ದ ಪಾಲಿಟಿಕ್

ಪರ್ಯಾಯ ರಾಜಕಾರಣ : ಎಲ್.ಹನುಮಂತಯ್ಯ

ದ ಪಾಲಿಟಿಕ್

ದ ಪಾಲಿಟಿಕ್

ರಾಜಕಾರಣದ ಇತಿಹಾಸ ನೋಡಿದರೆ ಮೂರು ಮಜಲುಗಳನ್ನು ಕಾಣುತ್ತೇವೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯನಂತರ ಮತ್ತು ಆಧುನಿಕ ಭಾರತ. ಸ್ವಾತಂತ್ರ್ಯಪೂರ್ವದ ರಾಜಕಾರಣದ ಉದ್ದೇಶವೇ ಬ್ರಿಟೀಷರಿಂದ ಬಿಡುಗಡೆ ಪಡೆದು ಭಾರತ ಸ್ವತಂತ್ರ ದೇಶವಾಗಬೇಕಾಗಿತ್ತು. ನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದು ಗೂಡಿಸುವುದು ಮತ್ತು ಜರ್ಜರಿತವಾಗಿದ್ದ ದೇಶವನ್ನು ಕಟ್ಟುವ ಕೆಲಸ ಮಾಡುವದಾಗಿತ್ತು. ದೇಶದಲ್ಲಿ ಕೈಗಾರಿಕ ಕ್ರಾಂತಿ ಮತ್ತು ಶಿಕ್ಷಣ, ಆಹಾರ ಸ್ವಾವಲಂಬನೆ ಬೆಳೆಸುವದಾಗಿತ್ತು. ಈಗ ಬೆಳೆದಿರುವ ದೇಶದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವುದಾಗಬೇಕು.

ಪರ್ಯಾಯವೆಂಬುದರ ಅರ್ಥ ಇಂದಿಗೆ ಸಂವಿಧಾನದಲ್ಲಿರುವಂತೆ ಸಮಾಜವಾದಿ ಸ್ವಾಯತ್ತ ರಾಷ್ಟ್ರವೋ, ಹಿಂದೂ ರಾಷ್ಟ್ರವೋ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಸಂವಿಧಾನಕ್ಕೆ ತದನಂತರ ಸೇರಿದ ಸಮಾಜವಾದಿ ರಾಷ್ಟ್ರ ನಿರ್ಮಾಣ ನಮ್ಮೇಲ್ಲರ ಗುರಿಯಾಗಬೇಕು. ಇದರ ಜೊತೆಗೆ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಕೆಲವು ಪಕ್ಷಗಳು, ಜನರನ್ನ ಒಳಗೊಳ್ಳುವಿಕೆಯೇ ನೀಜವಾದ ಅಭಿವೃದ್ಧಿಯೋ ಅಥವ ಕೆಲವರ ಆಸ್ತಿ ಬೆಳೆವಣಗೆಯೇ ಅಭಿವೃದ್ಧಿಯೋ ಎಂಬುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಸಮಾಜವಾದಿ ರಾಷ್ಟ್ರ ಕಟ್ಟುವುದೇ ಪರ್ಯಾಯ ರಾಜಕಾರಣದ ಮೆಟ್ಟಿಲಾಗಬೇಕೆಂಬುವುದು ನನ್ನ ಬಯಕೆ. ದೇಶದ ಪ್ರತಿ ಪ್ರಜೆಯ ಸಮಾನ ಹಕ್ಕುಗಳನ್ನು, ಕರ್ತವ್ಯಗಳನ್ನು ಅನುಭವಿಸುವಂತಾಗಬೇಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ಇರುವುದು ಸಮಾಜವಾದಿ ರಾಷ್ಟ್ರದ ಲಕ್ಷಣವಲ್ಲ. ರಾಜಕಾರಣ ಪ್ರಜೆಗಳ ಪ್ರತಿ ನಡೆಯನ್ನು ನಿಯಂತ್ರಿಸುವಂತಿರಬಾರದು. ಇದು ಸ್ವತಂತ್ರ ರಾಷ್ಟದ ಲಕ್ಷಣವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇರುವಂತೆ ಮೀತಿಗಳ ವ್ಯಾಖ್ಯಾನವು ಇದೆ. ಇದರ ಮಿತಿ ಮೀರದೇ ಸ್ವಚ್ಛಂದ ಸ್ವಾತಂತ್ರ್ಯದ ಬಯಕೆ ಯಾರಲ್ಲೂ ಇರಲಾರದು. ಆದರೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳು ಇರುವದರ ಲಾಭ ಪಡೆದು ತನ್ನ ಅಭಿಪ್ರಾಯಕ್ಕೆ ವಿರುದ್ಧವಾದವರ ಮೇಲೆ ಸೇಡಿನ ಕ್ರಮ ಜರುಗಿಸುವುದು ಅಘೋಷಿತ ತುರ್ತು ಪರಿಸ್ಥಿತಿಯಾಗುತ್ತದೆ. ಅಂತಹ ಪರಿಸ್ಥಿತಿ ಇಂದು ದೇಶದ ಮುಂದಿದೆ ಅನಿಸುತ್ತಿದೆ, ಇದನ್ನು ಹೋಗಲಾಡಿಸಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮಿತಿಗಳನ್ನು ತೆಗೆಯುವ ಮತ್ತು ತನ್ನ ಸ್ವತಂತ್ರ ದೇಶದ ಜನರಿಗೆ ಅದರ ಸವಿ ಅನುಭವಿಸುವ ಅವಕಾಶ ನೀಡುವುದೇ ಇವತ್ತಿನ ಪರ್ಯಾಯ ರಾಜಕಾರಣ.

ಅಭಿವೃದ್ಧಿವೆಂಬುವುದು ಕೇವಲ ಕೆಲವು ಬಂಡವಾಳಗಾರರ ಆಸ್ತಿಯ ದುಪ್ಪಟ್ಟು, ನೂರುಪಟ್ಟಾಗುವುದಲ್ಲ. ಬಂಡವಾಳದ ಬೆಳವಣಿಗೆ ದೇಶದ ಜನರ ಅಭಿವೃದ್ಧಿವೆಂಬುವ ವ್ಯಾಖ್ಯಾನವೇ ಬದಲಾಗಬೇಕು. ದೇಶವನ್ನು ಸಂಪೂರ್ಣ ಖಾಸಗಿಕರಣಗೊಳಿಸುವ ಪ್ರಕ್ರಿಯೆಯನ್ನು ತಡೆಯಬೇಕು. ಕಾರಣ ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಿದ ನೆಹರು ಅವರ ಕಲ್ಪನೆ ಪೂರ್ಣ ಸರಕಾರಿ ಒಡೆತನ ಅಲ್ಲ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದ ಬೆಳವಣಿಕೆಯಲ್ಲಿ ಹೂಡಿಕೆದಾರರು ಇಲ್ಲದಿರುವಾಗ ಸರಕಾರವೇ ಸ್ವಯಂ ಬಂಡವಾಳ ಹೂಡಿಕೆ ಮಾಡುವುದು. ಅದರ ಬೆಳವಣಿಗೆ ಜೊತೆ ಲಕ್ಷಾಂತರ,ದೇಶದ ಸಾಮಾನ್ಯ ಜನರ, ತಂತ್ರಜ್ಞರ, ಕೌಶಲ್ಯಪೂರಿತ ಬುದ್ಧಿವಂತರ ಬೆಳವಣಿಗೆಯು ಇದೆ ಎಂಬುದಾಗಿತ್ತು. ಈಗ ಹೊರಗಿನ ಬಂಡವಾಳ ಹರಿದುಬರುವ ಪರಿಯನ್ನು ಅದನ್ನು ಸ್ವಾಗತಿಸುತ್ತಿರುವ ಎಲ್ಲ ಕ್ಷೇತ್ರಗಳನ್ನು ಗಮನಿಸಿದರೆ ಸ್ವತಂತ್ರ ದೇಶವೆಂಬ ವ್ಯಾಖ್ಯಾನವೇ ಬದಲಾಗಬಹುದು. ಇದು ನಮ್ಮದೇ ದೇಶವೆಂಬುವದನ್ನು ನಾಳೆ ಹೂಡಿಕೆದಾರರು ಪ್ರಶ್ನಿಸಬಹುದು. ಹೂಡಿಕೆದಾರರ ಅಣತಿಯಂತೆ ದೇಶ ನಡೆಯಬೇಕಾಗಬಹುದು, ನಮ್ಮ ಸ್ವಾವಲಂಭಿ ರಾಜ್ಯದ ಕಲ್ಪನೆಯೇ ಅದಲುಬದಲಾಗಬಹುದು. ಅದರಂತೆ ಪ್ರಜಾಪ್ರಭುತ್ವವೆಂದರೆ ಸಮತೋಲಿತ ಆರ್ಥಿಕ ಬೆಳವಣಿಗೆಯಾಗಬೇಕು. ಇದರಲ್ಲಿ ದೇಶದ ಪ್ರಜೆಗಳ ಪಾಲುದಾರಿಕೆಯ ಒಡೆತನವಿರಬೇಕು. ಆಗ ಜನರಲ್ಲಿ ನನ್ನ ದೇಶವೆಂಬ ಕಲ್ಪನೆ, ನಂಬಿಕೆ, ವಿಶ್ವಾಸ ಮೂಡುತ್ತದೆ.

ಧರ್ಮ ಮತ್ತು ಸಮಾಜದ ಪರಿಕಲ್ಪನೆಯಲ್ಲೂ ನಾವು ಪರ್ಯಾಯ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೇ ಮುಂದಿನ ತಲೆಮಾರು ಭಾರಿ ಗಂಡಾಂತರ ಎದುರಿಸಬೇಕಾಗುತ್ತದೆ. ಬಹುಸಂಖ್ಯಾತರ ಧರ್ಮ ಅಪಾಯದಲ್ಲಿದೆ ಎಂದು ಬಿತ್ತರಿಸುವ ವ್ಯವಸ್ಥಿತ ಜಾಲ ಅಲ್ಪಸಂಖ್ಯಾತರ ಧರ್ಮಗಳು ಸಹನೀಯ ವಾತವರಣದಲ್ಲಿವೆಯೇ ಎಂಬ ಪ್ರಶ್ನೆಯನ್ನು ಕೇಳುತ್ತವೆ. ಕಪೋಲಕಲ್ಪಿತ ಧರ್ಮದ ಅತಿ ಚಿಂತನೆ ಮುಂದಿನ ಬೆಳವಣಿಗೆ ಮಾರಕವೇ ಹೊರತು ಪೂರಕವಲ್ಲವೆಂಬುವದನ್ನು ಸೂಚಿಸುತ್ತವೆ. ಗಾಂಧೀಜಿಯವರು ಹೇಳಿದ “ಯಾವ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಾರೋ ಅದು ಆರೋಗ್ಯಪೂರ್ಣ ಸಮಾಜ” ವೆಂಬ ಮಾತನ್ನು ನಾವು ಮತ್ತೇ ಕೇಳಿಸಿಕೊಳ್ಳಬೇಕು. ಕಳೆದ ಕೆಲವು ದಶಕಗಳ ದೇಶದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆನಿಸುತ್ತಿಲ್ಲ. ಇದು ನಡೆದ ಘಟನೆಗಳಿಂದ ತಿಳಿಯುತ್ತದೆ. ದೇಶದ ಬುದ್ಧಿಜೀವಿಗಳ ಪ್ರತಿಕ್ರಿಯೆಗಳಿಂದಲೂ ತಿಳಿದಿದೆ. ನಾವು ಕಟ್ಟಬೇಕಾದ ಸಮಾಜ ಧರ್ಮನಿರಪೇಕ್ಷ ಸರಕಾರವೆಂಬುವುದು ಸಂವಿಧಾನದ ಆಶಯ. ಇದರಂತೆ ಧರ್ಮ ನಿರಪೇಕ್ಷವೆಂಬುವುದನ್ನು ಬೇರೆ ಅರ್ಥಬುರುವಂತೆ ವ್ಯಾಖ್ಯಾನಿಸುತ್ತಿರುವುದು ಕಾಣಬರುತ್ತಿದೆ. ಈ ರೀತಿಯ ತಿರುಚುವಿಕೆ ಅಥವಾ ಕಾಲಕ್ಕೆ ತಕ್ಕಂತೆ ಅರ್ಥಬದಲಾಯಿಸುವುದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆಯೇ ಎಂಬ ಪ್ರಶ್ನೆಯು ನಮ್ಮ ಮುಂದಿದೆ. ಇಂತಹ ಅಪವ್ಯಾಖ್ಯಾನಗಳು ಸಮಾಜದ ಆರೋಗ್ಯವನ್ನೇ ಅಲ್ಲಾಡಿಸುತ್ತಿರುವುದು ಕಣ್ಣಿಗೆ ಕಾಣುತ್ತಿರುವಾಗ ನಾವು ಚಿಂತಿಸಬೇಕಾಗಿರುವುದು ಇಂತಹ ವ್ಯಾಖ್ಯಾನಗಳು ಸರಿಯಾದ ದಾರಿಯಲ್ಲಿವೆಯೇ ? ಎಂಬುದು ಕೇಳಿಕೊಳ್ಳಬೇಕಾಗಿದೆ.

ಯಾವ ಸಮಾಜ ಸಮೂದಾಯವೊಂದನ್ನು ಗುರಿ ಮಾಡಿ ದ್ವೇಷ ಬೆಳೆಸುದದೋ ಅದು ಒಟ್ಟು ಸಮಾಜದ ಗಂಡಾಂತರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಅರಿವು ನಮಗಿರಬೇಕು. ಪರ್ಯಾಯ ಧಾರ್ಮಿಕ ನಂಬಿಕೆಗಳನ್ನು ಬಲಪಡಿಸುವ ಮೂಲಕ ನಡೆಸುವ ರಾಜಕಾರಣ ಮುಂದಿನ ಭಾರತಕ್ಕೆ ಮಾರಕವಾಗದಂತೆ ಕಟ್ಟಬೇಕಾಗಿದೆ. ಪ್ರಪಂಚದಲ್ಲಿ ಧಾರ್ಮಿಕ ಮೂಲಭೂತವಾದಿ ರಾಷ್ಟ್ರಗಳು ಅಳಿದಿವೆ. ಯಾವುದೇ ಧರ್ಮ ಪಾಲಿಸುವ ರಾಷ್ಟ್ರಗಳು ತನ್ನ ಧರ್ಮ ಪಾಲನೆ ಸರಕಾರ ನಡೆಸುವ ಏಕೈಕ ದಾರಿಯಾಗದಂತೆ ಎಚ್ಚರವಹಿಸಿವೆ. ಅವು ಸಮತೋಲಿತ ಸಮಾಜ ಕಟ್ಟಿವೆ ಇದನ್ನು ಪರ್ಯಾಯ ರಾಜಕಾರಣದ ಮುಖ್ಯ ಮೆಟ್ಟಿಲೆಂದು ಭಾವಿಸುತ್ತೇನೆ.

ಹಿಂದೂ ಮೂಲಭೂತವಾದಿ ರಾಷ್ಟ್ರ ಕಟ್ಟಲು ತಯ್ಯಾರಿ ನಡೆಯುತ್ತಿರುವದನ್ನು ನಾವಿಂದು ಕಾಣುತ್ತಿದ್ದೇವೆ. ಯಾವುದೇ ರಾಷ್ಟ್ರ ಧಾರ್ಮಿಕ ಅಥವಾ ಇನ್ನಾವುದೇ ಮೂಲಭೂತವಾದಿ ಸಮಾಜ ನಿರ್ಮಾಣ ಮಾಡಿದ್ದರೆ, ನಮ್ಮ ಈ ಕ್ಷಣದ ಅಗತ್ಯಗಳನ್ನು ಪೂರೈಸಬಹುದು ಅಷ್ಟೆ. ದೂರದೃಷ್ಟಿಯ, ತಲೆಮಾರುಗಳ ಬಾಳ್ವೆಗೆ ಬಲಿಷ್ಠ ದೇಶ ಕಟ್ಟುವುದೆಂದರೆ ಮೂಲಭೂತವಾದಿ ತನದಿಂದ ದೂರ ಸರಿದು ಪ್ರಜಾಸತ್ತಾತ್ಮಕ ಸಮಾಜವಾದಿ ಆಶಯಗಳ ದೇಶ ಕಟ್ಟುವುದು ಇಂದಿನ ತುರ್ತಾಗಬೇಕು.

ಪರ್ಯಾಯ ರಾಜಕಾರಣದ ಬಹುಮುಖ್ಯ ಅಜೆಂಡಾ ನಮ್ಮ ಆರ್ಥಿಕತೆ ಕೈಗಾರಿಗಳಿಲ್ಲದೇ ಜನರಿಗೆ ಉದ್ಯೋಗ ಕಲ್ಪಿಸಲಾಗದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅತಿ ಹೆಚ್ಚು ಉದ್ಯೋಗ ಕೊಟ್ಟಿರುವ ಕ್ಷೇತ್ರ. ಅದು ಅವನತಿಯ ಕಡೆಗೆ ಹೆಜ್ಚೆ ಹಾಕುತ್ತಿದೆ. ಅಧ್ಯಯನವೊಂದರ ಪ್ರಕಾರ ನಿಯಮಿತ ಸಂಬಳದ ವಲಯ ಎರಡು ಕೋಟಿ ಉದ್ಯೋಗಗಳನ್ನು ಕಳೆದುಕೊಂಡಿದೆ. ನಿರುದ್ಯೋಗ ಹೆಚ್ಚಾಗಿದೆ.ಎಲ್ಲರಿಗೆ ಉದ್ಯೋಗ ನೀಡಬೇಕಾದರೆ ಪರ್ಯಾಯ ಆರ್ಥಿಕ ನೀತಿಯ ಕಡೆಗೆ ಗಮನ ಹರಿಸಬೇಕು. ಕೃಷಿ ಕ್ಷೇತ್ರದಲ್ಲಿ ತೊಡಗುವವರ ಸಂಖ್ಯೆ ಹೆಚ್ಚುತ್ತಿದೆ. ಆ ವಲಯಕ್ಕೆ ಸಾಕಷ್ಟು ಅನುದಾನ ಬಿಡುಗಡೆಗೆ ಆಧ್ಯತೆ ನೀಡಬೇಕು. ಸಾಮಾನ್ಯ ರೈತ ಸುಖವಾಗಿದ್ದರೆ ನಮ್ಮ ಆರ್ಥಿಕ ಬೆಳವಣಿಗೆ ದರ ಕಡಿಮೆ ಇದ್ದರೂ ನೆಮ್ಮದಿಯ ಸಮಾಜ ನಮ್ಮದಾಗುತ್ತದೆ. ನಮ್ಮ ರೈತ, ಕಾರ್ಮಿಕ ನಿರುದ್ಯೋಗಿಯಾಗಿ ಆರ್ಥಿಕ ಬೆಳವಣಿಗೆ ಎರಡಂಕಿ ಆದರೂ ಅಳು ನಿಲ್ಲುವದಿಲ್ಲ. ಉದ್ಯೋಗವನ್ನೇ ನಂಬಿ ಜೀವನ ಕಟ್ಟಿಕೊಳ್ಳುತ್ತಿರುವ ಕೋಟಿ ಕೋಟಿ ಕುಟುಂಬಗಳಿಗೆ ಅವಕಾಶವಿರುವ ಆರ್ಥಿಕತೆ ನಿರ್ಮಿಸಬೇಕಾಗಿದೆ. ಅದು ಬಂಡವಾಳದ ಬೆಳವಣಿಗೆ ಮಾಡುವದಲ್ಲ. ಬಂಡವಾಳದ ನಿರಾಕರಣೆಯೂ ಅಲ್ಲ. ಬಡತನ, ಉದ್ಯೋಗ ಕೇಂದ್ರಿತ ಆರ್ಥಿಕತೆ ಆ ಕಡೆಗೆ ಗಮನ ಕೊಟ್ಟು ನಿರ್ಮಿಸುವ ಆರ್ಥಿಕ ಚಿಂತನೆಗಳೇ ಪರ್ಯಾಯ ರಾಜಕಾರಣದ ಮೂಲಮಂತ್ರವಾಗಬೇಕು.

ಗುಂಪು ಹಲ್ಲೆಗಳು, ಅಸುರಕ್ಷಿತ ವಾತಾವರಣ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಅವರಲ್ಲಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪನಂಬಿಕೆಗಳು ಬೆಳೆಯುವ ದೇಶದ ಲಕ್ಷಣಗಳಲ್ಲ. ಇಂದು ದಲಿತ ಸಮೂದಾಯದ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ ಹೆಚ್ಚುತ್ತಿರುವುದಕ್ಕೆ ಸರಕಾರದ ಧೋರಣೆಯೇ ಕಾರಣ. ಅಸಹಾಯಕರಿಗೆ ಗರಿಷ್ಠ ರಕ್ಷಣೆ ಮತ್ತು ನೆಲದ ಕಾನೂನು ಪಾಲನೆಯೇ ಪರ್ಯಾಯ ರಾಜಕಾರಣದ ಮೆಟ್ಟಿಲುಗಳೆಂದು ನಂಬುತ್ತೇವೆ. ಆದರೆ ಸದ್ಯದ ವಾತವರಣ ಅಂತಹ ಸುರಕ್ಷಿತ, ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತಿಲ್ಲ. ಇವುಗಳನ್ನು ನೆಲೆಸುವಂತೆ ಮಾಡಿ ಎಲ್ಲ ಸಮೂದಾಯಗಳ ಸಹಬಾಳ್ವೆ ನಡೆಸುವಂತಾದರೆ ನಿಜವಾದ ಪರ್ಯಾಯದ ಅರ್ಥ ಸಾರ್ಥಕವಾಗುತ್ತದೆ.

ಲೇಖಕರು – ಡಾ.ಎಲ್‌.ಹನುಮಂತಯ್ಯ

ಹಿರಿಯ ಸಾಹಿತಿಗಳು, ರಾಜ್ಯಸಭಾ ಸದಸ್ಯರು.

ಇದನ್ನೂ ಓದಿ – ಸಮತೆಯ ಗಿಡಕ್ಕೆ ನೂರೆಂಟು ಕಸಿಗಳು – ರಂಜಾನ್ ದರ್ಗಾ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!