ್ತಿಯಲ್ಲಿಟ್ಟಿರುವ ಮುಸ್ಲಿಮರಿಗೆ “ದೇಶಕ್ಕಿಂತ ಧರ್ಮ ಮುಖ್ಯ” ಎಂಬ ಸುಳ್ಳಿಗೆ ಅಥವಾ ಅಪವ್ಯಾಖ್ಯಾನಕ್ಕೆ ಪುಷ್ಠಿ ಕೊಟ್ಟಂತಾಗುತ್ತದೆ.
ಇಂತಹ ಮೌಲ್ವಿಗಳಿಗೆ ನಿಜವಾಗಿಯೂ ಮುಸ್ಲಿಮರ ಮೇಲೆ ಕಾಳಜಿಯಿದ್ದರೆ ಇಂತಹ ಅಪ್ರಬುದ್ಧ ಕರೆ ಕೊಡದೇ ಸುಮ್ಮನಿರುವುದು ಒಳಿತು. ಮೌಲ್ವಿಗಳು ಅದೇನಾದರೂ ಮಾಡಿಕೊಳ್ಳುವುದಾದರೆ ತಮ್ಮ ಧಾರ್ಮಿಕ ಪರಿಧಿಯಲ್ಲಿ ಮಾಡಿಕೊಳ್ಳಲಿ. ತಮ್ಮ ಜ್ಞಾನವನ್ನು ಧಾರ್ಮಿಕತೆಯಿಂದಾಚೆ ರಾಜಕೀಯಕ್ಕೂ ವಿಸ್ತರಿಸಿಕೊಳ್ಳಬೇಕು ಎಂಬ ಇಚ್ಛೆ ಇದ್ದರೆ ಭಾರತದ ರಾಜಕೀಯ ಚರಿತ್ರೆಯನ್ನು, ರಾಜಕೀಯ ಬಹು ಸಿದ್ಧಾಂತಗಳು ಮತ್ತು ಅವುಗಳ ಕಾರ್ಯತಂತ್ರವನ್ನು ಸರಿಯಾಗಿ ಓದಿ ತಿಳಿದುಕೊಂಡು ನಂತರ ಮಾತಾಡಲಿ.
ಭಾರತದ ಮುಸ್ಲಿಂ ಸಮುದಾಯ ಇವತ್ತು ಗಂಡಾಂತರವನ್ನು ಎದುರಿಸುತ್ತಿರುವಲ್ಲಿ ಇಂತಹ ಮೌಲ್ವಿಗಳ ಅವಿವೇಕಿ ಉತ್ಸಾಹವು ಬಹುದೊಡ್ಡ ಕೊಡುಗೆ ನೀಡಿದೆ. ಒಂದು ಶಾಬಾನು ಪ್ರಕರಣವೇ ಸಾಕು. ಅದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಇನ್ನು ಹಿಜಾಬಿನ ವಿಷಯವನ್ನು ಎಚ್ಚರದಿಂದ ನಿಭಾಯಿಸದೇ ಧಾರ್ಮಿಕ ಆವೇಶದಿಂದ ಪ್ರತಿಕ್ರಯಿಸಿದಲ್ಲಿ ಮೊದಲಿಗೆ ತಲೆ ಹೋಗುವುದು ಮುಸಲ್ಮಾನರದು.
ತಲೆಬಟ್ಟೆಗಾಗಿ ತಲೆಕೊಡುವ ಹುಂಬತನ ಬಿಟ್ಟು ಬಟ್ಟೆ ಮಡಚಿಟ್ಟು ತಲೆ ಉಳಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬ ವಿವೇಕವಿದಲ್ಲಿ ಮಾತ್ರ ಭಾರತದ ಮುಸ್ಲಿಮರ ಹಿತವಿದೆ ಎಂಬುದು ಈ ಮೌಲ್ವಿಗಳಿಗೆ ಅರ್ಥವಾಗುವುದು ಕಷ್ಟ. ಆದರೆ ಇದು, ಮುಸ್ಲಿಂ ಪ್ರಜ್ಞಾವಂತರ ಪಾಲಿಗೆ ಅನಿವಾರ್ಯ ಆಯ್ಕೆ ಎಂಬುದಂತೂ ಸತ್ಯ.
ಬಿ. ಪೀರ್ ಬಾಷ