ಕಾನೂನಿನ ಕುಣುಕೆಗೆ ಸಿಲುಕಿದ ಬಿಜೆಪಿ ಕಾರ್ಯಕರ್ತರು…
ಬಿಜೆಪಿ ನಾಯಕರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಅವರನ್ನು ಕಣ್ಣುಮುಚ್ಚಿ ನಂಬುವ ಪಕ್ಷದ ಕಾರ್ಯಕರ್ತರನ್ನು ಕಾನೂನಿನ ಕುಣಿಕೆಗೆ ಸಿಲುಕಿಸಿದ್ದಾರೆ. ರಾಜ್ಯದ ಮಲ್ಲೇಶ್ವರಂ ಮತಕ್ಷೇತ್ರದಿಂದ ಹಿಡಿದು, ಭಾಲ್ಕಿ ಮತಕ್ಷೇತ್ರದ ವರೆಗೆ ಫಾರಂ-7ನ್ನು ಸಲ್ಲಿಸಿದ ಕಾರ್ಯಕರ್ತರ ಮೇಲೆ ಕೇಸ್‌ಗಳು ದಾಖಲಾಗಿವೆ. ಈಗ ಅವರು ಠಾಣೆಯಿಂದ ಮನೆಗೆ-ಮನೆಯಿಂದ ಠಾಣೆಗೆ ಗಿರಕಿ ಹೊಡೆಯುತ್ತಿದ್ದಾರೆ. ಮಾಡಿದ್ದು ಊಣ್ಣಲೇ ಬೇಕಲ್ಲವೇ. ಅವರ ನಾಯಕರು ಮನೆಯಲ್ಲಿ ಟಿವಿ ಹಾಕಿಕೊಂಡು ಎಸಿ ರೂಮಿನಲ್ಲಿ ಮಜವಾಗಿದ್ದಾರೆ.
ಕೇಸ್‌ಗಳು ಹಾಕಿಸಿಕೊಳ್ಳಲು ಹಾಗೂ ಜೈಕಾರ ಹೊಡೆಯಲು ಮಾತ್ರ ಕಾರ್ಯಕರ್ತರು ಬೇಕು. ಪಕ್ಷದ ಕಾರ್ಯಕರ್ತರ ಹಾಗೂ ಅವರ ಮಕ್ಕಳ ಕೈಗಳಿವೆ ಲಾಠಿ, ತಲವಾರು ಕೊಟ್ಟು, ಅವರಿಗೆ ಹಿಂದೂ ಧರ್ಮದ ರಕ್ಷಣೆಯ ದೀಕ್ಷೆ ನೀಡುವ ಇವರು ತಮ್ಮ ಮಕ್ಕಳ ಕೈಯಲ್ಲಿ ಪೆನ್ನು, ಲ್ಯಾಪ್‌ಟಾಪ್ ನೀಡಿ ವಿದೇಶದ ವಿಮಾನ ಹತ್ತಿಸುತ್ತಾರೆ.
ತಮಗಾಗಿ ದುಡಿಯುವ ಕಾರ್ಯಕರ್ತರಿಗೆ ಎಂದೂ ಎಂಎಲ್‌ಎ, ಎಂಪಿ ಮಾಡುವುದಿಲ್ಲ. ಅದೇನಿದ್ದರೂ ತಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಸಹೋದರರಿಗೆ…ಮಾತ್ರ ಮೀಸಲು. ಈ ರೋಗ ಬಿಜೆಪಿಯಲ್ಲಿ ಮಾತ್ರವಲ್ಲ, ಎಲ್ಲಾ ಪಕ್ಷದಲ್ಲೂ ಇದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮೂರು ಕುಟುಂಬಗಳು ಅಧಿಕಾರವನ್ನು ತಮ್ಮ ಕುಟುಂಬದ ಜಹಗೀರು ಮಾಡಿಕೊಂಡಿವೆ.
ಸಿಜೆಪಿ ಹೋರಾಟಕ್ಕೆ ಹೆದರಿದರೇ ಮೋದಿ?

ನಾಳೆ (ಅಕ್ಟೋಬರ್ 10) ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಸಿಜೆಪಿ ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳ ಹೋರಾಟಕ್ಕೆ ಪೊಲೀಸರು ಅನುಮತಿ ನಿರಾಕರಿಸಿ, ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇದು ಪ್ರಧಾನಿ ಮೋದಿ ಜೆನ್ ಝೀಗಳಿಗೆ ಹೆದರಿರುವುದಕ್ಕೆ ಸಾಕ್ಷಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ದೆಹಲಿಯ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ನಾಳೆ ದೆಹಲಿಗೆ ತಲುಪಬೇಕಾದ ಕೆಲವು ರೈಲುಗಳನ್ನು ರೈಲ್ವೆ ಮಂಡಳಿ ರದ್ದುಗೊಳಿಸಿದೆ. ಇಂಟರ್‌ನೆಟ್ ಬಂದ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
20 ಸಾವಿರಕ್ಕೂ ಹೆಚ್ಚು ಪೊಲೀಸರು ಹಾಗೂ ಅರೆಸೇನಾ ಪಡೆಗಳು ದೆಹಲಿಯಲ್ಲಿ ಬಿಡುಬಿಟ್ಟಿದ್ದಾರೆ. ಈ ಬೆಳವಣಿಗೆಗಳು ತುರ್ತು ಪರಿಸ್ಥಿತಿ ನೆನಪಿಸುವಂತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಅದನ್ನು ರಕ್ಷಿಸಬೇಕಾದ ನ್ಯಾಯಾಲಯ ಕೇವಲ ಕಳವಳ ವ್ಯಕ್ತಪಡಿಸಿದರೆ ಸಾಕೇ? ಚುನಾಯಿತ ಸರ್ಕಾರದ ಇಂತಹ ಸರ್ವಾಧಿಕಾರಿ ನಡೆ ತಡೆಯುವಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ವಿಫಲವಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
“56 ಇಂಚಿನ ಎದೆಯುಳ್ಳ ಪ್ರಧಾನಿ ಮೋದಿ ಹೆದರಿದ್ದಾರೆ, ಅವರು ನಾಳೆ ಬಿಪಿ ಚೆಕ್ ಮಾಡಿಕೊಳ್ಳಲಿ” ಎಂದು ಸಿಜೆಪಿ ಮುಂದಾಳುಗಳು ವ್ಯಂಗ್ಯ ಮಾಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ.
ʻನಾಳೆ ನಾವು ಅರೆಸ್ಟ್ ಆಗಬಹುದು. ನೀವು ಹೋರಾಟದ ನೇತೃತ್ವವಹಿಸಿʼ ಎಂದು ನೇಹಾ ಬೋರಾ ವಿದ್ಯಾರ್ಥಿಗಳಿಗೆ ಕರೆ ಕೊಟ್ಟಿದ್ದಾರೆ. ನಾಳೆಯ ಹೋರಾಟ ಯಾವ ರೂಪ ಪಡೆಯುತ್ತದೋ?
ಕ್ರೆಡಿಟ್‌ಗಾಗಿ ಕಾಂಗ್ರೆಸ್ – ಸಿಜೆಪಿ ನಡುವೆ ಟ್ವೀಟರ್ ವಾರ್…

ಜೆನ್-ಝೀ ಪಿಳಿಗೆಗೆ ದನಿ ಸಂಸತ್‌ವರೆಗೆ ತಲುಪುತ್ತಿದೆ. ಈ ಚಳವಳಿ ಭಾರತದ ರಾಜಕೀಯ ದಿಕ್ಕು ಬದಲಾಯಿಸಬಹುದೆಂದು ವ್ಯಾಖ್ಯಾನಿಸುತ್ತಿದ್ದಾರೆ. ಕ್ರೇಡಿಟ್‌ಗಾಗಿ ಸಿಜೆಪಿ, ಕಾಂಗ್ರೆಸ್ ಮೇಲೆ ಎರಗಿ ಬಿದ್ದಿದ್ದೆ. ಸ್ವಲ್ಪ ಹಿಂದೆ ಹೋಗಿ ಅಣ್ಣಾ ಚಳವಳಿಯ ಮೇಲೆ ಕಣ್ಣು ಹಾಯಿಸಿದರೆ ಈ ವಾರ್ ಮಾಡುತ್ತಿರಲಿಲ್ಲ.
2011, ಆಗಸ್ಟ್ 16ರಂದು ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ʻಲೋಕಪಾಲ್ ಮಸೂದೆʼ ಜಾರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೂತಿದ್ದರು. ಅದು ಮರುದಿನ ಚಳವಳಿಯ ರೂಪ ಪಡೆದು ದೇಶದಾದ್ಯಂತ ಕಾಡ್ಗಿಚ್ಚಿನಂತೆ ವಿಸ್ತರಿಸಿತ್ತು.
ಚಳವಳಿಯ ನೇತಾರರು ʻಲೋಕಪಾಲ ಮಸೂದೆ ಜಾರಿಯಾದರೆ ದೇಶದ ಜನತೆಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆʼ ಎಂದು ಜನರ ತಲೆಯಲ್ಲಿ ಹುಳು ಬಿಟ್ಟಿದ್ದರು. ತಮ್ಮ ಸಣ್ಣಪುಟ್ಟ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಲಂಚದ ಬಿಸಿಯಲ್ಲಿ ಬೆಂದು ಹೋಗಿದ್ದ ಮಧ್ಯಮವರ್ಗದ ಜನರಿಗೆ ಅವರ ಮಾತು ರುಚಿಸಿತ್ತು. ಅಣ್ಣ ಹಜಾರೆ ಅವರಲ್ಲಿ ತಮ್ಮ ಭಾಗ್ಯವಿಧಾತನನ್ನು ಕಂಡ ಜನರಲ್ಲಿ ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟುಹಾಕಲು ಆ ಚಳವಳಿ ಯಶಸ್ವಿಯಾಗಿತ್ತು. ಚಳವಳಿಯ ಬಿರುಗಾಳಿಗೆ ಸಿಲುಕಿದ ಕಾಂಗ್ರೆಸ್ ನೇತೃತ್ವ ಸರ್ಕಾರ ಚುನಾವಣೆಯಲ್ಲಿ ಧೂಳೀಪಟವಾಗಿತ್ತು. ಈ ಚಳವಳಿ ಆಮ್ ಆದ್ಮಿ ಪಾರ್ಟಿ ಎಂಬ ಪಕ್ಷಕ್ಕೆ ಜನ್ಮಕೊಟ್ಟು ಅಕಾಲಿಕವಾಗಿ ಮರಣಕ್ಕೆ ತುತ್ತಾಗಿತ್ತು.
ಹದಿನೈದು ವರ್ಷದ ನಂತರ ದೇಶದಲ್ಲಿ ಮತ್ತೆ ಜೆನ್-ಝೀ ಪೀಳಿಗೆಯಿಂದಾಗಿ ಒಂದು ದೊಡ್ಡ ಚಳವಳಿ ಆರಂಭವಾಗಿದೆ. ಸಿಜೆಪಿ (ಕಾಕ್ರೋಜ್ ಜನತಾ ಪಾರ್ಟಿ) ಹೋರಾಟದ ವೇದಿಕೆ ರೂಪಿಸಿಕೊಟ್ಟಿದ್ದೆ. ಇದೂ ಸಹ ಮತ್ತೊಂದು ಅಣ್ಣಾ ಚಳವಳಿ ಆಗಬಹುದೇನೋ ಎಂಬ ಶಂಕೆ ಕೆಲವರಲ್ಲಿದೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ದೀಪ್ಕೆ ಹಾಗೂ ನೇಹಾ ಇವರಿಬ್ಬರಲ್ಲಿ ಯಾರು ಉತ್ತಮರು ಎಂಬ ಚರ್ಚೆ ಹುಟ್ಟಿದೆ. ಹಲವರು ನೇಹಾ ಬೋರಾ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅದೇನೇ ಇರಲಿ. ದೇಶದಲ್ಲಿ ಜನರು ಬಿಡಿ, ವಿರೋಧ ಪಕ್ಷದ ಘಟಾನುಘಟಿ ನಾಯಕರು ಸಹ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತಾಡಲು ಭಯ ಪಡುವಂತಹ ವಾತಾವರಣವಿತ್ತು. ಜೆನ್ – ಝೀಗಳು ಹತ್ತು ವರ್ಷಗಳ ಭಯ ಹತ್ತೇ ದಿನದಲ್ಲಿ ದೇಶದಿಂದ ಕಿತ್ತು ಹಾಕಿದ್ದಾರೆ.
ಪ್ರಧಾನಿ ಮೋದಿಯವರು ಜೆನ್-ಝೀ ಹೋರಾಟಕ್ಕೆ ತಲೆಬಾಗಿ ತಮ್ಮ ಸಚಿವ ಸಂಪುಟದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದರು. ಜತೆಗೆ ಅರ್ಧರಾತ್ರಿಯಲ್ಲಿ ಎದ್ದು ಜೆನ್-ಝೀಗಳಿಗೆ ʻಫ್ರೇಂಡ್ಸ್ʼ ಎಂದು ಕರೆಯುವಂತಹ ಸ್ಥಿತಿಗೆ ಬಂದಿದ್ದಾರೆ. ನೇಹಾ ಬೋರಾ ಎಂಬ ದಿಟ್ಟ ಹುಡುಗಿ ದೇಶದ ಬೆಳಕಾಗಿ ಕಾಣುತ್ತಿದ್ದಾಳೆ. ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾ, ಅಭೀಜಿತ್ ದಿಪ್ಕೆ ದೇಶದ ಗಮನ ಸೆಳೆಯುತ್ತಿದ್ದಾರೆ.
ಈಗ ಚುನಾವಣಾ ಆಯೋಗದ ವಿರುದ್ಧ ದೇಶದ ಎಲ್ಲಾ ವಿರೋಧ ಪಕ್ಷಗಳು, ಜನಪರ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಜೆನ್-ಝೀಗಳು ಹೋರಾಡುತ್ತಿದ್ದಾರೆ. ರಾಹುಲ್ ಗಾಂಧಿ ಇವರೆಲ್ಲರನ್ನೂ ಒಂದೇ ವೇದಿಕೆಗೆ ತರಲು ಸತ್ಯಾಗ್ರಹ ಎಂಬ ಡಿಜಿಟಲ್ ವೇದಿಕೆ ಹುಟ್ಟುಹಾಕಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ 31,669 ಜನರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶಿಕ್ಷಣ ವ್ಯವಸ್ಥೆಯ ಕುರಿತು 5606 ಹಾಗೂ ಭ್ರಷ್ಟಾಚಾರದ ವಿರುದ್ಧ 5328 ದೂರುಗಳು ದಾಖಲಾಗಿವೆ.
ಇದು ಈಗ ಸಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಹುಟ್ಟುಹಾಕಿದೆ. ಈ ಸತ್ಯಾಗ್ರಹ ಸ್ಥಾಪಿಸಿದ್ದೇ ಹೋರಾಟದ ಕ್ರೆಡಿಟ್ ತಮ್ಮದಾಗಿಸಿಕೊಳ್ಳಲು ಎಂದು ಸಿಜೆಪಿ ಟೀಕೆ ಮಾಡಿದರೆ, ಕಾಂಗ್ರೆಸ್ ಅದಕ್ಕೆ ತಿರುಗೇಟು ನೀಡಿದೆ.
ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ʻಸ್ವಯಂಘೋಷಿತ ಉದಾರವಾದಿ ವ್ಯವಸ್ಥೆಯು ಸಿಜೆಪಿ ಸ್ಥಾಪಕ ಅಭೀಜಿತ ದೀಪ್ಕೆ ಅವರನ್ನು ಕುಗ್ಗಿಸಲು ಯತ್ನಿಸುತ್ತಿದೆ. ತಾವೇ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಗುತ್ತಿಗೆದಾರರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆʼ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ತಮ್ಮ ಟ್ವಿಟರ್ ಮೂಲಕ ಹರಿಹಾಯ್ದಿದ್ದಾರೆ.
ಇದಕ್ಕೆ ಕಾಂಗ್ರೆಸ್ ನಾಯಕ ವಿಜಯ್ ತೊಟ್ಟಿತ್ತಿಲ್ ʻಎನ್‌ಎಸ್‌ಯುಐ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರು, ಸಿಜೆಪಿ ಪ್ರತಿಭಟನಾಕಾರರಿಗೆ ಮುಂಬೈಯಲ್ಲಿ ಮುಕ್ತವಾಗಿ ಓಡಾಡಲು ಏಕೆ ಬಿಟ್ಟಿದ್ದಾರೆʼ ಎಂದು ಪ್ರಶ್ನಿಸಿ, ತಿರುಗೇಟು ನೀಡಿದ್ದಾರೆ.
ಇದನ್ನು ಕಂಡು ʻಕಾಂಗ್ರೆಸ್ ತನ್ನ ಬೆಂಬಲಿಗರನ್ನು ನಿಯಂತ್ರಿಸಬೇಕು. ಸಿಜೆಪಿ, ಐಸಾ ಹಾಗೂ ಕಾಂಗ್ರೆಸ್ ಹೋರಾಡುತ್ತಿರುವುದು ಒಂದೇ ಶತ್ರುವಿನ ವಿರುದ್ಧ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸುವುದು ಸರಿಯಲ್ಲʼ ಎಂದು ಕಾಂಗ್ರೆಸ್‌ನ ತುಷಾರ್ ಗಾಂಧಿ ಸಲಹೆ ನೀಡಿದ್ದಾರೆ.
ಈ ಟ್ವಿಟರ್ ವಾರ್ ಕೆಲವರಲ್ಲಿ ಸಿಜೆಪಿ ಮುಂದಾಳುಗಳು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅಣತಿಯಂತೆ ಕೆಲಸ ಮಾಡುತ್ತಿದ್ದಾರೇನೋ ಎಂಬ ಅನುಮಾನ ಹೆಚ್ಚಿಸಿದೆ.
ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.
ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್ ಮಾಡಿ ಸಿಎಂ ಕುರ್ಚಿ ಕಿತ್ತುಕೊಂಡರಾ?

ತಮ್ಮದೇ ಸಮುದಾಯದ ಡಿಕೆಶಿ ಸಿಎಂ ಆದಮೇಲೆ ಕುಮಾರಸ್ವಾಮಿ ರಾಜ್ಯದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಅವರು ಕೇಂದ್ರ ಸಚಿವರಾಗಿದ್ದರೂ ಅವರ ಆತ್ಮ ಮಾತ್ರ ರಾಜ್ಯರಾಜಕಾರಣದಲ್ಲಿ ಅಲೆದಾಡುತ್ತಿದೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಅವರ ಮೇಲೆ ಯುದ್ಧವೆ ಸಾರಿದರು. ಈಗ ಅವರ ಮೇಲೆ ದಿಢೀರ್ ಪ್ರೀತಿ ಬಂದಿದೆ. ಅವರನ್ನು ಹಾಡಿ ಹೊಗಳಲು ಆರಂಭಿಸಿದ್ದಾರೆ. ಅವರ ಗುಣಗಾನ ಮಾತ್ರ ಮಾಡುತ್ತಿಲ್ಲ, ಅವರಿಗೆ ಅನ್ಯಾಯವಾಗಿದೆ ಎಂದೂ ಹೇಳುತ್ತಿದ್ದಾರೆ. ʻಸ್ಟಿಂಗ್ ಆಪರೇಷನ್ ಮಾಡಿ ಸಿದ್ದರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದಾರೆʼ ಎಂಬ ಹೊಸ ಬಾಂಬ್ ಹಾಕಿ, ಪರೋಕ್ಷವಾಗಿ ಡಿಕೆಶಿ ಅವರನ್ನು ಕಟಕಟೆಯಲ್ಲಿ ತಂದು ನಿಲ್ಲಿಸಲು ಯತ್ನಿಸುತ್ತಿದ್ದಾರೆ.
ಇದು ಸಿಡಿಯುವ ಬಾಂಬೋ ಅಥವಾ ಮತ್ತೊಂದು ಹುಸಿ ಬಾಂಬೋ ಎಂಬುದು ಕಾದುನೋಡಬೇಕಿದೆ. ಆದರೀದು ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಹಾಗೂ ಅವರ ಸಮುದಾಯದೊಳಗೆ ಚರ್ಚೆ ಹುಟ್ಟುಹಾಕಿದೆ. ಇದು ಕಾಂಗ್ರೆಸ್ ಪಕ್ಷದ ಹಾಗೂ ಡಿಕೆಶಿ ಅವರ ಕೊರಳಿಗೆ ಉರುಳಾಗಿ ಸುತ್ತಿಕೊಳ್ಳಬಹುದು. ಇದನ್ನು ಸಿದ್ದರಾಮಯ್ಯ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ನಿಂತಿದೆ. ಕುಮಾರಸ್ವಾಮಿ ಅವರ ರಾಜಕೀಯ ಚದುರಂಗದಾಟ ಡಿಕೆಶಿ ಹೇಗೆ ಎದುರಿಸುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
ಫಾರಂ-7 ಸಲ್ಲಿಸಿದ್ದು ಕಾರ್ಯಕರ್ತರಲ್ಲ, ನಾವೇ ಎಂದ ಸಿ.ಟಿ. ರವಿ?

ಚುನಾವಣಾ ಆಯೋಗ ಕಳೆದ ವರ್ಷ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಆರಂಭಿಸಿದಾಗಿನಿಂದ ರಾಜಕೀಯ ಪಡಸಾಲೆಯಲ್ಲಿ ಪರ – ವಿರೋಧದ ಚರ್ಚೆ ಬಿರುಸಾಗಿಯೇ ನಡೆಯುತ್ತಿವೆ. ಈಗ ದೇಶದೆಲ್ಲೆಡೆ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಹೋರಾಟವು ಆಯೋಗವನ್ನು ಕಟಕಟೆಯಲ್ಲಿ ತಂದು ನಿಲ್ಲಿಸಿದೆ. ದೇಶದ ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಜೆನ್-ಝೀಗಳು ಪ್ರಶ್ನೆ ಕೇಳುತ್ತಿರುವುದು ಆಯೋಗಕ್ಕೆ. ಆದರೆ, ಉತ್ತರ ಬರುತ್ತಿರುವುದು ಬಿಜೆಪಿ ಕಚೇರಿಯಿಂದ. ಇದೊಂದು ವಿಚಿತ್ರ ವಿದ್ಯಮಾನವಾಗಿದೆ. ಮುಖ್ಯ ಆಯುಕ್ತರು ಮಾತ್ರ ಇದಕ್ಕೂ ನನಗೂ ಏನು ಸಂಬಂಧವಿಲ್ಲವೆಂಬಂತೆ ಆಯೋಗದ ಎಸಿ ರೂಮಿನಲ್ಲಿ ತಣ್ಣಗೆ ಕೂತಿದ್ದಾರೆ. ಇದುವರೆಗೆ ಮಾಧ್ಯಮಗಳ ಮುಂದೆ ಬಂದು ಜನರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಅವರು ಹೋಗಿಲ್ಲ. ಇದಕ್ಕೆ ಉದ್ಧಟತನವೆಂದು ಹೇಳದೆ ಇನ್ನೇನು ಅನ್ನಬೇಕೋ?
ಈಗ ರಾಜ್ಯದಲ್ಲಿ ಫಾರಂ-7 ಅರ್ಜಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಅರ್ಜಿಯ ಅವಶ್ಯಕತೆ ಇರಲಿಲ್ಲ. ಆಯೋಗವೇ ತಮಗಾಗದವರ ಮತಗಳನ್ನು ಡಿಲೀಟ್ ಮಾಡಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಒಂದು ದಿನ ಕೇವಲ ಹತ್ತು ಅರ್ಜಿಗಳು ಹಾಗೂ ಒಟ್ಟಾರೆ ಐವತ್ತು ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂದು ನಿಯಮವಿದೆ. ಕೆಲವರಿಂದ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದೆ. ಬಹುತೇಕ ಅರ್ಜಿಗಳು ಮುಸ್ಲಿಂ ಮತದಾರರಿಗೆ ಸಂಬಂಧಿಸಿವೆ. ಇದು ಏನೇನು ಸೂಚಿಸುತ್ತದೆ?
ಸ್ವಯಂಸ್ಪೂರ್ತಿಯಿಂದ ಬಿಜೆಪಿ ಕಾರ್ಯಕರ್ತರು ಬಿಡಿಬಿಡಿಯಾಗಿ ಅರ್ಜಿ ಸಲ್ಲಿಸುತ್ತಿರಬಹುದೆಂದು ಮತದಾರರು ಭಾವಿಸಿದ್ದರು. ತಮ್ಮ ಮೇಲೆ ಕೇಸ್ ಎಳೆದುಕೊಂಡು ಠಾಣೆಗೆ ಅಲೆದಾಡುತ್ತಿರುವ ಬಿಜೆಪಿ ಕಾರ್ಯಕರ್ತರ ಮಾತುಗಳಿಂದಲೇ ಇದೊಂದು ಯೋಜಿತ ಜಾಲ ಎಂಬುದು ಜಗಜ್ಜಾಹೀರಾಗಿದೆ.
ವಿರೋಧ ಪಕ್ಷದ ನಾಯಕರು ಅರ್ಹರ ಮತಗಳನ್ನು ಯಾರೇ ಅಳಿಸಲು ಯತ್ನಿಸಿದರೂ ಅವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮಕೈಗೊಳ್ಳಿ ಎಂದು ಹೇಳಬೇಕಿತ್ತು. ಆದರೆ, ʻಅವರು ನಮ್ಮ ಕಾರ್ಯಕರ್ತರಿಗೆ ಕೇಸ್ ಹಾಕಿದರೆ ಹುಷಾರ್ʼ ʻಠಾಣೆಗೆ ಮುತ್ತಿಗೆ ಹಾಕುತ್ತೇವೆʼ ʻಆಡಳಿತಾರೂಢ ಕಾಂಗ್ರೆಸ್ ಪಕ್ಷ ಠಾಣೆಗಳನ್ನು ಪಕ್ಷದ ಕಚೇರಿ ಮಾಡಿಕೊಂಡಿದೆʼ..ಹೀಗೆ ತರಹೇವಾರಿ ಆವಾಜ್ ಹಾಕುತ್ತಿದ್ದಾರೆ. ಜತೆಗೆ ರಾಜ್ಯಪಾಲರ ಕಚೇರಿಯ ಬಾಗಿಲು ಬಡಿದಿದ್ದಾರೆ. ವಿರೋಧ ಪಕ್ಷದ ನಾಯಕರ ಈ ನಡೆಯಿಂದ ಇದರ ಹಿಂದೆ ಪಕ್ಷದ್ದೇ ಕೈವಾಡವಿದೆ, ಕಾರ್ಯಕರ್ತರು ಅಮಾಯಕರು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಒಂದು ಹೆಜ್ಜೆ ಮುಂದೆ ಬಂದು ʻನಾವು ಅನುಮಾನದ ಮೇಲೆ ಫಾರಂ -7ನ್ನು ಕೊಟ್ಟಿದ್ದೇವೆ. ದೂರುದಾರರ ಗೌಪ್ಯತೆ ಕಾಪಾಡುವುದು ಎಆರ್‌ಒಗಳ (ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್) ಕರ್ತವ್ಯ. ನಾವು ಕೊಟ್ಟ ದೂರಿನ ಪ್ರತಿಗಳು ಕಾಂಗ್ರೆಸ್ ಕೈಗೆ ಹೇಗೆ ಹೋಯಿತುʼ ಎಂದು ಆಯೋಗದ ಮೇಲೆ ಹರಿಹಾಯ್ದಿದ್ದಾರೆ. ಜತೆಗೆ ʻದೂರು ಕೊಟ್ಟವರ ಹೆಸರು ಬಹಿರಂಗ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಿʼ ಎಂದು ಆಗ್ರಹಿಸಿದ್ದಾರೆ.
ʻಕಾನೂನಿನ ಪ್ರಕಾರವೇ ನಮ್ಮ ಕಾರ್ಯಕರ್ತರು ಅರ್ಜಿ ಕೊಟ್ಟಿದ್ದಾರೆ. ಅದರ ಗೌಪ್ಯತೆ ಕಾಪಾಡದೆ ಬಹಿರಂಗ ಪಡಿಸಿದ್ದು ತಪ್ಪುʼ ಎಂದು ಹೇಳುವ ಉತ್ಸಾಹದಲ್ಲಿ ಅರ್ಜಿ ಕೊಟ್ಟಿದ್ದು ಕಾರ್ಯಕರ್ತರಾಗಿದ್ದರೂ ಅವರ ಹಿಂದೆ ಇದ್ದದ್ದು ನಾವುಗಳು, ಇದು ನಮ್ಮ ಪಕ್ಷದ ಸೂಚನೆಯಾಗಿತ್ತು ಎಂದು ಸಿ.ಟಿ.ರವಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ನೆಟ್ಟಿಗರು ಕಿಚಾಯಿಸಿ, ಅವರ ಕಾಲೆಳೆಯುತ್ತಿದ್ದಾರೆ.
ಅದೇನೇ ಇರಲಿ. ತಮ್ಮ ನಾಯಕರನ್ನು ನಂಬಿ ಕಾನೂನಿನ ಬಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಿದ್ದಿದ್ದಾರೆ. ದೂರು ಕೊಟ್ಟವರಲ್ಲಿ ರಾಜಕಾರಣಿಗಳಾಗಲಿ, ಅವರ ಮಕ್ಕಳಾಗಲಿ ಯಾರೂ ಇಲ್ಲ. ಎಲ್ಲರೂ ಕಾರ್ಯಕರ್ತರೇ ಆಗಿದ್ದಾರೆ. ಎಫ್‌ಐಆರ್‌ಗಳು ದಾಖಲಾಗುವುದು ಇನ್ನೂ ನಿಂತಿಲ್ಲ. ದಾಖಲಾದ ದೂರುಗಳು ಯಾವ ತಿರುವು ಪಡೆಯುತ್ತವೆ ಎಂಬುದು ಕಾದು ನೋಡಬೇಕಿದೆ.
ಪಶುವೈದ್ಯಾಧಿಕಾರಿ ಮಾತ್ರವಲ್ಲ, 13 ನೇಮಕಾತಿಗಳ ಬೆನ್ನುಬಿದ್ದ ಇ.ಡಿ.!

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಹಗರಣ ಬೆನ್ನುಹತ್ತಿರುವ ಇ.ಡಿ. ಅಧಿಕಾರಿಗಳು ಈಗ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವಧಿಯಲ್ಲಿ (ಜನವರಿ 2024 ರಿಂದ ಮಾರ್ಚ್ 2026ರವರೆಗೆ) ಕೆಪಿಎಸ್‌ಸಿ ಮೂಲಕ ನಡೆದ ಎಲ್ಲಾ 13 ನೇಮಕಾತಿಗಳ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆ. ಅವರ ಅವಧಿಯ ಇತರ ಪರೀಕ್ಷೆಗಳಲ್ಲಿಯೂ ಲಂಚದ ವಹಿವಾಟು ನಡೆದಿರುವ ಬಗ್ಗೆ ಸುಳಿವು ಸಿಕ್ಕಿರುವುದರಿಂದ ತನಿಖೆಯ ವ್ಯಾಪ್ತಿ ವಿಸ್ತರಿಸಿದೆ.
ಒಂದು ಕಡೆ ಇ.ಡಿ. (ಜಾರಿ ನಿರ್ದೇಶನಾಲಯ) ಮತ್ತೊಂದು ಕಡೆ ಎಸ್‌ಐಟಿ ಹಗರಣದ ಹಿಂದೆ ಬಿದ್ದಿರುವುದರಿಂದ ಈ ಹಗರಣಕ್ಕಾದರೂ ಮುಕ್ತಿ ಸಿಗಬಹುದೇನೋ? ಆಡಳಿತ ಪಕ್ಷದ (ಕೇಂದ್ರ ಹಾಗೂ ರಾಜ್ಯದ) ಅಧಿಕಾರಸ್ಥ ರಾಜಕಾರಣಿಗಳು ಯಾರನ್ನೋ ಉಳಿಸಲು ತನಿಖೆಯಲ್ಲಿ ಮೂಗುತೂರಿಸದಿದ್ದರೆ ಈ ಹಗರಣದ ಜಾತಕವಾದರೂ ಬಯಲಾಗಬಹುದು. ಈ ಹಗರಣದ ಕೈಕಾಲು ಮುರಿದು ಬೀದಿಯಲ್ಲಿ ಎಸೆದರೆ, ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ರಾಜಕೀಯ ಹೋರಾಟಗಳನ್ನು ಮಾಡಲು ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಇ.ಡಿ. ಸಂಸ್ಥೆಯ ಮೇಲೆ ಅಲ್ಪಸಲ್ಪ ಉಳಿದಿರುವ ಜನರ ವಿಶ್ವಾಸವೂ ಮಣ್ಣಿಗೆ ಸೇರುತ್ತದೆ.
ಮತಗಳ್ಳತನದ ವಿರುದ್ಧ ಬೀದಿಗೆ ಬಂದಿರುವ ರಾಜ್ಯದ ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕೆಪಿಎಸ್‌ಸಿ ಹಗರಣದ ಬಗ್ಗೆ ಇದುವರೆಗೆ ಒಂದೂ ಮಾತಾಡದೇ ಇರುವುದು ಆಶ್ಚರ್ಯಕರವಾಗಿದೆ. ಇಂತಹ ಸೆಲೆಕ್ಟಿವ್ ಹೋರಾಟಗಳಿಂದ ಆಡಳಿತ ಪಕ್ಷ ಹಾಗೂ ಆಯಕಟ್ಟಿನ ಜಾಗದಲ್ಲಿ ಕೂತಿರುವ ಭ್ರಷ್ಟ ಅಧಿಕಾರಿಗಳಿಗೆ ಮತ್ತಷ್ಟು ಲೂಟಿ ಮಾಡಲು ಮಾಡಲು ದಾರಿ ಮಾಡಿಕೊಡುತ್ತವೆ.


