SUBSCRIBE

ದ ಪಾಲಿಟಿಕ್

ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ: ಡಿಕೆ ಪಟ್ಟು, ಸಿದ್ದು ವಿರೋಧ

ಡಿ.ಕೆ. ಶಿವಕುಮಾರ್‌ ಸಿಎಂ ಆಗಿ ನಾಲ್ಕು ತಿಂಗಳಾಯಿತು. ಅವರ ಸರ್ಕಾರದಲ್ಲಿ ಒಬ್ಬರೂ ಮಹಿಳಾ ಸಚಿವರಿಲ್ಲ. ಇದನ್ನು ಪ್ರತಿಭಟಿಸಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೌಮ್ಯ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಚಳಿಗಾಲ ಅಧಿವೇಶನ ಆರಂಭವಾಗುವ ಮುನ್ನ ಸಂಪುಟ ಭರ್ತಿ ಮಾಡುವ ಸಂಭವ ಇದೆ.

ಖಾಲಿ ಇರುವ ಎರಡು ಸಚಿವ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ಅದರಲ್ಲೂ ಮಹಿಳಾ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಕೆಶಿ ತಮ್ಮ ಪ್ರಬಲ ಬೆಂಬಲಿಗರಾದ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಕುರ್ಚಿ ಮೇಲೆ ಕೂರಿಸಲು ಉತ್ಸುಕರಾಗಿದ್ದರೆ, ಸಿದ್ದರಾಮಯ್ಯ ಇದನ್ನು ವಿರೋಧಿಸಿ ಅನ್ನಪೂರ್ಣ ತುಕಾರಾಂ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಇದರಿಂದಾಗಿ ಡಿಕೆ ಬಣ ಹಾಗೂ ಸಿದ್ದು ಬಣದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ವಾರ್‌ ಆರಂಭವಾಗಿದೆ.

ಏತನ್ಮಧ್ಯೆ ಗಾಯತ್ರಿ ಶಾಂತೇಗೌಡ್‌, ನಯನಾ ಮೋಟಮ್ಮ, ರೂಪಕಲಾ ಶಶಿಧರ್, ಆರತಿ ಕೃಷ್ಣ … ಹೀಗೆ ಹಲವರು ಅರ್ಜಿ ಹಿಡಿದುಕೊಂಡು ದೆಹಲಿ ವಿಮಾನ ಹತ್ತಿದ್ದಾರೆ.  ಹೈಕಮಾಂಡ್‌ ಅಳೆದುತೂಗಿ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.

ಸಚಿವ ಸಂಪುಟದಲ್ಲಿ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂ ಪರಮಾಧಿಕಾರ. ಆದರೆ, ʻಹೈಕಮಾಂಡ್‌ ಸಂಸ್ಕೃತಿʼ ಇಂದಾಗಿ ರಾಜ್ಯದಲ್ಲಿ ಯಾವುದೇ ಪಕ್ಷ (ಬಿಜೆಪಿ ಹಾಗೂ ಕಾಂಗ್ರೆಸ್‌) ಅಧಿಕಾರಕ್ಕೆ ಬಂದರೂ ಅವರ ದೆಹಲಿ ದೊರೆಗಳೇ ಸಚಿವರನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಪರವಾನಗಿ ಇಲ್ಲದೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಗಮ ಮಂಡಳಿಯ ಸದಸ್ಯರನ್ನೂ ಆಯ್ಕೆ ಮಾಡುವ ಸ್ವಾತಂತ್ರ್ಯ ಇಲ್ಲ. ಈ  ರಾಜಕೀಯ ಗುಲಾಮಗಿರಿ ತೊಲಗಲು ಇನ್ನೆಷ್ಟು ವರ್ಷ ಬೇಕೋ? 

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸ್ಟಿಂಗ್‌ ಗದ್ದಲದಲ್ಲಿ ಮಂಕಾದ ವಿಧಾನ ಪರಿಷತ್‌ ಚುನಾವಣೆ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ರಾಜ್ಯದ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರ …ಹೀಗೆ ಒಟ್ಟು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ನಾಡಿದ್ದು 23ರಂದು ಮತದಾನ ಇದೆ. ಆದರೆ, ರಾಜ್ಯದಲ್ಲಿ ಸ್ಟಿಂಗ್‌ ಗದ್ದಲದಲ್ಲಿ ಚುನಾವಣಾ ಕಣ ರಂಗೇರದೆ ಕಳೆಗುಂದಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ ಎಂಬುದು ಜನಸಾಮಾನ್ಯರ ಕಿವಿಗೆ ಬಿದ್ದಿಲ್ಲ. ಇಂತಹ ಸ್ಥಿತಿಯಲ್ಲಿ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಮತದಾರರ ಮನೆ ಬಾಗಿಲಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

ಮೂರು ಪಕ್ಷದ ನಾಯಕರಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಯಾರಾದರೂ ಗೆಲ್ಲಲಿ ನಮಗೇನು ಎಂಬಂತೆ ಇದ್ದಾರೆ. ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲವು ಕಡೆ ಮುಖ ತೋರಿಸಿ ಬಂದಿದ್ದಾರೆ.  ಘಟಾನುಘಟಿ ನಾಯಕರು ಉತ್ಸಾಹದಿಂದ ಕಣದಲ್ಲಿ  ಕಾಲೇ ಇಟ್ಟಿಲ್ಲ.

ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಮಾತ್ರ ತಮ್ಮ ಗೆಲುವಿಗಾಗಿ ಕಣದಲ್ಲಿ ಬೆವರು ಸುರಿಸುತ್ತಿದ್ದಾರೆ. ಸ್ಟಿಂಗ್‌ ಗುಂಗಿನಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಒಟ್ಟು ಮತದಾನದ ಪ್ರಮಾಣ ಎಷ್ಟಾಗಲಿದೆ ಎಂಬುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಯಾರ ಕೊರಳಿಗೆ ಗೆಲುವಿನ ಮಾಲೆ ಬೀಳಲಿದೆ ಎಂಬುದು  27ರಂದು ಗೊತ್ತಾಗುತ್ತದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸ್ಟಿಂಗ್‌ ವಿಚಾರದಲ್ಲಿ ಸಿದ್ದರಾಮಯ್ಯ ಮೌನ ಏಕೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯ ಸವಾಲು ಸ್ವೀಕರಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಲವತ್ತು ವರ್ಷ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅವರದ್ದೇ ಗರ್ಜನೆ ಕೇಳಿಸುತ್ತಿತ್ತು. ಎಂಟು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಚಿಟಿಕೆ ಹೊಡೆದಂತೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು.

ಆದರೆ, ಈಗ ಅವರಲ್ಲಿ ಆ ಖದರ್‌ ಕಾಣುತ್ತಿಲ್ಲ. ಸಿಎಂ ಕುರ್ಚಿಯಿಂದ ತೀರಾ ಅವಮಾನಕರವಾಗಿ ಅವರನ್ನು ಕೆಳಗಿಳಿಸಿದಾಗಲೂ ಅವರು ಪ್ರತಿರೋಧಿಸಿಲ್ಲ.  ಕುಟುಕು ಕಾರ್ಯಾಚರಣೆ ಮೂಲಕ  ಅವರ ವರ್ಚಸ್ಸು ಹಾಳು ಮಾಡುವ ಹಾಗೂ ಮುಖಕ್ಕೆ ಮಸಿ ಬಳಿಯುವ ವಿದ್ಯಮಾನಗಳು ನಡೆಯುತ್ತಿವೆ. ಆದಾಗ್ಯೂ ಕೇವಲ ದೂರು ಸಲ್ಲಿಸಿ ಮೌನಕ್ಕೆ ಜಾರಿದ್ದಾರೆ.  ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.

ಮೊದಲು ಅವರನ್ನು ಯಾರಾದರೂ ಕೆರಳಿಸಿದರೆ ಅಥವಾ ಅವರ ಬಗ್ಗೆ ಲಘುವಾಗಿ ಮಾತಾಡಿದರೆ ಅಂಥವರನ್ನು ಅವರು ನೇರಾನೇರ ತರಾಟೆಗೆ ತೆಗೆದೊಳ್ಳುತ್ತಿದ್ದರು.  ಈಗ ಅವರ ರಾಜಕೀಯ ಬದುಕಿಗೆ ಫುಲ್‌ಸ್ಟಾಪ್‌ ಇಡಲು ಷಡ್ಯಂತ್ರ ನಡೆಯುತ್ತಿದೆ. ಆದರೂ ಅವರು ಗಾಢ ಮೌನಕ್ಕೆ ಜಾರಿದ್ದಾರೆ. ಈ ಷಡ್ಯಂತ್ರದಲ್ಲಿ ವಿರೋಧ ಪಕ್ಷಗಳ ಕೈವಾಡ ಇದ್ದಿದ್ದರೆ ಅವರು ಯಾವಾಗಲೋ ಸಿಡಿದೆಳುತ್ತಿದ್ದರು. ಆದರೆ, ಇದು ಸ್ವಪಕ್ಷೀಯರ ಆಟ. ಹಾಗಾಗಿ ಅವರು ಅಸಹಾಯಕರಾಗಿ ಮೌನವಾಗಿರಬಹುದು ಎಂದು ರಾಜಕೀಯ ಪಡಸಾಲೆಗಳಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅವರ ರಕ್ತವೇಕೆ ಕುದಿಯುತ್ತಿಲ್ಲ ಎಂಬುದು ಚಿದಂಬರ ರಹಸ್ಯವಾಗಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಮಾರುವೇಷದ ಕಾರ್ಯಾಚರಣೆ ʻಚಾಂಪಿಯನ್‌ʼ ಹಿಂದೆ ಯಾರಿದ್ದಾರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
2 min read

ಮಾರುವೇಷದ ಕಾರ್ಯಚರಣೆ ಈಗ ರಾಜ್ಯದ ಪ್ರತಿ ಮನೆಯ ಮಾತಾಗಿದೆ.  ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಕೇವಲ ನಾಲ್ಕು ತಿಂಗಳಾಯಿತು.  ಅವರು ತಮ್ಮ ಮೊದಲಿನ ಖದರ್‌ ಕಳೆದುಕೊಂಡು ಮೈಸೂರು ಕಡೆಗೆ ಹೆಚ್ಚೆ ಹಾಕಿದ್ದಾರೆ.  ಈಗ ಅವರ ವಿರುದ್ಧವೇ ಷಡ್ಯಂತ್ರ ನಡಿದಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ.

ಪುರಾಣ ಕಾಲದಲ್ಲಿಯೂ ಸ್ಟಿಂಗ್ ನಡೆಯುತ್ತಿದ್ದವು. ಆಗ ವಿಷಕನ್ನೆಯರು ಇದ್ದರು. ಅವರ ಮೂಲಕ ನಡೆಸುತ್ತಿದ್ದರು. ಈ ಆಧುನಿಕ ಕಾಲದಲ್ಲಿ ರಾಜಕಾರಣದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಯುವುದು ಎರಡೇ ಕಾರಣಕ್ಕಾಗಿ. ಒಂದು, ಅಧಿಕಾರ ಪಡೆಯಲು. ಇಲ್ಲವೇ ಪಡೆದ ಅಧಿಕಾರ ಉಳಿಸಿಕೊಳ್ಳಲು. ಕೆಲವೊಮ್ಮೆ ತಮಗಾಗದವರನ್ನು ರಾಜಕೀಯವಾಗಿ ಮುಗಿಸಲು ಅವರ ವಿರುದ್ಧ ಮಾಡಿಸುತ್ತಾರೆ.

ಸಿದ್ದರಾಮಯ್ಯನವರ ವಿರುದ್ಧ ಮಾರುವೇಷದ ಕಾರ್ಯಾಚರಣೆ ಯಾರು ನಡೆಸಿದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ.  ಆದಾಗ್ಯೂ ಸರ್ಕಾರ ಆ ವ್ಯಕ್ತಿಯನ್ನು ಬಂಧಿಸುವುದು ದೂರವೇ ಉಳಿಯಿತು, ವಿಚಾರಣೆ ನಡೆಸಲು ಅವನಿಗೆ ಒಂದು ನೋಟಿಸ್‌ ಸಹ ಇದುವರೆಗೆ ನೀಡದಿರುವುದು ಕುತೂಹಲ ಹುಟ್ಟಿಸಿದೆ. ಸಾಕ್ಷಾತ್‌ ಅವನೇ ಬಹಿರಂಗವಾಗಿ ʻನಾನೇ ಮಾಡಿದ್ದು, ಏನಿವಾಗʼ? ʻಏನು ಮಾಡುತ್ತಿಯಾʼ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಮಕಿ ಹಾಕುತ್ತಿದ್ದಾನೆ. ಅವನ ಈ ಧೈರ್ಯಕ್ಕೆ ಕಾರಣವೇನು? ಅವನ ಬೆನ್ನು ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆ ರಾಜ್ಯದ ಪ್ರತಿಯೊಬ್ಬರಿಗೂ ಕಾಡುತ್ತಿದೆ.

ಈ ಮಾರುವೇಷದ ಕಾರ್ಯಚರಣೆಯ ʻಚಾಂಪಿಯನ್‌ʼ ಎಂಬ ಭಸ್ಮಾಸುರನನ್ನು ಹುಟ್ಟುಹಾಕಿದ್ದು ಯಾರು? ಅವನನ್ನು ಸಾಕುತ್ತಿರುವವರು ಯಾರು? ಸರ್ಕಾರ ಏಕೆ ಅವನ ವಿಚಾರದಲ್ಲಿ ಮೌನಕ್ಕೆ ಜಾರಿದೆ? ಎಂಬ ಪ್ರಶ್ನೆಗಳು ತಲೆ ತಿನ್ನುತ್ತಿವೆ. ಈ ಭಸ್ಮಾಸುರ ತನ್ನ ಸ್ವಭಾವಕ್ಕನುಗುಣವಾಗಿ ತನಗೆ ಹುಟ್ಟಿಸಿದವರ ತಲೆಯ ಮೇಲೆ ಕೈ ಇಡದೆ ಇರುತ್ತಾನೆಯೆ?

ʻಸ್ಟಿಂಗ್‌ ಚಾಂಪಿಯನ್‌ʼ ಇದು ತಮ್ಮ ಬುಡಕ್ಕೆ ಬರುತ್ತಿರುವುದು ಗಮನಿಸಿ, ಒಂದು ವಾರದ ನಂತರ ಪರದೆ ಮುಂದೆ ಬಂದು ಸಿದ್ದರಾಮಯ್ಯನವರ ಒಳಿತಿಗಾಗಿ ನಾನೇ ಸ್ಟಿಂಗ್‌ ಮಾಡಿದ್ದೇನೆ, ಅವರು ನನಗೆ ತಂದೆಯ ಸಮಾನ, ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಬೊಗಳೆ ಮಾತಾಡಿ, ತಿಪ್ಪೆ ಸಾರಿಸಲು ಯತ್ನಿಸಿದ್ದಾನೆ.

ಅವನ ವೀರಾವೇಷದ ಮಾತುಗಳು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸ್ಟಿಂಗ್‌ ಅನ್ನು ಒಳಿತಿಗಾಗಿ ಮಾಡಿದ್ದಾನೋ ಅಥವಾ ಕೆಡುಕಿಗಾಗಿ ಮಾಡಿದ್ದಾನೋ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಅದಕ್ಕೂ ಮೊದಲು ಸ್ಟಿಂಗ್‌ ವಿಡಿಯೊ, ಸ್ವಿಂಗ್‌ ಮಾಡಿದವನ ಸ್ವತ್ತು. ಆ ವಿಡಿಯೊ ಹಲವರ ಕೈಗೆ ತಲುಪಿದ್ದು ಹೇಗೆ? ಯಾರು ತಲುಪಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಇಡೀ ರಾಜ್ಯ ಕಾಯುತ್ತಿದೆ. ವಿಡಿಯೊ ಕಳುವಾಗಿದೆ ಎಂದು ಸಮಜಾಯಿಷಿ ನೀಡಬಹುದು. ಕಳುವಾಗಿದ್ದರೆ ದೂರು ಏಕೆ ನೀಡಿಲ್ಲ? ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಮಾರುವೇಷದ ಕಾರ್ಯಾಚರಣೆಯ ವಿಷಯದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರನ್ನು ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ. ದಿನಬೆಳಗಾದರೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮಾಧ್ಯಮದ ಮುಸುಕು ಹಾಕಿಕೊಂಡಿರುವ ರಾಕೇಶ್‌ ಶೆಟ್ಟಿಯನ್ನು ಅರೆಸ್ಟ್‌ ಮಾಡಿಸಲು ಬೀದಿಗಿಳಿದಿದ್ದಾರೆ. ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಲೂ ಆಗದ, ಸ್ವೀಕರಿಸಲೂ ಆಗದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ನೇತೃತ್ವದ ಸರ್ಕಾರ ಸಿಲುಕಿದೆ.

ಡಿ.ಕೆ. ಶಿವಕುಮಾರ್‌ ಈ ವಿಷಯದಲ್ಲಿ ಮೇಲುದನಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಹಾಗೂ ʼಕಾಲವೇ ಉತ್ತರಿಸುತ್ತದೆʼ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಕುಮಾರಸ್ವಾಮಿ ಆರೋಪಗಳಿಗೆ ಬಲ ತಂದಿದೆ. ಸಂಘಪರಿವಾರದ ವಿರುದ್ಧ ಧೈರ್ಯವಾಗಿ ಮಾತಾಡುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಜೋರಾಗಿ ಮಾತಾಡುತ್ತಿಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರು ಅದೆಲ್ಲೋ ಕಳೆದುಹೋಗಿದ್ದಾರೆ.

ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿದರೆ ಪಕ್ಷಾತೀತವಾಗಿ ಈ ವಿಷಯದ ಕುರಿತು ಬಹಿರಂಗವಾಗಿ ಮಾತಾಡಲು ಬಹುತೇಕ ರಾಜಕಾರಣಿಗಳು ಭಯ ಪಡುತ್ತಿದ್ದಾರೆ. ಅವರ ಈ ಭಯಕ್ಕೆ ಕಾರಣವೇನಿರಬಹುದು? ಈ ಸ್ಟಿಂಗ್‌ ಚಾಂಪಿಯನ್‌ನ ಕಪಾಟಿನಲ್ಲಿ ಇನ್ನೂ ಯಾರ್ಯಾರ ವಿಡಿಯೊ ಇವೆಯೋ ಅವನ ಭಗವಂತನೇ ಬಲ್ಲ.

ಸ್ಟಿಂಗ್‌ ಚಾಂಪಿಯನ್‌ ಹಿಂದೆ ಯಾರಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಈ  ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ,  ಈ ವಿಚಾರದಲ್ಲಿ ರಾಜ್ಯದ ಸಿಎಂ ಹಾಗೂ  ಸರ್ಕಾರವೇ ಆರೋಪಿ ಸ್ಥಾನದಲ್ಲಿ ನಿಂತಿದೆ. ಸರ್ಕಾರದ ಅಡಿಯಲ್ಲಿರುವ ಪೊಲೀಸರು ಈ ಮಾರುವೇಷದ ಕಾರ್ಯಾಚರಣೆಯ ಚಾಂಪಿಯನ್‌ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಕಾದು ನೋಣೋಣ!

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಈಶ್ವರಪ್ಪ – ಯತ್ನಾಳ್ ಮರಳಿ ಬಿಜೆಪಿಗೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆಗಲೇ ಬಿಜೆಪಿ ತಾಲೀಮು ಆರಂಭಿಸಿದೆ. ಬಿಜೆಪಿ ಪಕ್ಷದ ಫೈರ್‌ ಬ್ರಾಂಡ್‌ಗಳಾದ ಕೆ. ಎಸ್‌. ಈಶ್ವರಪ್ಪ ಹಾಗೂ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಸದ್ದಿಲ್ಲದೆ ಘರ್ ವಾಪಸಿ ಮಾಡಿಕೊಳ್ಳಲು ಪಕ್ಷ ಮುಂದಾಗಿದೆ.

ಹಾವು ಮುಂಗಸಿಯಂತಾಗಿದ್ದ ಈಶ್ವರಪ್ಪ ಹಾಗೂ ಯಡಿಯೂರಪ್ಪ ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ನಗುಮುಖದಿಂದ ಮಾತಾಡಿದ್ದು ಮತ್ತು ಬಿ. ವೈ. ವಿಜಯೇಂದ್ರ ಹಾಗೂ ಯತ್ನಾಳ್ ಹುಬ್ಬಳಿಯ ಛಬ್ಬಿ ಗ್ರಾಮದಲ್ಲಿ ಪರಸ್ಪರ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದ್ದು ರಾಜಕೀಯವಾಗಿ ಗಮನ ಸೆಳೆದಿವೆ.

ತಮ್ಮ ಮಗ ಕಾಂತೇಶ್‌ಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದಿರುವುದಕ್ಕೆ ಯಡಿಯೂರಪ್ಪ ಕಾರಣ ಎಂದು ಟೀಕಿಸಿದಲ್ಲದೇ, ಬಿ. ವೈ. ರಾಘವೇಂದ್ರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.  ಪರಿಣಾಮವಾಗಿ ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿತ್ತು. ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದು ಯಡಿಯೂರಪ್ಪ ಕುಟುಂಬದ ಮೇಲೆ ಬೆಂಕಿಕಾರುತ್ತಿದ್ದ ಯತ್ನಾಳ್ ಅವರಿಗೆ ಪಕ್ಷದಿಂದ ಗೇಟ್‌ಪಾಸ್‌ ನೀಡಲಾಗಿತ್ತು.

ಈಗ ಸಾಕ್ಷಾತ್‌ ಪ್ರಧಾನಿ ಮೋದಿ- ಶಾ ಅವರು ಬಿ.ಎಸ್.‌ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಮೂಲಕವೇ ಅವರನ್ನು ಪಕ್ಷಕ್ಕೆ ಮರಳಿ ಕರೆತರಲು ಮುಂದಾಗಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ವಿಶ್ಲೇಷಣೆ

ಮತ್ತೇ ತುರ್ತು ಪರಿಸ್ಥಿತಿಯತ್ತ ಸಾಗುತ್ತಿರುವ ಭಾರತ?

ಸಿದ್ರಾಮ ಶಟಕಾರ
ಸಿದ್ರಾಮ ಶಟಕಾರ
2 min read

ಇಂದಿರಾ ಗಾಂಧಿಯವರಿಗೆ ಅಧಿಕಾರ ಕೈ ತಪ್ಪುವ ಆತಂಕ  ಹಾಗೂ ಸರ್ವಾಧಿಕಾರ ಧೋರಣೆಯ ಫಲವಾಗಿ ಈ ದೇಶ 1975 ರಲ್ಲಿ 21 ತಿಂಗಳುಗಳ ಕಾಲ ಅಕ್ಷರಶಃ ಕತ್ತಲೆಗೆ ತಳ್ಳಲ್ಪಟ್ಟಿತ್ತು. ಅದು ಕತ್ತಲೆಯ ಯುಗ ಅಥವಾ ಭಾರತದ ಪ್ರಜಾಪ್ರಭುತ್ವದ ಕಗ್ಗೋಲೆಯ ಕಾಲ ಎಂದು ಕುಖ್ಯಾತಿ ಪಡೆದಿದೆ.

ಇಂದಿರಾ ಅವರು ದೇಶದ ಮೇಲೆ  ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದ ರಾಜಕಾರಣಿಗಳಾದಿಯಾಗಿ ಜನಸಾಮಾನ್ಯರನ್ನು, ಅಸಂವಿಧಾನಿಕ ದಾರಿ ಹಾಗೂ  ತಂತ್ರಗಳು ಬಳಸುವುದರ ಮೂಲಕ ಎಲ್ಲರ ಧ್ವನಿಯನ್ನು ಹತ್ತಿಕ್ಕುವ  ಕೆಲಸ ಪ್ರಜಾಪ್ರಭುತ್ವದ ನೆರಳಿನ ಅಡಿಯಲ್ಲಿಯೇ ಜರುಗಿಸಿರುವುದು  ದೇಶದ ಚರಿತ್ರೆಯಲ್ಲಿ ಕಪ್ಪು ಪುಟದ ದಾಖಲೆಯಾಗಿ ಉಳಿಯಲಿದೆ. ಕೇಂದ್ರ ಸರ್ಕಾರದ ನಡೆಗಳು ಇಂದಿರಾ ಅವರ 1975ರ ತುರ್ತು ಪರಿಸ್ಥಿತಿ ನೆನಪಿಸುವಂತಿದೆ.  Gen Zಗಳ NEET ಪರೀಕ್ಷೆಯ ಅಕ್ರಮದ ವಿರುದ್ಧ ನಡೆದ ಹೋರಾಟ ಹಾಗೂ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗಾಗಿ ನಡೆದ ಹೋರಾಟ. ಈಗ SIR ಅಕ್ರಮಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಕ್ಷಾತೀತವಾಗಿ ದೇಶದ ಜನರು ಭಾಗಿಯಾಗುತ್ತಿದ್ದಾರೆ.

ಇದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂದು ಪೊಲೀಸರನ್ನು ಮುಂದೆ ಬಿಟ್ಟು ಗಾಂಧಿ ತೋರಿಸಿದ ಅಹಿಂಸಾ ಮೂಲಕ ಹೋರಾಡುತ್ತಿರುವ ಯುವಜನತೆಯ ಮೇಲೆ ಪ್ರಹಾರ  ಮಾಡುತ್ತಿದೆ.  ಪ್ರತಿಭಟನಾಕಾರರ ಜತೆಗೆ ಸರಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಅನಿಸುತ್ತಿದೆ.

ಶಾಂತಿಯುತವಾಗಿ ಸಭೆ ಸೇರುವುದು ಹಾಗೂ ಪ್ರತಿಭಟನೆ ಮಾಡುವುದು ಜನರ ಮೂಲಭೂತ ಹಕ್ಕು. ಸರ್ಕಾರ ಜನರ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ ರಾಠಿಯನ್ನು ಯಾವುದೆ ಕಾರಣ ನೀಡದೆ ಬೆಳ್ಳಂಬೆಳಿಗ್ಗೆ ಅವರ  ಗುರಗಾಂವ್‌  ಮನೆಗೆ ನುಗ್ಗಿ ಕಾನೂನು ಬಾಹಿರವಾಗಿ ಬಂಧಿಸಿ ಎಳೆದುಕೊಂಡು ಹೋಗಿರುವುದು, ದೆಹಲಿಯ ಕನಾಟ್ ಪ್ಲೇಸನ್ ಸೆಂಟ್ರಲ್ ಪಾರ್ಕನಲ್ಲಿ  ಶುಕ್ರವಾರ ಆಯೋಜಿಸಿದ್ದ “ಲೇಹರಾ ದೋ ತಿರಂಗಾ” ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ CJP ಮುಖ್ಯಸ್ಥ ಅಭಿಜೀತ ದಿಪ್ಕೆ ಹಾಗೂ AISA ಸಂಘಟನೆ ಮುಖ್ಯಸ್ಥೆ ನೇಹಾ ಬೋರಾ ಅವರನ್ನು  ದೆಹಲಿ ಪೋಲಿಸರು ಬಂಧಿಸಿರುವುದು ಏನೇನು ಸೂಚಿಸುತ್ತದೆ?

ಒಂದೇ ದಿನ ಏಳು ಸಾವಿರ ಜನರನ್ನು ಸಾಮೂಹಿಕವಾಗಿ ಬಂಧಿಸಿರುವ ಸರ್ಕಾರದ ಈ ಸರ್ವಾಧಿಕಾರ ಧೋರಣೆ 1975ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ.

ED, CBI ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುವುದು, ಜನಪರ ಮಾಧ್ಯಮಗಳ ಧ್ವನಿಗಳನ್ನು ಹತ್ತಿಕ್ಕುವುದು, ಇಲ್ಲವೇ ಬಗ್ಗದಿದ್ದರೆ ಹಣಬಲದಿಂದ ಖರಿದಿಸುವುದು ದೇಶದಲ್ಲಿ ನಡೆಯುತ್ತಿದೆ.  ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿಯ ನಡೆ ಎಂದು ಸಾರ್ಜಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರು.  ಈ ಜೆನ್‌ ಝೀ ಹೋರಾಟ ಯಾವ ಪರಿಣಾಮ ಬಿರಲಿದೆ ಎಂಬುದು ಜನರಲ್ಲಿ ಕುತೂಹಲ ಹುಟ್ಟಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್