ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈಗ ಒಡೆದ ಮನೆಯಾಗಿದೆ. ನಾವು ಒಗ್ಗಟ್ಟಿನಿಂದ ಇದ್ದೇವೆ, ನಮ್ಮದು ಶಿಸ್ತಿನ ಪಕ್ಷ, ನಮ್ಮಲ್ಲಿ ಗುಂಪುಗಾರಿಕೆಯಾಗಲಿ, ಬಣರಾಜಕೀಯವಾಗಲಿ ಇಲ್ಲ…ಹೀಗೆ ಕೆಲವರು ಆಗಾಗ ಬಡಬಡಿಸುತ್ತಿರುತ್ತಾರೆ. ಅವು ತುಟಿ ಮಾತುಗಳಾಗಿವೆ ಎಂದು ಅರಿಯಲಾರದಷ್ಟು ಜನರು ದಡ್ಡರಲ್ಲ. ಪಕ್ಷದ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಶೀತಲ ಸಮರ ರಾಜಾರೋಷವಾಗಿ ಮುಂದುವರೆದಿದೆ.
ಅಂದು ಬಿಕೆ ಅವರಿಗೆ ಸರ್ಕಾರದ ನೂರು ದಿನದ ಸಂಭ್ರಮಾಚರಣೆಯ ವೇದಿಕೆ ಹತ್ತದಂತೆ ಡಿಕೆ ಅವರು ಮಾಡಿದರು. ಇಂದು ಬಿಕೆ ಅವರು ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ 2.0 ಬಳಿ ಬರಲು ಡಿಕೆ ಅವರಿಗೆ ಬಿಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕೊಡಿಸಲು ಬಿಕೆ ಅವರು ಮುಂದಾದರೆ, ಡಿಕೆ ಅವರು ನಾಲ್ಕು ತಿಂಗಳಾದರೂ ನೇಮಕ ಮಾಡಲು ಗುಣಾಕಾರ ಭಾಗಾಕಾರ ಹಾಕುತ್ತಿದ್ದಾರೆ.
ಮೇಲ್ನೋಟಕ್ಕೆ ಕಾಣುತ್ತಿರುವಂತೆ ಇದು ಕೇವಲ ಅಧಿಕಾರ ಹಾಗೂ ಸಂಘಟನೆಯ ನಡುವಿನ ಸಂಘರ್ಷವಾಗಲಿ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಕಿತ್ತಾಟವಾಗಲಿ ಅಲ್ಲ. 2028ರ ಸಿಎಂ ಕುರ್ಚಿಗಾಗಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಚುನಾವಣೆ ಸಮಯದಲ್ಲಿ ಇದು ಬೀದಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಯಾರದೇ ಮೇಲುಗೈ ಆದರೂ ಗಾಯವಾಗುವುದು ʼಕೈʼಗೆ ಮಾತ್ರ.
ಗ್ಯಾನೇಶ್ ಕುಮಾರ್‌ರ ಈ ಅನ್ಯಾಯ ನೋಡಾ…

ಭಾರತದಲ್ಲಿ ಸಂವಿಧಾನದೊಂದಿಗೆ ಹುಟ್ಟಿದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ಸ್ವತಂತ್ರವಾಗಿದೆ. ಈ ದೇಶ ಸುಕುಮಾರ್ ಸೇನ್‌ರಿಂದ ಗ್ಯಾನೇಶ್ ಕುಮಾರ್‌ವರೆಗೆ 26 ಜನ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ನಡೆಯುತ್ತಿಲ್ಲ. ಈ ಹಿಂದೆ 1952–56, 1957, 1961, 1965, 1966, 1983–84, 1987-89, 1992, 1993, 1995, 2002, 2003, 2004ರಲ್ಲಿ ಚುನಾವಣಾ ಆಯೋಗ ತನ್ನ ಶಾಸನಬದ್ಧ ಅಧಿಕಾರ ಚಲಾಯಿಸಿ ದೇಶದ ಎಲ್ಲಾ ಅಥವಾ ಕೆಲ ಭಾಗಗಳಲ್ಲಿ ಎಸ್‌ಐಆರ್ ನಡೆಸಿದೆ.
ಆಗ ಆಡಳಿತಾರೂಢ ಪಕ್ಷದಿಂದಾಗಲಿ, ಅದರ ಮಿತ್ರ ಪಕ್ಷಗಳಿಂದಾಗಲಿ ಅಥವಾ ವಿರೋಧ ಪಕ್ಷಗಳಿಂದಾಗಲಿ ಅಥವಾ ನಾಗರಿಕರಿಂದಾಗಲಿ ವಿರೋಧ ಬಂದಿಲ್ಲ. ಆಗಿಲ್ಲದ ವಿರೋಧ ಈಗೇಕೆ? ಎಂದು ಬಿಜೆಪಿ ಪಕ್ಷದ ನಾಯಕರು, ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.
ಈಗ ಆಯೋಗವು ದೇಶದ ಎಲ್ಲಾ ಭಾಗಗಳಲ್ಲಿ ಎಸ್‌ಐಆರ್ ನಡೆಸುತ್ತಿದೆ. ಸತ್ತಿರುವ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ. ಎರಡು ಕಡೆ ಮತದಾನದ ಹಕ್ಕು ಹೊಂದಿರುವರ ಹೆಸರನ್ನು ಒಂದು ಕಡೆ ಅಳಿಸುತ್ತಿದೆ. ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುತ್ತಿದೆ ಮತ್ತು ಮುಖ್ಯವಾಗಿ ಅಕ್ರಮವಾಗಿ ದೇಶದೊಳಗೆ ನುಸುಳಿದ್ದಲ್ಲದೇ, ಮತದಾರರ ಪಟ್ಟಿಯಲ್ಲಿ ಸೇರಿರುವ ಬಾಂಗ್ಲಾದೇಶದವರನ್ನು ಮತ್ತೆ ಮಾಡಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಮಾಯ ಮಾಡುತ್ತಿದೆ… ಎಂದು ದೇಶದ ಜನರು ನಂಬಿದ್ದರು.
ಈ ಕೆಲಸಗಳನ್ನಷ್ಟೇ ಮಾಡಿದರೆ ಈಗ ಆಕ್ರೋಶದಿಂದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಫೋಟೋಗಳನ್ನು ಯಾರು ಬೀದಿಯಲ್ಲಿ ಸುಡುತ್ತಿದ್ದಾರೋ ಪ್ರಾಯಶಃ ಅದೇ ಜನ ಅವರ ಮೂರ್ತಿ ಸ್ಥಾಪಿಸುತ್ತಿದ್ದರು.
ಆದರೆ, ಗ್ಯಾನೇಶ್ ಕುಮಾರ್‌ರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ. ಬೆಂಬಲವಿಲ್ಲದಿದ್ದರೆ ಅವರಿಗೆ ಈ ಧೈರ್ಯ ಎಲ್ಲಿಂದ ಬರುತ್ತಿತ್ತು? ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಸಾಹಸಕ್ಕೆ ಅವರು ಯಾಕೆ ಕೈ ಹಾಕುತ್ತಿದ್ದರು? ಇದರಿಂದ ಅವರಿಗೆ ಏನು ಲಾಭವಿದೆ?
ಈ ಎಸ್‌ಐಆರ್ ಮೂಲಕ ದೇಶದ ನಾಗರಿಕರನ್ನು ʻಮತದಾನದ ಹಕ್ಕಿಲ್ಲದವರುʼ ಮತ್ತು ʻಮತದಾನದ ಹಕ್ಕಿರುವವರುʼ ಎಂದು ಎರಡು ವರ್ಗಗಳಾಗಿ ವಿಂಗಡಿಸುತ್ತಿದ್ದಾರೆ. ಚುನಾವಣಾ ಆಯೋಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ. ಈ ಹಿಂದೆ ನಡೆದ ಎಲ್ಲಾ ಎಸ್‌ಐಆರ್‌ನಲ್ಲಿ ಡಿಲೀಟ್ ಮಾಡಿದ ಒಟ್ಟು ಮತದಾರರ ಸಂಖ್ಯೆ ಕೂಡಿಸಿದರೂ 13 ಕೋಟಿ ದಾಟುವುದಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದಿನ ಸರ್ಕಾರ ʻನೀವು ಭಾರತದ ನಾಗರಿಕರು ಎಂದು ಸಾಬೀತು ಪಡಿಸಿʼ ಎಂದು ಜನರಿಗೆ ಹೀಗೆ ಪಿಡಿಸಿದರೆ, ಆಗ ಮತದಾರರ ಪಟ್ಟಿಯಲ್ಲಿ ಸೇರಿದ 17.32 ಕೋಟಿ ಮತದಾರರಲ್ಲಿ ಬಹುತೇಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ತೆರಿಗೆ ಕಟ್ಟುವವರಿಗೆ, ಪದವಿ ಓದಿದವರಿಗೆ, ಶ್ರೀಮಂತರಿಗೆ, ಜಮೀನ್ದಾರರಿಗೆ ಮಾತ್ರ ದೇಶದಲ್ಲಿ ಮತದಾನದ ಹಕ್ಕು ಇತ್ತು.
ಸ್ವಾತಂತ್ರ್ಯ ಬಂದ ಮರುಗಳಿಗೆಯಲ್ಲೇ ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಮತದಾನದ ಹಕ್ಕಿದೆ ಎಂದು ಹೇಳಿ, ಯಾವುದೇ ರಕ್ತ ಕ್ರಾಂತಿ ಇಲ್ಲದೆ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದ್ದು ಪ್ರಾಯಶಃ ಭಾರತದಲ್ಲಿ ಮಾತ್ರ.
ಈಗ ಗ್ಯಾನೇಶ್ ಕುಮಾರ್ ಅವರು ಸಮಜಾಯಿಷಿ, ಸಬೂಬುಗಳನ್ನು ನೀಡಿ ಜನರ ಮತದಾನದ ಹಕ್ಕು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದರೆ ದೇಶವು ದೇಶವಾಗಿ ಉಳಿಯುವುದಿಲ್ಲ.
ಈ ವಾರದ ರಾಜಕೀಯ ವಿದ್ಯಮಾನಗಳು | ಸೆ.28 – ಅ.೦4

ಈ ವಾರದಲ್ಲಿ ಪ್ರಮುಖ ಎರಡು ವಿದ್ಯಮಾನಗಳು ನಡೆದಿವೆ. ಒಂದನೆಯದು, ಕೆಪಿಎಸ್‌ಸಿ ಹಗರಣ ಕುರಿತು ಸರ್ಕಾರದ ಎಸ್‌ಐಟಿಗೆ ಪೂರ್ಣವಿರಾಮ ಹಾಕಿ, ಕರ್ನಾಟಕ ಹೈಕೋರ್ಟ್ ಹೊಸ ಎಸ್‌ಐಟಿ ರಚಿಸಿತ್ತು. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ, ಆದೇಶಕ್ಕೆ ತಡೆ ತಂದಿದೆ. ರಾಜ್ಯ ಸರ್ಕಾರದ ಈ ಆಸಕ್ತಿ ಜನರಲ್ಲಿ ಅನುಮಾನ ಹುಟ್ಟಿಸಿದೆ.
ಎರಡನೆಯದು, ಚುನಾವಣಾ ಆಯೋಗದ ಫಾರಂ-7ನ್ನು ಬಳಸಿಕೊಂಡು ರಾಜ್ಯದ ಭಾಲ್ಕಿ, ಬೆಳಗಾವಿ, ಬಬಲೇಶ್ವರ… ಮತಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಸ್ಲಿಂ ಸಮುದಾಯದ ಅರ್ಹ ಮತದಾರರ ಹೆಸರನ್ನು ಡಿಲೀಟ್ ಮಾಡಿಸಲು ಸಾವಿರಾರು ಅರ್ಜಿಗಳನ್ನು ಸಲ್ಲಿಸಿದರು. ಇದರ ವಿರುದ್ಧ ರಾಜ್ಯದ ಸಿಎಂ, ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣಾ ಆಯೋಗದ ಮುಂದೆ ಐದು ಗಂಟೆ ಧರಣಿ ಕೂತಿದ್ದರು. ಧರಣಿಗೆ ಮಣಿದು ಅಕ್ರಮವಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ದೂರು ಸಲ್ಲಿಸಲು ಆಯೋಗ ನಿರ್ಣಯಿಸಿ, ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ (ಕಾಕ್ರೋಜ್ ಜನತಾ ಪಾರ್ಟಿ), ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಹಾಗೂ ನೇಹಾ ಬೋರಾ, ಅನೇಕ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಆಮ್ ಆದ್ಮಿ ಪಕ್ಷ… ದೆಹಲಿಯ ಜಂತರ್-ಮಂತರ್‌ನಲ್ಲಿ ಹೋರಾಟ ನಡೆಸಿವೆ. ಕೇಂದ್ರ ಸರ್ಕಾರ ಪೊಲೀಸ್ ಬಲದಿಂದ ಜೆನ್-ಝೀಗಳ ದನಿ ಹತ್ತಿಕ್ಕಲು ಯತ್ನಿಸಿ ಮುಖಭಂಗ ಮಾಡಿಕೊಂಡಿದೆ. ಚಳವಳಿ ಯಶಸ್ವಿಯಾಗಿದೆ.
ಬೀದರ ಜಿಲ್ಲೆಗೂ ವಿಸ್ತರಿಸಿದ ಭಯೋತ್ಪಾದಕರ ಜಾಲ?

ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರಾದ ಬೀದರ ಜಿಲ್ಲೆ, ಇಂದು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಸುದ್ದಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ನಾಡ ಪಿಸ್ತೂಲ್ ಮಾರಾಟದ ಜಾಲವನ್ನು ಪತ್ತೆಹಚ್ಚಿ, ನಿನ್ನೆ (ಶನಿವಾರ) ಪೊಲೀಸ್ ಇಲಾಖೆ ನಾಲ್ವರನ್ನು ಬಂಧಿಸಿದೆ. ಬಂಧಿತರಲ್ಲಿ ಇಬ್ಬರು ಬೀದರ ಜಿಲ್ಲೆಯವರು. ಇನ್ನೊಂದು ಪ್ರಕರಣಕ್ಕಾಗಿ ಎನ್‌ಐಎ ಅಧಿಕಾರಿಗಳು ಬೀದರ ಜಿಲ್ಲೆಗೆ ಲಗ್ಗೆ ಇಟ್ಟಿದ್ದರು. ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ ಆರೋಪದ ಮೇಲೆ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವಿಶಾಲ್ ಕುಮಾರ್ ಮೇತ್ರೆ ಎಂಬ ಯುವಕನನ್ನು ಬಂಧಿಸಿದ್ದಾರೆ. ಬೀದರ ಜಿಲ್ಲೆಗೂ ಭಯೋತ್ಪಾದಕರ ಜಾಲ ಕಾಲಿಟ್ಟ ಸಂಗತಿ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ದೂರದ ಕಾಶ್ಮೀರ, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಸದ್ದು ಮಾಡುತ್ತಿದ್ದ ಸಂಗತಿಗಳು ಇಂದು ನಮ್ಮ ಜಿಲ್ಲೆಯ ಬಾಗಿಲಿಗೆ ಬಂದಿವೆ. ಬಾಳಿ ಬದುಕಬೇಕಾದ ಯುವಕರು ಯಾವುದೋ ದುರಾಶೆಗೆ ಬಿದ್ದು ತಮ್ಮ ಭವಿಷ್ಯವನ್ನು ತಮ್ಮ ಕೈಯಾರೆ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೈಯಲ್ಲಿ ಪುಸ್ತಕ ಹಿಡಿಯಬೇಕಾದ ಕೈಗಳು ನಾಡ ಪಿಸ್ತೂಲ್ ಖರೀದಿ ಮಾಡುತ್ತಿವೆ. ದೇಶ ಯಾವ ಕಡೆಗೆ ಸಾಗುತ್ತಿದೆ?
ನಾವೀಗ ಎಐ ಕಾಲದಲ್ಲಿದ್ದೇವೆ. ಸಾಮಾಜಿಕ ಜಾಲತಾಣಗಳು ಕೆಡುಕಿಗಾಗಿಯೂ ಬಳಕೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಭಯೋತ್ಪಾದನೆ ಚಟುವಟಿಕೆಯ ಸುದ್ದಿಯಾದಾಗಲೆಲ್ಲ ಕೆಲ ರಾಜಕೀಯ ಪಕ್ಷಗಳು ರಾಜಕೀಯ ಲಾಭ ಪಡೆಯಲು ಬೀದಿಗೆ ಬರುತ್ತವೆ. ಭಯೋತ್ಪಾದಕ ಜಾಲದೊಂದಿಗೆ ಗುರುತಿಸಿಕೊಂಡು ಬಂಧನವಾದರೂ ಇದುವರೆಗೆ ಯಾರೂ ಉಸಿರು ಬಿಟ್ಟಿಲ್ಲ. ಬಂಧಿತ ವ್ಯಕ್ತಿ ಮುಸ್ಲಿಂ ಸಮುದಾಯದವನಾಗಿದ್ದರೆ ಎಲ್ಲರೂ ರಸ್ತೆಯ ಮೇಲೆ ಇರುತ್ತಿದ್ದರೇನೋ? ಒಂದು ಧರ್ಮದ ಕಡೆಗೆ ಬೆರಳು ತೋರಿಸಿ, ರಾಜಕೀಯ ಅಧಿಕಾರದ ಗದ್ದುಗೆ ಏರುತ್ತಿರುವ ಈ ದೇಶಕ್ಕೆ ಭವಿಷ್ಯ ಇದೆಯೇ?
ಭ್ರಷ್ಟಾಚಾರ, ಕೋಮುವಾದ, ಭಯೋತ್ಪಾದನೆ… ಇವುಗಳಿಗೆ ಯಾವುದೇ ಜಾತಿ – ಧರ್ಮವಿಲ್ಲ. ಇವು ಜಾತ್ಯತೀತ ಹಾಗೂ ಧರ್ಮಾತೀತವಾಗಿವೆ. ಬೀದರ ಜಿಲ್ಲೆ ಬಸವಾದಿ ಶರಣರ ನಾಡು. ಇದು ಭಯೋತ್ಪಾದಕರ ನಾಡಾಗದಿರಲಿ. ಇದು ಶಾಂತಿ, ಸಹಬಾಳ್ವೆ, ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಬೇರುಸಮೇತ ಕಿತ್ತು ಹಾಕಬೇಕು.
ಕೈಬಿಟ್ಟ 13 ಕೋಟಿ ಮತದಾರರಲ್ಲಿ ಬಾಂಗ್ಲಾದೇಶದವರು ಎಷ್ಟಿದ್ದಾರೆ?

ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣಾ ಆಯೋಗ ʻಅಕ್ರಮವಾಗಿ ದೇಶದ ಮತದಾರರ ಪಟ್ಟಿಗೆ ಸೇರಿದ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಹಚ್ಚಿ ಅವರನ್ನು ದೇಶದಿಂದ ಹೊರಹಾಕುತ್ತಿದೆ. ಹೀಗಾಗಿ ಕಾಂಗ್ರೆಸ್ ಎಸ್‌ಐಆರ್ ವಿರೋಧಿಸುತ್ತಿದೆ. ಏಕೆಂದರೆ ಅವರೆಲ್ಲ ಅವರ ಪಕ್ಷದ ಮತದಾರರುʼ ಎಂದು ಎಲ್ಲರೂ ಒಂದೇ ಟ್ಯೂನ್‌ನಲ್ಲಿ ಮಾತಾಡುತ್ತಿದ್ದಾರೆ.
ಅಕ್ರಮವಾಗಿ ಸೇರಿಕೊಂಡವರನ್ನು ಮುಲಾಜಿಲ್ಲದೆ ಹುಡುಕಿ ಹೊರಹಾಕಬೇಕು. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಕೂತಿದೆ. ಮೋದಿಯವರ ಆಳ್ವಿಕೆಯಲ್ಲಿ ಬಾಂಗ್ಲಾದವರು ಗಡಿ ದಾಟಿ ದೇಶದೊಳಗೆ ಹೇಗೆ ಬಂದರು? ಅವರು ಮೊದಲೇ ಬಂದಿದ್ದರೂ 12 ವರ್ಷವಾದರೂ ಅವರನ್ನು ಪತ್ತೆ ಹಚ್ಚಿ ಇನ್ನೂ ಯಾಕೆ ಹೊರಹಾಕಿಲ್ಲ? ಪ್ರಧಾನಿ ಮೋದಿಯವರು ಎಷ್ಟು ಬಿಗಿಯಾದ ಆಡಳಿತ ನೀಡುತ್ತಿದ್ದಾರೆಂದು ಬಿಜೆಪಿಗರೆ ಎತ್ತಿ ತೊರಿಸುತ್ತಿದ್ದಾರೆ.
ಚುನಾವಣಾ ಆಯೋಗದ ಇತಿಹಾಸದಲ್ಲಿ ಸುಮಾರು 13.08 ಕೋಟಿ ಮತದಾರರ ಹೆಸರು ಡಿಲೀಟ್ ಮಾಡಿದ್ದು ಇದೇ ಮೊದಲು. ಇದರಲ್ಲಿ ಬಾಂಗ್ಲಾದವರು ಎಷ್ಟಿದ್ದಾರೆ? ಚುನಾವಣಾ ಆಯೋಗ ಇದುವರೆಗೆ ಒಂದೂ ಹೆಸರು ಹೇಳಿಲ್ಲ (ಒಬ್ಬರಾದರೂ ಸಿಕ್ಕಿದ್ದರೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಅದೇ ಕಾಲಿನಲ್ಲಿ ಓಡೋಡಿ ಮಾಧ್ಯಮಗಳ ಮುಂದೆ ಬರುತ್ತಿದ್ದರು). ಬಿಜೆಪಿ ಕಾರ್ಯಕರ್ತರಾದರೂ ಫಾರಂ-7 ಬಳಸಿಕೊಂಡು ಬಾಂಗ್ಲಾ ಪ್ರಜೆಗಳ ವಿವರ ಆಯೋಗಕ್ಕೆ ನೀಡಬೇಕಾಗಿತ್ತು. ಆಗ ಅವರ ಕಾರ್ಯಕ್ಕೆ ಇಡೀ ದೇಶವೇ ಕೊಂಡಾಡುತ್ತಿತ್ತು. ಆದರೆ, ಕೆಲವರು (ಬಿಜೆಪಿಯ ಕಾರ್ಯಕರ್ತರು) ನಮ್ಮ ಪಕ್ಷಕ್ಕೆ ಇವರು ಮತ ಹಾಕುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಅರ್ಹ ಮತದಾರರ ಹೆಸರನ್ನು ಡಿಲೀಟ್ ಮಾಡಿಸಲು ಮುಗಿಬಿದ್ದು, ಮೈಮೇಲೆ ಎಫ್‌ಐಆರ್ ಹಾಕಿಸಿಕೊಂಡು ಕೂತಿದ್ದಾರೆ.
ಗ್ಯಾನೇಶ್ ಕುಮಾರ್‌ಗೆ ಕಾದಿದೆಯೇ ಗೇಟ್‌ಪಾಸ್?

ನಿನ್ನೆ (ಶುಕ್ರವಾರ) ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಸಿಜೆಪಿ (ಕಾಕ್ರೋಜ್ ಜನತಾ ಪಕ್ಷ) ಹೋರಾಟಕ್ಕೆ ಸಿಕ್ಕ ಜನಬೆಂಬಲ ಕಂಡು ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಎಸಿ ರೂಮಿನಲ್ಲಿ ಬೆವತ್ತಿರಬೇಕು.
ಶತಾಯಗತಾಯ ಜೆನ್-ಝೀಗಳ ದನಿ ಅಡಗಿಸಬೇಕೆಂದು ಕೇಂದ್ರ ಸರ್ಕಾರ ಶಪಥ ಮಾಡಿದಂತೆ ಜಂತರ್-ಮಂತರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ಆಟೋ – ಬಸ್ – ಟ್ಯಾಕ್ಸಿ ಓಡಾಟ ನಿರ್ಬಂಧಿಸಿದರು. ಸಮೀಪದ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನದ ಬಾಗಿಲುಗಳು ಬೆಳಿಗ್ಗೆಯೇ ಮುಚ್ಚಿಸಿದರು. ಇಂಟರ್‌ನೆಟ್ ಸಂಪರ್ಕ ಕಡಿತವಾಗಿತ್ತು.
ಪೂರ್ವಯೋಜಿತವಾಗಿ ಎಷ್ಟೇ ತಾಲೀಮು ನಡೆಸಿದರೂ ಸಾವಿರಾರು ಜನರು ಸೇರಿದರು. ರಾತ್ರಿಯಾದರೂ ಇನ್ನೂ ಬರುತ್ತಲೇ ಇದ್ದರು. ಜನರನ್ನು ಪೊಲೀಸರು ಬಲವಂತವಾಗಿ ವಾಹನದಲ್ಲಿ ಕುರಿಗಳಂತೆ ತುಂಬುತ್ತಿದ್ದರು {ಶಾಂತಿಯುತವಾಗಿ ಹೋರಾಟ ಮಾಡುವುದು ಪ್ರಜೆಗಳ ಹಕ್ಕು ಎಂದು ಹೇಳಿದ ಸುಪ್ರೀಂ ಕೋರ್ಟ್ ಆದೇಶವನ್ನು ದೆಹಲಿ ಪೊಲೀಸರು ಕಾಲಕಸ ಮಾಡಿದರು]. ಈ ಕೃತ್ಯ ಮತ್ತಷ್ಟು ಜನರನ್ನು ಹೋರಾಟಕ್ಕೆ ಎಳೆದು ತಂದಿತ್ತು.
ಮುಂಬೈ ಶಿವಾಜಿ ಪಾರ್ಕ್ ತುಂಬಾ ವಿಶಾಲವಾಗಿದೆ. ಸಿಜೆಪಿ ಮುಂದಾಳುಗಳು ಕಾಲುಮೇಲೆ, ತಲೆಕೆಳಗೆ ಮಾಡಿ ಸರ್ಕಸ್ ಮಾಡಿದರೂ ಪಾರ್ಕ್ ತುಂಬುವುದಿಲ್ಲ. ಐದಾರು ಸಾವಿರ ಜನರು ಬರಬಹುದು ಎಂದು ಲೆಕ್ಕಹಾಕಿ, ದನಿಯನ್ನು ಅಡಗಿಸಲು ಮಹಾರಾಷ್ಟ್ರ ಸರ್ಕಾರ ಪೊಲೀಸರಿಗೆ ರೆಡಿ ಮಾಡಿ ನಿಲ್ಲಿಸಿತ್ತು. ಆದರೆ, ಜೆನ್-ಝೀಗಳು ಸರ್ಕಾರದ ಲೆಕ್ಕ ತಲೆಕೆಳಗಾಗಿಸಿ, ಹತ್ತು ಪಟ್ಟು ಹರಿದು ಬಂದರು. ಎಲ್ಲಿ ನೋಡಿದರಲ್ಲಿ ಜನ. ಜನಸಾಗರ ಕಂಡು ಪೊಲೀಸರು ದಂಗಾಗಿ ನಿಂತರು. ಲಾಠಿ ಬೀಸುವುದು ದೂರವೇ ಉಳಿಯಿತು, ಉಸಿರು ಬಿಡಲು ಅಸಹಾಯಕರಾದರು. ದೇಶದ ಎರಡು ಪ್ರಮುಖ ನಗರಗಳಲ್ಲಿ ʻಜ್ಞಾನೇಶ್ ಹಟಾವೋʼ ಕೂಗು ಮುಗಿಲು ಮುಟ್ಟಿತ್ತು.
ಅರ್ಧ ರಾತ್ರಿಯಲ್ಲಿ ಎದ್ದು ಜೆನ್ – ಝೀಗಳಿಗೆ ʻಹಲೋ ಫ್ರೆಂಡ್ಸ್ʼ ಎಂದು ಸಂಬೋಧಿಸಿದ ಪ್ರಧಾನಿ ಮೋದಿಯವರು ಇದುವರೆಗೂ ಒಂದು ಪ್ರತಿಕ್ರಿಯೆ ನೀಡಿಲ್ಲ. ಸಿಜೆಪಿ ಪಕ್ಷದ ಮುಂದಾಳುಗಳು ಅಕ್ಟೋಬರ್ 10ಕ್ಕೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರ್ಣಾಯಕ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಈ ಹೋರಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ದೇಶದಲ್ಲಿ ಈಗ ಜೆನ್-ಝೀಗಳು ಮಾತ್ರ ಗ್ಯಾನೇಶ್ ಕುಮಾರ್ ಅವರ ಹಣೆಬರಹ ಬರೆಯಬಹುದು. ವಿರೋಧ ಪಕ್ಷಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಕ್ಯಾರೇ ಎನ್ನುವುದಿಲ್ಲ.
ಆಯೋಗದ ಬಂಡವಾಳವನ್ನು ತನಿಖಾ ವರದಿ ಬಯಲು ಮಾಡಿದ ಮೇಲೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಪಿಕಲಾಟ ಶುರುವಾಗಿದೆ. ಜೆನ್-ಝೀಗಳು ಮತ್ತೆ ಬೀದಿಗೆ ಬಂದದ್ದು ಅವರನ್ನು ಚಿಂತೆಗೆ ದೂಡಿದೆ. ಅವರು ಕೇವಲ ರಾಜೀನಾಮೆ ಮಾತ್ರ ಕೇಳುತ್ತಿಲ್ಲ. ಮುಖ್ಯ ಆಯುಕ್ತರನ್ನು ಆಯ್ಕೆ ಮಾಡುವ ವಿಧಾನವೂ ಬದಲಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೋರಾಟ ತೀವ್ರಗೊಂಡರೆ ಸಂಘಪರಿವಾರ ಮೋದಿಯವರ ಕಿವಿ ಹಿಂಡಬಹುದು. ಆಗ ಒತ್ತಡಕ್ಕೆ ಸಿಲುಕಿ ಮೋದಿಯವರು ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಯೂ ಪಡೆಯಬಹುದು.
ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಆಯೋಗದ ಮುಖ್ಯ ಆಯುಕ್ತರನ್ನು ಕುರ್ಚಿಯಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಹತ್ತಾರು ತೊಡಕುಗಳಿವೆ. ಆಯುಕ್ತರನ್ನು ರಕ್ಷಿಸಲೆಂದೇ 2023ರಲ್ಲಿ ಜಾರಿಗೆ ತಂದ ಕಾಯಿದೆಯ ಬಲವಿದೆ. ಸಂಸದೀಯ ಮಾರ್ಗದ ಮೂಲಕ ಅವರನ್ನು ತೆಗೆಯಲು ಇಂಡಿಯಾ ಕೂಟದ ಬಳಿ ಸಂಖ್ಯಾಬಲವಾದರೂ ಎಲ್ಲಿದೆ?
ಅವರನ್ನು ಕುರ್ಚಿಯಿಂದ ಖಾಲಿ ಮಾಡಿಸಲು ಎರಡೇ ದಾರಿಗಳಿವೆ. ಮೊದಲನೆಯದು, ಅವರಾಗಿಯೇ ರಾಜೀನಾಮೆ ನೀಡುವುದು (ಇದರ ಸಾಧ್ಯತೆ ಕಡಿಮೆ ಇದೆ) ಎರಡನೆಯದು, ಪ್ರಧಾನಿ ಮೋದಿಯವರು ಜೆನ್-ಝೀ ಹೋರಾಟಕ್ಕೆ ತಲೆಬಾಗಿ ಅವರಿಂದ ರಾಜೀನಾಮೆ ಪಡೆಯುವುದು. ಈ ಎರಡು ಮಾರ್ಗಗಳು ಬಿಟ್ಟರೆ ಬೇರಾವ ಮಾರ್ಗವೂ ಇಲ್ಲ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳುತ್ತಿರುವ ಮೂರನೆಯ ಮಾರ್ಗ [ಸಂಸದೀಯ ಮಾರ್ಗ] ಅದೊಂದು ವ್ಯರ್ಥ ಪ್ರಲಾಪ ಅಷ್ಟೇ.



