ಕೆಪಿಎಸ್ಸಿಯಲ್ಲಿ ಯಾವುದಾದರೂ ಹಗರಣದ ಸುದ್ದಿಯಾದರೆ ನಾಲ್ಕು ದಿನ ಬ್ರೇಕಿಂಗ್ ನ್ಯೂಸ್, ಸಿಐಡಿ ಎಂಟ್ರಿ, ಎಫ್ಐಆರ್, ತನಿಖೆ, ಬಂಧನ, ವಿಚಾರಣೆ ಮತ್ತು ತಥಾಕಥಿತ ರಾಜಕಾರಣಿಗಳ ಆರೋಪ – ಪ್ರತ್ಯಾರೋಪಗಳು…..ಹೀಗೆ ನಡೆಯುತ್ತದೆ ವಿನಾ ಶಿಕ್ಷೆಯಾದ ಒಂದೂ ಉದಾಹರಣೆ ಇಲ್ಲ. ಇದಕ್ಕೆ ಕಾರಣ ತನಿಖಾ ಸಂಸ್ಥೆಗಳಲ್ಲ, ರಾಜಕಾರಣಿಗಳಾಗಿದ್ದಾರೆ.
ಮೊದಲು ಪ್ರಾಮಾಣಿಕರನ್ನು ಮಾತ್ರ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು. ಆದರೀಗ….? ಕೆಲ ಅಧ್ಯಕ್ಷರ ಹಾಗೂ ಕೆಲ ಸದಸ್ಯರ ಹಿನ್ನೆಲೆಯೇ ಎಲ್ಲಾ ಹೇಳುತ್ತದೆ. ಮೊದಲು ಅಧ್ಯಕ್ಷರು ಮತ್ತು ಇಬ್ಬರೇ ಸದಸ್ಯರಿದ್ದರು. ಈಗ ಅಧ್ಯಕ್ಷರು ಸೇರಿ ಹದಿನಾರು ಜನ ಸದಸ್ಯರಿದ್ದಾರೆ. ಮೊದಲು ಕಾರ್ಯದರ್ಶಿ ಮಾತ್ರವಿದ್ದರು. ಈಗ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರಿದ್ದಾರೆ. ಈ ಸಂಖ್ಯೆಗಳು ಹೆಚ್ಚಿಸಿದ್ದು ಯಾವ ಪುರುಷಾರ್ಥಕ್ಕಾಗಿ? ಯಾವ ಸಾಧನೆಗಾಗಿ? ಯಾರ ಅನುಕೂಲಕ್ಕಾಗಿ?
ಈ ಆಯೋಗದಲ್ಲಿ ಬದಲಾವಣೆ ತರಬೇಕೆಂದು ಅನೇಕ ಸಮಿತಿಗಳನ್ನು ಕಾಲಕಾಲಕ್ಕೆ ರಚಿಸಿದ್ದಾರೆ. ಅದರಲ್ಲಿ ಪಿ. ಸಿ. ಹೋಟಾ ಕಮಿಟಿ ಮತ್ತು ಟಿ. ಎಂ. ವಿಜಯ ಭಾಸ್ಕರ್ ಸಮಿತಿ ಮುಖ್ಯವಾಗಿವೆ. ಈ ಸಮಿತಿಗಳು ನೀಡಿದ ಶಿಫಾರಸುಗಳ ಕಡತಗಳು ಧೂಳಲ್ಲಿ ಬಿದ್ದಿವೆ. ಒಂದಿಷ್ಟು ಜಾರಿಗೆ ತಂದು, ಕೈತೊಳೆದುಕೊಂಡರು. ಹಾಗಾಗಿಯೇ ಮತ್ತೆ ಯಥಾಪ್ರಕಾರ ಭ್ರಷ್ಟಾಚಾರದ ರಾಮಾಯಣ ಮುಂದುವರೆದಿದೆ. ಆ ಸಮಿತಿಗಳ ಶಿಫಾರಸು ಯಥಾವತ್ತಾಗಿ ಜಾರಿಗೆ ತಂದಿದ್ದರೆ ಇಂದು ಎಷ್ಟೋ ವಿದ್ಯಾರ್ಥಿಗಳ ಬದುಕು ಕತ್ತಲೆಯಾಗುತ್ತಿರಲಿಲ್ಲವೇನೋ.
1951ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಇದೊಂದು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿದೆ. ಇದು ೧೯೯೦ರವರೆಗೆ ಅತ್ಯಂತ ಗೌರವಾನ್ವಿತ ಸಂಸ್ಥೆಗಳಲ್ಲಿ ಒಂದಾಗಿತ್ತು. ಸ್ವತಂತ್ರವಾಗಿ ಮತ್ತು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿತ್ತು. ಆ ನಂತರ ಸಾಲುಸಾಲು ಹಗರಣಗಳು, ಆರೋಪಗಳು ಮೈಗೆ ಅಂಟಿಸಿಕೊಂಡೇ ಬದುಕುತ್ತಿದೆ.
ಇದನ್ನೂ ಓದಿ – ಬಸವರಾಜ ಕನ್ನಾಳೆ: ಅಸಲಿ ಕಥೆ
ಆಯೋಗವು ರಾಜಕೀಯ ಒತ್ತಡಕ್ಕೆ ಮಣಿಯದೆ ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲಿ ಎಂಬ ಉದ್ದೇಶದಿಂದ ಸಂವಿಧಾನವು ಕಠಿಣ ನಿಯಮಗಳನ್ನು ರೂಪಿಸಿತ್ತು. ಆದರೆ ಈ ನಮ್ಮ ತಥಾಕಥಿತ ರಾಜಕಾರಣಿಗಳು ತಿದ್ದುಪಡಿ ಮಾಡಿ ಮಾಡಿಕೊಂಡಿದ್ದಾರೆ ಮತ್ತು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೋಟಿ ಕೋಟಿ ದುಡ್ಡಿರುವ ತಮ್ಮ ಆಪ್ತರನ್ನೇ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಹಗರಣಗಳು ನಿಲ್ಲುತ್ತಿಲ್ಲ. ಶಿಕ್ಷೆಯೂ ಯಾರಿಗೂ ಆಗುತ್ತಿಲ್ಲ.
2011ರಲ್ಲಿ ಡಾ. ಎಚ್. ಎನ್ ಕೃಷ್ಣ ಅಧ್ಯಕ್ಷರಾಗಿದ್ದಾಗ ಆಯೋಗದಲ್ಲಿ ನಡೆದ ಹಗರಣ ಬೆಳಕಿಗೆ ಬಂದಿತ್ತು. ತಕ್ಕಮಟ್ಟಿಗೆ ಸದ್ದು ಮಾಡಿತು. ಆಗಲೂ ಸುದ್ದಿಯಾಯಿತು, ಸಿಐಡಿ ಬಂತು, ಅಧ್ಯಕ್ಷರು, ಉನ್ನತ ಅಧಿಕಾರಿಗಳು, ಸಿಬ್ಬಂದಿ, ಲಂಚ ನೀಡಿ ಹುದ್ದೆ ಪಡೆದ ಅಧಿಕಾರಿ ಸೇರಿ 07 ಪ್ರಮುಖ ಆರೋಪಿಗಳ ಬಂಧನವಾಯಿತು, ತನಿಖೆಯಾಯಿತು, ವಿಚಾರಣೆ ನಡೆಯಿತು. ಆದರೆ, 44 ದಿನದಲ್ಲಿ ಎಲ್ಲರೂ ಜಾಮೀನಿನ ಮೇಲೆ ಹೊರಬಂದರು, ನ್ಯಾಯಾಲಯಕ್ಕೆ ವಿಶ್ವಾಸಾರ್ಹ ಪುರಾವೆಗಳು ಒದಗಿಸದ ಮತ್ತು ಮೂವರು ಮುಖ್ಯ ಸಾಕ್ಷಿಗಳು ಉಲ್ಟಾ ಹೊಡೆದು ಪ್ರಾಸಿಕ್ಯೂಷನ್ ವಿರುದ್ಧವಾಗಿ ಹೇಳಿಕೆ ನೀಡಿದರ ಫಲವಾಗಿ ಮೊನ್ನೆ ಏಪ್ರಿಲ್ 30, 2026 ರಂದು ಎಲ್ಲರೂ ಖುಲಾಸೆಯಾದರು.
2013ರಲ್ಲಿ ಗೋನಾಳ ಭೀಮಪ್ಪ ಅವಧಿಯಲ್ಲಿ ಬೆಳಕಿಗೆ ಬಂದ ಹಗರಣ ದೊಡ್ಡ ಸದ್ದೇ ಮಾಡಿತ್ತು. ಆಗಲೂ ಮೊದಲಿನಂತೆ ಸುದ್ದಿಯಾಯಿತು, ಸಿಐಡಿ ಬಂತು, 08 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನಿಖೆಯಾಯಿತು, ಹಲವರು ಜೈಲಿಗೂ ಹೋದರು [ಮಧ್ಯಂತರ ಜಾಮೀನು ಪಡೆದು ಗೋನಾಳ ಭೀಮಪ್ಪ ಜೈಲಿಗೂ ಹೋಗಲಿಲ್ಲ]. ರಾಷ್ಟ್ರಪತಿಗಳಿಂದ ಪೂರ್ವಾನುಮತಿ ಪಡೆಯದೆ ವಿಚಾರಣೆ ನಡೆಸಿದರಿಂದ 2017ರಲ್ಲಿ ಕರ್ನಾಟಕ ಹೈಕೋರ್ಟ್ ಗೋನಾಳ್ ಭೀಮಪ್ಪ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನೇ ರದ್ದುಪಡಿಸಿತು. ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶ ಎತ್ತಿಹಿಡಿದಿತು. ರಾಷ್ಟ್ರಪತಿಗಳ ಪೂರ್ವಾನುಮತಿ ಸಿಗದ ಕಾರಣ ಮೊನ್ನೇ ಮೇ 2025ರಲ್ಲಿ ಕರ್ನಾಟಕ ಸರ್ಕಾರ ಈ ಪ್ರಕರಣವನ್ನೇ ಅಧಿಕೃತವಾಗಿ ಕೈ ಬಿಟ್ಟಿದೆ.
ಈಗ ಸಾಹುಕಾರ್ ಶಂಕರೆಪ್ಪ ಅವಧಿಯಲ್ಲಾದ ಹಗರಣ ಹೆಚ್ಚು ಸದ್ದು ಮಾಡುತ್ತಿದೆ. ಹಿಂದಿನ ಎರಡು ಪ್ರಕರಣಗಳಲ್ಲಿ ಕೇವಲ ಸಿಐಡಿ ಮಾತ್ರ ತನಿಖೆ ಮಾಡಿತ್ತು. ಈಗ ಸಿಐಡಿ ಜತೆಗೆ ʻಈಡಿʼಯೂ ತನಿಖೆ ಮಾಡುತ್ತಿದೆ. ರಾಷ್ಟ್ರಪತಿಗಳಿಂದ ಪೂರ್ವಾನುಮತಿಯೂ ಪಡೆದಿದ್ದಾರೆ. ಪರೀಕ್ಷಾ ನಿಯಂತ್ರಕನ ಜೊತೆಗೆ ಇದೇ ಮೊದಲ ಬಾರಿಗೆ ಮಧ್ಯವರ್ತಿಯೊಬ್ಬನನ್ನು [ಬಸವರಾಜ ಕನ್ನಾಳೆ] ಅರೆಸ್ಟ್ ಮಾಡಿದ್ದಾರೆ. ಸರ್ಕಾರದ ಕೆಲ ಸಚಿವರು ಜೋರಾಗಿ ಮಾತಾಡುತ್ತಿದ್ದಾರೆ. ಇದು ಸಹ ಮತ್ತೊಂದು ವಿಚಾರಣೆ, ತನಿಖೆ, ಖುಲಾಸೆ ಪ್ರಕರಣ ಆಗುತ್ತದೋ ಅಥವಾ ಪ್ರಬಲ ಪುರಾವೆಗಳು ನ್ಯಾಯಾಲಯಕ್ಕೆ ಒದಗಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುತ್ತಾರೋ?
ಎಮ್ಎಲ್ಸಿ ಚುನಾವಣೆ: ಸಿಎಂ ಡಿಕೆಶಿಗೆ ಭಾರಿ ರಾಜಕೀಯ ಹಿನ್ನಡೆ

ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ (ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರ) ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎನ್ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಜೆಡಿಎಸ್ ಕಸಿದುಕೊಂಡಿದ್ದು ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಹಿನ್ನಡೆ ಎಂಬುದು ನಿರ್ವಿವಾದ. ಇದು ಡಿಕೆಶಿ ಅವರ ತವರು ಕ್ಷೇತ್ರ. ಅವರು ತಮ್ಮ ತವರು ಕ್ಷೇತ್ರದ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಲು ಸಾಕಷ್ಟು ಬೆವರು ಸುರಿಸಿದರು. ಆದಾಗ್ಯೂ ಮತದಾರರು ಅವರ ಕೈಹಿಡಿಯಲಿಲ್ಲ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಇದೇ ಮೊದಲ ಬಾರಿಗೆ ಸೋತಿದ್ದಾರೆ. ಈ ಹಿಂದೆ ಅವರು ಸತತವಾಗಿ ಐದು ಬಾರಿ ಗೆದ್ದಿದ್ದರು (ಮೂರು ಬಾರಿ ಜೆಡಿಎಸ್ನಿಂದ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ತಲಾ ಒಂದು ಬಾರಿ). ಮೇಲಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆದಾಗ್ಯೂ ಅವರ ಈ ಸೋಲು ಡಿಕೆಶಿ ಅವರ ಜಂಘಾಬಲ ಉಡುಗಿಹೋದಂತಾಗಿದೆ. ಇದು ಅವರ ನಾಯಕತ್ವಕ್ಕೆ ಎಚ್ಚರಿಕೆಯ ಗಂಟೆಯೂ ಆಗಿದೆ.
ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಎರಡು ಚುನಾವಣೆಗಳು ನಡೆದಿವೆ. ಜೂನ್ ತಿಂಗಳಲ್ಲಿ ವಿಧಾನ ಪರಿಷತ್ತಿನ ಏಳು ಕ್ಷೇತ್ರಗಳಲ್ಲಿ ನಡೆದಾಗ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿತು. ಡಿಕೆಶಿ ಅವರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಪಕ್ಷದ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಅನಾಯಾಸವಾಗಿ ಗೆಲ್ಲಿಸಿಕೊಂಡು ಬಂದಿದ್ದರು.
ಆಗ ಬಿಜೆಪಿಯ ಏಳು ಜನ ಶಾಸಕರು ಹಾಗೂ ಜೆಡಿಎಸ್ನ ನಾಲ್ಕು ಜನ ಶಾಸಕರು ಅಡ್ಡ ಮತದಾನ ಮಾಡಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಮಾಡುತ್ತಿರುವುದನ್ನೇ ರಾಜ್ಯದಲ್ಲಿ ಡಿಕೆಶಿ ಅವರು ಮುಂದುವರಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು. ಬೇಸರವಾಗಲಿ, ಟೀಕೆಯಾಗಲಿ ಏನೇ ಇದ್ದರೂ ಗೆಲುವು ಗೆಲುವೆ. ಇದು ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ ಬಲ ನೀಡಿದ ಫಲಿತಾಂಶವಾಗಿತ್ತು.
ಈಗ ಎಲ್ಲವೂ ತಿರುವುಮುರುವು ಆಗಿದೆ.
ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅವರು ಒಂದು ದಿನವೂ ಪ್ರಚಾರಕ್ಕೆ ಬಂದಿಲ್ಲ. ಇದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಬಳಿಕ ಅವರ ವಿರುದ್ಧ ನಡೆದ ಕುಟುಕು ಕಾರ್ಯಾಚರಣೆ ಬಗ್ಗೆ ಅವರು ಬೇಸರಗೊಂಡು ಚುನಾವಣೆಯ ಪ್ರಚಾರಕ್ಕೆ ಬಂದಿಲ್ಲ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲಿನಿಂದಲೂ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ. ಈ ಬಾರಿಯೂ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಲಾಗಿದೆ. ದೇಶದಲ್ಲಿ ವಿರೋಧ ಪಕ್ಷಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ. ಈ ಗೆಲುವು ರಾಜ್ಯದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಇವಿಎಂ ಅನ್ನು ಸಮರ್ಥಿಕೊಳ್ಳಲು ಹಾಗೂ ಕಾಂಗ್ರೆಸ್ ಕಾಲೆಳೆಯಲು ಒಂದು ಅವಕಾಶ ನೀಡಿದಂತಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಬೀಗುತ್ತಿವೆ. ಆದರೆ, ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ವಿಧಾನಸಭಾ ಚುನಾವಣೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವೆಂದು ಹಿಂದಿನ ವಿಧಾನಸಭಾ ಚುನಾವಣೆಗಳ ಇತಿಹಾಸ ಹೇಳುತ್ತದೆ.
ಸಿದ್ದರಾಮಯ್ಯನವರಿಗೆ ತಮ್ಮದೇ ಸರ್ಕಾರದ ಮೇಲೆ ನಂಬಿಕೆ ಇಲ್ಲವೇ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೆಣೆಯಲಾಗಿದ್ದ ಸ್ಟಿಂಗ್ ಕಾರ್ಯಾಚರಣೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಬೇರಾವ ಸಮಸ್ಯೆಯೇ ಇಲ್ಲ ಅಥವಾ ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕುಟುಕು ಕಾರ್ಯಾಚರಣೆಯ ಪರಿಹಾರವೊಂದೇ ರಾಮಬಾಣ ಎಂಬಂತೆ ಮಾಧ್ಯಮಗಳು ವರ್ತಿಸುತ್ತಿವೆ. ಸರ್ಕಾರವೂ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬರಗಾಲ ಆವರಿಸಿದೆ. ರೈತರ ಬದುಕು ಅಯೋಮಯವಾಗಿದೆ. ಆದಾಗ್ಯೂ ಎಲ್ಲರೂ ಸ್ಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ.
ಈ ಕುಟುಕು ಕಾರ್ಯಾಚರಣೆಯ ಬಗ್ಗೆ ಸರ್ಕಾರ ತನಿಖೆ ಮಾಡುತ್ತಿದೆ. ಆದರೆ, ತನಿಖೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯುತ್ತಿಲ್ಲವೆಂದು ಸಿದ್ದರಾಮಯ್ಯನವರು ಅಸಮಾಧಾನದಲ್ಲಿದ್ದಾರೆ ಎಂದು ಸಾರ್ವಜನಿಕವಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಚರ್ಚೆ ಹುಟ್ಟಲು ಕಾರಣಗಳೂ ಇವೆ.
ಮೊದಲನೆಯದಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮ್ಮದೇ ಪಕ್ಷದ ಸಿಎಂ ಇದ್ದಾರೆ. ಆದಾಗ್ಯೂ ಸಿದ್ದರಾಮಯ್ಯನವರು ʻಈಗ ಬೇರೆಯವರು ಸಿಎಂ ಇದ್ದಾರೆ, ಬೇರೆ ಸರ್ಕಾರ ಇದೆʼ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹಾಗೂ ಕೋಪ ಒಟ್ಟೊಟ್ಟಿಗೆ ಹೊರಹಾಕಿದ್ದಾರೆ.
ಎರಡನೆಯದಾಗಿ, ಈ ವಿಷಯವನ್ನು ಹೈಕಮಾಂಡ್ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಾಕೀತು ಮಾಡಿದ ಮೇಲೆ ತನಿಖೆ ಸ್ವಲ್ಪ ವೇಗ ಪಡೆದುಕೊಂಡಿದೆ. ಅದಾದ ಮೇಲೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ, ಕೆಲವರನ್ನು ನೋಟಿಸ್ ನೀಡಿದ್ದಾರೆ.
ಮೂರನೆಯದಾಗಿ, ಸಿದ್ದರಾಮಯ್ಯನವರ ಪಕ್ಷದ ಸರ್ಕಾರವಿದೆ. ಅವರದೇ ಪಕ್ಷದ ಮುಖ್ಯಮಂತ್ರಿ ಇದ್ದಾರೆ. ಅವರನ್ನು ಪುಂಖಾನುಪುಂಖವಾಗಿ ಹೊಗಳುವ ರಾಜಕಾರಣಿಗಳೇ ಮಂತ್ರಿಮಂಡಲದಲ್ಲಿ ಇದ್ದಾರೆ. ಒಂದು ಮಾತು ಹೇಳಿಸಿ ಸ್ಟಿಂಗ್ ವಿಡಿಯೊ ಡಿಲೀಟ್ ಮಾಡಿಸಬಹುದಿತ್ತು. ಆದರೆ, ಅವರು ದೂರು ಸಲ್ಲಿಸಿದಲ್ಲದೆ, ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು ಎಂದು ಆವಾಜ್ ಹಾಕುತ್ತಿದ್ದಾರೆ.
ಕುಟುಕು ಕಾರ್ಯಾಚರಣೆ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ಜನರಲ್ಲಿ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಅದರಲ್ಲಿ ಸ್ಟಿಂಗ್ ಮಾಡಿದವರನ್ನು ಮುಟ್ಟದೆ (ಶಾಸ್ತ್ರಕ್ಕಾಗಿ ತನಿಖೆಗೆ ಕರೆದಂತಿದೆ) ಸ್ಟಿಂಗ್ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದವರ ಹಾಗೂ ಹಂಚಿದವರ ಹಿಂದೆ ಮಾತ್ರ ಈ ಸರ್ಕಾರ ಯಾಕೆ ಬಿದ್ದಿದೆ ಎಂಬುದು ಮುಖ್ಯವಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರ್ ಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಸ್ಟಿಂಗ್ ವಿಚಾರದಲ್ಲಿ ಕಟಕಟೆಯಲ್ಲಿ ತಂದು ನಿಲ್ಲಿಸಿ, ಸ್ಟಿಂಗ್ ಪಿತಾಮಹ ಬೇರಾರೂ ಅಲ್ಲ, ಡಿ.ಕೆ. ಶಿವಕುಮಾರ್ ಎಂದು ಘಂಟಾಘೋಷವಾಗಿ ಗಂಭೀರ ಆರೋಪ ಮಾಡುತ್ತಿದ್ದಾರೆ.
ತಮ್ಮ ಮೇಲಿನ ಗುರುತರವಾದ ಆರೋಪಕ್ಕೆ ಸಾರ್ವಜನಿಕವಾಗಿ ಉತ್ತರಿಸಬೇಕಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಗೂಢ ಮೌನಕ್ಕೆ ಜಾರಿದ್ದಾರೆ. ಇದು ಸಾರ್ವಜನಿಕರಲ್ಲಿ ಅನುಮಾನ ಹೆಚ್ಚಿಸಿದ್ದಲ್ಲದೆ, ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ.
ಒಂದರ್ಥದಲ್ಲಿ ತನಿಖೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತಾಡದೇ ಇರುವುದು ಒಳ್ಳೆಯದು. ಅವರು ಏನೇ ಮಾತಾಡಿದರೂ ತನಿಖೆಯ ಮೇಲೆ ಹಾಗೂ ತನಿಖೆ ನಡೆಸುತ್ತಿರುವವರ ಮೇಲೆ ಪರಿಣಾಮ ಬೀರಬಹುದು. ಈ ದಿಕ್ಕಿನಲ್ಲಿ ಅವರು ಮೌನ ವಹಿಸಿದ್ದು ಸರಿಯಾದ ನಿರ್ಧಾರವಾಗಿದೆ ಎಂದು ಎನ್ನಬಹುದು. ಆದರೆ, ಈ ಪ್ರಕರಣದಲ್ಲಿ ಅವರ ಮೇಲೆ ಗಂಭೀರ ಆರೋಪಗಳಿವೆ. ಅವರೇ ಅಪರಾಧಿ ಸ್ಥಾನದಲ್ಲಿದ್ದಾರೆ. ಹೀಗಾಗಿ ಮೌನ ಮುರಿದು ಸಾರ್ವಜನಿಕವಾಗಿ ಉತ್ತರಿಸಬೇಕಾದದ್ದು ಡಿಕೆಶಿ ಅವರ ಜವಾಬ್ದಾರಿಯಾಗಿದೆ.
ಇಲ್ಲದಿದ್ದರೆ ಪೊಲೀಸರು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಿ ಏನೇ ವರದಿ ಕೊಟ್ಟರೂ ಆ ವರದಿಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತದೆ.
ಏತನ್ಮಧ್ಯೆ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಕುಟುಕು ಕಾರ್ಯಾಚರಣೆಯ ಹಿಂದೆ ನಮ್ಮ ಪಕ್ಷದ ಮುಖಂಡರಿದ್ದಾರೆ ಎಂಬರ್ಥದಲ್ಲಿ ಮೇಲಿಂದ ಮೇಲೆ ಮಾತಾಡುತ್ತಿದ್ದಾರೆ. ಇದಕ್ಕೆ ಹಲವರು ತಲೆಯಾಡಿಸುತ್ತಿದ್ದಾರೆ. ಇದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.
ಒಂದು ವಾರದೊಳಗೆ ಸತ್ಯಾಂಶ ಹೊರಬರುತ್ತದೆ ಎಂದು ಸಾಕ್ಷಾತ್ ಗೃಹ ಸಚಿವರು ಹೇಳಿದ್ದಾರೆ. ಅದು ಯಾರ ಸತ್ಯಾಂಶ ಎಂಬುದು ಕುತೂಹಲ ಹುಟ್ಟಿಸಿದೆ.
ಅದೇನೇ ಇರಲಿ, ತಮ್ಮದೇ ಸರ್ಕಾರದ ಮೇಲೆ ರಾಜ್ಯದ ಅತ್ಯಂತ ಪ್ರಭಾವಶಾಲಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದೇ ಪಕ್ಷದ ಸರ್ಕಾರದ ಮೇಲೆ ಅಪನಂಬಿಕೆ ಪಡುತ್ತಿರುವುದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡುತ್ತಿರುವ ಆರೋಪಕ್ಕೆ ಬಲ ಬಂದಂತಾಗಿದೆ. ಇದು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಕೆಪಿಎಸ್ಸಿ ಹಗರಣ: ಕನ್ನಾಳೆ ಮತ್ತು ಗಂಗ್ವಾರ್ಗೆ ಹೆಚ್ಚಿದ ಸಂಕಷ್ಟ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ನಡೆದ ಭಾರಿ ಪ್ರಮಾಣದ ಹಗರಣ ಜಗಜ್ಜಾಹೀರಾಗಿದೆ. ಈ ಹಗರಣದ ಕುರಿತು ಸಿಐಡಿ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಪಶುವೈದ್ಯಾಧಿಕಾರಿ ಹುದ್ದೆಯ ಕೆಲ ಫಲಾನುಭವಿಗಳು ತನಿಖಾಧಿಕಾರಿಗಳ ಮುಂದೆ ಹಣ ನೀಡಿರುವ ಬಗ್ಗೆ ತಮ್ಮ ತಪ್ಪೊಪ್ಪಿಗೆಯೂ ನೀಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಆಯೋಗದ ಮಾಜಿ ಅಧ್ಯಕ್ಷ ಶಂಕರೆಪ್ಪ ಸಾಹುಕಾರ, ಆಯೋಗದ ಸದಸ್ಯರಾದ ಬಿ.ವಿ. ಗೀತಾ, ಶಾಂತಾ ಹೊಸಮನಿ ಮತ್ತು ಇತರೆ ಸಿಬ್ಬಂಧಿಗಳ ಬಂಧನವಾಗಿದೆ.
ಏತನ್ಮಧ್ಯೆ ಬಸವರಾಜ ಕನ್ನಾಳೆ ಅವರ ಸಿಂಡಿಕೇಟ್ ಸದಸ್ಯತ್ವವನ್ನು (ತುಮಕೂರು ವಿಶ್ವವಿದ್ಯಾಲಯ) ರಾಜ್ಯಪಾಲರು ವಜಾ ಮಾಡಿದ್ದಾರೆ. ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ (ಕಾನೂನು ಕ್ರಮ ಜರುಗಿಸಲು ಗ್ರಿನ್ ಸಿಗ್ನಲ್) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮತಿ ನೀಡಿದ್ದಾರೆ. ಇದರಿಂದಾಗಿ ಈಗ ಸಿಐಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿ, ಕಾನೂನು ಪ್ರಕ್ರಿಯೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಈ ಬೆಳವಣಿಗೆ ಆರೋಪಿಗಳಿಗೆ ಆಘಾತ ನೀಡಿದೆ.
ತನಿಖೆಯ ಸಂದರ್ಭದಲ್ಲಿ ಸಿಐಡಿ ಹಾಗೂ ಇ.ಡಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ, ಸಾಕ್ಷಿಗಳು ಮತ್ತು ಸಾಕ್ಷ್ಯಗಳು ಪ್ರಬಲವಾಗಿವೆಯೋ ಅಥವಾ ದೋಷಪೂರಿತವಾಗಿವೆಯೋ ಎಂಬುದರ ಮೇಲೆ ಬಸವರಾಜ ಕನ್ನಾಳೆ ಹಾಗೂ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹಣೆಬರಹ ನಿರ್ಧಾರವಾಗುತ್ತದೆ.
ಸ್ಟಿಂಗ್ ಮಾಡಿದವರನ್ನು ಬಿಟ್ಟು, ಹಂಚಿದವರ ಹಿಂದೆ ಬಿದ್ದ ಸರ್ಕಾರ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ನಕಲಿ ಸ್ಟಿಂಗ್ ಕಾರ್ಯಾಚರಣೆಯ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಾರದೊಳಗೆ ಸತ್ಯಾಂಶ ಹೊರಬರುತ್ತದೆ ಎಂದು ಗೃಹ ಸಚಿವರೂ ಹೇಳಿದ್ದಾರೆ. ಅದು ಯಾರ ಸತ್ಯ ಎಂಬುದು ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಹೆಚ್ಚಿಸಿದೆ.
ʻಸಿದ್ದರಾಮಯ್ಯನವರ ಗೌರವ ಉಳಿಸಲು ನಾನೇ ಸ್ಟಿಂಗ್ ಮಾಡಿದ್ದೇನೆʼ ಎಂದು ಹೇಳುವ ಮೂಲಕ ಸ್ಟಿಂಗ್ ಮಾಡಿದ್ದನ್ನು ಒಪ್ಪಿಕೊಂಡಿರುವ ರಾಕೇಶ್ ಶೆಟ್ಟಿಯನ್ನು ಬಂಧಿಸದೆ, ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆಯಲು ಸಾಕಷ್ಟು ಸಮಯಾವಕಾಶ ನೀಡಿದೆ ಎಂದು ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಸಾಕ್ಷಾತ್ ಸಿದ್ದರಾಮಯ್ಯನವರೇ ರಾಕೇಶ್ ಶೆಟ್ಟಿ ಹಾಗೂ ಮಂಗಳೂರಿನ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಹೆಸರನ್ನು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅವರನ್ನು ಬಂಧಿಸದ ಈ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್ಲೋಡ್ ಮಾಡಿದ ಮತ್ತು ಹಂಚಿದವರ ಬೇಟೆಯಾಡುತ್ತಿದೆ. ಇದು ಹೇಗಿದೆ ಅಂದರೆ ಅಕ್ಕಿ ಕದ್ದ ಕಳ್ಳನನ್ನು ಬಿಟ್ಟು, ಕದ್ದ ಅಕ್ಕಿಯಿಂದ ಅಡುಗೆ ಮಾಡಿ ಊಟ ಮಾಡಿದವರ ಹಿಂದೆ ಬಿದ್ದಂತಾಗಿದೆ.
ಸರ್ಕಾರದ ಈ ನಡೆ ನಿಜವಾದ ಆರೋಪಿಗಳನ್ನು ರಕ್ಷಿಸಲು, ಜೆಡಿಎಸ್ ವಾರ್ ರೂಮ್ನಲ್ಲಿ ಕೆಲಸ ಮಾಡುವ ರಿತೇಶ್ ಪಾಂಡೆ, ಮೋಹನ್ ಗೌಡ್, ಚಂದನ್ ಅವರ ಹಿಂದೆ ಬೀಳುವ ಮೂಲಕ ಜೆಡಿಎಸ್ ತಲೆಗೆ ಕಟ್ಟಲು ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನವನ್ನು ಜನರಲ್ಲಿ ಹುಟ್ಟುಹಾಕಿದೆ.
ಇದರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಗೌರವ ಅಡಗಿದೆ. ಸರ್ಕಾರ ಇದರಲ್ಲಿ ರಾಜಕಾರಣ ಮಾಡದೆ ಸಿಸಿಬಿ ಪೊಲೀಸರಿಗೆ ತನಿಖೆ ಮಾಡಲು ಮುಕ್ತ ಅವಕಾಶ ನೀಡುತ್ತದೆ. ತನಿಖೆಯಲ್ಲಿ ಮೂಗು ತೂರಿಸದೆ ಪಾರದರ್ಶಕವಾಗಿ ತನಿಖೆ ನಡೆಸಿ, ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬಹುದು ಎಂದು ಜನರು ನಂಬಿದ್ದಾರೆ. ಜನರ ಈ ನಂಬಿಕೆಯನ್ನು ಸರ್ಕಾರ ಉಳಿಸಿಕೊಳ್ಳುತ್ತದೋ ಅಥವಾ ಹುಸಿಗೊಳಿಸುತ್ತದೋ ಎಂಬುದು ಕುತೂಹಲ ಹುಟ್ಟಿಸಿದೆ.
ಸ್ಟಿಂಗ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಮಾತೇಕೆ?

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಅವರನ್ನು ಪುಂಖಾನುಪುಂಖವಾಗಿ ಕೊಂಡಾಡುತ್ತಿದ್ದರು. ಈಗ ಅವರ ವಿರುದ್ಧ ನಡೆದ ಮಾರುವೇಷದ ಕಾರ್ಯಾಚರಣೆ ವಿಷಯದಲ್ಲಿ ಬಹುತೇಕರು ಬಾಯಿಮುಚ್ಚಿಕೊಂಡೇ ಇದ್ದಾರೆ.
ಇಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಟಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರಾಡಿದ ಮಾತುಗಳಲ್ಲಿ ಹೊಗಳಿಕೆಯೂ ಇದೆ, ಉಪದೇಶವೂ ಇದೆ. ʻಅವರು (ಸಿದ್ದರಾಮಯ್ಯ) ಪಕ್ಷಾತೀತ ನಾಯಕರು, ಅವರು ಮನಸ್ಸು ಮಾಡಿದ್ದಕ್ಕೆ ನಾನು ಸಚಿವೆ ಆಗಿದ್ದುʼ ಎಂದು ಬಾಯಿತುಂಬಾ ಹೊಗಳಿದ್ದಾರೆ. ಜತೆಗೆ ʻಸ್ಟಿಂಗ್ ವಿಚಾರದಲ್ಲಿ ಮಹಿಳೆಯರ ತೇಜೋವಧೆ ಒಂದು ಮಾಡಬೇಡಿʼ ಎಂದು ಉಪದೇಶವೂ ಮಾಡಿದ್ದಾರೆ.
ಈ ಉಪದೇಶ ಅವರು ಯಾರಿಗೆ ಮಾಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸ್ಟಿಂಗ್ ನಕಲಿ ಹಾಗೂ ಇದೊಂದು ಷಡ್ಯಂತ್ರ ಎಂದು ಅವರದ್ದೇ ಸರ್ಕಾರ ಹೇಳುತ್ತಿದೆ. ಆದರೆ, ಇವರು ಅದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರ ತೇಜೋವಧೆ ಮಾಡಬೇಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಇಲ್ಲಿ ಯಾವ ಮಹಿಳೆಯ ತೇಜೋವಧೆ ನಡೆಯುತ್ತಿದೆ?
ಹೆಬ್ಬಾಳ್ಕರ್ ಅವರು ಮತ್ತೆ ಸಚಿವರಾಗಲು ತಾಲೀಮು ನಡೆಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಮುಖ್ಯಮಂತ್ರಿ ಡಿಕೆಶಿ ಅವರೂ ಸಾಥ್ ನೀಡಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಮುಂದೆ ಪಟ್ಟು ಹಿಡಿದು ಕೂತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಈ ಸಲ ಬೇರೆಯವರಿಗೆ ಅವಕಾಶ ನೀಡೋಣ ಎಂದು ಹೇಳುತ್ತಿರುವುದು ಅವರಿಗೆ ಮುಳುವಾಗಿದೆ ಎಂಬ ಸುದ್ದಿ ರಾಜಕೀಯ ಕಾರಿಡಾರ್ನಲ್ಲಿ ಹರಿದಾಡುತ್ತಿದೆ.
ಆ ಕೋಪದಲ್ಲಿ ಈ ಮಾತು ಆಡಿರಬಹುದೇ ಅಥವಾ ಈ ಸ್ಟಿಂಗ್ ಬಗ್ಗೆ ಅವರಿಗೆ ಎಬಿಸಿಡಿ ಗೊತ್ತಿಲ್ಲದೆ ಬಾಯಿತಪ್ಪಿ ಆಡಿದ್ದಾರೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ.


