ದ ಪಾಲಿಟಿಕ್

ಕಲಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಆರೆಸ್ಸೆಸ್ ಶಾಖೆ! 

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಕಲಬುರ್ಗಿ ನಗರದ 25 ಕಿಲೋಮೀಟರ್ ಅಂತರದ ಕಡಗಂಚಿಯಲ್ಲಿ ಸುಮಾರು 670 ಎಕರೆ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ 25 ವಿಭಾಗಗಳು, 12 ನಿಕಾಯಗಳು ಮತ್ತು 03 ಸೆಂಟರ್ ಗಳು ಒಳಗೊಂಡು ಬಹು ವಿಸ್ತಾರವಾಗಿ ಹರಡಿಕೊಂಡಿದೆ. ಪ್ರತಿವರ್ಷ ಇಲ್ಲಿಂದ ಆಚೀಚೆ ಒಂದು ಸಾವಿರ ವಿದ್ಯಾರ್ಥಿಗಳು ಹೊರಗೆ ಬರುತ್ತಾರೆ. 

2009 ರಲ್ಲಿ ಇದು ಆರಂಭವಾದಾಗಿನಿಂದ ಇಲ್ಲಿನ ಕ್ಯಾಂಪಸ್ ನಲ್ಲಿ ಒಂದೊಳ್ಳೆ ಶೈಕ್ಷಣಿಕ ವಾತಾವರಣವಾಗಲಿ, ಬಿರುಸಿನ ಅಕಾಡೆಮಿಕ್ ಚಟುವಟಿಕೆಗಳಾಗಲಿ ಎದ್ದು ಕಂಡುಬಂದಿಲ್ಲ. ಈಗಲೂ ಹೆಚ್ಚುಕಡಿಮೆ ಅದೇ ಸ್ಥಿತಿ ಇದೆ. ಒಂದೊಳ್ಳೆ ಗುಣಮಟ್ಟದ ಗ್ರಂಥಾಲಯವೂ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ. ಆದರೆ, ಆರೆಸ್ಸೆಸ್ ಶಾಖೆ ಮಾತ್ರ ಕಳೆದೆರಡು ವರ್ಷಗಳಿಂದ ನಿಯಮಿತವಾಗಿ ಬೆಳ್ಳಂಬೆಳಿಗ್ಗೆ ಕ್ಯಾಂಪಸ್ ನ Multipurpose hall ಪಕ್ಕದಲ್ಲಿ ನಿರ್ಭಯವಾಗಿ ಖುಲ್ಲಂಖುಲ್ಲಾ ನಡೆಯುತ್ತಿದೆ.

ಒಂದು ವಿಶ್ವವಿದ್ಯಾಲಯದ ನರಮಂಡಲವೆ ‘ವಿಸಿ’ ಮತ್ತು ‘ರಿಜಿಸ್ಟ್ರಾರ್’ ಚೇಂಬರ್ ಆಗಿರುತ್ತದೆ. ಆದರೆ ದುರಾದೃಷ್ಟವಶಾತ್ ಸಂಗತಿ ಎಂದರೆ ಈ ಛೇಂಬರಿನ ಮುಖ್ಯಸ್ಥರು ಈ ಅಹಿತಕರ ಬೆಳವಣಿಗೆ ಕಂಡು ಕಾಣದಂತೆ ಇದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ‘ವಿಸಿ'(Vice chancellor) ಬಿ. ಸತ್ಯಾನಾರಾಯಣ ಅವರ ಜತೆಗೆ ‘ದಿ ಪೊಲಿಟಿಕ್’ ಮುಖತಃ ಭೇಟಿಯಾಗಿ ಮಾತನಾಡಿದಾಗ ‘ನನಗೆ ಗೊತ್ತಿಲ್ಲ! ಶಾಖೆ ನಡೆದರೆ ಅದರಲ್ಲಿ ತಪ್ಪೇನಿದೆ? ಆರೆಸ್ಸೆಸ್ ಸಂಘಟನೆವೇನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ನಿಷೇಧಕ್ಕೊಳಗಾಗಿರುವ ಸಂಘಟನೆಯಾಗಿದೆ?’ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದುವರೆದು ‘ನಾವು ಯಾವ ಶಾಖೆಗೂ ಪರವಾನಗಿ ಕೊಟ್ಟಿಲ್ಲ, ನಡೆಯಲು ಪ್ರೋತ್ಸಾಹವೂ ಕೊಟ್ಟಿಲ್ಲ. ಮುಂದೆ ಕೋಡುವುದು ಇಲ್ಲ. ಆದರೆ, ಅವರ ಪಾಡಿಗೆ ಅವರಾಗಿಯೇ ಮಾಡ್ತಾ ಇದ್ರೆ ನಾವದನ್ನ ತಡೆಯುವುದು ಇಲ್ಲ. ಏಕೆಂದರೆ ಶಾಖೆ ನಡೆಯುವುದರಿಂದ ವಿಶ್ವವಿದ್ಯಾಲಯಕ್ಕೆ ಯಾವುದೇ ಹಾನಿಯಾಗಲ್ಲ. ಆರೆಸ್ಸೆಸ್ ಮಾತ್ರವಲ್ಲ, ಇಲ್ಲಿ ಬೇರೆ ಬೇರೆ ಸಿದ್ಧಾಂತದವರು ಈ ನೆಲದ ಕಾನೂನಿಗೆ ಬದ್ಧವಾಗಿ ಸಂಘಟನೆ ಮಾಡಲು, ಇತರ ಚಟುವಟಿಕೆಗಳನ್ನು ನಡೆಸಲು ನಮ್ಮದೇನು ಅಭ್ಯಂತರವಿಲ್ಲ’ ಎನ್ನುತ್ತಾರೆ. ಅವರಾಡಿದ ಪ್ರತಿ ಮಾತಿನಲ್ಲೂ ಆರೆಸ್ಸೆಸ್ ಬಗ್ಗೆ ಅವರಿಗಿರುವ ನಿಷ್ಠೆ , ಗೌರವ ಢಾಳಾಗಿ ಎದ್ದು ಕಾಣುತ್ತಿತ್ತು.

ಇತ್ತಿಚಿಗೆ ಕೆಲ ಆಪಾದನೆಗಳನ್ನು ಎದುರಿಸುತ್ತಿರುವ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ( Registrar) ‘ಬಸವರಾಜ ಡೋಣೂರ’ ಅವರನ್ನೂ ಈ ವಿಷಯದ ಬಗ್ಗೆ ಮಾತನ್ನಾಡಿದಾಗ, ಅವರ ಮೇಲಿನ ಕೆಲ ಆಪಾದನೆಗಳಿಗೆ ದಾಖಲೆ ಸಮೇತ ಪತ್ರಿಕೆದುರು ಉತ್ಸುಕತೆಯಿಂದ ಎಳೆಎಳೆಯಾಗಿ ಬಿಚ್ಚಿಟ್ಟು ಕರಾರುವಾಕ್ಕಾಗಿ ಮಾತನಾಡುವ ಡೋಣೂರ ಸಹ ಈ ವಿಷಯದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡಲು ತೊದಲುತ್ತಾರೆ. (ಅವರ ಮೇಲೆ ಬಂದಿರುವ ಆಪಾದನೆಗಳಲ್ಲಿ ಹಸಿ ಸುಳ್ಳುಗಳೆಷ್ಟು , ಸುಡು ವಾಸ್ತವಗಳೆಷ್ಟು ಎನ್ನುವುದರ ಬಗ್ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆದು ಮತ್ತೊಮ್ಮೆ ಬರೆಯುತ್ತೇನೆ. ಅವರ ಮೇಲಿನ ಆಪಾದನೆಗಳು ಸರಿಯೋ ತಪ್ಪೋ ಎನ್ನುವುದು ಕಾಲ-ಕಾನೂನು ನಿರ್ಧರಿಸುತ್ತದೆ. ಈ ಬಗ್ಗೆಯೂ ವಿಶ್ವವಿದ್ಯಾಲಯದ ಕೆಲ ವಿಭಾಗದ ವಿದ್ಯಾರ್ಥಿಗಳ ಜತೆಗೆ ಮಾತನಾಡಿಸಿದಾಗ ‘ವಿಶ್ವವಿದ್ಯಾಲಯದ ಕೆಲವರು ಬೇಕಂತಲೇ ಅವರ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ’ ಎನ್ನುವ ಪ್ರತಿಕ್ರಿಯೆ ಹಲವರಿಂದ ಬಂದದ್ದು ನೀಜಕ್ಕೂ ನನಗಂತೂ ಶಾಕ್ ಆಯ್ತು) 

ಈ ಬಗ್ಗೆ ಕೆಲ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ‘ಹೌದು ಶಾಖೆ ನಡೆಯುತ್ತಿರುವುದು ನೀಜ. ನಾವು ಆ ಕಡೆಗೆ ವಾಕಿಂಗ್ ಹೋದಾಗ ನೋಡಿದ್ದೇವೆ. ನಮ್ಮ ಕೆಲ ಸಿನಿಯರ್ಸ್ ಗಳು ಹೋಗುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ‌ಹೊರ ರಾಜ್ಯದ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ. ಸ್ಥಳಿಯ ಕೆಲ ವಿದ್ಯಾರ್ಥಿಗಳು ‘ನಮಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದರೆ, ಇನ್ನೂ ಕೆಲವರು ‘ತಪ್ಪೇನಿದೆ?’ ಎನ್ನುತ್ತಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ಮೊದಲ ಶತ್ರು ಬಿಜೆಪಿಯೋ ಅಥವಾ ಜೆಡಿಎಸ್ ಪಕ್ಷವೋ ?

ಶಾಖೆ ನಡೆಯುತ್ತಿರುವ ವಿಷಯದ ಬಗ್ಗೆ ನನಗೆ ‘ಡೋಣುರ’ ಬಗ್ಗೆಯಾಗಲಿ ಅಥವಾ ‘ವಿಸಿ’ ಬಗ್ಗೆಯಾಗಲಿ ಯಾವುದೇ ಪ್ರಶ್ನೆಗಳಾಗಲಿ, ಅಸಮಾಧಾನವಾಗಲಿ ಇಲ್ಲ. ಏಕೆಂದರೆ ಉನ್ನತ ಅಧಿಕಾರಕ್ಕಾಗಿ ಡೋಣೂರ ಈಗಾಗಲೇ ಆರೆಸ್ಸೆಸ್ ಮುಂದೆ ಮಂಡಿಯೂರಿದ್ದಾರೆ. ಇನ್ನೂ ‘ವಿಸಿ’ ತನ್ನನ್ನು ನೇಮಿಸಿದವರ ಋಣ ತೀರಿಸಲೇಬೇಕು. ಜತೆಗೆ ‘ವಿಸಿ’ ಹಿನ್ನೆಲೆ, ನಿಷ್ಠೆ ಎಲ್ಲರಿಗೂ ಗೊತ್ತಿರುವಂತಹದೆ. 

ಆದರೆ, ವಿಶ್ವವಿದ್ಯಾಲಯಲ್ಲಿರುವ ಅನೇಕ ಜೀವಪರ ಮನಸುಗಳು ಮೌನಕ್ಕೆ ಜಾರಿದ್ದೇಕೆ ಎನ್ನುವ ಪ್ರಶ್ನೆ ತುಂಬಾ ಮಹತ್ವವಾಗಿದೆ. ಏನೇ ಸಮಸ್ಯೆ- ಒತ್ತಡವಿದ್ದರೂ ಎಟಲಿಸ್ಟ್ ಈ ವಿಷಯ ಹೊರಜಗತ್ತಿಗಾದರೂ ತಲುಪಿಸಬೇಕಿತ್ತು! ಜತಗೆ, ದೇಶದಲ್ಲಿ ಎಲ್ಲೇನೆ ಅಹಿತಕರ ಘಟನೆ ಜರುಗಿದರು ಫಟ್ ಅಂತ ಪ್ರತಿಕ್ರಿಯೆ ನೀಡಿ, ರಸ್ತೆಗಿಳಿಯುವ ಕಲಬುರ್ಗಿಯ ಎಡ-ದಲಿತ ಸಂಘಟನೆಗಳ ಮಿತ್ರರಿಗೆ ಇದು ಕಣ್ಣಿಗೆ ಬಿಳದಿರುವುದು, ಕೆಲವರಿಗೆ ಬಿದ್ದರೂ ಇದು ಮುಖ್ಯ ಆದ್ಯತೆ ಆಗದಿರುವುದು ಸಖೇದಾಶ್ಚರಕರವಾಗಿದೆ. 

ನನಗೆ ಗೊತ್ತಿರುವಂತೆ ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಆರೆಸ್ಸೆಸ್ ಶಾಖೆ ನಡೆಯುದಿಲ್ಲ. ಬಲ್ಲ ಮೂಲಗಳ ಪ್ರಕಾರ ಇಲ್ಲಿ ಶಾಖೆ ನಡೆಸಲು ಹೊರಗಡೆಯಿಂದ ಯಾರು ಬರುವುದಿಲ್ಲ. ವಿಶ್ವವಿದ್ಯಾಲಯದ ಕೆಲ ಸಹಾಯಕ ಪ್ರಾಧ್ಯಾಪಕರೇ ಅನುದಿನವೂ 50 – 100 ವಿದ್ಯಾರ್ಥಿಗಳು ಒಳಗೊಂಡ ಒಂದು ಶಾಖೆ ನಡೆಸುತ್ತಿದ್ದಾರಂತೆ. ಈ ಶಾಖೆಯನ್ನು ಒಂದು ವರ್ಷದ ಈಚೆಗೆ ಒಬ್ಬ ಆರೆಸ್ಸೆಸ್ ಸ್ವಯಂ ಸೇವಕ ಆಗಮಿಸಿ ಅಧಿಕೃತವಾಗಿ ಉದ್ಘಾಟಿಸಿದ್ದಾನಂತೆ. ಬಹಿರಂಗವಾಗಿ ಮುತುವರ್ಜಿ ವಹಿಸಿ ಶಾಖೆ ನಡೆಸುತ್ತಿರುವ ‘ಶಾಖಾ ಗುರುಗಳಿಂದ’ ವಿದ್ಯಾರ್ಥಿಗಳಿಗೆ ಎಂತಹ ಗುಣಮಟ್ಟದ ಶಿಕ್ಷಣ ಸಿಗಬಹುದು? ಇವರ ಕೈಯಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳು ಸಮಾಜಕ್ಕೆ ಎಂತಹ ಮಹದುಪಕಾರ ಮಾಡಬಹುದು ಎಂದು ನೆನೆಸಿಕೊಂಡರೆ ಈಗಲೇ ಭಯವಾಗುತ್ತಿದೆ. 

ವಿದ್ಯಾರ್ಥಿಗಳ ತಲೆಯಲ್ಲಿ ಸಮಾನತೆ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯ ಬಿತ್ತಬೇಕಾದ ವಿಶ್ವವಿದ್ಯಾಲಯದಂತಹ ತಾಣದಲ್ಲಿ ‘ಕೋಮು ವಿಷಬೀಜ’ವನ್ನು ಬಿತ್ತುವ ಕ್ರಿಯೆ ಚಿಗುರೊಡೆದು ಎರಡು ವರ್ಷದಿಂದ ಹರಡುತ್ತಿದೆ. ಆದಾಗ್ಯೂ ಇದರ ವಿರುದ್ಧ ವಿಶ್ವವಿದ್ಯಾಲಯದ ಒಳಗಾಗಲಿ, ಹೊರಗಾಗಲಿ ಒಂದು ಸಣ್ಣ ಅಪಸ್ವರವೂ ವ್ಯಕ್ತವಾಗದಿರುವುದು ಈ ನಾಡು ಎತ್ತ ಸಾಗುತ್ತಿದೆ ಎನ್ನುವುದರ ದ್ಯೋತಕವಾಗಿದೆ.

ಕೊನೆಗೆ ಒಂದು ಮಾತು: ಆರೆಸ್ಸೆಸ್ ತನ್ನ ಸಂತಾನ ಬಿಜೆಪಿ ಆಳ್ವಿಕೆಗೆ ಬಂದಾಗಲೆಲ್ಲ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಿಂದ ಹಿಡಿದು, ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ತನ್ನ ನಿಷ್ಠಾವಂತರನ್ನೇ ನೇಮಿಸುತ್ತದೆ. ಅವರ ಬದ್ಧತೆ ಮೆಚ್ಚಲೇಬೇಕು. ಆದರೆ, ಜಾತ್ಯಾತೀತತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ, ದೇಶದ ಕಾಂಗ್ರೆಸ್ ಒಳಗೊಂಡಂತೆ ಜಾತ್ಯಾತೀತ ಪಕ್ಷಗಳು ಅಧಿಕಾರಕ್ಕೆ ಬಂದಾಗಲೆಲ್ಲ ಸಮಾನತೆ, ಜಾತ್ಯಾತೀತ ತತ್ವದಲ್ಲಿ ಅಚಲ ನಂಬಿಕೆ ಇಟ್ಟಿರುವ ಎಷ್ಟು ಜನರನ್ನು ಇಲ್ಲಿಯವರೆಗೆ ಮುತುವರ್ಜಿಯಿಂದ ಆಯಕಟ್ಟಿನ ಜಾಗದಲ್ಲಿ ಕೂರಿಸಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡಿಕಿದರೆ ನಿರಾಶಾದಾಯಕ ಫಲಿತಾಂಶ ಸಿಗಬಹುದು?!

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!