SUBSCRIBE

ದ ಪಾಲಿಟಿಕ್

ಹೋರಾಟದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ – ಸಿಜೆಪಿ ನಡುವೆ ಸಂಘರ್ಷ…

2011, ಆಗಸ್ಟ್‌ 16ರಂದು ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ʻಲೋಕಪಾಲ್‌ ಮಸೂದೆʼ ಜಾರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೂತಿದ್ದರು. ಅದು ಮರುದಿನ ಚಳವಳಿಯ ರೂಪ ಪಡೆದು ದೇಶದಾದ್ಯಂತ ಕಾಡ್ಗಿಚ್ಚಿನಂತೆ ವಿಸ್ತರಿಸಿತ್ತು.

ಚಳವಳಿಯ ನೇತಾರರು ʻಲೋಕಪಾಲ ಮಸೂದೆ ಜಾರಿಯಾದರೆ ದೇಶದ ಜನತೆಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆʼ ಎಂದು ಜನರ ತಲೆಯಲ್ಲಿ ಹುಳು ಬಿಟ್ಟಿದ್ದರು. ತಮ್ಮ ಸಣ್ಣಪುಟ್ಟ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಲಂಚದ ಬಿಸಿಯಲ್ಲಿ ಬೆಂದು ಹೋಗಿದ್ದ ಮಧ್ಯಮವರ್ಗದ ಜನರಿಗೆ ಅವರ ಮಾತು ರುಚಿಸಿತ್ತು. ಅಣ್ಣ ಹಜಾರೆ ಅವರಲ್ಲಿ ತಮ್ಮ ಭಾಗ್ಯವಿಧಾತನನ್ನು ಕಂಡ ಜನರಲ್ಲಿ ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟುಹಾಕಲು ಆ ಚಳವಳಿ ಯಶಸ್ವಿಯಾಗಿತ್ತು.

ಈ ಚಳವಳಿಯ ಸಾರಥಿ ಅಣ್ಣಾ ಹಜಾರೆಯಲ್ಲ, ಸಂಘಪರಿವಾರವಾಗಿತ್ತು ಎಂಬ ಸಂಗತಿ ಬಹಿರಂಗವಾಗಿ ಕೆಲವರಿಗೆ ಸಿಡಿಲು ಬಡಿದಂತಾಗಿತ್ತು. ಈ ಚಳವಳಿಯ ಉದ್ದೇಶ ಕೇವಲ ಲೋಕಪಾಲ ಮಸೂದೆ ಮಾತ್ರವಾಗಿರಲಿಲ್ಲ, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿತ್ತು ಎಂಬುದು ಅನೇಕರಿಗೆ ಖಾತ್ರಿಯಾಗಿತ್ತು.

ಅದೇ ಕಾವಿನಲ್ಲಿ ಅ ಕಡೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿತ್ತು, ಈ ಕಡೆ ʼಆಮ್‌ ಆದ್ಮಿʼ ಪಕ್ಷ ಹುಟ್ಟಿತ್ತು. ಈಗದು ರಾಜಕೀಯ ಇತಿಹಾಸ.

ಹದಿನೈದು ವರ್ಷದ ನಂತರ ದೇಶದಲ್ಲಿ ಮತ್ತೆ ಜೆನ್‌-ಝೀ ಪೀಳಿಗೆಯಿಂದಾಗಿ ಒಂದು ದೊಡ್ಡ ಚಳವಳಿ ಆರಂಭವಾಗಿದೆ. ಸಿಜೆಪಿ (ಕಾಕ್ರೋಜ್‌ ಜನತಾ ಪಾರ್ಟಿ) ಹೋರಾಟದ ವೇದಿಕೆ ರೂಪಿಸಿಕೊಟ್ಟಿದ್ದೆ. ಇದೂ ಸಹ ಮತ್ತೊಂದು ಅಣ್ಣಾ ಚಳವಳಿ ಆಗಬಹುದೇನೋ ಎಂಬ ಶಂಕೆ ಕೆಲವರಲ್ಲಿದೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ದೀಪ್ಕೆ ಹಾಗೂ ನೇಹಾ ಇವರಿಬ್ಬರಲ್ಲಿ ಯಾರು ಉತ್ತಮರು ಎಂಬ ಚರ್ಚೆ ಹುಟ್ಟಿದೆ. ಹಲವರು ನೇಹಾ ಬೋರಾ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಅದೇನೇ ಇರಲಿ. ದೇಶದಲ್ಲಿ ಜನರು ಬಿಡಿ, ವಿರೋಧ ಪಕ್ಷದ ಘಟಾನುಘಟಿ ನಾಯಕರು ಸಹ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಮಾತಾಡಲು ಭಯ ಪಡುವಂತಹ ವಾತಾವರಣವಿತ್ತು. ಜೆನ್‌ – ಝೀಗಳು ಹತ್ತು ವರ್ಷಗಳ ಭಯ ಹತ್ತೇ ದಿನದಲ್ಲಿ ದೇಶದಿಂದ ಕಿತ್ತು ಹಾಕಿದ್ದಾರೆ.

ಪ್ರಧಾನಿ ಮೋದಿಯವರು ಜೆನ್‌-ಝೀ ಹೋರಾಟಕ್ಕೆ ತಲೆಬಾಗಿ ತಮ್ಮ ಸಚಿವ ಸಂಪುಟದ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಪಡೆದರು. ಜತೆಗೆ ಅರ್ಧರಾತ್ರಿಯಲ್ಲಿ ಎದ್ದು ಜೆನ್‌-ಝೀಗಳಿಗೆ ʻಫ್ರೇಂಡ್ಸ್‌ʼ ಎಂದು ಕರೆಯುವಂತಹ ಸ್ಥಿತಿಗೆ ಬಂದಿದ್ದಾರೆ. ನೇಹಾ ಬೋರಾ ಎಂಬ ದಿಟ್ಟ ಹುಡುಗಿ ದೇಶದ ಬೆಳಕಾಗಿ ಕಾಣುತ್ತಿದ್ದಾಳೆ. ಸಿಜೆಪಿಯ ಸೌರವ್‌ ದಾಸ್‌, ಅಶುತೋಷ್‌ ರಾಂಕಾ, ಅಭೀಜಿತ್‌ ದಿಪ್ಕೆ ದೇಶದ ಗಮನ ಸೆಳೆಯುತ್ತಿದ್ದಾರೆ.

ಈಗ ಚುನಾವಣಾ ಆಯೋಗದ ವಿರುದ್ಧ ದೇಶದ ಎಲ್ಲಾ ವಿರೋಧ ಪಕ್ಷಗಳು, ಜನಪರ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಜೆನ್‌-ಝೀಗಳು ಹೋರಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಇವರೆಲ್ಲರನ್ನೂ ಒಂದೇ ವೇದಿಕೆಗೆ ತರಲು ಸತ್ಯಾಗ್ರಹ ಎಂಬ ಡಿಜಿಟಲ್‌ ವೇದಿಕೆ ಹುಟ್ಟುಹಾಕಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ 31,669 ಜನರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶಿಕ್ಷಣ ವ್ಯವಸ್ಥೆಯ ಕುರಿತು 5606 ಹಾಗೂ ಭ್ರಷ್ಟಾಚಾರದ ವಿರುದ್ಧ 5328 ದೂರುಗಳು ದಾಖಲಾಗಿವೆ.

ಇದು ಈಗ ಸಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕ್ರೆಡಿಟ್‌ ವಾರ್‌ ಹುಟ್ಟುಹಾಕಿದೆ. ಈ ಸತ್ಯಾಗ್ರಹ  ಸ್ಥಾಪಿಸಿದ್ದೇ ಹೋರಾಟದ ಕ್ರೆಡಿಟ್‌ ತಮ್ಮದಾಗಿಸಿಕೊಳ್ಳಲು ಎಂದು ಸಿಜೆಪಿ ಟೀಕೆ ಮಾಡಿದರೆ, ಕಾಂಗ್ರೆಸ್‌ ಅದಕ್ಕೆ ತಿರುಗೇಟು ನೀಡಿದೆ.

ಸಿಜೆಪಿ ನಾಯಕರಾದ ಅಶುತೋಷ್‌ ರಾಂಕಾ ಹಾಗೂ ಸೌರವ್‌ ದಾಸ್‌ ʻಸ್ವಯಂಘೋಷಿತ ಉದಾರವಾದಿ ವ್ಯವಸ್ಥೆಯು ಸಿಜೆಪಿ ಸ್ಥಾಪಕ ಅಭೀಜಿತ ದೀಪ್ಕೆ ಅವರನ್ನು ಕುಗ್ಗಿಸಲು ಯತ್ನಿಸುತ್ತಿದೆ. ತಾವೇ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಗುತ್ತಿಗೆದಾರರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆʼ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ತಮ್ಮ ಟ್ವಿಟರ್‌ ಮೂಲಕ ಹರಿಹಾಯ್ದಿದ್ದಾರೆ.

ಇದಕ್ಕೆ ಕಾಂಗ್ರೆಸ್‌ ನಾಯಕ ವಿಜಯ್‌ ತೊಟ್ಟಿತ್ತಿಲ್‌ ʼಎನ್‌ಎಸ್‌ಯುಐ ಹಾಗೂ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರು, ಸಿಜೆಪಿ ಪ್ರತಿಭಟನಾಕಾರರಿಗೆ ಮುಂಬೈಯಲ್ಲಿ ಮುಕ್ತವಾಗಿ ಓಡಾಡಲು ಏಕೆ ಬಿಟ್ಟಿದ್ದಾರೆʼ ಎಂದು ಪ್ರಶ್ನಿಸಿ, ತಿರುಗೇಟು ನೀಡಿದ್ದಾರೆ.

ಇದನ್ನು ಕಂಡು ʼಕಾಂಗ್ರೆಸ್‌ ತನ್ನ ಬೆಂಬಲಿಗರನ್ನು ನಿಯಂತ್ರಿಸಬೇಕು. ಸಿಜೆಪಿ, ಐಸಾ ಹಾಗೂ ಕಾಂಗ್ರೆಸ್‌ ಹೋರಾಡುತ್ತಿರುವುದು ಒಂದೇ ಶತ್ರುವಿನ ವಿರುದ್ಧ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸುವುದು ಸರಿಯಲ್ಲʼ ಎಂದು ಕಾಂಗ್ರೆಸ್‌ನ ತುಷಾರ್‌ ಗಾಂಧಿ ಸಲಹೆ ನೀಡಿದ್ದಾರೆ.

ಈ ಟ್ವಿಟರ್‌ ವಾರ್‌ ಕೆಲವರಲ್ಲಿ ಸಿಜೆಪಿ ಮುಂದಾಳುಗಳು ಆಮ್‌ ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್‌ ಅಣತಿಯಂತೆ ಕೆಲಸ ಮಾಡುತ್ತಿದ್ದಾರೇನೋ ಎಂಬ ಅನುಮಾನ ಹೆಚ್ಚಿಸಿದೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಫಾರಂ-7 ಸಲ್ಲಿಸಿದ್ದು ಕಾರ್ಯಕರ್ತರಲ್ಲ, ನಾವೇ ಎಂದ ಸಿ.ಟಿ. ರವಿ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಚುನಾವಣಾ ಆಯೋಗ ಕಳೆದ ವರ್ಷ ಎಸ್‌ಐಆರ್‌ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಆರಂಭಿಸಿದಾಗಿನಿಂದ ರಾಜಕೀಯ ಪಡಸಾಲೆಯಲ್ಲಿ ಪರ – ವಿರೋಧದ ಚರ್ಚೆ ಬಿರುಸಾಗಿಯೇ ನಡೆಯುತ್ತಿವೆ. ಈಗ ದೇಶದೆಲ್ಲೆಡೆ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ನಡೆಯುತ್ತಿರುವ ಹೋರಾಟವು ಆಯೋಗವನ್ನು ಕಟಕಟೆಯಲ್ಲಿ ತಂದು ನಿಲ್ಲಿಸಿದೆ. ದೇಶದ ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಜೆನ್‌-ಝೀಗಳು ಪ್ರಶ್ನೆ ಕೇಳುತ್ತಿರುವುದು ಆಯೋಗಕ್ಕೆ. ಆದರೆ, ಉತ್ತರ ಬರುತ್ತಿರುವುದು ಬಿಜೆಪಿ ಕಚೇರಿಯಿಂದ. ಇದೊಂದು ವಿಚಿತ್ರ ವಿದ್ಯಮಾನವಾಗಿದೆ. ಮುಖ್ಯ ಆಯುಕ್ತರು ಮಾತ್ರ ಇದಕ್ಕೂ ನನಗೂ ಏನು ಸಂಬಂಧವಿಲ್ಲವೆಂಬಂತೆ ಆಯೋಗದ ಎಸಿ ರೂಮಿನಲ್ಲಿ ತಣ್ಣಗೆ ಕೂತಿದ್ದಾರೆ. ಇದುವರೆಗೆ ಮಾಧ್ಯಮಗಳ ಮುಂದೆ ಬಂದು ಜನರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಅವರು ಹೋಗಿಲ್ಲ. ಇದಕ್ಕೆ ಉದ್ಧಟತನವೆಂದು ಹೇಳದೆ ಇನ್ನೇನು ಅನ್ನಬೇಕೋ?

ಈಗ ರಾಜ್ಯದಲ್ಲಿ ಫಾರಂ-7 ಅರ್ಜಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಅರ್ಜಿಯ ಅವಶ್ಯಕತೆ ಇರಲಿಲ್ಲ. ಆಯೋಗವೇ ತಮಗಾಗದವರ ಮತಗಳನ್ನು ಡಿಲೀಟ್‌ ಮಾಡಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಒಂದು ದಿನ ಕೇವಲ ಹತ್ತು ಅರ್ಜಿಗಳು ಹಾಗೂ ಒಟ್ಟಾರೆ ಐವತ್ತು ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂದು ನಿಯಮವಿದೆ. ಕೆಲವರಿಂದ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದೆ. ಬಹುತೇಕ ಅರ್ಜಿಗಳು ಮುಸ್ಲಿಂ ಮತದಾರರಿಗೆ ಸಂಬಂಧಿಸಿವೆ. ಇದು ಏನೇನು ಸೂಚಿಸುತ್ತದೆ?

ಸ್ವಯಂಸ್ಪೂರ್ತಿಯಿಂದ ಬಿಜೆಪಿ ಕಾರ್ಯಕರ್ತರು ಬಿಡಿಬಿಡಿಯಾಗಿ ಅರ್ಜಿ ಸಲ್ಲಿಸುತ್ತಿರಬಹುದೆಂದು ಮತದಾರರು ಭಾವಿಸಿದ್ದರು. ತಮ್ಮ ಮೇಲೆ ಕೇಸ್ ಎಳೆದುಕೊಂಡು ಠಾಣೆಗೆ ಅಲೆದಾಡುತ್ತಿರುವ ಬಿಜೆಪಿ ಕಾರ್ಯಕರ್ತರ ಮಾತುಗಳಿಂದಲೇ ಇದೊಂದು ಯೋಜಿತ ಜಾಲ ಎಂಬುದು ಜಗಜ್ಜಾಹೀರಾಗಿದೆ.

ವಿರೋಧ ಪಕ್ಷದ ನಾಯಕರು ಅರ್ಹರ ಮತಗಳನ್ನು ಯಾರೇ ಅಳಿಸಲು ಯತ್ನಿಸಿದರೂ ಅವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮಕೈಗೊಳ್ಳಿ ಎಂದು ಹೇಳಬೇಕಿತ್ತು. ಆದರೆ, ʻಅವರು ನಮ್ಮ ಕಾರ್ಯಕರ್ತರಿಗೆ ಕೇಸ್‌ ಹಾಕಿದರೆ ಹುಷಾರ್‌ʼ ʻಠಾಣೆಗೆ ಮುತ್ತಿಗೆ ಹಾಕುತ್ತೇವೆʼ ʻಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಠಾಣೆಗಳನ್ನು ಪಕ್ಷದ ಕಚೇರಿ ಮಾಡಿಕೊಂಡಿದೆʼ..ಹೀಗೆ ತರಹೇವಾರಿ ಆವಾಜ್‌ ಹಾಕುತ್ತಿದ್ದಾರೆ. ಜತೆಗೆ ರಾಜ್ಯಪಾಲರ ಕಚೇರಿಯ ಬಾಗಿಲು ಬಡಿದಿದ್ದಾರೆ. ವಿರೋಧ ಪಕ್ಷದ ನಾಯಕರ ಈ ನಡೆಯಿಂದ ಇದರ ಹಿಂದೆ ಪಕ್ಷದ್ದೇ ಕೈವಾಡವಿದೆ, ಕಾರ್ಯಕರ್ತರು ಅಮಾಯಕರು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಒಂದು ಹೆಜ್ಜೆ ಮುಂದೆ ಬಂದು ʻನಾವು ಅನುಮಾನದ ಮೇಲೆ ಫಾರಂ -7ನ್ನು ಕೊಟ್ಟಿದ್ದೇವೆ. ದೂರುದಾರರ ಗೌಪ್ಯತೆ ಕಾಪಾಡುವುದು ಎಆರ್‌ಒಗಳ (ಅಸಿಸ್ಟೆಂಟ್‌ ರಿಟರ್ನಿಂಗ್‌ ಆಫೀಸರ್)‌ ಕರ್ತವ್ಯ. ನಾವು ಕೊಟ್ಟ ದೂರಿನ ಪ್ರತಿಗಳು ಕಾಂಗ್ರೆಸ್‌ ಕೈಗೆ ಹೇಗೆ ಹೋಯಿತುʼ ಎಂದು ಆಯೋಗದ ಮೇಲೆ ಹರಿಹಾಯ್ದಿದ್ದಾರೆ. ಜತೆಗೆ ʻದೂರು ಕೊಟ್ಟವರ ಹೆಸರು ಬಹಿರಂಗ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಿʼ ಎಂದು ಆಗ್ರಹಿಸಿದ್ದಾರೆ.

ʻಕಾನೂನಿನ ಪ್ರಕಾರವೇ ನಮ್ಮ ಕಾರ್ಯಕರ್ತರು ಅರ್ಜಿ ಕೊಟ್ಟಿದ್ದಾರೆ. ಅದರ ಗೌಪ್ಯತೆ ಕಾಪಾಡದೆ ಬಹಿರಂಗ ಪಡಿಸಿದ್ದು ತಪ್ಪುʼ ಎಂದು ಹೇಳುವ ಉತ್ಸಾಹದಲ್ಲಿ ಅರ್ಜಿ ಕೊಟ್ಟಿದ್ದು ಕಾರ್ಯಕರ್ತರಾಗಿದ್ದರೂ ಅವರ ಹಿಂದೆ ಇದ್ದದ್ದು ನಾವುಗಳು, ಇದು ನಮ್ಮ ಪಕ್ಷದ ಸೂಚನೆಯಾಗಿತ್ತು ಎಂದು ಸಿ.ಟಿ.ರವಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ನೆಟ್ಟಿಗರು ಕಿಚಾಯಿಸಿ, ಅವರ ಕಾಲೆಳೆಯುತ್ತಿದ್ದಾರೆ.

ಅದೇನೇ ಇರಲಿ. ತಮ್ಮ ನಾಯಕರನ್ನು ನಂಬಿ ಕಾನೂನಿನ ಬಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಿದ್ದಿದ್ದಾರೆ. ದೂರು ಕೊಟ್ಟವರಲ್ಲಿ  ರಾಜಕಾರಣಿಗಳಾಗಲಿ, ಅವರ ಮಕ್ಕಳಾಗಲಿ ಯಾರೂ ಇಲ್ಲ. ಎಲ್ಲರೂ ಕಾರ್ಯಕರ್ತರೇ ಆಗಿದ್ದಾರೆ. ಎಫ್‌ಐಆರ್‌ಗಳು ದಾಖಲಾಗುವುದು ಇನ್ನೂ ನಿಂತಿಲ್ಲ. ದಾಖಲಾದ ದೂರುಗಳು ಯಾವ ತಿರುವು ಪಡೆಯುತ್ತವೆ ಎಂಬುದು ಕಾದು ನೋಡಬೇಕಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಪಶುವೈದ್ಯಾಧಿಕಾರಿ ಮಾತ್ರವಲ್ಲ, 13 ನೇಮಕಾತಿಗಳ ಬೆನ್ನುಬಿದ್ದ ಇ.ಡಿ.!

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಹಗರಣ ಬೆನ್ನುಹತ್ತಿರುವ ಇ.ಡಿ. ಅಧಿಕಾರಿಗಳು ಈಗ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವಧಿಯಲ್ಲಿ (ಜನವರಿ 2024 ರಿಂದ ಮಾರ್ಚ್‌ 2026ರವರೆಗೆ) ಕೆಪಿಎಸ್‌ಸಿ ಮೂಲಕ ನಡೆದ ಎಲ್ಲಾ 13 ನೇಮಕಾತಿಗಳ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆ. ಅವರ ಅವಧಿಯ ಇತರ ಪರೀಕ್ಷೆಗಳಲ್ಲಿಯೂ ಲಂಚದ ವಹಿವಾಟು ನಡೆದಿರುವ ಬಗ್ಗೆ ಸುಳಿವು ಸಿಕ್ಕಿರುವುದರಿಂದ ತನಿಖೆಯ ವ್ಯಾಪ್ತಿ ವಿಸ್ತರಿಸಿದೆ.

ಒಂದು ಕಡೆ ಇ.ಡಿ. (ಜಾರಿ ನಿರ್ದೇಶನಾಲಯ) ಮತ್ತೊಂದು ಕಡೆ ಎಸ್‌ಐಟಿ ಹಗರಣದ ಹಿಂದೆ ಬಿದ್ದಿರುವುದರಿಂದ ಈ ಹಗರಣಕ್ಕಾದರೂ ಮುಕ್ತಿ ಸಿಗಬಹುದೇನೋ? ಆಡಳಿತ ಪಕ್ಷದ (ಕೇಂದ್ರ ಹಾಗೂ ರಾಜ್ಯದ) ಅಧಿಕಾರಸ್ಥ ರಾಜಕಾರಣಿಗಳು ಯಾರನ್ನೋ ಉಳಿಸಲು ತನಿಖೆಯಲ್ಲಿ ಮೂಗುತೂರಿಸದಿದ್ದರೆ ಈ ಹಗರಣದ ಜಾತಕವಾದರೂ ಬಯಲಾಗಬಹುದು. ಈ ಹಗರಣದ  ಕೈಕಾಲು ಮುರಿದು ಬೀದಿಯಲ್ಲಿ ಎಸೆದರೆ, ಆಡಳಿತದಲ್ಲಿರುವ  ಕಾಂಗ್ರೆಸ್ ಪಕ್ಷ  ರಾಜಕೀಯ ಹೋರಾಟಗಳನ್ನು ಮಾಡಲು ನೈತಿಕತೆಯನ್ನು ಕಳೆದುಕೊಳ್ಳುತ್ತದೆ.  ಇ.ಡಿ. ಸಂಸ್ಥೆಯ ಮೇಲೆ ಅಲ್ಪಸಲ್ಪ ಉಳಿದಿರುವ ಜನರ ವಿಶ್ವಾಸವೂ ಮಣ್ಣಿಗೆ ಸೇರುತ್ತದೆ.

ಮತಗಳ್ಳತನದ ವಿರುದ್ಧ ಬೀದಿಗೆ ಬಂದಿರುವ ರಾಜ್ಯದ ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕೆಪಿಎಸ್‌ಸಿ ಹಗರಣದ ಬಗ್ಗೆ ಇದುವರೆಗೆ ಒಂದೂ ಮಾತಾಡದೇ ಇರುವುದು ಆಶ್ಚರ್ಯಕರವಾಗಿದೆ.  ಇಂತಹ ಸೆಲೆಕ್ಟಿವ್‌  ಹೋರಾಟಗಳಿಂದ ಆಡಳಿತ ಪಕ್ಷ ಹಾಗೂ  ಆಯಕಟ್ಟಿನ ಜಾಗದಲ್ಲಿ ಕೂತಿರುವ ಭ್ರಷ್ಟ ಅಧಿಕಾರಿಗಳಿಗೆ ಮತ್ತಷ್ಟು ಲೂಟಿ ಮಾಡಲು ಮಾಡಲು ದಾರಿ ಮಾಡಿಕೊಡುತ್ತವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಗ್ಯಾನೇಶ್‌ ಕುಮಾರ್‌ರ ಈ ಅನ್ಯಾಯ ನೋಡಾ…

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

 

ಭಾರತದಲ್ಲಿ ಸಂವಿಧಾನದೊಂದಿಗೆ ಹುಟ್ಟಿದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ಸ್ವತಂತ್ರವಾಗಿದೆ. ಈ ದೇಶ ಸುಕುಮಾರ್‌ ಸೇನ್‌ರಿಂದ ಗ್ಯಾನೇಶ್‌ ಕುಮಾರ್‌‌ವರೆಗೆ 26 ಜನ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಎಸ್‌ಐಆರ್‌ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ನಡೆಯುತ್ತಿಲ್ಲ. ಈ ಹಿಂದೆ 1952–56, 1957, 1961, 1965, 1966, 1983–84, 1987-89, 1992, 1993, 1995, 2002, 2003, 2004ರಲ್ಲಿ ಚುನಾವಣಾ ಆಯೋಗ ತನ್ನ ಶಾಸನಬದ್ಧ ಅಧಿಕಾರ ಚಲಾಯಿಸಿ ದೇಶದ ಎಲ್ಲಾ ಅಥವಾ ಕೆಲ ಭಾಗಗಳಲ್ಲಿ ಎಸ್‌ಐಆರ್‌ ನಡೆಸಿದೆ.

ಆಗ ಆಡಳಿತಾರೂಢ ಪಕ್ಷದಿಂದಾಗಲಿ, ಅದರ ಮಿತ್ರ ಪಕ್ಷಗಳಿಂದಾಗಲಿ ಅಥವಾ ವಿರೋಧ ಪಕ್ಷಗಳಿಂದಾಗಲಿ ಅಥವಾ ನಾಗರಿಕರಿಂದಾಗಲಿ ವಿರೋಧ ಬಂದಿಲ್ಲ. ಆಗಿಲ್ಲದ ವಿರೋಧ ಈಗೇಕೆ? ಎಂದು ಬಿಜೆಪಿ ಪಕ್ಷದ ನಾಯಕರು, ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.

ಈಗ ಆಯೋಗವು ದೇಶದ ಎಲ್ಲಾ ಭಾಗಗಳಲ್ಲಿ ಎಸ್‌ಐಆರ್‌ ನಡೆಸುತ್ತಿದೆ. ಸತ್ತಿರುವ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡುತ್ತಿದೆ. ಎರಡು ಕಡೆ ಮತದಾನದ ಹಕ್ಕು ಹೊಂದಿರುವರ ಹೆಸರನ್ನು ಒಂದು ಕಡೆ ಅಳಿಸುತ್ತಿದೆ. ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುತ್ತಿದೆ ಮತ್ತು ಮುಖ್ಯವಾಗಿ ಅಕ್ರಮವಾಗಿ ದೇಶದೊಳಗೆ ನುಸುಳಿದ್ದಲ್ಲದೇ, ಮತದಾರರ ಪಟ್ಟಿಯಲ್ಲಿ ಸೇರಿರುವ ಬಾಂಗ್ಲಾದೇಶದವರನ್ನು ಮತ್ತೆ ಮಾಡಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಮಾಯ ಮಾಡುತ್ತಿದೆ… ಎಂದು ದೇಶದ ಜನರು ನಂಬಿದ್ದರು.

ಈ ಕೆಲಸಗಳನ್ನಷ್ಟೇ ಮಾಡಿದರೆ ಈಗ ಆಕ್ರೋಶದಿಂದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ಫೋಟೋಗಳನ್ನು ಯಾರು ಬೀದಿಯಲ್ಲಿ ಸುಡುತ್ತಿದ್ದಾರೋ ಪ್ರಾಯಶಃ ಅದೇ ಜನ ಅವರ ಮೂರ್ತಿ ಸ್ಥಾಪಿಸುತ್ತಿದ್ದರು.

ಆದರೆ,  ಗ್ಯಾನೇಶ್‌ ಕುಮಾರ್‌ರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ  ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡುತ್ತಿದ್ದಾರೆ. ಅವರ ಈ ಕೆಲಸಕ್ಕೆ  ಕೇಂದ್ರ ಸರ್ಕಾರದ ಬೆಂಬಲವಿದೆ. ಬೆಂಬಲವಿಲ್ಲದಿದ್ದರೆ  ಅವರಿಗೆ ಈ ಧೈರ್ಯ ಎಲ್ಲಿಂದ ಬರುತ್ತಿತ್ತು? ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಸಾಹಸಕ್ಕೆ ಅವರು ಯಾಕೆ ಕೈ ಹಾಕುತ್ತಿದ್ದರು? ಇದರಿಂದ ಅವರಿಗೆ ಏನು ಲಾಭವಿದೆ?

ಈ ಎಸ್‌ಐಆರ್‌ ಮೂಲಕ ದೇಶದ ನಾಗರಿಕರನ್ನು ʻಮತದಾನದ ಹಕ್ಕಿಲ್ಲದವರುʼ ಮತ್ತು ʻಮತದಾನದ ಹಕ್ಕಿರುವವರುʼ ಎಂದು ಎರಡು ವರ್ಗಗಳಾಗಿ ವಿಂಗಡಿಸುತ್ತಿದ್ದಾರೆ. ಚುನಾವಣಾ ಆಯೋಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ. ಈ ಹಿಂದೆ ನಡೆದ ಎಲ್ಲಾ  ಎಸ್‌ಐಆರ್‌ನಲ್ಲಿ ಡಿಲೀಟ್‌ ಮಾಡಿದ ಒಟ್ಟು ಮತದಾರರ ಸಂಖ್ಯೆ ಕೂಡಿಸಿದರೂ 13 ಕೋಟಿ ದಾಟುವುದಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದಿನ ಸರ್ಕಾರ ʻನೀವು ಭಾರತದ ನಾಗರಿಕರು ಎಂದು ಸಾಬೀತು ಪಡಿಸಿʼ ಎಂದು ಜನರಿಗೆ ಹೀಗೆ ಪಿಡಿಸಿದರೆ, ಆಗ ಮತದಾರರ ಪಟ್ಟಿಯಲ್ಲಿ ಸೇರಿದ 17.32 ಕೋಟಿ ಮತದಾರರಲ್ಲಿ ಬಹುತೇಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ತೆರಿಗೆ ಕಟ್ಟುವವರಿಗೆ, ಪದವಿ ಓದಿದವರಿಗೆ, ಶ್ರೀಮಂತರಿಗೆ, ಜಮೀನ್ದಾರರಿಗೆ ಮಾತ್ರ ದೇಶದಲ್ಲಿ ಮತದಾನದ ಹಕ್ಕು ಇತ್ತು.

ಸ್ವಾತಂತ್ರ್ಯ ಬಂದ ಮರುಗಳಿಗೆಯಲ್ಲೇ ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಮತದಾನದ ಹಕ್ಕಿದೆ ಎಂದು ಹೇಳಿ, ಯಾವುದೇ ರಕ್ತ ಕ್ರಾಂತಿ ಇಲ್ಲದೆ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದ್ದು ಪ್ರಾಯಶಃ ಭಾರತದಲ್ಲಿ ಮಾತ್ರ.

ಈಗ ಗ್ಯಾನೇಶ್‌ ಕುಮಾರ್‌ ಅವರು ಸಮಜಾಯಿಷಿ, ಸಬೂಬುಗಳನ್ನು ನೀಡಿ  ಜನರ ಮತದಾನದ ಹಕ್ಕು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದರೆ ದೇಶವು ದೇಶವಾಗಿ ಉಳಿಯುವುದಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಮುಂದುವರೆದ ಡಿಕೆ – ಬಿಕೆ ಶೀತಲ ಸಮರ

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಈಗ ಒಡೆದ ಮನೆಯಾಗಿದೆ. ನಾವು ಒಗ್ಗಟ್ಟಿನಿಂದ ಇದ್ದೇವೆ, ನಮ್ಮದು ಶಿಸ್ತಿನ ಪಕ್ಷ, ನಮ್ಮಲ್ಲಿ ಗುಂಪುಗಾರಿಕೆಯಾಗಲಿ, ಬಣರಾಜಕೀಯವಾಗಲಿ ಇಲ್ಲ…ಹೀಗೆ ಕೆಲವರು ಆಗಾಗ ಬಡಬಡಿಸುತ್ತಿರುತ್ತಾರೆ. ಅವು ತುಟಿ ಮಾತುಗಳಾಗಿವೆ ಎಂದು ಅರಿಯಲಾರದಷ್ಟು ಜನರು ದಡ್ಡರಲ್ಲ. ಪಕ್ಷದ ಅಧ್ಯಕ್ಷ ಬಿಕೆ ಹರಿಪ್ರಸಾದ್‌ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಶೀತಲ ಸಮರ ರಾಜಾರೋಷವಾಗಿ ಮುಂದುವರೆದಿದೆ.

ಅಂದು ಬಿಕೆ ಅವರಿಗೆ ಸರ್ಕಾರದ ನೂರು ದಿನದ ಸಂಭ್ರಮಾಚರಣೆಯ ವೇದಿಕೆ ಹತ್ತದಂತೆ ಡಿಕೆ ಅವರು ಮಾಡಿದರು. ಇಂದು ಬಿಕೆ ಅವರು ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ 2.0 ಬಳಿ ಬರಲು ಡಿಕೆ ಅವರಿಗೆ ಬಿಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕೊಡಿಸಲು ಬಿಕೆ ಅವರು ಮುಂದಾದರೆ, ಡಿಕೆ ಅವರು ನಾಲ್ಕು ತಿಂಗಳಾದರೂ ನೇಮಕ ಮಾಡಲು ಗುಣಾಕಾರ ಭಾಗಾಕಾರ ಹಾಕುತ್ತಿದ್ದಾರೆ.

ಮೇಲ್ನೋಟಕ್ಕೆ ಕಾಣುತ್ತಿರುವಂತೆ ಇದು ಕೇವಲ ಅಧಿಕಾರ ಹಾಗೂ ಸಂಘಟನೆಯ ನಡುವಿನ ಸಂಘರ್ಷವಾಗಲಿ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಕಿತ್ತಾಟವಾಗಲಿ ಅಲ್ಲ. 2028ರ ಸಿಎಂ ಕುರ್ಚಿಗಾಗಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಚುನಾವಣೆ ಸಮಯದಲ್ಲಿ ಇದು ಬೀದಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಯಾರದೇ ಮೇಲುಗೈ ಆದರೂ ಗಾಯವಾಗುವುದು ʼಕೈʼಗೆ ಮಾತ್ರ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಈ ವಾರ

ಈ ವಾರದ ರಾಜಕೀಯ ವಿದ್ಯಮಾನಗಳು | ಸೆ.28 – ಅ.೦4

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

 

ಈ ವಾರದಲ್ಲಿ ಪ್ರಮುಖ ಎರಡು ವಿದ್ಯಮಾನಗಳು ನಡೆದಿವೆ. ಒಂದನೆಯದು, ಕೆಪಿಎಸ್‌ಸಿ ಹಗರಣ ಕುರಿತು ಸರ್ಕಾರದ ಎಸ್‌ಐಟಿಗೆ ಪೂರ್ಣವಿರಾಮ ಹಾಕಿ, ಕರ್ನಾಟಕ ಹೈಕೋರ್ಟ್‌ ಹೊಸ ಎಸ್‌ಐಟಿ ರಚಿಸಿತ್ತು. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿ, ಆದೇಶಕ್ಕೆ ತಡೆ ತಂದಿದೆ. ರಾಜ್ಯ ಸರ್ಕಾರದ ಈ ಆಸಕ್ತಿ ಜನರಲ್ಲಿ ಅನುಮಾನ ಹುಟ್ಟಿಸಿದೆ.

ಎರಡನೆಯದು, ಚುನಾವಣಾ ಆಯೋಗದ ಫಾರಂ-7ನ್ನು ಬಳಸಿಕೊಂಡು ರಾಜ್ಯದ ಭಾಲ್ಕಿ, ಬೆಳಗಾವಿ, ಬಬಲೇಶ್ವರ… ಮತಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಸ್ಲಿಂ ಸಮುದಾಯದ ಅರ್ಹ ಮತದಾರರ ಹೆಸರನ್ನು ಡಿಲೀಟ್‌ ಮಾಡಿಸಲು ಸಾವಿರಾರು ಅರ್ಜಿಗಳನ್ನು ಸಲ್ಲಿಸಿದರು. ಇದರ ವಿರುದ್ಧ  ರಾಜ್ಯದ ಸಿಎಂ, ಸಚಿವರು ಹಾಗೂ ಕಾಂಗ್ರೆಸ್‌ ಪಕ್ಷದ ನಾಯಕರು  ಚುನಾವಣಾ ಆಯೋಗದ ಮುಂದೆ ಐದು ಗಂಟೆ ಧರಣಿ ಕೂತಿದ್ದರು. ಧರಣಿಗೆ ಮಣಿದು ಅಕ್ರಮವಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ದೂರು ಸಲ್ಲಿಸಲು ಆಯೋಗ ನಿರ್ಣಯಿಸಿ, ಕೆಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ಸಿಜೆಪಿ (ಕಾಕ್ರೋಜ್‌ ಜನತಾ ಪಾರ್ಟಿ), ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಹಾಗೂ ನೇಹಾ ಬೋರಾ, ಅನೇಕ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಆಮ್‌ ಆದ್ಮಿ ಪಕ್ಷ… ದೆಹಲಿಯ ಜಂತರ್‌-ಮಂತರ್‌ನಲ್ಲಿ ಹೋರಾಟ ನಡೆಸಿವೆ. ಕೇಂದ್ರ ಸರ್ಕಾರ ಪೊಲೀಸ್‌ ಬಲದಿಂದ ಜೆನ್‌-ಝೀಗಳ ದನಿ ಹತ್ತಿಕ್ಕಲು ಯತ್ನಿಸಿ ಮುಖಭಂಗ ಮಾಡಿಕೊಂಡಿದೆ.  ಚಳವಳಿ ಯಶಸ್ವಿಯಾಗಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್