ದ ಪಾಲಿಟಿಕ್

ಸಿದ್ದರಾಮಯ್ಯನವರ ಮೊದಲ ಶತ್ರು ಬಿಜೆಪಿಯೋ ಅಥವಾ ಜೆಡಿಎಸ್ ಪಕ್ಷವೋ ?

ದ ಪಾಲಿಟಿಕ್

ದ ಪಾಲಿಟಿಕ್

ಸಿದ್ದರಾಮಯ್ಯ ಪದೇಪದೇ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಒಳ್ಳೆಯ ಕಾರಣಗಳಿಗಾಗಿ, ಇನ್ನು ಕೆಲವೊಮ್ಮೆ ಕೆಟ್ಟ ಕಾರಣಗಳಿಗಾಗಿ. ಕಳೆದ ವಾರ ಸಿದ್ದರಾಮಯ್ಯನವರು ಪಕ್ಷದ ಕಾರ್ಯಕ್ರಮಕ್ಕಾಗಿ ಬಾಗಲಕೋಟೆಯಲ್ಲಿದ್ದರು. ಅದೇ ದಿನ ನಾನೂ ಬಾಗಲಕೋಟೆಯಲ್ಲಿದ್ದೆ- ಬೇರೊಂದು ಸಭೆಯ ಕಾರಣಕ್ಕೆ. ಸಭೆಯಲ್ಲಿದ್ದ ನನಗೆ ಗೆಳೆಯರೊಬ್ಬರು ಒಂದು ವಿಡಿಯೋ ತೋರಿಸಿದರು. ಗಲಭೆ ಸಂತ್ರಸ್ತ ಮಹಿಳೆಯೊಬ್ಬರಿಗೆ ಸಿದ್ದರಾಮಯ್ಯ ಒಂದು ಲಕ್ಷ ರೂಪಾಯಿ ನೆರವು ನೀಡಿದರೆಂದೂ, ಆಕೆ ’ನಮಗೆ ನ್ಯಾಯ ಬೇಕು, ಹಣ ಬೇಡ’ ಎಂದು ಆ ಹಣವನ್ನು ಸಿದ್ದರಾಮಯ್ಯ ಅವರ ಕಾರಿನತ್ತ ಎಸೆದರೆಂದೂ ಆ ವಿಡಿಯೊ ಹೇಳುತ್ತಿತ್ತು. ಟಿವಿ ಚಾನೆಲ್ ಒಂದರ ಸುದ್ದಿ ವಿಡಿಯೋ ಅದು. ಸಾಮಾನ್ಯವಾಗಿ ನಮ್ಮ ಕನ್ನಡ ಸುದ್ದಿ ಚಾನೆಲ್‌ಗಳು ವೈಭವೀಕರಣ, ಅಪಪ್ರಚಾರ ಮಾಡುವುದು ಹೆಚ್ಚು. ಇದೂ ಹಾಗೆಯೇ ಇರಬಹುದು ಅಂದುಕೊಂಡೆ. ಮಧ್ಯಾಹ್ನ ಊಟದ ಬಳಿಕ ಸಿದ್ದರಾಮಯ್ಯ ಘಟನೆಗೆ ಪ್ರತ್ಯಕ್ಷ ಸಾಕ್ಷಿ ಯಾರಾದರೂ ಇದ್ದಾರಾ ಎಂದುಕೊಂಡು ವಿಚಾರಿಸಿದಾಗ ಅಲ್ಲಿದ್ದವರೊಬ್ಬರು ಹೇಳಿದ್ದು ಇಷ್ಟು- ’ಸರ್.. ಅವರು ದುಡ್ಡು ಕೊಟ್ಟಿದ್ದು ನಿಜ. 50 ಸಾವಿರದ ಎರಡು ಕಟ್ಟುಗಳು. ಕೊಟ್ಟದ್ದನ್ನು ಬೇಡ ಎಂದು ಆ ಮಹಿಳೆ ಹಿಂತಿರುಗಿಸಲು ಯತ್ನಿಸಿದ್ದೂ ನಿಜ. ಅವರು ಹಿಂದಕ್ಕೆ ತೆಗೆದುಕೊಳ್ಳಲಿಲ್ಲ. ಜೊತೆಗೆ ಅಷ್ಟು ಹೊತ್ತಿಗೆ ಅವಸರದಲ್ಲಿ ಸಿದ್ದರಾಮಯ್ಯ ಅವರ ಕಾರು ಭರ್.. ಎಂದು ಹೊರಟೇಹೋಯಿತು. ಆ ಮಹಿಳೆಗೆ ಸಿಟ್ಟು ಬಂದು ಕೂಗಾಡುತ್ತಾ ದುಡ್ಡನ್ನು ಕಾರಿನತ್ತ ತೂರಿದರು. ಬಳಿಕ ಉಳಿದವರು ಹೆಕ್ಕಿಕೊಂಡರು..’

’ದುಡ್ಡು ಯಾಕೆ ತೆಗೆದುಕೊಳ್ಳಲಿಲ್ಲ..?’

’ನನ್ನ ಮಗನನ್ನು ಇರಿದವರ ವಿರುದ್ಧ ಕಂಪ್ಲೇಂಟ್ ಕೊಟ್ಟರೆ ಪೊಲೀಸರು ತೆಗೆದುಕೊಳ್ಳಲಿಲ್ಲ. ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನುವುದು ಆ ಮಹಿಳೆಯ ದೂರಾಗಿತ್ತು…’ ಎಂದರು ಅವರು.

ಆ ವಿಡಿಯೋ ಬಿಜೆಪಿಯವರ ಮತ್ತು ಸಿದ್ದರಾಮಯ್ಯ ವಿರೋಧಿಗಳ ಕೈಯಲ್ಲಿ ಸಿಕ್ಕು ಸಾಕಷ್ಟು ವೈರಲ್ ಆಯಿತು. ಮರುದಿನ ಆ ಹೆಣ್ಣುಮಗಳು ’ನಾನು ಹಣ ಎಸೆದಿಲ್ಲ. ಅದು ಕೈತಪ್ಪಿ ಬಿತ್ತು’ ಎಂದು ಹೇಳಿದ್ದರಿಂದ ಸಿದ್ದರಾಮಯ್ಯ ಅಭಿಮಾನಿಗಳ ಮುಖದಲ್ಲಿ ನಗುವೂ ಮೂಡಿತು. ಇಲ್ಲಿ ಹಣ ನಿರಾಕರಿಸಿದ

ಮಹಿಳೆ ಮುಸ್ಲಿಂ ಆಗಿದ್ದರು ಎನ್ನುವುದು ಸಿದ್ದರಾಮಯ್ಯ ಅವರ ವಿರೋಧಿಗಳಿಗೆ ಎಷ್ಟು ಮುಖ್ಯ ಆಗಿತ್ತೋ, ಸಿದ್ದರಾಮಯ್ಯ ಬೆಂಬಲಿಗರಿಗೂ ಅಷ್ಟೇ ಮುಖ್ಯವಾಗಿತ್ತು. ಸಿದ್ದರಾಮಯ್ಯ ಮುಸ್ಲಿಂ ವಿರೋಧಿ ಎನ್ನುವುದು ಒಂದು ಬಣದ ವಾದವಾದರೆ, ಸಿದ್ದರಾಮಯ್ಯ ಮುಸ್ಲಿಂ ಪರ ಎಂದು ಬಿಂಬಿಸುವುದು ಇನ್ನೊಂದು ಬಣದ ವಾದವಾಗಿತ್ತು.

ರಾಜಕೀಯದಲ್ಲಿ ಹಣ ಬಹಳ ಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಣದಿಂದ ಯಾರನ್ನು ಬೇಕಾದರೂ ಬಾಯಿ ಮುಚ್ಚಿಸಬಹುದು, ಸಮಾಧಾನ ಮಾಡಬಹುದು ಎನ್ನುವುದು ಬಹುತೇಕ ರಾಜಕಾರಣಿಗಳ ನಂಬಿಕೆ. ಸಿದ್ದರಾಮಯ್ಯ ಹಾಗೆ ಭಾವಿಸಿರುವ ಸಾಧ್ಯತೆ ಕಡಿಮೆ. ಸಹಜವಾಗಿ ಮರುಕದಿಂದ, ನೊಂದವರಿಗೆ ಅಗತ್ಯ ಬೀಳಬಹುದು ಎಂದು ಅವರು ದುಡ್ಡು ಕೊಟ್ಟಿದ್ದಾರೆ. ಆದರೆ ಅದು ದುಡ್ಡು ಕೊಡುವ ಸ್ಥಳ ಆಗಿರಲಿಲ್ಲ. ನೂರಾರು ಜನರು ಸುತ್ತುವರಿದ ಸಾರ್ವಜನಿಕ ಸ್ಥಳವೊಂದರಲ್ಲಿ ದೊಡ್ಡ ಕಾರಿನಲ್ಲಿ ಕುಳಿತು, ಕಾರಿನ ಹೊರಗೆ ನೋವು ತೋಡಿಕೊಳ್ಳುತ್ತಿದ್ದ ಮಹಿಳೆಯತ್ತ ’ತಗೊ ಹಣ’ ಎಂದು ಕೊಟ್ಟು ಹಾಗೇ ಭರ್.. ಎಂದು ಕಾರು ಮುಂದೋಡಿಸುವುದು ನೋಡಿದವರಿಗೂ ಕೆಟ್ಟ ಭಾವನೆಯನ್ನೇ ಮೂಡಿಸುತ್ತದೆ. ಆ ಮಹಿಳೆಗೆ ಸಿಟ್ಟು ಬಂದದ್ದು ಕೂಡಾ ಸಹಜವೇ. ಏನೇ ಇರಲಿ, ಆ ದಿನದ ಮಟ್ಟಿಗೆ ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ವಿಲನ್ ಆದದ್ದಂತೂ ನಿಜ.

ಸಿದ್ದರಾಮಯ್ಯ ಅವರ ರಾಜಕೀಯ ಗಮನಿಸಿದರೆ, ವೈಯಕ್ತಿಕವಾಗಿ ಭ್ರಷ್ಟಾಚಾರದ ಕಲೆ ಮೈಗಂಟಿಸಿಕೊಂಡದ್ದು ಕಾಣುವುದಿಲ್ಲ. ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಂಚುವ ಸಂದರ್ಭ ಬಂದಾಗಲೂ ಅವರು ತಮ್ಮ ರಾಜಕೀಯ ಬೆಂಬಲಿಗರನ್ನು ನಂಬಿದ್ದಾರೆಯೇ ಹೊರತು ಸ್ವತಃ ಹಣದ ಆಖಾಡಾಕ್ಕೆ ಇಳಿಯಲಿಲ್ಲ. ಇತರರಂತೆ ತಮ್ಮ ಮತ್ತು ಕುಟುಂಬದವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯನ್ನೂ ಮಾಡಿಕೊಳ್ಳಲಿಲ್ಲ. ಆದರೆ ನಾಳೆ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದರಾಮಯ್ಯ ಬಯಸಿದರೆ ಅದಕ್ಕೆ ಅಗತ್ಯವಾದ ಕೋಟ್ಯಂತರ ರೂಪಾಯಿ ಹಣ ಅವರ ನಿಕಟವರ್ತಿಗಳ ಬಳಿಯಲ್ಲಿ ರೆಡಿ ಇದೆ ಎನ್ನುವುದರಲ್ಲಿ ಅನುಮಾನವೂ ಇಲ್ಲ.

ಇಲ್ಲಿ ಎರಡು ಘಟನೆಗಳು ನೆನಪಾಗುತ್ತವೆ.

ಅದು ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯ ಸಂದರ್ಭ. ನಾನಾಗ ಪ್ರಜಾವಾಣಿಯ ಬ್ಯೂರೊ ಚೀಫ್ ಆಗಿ ಮೈಸೂರಿನಲ್ಲಿದ್ದೆ. ಚುನಾವಣೆಗೆ ಮುನ್ನ ಪ್ರಮುಖ ಅಭ್ಯರ್ಥಿಗಳ ಸಂದರ್ಶನ ಮಾಡಿ ಪ್ರಕಟಿಸುವುದು ನಮ್ಮ ಪದ್ಧತಿಯಾಗಿತ್ತು. ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಅವರ ಸಂದರ್ಶನ ಆಗಲೇ ಪ್ರಕಟವಾಗಿತ್ತು. ಆದರೆ ಸಿದ್ದರಾಮಯ್ಯ ಕೈಗೆ ಸಿಗುತ್ತಿರಲಿಲ್ಲ. ಇಡೀ ದೇಶದ ಗಮನ ಸೆಳೆದ ಈ ಉಪಚುನಾವಣೆಯ ಕಣ ಕಾವೇರಿತ್ತು. ಜಯ ಗಳಿಸಲೇಬೇಕೆಂದು ಸಿದ್ದರಾಮಯ್ಯ ರಾತ್ರಿ ಹಗಲೂ ಓಡಾಡುತ್ತಿದ್ದರು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಖುದ್ದಾಗಿ ಆಖಾಡಕ್ಕೆ ಇಳಿದು ಒಂದೊಂದು ಓಟಿಗೂ ಸಿದ್ದರಾಮಯ್ಯ ಬೆವರಿಳಿಸುವಂತೆ ಮಾಡಿದ್ದರು. ಚುನಾವಣೆಗೆ ಎರಡೇ ದಿನಗಳು ಉಳಿದಿವೆ. ಇವತ್ತಾದರೂ ಸಿದ್ದರಾಮಯ್ಯ ಅವರನ್ನು ಅರ್ಧ ಗಂಟೆ ಎಲ್ಲಾದರೂ ಕಟ್ಟಿಹಾಕಿ ಸಂದರ್ಶನ ಮಾಡಲೇಬೇಕೆಂದು ನಾನು ಬೆಳಿಗ್ಗೆ ಏಳು ಗಂಟೆಗೇ ಆಂದೋಲನ ಸರ್ಕಲ್ ಬಳಿಯಿದ್ದ ಅವರ ಮನೆಗೆ ಹೋದೆ. ಮನೆಯ ಹೊರಗೆ ಸಾವಿರಾರು ಜನರು ಕಿಕ್ಕಿರಿದು ಸೇರಿದ್ದರು. ಅವರ ನಡುವೆ ಪ್ರಯಾಸದಿಂದ ನುಗ್ಗಿ ಮನೆಯೊಳಕ್ಕೆ ಹೋದೆ. ಅಲ್ಲೂ ಕಾಲಿಡಲು ಆಗದಷ್ಟು ಜನ. ಸಿದ್ದರಾಮಯ್ಯ ಇನ್ನೂ ಮಲಗಿದ್ದರು. ಕೋಣೆಯ ಬಾಗಿಲು ಹಾಕಿತ್ತು. ಕೋಣೆಯ ಹೊರಗಿನ ಹಾಲ್‌ನಲ್ಲಿ ಡೈನಿಂಗ್ ಟೇಬಲ್ ಮೇಲೆ ರಾಶಿ ಬಿದ್ದಿದ್ದ ಪೇಪರ್‌ಗಳ ಮೇಲೆ ಕಣ್ಣಾಡಿಸುತ್ತಾ ಕುಳಿತೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕನಿಗೆ ವಿಷಯ ತಿಳಿಸಿದೆ. ಕುಳಿತಿರಿ ಸಾರ್ ಎಂದು ಒಳಹೋದ ಆತ ಟೀ ಕಳುಹಿಸಿಕೊಟ್ಟರು. ಕುಡಿಯುತ್ತಾ ಕುಳಿತಿದ್ದೆ.

ಅಷ್ಟರಲ್ಲಿ ಕುರುಚಲು ಗಡ್ಡ ಕೂದಲಿನ ಬಡವನಂತೆ ಕಾಣಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ನನ್ನ ಬಳಿ ಬಂದ. ಮಾಸಲು ಅಂಗಿ. ಎತ್ತಿ ಅಡ್ಡ ಕಟ್ಟಿದ ಪಂಚೆಯ ಕೆಳಗೆ ಫಟಾಫಟಿ ಚಡ್ಡಿ ಕಾಣಿಸುತ್ತಿತ್ತು. ಅವನು ಸ್ವಲ್ಪ ಹೊತ್ತಿನಿಂದ ನನ್ನ ಸುತ್ತಲೇ ಠಳಾಯಿಸುತ್ತಿದ್ದುದನ್ನು ಗಮನಿಸಿದ್ದೆ. ಏನಪ್ಪಾ ಎಂದು ನಾನೇ ಮಾತನಾಡಿಸಿದೆ. ’ಸರ್.. ಸಾಹೇಬರ ಬಳಿ ಎರಡು ನಿಮಿಷ ಮಾತನಾಡಬೇಕಿತ್ತು. ನೀವೇ ಸಹಾಯ ಮಾಡಬೇಕು’ ಎಂದ. ನಾನು ಅವನನ್ನೇ ನೋಡಿದೆ. ಏನೋ ಸಹಾಯ ಕೇಳಲು ಬಂದವನು ಇರಬೇಕು ಅಂದುಕೊಂಡೆ. ’ಅಲ್ಲಪ್ಪಾ.. ಈ ಎಲೆಕ್ಷನ್ ಬ್ಯುಸಿ ನಡುವೆ ನಿನ್ ಜೊತೆ ಮಾತನಾಡಲು ಅವರಿಗೆ ಸಮಯ ಸಿಗುತ್ತಾ? ಇದೆಲ್ಲ ಮುಗಿದ ಮೇಲೆ ಬಂದರೆ ಆರಾಮವಾಗಿ ಸಿಗಬಹುದು..’ ಎಂದೆ. ’ಇಲ್ಲ ಸಾರ್.. ದೂರದ ಬಾದಾಮಿಯಿಂದ ಬಂದಿದ್ದೀನಿ.. ಇವತ್ತೇ ಸಿಗಬೇಕು’ ಎಂದ. (ಆಗಿನ್ನೂ ಸಿದ್ದರಾಮಯ್ಯ ಬಾದಾಮಿ ಎಮ್ಮೆಲ್ಲೆ ಆಗಿರಲಿಲ್ಲ) ’ಇವತ್ತೇ ಸಿಗಬೇಕು ಅಂದ್ರೆಆಗಲಿಕ್ಕಿಲ್ಲ ನೋಡು. ಇಲ್ಲಿ ಸಾವಿರಾರು ಜನ ಅವರನ್ನು ಕಾಯುತ್ತಿದ್ದಾರೆ. ನಿನ್ನನ್ನು ಅವರು ಏಕೆ ಮಾತಾಡಿಸ್ತಾರೆ..’ ಎಂದು ನಿರುತ್ಸಾಹಗೊಳಿಸಲು ಯತ್ನಿಸಿದೆ.

’ಸಾರ್. ನೀವು ಸಹಾಯ ಮಾಡಿದರೆ ಆಗುತ್ತೆ.. ಇವತ್ತೇ ಸಿಗಬೇಕು’ ಎಂದು ತಲೆ ಕೆರೆದ. ’ಅರೆ.. ಅದೇನು ಮಾರಾಯ ಅಂತಹ ತುರ್ತು ರಾಜಕಾರ್ಯ?’ ಎಂದು ಸ್ವಲ್ಪ ಅಸಹನೆಯಿಂದಲೇ ಕೇಳಿದೆ. ಆತ ಹೇಳಲೋ ಬೇಡವೋ ಎನ್ನುವಂತೆ ಬಾಗಿ ಕೊನೆಗೂ ತನ್ನ ಪಟಾಪಟಿ ಚಡ್ಡಿಯ ಒಳಗೆ ಕೈ ತೂರಿಸಿ ರಬ್ಬರ್ ಬ್ಯಾಂಡಿನಲ್ಲಿ ಸುತ್ತಿ ಮಡಚಿಟ್ಟಿದ್ದ ನೋಟಿದ ಕಂತೆಯೊಂದನ್ನು ಸ್ವಲ್ಪ ಹೊರಗೆಳೆದು ತೋರಿಸಿ, ’ಸಾಹೇಬರ ಬಳಿ ಇಲೆಕ್ಷನ್ ಖರ್ಚಿಗೆ ದುಡ್ಡಿಲ್ಲ ಅಂತ ಗೊತ್ತಾಯ್ತು. ಇದನ್ನು ಕೊಟ್ಟು ಹೋಗೋಣ ಅಂತ ಬಂದೆ’ ಎಂದ. ನನಗೆ ನಿಜಕ್ಕೂ ದಿಗ್ಭ್ರಮೆಯಾಗಿತ್ತು. ’ಎಷ್ಟಿದೆ ದುಡ್ಡು?’ ಎಂದೆ. ’ನಲವತ್ತೈದು ಸಾವಿರ ಇದೆ’ ಎಂದ. ’ಎಲ್ಲಿಂದ ತಂದ್ಯಪ್ಪಾ ಇಷ್ಟೊಂದು ದುಡ್ಡು?’ ಎಂದು ಕೇಳಿದೆ. ’ನನ್ನ ಎಲ್ಡು ಕುರಿ ಮಾರಿದೆ ಸಾರ್..’ ಎಂದ. ’ಸರಿ, ಇಲ್ಲೇ ಕೂತಿರು’ ಎಂದೆ. ಅಷ್ಟು ಹೊತ್ತಿಗೆ ಒಂದು ಫೋನ್ ಬಂತು. ನನಗೆ ಪರಿಚಯದ ಒಬ್ಬ ಸರ್ಕಾರಿ ಅಧಿಕಾರಿ. ’ಸಾರ್.. ನೀವು ಸಾಹೇಬರ ಮನೆಯೊಳಗೆ ಇದ್ದೀರಿ ಅಂತ ಗೊತ್ತಾಯ್ತು. ನನಗೊಂದು ಉಪಕಾರ ಮಾಡಬೇಕು’ ಎಂದರು ಅವರು. ಏನು ಹೇಳಿ ಅಂದೆ. ’ನೀವು ಸಾಹೇಬರ ಕೋಣೆಯೊಳಗೆ ಮಾತನಾಡಲು ಹೋದಾಗ ನಿಮ್ಮ ಫೋನ್‌ನಿಂದ ಒಂದು ಕರೆ ನನಗೆ ಮಾಡಿ ಕೊಡಬೇಕು. ಅವರಿಗೆ ಅರ್ಜೆಂಟಾಗಿ ಒಂದು ವಿಷಯ ತಿಳಿಸುವುದಿದೆ’ ಎಂದರು. ’ನೀವೇ ನೇರ ಮಾತನಾಡಬಹುದಲ್ಲ..’ ಎಂದು ಕೇಳಿದರೆ, ’ನಿನ್ನೆಯಿಂದ ಬಹಳ ಟ್ರೈ ಮಾಡಿದೆ. ಅವರು ಸಿಗುತ್ತಿಲ್ಲ.. ಪ್ಲೀಸ್ ಹೆಲ್ಪ್ ಮಾಡಿ’ ಎಂದರು! ’ಏನದು ಅಷ್ಟೊಂದು ಅರ್ಜೆಂಟು?’ ಎಂದು ವಿಚಾರಿಸಿದರೆ, ’ನಿಮ್ಮ ಬಳಿಕ ಮುಚ್ಚುಮರೆ ಏನೂ ಇಲ್ಲ ಸಾರ್. ನಾವು ನಾಲ್ವರು ಅಧಿಕಾರಿಗಳು ಸಾಹೇಬ್ರ ಎಲೆಕ್ಷನ್ ಖರ್ಚಿಗೆಂದು 50 ಲಕ್ಷ ರೂಪಾಯಿ ಒಟ್ಟು ಮಾಡಿದ್ದೇವೆ. ಅದನ್ನು ಯಾರ ಬಳಿ ತಲುಪಿಸಬೇಕು ಎನ್ನುವುದು ಅವರ ಬಳಿಯೇ ಕೇಳಬೇಕಿತ್ತು. ನಾವು ನೀಡುತ್ತಿದ್ದೇವೆ ಎನ್ನುವುದು ಅವರಿಗೆ ಗೊತ್ತಾಗಬೇಕು ಸಾರ್ ಎಂದರು!

ಇದನ್ನೂ ಓದಿ : ಸಿದ್ದೇಶ್ವರ ಸ್ವಾಮೀಜಿ ಮೋದಿಯನ್ನಲ್ಲದೆ, ಬಸವಣ್ಣನನ್ನ ಹೊಗಳುತ್ತಾರೆಯೇ?!

ಆ ಅಧಿಕಾರಿ ಹಿಂದುಳಿದ ವರ್ಗಕ್ಕೆ ಸೇರಿದವರು. ಸಿದ್ದರಾಮಯ್ಯನವರ ಜಾತಿಯವರಲ್ಲ. ನನಗೆ ಆ ಕ್ಷಣದಲ್ಲಿ ಅನ್ನಿಸಿದ್ದು – ಸಿದ್ದರಾಮಯ್ಯ ನಿಜಕ್ಕೂ ಅದೃಷ್ಟವಂತರು! ಬಹುತೇಕ ರಾಜಕಾರಣಿಗಳು ಚುನಾವಣೆಯ ಖರ್ಚಿಗೆ ಒದ್ದಾಡುತ್ತಿದ್ದುದು ನನಗೆ ಗೊತ್ತಿತ್ತು. ಅಂತಹದ್ದರಲ್ಲಿ ಸಿದ್ದರಾಮಯ್ಯ ಅವರಿಗೆ ಖರ್ಚಿಗೆಂದೇ ಹಣ ಕೊಡಲು ಜನ ಉತ್ಸಾಹ ತೋರುತ್ತಿದ್ದರು. ಈ ಅಧಿಕಾರಿಗಳು ಆ ದುಡ್ಡನ್ನು ಹೇಗೆ ಗಳಿಸಿದ್ದರು ಎನ್ನುವುದರ ಬಗ್ಗೆ ಇಲ್ಲಿ ಏನೂ ಹೇಳಲ್ಲ. ಅದು ನಿಮ್ಮ ಊಹೆಗೆ ಬಿಟ್ಟದ್ದು. ಈ ಎರಡೂ ಪ್ರಕರಣಗಳಲ್ಲಿ ನಾನೇನು ಮಾಡಿದೆ ಎನ್ನುವುದೂ ಇಲ್ಲಿ ಅಪ್ರಸ್ತುತ. ಆದರೆ ಸಿದ್ದರಾಮಯ್ಯ ಜನರ ಮೇಲೆ ಮಾಡಿದ ಮೋಡಿ ಎಂತಹದ್ದು ಎನ್ನುವುದು ನನಗೆ ಅರ್ಥವಾಗಿತ್ತು.

ಆಗಲೇ ನಾನು ಕಾದು ಕುಳಿತು ಅರ್ಧ ಗಂಟೆಯಾಗಿತ್ತು. ಸಿದ್ದರಾಮಯ್ಯ ಇನ್ನೂ ಎದ್ದಿರಲಿಲ್ಲ. ಅದೇ ಹೊತ್ತಿಗೆ ಜನರ ಗುಂಪನ್ನು ಸೀಳಿ ಆರ್.ವಿ.ದೇಶಪಾಂಡೆ ಮತ್ತು ಆರ್.ಎಲ್. ಜಾಲಪ್ಪ ಒಳಬಂದರು. ’ಎಲ್ಲಪ್ಪಾ ಮದುಮಗಾ..? ಏನು ಇನ್ನೂ ಎದ್ದಿಲ್ಲವಾ? ಎಲೆಕ್ಷನ್ ಯಾರದ್ದು.. ನಮ್ದಾ ಅವರದ್ದಾ…?’ ಎಂದು ಪಿ.ಎ ಜೊತೆಗೇ ಕೇಳುತ್ತಾ ದೇಶಪಾಂಡೆ ಬೆಡ್‌ರೂಂನ ಬಾಗಿಲು ಬಡಿಯತೊಡಗಿದರು. ಮೂರು ನಿಮಿಷದ ಬಳಿಕ ಬಾಗಿಲು ತೆರೆಯಿತು. ಇದೇ ಸಮಯ ಎಂದು ಅವರ ಜೊತೆಗೆ ನಾನೂ ಬೆಡ್‌ರೂಂ ಒಳಗೆ ನುಗ್ಗಿದೆ. ಒಳಗೆ ಸಿದ್ದರಾಮಯ್ಯ ಮಂಚದ ಮೇಲೆ ಮೂಗಿನವರೆಗೆ ಕಂಬಳಿ ಹೊದ್ದುಕೊಂಡು ಮಲಗಿದ್ದರು. ಕಣ್ಣುಗಳು ಮಾತ್ರ ಹೊರಗೆ ಕಾಣಿಸುತ್ತಿದ್ದವು. ಪಕ್ಕದಲ್ಲಿ ಅವರ ಆಪ್ತ ಮರಿಸ್ವಾಮಿ ನಿಂತಿದ್ದರು. ನಮಗೆ ಮೂರು ಕುರ್ಚಿಗಳನ್ನು ತೋರಿದರು.

ಒಳನುಗ್ಗಿದವರೇ ದೇಶಪಾಂಡೆ, ’ಏ.. ನೀನು ಇನ್ನೂ ಎದ್ದಿಲ್ವಾ? ಎಲೆಕ್ಷನ್ ಯಾರದ್ದೂ.. ಹಿಂಗಾದ್ರೆ ಅಷ್ಟೇ.. ಏಳು..’ ಎಂದು ಜೋರು ಧ್ವನಿಯಲ್ಲಿ ಕೇಳತೊಡಗಿದರು. ಮಲಗಿದ್ದಲ್ಲಿಂದಲೇ ಸಿದ್ದರಾಮಯ್ಯ ’ಪ್ರಚಾರ ಮುಗಿಸಿ ಮನೆಗೆ ಬರುವಾಗ ಬೆಳಿಗಿನ ಜಾವ ನಾಲ್ಕು ಆಗಿತ್ತು. ಅದಕ್ಕೇ ಸ್ವಲ್ಪ ಮಲಗಿದ್ದೀನಿ..’ ಎಂದರು. ಅವರು ತಕ್ಷಣಕ್ಕೆ ಏಳುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ತಕ್ಷಣ ಜಾಗೃತನಾದೆ. ದೇಶಪಾಂಡೆ ಅವರ ಬಳಿ ’ಸರ್ ಸ್ವಲ್ಪ ಹೊತ್ತು ಅಷ್ಟೇ’ ಎಂದು ವಿನಂತಿಸಿದೆ. ಸಿದ್ದರಾಮಯ್ಯ ಕಡೆಗೆ ತಿರುಗಿ, ’ಸಾರ್.. ಪತ್ರಿಕೆಗೆ ನಿಮ್ಮ ಸಂದರ್ಶನ ಮಾಡಲೆಂದು ಮೂರು ದಿನದಿಂದ ಪ್ರಯತ್ನಿಸುತ್ತಿದ್ದೇನೆ. ನೀವು ಒಂಟಿಯಾಗಿ ಸಿಗ್ತಿಲ್ಲ. ಈಗ ಒಂದು ಕೆಲಸ ಮಾಡೋಣ. ನೀವು ಮಲಗಿಕೊಂಡೇ ಇರಿ. ನಾನು ನನ್ನ ಕೆಲಸ ಮುಗಿಸುತ್ತೇನೆ’ ಎಂದು ಪ್ರಶ್ನೆಗಳನ್ನು ಶುರು ಮಾಡಿದೆ. ಸಣ್ಣ ನೋಟ್‌ಬುಕ್ ಮತ್ತು ಪೆನ್ನು ನನ್ನ ಕೈಯಲ್ಲಿ ಸಿದ್ಧವಾಗಿತ್ತು.

ಸುಮಾರು ಹದಿನೈದು- ಇಪ್ಪತ್ತು ನಿಮಿಷಗಳ ಸಂದರ್ಶನವದು. ನನ್ನ ಪ್ರಶ್ನೆಗಳು ಮೊದಲೇ ಸಿದ್ಧವಾಗಿದ್ದವು. ಅವರು ಮಲಗಿದಲ್ಲಿಂದಲೇ ನಿಧಾನಕ್ಕೆ ಉತ್ತರಿಸಿದರು. ದೇಶಪಾಂಡೆ ಮತ್ತು ಜಾಲಪ್ಪ ಮೌನವಾಗಿ ಕುಳಿತು ನೋಡುತ್ತಿದ್ದರು. ಹಾಗೂ ಹೀಗೂ ನನ್ನ ಕೆಲಸ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ದೇಶಪಾಂಡೆ ಕೇಳಿದರು – ’ಹನೀಫ್, ನಮ್ ಲೀಡರ್ ಎಷ್ಟು ಮತಗಳ ಅಂತರದಿಂದ ಗೆಲ್ತಾರೆ…?’ ನಾನು ಹೇಳಿದೆ – ’ಇವತ್ತಿನ ಪ್ರಕಾರ 500ರಿಂದ ಸಾವಿರ ವೋಟ್‌ಗಳ ಲೀಡ್ ಇದ್ದ ಹಾಗೆ ಕಾಣಿಸುತ್ತಿದೆ. ಮತದಾನದ ಹಿಂದಿನ ದಿನ ಏನಾಗುತ್ತೋ ಗೊತ್ತಿಲ್ಲ. ಸಿಎಂ ಕುಮಾರಸ್ವಾಮಿ ಒಂದೇ ಸಮನೆ ಬೆನ್ನುಹತ್ತಿದ್ದಾರೆ… ಕಷ್ಟ ಇದೆ’ ಎಂದೆ. ಮಲಗಿದಲ್ಲೇ ಸಿದ್ದರಾಮಯ್ಯ ಸ್ವಲ್ಪ ಸಿಟ್ಟಿಗೆದ್ದರು. ’ಮಿಸ್ಟರ್ ಹನೀಫ್.. ಯೂ ಡೋಂಟ್ ನೋ ಮೈ ಕಾನ್ಸ್‌ಟಿಯೆನ್ಸೀ..’ ಎಂದರು. ತಕ್ಷಣ ದೇಶಪಾಂಡೆಯವರು ’ಸರಿಯಪ್ಪಾ… ನೀನೇ ಹೇಳು.. ಎಷ್ಟು ಮತಗಳ ಅಂತರದಿಂದ ಗೆಲ್ತೀ..’ ಎಂದು ನೇರ ಪ್ರಶ್ನೆ ಹಾಕಿದರು. ’ಐ ಥಿಂಕ್… ಅರೌಂಡ್ ಫಿಫ್ಟೀ ಟು ಸಿಕ್ಸ್‌ಟೀ ಥೌಸೆಂಡ್ ವೋಟ್ಸ್..’ ಎಂದು ಸಿದ್ದರಾಮಯ್ಯ ಖಚಿತ ಧ್ವನಿಯಲ್ಲಿ ಹೇಳಿದರು. ನಾನು ದೇಶಪಾಂಡೆಯವರ ಕಡೆಗೆ ತಿರುಗಿ ’ಸಾರ್.. ಇನ್ನು ಎರಡು ದಿನ ಅಷ್ಟೇ ತಾನೇ. ನಿಮಗೇ ಗೊತ್ತಾಗುತ್ತೆ..’ ಎಂದು ನಕ್ಕು ಇಬ್ಬರಿಗೂ ಥ್ಯಾಂಕ್ಸ್ ಹೇಳಿ ಕೋಣೆಯಿಂದ ಹೊರಬಂದೆ. (ಆ ಚುನಾವಣೆಯಲ್ಲಿ ಸಿದ್ದರಾಮಯ್ಯ 275 ಮತಗಳ ಅಂತರದಿಂದ ಕಷ್ಟಪಟ್ಟು ಗೆದ್ದಿದ್ದರು. ಸರ್ವೋತ್ತಮ ಎಂಬ ಯಾವ ಮತದಾರನಿಗೂ ಗೊತ್ತಿಲ್ಲದ ಬಡ ಪತ್ರಕರ್ತನೊಬ್ಬ ಪಕ್ಷೇತರನಾಗಿ ನಿಂತವರು 4000ಕ್ಕೂ ಹೆಚ್ಚು ಮತ ಗಳಿಸಿದ್ದರು! ಅದಕ್ಕೆ ಕಾರಣವಾದದ್ದು ಅದೇ ಮೊದಲ ಬಾರಿಗೆ ಬಂದ ಎಲೆಕ್ಟ್ರಾನಿಕ್ ಮತ ಯಂತ್ರ ಎನ್ನುವುದು ಬೇರೆಯೇ ಕಥೆ ಇದೆ.)

ಸಿದ್ದರಾಮಯ್ಯ ಜನನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ತನಗನ್ನಿಸಿದ್ದನ್ನು ನೇರವಾಗಿ, ಗಟ್ಟಿಯಾಗಿ ಹೇಳುತ್ತಾರೆ. ಪ್ರಗತಿಪರ ವಿಚಾರಗಳಿಗೆ ಸದಾ ಸ್ಪಂದಿಸುವವರು ಎನ್ನುವುದೂ ಅನುಮಾನಾತೀತ. ಆದರೆ ಅವರ ರಾಜಕೀಯ ತಂತ್ರಗಾರಿಕೆ ಸದಾ ವ್ಯಕ್ತಿಕೇಂದ್ರಿತ ಆಗಿರುತ್ತದೆಯೇ ಹೊರತು ಪಕ್ಷಕೇಂದ್ರಿತ ಆಗಿರುವುದಿಲ್ಲ ಎನ್ನುವುದು ನಾನು ಕಂಡುಕೊಂಡ ಸತ್ಯ. ಚಾಮುಂಡೇಶ್ವರಿ ಉಪಚುನಾವಣೆಗೂ ಮುನ್ನ ಜನತಾ ದಳಕ್ಕೆ ರಾಜೀನಾಮೆ ನೀಡಿ, ಎಬಿಪಿಜೆಡಿ (ಅಖಿಲ ಭಾರತ ಪ್ರಗತಿಪರ ಜನತಾ ದಳ) ಕಟ್ಟಿ ವಿವಿಧ ಜಿಲ್ಲೆಗಳಲ್ಲಿ ಅಹಿಂದ ಸಮಾವೇಶಗಳನ್ನು ಭರ್ಜರಿಯಾಗಿ ನಡೆಸಿದಾಗಲೂ ಅವರ ರಾಜಕೀಯ ವ್ಯಕ್ತಿಕೇಂದ್ರಿತವೇ ಆಗಿತ್ತು. ಒಮ್ಮೆ ನನ್ನನ್ನು ಕರೆಸಿ ಅಭಿಪ್ರಾಯ ಕೇಳಿದ್ದರು. ’ಎಬಿಪಿಜೆಡಿ ಬರ್ಖಾಸ್ತು ಮಾಡಿ ಕಾಂಗ್ರೆಸ್ ಸೇರಬೇಕಂತ ಇದ್ದೀನಿ. ನೀವೇನಂತೀರಿ?’ ಎಂದು. ’ಅದಕ್ಕಿನ್ನೂ ಕಾಲ ಬಂದಿಲ್ಲ. ಮುಂದಿನ ಚುನಾವಣೆಗೆ ಇನ್ನೂ ಆರು ತಿಂಗಳು ಇದೆ. ಎಬಿಪಿಜೆಡಿಯನ್ನೇ ಮುಂದುವರಿಸಿ. ಇಲೆಕ್ಷನ್ ಬಂದಾಗ ಕಾಂಗ್ರೆಸ್ ಜೊತೆಗೆ ಟೈ ಅಪ್ ಮಾಡಿಕೊಳ್ಳಿ. ಚುನಾವಣೆಯ ಫಲಿತಾಂಶ ಬಂದ ಬಳಿಕ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಬಹುದು’ ಎಂದು ನಾನು ಹೇಳಿದ್ದೆ. ಅವರು ಒಪ್ಪಲಿಲ್ಲ. ’ಪಕ್ಷ ನಡೆಸೋದು ಕಷ್ಟ ಕಣ್ರೀ.. ಅಷ್ಟು ಹಣ ಎಲ್ಲಿಂದ ತರೋಣ..’ ಎಂದಿದ್ದರು. ಅವರಾಗ ವಿಧಾನಸಭೆಯಿಂದ ಹೊರಗಿದ್ದರು. ಹಾಗೆ ಹೊರಗೆ ಇರುವುದು ಅವರಿಗೆ ಸಹಿಸಲಾಗುತ್ತಿರಲಿಲ್ಲ. ಹೇಗಾದರೂ ವಿಧಾನಸಭೆಯ ಒಳಗೆ ಹೋಗಬೇಕು ಎನ್ನುವುದು ಅವರ ಏಕಮಾತ್ರ ಗುರಿಯಾಗಿತ್ತು. ಹಾಗೆಂದೇ ತುರ್ತಾಗಿ ಕಾಂಗ್ರೆಸ್ ಸೇರಿದ್ದರು. (ಅವರನ್ನು ಕಾಂಗ್ರೆಸ್‌ಗೆ ಸೇರಿಸಲು ಎಚ್.ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣ ಪಟ್ಟ ಕಷ್ಟಗಳದ್ದು ಇನ್ನೊಂದು ದೊಡ್ಡ ಕಥೆ.)

ಸಿದ್ದರಾಮಯ್ಯ ಅವರ ವ್ಯಕ್ತಿಕೇಂದ್ರಿತ ರಾಜಕೀಯವೇ ಅವರನ್ನು ಮುಖ್ಯಮಂತ್ರಿಯಾಗಿ ಕುಳ್ಳಿರಿಸಿದೆ ಎನ್ನುವುದು ನಿಜ. ಆದರೆ ಅದು ಅವರನ್ನು ಈಗ ಕಷ್ಟದ ಹಾದಿಗೆ ದೂಡಿದೆ ಎನ್ನುವುದೂ ನಿಜ. ಮುಂಬರುವ ಚುನಾವಣೆಯಲ್ಲಿ ಬೇರೆ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಅನುಮಾನ ಅವರನ್ನು ಕಾಡುತ್ತಿದೆ. ಹಾಗೆಂದೇ ಅವರು ಸದ್ಯಕ್ಕೆ ತಮ್ಮ ಮಗನ ಕ್ಷೇತ್ರವಾದ ವರುಣಾ ಕ್ಷೇತ್ರವನ್ನೇ ನಂಬಿಕೊಂಡಿದ್ದಾರೆ. ಕೋಲಾರ, ಚಾಮರಾಜಪೇಟೆ, ಕೊಪ್ಪಳ ಎನ್ನುವ ಒತ್ತಾಯ ಬೆಂಬಲಿಗರಿಂದ ಕೇಳಿ ಬರುತ್ತಿದ್ದರೂ, ಆ ಕ್ಷೇತ್ರಗಳ ಕುರಿತು ಸಣ್ಣದೊಂದು ಅನುಮಾನ ಅವರನ್ನು ಕಾಡುತ್ತಲೇ ಇದೆ. ಕಾಂಗ್ರೆಸ್ ಒಳಗೇ ತಮ್ಮನ್ನು ಹಣಿಯಲು ಬಯಸುವ ನಾಯಕರಿದ್ದಾರೆ ಎನ್ನುವುದೂ ಅವರಿಗೆ ಗೊತ್ತಿದೆ. ನಾಳೆ ಅಂತಹ ಪರಿಸ್ಥಿತಿಯೊಂದು ಬಂದರೆ ಅವರು ಕಾಂಗ್ರೆಸ್ಸನ್ನು ತ್ಯಜಿಸಲೂ ಹಿಂದೆಮುಂದೆ ನೋಡುವುದಿಲ್ಲ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿಲ್ಲ. ಜೆಡಿಎಸ್ ತನ್ನ ಮೊದಲ ಶತ್ರು ಎನ್ನುವುದು ಸಿದ್ದರಾಮಯ್ಯನವರ ಅಚಲ ನಂಬಿಕೆ. ಪೂರ್ವಾಶ್ರಮದ ಹಳೆಯ ಗಾಯಗಳನ್ನು ಅವರಿನ್ನೂ ಮರೆತಿಲ್ಲ. ಬಿಜೆಪಿ ಗೆದ್ದರೂ ಪರವಾಗಿಲ್ಲ, ಜೆಡಿಎಸ್ ಮಟ್ಟ ಹಾಕಬೇಕು ಎನ್ನುವುದು ಅವರ ನಿಲುವು. ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೆಯ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸುವಲ್ಲಿ ಸಿದ್ದರಾಮಯ್ಯ ಅವರ ತಂತ್ರವೇ ಮುಖ್ಯ ಪಾತ್ರ ವಹಿಸಿತ್ತು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳುವುದನ್ನು ತಡೆಯುವ ಸಾಮರ್ಥ್ಯ ಇದ್ದದ್ದು ಸಿದ್ದರಾಮಯ್ಯ ಅವರಿಗೆ ಮಾತ್ರ. ಆದರೆ ಆ ಸಂದರ್ಭದಲ್ಲಿ ಅವರು ಒಳಗೊಳಗೇ ಖುಷಿಯಿಂದ ತಮ್ಮ ವ್ಯಕ್ತಿ ಕೇಂದ್ರಿತ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಮನ್ವಯ ಸಮಿತಿಯ ಅಧ್ಯಕ್ಷ ಅವರೇ ಆಗಿದ್ದರು. ಆದರೆ ಸಮನ್ವಯದ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಸರ್ಕಾರ ಬೀಳುವುದರಿಂದ ಅವರ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು.

ಸಿದ್ದರಾಮಯ್ಯ ಅವರ ಸುತ್ತ ಸದಾ ಒಂದು ಒಡ್ಡೋಲಗ ಇರುತ್ತದೆ. ಯಾರೇ ರಾಜಕಾರಣಿ ಸಿದ್ದರಾಮಯ್ಯ ಅವರ ಬಳಿ ಏಕಾಂತದಲ್ಲಿ ಮಾತನಾಡಬೇಕೆಂದು ಬಯಸಿದರೂ ಬಹುತೇಕ ಸಲ ಸಾಧ್ಯ ಆಗುವುದಿಲ್ಲ. ವೈಯಕ್ತಿಕವಾಗಿ ಆರೆಸ್ಸೆಸ್ ತತ್ವಗಳಿಂದ ತುಂಬ ದೂರ ಇದ್ದ ಹಿರಿಯ ರಾಜಕಾರಣಿ ಕೆ.ಬಿ.ಶಾಣಪ್ಪ ಅವರು ಕಾಂಗ್ರೆಸ್ ಸೇರಬೇಕೆಂದು ಬಯಸಿದ್ದರು. ಅವರ ಸ್ನೇಹಿತರೊಬ್ಬರು ಅವರನ್ನು ಸಿದ್ದರಾಮಯ್ಯ ಬಳಿಗೆ ಕರೆದುಕೊಂಡು ಬಂದಿದ್ದರು. ಒಡ್ಡೋಲಗದ ಮಧ್ಯೆ ಇದ್ದ ಸಿದ್ದರಾಮಯ್ಯ ಅವರು ಲೋಕಾಭಿರಾಮವಾಗಿ ಶಾಣಪ್ಪ ಅವರನ್ನು ಮಾತನಾಡಿಸಿದರೇ ಹೊರತು, ಒಳಗೆ ಕರೆದು ಕೂರಿಸಿ ’ಏನು ವಿಷಯ’ ಎಂದು ಕೇಳಲೇ ಇಲ್ಲ. ಹಾಗೆ ಕೇಳಬೇಕೆಂದು ಅವರಿಗೆ ಹೊಳೆಯುವುದೂ ಇಲ್ಲ, ಬಹಳಷ್ಟು ಸಲ ’ಇಲ್ಲೇ ಹೇಳಿ’ ಎಂದು ಅವರು ಒಡ್ಡೋಲಗದ ಮಧ್ಯೆಯೇ ಕುಳಿತುಬಿಡುತ್ತಾರೆ. ಅವತ್ತು ರೋಸಿಹೋದ ಶಾಣಪ್ಪ ನೇರ ಹೋಗಿ ಬಿಜೆಪಿ ಶಿಬಿರ ಸೇರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರ ವಿರುದ್ಧ ಸಿದ್ದರಾಮಯ್ಯ ದಯನೀಯ ಸೋಲು ಅನುಭವಿಸುತ್ತಾರೆ ಎನ್ನುವುದು ನನಗೆ ಹಾಗೂ ನನ್ನ ಕೆಲವು ಪತ್ರಕರ್ತ ಗೆಳೆಯರಿಗೆ ಖಚಿತವಾಗಿತ್ತು. ಮೈಸೂರಿನ ಅವರ ಆಪ್ತರೊಬ್ಬರ ಬಳಿ ಈ ವಿಷಯವನ್ನು ನಾನು ಚರ್ಚಿಸಿದ್ದೆ. ಹಗಲು ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಹಲವು ಸ್ಥಳೀಯ ನಾಯಕರು ರಾತ್ರಿ ಜಿ.ಟಿ.ದೇವೇಗೌಡರ ಮನೆಯಲ್ಲಿ ಸೇರುವುದರ ಬಗ್ಗೆ ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಾಗಿತ್ತೋ ಇಲ್ಲವೋ ಎನ್ನುವುದು ನನಗೆ ತಿಳಿದಿಲ್ಲ. ಅವರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ’ಗೆಲುವು ನನ್ನದೇ’ ಎಂಬ ಧೋರಣೆಯಲ್ಲಿದ್ದರು. ’ನನ್ನ ಕ್ಷೇತ್ರ ನನಗೆ ಗೊತ್ತಿಲ್ಲವೇ..’ ಎನ್ನುವ ಅತಿಯಾದ ಆತ್ಮವಿಶ್ವಾಸವದು. ಒಂದು ರೀತಿಯ ಅಹಂಕಾರವೂ ಹೌದು. ಅವತ್ತು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಸೋತದ್ದು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಇವತ್ತಿಗೂ ಅವರ ಮಾತುಗಳಲ್ಲಿ ಆ ನೋವು ಇಣುಕುವುದುಂಟು. ಮುಂದಿನ ಚುನಾವಣೆಯಲ್ಲಿ ಕೋಲಾರ, ಚಾಮರಾಜಪೇಟೆ, ಕೊಪ್ಪಳ ಮುಂತಾದ ಕ್ಷೇತ್ರಗಳಲ್ಲಿ ನಿಲ್ಲಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದಾಗಲೂ ಅವರಿಗೆ ಚಾಮುಂಡೇಶ್ವರಿಯ ದುಃಸ್ವಪ್ನ ಕಾಡುತ್ತಿದೆ.

ಕಳೆದ ವಾರ ಕಾಂಗ್ರೆಸ್ಸಿನ ಮೂವರು ಲಿಂಗಾಯತ ಶಾಸಕರು ಪ್ರತ್ಯೇಕವಾಗಿ ಮಾತಿಗೆ ಸಿಕ್ಕಿದ್ದರು. ಅಂತರಂಗದ ಮಾತುಕತೆಯಲ್ಲಿ ಅವರ ಮನಸ್ಸಿನಲ್ಲಿ ಇದ್ದದ್ದು ನೇರವಾಗಿ ಬಾಯಿಗೆ ಬಂದಿತ್ತು. ’ಈ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ನಾವು ನಮ್ಮ ಜಾತಿಯೊಳಗೆ ರಾಜಕೀಯ ಮಾಡುವುದು ಕಷ್ಟವಾಗಿದೆ ಕಣ್ರೀ. ಲಿಂಗಾಯತರು ಮತ್ತು ಒಕ್ಕಲಿಗರನ್ನು ಬೇಕುಬೇಕೆಂದೇ ಕೆಣಕಿ ಇವರು ಚುನಾವಣೆಯನ್ನು ನಮಗೆ ಇನ್ನಷ್ಟು ದುಸ್ತರಗೊಳಿಸುತ್ತಿದ್ದಾರೆ..’ ಎನ್ನುವುದು ಅವರ ಮಾತಾಗಿತ್ತು. ಈ ಮೂವರೂ ಸಿದ್ದರಾಮಯ್ಯ ಅವರ ಬೆಂಬಲಿಗರೇ ಆಗಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಇತ್ತೀಚೆಗೆ ಎಚ್.ಡಿ.ಕುಮಾರಸ್ವಾಮಿಯವರು ಲೋಕಾಭಿರಾಮವಾಗಿ ಮಾತಿಗೆ ಸಿಕ್ಕಿದಾಗ ನಾನೊಂದು ನೇರ ಪ್ರಶ್ನೆ ಕೇಳಿದ್ದೆ. ’2023ರ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಯ ಫಲಿತಾಂಶ ಬಂದರೆ ನೀವು ಬಿಜೆಪಿ ಜೊತೆಗೆ ಹೋಗುತ್ತೀರಾ?’ ಎಂದು. ’ಈ ಸಲ ಖಂಡಿತ ನಾನು ಬಿಜೆಪಿ ಜೊತೆಗೆ ಹೋಗುವುದಿಲ್ಲ. ಆದರೆ ಸಿದ್ದರಾಮಯ್ಯ ಜೆಡಿಎಸ್ ಜೊತೆಗೆ ಸರ್ಕಾರ ಮಾಡಲು ಒಪ್ಪುತ್ತಾರಾ?’ ಎಂದು ಅವರು ನನಗೆ ಮರುಪ್ರಶ್ನೆ ಹಾಕಿದ್ದರು. ನಾನು ’ಬಹುತೇಕ ಒಪ್ಪುವುದಿಲ್ಲ’ ಎಂದೆ. ’ಬಿಜೆಪಿ ಜೊತೆಗೆ ಹೋಗುತ್ತೀರಾ ಎಂದು ನನ್ನನ್ನು ನೇರವಾಗಿ ಪ್ರಶ್ನಿಸುವ ನೀವು ಪತ್ರಕರ್ತರು ಸಿದ್ದರಾಮಯ್ಯ ಅವರ ಬಳಿ ಯಾವತ್ತಾದರೂ ನೀವೇಕೆ ಜೆಡಿಎಸ್ ಜೊತೆ ಹೋಗುವುದಿಲ್ಲ ಎಂದು ಪ್ರಶ್ನಿಸಿದ್ದೀರಾ?’ ಎಂದು ಕುಮಾರಸ್ವಾಮಿ ಕೇಳಿದರು. ಸದ್ಯದ ರಾಜಕೀಯ ಗೊಂದಲದ ಸ್ಥಿತಿ ನೋಡಿದರೆ 2023ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗುವಂತೆ ಕಾಣುತ್ತಿಲ್ಲ. ಎಲ್ಲ ಪಕ್ಷಗಳ ನಾಯಕರನ್ನು ಅಂತರಂಗದಲ್ಲಿ ಮಾತನಾಡಿಸಿದರೆ ಅವರೂ ಇದನ್ನೇ ಹೇಳುತ್ತಾರೆ. ಸಿದ್ದರಾಮಯ್ಯ ಮಾತ್ರ ತಮ್ಮ ಎಂದಿನ ಅತಿಯಾದ ಆತ್ಮವಿಶ್ವಾಸದ ಶೈಲಿಯಲ್ಲಿ ’ನಮಗೆ 125 ಬರುತ್ತೆ’ ಎನ್ನುತ್ತಿದ್ದಾರೆ. ಮುಂದಿನ ಚುನಾವಣೆಯ ಫಲಿತಾಂಶದ ಬಗ್ಗೆ ಇದಮಿತ್ಥಂ ಎಂದು ಈಗಲೇ ಹೇಳುವುದು ಮೂರ್ಖತನ. ಚುನಾವಣೆ ಹತ್ತಿರ ಬಂದಾಗ ಯಾವಯಾವ ಪಕ್ಷದ ನಾಯಕರು ಪಕ್ಷಾಂತರ ನಡೆಸಿ ಎಲ್ಲಿ ಇರುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿಸಿದೆ. ಆದರೆ ಗೋಡೆಯ ಮೇಲೆ ಬರೆದ ಬರಹವೊಂದು ನಮ್ಮಂಥವರಿಗೆ ಸ್ವಲ್ಪ ಅಸ್ಪಷ್ಟವಾಗಿ ಕಾಣಿಸುತ್ತಿದೆ ಎನ್ನವುದೂ ಸುಳ್ಳಲ್ಲ.

ತನ್ನ ಮೊದಲ ಶತ್ರು ಬಿಜೆಪಿಯೋ ಅಥವಾ ಜೆಡಿಎಸ್ ಪಕ್ಷವೋ ಎನ್ನುವುದನ್ನು ಖಚಿತವಾಗಿ ಸ್ಪಷ್ಟಪಡಿಸಿಕೊಳ್ಳಬೇಕಾದ ರಾಜಕೀಯ ಅನಿವಾರ್ಯತೆಯೊಂದು ಈಗ ಸಿದ್ದರಾಮಯ್ಯ ಅವರ ಮುಂದಿದೆ ಎನ್ನುವುದು ನನ್ನ ಅನಿಸಿಕೆ. ತನ್ನ ರಾಜಕೀಯ ಹಿತಾಸಕ್ತಿಯ ರಕ್ಷಣೆಯ ಹಿನ್ನೆಲೆಯಲ್ಲಿ ಅವರು ಈಗ ಇದಕ್ಕೆ ಬಹಿರಂಗ ಉತ್ತರ ಕೊಡಲಾಗುವುದಿಲ್ಲ ಎನ್ನುವುದೂ ನಿಜ. ಆದರೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನೇ ಫ್ಯಾಸಿಸ್ಟ್ ಪ್ರಭುತ್ವವನ್ನಾಗಿ ಪರಿವರ್ತಿಸುತ್ತಿರುವ ರಾಜಕೀಯ ಶಕ್ತಿ ಕರ್ನಾಟಕದಲ್ಲಿ ನಮ್ಮ ಕಣ್ಣೆದುರು ಭೂತಾಕಾರ ತಳೆದು ಎದ್ದು ನಿಂತಿರುವ ಈ ಹೊತ್ತಿನಲ್ಲಿ ಈ ಪ್ರಶ್ನೆ ಅತ್ಯಂತ ಮಹತ್ವದ್ದು ಎಂದು ನನಗನ್ನಿಸುತ್ತಿದೆ. ಸಿದ್ದರಾಮಯ್ಯ ಅವರಿಗೂ ಹಾಗನ್ನಿಸಬೇಕು ಎನ್ನುವುದು ನನ್ನ ಆಸೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!