ಈಗ ರಾಜ್ಯದ ಮಾಧ್ಯಮಗಳ, ಸರ್ಕಾರಿ ನೌಕರಿಯ ಕನಸು ಕಟ್ಟಿಕೊಂಡಿರುವ ಯುವಜನತೆಯ ಮತ್ತು ಜನರ ಬಾಯಲ್ಲಿ ಒಂದೇ ಹೆಸರು ಅದು ಬಸವರಾಜ ಕನ್ನಾಳೆ. ಮೊದಲು ಈತನ ಧಿಡೀರ್ ಶ್ರೀಮಂತಿಕೆ ಕಂಡು–ಕೇಳಿ, ಇವನ ಪರಿಚಯಸ್ಥರೇ ಶಾಕ್ ಆಗಿದ್ದರು. ಈಗ ಇಡೀ ರಾಜ್ಯವೇ ಶಾಕ್ ಆಗಿದೆ.
2019 ರಲ್ಲಿ ಈಗಿನ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಬಳಿ ಕೇವಲ 12 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದವನು, ಈಗ ವಿಮಾನದಲ್ಲಿ ಫಾರೆನ್ ಟೂರ್ಗೆ ಹೋಗುತ್ತಿದ್ದಾನೆ. ತನಗೊಂದು-ತಂದೆಗೊಂದು ಐಷಾರಾಮಿ ಕಾರು, ಹತ್ತಾರು ಎಕರೆ ಜಮೀನು, ವಾಣಿಜ್ಯ ಮಳಿಗೆಗಳು, ಬೆಂಗಳೂರು ಮತ್ತು ಬೀದರ್ನಲ್ಲಿ ಭವ್ಯ ಮನೆ, ನಿವೇಶನಗಳು, ನಾಲ್ಕಾರು ಬಸ್ಗಳು, ಹೈಟೆಕ್ ಡೈರಿ ಫಾರ್ಮ್ಹೌಸ್ …..ಹೀಗೆ ಹನುಮಂತನ ಬಾಲದಂತೆ ಈತನ ಶ್ರೀಮಂತಿಕೆಯ ಪಟ್ಟಿ ಉದ್ದವಾಗಿ ಬೆಳೆಯುತ್ತಲೇ ಹೋಗುತ್ತದೆ ವಿನಾ ಅದು ಮುಗಿಯುವುದಿಲ್ಲ.
ಇವನ ಈ ಸಾಹಸವನ್ನು ಮೆಚ್ಚಿ, ಬಿಜೆಪಿಯ ನಾಯಕರು ರಾಜ್ಯಪಾಲರಿಗೆ ಈತನ ಹೆಸರನ್ನು ಶಿಫಾರಸು ಮಾಡಿ, ಇವನನ್ನು ಸಿಂಡಿಕೇಟ್ ಸದಸ್ಯನ್ನಾಗಿ ಮಾಡಿದ್ದಾರೆ. ವಿಶ್ವವಾಣಿಯ ವಿಶ್ವೇಶ್ವರ ಭಟ್ರು ಒಂದು ಹೆಜ್ಜೆ ಮುಂದೆ ಹೋಗಿ ಈತನಿಗೆ ದೂರದ ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 2, 2026 ರಂದು ʼವಿಶ್ವವಾಣಿ GLOBAL ACHIEVERS AWARDʼ ಅನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಸಾನ್ನಿಧ್ಯದಲ್ಲಿ ಪ್ರಧಾನ ಮಾಡಿದ್ದಾರೆ. ಅನೇಕ ಕಡೆ ಸನ್ಮಾನಗಳಿಗೆ ಪಾತ್ರನಾಗಿದ್ದಾನೆ; ಕೆಲ ಮಠಾಧೀಶರ ಹೊಗಳಿಕೆಗೂ ಪಾತ್ರನಾಗಿದ್ದಾನೆ.
ಈತ ಇದೆಲ್ಲಾ ಕಷ್ಟಪಟ್ಟು ದುಡಿದು ಸಂಪಾದಿಸಿದ್ದಲ್ಲ; ಕರ್ನಾಟಕ ಲೋಕಸೇವಾ ಆಯೋಗಕ್ಕೆ ನುಗ್ಗಿ, ಆಯೋಗದ ಪರೀಕ್ಷಾ ನಿಯಂತ್ರಕ, ಅಧ್ಯಕ್ಷರ ಜತೆಗೆ ಸ್ನೇಹ ಬೆಳೆಸಿ ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು, ಅವರ ಬದುಕನ್ನು ಕತ್ತಲೆಯ ಕೂಪಕ್ಕೆ ತಳ್ಳಿ ಸಂಪಾದಿಸಿದ್ದು. ಇವನ ಈ ಘನಂದಾರಿ ಕೆಲಸದ ಪರಿಣಾಮದಿಂದಾಗಿ ಯಾವುದಾದರೊಂದು ಸರ್ಕಾರಿ ನೌಕರಿ ಪಡೆಯಲು ಹತ್ತಾರು ವರ್ಷಗಳ ಕಾಲ ಮನೆಮಠ, ತಂದೆತಾಯಿ, ಒಡಹುಟ್ಟಿದವರನ್ನು ಬಿಟ್ಟು ಪಟ್ಟಣಕ್ಕೆ ಸೇರಿ, ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದ ಅದೆಷ್ಟೋ ವಿದ್ಯಾರ್ಥಿಗಳು ನೌಕರಿ ಸಿಗದಿದ್ದಕ್ಕಾಗಿ ಇಂದು ಡಿಪ್ರೆಶನ್ಗೆ ಒಳಗಾಗಿದ್ದಾರೆ. ಎಷ್ಟೋ ಜನರು ಮದುವೆಯ ವಯಸ್ಸು ದಾಟಿದರೂ, ಇನ್ನೂ ಮದುವೆಯಾಗಿಲ್ಲ. ತಮ್ಮ ಮಕ್ಕಳ ಈ ಸ್ಥಿತಿ ಕಂಡು, ಅನೇಕ ಪಾಲಕರು ದಿನಾಲೂ ಒಳಗೊಳಗೆ ರೋಧಿಸುತ್ತಿದ್ದಾರೆ. ಕಣ್ಣೀರಿಡುತ್ತಿದ್ದಾರೆ.
ಆದಾಗ್ಯೂ ಇದಾವುದೂ ರಾಜಕಾರಣಿಗಳ ಕಣ್ಣಿಗೆ ಕಾಣುತ್ತಿಲ್ಲ. ಹೃದಯಕ್ಕೆ ತಟ್ಟುತ್ತಿಲ್ಲ. ತಾವು ಮಾತ್ರ ಯಥಾಪ್ರಕಾರ ಕೆಸರೆರಚಾಟದಲ್ಲಿ ತೊಡಗಿ, ಆರೋಪ – ಪ್ರತ್ಯಾರೋಪದಲ್ಲಿ ಮಗ್ನರಾಗಿದ್ದಾರೆ. ಆಡಳಿತ ಪಕ್ಷದವರು ಇವನು ʼನಿಮ್ಮವನೆಂದುʼ, ವಿರೋಧ ಪಕ್ಷದವರು ʼಇವನು ನಮ್ಮವನಲ್ಲ – ನಮ್ಮವನಲ್ಲʼ ಎಂದು ಹೇಳಿ ಮುಗುಮ್ಮಾಗಿದ್ದಾರೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸೋಣ, ಈಗಲಾದರೂ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರೋಣವೆಂದು ಅವರೂ ಹೇಳುತ್ತಿಲ್ಲ, ಇವರೂ ಕೇಳುತ್ತಿಲ್ಲ. ಏಕೆಂದರೆ ಇವರು ರಾಜಕಾರಣಿಗಳು. ಇವರು ಹೀಗೇ.
ಈ ಮಧ್ಯೆ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ರು ಮಾತ್ರ ನಾಪತ್ತೆಯಾದಂತಿದೆ. ಈವರೆಗೂ ಅವರೆಲ್ಲೂ ಈ ವಿಷಯದ ಕುರಿತು ತುಟಿ ಬಿಚ್ಚಿಲ್ಲ. ಅವರ ಪ್ರತಿಕ್ರಿಯೆಗಾಗಿ ಇಡೀ ನಾಡೇ ಅವರ ಕಡೆ ನೋಡುತ್ತಿದೆ. ಏಕೆಂದರೆ, ಕನ್ನಾಳೆ ಜೊತೆಗೆ ಅಶ್ವಥ್ ನಾರಾಯಣರು ತೀರಾ ತೀರಾ ಆಪ್ತರಾಗಿದ್ದರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರಿಬ್ಬರ ನೂರಾರು ಪಟಗಳೇ ಹೇಳುತ್ತಿವೆ. ಕನ್ನಾಳೆ ತನ್ನ ಮಗನ ಹೆಸರನ್ನು ʼಅಶ್ವಥ್ ನಾರಾಯಣ್ʼ ಎಂದು ನಾಮಕರಣ ಮಾಡಿದ್ದಾನೆ. ಇಂದು ʼಅಶ್ವಥ್ ನಾರಾಯಣ್ ಕನ್ನಾಳೆ ಟ್ರಾವೆಲ್ಸ್ʼ ಎಂಬ ಹೆಸರಿನ ಬಸ್ಗಳು ರಸ್ತೆಯ ಮೇಲೆ ಓಡಾಡುತ್ತಿವೆ. ಇವೆಲ್ಲವೂ ಏನು ಹೇಳುತ್ತಿವೆ?
ಈ ಕನ್ನಾಳೆ ಅಶ್ವಥ್ ನಾರಾಯಣ ಅವರಿಗೆ ಆಪ್ತರಾಗುವ ಮುಂಚೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಆರು ತಿಂಗಳು ತಂಗಿ, ಅಲ್ಲಿನ ಸ್ವಾಮೀಜಿಗಳನ್ನು ತಬ್ಬಿಕೊಳ್ಳುವಷ್ಟು ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ನಂತರ ವಿಜಯಪುರದ ಸಿದ್ದೇಶ್ವರ ಸ್ವಾಮಿಗಳ ಪ್ರೀತಿಗೆ ಪಾತ್ರರಾಗಿ, ಅವರ ಮೂಲಕ ಯಡಿಯೂರಪ್ಪ ಅಂಗಳಕ್ಕೆ ಕಾಲಿಟ್ಟಿದ್ದ. ಆದರೆ, ಯಡಿಯೂರಪ್ಪ ಇವನ ಚಾಲಾಕಿತನ ಕಂಡು, ಇವನನ್ನು ಸನಿಹಕ್ಕೆ ಬಿಟ್ಟುಕೊಳ್ಳಲಿಲ್ಲ. ಆಮೇಲೆ ಇನ್ನೂ ನಾಲ್ಕಾರು ಬಿಜೆಪಿಯ ರಾಜಕಾರಣಿಗಳ ಬಾಗಿಲು ತಟ್ಟಿದರೂ, ಅವರೂ ಇವನನ್ನು ಸನಿಹಕ್ಕೆ ಬರಲು ಬಿಡಲಿಲ್ಲ.
ಇವನ ಕುರಿತು ಕೆದಕಿದಷ್ಟೂ ಹೊಸ ಹೊಸ ರಾಡಿ ಹೊರಬರುತ್ತದೆ.
ಮೋದಿ-ಶಾಗೆ ಮುಳುವಾದ ಚುನಾವಣಾ ಆಯೋಗ

ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ನೂರು ವರ್ಷಗಳ ಕಾಲ ನಾವು ಅಧಿಕಾರದಲ್ಲಿರಲು ಏನು ಮಾಡಬೇಕು ಎಂಬ ಆಲೋಚನೆಯಲ್ಲಿ ಮುಳುಗಿದೆ. ಅದರ ಭಾಗವಾಗಿಯೇ 2023ರಲ್ಲಿ ʻಚುನಾವಣಾ ಆಯೋಗದ ಮುಖ್ಯ ಆಯುಕ್ತರ ಹಾಗೂ ಇತರ ಆಯುಕ್ತರ ನೇಮಕಾತಿ ಕಾಯಿದೆʼ ಜಾರಿಗೆ ಬಂದಿದೆ. ದೇಶದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಧೀಶರಿಗಾಗಲಿ, ರಾಷ್ಟ್ರಪತಿಗಳಿಗಾಗಲಿ ಅಥವಾ ಸ್ವತಃ ಪ್ರಧಾನ ಮಂತ್ರಿಗಳಿಗೆ ಇಲ್ಲದ ವಿಶೇಷ ಅಧಿಕಾರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮೋದಿ-ಶಾ ದಯಾಪಾಲಿಸಿದ್ದಾರೆ. ಈಗ ಮುಖ್ಯ ಆಯುಕ್ತರನ್ನು ತೆಗೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೂ ಇಲ್ಲ. ಜಗತ್ತಿನ ಯಾವುದೇ ಪ್ರಜಾತಂತ್ರ ದೇಶದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿಗೆ ಇಂತಹ ವಿಶೇಷ ಅಧಿಕಾರ ಇಲ್ಲ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಯುಗ ಮುಗಿಯಿತು, ಈಗೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ದರ್ಬಾರ್ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಮೋದಿ-ಶಾ ಜೋಡಿ ದೇಶದ ಪ್ರಾದೇಶಿಕ ಪಕ್ಷಗಳ ಬೆನ್ನೆಲುಬು ಮುರಿದು ಹಾಕಿದ್ದಾರೆ. ಈಗ ಪ್ರಾದೇಶಿಕ ಪಕ್ಷಗಳ ಮುಂದೆ ಎರಡೇ ಆಯ್ಕೆಗಳಿವೆ. ಒಂದು, ಅವು ಎನ್ಡಿಎ ಒಕ್ಕೂಟದ ಭಾಗವಾಗಬೇಕು. ಇಲ್ಲವೇ ಪಕ್ಷ ಎರಡು ಹೋಳಾಗಲು ರೆಡಿಯಾಗಬೇಕು. ಅವುಗಳ ಮುಂದೆ ಮೂರನೆಯ ದಾರಿ ಇಲ್ಲ.
ಬಿಜೆಪಿ ಆಗ ಭ್ರಷ್ಟಾಚಾರ ಹಾಗೂ ನೈತಿಕತೆಯ ಕುರಿತು ದಿನಗಟ್ಟಲೆ ಉಪದೇಶ ಮಾಡುತ್ತಿತ್ತು. ಆದರೆ, ಈಗ ದೇಶದ ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸುತ್ತಿದೆ. ಭ್ರಷ್ಟ ರಾಜಕಾರಣಿಗಳ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಅವರ ಎದೆಯಲ್ಲಿ ನಡುಕ ಹುಟ್ಟಿಸಿ, ಮರುದಿನ ಅವರಾಗಿಯೇ ಬಿಜೆಪಿಗೆ ಓಡೋಡಿ ಬರುವಂತೆ ಮಾಡಲಾಗುತ್ತಿದೆ.
ಈಗ ʻಒಂದು ದೇಶ ಒಂದು ಚುನಾವಣೆʼ ಹಾಗೂ ʻಕ್ಷೇತ್ರ ಮರುವಿಂಗಡಣೆ ಮಸೂದೆʻಯನ್ನು ಮುಂದೆ ತಂದಿದೆ. ಕಳೆದ ಏಪ್ರಿಲ್ನಲ್ಲಿ ಈ ಮಸೂದೆಗಳು ಪಾಸು ಮಾಡಿಸಿಕೊಳ್ಳಲು ಯತ್ನಿಸಿ, ಸದನಗಳಲ್ಲಿ ಸಂಖ್ಯಾಬಲ ಇಲ್ಲದ ಕಾರಣ ಮುಖಭಂಗ ಅನುಭವಿಸಿತ್ತು. ಹೇಗಾದರೂ ಮಾಡಿ ಈ ಎರಡು ಮಸೂದೆಗಳು ಕಾಯಿದೆಯಾಗಿಸಲು ಬೇಟೆಗೆ ಇಳಿದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ 20 ಸಂಸದರು ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದ ಉದ್ಧವ್ ಠಾಕ್ರೆ ಬಣದ 07 ಸಂಸದರು ಬಿಜೆಪಿ ಬಸ್ ಹತ್ತಿಸಲು ಯಶಸ್ವಿಯಾಗಿದೆ. ಇದು ರಾಜಕೀಯವಾಗಿ ದೇಶದ ಗಮನ ಸೆಳೆದಿತ್ತು.
ಪ್ರಧಾನಿ ಮೋದಿ-ಶಾ ಅವರ ಈ ಎಲ್ಲಾ ರಾಜಕೀಯ ಕಾರ್ಯಯೋಜನೆಗಳು ಬಿಜೆಪಿಗೆ ಮತ್ತಷ್ಟು ಬಲ ತುಂಬಬೇಕಾಗಿತ್ತು. ಆದರೆ, ಒಂಟಿಯಾಗಿಸುತ್ತಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ದೇಶದ ಯುವಪೀಳಿಗೆ (ಜೆನ್ ಝೀಗಳು) ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಮೋದಿಯವರ ಹತ್ತು ವರ್ಷದ ಇಮೇಜ್ ಅನ್ನು ಒಂದೇ ದಿನ ಬುಡಮೇಲು ಮಾಡಿದೆ. ಈಗ ದೇಶದ ಸಾಮಾನ್ಯ ಜನರು ಸಹ ಮೋದಿಗೆ ಪ್ರಶ್ನೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಎಡೆಬಿಡದ ಹೋರಾಟಗಳಿಂದಾಗಿ ದೇಶದ ಜೆನ್ ಝೀಗಳು ಅವರನ್ನು ಇಷ್ಟಪಡುತ್ತಿದ್ದಾರೆ. ಇದನ್ನು ಸರಿಯಾಗಿ ಗ್ರಹಿಸಿ, ಬಿಜೆಪಿಯ ಆಪತ್ಕಾಲದ ಮಿತ್ರರಾದ ಚಿರಾಗ್ ಪಾಸ್ವಾನ್, ಜಗಮೋಹನ್ ರೆಡ್ಡಿ ಅವರು ಚುನಾವಣಾ ಆಯೋಗದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎನ್ಡಿಎ ಹಾಗೂ ಇಂಡಿಯಾ ಎರಡೂ ಒಕ್ಕೂಟಗಳಿಂದ ಅಂತರ ಕಾಪಾಡಿಕೊಂಡು ಸ್ವತಂತ್ರ ನಿಲುವು ಹೊಂದಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಆರ್ಜೆಡಿಯ ನವೀನ್ ಪಟ್ನಾಯಕ್, ಬಿಎಸ್ಪಿ ಪಕ್ಷದ ಮಾಯಾವತಿ, ಡಿಎಂಕೆ ಪಕ್ಷದ ಸ್ಟಾಲಿನ್ ಕೂಡ ಚುನಾವಣಾ ಆಯೋಗದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ. ಬಿಜೆಪಿ ಪಕ್ಷದೊಳಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಅಪಸ್ವರ ಎದ್ದಿದೆ. ಇದು ಮೊದಿ-ಶಾಗೆ ಇಕ್ಕಟ್ಟಿಗೆ ಸಿಲುಕಿಸಿದೆ.
ಇದು ಮುಂದೆ ಯಾವ ರೂಪ ಪಡೆಯುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.
ಸ್ಟಿಂಗ್ ಗದ್ದಲದಲ್ಲಿ ಮಂಕಾದ ವಿಧಾನ ಪರಿಷತ್ ಚುನಾವಣೆ

ರಾಜ್ಯದ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರ …ಹೀಗೆ ಒಟ್ಟು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ನಾಡಿದ್ದು 23ರಂದು ಮತದಾನ ಇದೆ. ಆದರೆ, ರಾಜ್ಯದಲ್ಲಿ ಸ್ಟಿಂಗ್ ಗದ್ದಲದಲ್ಲಿ ಚುನಾವಣಾ ಕಣ ರಂಗೇರದೆ ಕಳೆಗುಂದಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ ಎಂಬುದು ಜನಸಾಮಾನ್ಯರ ಕಿವಿಗೆ ಬಿದ್ದಿಲ್ಲ. ಇಂತಹ ಸ್ಥಿತಿಯಲ್ಲಿ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಮತದಾರರ ಮನೆ ಬಾಗಿಲಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.
ಮೂರು ಪಕ್ಷದ ನಾಯಕರಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಯಾರಾದರೂ ಗೆಲ್ಲಲಿ ನಮಗೇನು ಎಂಬಂತೆ ಇದ್ದಾರೆ. ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲವು ಕಡೆ ಮುಖ ತೋರಿಸಿ ಬಂದಿದ್ದಾರೆ. ಘಟಾನುಘಟಿ ನಾಯಕರು ಉತ್ಸಾಹದಿಂದ ಕಣದಲ್ಲಿ ಕಾಲೇ ಇಟ್ಟಿಲ್ಲ.
ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ತಮ್ಮ ಗೆಲುವಿಗಾಗಿ ಕಣದಲ್ಲಿ ಬೆವರು ಸುರಿಸುತ್ತಿದ್ದಾರೆ. ಸ್ಟಿಂಗ್ ಗುಂಗಿನಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಒಟ್ಟು ಮತದಾನದ ಪ್ರಮಾಣ ಎಷ್ಟಾಗಲಿದೆ ಎಂಬುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಯಾರ ಕೊರಳಿಗೆ ಗೆಲುವಿನ ಮಾಲೆ ಬೀಳಲಿದೆ ಎಂಬುದು 27ರಂದು ಗೊತ್ತಾಗುತ್ತದೆ.
ಹೆಬ್ಬಾಳ್ಕರ್ಗೆ ಸಚಿವ ಸ್ಥಾನ: ಡಿಕೆ ಪಟ್ಟು, ಸಿದ್ದು ವಿರೋಧ

ಡಿ.ಕೆ. ಶಿವಕುಮಾರ್ ಸಿಎಂ ಆಗಿ ನಾಲ್ಕು ತಿಂಗಳಾಯಿತು. ಅವರ ಸರ್ಕಾರದಲ್ಲಿ ಒಬ್ಬರೂ ಮಹಿಳಾ ಸಚಿವರಿಲ್ಲ. ಇದನ್ನು ಪ್ರತಿಭಟಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಚಳಿಗಾಲ ಅಧಿವೇಶನ ಆರಂಭವಾಗುವ ಮುನ್ನ ಸಂಪುಟ ಭರ್ತಿ ಮಾಡುವ ಸಂಭವ ಇದೆ.
ಖಾಲಿ ಇರುವ ಎರಡು ಸಚಿವ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ಅದರಲ್ಲೂ ಮಹಿಳಾ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಕೆಶಿ ತಮ್ಮ ಪ್ರಬಲ ಬೆಂಬಲಿಗರಾದ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರ್ಚಿ ಮೇಲೆ ಕೂರಿಸಲು ಉತ್ಸುಕರಾಗಿದ್ದರೆ, ಸಿದ್ದರಾಮಯ್ಯ ಇದನ್ನು ವಿರೋಧಿಸಿ ಅನ್ನಪೂರ್ಣ ತುಕಾರಾಂ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಡಿಕೆ ಬಣ ಹಾಗೂ ಸಿದ್ದು ಬಣದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ವಾರ್ ಆರಂಭವಾಗಿದೆ.
ಏತನ್ಮಧ್ಯೆ ಗಾಯತ್ರಿ ಶಾಂತೇಗೌಡ್, ನಯನಾ ಮೋಟಮ್ಮ, ರೂಪಕಲಾ ಶಶಿಧರ್, ಆರತಿ ಕೃಷ್ಣ … ಹೀಗೆ ಹಲವರು ಅರ್ಜಿ ಹಿಡಿದುಕೊಂಡು ದೆಹಲಿ ವಿಮಾನ ಹತ್ತಿದ್ದಾರೆ. ಹೈಕಮಾಂಡ್ ಅಳೆದುತೂಗಿ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.
ಸಚಿವ ಸಂಪುಟದಲ್ಲಿ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂ ಪರಮಾಧಿಕಾರ. ಆದರೆ, ʻಹೈಕಮಾಂಡ್ ಸಂಸ್ಕೃತಿʼ ಇಂದಾಗಿ ರಾಜ್ಯದಲ್ಲಿ ಯಾವುದೇ ಪಕ್ಷ (ಬಿಜೆಪಿ ಹಾಗೂ ಕಾಂಗ್ರೆಸ್) ಅಧಿಕಾರಕ್ಕೆ ಬಂದರೂ ಅವರ ದೆಹಲಿ ದೊರೆಗಳೇ ಸಚಿವರನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಪರವಾನಗಿ ಇಲ್ಲದೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಗಮ ಮಂಡಳಿಯ ಸದಸ್ಯರನ್ನೂ ಆಯ್ಕೆ ಮಾಡುವ ಸ್ವಾತಂತ್ರ್ಯ ಇಲ್ಲ. ಈ ರಾಜಕೀಯ ಗುಲಾಮಗಿರಿ ತೊಲಗಲು ಇನ್ನೆಷ್ಟು ವರ್ಷ ಬೇಕೋ?
ಸ್ಟಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಮೌನ ಏಕೆ?

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯ ಸವಾಲು ಸ್ವೀಕರಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಲವತ್ತು ವರ್ಷ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅವರದ್ದೇ ಗರ್ಜನೆ ಕೇಳಿಸುತ್ತಿತ್ತು. ಎಂಟು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಚಿಟಿಕೆ ಹೊಡೆದಂತೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು.
ಆದರೆ, ಈಗ ಅವರಲ್ಲಿ ಆ ಖದರ್ ಕಾಣುತ್ತಿಲ್ಲ. ಸಿಎಂ ಕುರ್ಚಿಯಿಂದ ತೀರಾ ಅವಮಾನಕರವಾಗಿ ಅವರನ್ನು ಕೆಳಗಿಳಿಸಿದಾಗಲೂ ಅವರು ಪ್ರತಿರೋಧಿಸಿಲ್ಲ. ಕುಟುಕು ಕಾರ್ಯಾಚರಣೆ ಮೂಲಕ ಅವರ ವರ್ಚಸ್ಸು ಹಾಳು ಮಾಡುವ ಹಾಗೂ ಮುಖಕ್ಕೆ ಮಸಿ ಬಳಿಯುವ ವಿದ್ಯಮಾನಗಳು ನಡೆಯುತ್ತಿವೆ. ಆದಾಗ್ಯೂ ಕೇವಲ ದೂರು ಸಲ್ಲಿಸಿ ಮೌನಕ್ಕೆ ಜಾರಿದ್ದಾರೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.
ಮೊದಲು ಅವರನ್ನು ಯಾರಾದರೂ ಕೆರಳಿಸಿದರೆ ಅಥವಾ ಅವರ ಬಗ್ಗೆ ಲಘುವಾಗಿ ಮಾತಾಡಿದರೆ ಅಂಥವರನ್ನು ಅವರು ನೇರಾನೇರ ತರಾಟೆಗೆ ತೆಗೆದೊಳ್ಳುತ್ತಿದ್ದರು. ಈಗ ಅವರ ರಾಜಕೀಯ ಬದುಕಿಗೆ ಫುಲ್ಸ್ಟಾಪ್ ಇಡಲು ಷಡ್ಯಂತ್ರ ನಡೆಯುತ್ತಿದೆ. ಆದರೂ ಅವರು ಗಾಢ ಮೌನಕ್ಕೆ ಜಾರಿದ್ದಾರೆ. ಈ ಷಡ್ಯಂತ್ರದಲ್ಲಿ ವಿರೋಧ ಪಕ್ಷಗಳ ಕೈವಾಡ ಇದ್ದಿದ್ದರೆ ಅವರು ಯಾವಾಗಲೋ ಸಿಡಿದೆಳುತ್ತಿದ್ದರು. ಆದರೆ, ಇದು ಸ್ವಪಕ್ಷೀಯರ ಆಟ. ಹಾಗಾಗಿ ಅವರು ಅಸಹಾಯಕರಾಗಿ ಮೌನವಾಗಿರಬಹುದು ಎಂದು ರಾಜಕೀಯ ಪಡಸಾಲೆಗಳಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅವರ ರಕ್ತವೇಕೆ ಕುದಿಯುತ್ತಿಲ್ಲ ಎಂಬುದು ಚಿದಂಬರ ರಹಸ್ಯವಾಗಿದೆ.
ಮಾರುವೇಷದ ಕಾರ್ಯಾಚರಣೆ ʻಚಾಂಪಿಯನ್ʼ ಹಿಂದೆ ಯಾರಿದ್ದಾರೆ?

ಮಾರುವೇಷದ ಕಾರ್ಯಚರಣೆ ಈಗ ರಾಜ್ಯದ ಪ್ರತಿ ಮನೆಯ ಮಾತಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಕೇವಲ ನಾಲ್ಕು ತಿಂಗಳಾಯಿತು. ಅವರು ತಮ್ಮ ಮೊದಲಿನ ಖದರ್ ಕಳೆದುಕೊಂಡು ಮೈಸೂರು ಕಡೆಗೆ ಹೆಚ್ಚೆ ಹಾಕಿದ್ದಾರೆ. ಈಗ ಅವರ ವಿರುದ್ಧವೇ ಷಡ್ಯಂತ್ರ ನಡಿದಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ.
ಪುರಾಣ ಕಾಲದಲ್ಲಿಯೂ ಸ್ಟಿಂಗ್ ನಡೆಯುತ್ತಿದ್ದವು. ಆಗ ವಿಷಕನ್ನೆಯರು ಇದ್ದರು. ಅವರ ಮೂಲಕ ನಡೆಸುತ್ತಿದ್ದರು. ಈ ಆಧುನಿಕ ಕಾಲದಲ್ಲಿ ರಾಜಕಾರಣದಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಯುವುದು ಎರಡೇ ಕಾರಣಕ್ಕಾಗಿ. ಒಂದು, ಅಧಿಕಾರ ಪಡೆಯಲು. ಇಲ್ಲವೇ ಪಡೆದ ಅಧಿಕಾರ ಉಳಿಸಿಕೊಳ್ಳಲು. ಕೆಲವೊಮ್ಮೆ ತಮಗಾಗದವರನ್ನು ರಾಜಕೀಯವಾಗಿ ಮುಗಿಸಲು ಅವರ ವಿರುದ್ಧ ಮಾಡಿಸುತ್ತಾರೆ.
ಸಿದ್ದರಾಮಯ್ಯನವರ ವಿರುದ್ಧ ಮಾರುವೇಷದ ಕಾರ್ಯಾಚರಣೆ ಯಾರು ನಡೆಸಿದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಆದಾಗ್ಯೂ ಸರ್ಕಾರ ಆ ವ್ಯಕ್ತಿಯನ್ನು ಬಂಧಿಸುವುದು ದೂರವೇ ಉಳಿಯಿತು, ವಿಚಾರಣೆ ನಡೆಸಲು ಅವನಿಗೆ ಒಂದು ನೋಟಿಸ್ ಸಹ ಇದುವರೆಗೆ ನೀಡದಿರುವುದು ಕುತೂಹಲ ಹುಟ್ಟಿಸಿದೆ. ಸಾಕ್ಷಾತ್ ಅವನೇ ಬಹಿರಂಗವಾಗಿ ʻನಾನೇ ಮಾಡಿದ್ದು, ಏನಿವಾಗʼ? ʻಏನು ಮಾಡುತ್ತಿಯಾʼ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಮಕಿ ಹಾಕುತ್ತಿದ್ದಾನೆ. ಅವನ ಈ ಧೈರ್ಯಕ್ಕೆ ಕಾರಣವೇನು? ಅವನ ಬೆನ್ನು ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆ ರಾಜ್ಯದ ಪ್ರತಿಯೊಬ್ಬರಿಗೂ ಕಾಡುತ್ತಿದೆ.
ಈ ಮಾರುವೇಷದ ಕಾರ್ಯಚರಣೆಯ ʻಚಾಂಪಿಯನ್ʼ ಎಂಬ ಭಸ್ಮಾಸುರನನ್ನು ಹುಟ್ಟುಹಾಕಿದ್ದು ಯಾರು? ಅವನನ್ನು ಸಾಕುತ್ತಿರುವವರು ಯಾರು? ಸರ್ಕಾರ ಏಕೆ ಅವನ ವಿಚಾರದಲ್ಲಿ ಮೌನಕ್ಕೆ ಜಾರಿದೆ? ಎಂಬ ಪ್ರಶ್ನೆಗಳು ತಲೆ ತಿನ್ನುತ್ತಿವೆ. ಈ ಭಸ್ಮಾಸುರ ತನ್ನ ಸ್ವಭಾವಕ್ಕನುಗುಣವಾಗಿ ತನಗೆ ಹುಟ್ಟಿಸಿದವರ ತಲೆಯ ಮೇಲೆ ಕೈ ಇಡದೆ ಇರುತ್ತಾನೆಯೆ?
ʻಸ್ಟಿಂಗ್ ಚಾಂಪಿಯನ್ʼ ಇದು ತಮ್ಮ ಬುಡಕ್ಕೆ ಬರುತ್ತಿರುವುದು ಗಮನಿಸಿ, ಒಂದು ವಾರದ ನಂತರ ಪರದೆ ಮುಂದೆ ಬಂದು ಸಿದ್ದರಾಮಯ್ಯನವರ ಒಳಿತಿಗಾಗಿ ನಾನೇ ಸ್ಟಿಂಗ್ ಮಾಡಿದ್ದೇನೆ, ಅವರು ನನಗೆ ತಂದೆಯ ಸಮಾನ, ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಬೊಗಳೆ ಮಾತಾಡಿ, ತಿಪ್ಪೆ ಸಾರಿಸಲು ಯತ್ನಿಸಿದ್ದಾನೆ.
ಅವನ ವೀರಾವೇಷದ ಮಾತುಗಳು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸ್ಟಿಂಗ್ ಅನ್ನು ಒಳಿತಿಗಾಗಿ ಮಾಡಿದ್ದಾನೋ ಅಥವಾ ಕೆಡುಕಿಗಾಗಿ ಮಾಡಿದ್ದಾನೋ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಅದಕ್ಕೂ ಮೊದಲು ಸ್ಟಿಂಗ್ ವಿಡಿಯೊ, ಸ್ವಿಂಗ್ ಮಾಡಿದವನ ಸ್ವತ್ತು. ಆ ವಿಡಿಯೊ ಹಲವರ ಕೈಗೆ ತಲುಪಿದ್ದು ಹೇಗೆ? ಯಾರು ತಲುಪಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಇಡೀ ರಾಜ್ಯ ಕಾಯುತ್ತಿದೆ. ವಿಡಿಯೊ ಕಳುವಾಗಿದೆ ಎಂದು ಸಮಜಾಯಿಷಿ ನೀಡಬಹುದು. ಕಳುವಾಗಿದ್ದರೆ ದೂರು ಏಕೆ ನೀಡಿಲ್ಲ? ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಮಾರುವೇಷದ ಕಾರ್ಯಾಚರಣೆಯ ವಿಷಯದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ. ದಿನಬೆಳಗಾದರೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮಾಧ್ಯಮದ ಮುಸುಕು ಹಾಕಿಕೊಂಡಿರುವ ರಾಕೇಶ್ ಶೆಟ್ಟಿಯನ್ನು ಅರೆಸ್ಟ್ ಮಾಡಿಸಲು ಬೀದಿಗಿಳಿದಿದ್ದಾರೆ. ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಲೂ ಆಗದ, ಸ್ವೀಕರಿಸಲೂ ಆಗದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ನೇತೃತ್ವದ ಸರ್ಕಾರ ಸಿಲುಕಿದೆ.
ಡಿ.ಕೆ. ಶಿವಕುಮಾರ್ ಈ ವಿಷಯದಲ್ಲಿ ಮೇಲುದನಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಹಾಗೂ ʼಕಾಲವೇ ಉತ್ತರಿಸುತ್ತದೆʼ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಕುಮಾರಸ್ವಾಮಿ ಆರೋಪಗಳಿಗೆ ಬಲ ತಂದಿದೆ. ಸಂಘಪರಿವಾರದ ವಿರುದ್ಧ ಧೈರ್ಯವಾಗಿ ಮಾತಾಡುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಜೋರಾಗಿ ಮಾತಾಡುತ್ತಿಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರು ಅದೆಲ್ಲೋ ಕಳೆದುಹೋಗಿದ್ದಾರೆ.
ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿದರೆ ಪಕ್ಷಾತೀತವಾಗಿ ಈ ವಿಷಯದ ಕುರಿತು ಬಹಿರಂಗವಾಗಿ ಮಾತಾಡಲು ಬಹುತೇಕ ರಾಜಕಾರಣಿಗಳು ಭಯ ಪಡುತ್ತಿದ್ದಾರೆ. ಅವರ ಈ ಭಯಕ್ಕೆ ಕಾರಣವೇನಿರಬಹುದು? ಈ ಸ್ಟಿಂಗ್ ಚಾಂಪಿಯನ್ನ ಕಪಾಟಿನಲ್ಲಿ ಇನ್ನೂ ಯಾರ್ಯಾರ ವಿಡಿಯೊ ಇವೆಯೋ ಅವನ ಭಗವಂತನೇ ಬಲ್ಲ.
ಸ್ಟಿಂಗ್ ಚಾಂಪಿಯನ್ ಹಿಂದೆ ಯಾರಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಈ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ, ಈ ವಿಚಾರದಲ್ಲಿ ರಾಜ್ಯದ ಸಿಎಂ ಹಾಗೂ ಸರ್ಕಾರವೇ ಆರೋಪಿ ಸ್ಥಾನದಲ್ಲಿ ನಿಂತಿದೆ. ಸರ್ಕಾರದ ಅಡಿಯಲ್ಲಿರುವ ಪೊಲೀಸರು ಈ ಮಾರುವೇಷದ ಕಾರ್ಯಾಚರಣೆಯ ಚಾಂಪಿಯನ್ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಸಾಧ್ಯವೇ?


