ಸಿದ್ದರಾಮಯ್ಯನವರ ಮೇಲೆ ಮಾಡಿದ ಸ್ಟಿಂಗ್ ವಿಚಾರ ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಈ ವಿಷಯದ ಕುರಿತು ಇದೇ ಮೊದಲ ಬಾರಿಗೆ ಅವರು ಮೌನ ಮುರಿದ ʻನನ್ನ ಮೇಲೆ ಪವರ್ ಟಿ.ವಿಯ ರಾಕೇಶ್ ಶೆಟ್ಟಿ ಹಾಗೂ ಮಂಗಳೂರಿನ ಕೃಪಾ ಆಳ್ವ ಸೇರಿಕೊಂಡು ಬ್ಲಾಕ್ಮೇಲ್ ಮಾಡಲು ಈ ಸ್ಟಿಂಗ್ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕುʼ – ಎಂದಿರುವ ಮಾತುಗಳು ಮತ್ತು ಅವರ ಮಗ ಹಾಗೂ ಸಚಿವ ಯತೀಂದ್ರ ಅವರು ಒಂದು ಹೆಜ್ಜೆ ಮುಂದೆ ಬಂದು ʻಈ ಸ್ಟಿಂಗ್ ಹಿಂದೆ ನಮ್ಮ ಪಕ್ಷದವರೇ ಇದ್ದಾರೆʼ ಎಂದಿರುವ ಸ್ಪೋಟಕ ಹೇಳಿಕೆ ಈ ಸ್ಟಿಂಗ್ ಬಗ್ಗೆ ಬೇರೆ ಕಥೆ ಹೆಳುತ್ತಿವೆ.
ಜತೆಗೆ, ರಾಕೇಶ್ ಶೆಟ್ಟಿ ಕ್ಯಾಮೆರಾ ಮುಂದೆ ಕೂತು ʻಸಿದ್ದರಾಮಯ್ಯನವರು ನನಗೆ ತಂದೆ ಸಮಾನ. ಅವರ ಮೇಲೆ ಸ್ಟಿಂಗ್ ಮಾಡಲು ಒಂದು ಷಡ್ಯಂತ್ರ ನಡೆಯುತ್ತಿತ್ತು. ಅದನ್ನು ಬಯಲು ಮಾಡಲು ನಾನೇ ಸ್ಟಿಂಗ್ ಮಾಡಿದ್ದೇನೆ. ಈ ವಿಷಯ ಆಗ ಅವರ ಕಿವಿಯಲ್ಲಿ ಹೇಳಿದ್ದೆʼ ಎಂದು ಹೇಳಿರುವ ಮಾತುಗಳು ʻರಾಕೇಶ್ ಶೆಟ್ಟಿ ತಾನು ಉಳಿಯಲು ಹಾಗೂ ಇನ್ನಾರನ್ನೋ ಉಳಿಸಲು ದಾರಿ ತಪ್ಪಿಸುವ ಕಥೆಯನ್ನು ಹೆಣೆದಿದ್ದಾರೆʼ ಎಂಬುದನ್ನು ಸ್ಪಷ್ಟಪಡಿಸಿವೆ.
ಕುಮಾರಸ್ವಾಮಿ ಅವರು ಶೆಟ್ಟಿ ಹಾಗೂ ಸರ್ಕಾರದ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎಳೆದು ತಂದು ಬಳಸಿಕೊಳ್ಳುತ್ತಿರಬಹುದು. ಆದರೆ, ಸಾಕ್ಷಾತ್ ಸಿದ್ದರಾಮಯ್ಯನವರೇ ʻನನ್ನ ವಿರುದ್ಧ ರಾಕೇಶ್ ಶೆಟ್ಟಿ ಹಾಗೂ ಕೃಪಾ ಆಳ್ವಾ ಷಡ್ಯಂತ್ರ ಮಾಡಿದ್ದಾರೆʼ ಎಂದು ಕೇವಲ ಆರೋಪ ಮಾಡದೆ, ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಆದಾಗ್ಯೂ, ಪೊಲೀಸರು ಇದುವರೆಗೆ ಅವರಿಬ್ಬರನ್ನು ಯಾಕೆ ವಶಕ್ಕೆ ಪಡೆದಿಲ್ಲ? ವಶಕ್ಕೆ ಪಡೆಯದಂತೆ ಪೊಲೀಸರ ಕೈಯನ್ನು ಕಟ್ಟಿ ಹಾಕಿದವರು ಯಾರು ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.
ಈ ಸ್ಟಿಂಗ್ ವಿಡಿಯೊ ಸೆಪ್ಟೆಂಬರ್ 27ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸಿದ್ದರಾಮಯ್ಯನವರು ಅಕ್ಟೋಬರ್ 6ರಂದು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ಆದರೆ, ಪೊಲೀಸರು ಈಗ ಶೆಟ್ಟಿಯನ್ನು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ರಾಜಮರ್ಯಾದೆಯಿಂದ ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನು ಸರ್ಕಾರದ ಮಹದುಪಕಾರ ಎನ್ನದೆ ಮತ್ತೇನು ಎನ್ನಬೇಕು? ಇಂತಹ ಗಂಭೀರವಾದ ಪ್ರಕರಣದಲ್ಲೂ ಈ ಸಮಯ ಕೊಲ್ಲುವ ಆಟವೇಕೆ? ಸರ್ಕಾರದ ಈ ಆಟದಿಂದಾಗಿ ಶೆಟ್ಟಿ ಅವರು ಈಗ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ನಿರಾಳರಾಗಿದ್ದಾರೆ. ಆಳ್ವಾ ಅವರು ಈ ಸುದ್ದಿ ಹೊರಬಂದಾಗಿನಿಂದ ಎಲ್ಲೋ ಕಾಣೆಯಾಗಿದ್ದಾರೆ.
ರಾಜ್ಯದ ಗೃಹ ಸಚಿವರು ʻಒಂದು ವಾರದೊಳಗೆ ಸತ್ಯಾಂಶ ಹೊರಬರುತ್ತದೆʼ ಎಂದು ಹೇಳಿದಲ್ಲದೆ, ಮುಂದುವರಿದು ʻನಮಗೆ ಸರ್ಕಾರ ಹಾಗೂ ಸಿದ್ದರಾಮಯ್ಯನವರ ಘನತೆಗಿಂತ ದೊಡ್ಡದು ಯಾವುದೂ ಇಲ್ಲʼ ಎಂದಿದ್ದಾರೆ. ಅವರ ನಂಬಿಕೆ ಹುಟ್ಟಿಸದ ಈ ಮಾತುಗಳನ್ನು ಜನರಾಗಲಿ ಅಥವಾ ಸಿದ್ದರಾಮಯ್ಯನರಾಗಲಿ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಆದರೆ, ಒಂದು ವಾರದೊಳಗೆ ಹೊರಬೀಳುವ ಸತ್ಯ, ಅದು ಸರ್ಕಾರದ ಸತ್ಯವಾಗಿರುತ್ತದೋ ಅಥವಾ ನೈಜ ಸತ್ಯವಾಗಿರುತ್ತದೋ ಎಂದು ಜನರಿಗೆ ಕುತೂಹಲ ಹುಟ್ಟಿಸಿದೆ.
ʻನಾನೇ ಅಪರಾಧಿʼ ಎಂದು ಸ್ವತಃ ಆರೋಪಿಯೇ ಪರೋಕ್ಷವಾಗಿ ಹೇಳಿದರೂ ಆತನನ್ನು ವಶಕ್ಕೆ ಪಡೆಯದ ಈ ಸರ್ಕಾರ, ನಿಜವಾದ ಸತ್ಯವನ್ನು ಜನರ ಮುಂದಿಡಬಹುದೇ ಎಂಬ ಅನುಮಾನ ಜನರಲ್ಲಿ ಹುಟ್ಟಿಸಿದೆ.
ʻರಾಜ್ಯದಲ್ಲಿ ಸುಮಾರು 40 ಜನರ ಮೇಲೆ ಸ್ಟಿಂಗ್ ನಡೆದಿದೆʼ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರು ವಿಧಾನಸೌಧದಲ್ಲಿ ಹೇಳಿದ ಮಾತು ಈಗ ಜೀವ ಪಡೆದುಕೊಂಡಿದೆ. ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಮಾಡಿದವರು ಯಾರು ಹಾಗೂ ಯಾಕೆ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಈಗ ಈ ಸ್ಟಿಂಗ್ ಪಿತಾಮಹ ಯಾರು ಎಂಬುದಷ್ಟೇ ಗೊತ್ತಾಗಬೇಕಿದೆ.
ಈಗ ರಾಕೇಶ್ ಶೆಟ್ಟಿ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಎಂಬ ಪಾತ್ರಧಾರಿಗಳ ಮುಖ ಮಾತ್ರ ಹೊರಬಿದ್ದಿದೆ. ಪರದೆಯ ಹಿಂದಿರುವ ಈ ಸ್ಟಿಂಗ್ ಕಂಪನಿಯ ಮಾಲೀಕನ ಮುಖ ಹೊರಬರಬೇಕು. ಆಗಲೇ ಈ ಸ್ಟಿಂಗ್ ದಂಧೆ ಬಂದ್ ಆಗುತ್ತದೆ. ಇಲ್ಲದಿದ್ದರೆ ಕರ್ನಾಟಕ ಮತ್ತೊಂದು ಬಿಹಾರ ಅಥವಾ ಉತ್ತರ ಪ್ರದೇಶ ಆಗುತ್ತದೆ.
ಈ ಸ್ಟಿಂಗ್ ಕುರಿತು ಪಾರದರ್ಶಕವಾಗಿ ತನಿಖೆ ನಡೆಯದಿದ್ದಲ್ಲಿ ಕರ್ನಾಟಕ ರಾಜಕಾರಣಕ್ಕೆ ಉಳಿಗಾಲ ಇಲ್ಲ.
ಕೆಪಿಎಸ್ಸಿ ಹಗರಣ: ಕನ್ನಾಳೆ ಮತ್ತು ಗಂಗ್ವಾರ್ಗೆ ಹೆಚ್ಚಿದ ಸಂಕಷ್ಟ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ನಡೆದ ಭಾರಿ ಪ್ರಮಾಣದ ಹಗರಣ ಜಗಜ್ಜಾಹೀರಾಗಿದೆ. ಈ ಹಗರಣದ ಕುರಿತು ಸಿಐಡಿ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಪಶುವೈದ್ಯಾಧಿಕಾರಿ ಹುದ್ದೆಯ ಕೆಲ ಫಲಾನುಭವಿಗಳು ತನಿಖಾಧಿಕಾರಿಗಳ ಮುಂದೆ ಹಣ ನೀಡಿರುವ ಬಗ್ಗೆ ತಮ್ಮ ತಪ್ಪೊಪ್ಪಿಗೆಯೂ ನೀಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಆಯೋಗದ ಮಾಜಿ ಅಧ್ಯಕ್ಷ ಶಂಕರೆಪ್ಪ ಸಾಹುಕಾರ, ಆಯೋಗದ ಸದಸ್ಯರಾದ ಬಿ.ವಿ. ಗೀತಾ, ಶಾಂತಾ ಹೊಸಮನಿ ಮತ್ತು ಇತರೆ ಸಿಬ್ಬಂಧಿಗಳ ಬಂಧನವಾಗಿದೆ.
ಏತನ್ಮಧ್ಯೆ ಬಸವರಾಜ ಕನ್ನಾಳೆ ಅವರ ಸಿಂಡಿಕೇಟ್ ಸದಸ್ಯತ್ವವನ್ನು (ತುಮಕೂರು ವಿಶ್ವವಿದ್ಯಾಲಯ) ರಾಜ್ಯಪಾಲರು ವಜಾ ಮಾಡಿದ್ದಾರೆ. ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ (ಕಾನೂನು ಕ್ರಮ ಜರುಗಿಸಲು ಗ್ರಿನ್ ಸಿಗ್ನಲ್) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮತಿ ನೀಡಿದ್ದಾರೆ. ಇದರಿಂದಾಗಿ ಈಗ ಸಿಐಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿ, ಕಾನೂನು ಪ್ರಕ್ರಿಯೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಈ ಬೆಳವಣಿಗೆ ಆರೋಪಿಗಳಿಗೆ ಆಘಾತ ನೀಡಿದೆ.
ತನಿಖೆಯ ಸಂದರ್ಭದಲ್ಲಿ ಸಿಐಡಿ ಹಾಗೂ ಇ.ಡಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ, ಸಾಕ್ಷಿಗಳು ಮತ್ತು ಸಾಕ್ಷ್ಯಗಳು ಪ್ರಬಲವಾಗಿವೆಯೋ ಅಥವಾ ದೋಷಪೂರಿತವಾಗಿವೆಯೋ ಎಂಬುದರ ಮೇಲೆ ಬಸವರಾಜ ಕನ್ನಾಳೆ ಹಾಗೂ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹಣೆಬರಹ ನಿರ್ಧಾರವಾಗುತ್ತದೆ.
ಸ್ಟಿಂಗ್ ಮಾಡಿದವರನ್ನು ಬಿಟ್ಟು, ಹಂಚಿದವರ ಹಿಂದೆ ಬಿದ್ದ ಸರ್ಕಾರ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ನಕಲಿ ಸ್ಟಿಂಗ್ ಕಾರ್ಯಾಚರಣೆಯ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಾರದೊಳಗೆ ಸತ್ಯಾಂಶ ಹೊರಬರುತ್ತದೆ ಎಂದು ಗೃಹ ಸಚಿವರೂ ಹೇಳಿದ್ದಾರೆ. ಅದು ಯಾರ ಸತ್ಯ ಎಂಬುದು ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಹೆಚ್ಚಿಸಿದೆ.
ʻಸಿದ್ದರಾಮಯ್ಯನವರ ಗೌರವ ಉಳಿಸಲು ನಾನೇ ಸ್ಟಿಂಗ್ ಮಾಡಿದ್ದೇನೆʼ ಎಂದು ಹೇಳುವ ಮೂಲಕ ಸ್ಟಿಂಗ್ ಮಾಡಿದ್ದನ್ನು ಒಪ್ಪಿಕೊಂಡಿರುವ ರಾಕೇಶ್ ಶೆಟ್ಟಿಯನ್ನು ಬಂಧಿಸದೆ, ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆಯಲು ಸಾಕಷ್ಟು ಸಮಯಾವಕಾಶ ನೀಡಿದೆ ಎಂದು ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಸಾಕ್ಷಾತ್ ಸಿದ್ದರಾಮಯ್ಯನವರೇ ರಾಕೇಶ್ ಶೆಟ್ಟಿ ಹಾಗೂ ಮಂಗಳೂರಿನ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಹೆಸರನ್ನು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅವರನ್ನು ಬಂಧಿಸದ ಈ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್ಲೋಡ್ ಮಾಡಿದ ಮತ್ತು ಹಂಚಿದವರ ಬೇಟೆಯಾಡುತ್ತಿದೆ. ಇದು ಹೇಗಿದೆ ಅಂದರೆ ಅಕ್ಕಿ ಕದ್ದ ಕಳ್ಳನನ್ನು ಬಿಟ್ಟು, ಕದ್ದ ಅಕ್ಕಿಯಿಂದ ಅಡುಗೆ ಮಾಡಿ ಊಟ ಮಾಡಿದವರ ಹಿಂದೆ ಬಿದ್ದಂತಾಗಿದೆ.
ಸರ್ಕಾರದ ಈ ನಡೆ ನಿಜವಾದ ಆರೋಪಿಗಳನ್ನು ರಕ್ಷಿಸಲು, ಜೆಡಿಎಸ್ ವಾರ್ ರೂಮ್ನಲ್ಲಿ ಕೆಲಸ ಮಾಡುವ ರಿತೇಶ್ ಪಾಂಡೆ, ಮೋಹನ್ ಗೌಡ್, ಚಂದನ್ ಅವರ ಹಿಂದೆ ಬೀಳುವ ಮೂಲಕ ಜೆಡಿಎಸ್ ತಲೆಗೆ ಕಟ್ಟಲು ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನವನ್ನು ಜನರಲ್ಲಿ ಹುಟ್ಟುಹಾಕಿದೆ.
ಇದರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಗೌರವ ಅಡಗಿದೆ. ಸರ್ಕಾರ ಇದರಲ್ಲಿ ರಾಜಕಾರಣ ಮಾಡದೆ ಸಿಸಿಬಿ ಪೊಲೀಸರಿಗೆ ತನಿಖೆ ಮಾಡಲು ಮುಕ್ತ ಅವಕಾಶ ನೀಡುತ್ತದೆ. ತನಿಖೆಯಲ್ಲಿ ಮೂಗು ತೂರಿಸದೆ ಪಾರದರ್ಶಕವಾಗಿ ತನಿಖೆ ನಡೆಸಿ, ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬಹುದು ಎಂದು ಜನರು ನಂಬಿದ್ದಾರೆ. ಜನರ ಈ ನಂಬಿಕೆಯನ್ನು ಸರ್ಕಾರ ಉಳಿಸಿಕೊಳ್ಳುತ್ತದೋ ಅಥವಾ ಹುಸಿಗೊಳಿಸುತ್ತದೋ ಎಂಬುದು ಕುತೂಹಲ ಹುಟ್ಟಿಸಿದೆ.
ಸ್ಟಿಂಗ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಮಾತೇಕೆ?

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಅವರನ್ನು ಪುಂಖಾನುಪುಂಖವಾಗಿ ಕೊಂಡಾಡುತ್ತಿದ್ದರು. ಈಗ ಅವರ ವಿರುದ್ಧ ನಡೆದ ಮಾರುವೇಷದ ಕಾರ್ಯಾಚರಣೆ ವಿಷಯದಲ್ಲಿ ಬಹುತೇಕರು ಬಾಯಿಮುಚ್ಚಿಕೊಂಡೇ ಇದ್ದಾರೆ.
ಇಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಟಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರಾಡಿದ ಮಾತುಗಳಲ್ಲಿ ಹೊಗಳಿಕೆಯೂ ಇದೆ, ಉಪದೇಶವೂ ಇದೆ. ʻಅವರು (ಸಿದ್ದರಾಮಯ್ಯ) ಪಕ್ಷಾತೀತ ನಾಯಕರು, ಅವರು ಮನಸ್ಸು ಮಾಡಿದ್ದಕ್ಕೆ ನಾನು ಸಚಿವೆ ಆಗಿದ್ದುʼ ಎಂದು ಬಾಯಿತುಂಬಾ ಹೊಗಳಿದ್ದಾರೆ. ಜತೆಗೆ ʻಸ್ಟಿಂಗ್ ವಿಚಾರದಲ್ಲಿ ಮಹಿಳೆಯರ ತೇಜೋವಧೆ ಒಂದು ಮಾಡಬೇಡಿʼ ಎಂದು ಉಪದೇಶವೂ ಮಾಡಿದ್ದಾರೆ.
ಈ ಉಪದೇಶ ಅವರು ಯಾರಿಗೆ ಮಾಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸ್ಟಿಂಗ್ ನಕಲಿ ಹಾಗೂ ಇದೊಂದು ಷಡ್ಯಂತ್ರ ಎಂದು ಅವರದ್ದೇ ಸರ್ಕಾರ ಹೇಳುತ್ತಿದೆ. ಆದರೆ, ಇವರು ಅದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರ ತೇಜೋವಧೆ ಮಾಡಬೇಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಇಲ್ಲಿ ಯಾವ ಮಹಿಳೆಯ ತೇಜೋವಧೆ ನಡೆಯುತ್ತಿದೆ?
ಹೆಬ್ಬಾಳ್ಕರ್ ಅವರು ಮತ್ತೆ ಸಚಿವರಾಗಲು ತಾಲೀಮು ನಡೆಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಮುಖ್ಯಮಂತ್ರಿ ಡಿಕೆಶಿ ಅವರೂ ಸಾಥ್ ನೀಡಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಮುಂದೆ ಪಟ್ಟು ಹಿಡಿದು ಕೂತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಈ ಸಲ ಬೇರೆಯವರಿಗೆ ಅವಕಾಶ ನೀಡೋಣ ಎಂದು ಹೇಳುತ್ತಿರುವುದು ಅವರಿಗೆ ಮುಳುವಾಗಿದೆ ಎಂಬ ಸುದ್ದಿ ರಾಜಕೀಯ ಕಾರಿಡಾರ್ನಲ್ಲಿ ಹರಿದಾಡುತ್ತಿದೆ.
ಆ ಕೋಪದಲ್ಲಿ ಈ ಮಾತು ಆಡಿರಬಹುದೇ ಅಥವಾ ಈ ಸ್ಟಿಂಗ್ ಬಗ್ಗೆ ಅವರಿಗೆ ಎಬಿಸಿಡಿ ಗೊತ್ತಿಲ್ಲದೆ ಬಾಯಿತಪ್ಪಿ ಆಡಿದ್ದಾರೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ.
ಮೋದಿ-ಶಾಗೆ ಮುಳುವಾದ ಚುನಾವಣಾ ಆಯೋಗ

ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ನೂರು ವರ್ಷಗಳ ಕಾಲ ನಾವು ಅಧಿಕಾರದಲ್ಲಿರಲು ಏನು ಮಾಡಬೇಕು ಎಂಬ ಆಲೋಚನೆಯಲ್ಲಿ ಮುಳುಗಿದೆ. ಅದರ ಭಾಗವಾಗಿಯೇ 2023ರಲ್ಲಿ ʻಚುನಾವಣಾ ಆಯೋಗದ ಮುಖ್ಯ ಆಯುಕ್ತರ ಹಾಗೂ ಇತರ ಆಯುಕ್ತರ ನೇಮಕಾತಿ ಕಾಯಿದೆʼ ಜಾರಿಗೆ ಬಂದಿದೆ. ದೇಶದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಧೀಶರಿಗಾಗಲಿ, ರಾಷ್ಟ್ರಪತಿಗಳಿಗಾಗಲಿ ಅಥವಾ ಸ್ವತಃ ಪ್ರಧಾನ ಮಂತ್ರಿಗಳಿಗೆ ಇಲ್ಲದ ವಿಶೇಷ ಅಧಿಕಾರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮೋದಿ-ಶಾ ದಯಾಪಾಲಿಸಿದ್ದಾರೆ. ಈಗ ಮುಖ್ಯ ಆಯುಕ್ತರನ್ನು ತೆಗೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೂ ಇಲ್ಲ. ಜಗತ್ತಿನ ಯಾವುದೇ ಪ್ರಜಾತಂತ್ರ ದೇಶದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿಗೆ ಇಂತಹ ವಿಶೇಷ ಅಧಿಕಾರ ಇಲ್ಲ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಯುಗ ಮುಗಿಯಿತು, ಈಗೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ದರ್ಬಾರ್ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಮೋದಿ-ಶಾ ಜೋಡಿ ದೇಶದ ಪ್ರಾದೇಶಿಕ ಪಕ್ಷಗಳ ಬೆನ್ನೆಲುಬು ಮುರಿದು ಹಾಕಿದ್ದಾರೆ. ಈಗ ಪ್ರಾದೇಶಿಕ ಪಕ್ಷಗಳ ಮುಂದೆ ಎರಡೇ ಆಯ್ಕೆಗಳಿವೆ. ಒಂದು, ಅವು ಎನ್ಡಿಎ ಒಕ್ಕೂಟದ ಭಾಗವಾಗಬೇಕು. ಇಲ್ಲವೇ ಪಕ್ಷ ಎರಡು ಹೋಳಾಗಲು ರೆಡಿಯಾಗಬೇಕು. ಅವುಗಳ ಮುಂದೆ ಮೂರನೆಯ ದಾರಿ ಇಲ್ಲ.
ಬಿಜೆಪಿ ಆಗ ಭ್ರಷ್ಟಾಚಾರ ಹಾಗೂ ನೈತಿಕತೆಯ ಕುರಿತು ದಿನಗಟ್ಟಲೆ ಉಪದೇಶ ಮಾಡುತ್ತಿತ್ತು. ಆದರೆ, ಈಗ ದೇಶದ ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸುತ್ತಿದೆ. ಭ್ರಷ್ಟ ರಾಜಕಾರಣಿಗಳ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಅವರ ಎದೆಯಲ್ಲಿ ನಡುಕ ಹುಟ್ಟಿಸಿ, ಮರುದಿನ ಅವರಾಗಿಯೇ ಬಿಜೆಪಿಗೆ ಓಡೋಡಿ ಬರುವಂತೆ ಮಾಡಲಾಗುತ್ತಿದೆ.
ಈಗ ʻಒಂದು ದೇಶ ಒಂದು ಚುನಾವಣೆʼ ಹಾಗೂ ʻಕ್ಷೇತ್ರ ಮರುವಿಂಗಡಣೆ ಮಸೂದೆʻಯನ್ನು ಮುಂದೆ ತಂದಿದೆ. ಕಳೆದ ಏಪ್ರಿಲ್ನಲ್ಲಿ ಈ ಮಸೂದೆಗಳು ಪಾಸು ಮಾಡಿಸಿಕೊಳ್ಳಲು ಯತ್ನಿಸಿ, ಸದನಗಳಲ್ಲಿ ಸಂಖ್ಯಾಬಲ ಇಲ್ಲದ ಕಾರಣ ಮುಖಭಂಗ ಅನುಭವಿಸಿತ್ತು. ಹೇಗಾದರೂ ಮಾಡಿ ಈ ಎರಡು ಮಸೂದೆಗಳು ಕಾಯಿದೆಯಾಗಿಸಲು ಬೇಟೆಗೆ ಇಳಿದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ 20 ಸಂಸದರು ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದ ಉದ್ಧವ್ ಠಾಕ್ರೆ ಬಣದ 07 ಸಂಸದರು ಬಿಜೆಪಿ ಬಸ್ ಹತ್ತಿಸಲು ಯಶಸ್ವಿಯಾಗಿದೆ. ಇದು ರಾಜಕೀಯವಾಗಿ ದೇಶದ ಗಮನ ಸೆಳೆದಿತ್ತು.
ಪ್ರಧಾನಿ ಮೋದಿ-ಶಾ ಅವರ ಈ ಎಲ್ಲಾ ರಾಜಕೀಯ ಕಾರ್ಯಯೋಜನೆಗಳು ಬಿಜೆಪಿಗೆ ಮತ್ತಷ್ಟು ಬಲ ತುಂಬಬೇಕಾಗಿತ್ತು. ಆದರೆ, ಒಂಟಿಯಾಗಿಸುತ್ತಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ದೇಶದ ಯುವಪೀಳಿಗೆ (ಜೆನ್ ಝೀಗಳು) ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಮೋದಿಯವರ ಹತ್ತು ವರ್ಷದ ಇಮೇಜ್ ಅನ್ನು ಒಂದೇ ದಿನ ಬುಡಮೇಲು ಮಾಡಿದೆ. ಈಗ ದೇಶದ ಸಾಮಾನ್ಯ ಜನರು ಸಹ ಮೋದಿಗೆ ಪ್ರಶ್ನೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಎಡೆಬಿಡದ ಹೋರಾಟಗಳಿಂದಾಗಿ ದೇಶದ ಜೆನ್ ಝೀಗಳು ಅವರನ್ನು ಇಷ್ಟಪಡುತ್ತಿದ್ದಾರೆ. ಇದನ್ನು ಸರಿಯಾಗಿ ಗ್ರಹಿಸಿ, ಬಿಜೆಪಿಯ ಆಪತ್ಕಾಲದ ಮಿತ್ರರಾದ ಚಿರಾಗ್ ಪಾಸ್ವಾನ್, ಜಗಮೋಹನ್ ರೆಡ್ಡಿ ಅವರು ಚುನಾವಣಾ ಆಯೋಗದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎನ್ಡಿಎ ಹಾಗೂ ಇಂಡಿಯಾ ಎರಡೂ ಒಕ್ಕೂಟಗಳಿಂದ ಅಂತರ ಕಾಪಾಡಿಕೊಂಡು ಸ್ವತಂತ್ರ ನಿಲುವು ಹೊಂದಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಆರ್ಜೆಡಿಯ ನವೀನ್ ಪಟ್ನಾಯಕ್, ಬಿಎಸ್ಪಿ ಪಕ್ಷದ ಮಾಯಾವತಿ, ಡಿಎಂಕೆ ಪಕ್ಷದ ಸ್ಟಾಲಿನ್ ಕೂಡ ಚುನಾವಣಾ ಆಯೋಗದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ. ಬಿಜೆಪಿ ಪಕ್ಷದೊಳಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಅಪಸ್ವರ ಎದ್ದಿದೆ. ಇದು ಮೊದಿ-ಶಾಗೆ ಇಕ್ಕಟ್ಟಿಗೆ ಸಿಲುಕಿಸಿದೆ.
ಇದು ಮುಂದೆ ಯಾವ ರೂಪ ಪಡೆಯುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.
ಸ್ಟಿಂಗ್ ಗದ್ದಲದಲ್ಲಿ ಮಂಕಾದ ವಿಧಾನ ಪರಿಷತ್ ಚುನಾವಣೆ

ರಾಜ್ಯದ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರ …ಹೀಗೆ ಒಟ್ಟು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ನಾಡಿದ್ದು 23ರಂದು ಮತದಾನ ಇದೆ. ಆದರೆ, ರಾಜ್ಯದಲ್ಲಿ ಸ್ಟಿಂಗ್ ಗದ್ದಲದಲ್ಲಿ ಚುನಾವಣಾ ಕಣ ರಂಗೇರದೆ ಕಳೆಗುಂದಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ ಎಂಬುದು ಜನಸಾಮಾನ್ಯರ ಕಿವಿಗೆ ಬಿದ್ದಿಲ್ಲ. ಇಂತಹ ಸ್ಥಿತಿಯಲ್ಲಿ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಮತದಾರರ ಮನೆ ಬಾಗಿಲಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.
ಮೂರು ಪಕ್ಷದ ನಾಯಕರಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಯಾರಾದರೂ ಗೆಲ್ಲಲಿ ನಮಗೇನು ಎಂಬಂತೆ ಇದ್ದಾರೆ. ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲವು ಕಡೆ ಮುಖ ತೋರಿಸಿ ಬಂದಿದ್ದಾರೆ. ಘಟಾನುಘಟಿ ನಾಯಕರು ಉತ್ಸಾಹದಿಂದ ಕಣದಲ್ಲಿ ಕಾಲೇ ಇಟ್ಟಿಲ್ಲ.
ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ತಮ್ಮ ಗೆಲುವಿಗಾಗಿ ಕಣದಲ್ಲಿ ಬೆವರು ಸುರಿಸುತ್ತಿದ್ದಾರೆ. ಸ್ಟಿಂಗ್ ಗುಂಗಿನಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಒಟ್ಟು ಮತದಾನದ ಪ್ರಮಾಣ ಎಷ್ಟಾಗಲಿದೆ ಎಂಬುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಯಾರ ಕೊರಳಿಗೆ ಗೆಲುವಿನ ಮಾಲೆ ಬೀಳಲಿದೆ ಎಂಬುದು 27ರಂದು ಗೊತ್ತಾಗುತ್ತದೆ.


