ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಇದೂ ಸಹ ಅಂತಹ ಸದ್ದೇನು ಮಾಡುತ್ತಿಲ್ಲ. ಈ ಸರ್ಕಾರದ ವಿರುದ್ಧ ಇದು ಮೊದಲನೆಯ ಪಾದಯಾತ್ರೆಯಲ್ಲ. ಈ ಹಿಂದೆ ಮುಖ್ಯವಾಗಿ ʻಮೈಸೂರು ಚಲೋʼ ಮತ್ತು ʻಜನಾಕ್ರೋಶ ಯಾತ್ರೆʼ ಮಾಡಿದರು. ಮೊದಲನೆಯದಾಗಿ, ಮೈಸೂರು ಚಲೋ ಪಾದಯಾತ್ರೆ, ವಿಶೇಷವಾಗಿ ಅದು ಜೆಡಿಎಸ್ ಮುತುವರ್ಜಿ ವಹಿಸಿಕೊಂಡು ಸಂಘಟಿಸಿತು. ಆ ಪಾದಯಾತ್ರೆ ಸ್ವಲ್ಪ ಸದ್ದು ಮಾಡಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುವುದು ಅದರ ಮುಖ್ಯ ಉದ್ದೇಶವಾಗಿತ್ತು. ಆದರೆ, ಯಾತ್ರೆ ಮೈಸೂರು ತಲುಪುವಷ್ಟರಲ್ಲಿ ರಾಜೀನಾಮೆ ವಿಷಯ ಠುಸ್ ಆಗಿತ್ತು.
ಎರಡನೆಯದಾಗಿ, ʻಜನಾಕ್ರೋಶ ಯಾತ್ರೆʼ ಅದು ಬೆಲೆ ಏರಿಕೆ ವಿರೋಧಿಸಿ ರಾಜ್ಯದೆಲ್ಲೆಡೆ ಅಭಿಯಾನದ ರೂಪದಲ್ಲಿ ಮಾಡಿದರು. ಅದರ ಪ್ರಮುಖ ರಾಜಕೀಯ ಮುಖ ಬಿ. ವೈ. ವಿಜಯೇಂದ್ರ ಅವರೇ ಆಗಿದ್ದರು. ದಾವಣಗೆರೆಯಲ್ಲಿ ವಿಜಯೇಂದ್ರ ಮುಂದೆಯೇ ಎರಡು ಬಣಗಳು ಕಿತ್ತಾಡಿಕೊಂಡವು. ಅದೂ ಸಹ ಯಾವ ಸದ್ದು ಮಾಡದೆ ತಣ್ಣಗಾಗಿತ್ತು.
ಮೂರನೆಯದಾಗಿ, ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದ ಹಗರಣ ಮುಂದಿಟ್ಟುಕೊಂಡು ಮಾಜಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಈಗ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ. ಪಾದಯಾತ್ರೆಗೆ ಹೊರಡುವ ಮುಂಚೆಯೆ ಕಾಂಗ್ರೆಸ್ ನಾಗೇಂದ್ರ ರಾಜೀನಾಮೆ ಪಡೆಯುವ ಮೂಲಕ ಬಿಜೆಪಿ ಘೋಷಿತ ಪಾದಯಾತ್ರೆ ನಿಸ್ತೇಜ ಮಾಡಿದೆ. ಇದೇ ಬಿಜೆಪಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ದಿಟ್ಟವಾಗಿ, ಸಂಘಟಿತ ಹೋರಾಟ ನಡೆಸಿದೆ. ಸದನದಲ್ಲಿ ಅರ್ಥಪೂರ್ಣವಾಗಿ ಚರ್ಚೆಯಾಗಲು ಬಿಡಲಿಲ್ಲ. ಪರಿಣಾಮವಾಗಿ ಇನ್ನೂ ಎರಡು ದಿನ ಇರುವಾಗಲೇ ಸರ್ಕಾರ ಅಧಿವೇಶನ ಮುಗಿಸಿತು. ಆಮೇಲೆ ಸಚಿವ ನಾಗೇಂದ್ರ ರಾಜೀನಾಮೆ ಕೂಡ ಪಡೆಯಿತು.
ವಿಜಯೇಂದ್ರ ಅವರು ಘೋಷಿತ ಪಾದಯಾತ್ರೆ ಹಿಂದಕ್ಕೆ ಪಡೆದು ಇದರ ಕ್ರೇಡಿಟ್ ಕ್ಲೇಮ್ ಮಾಡಬಹುದಿತ್ತು. ಆಗ ಜನರ ಗಮನವನ್ನೂ ಸೆಳೆಯುತ್ತಿತ್ತು. ಆದರೆ, ಅವರು ಹಠಕ್ಕೆ ಬಿದ್ದು ಪಾದಯಾತ್ರೆಗೆ ಹೊರಟರು. ಮಾಧ್ಯಮದವರು ಪಾದಯಾತ್ರೆಯ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಕೇಳಿದಾಗ ʻನನಗೆ ಪಾದಯಾತ್ರೆಯ ವಿಷಯ ಗೊತ್ತಿಲ್ಲʼ ಎಂದು ಬಹಿರಂಗವಾಗಿಯೇ ಹೇಳಿದರು. ವಿಜಯೇಂದ್ರ ಅವರೇ ಈ ಪಾದಯಾತ್ರೆಯನ್ನು ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಉದ್ಘಾಟನೆ ಮಾಡುತ್ತಾರೆಂದು ಸಾರಿದರು. ಆದರೆ, ಅವರಿಬ್ಬರೂ ಉದ್ಘಾಟನೆಯಿಂದ ದೂರವೇ ಉಳಿದರು.
ಒಂದೆಡೆ, ಬಹುತೇಕ ಬಿಜೆಪಿಯ ಕೇಂದ್ರ ಸಚಿವರು ಮತ್ತು ಮಾಜಿ ಹಾಗೂ ಹಾಲಿ ಶಾಸಕರು ಪಾದಯಾತ್ರೆಯ ಕಡೆಗೆ ತಲೆಯೇ ಹಾಕುತ್ತಿಲ್ಲ. ವಿರೋಧ ಪಕ್ಷದ ನಾಯಕ ಆರ್. ಅಶೋಕ ಉದ್ಘಾಟನೆಯಲ್ಲಿ ಪಾಲ್ಗೊಂಡು, ವೇದಿಕೆಯಿಂದ ಇಳಿದು ನಾಪತ್ತೆಯಾದರು. ಈ ಪಾದಯಾತ್ರೆಯಿಂದಾಗಿ ಪಕ್ಷದಲ್ಲಿ ಆಂತರಿಕ ಕಲಹ ಜಗಜ್ಜಾಹೀರಾಯಿತು. ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಹೋಗುತ್ತಿದೆಯೇ ವಿನಾ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಗೊಳ್ಳುತ್ತಿಲ್ಲ.
ಮತ್ತೊಂದೆಡೆ, ಯಾತ್ರೆಗೆ ಆಯ್ಕೆ ಮಾಡಿಕೊಂಡಿರುವುದು ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು. ಇಲ್ಲಿ ವಿಶೇಷವಾಗಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರಗಳಿವೆ. ಆದಾಗ್ಯೂ, ವಾಲ್ಮೀಕಿ ಸಮುದಾಯದ ಶ್ರೀರಾಮುಲು ಬಿಟ್ಟರೆ ಮತ್ತಾರು ಅಲ್ಲಿ ಕಾಣುತ್ತಿಲ್ಲ. ರಾಜೀನಾಮೆ ನೀಡಿದರೂ ನಮ್ಮ ಸಮಾಜದ ನಾಯಕನ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆಂದು ವಾಲ್ಮೀಕಿ ಸಮುದಾಯದವರು ಮಾತಾಡಿಕೊಳ್ಳುತ್ತಿದ್ದಾರೆ.
ಸರ್ಕಾರ ಅನೇಕ ವಿಷಯಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಆ ವಿಷಯಗಳನ್ನು ಎತ್ತಿಕೊಂಡು ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾದ ವಿರೋಧ ಪಕ್ಷವೇ ಎಡವುತ್ತಿದೆ. ಎಡವುವುದೇ ಬಿಜೆಪಿಯಲ್ಲಿರುವ ವಿಜಯೇಂದ್ರ ಅವರ ವಿರೋಧಿ ಬಣಕ್ಕೂ ಹಾಗೂ ಸರ್ಕಾರಕ್ಕೂ ಬೇಕಾಗಿರುವುದು. ವಿಜಯೇಂದ್ರ ಮಾತ್ರ ಏನಾದರಾಗಲಿ ಬಳ್ಳಾರಿಗೆ ತಲುಪಬೇಕೆಂಬ ಒಂದೇ ಹಠಕ್ಕೆ ಜೊತುಬಿದ್ದು ಒಂಟಿಯಾಗಿಯೇ ಹೆಜ್ಜೆ ಹಾಕುತ್ತಿದ್ದಾರೆ.
ಸಿದ್ದರಾಮಯ್ಯನವರಿಗೆ ತಮ್ಮದೇ ಸರ್ಕಾರದ ಮೇಲೆ ನಂಬಿಕೆ ಇಲ್ಲವೇ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೆಣೆಯಲಾಗಿದ್ದ ಸ್ಟಿಂಗ್ ಕಾರ್ಯಾಚರಣೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಬೇರಾವ ಸಮಸ್ಯೆಯೇ ಇಲ್ಲ ಅಥವಾ ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕುಟುಕು ಕಾರ್ಯಾಚರಣೆಯ ಪರಿಹಾರವೊಂದೇ ರಾಮಬಾಣ ಎಂಬಂತೆ ಮಾಧ್ಯಮಗಳು ವರ್ತಿಸುತ್ತಿವೆ. ಸರ್ಕಾರವೂ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬರಗಾಲ ಆವರಿಸಿದೆ. ರೈತರ ಬದುಕು ಅಯೋಮಯವಾಗಿದೆ. ಆದಾಗ್ಯೂ ಎಲ್ಲರೂ ಸ್ಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ.
ಈ ಕುಟುಕು ಕಾರ್ಯಾಚರಣೆಯ ಬಗ್ಗೆ ಸರ್ಕಾರ ತನಿಖೆ ಮಾಡುತ್ತಿದೆ. ಆದರೆ, ತನಿಖೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯುತ್ತಿಲ್ಲವೆಂದು ಸಿದ್ದರಾಮಯ್ಯನವರು ಅಸಮಾಧಾನದಲ್ಲಿದ್ದಾರೆ ಎಂದು ಸಾರ್ವಜನಿಕವಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಚರ್ಚೆ ಹುಟ್ಟಲು ಕಾರಣಗಳೂ ಇವೆ.
ಮೊದಲನೆಯದಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮ್ಮದೇ ಪಕ್ಷದ ಸಿಎಂ ಇದ್ದಾರೆ. ಆದಾಗ್ಯೂ ಸಿದ್ದರಾಮಯ್ಯನವರು ʻಈಗ ಬೇರೆಯವರು ಸಿಎಂ ಇದ್ದಾರೆ, ಬೇರೆ ಸರ್ಕಾರ ಇದೆʼ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹಾಗೂ ಕೋಪ ಒಟ್ಟೊಟ್ಟಿಗೆ ಹೊರಹಾಕಿದ್ದಾರೆ.
ಎರಡನೆಯದಾಗಿ, ಈ ವಿಷಯವನ್ನು ಹೈಕಮಾಂಡ್ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಾಕೀತು ಮಾಡಿದ ಮೇಲೆ ತನಿಖೆ ಸ್ವಲ್ಪ ವೇಗ ಪಡೆದುಕೊಂಡಿದೆ. ಅದಾದ ಮೇಲೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ, ಕೆಲವರನ್ನು ನೋಟಿಸ್ ನೀಡಿದ್ದಾರೆ.
ಮೂರನೆಯದಾಗಿ, ಸಿದ್ದರಾಮಯ್ಯನವರ ಪಕ್ಷದ ಸರ್ಕಾರವಿದೆ. ಅವರದೇ ಪಕ್ಷದ ಮುಖ್ಯಮಂತ್ರಿ ಇದ್ದಾರೆ. ಅವರನ್ನು ಪುಂಖಾನುಪುಂಖವಾಗಿ ಹೊಗಳುವ ರಾಜಕಾರಣಿಗಳೇ ಮಂತ್ರಿಮಂಡಲದಲ್ಲಿ ಇದ್ದಾರೆ. ಒಂದು ಮಾತು ಹೇಳಿಸಿ ಸ್ಟಿಂಗ್ ವಿಡಿಯೊ ಡಿಲೀಟ್ ಮಾಡಿಸಬಹುದಿತ್ತು. ಆದರೆ, ಅವರು ದೂರು ಸಲ್ಲಿಸಿದಲ್ಲದೆ, ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು ಎಂದು ಆವಾಜ್ ಹಾಕುತ್ತಿದ್ದಾರೆ.
ಕುಟುಕು ಕಾರ್ಯಾಚರಣೆ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ಜನರಲ್ಲಿ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಅದರಲ್ಲಿ ಸ್ಟಿಂಗ್ ಮಾಡಿದವರನ್ನು ಮುಟ್ಟದೆ (ಶಾಸ್ತ್ರಕ್ಕಾಗಿ ತನಿಖೆಗೆ ಕರೆದಂತಿದೆ) ಸ್ಟಿಂಗ್ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದವರ ಹಾಗೂ ಹಂಚಿದವರ ಹಿಂದೆ ಮಾತ್ರ ಈ ಸರ್ಕಾರ ಯಾಕೆ ಬಿದ್ದಿದೆ ಎಂಬುದು ಮುಖ್ಯವಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರ್ ಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಸ್ಟಿಂಗ್ ವಿಚಾರದಲ್ಲಿ ಕಟಕಟೆಯಲ್ಲಿ ತಂದು ನಿಲ್ಲಿಸಿ, ಸ್ಟಿಂಗ್ ಪಿತಾಮಹ ಬೇರಾರೂ ಅಲ್ಲ, ಡಿ.ಕೆ. ಶಿವಕುಮಾರ್ ಎಂದು ಘಂಟಾಘೋಷವಾಗಿ ಗಂಭೀರ ಆರೋಪ ಮಾಡುತ್ತಿದ್ದಾರೆ.
ತಮ್ಮ ಮೇಲಿನ ಗುರುತರವಾದ ಆರೋಪಕ್ಕೆ ಸಾರ್ವಜನಿಕವಾಗಿ ಉತ್ತರಿಸಬೇಕಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಗೂಢ ಮೌನಕ್ಕೆ ಜಾರಿದ್ದಾರೆ. ಇದು ಸಾರ್ವಜನಿಕರಲ್ಲಿ ಅನುಮಾನ ಹೆಚ್ಚಿಸಿದ್ದಲ್ಲದೆ, ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ.
ಒಂದರ್ಥದಲ್ಲಿ ತನಿಖೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತಾಡದೇ ಇರುವುದು ಒಳ್ಳೆಯದು. ಅವರು ಏನೇ ಮಾತಾಡಿದರೂ ತನಿಖೆಯ ಮೇಲೆ ಹಾಗೂ ತನಿಖೆ ನಡೆಸುತ್ತಿರುವವರ ಮೇಲೆ ಪರಿಣಾಮ ಬೀರಬಹುದು. ಈ ದಿಕ್ಕಿನಲ್ಲಿ ಅವರು ಮೌನ ವಹಿಸಿದ್ದು ಸರಿಯಾದ ನಿರ್ಧಾರವಾಗಿದೆ ಎಂದು ಎನ್ನಬಹುದು. ಆದರೆ, ಈ ಪ್ರಕರಣದಲ್ಲಿ ಅವರ ಮೇಲೆ ಗಂಭೀರ ಆರೋಪಗಳಿವೆ. ಅವರೇ ಅಪರಾಧಿ ಸ್ಥಾನದಲ್ಲಿದ್ದಾರೆ. ಹೀಗಾಗಿ ಮೌನ ಮುರಿದು ಸಾರ್ವಜನಿಕವಾಗಿ ಉತ್ತರಿಸಬೇಕಾದದ್ದು ಡಿಕೆಶಿ ಅವರ ಜವಾಬ್ದಾರಿಯಾಗಿದೆ.
ಇಲ್ಲದಿದ್ದರೆ ಪೊಲೀಸರು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಿ ಏನೇ ವರದಿ ಕೊಟ್ಟರೂ ಆ ವರದಿಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತದೆ.
ಏತನ್ಮಧ್ಯೆ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಕುಟುಕು ಕಾರ್ಯಾಚರಣೆಯ ಹಿಂದೆ ನಮ್ಮ ಪಕ್ಷದ ಮುಖಂಡರಿದ್ದಾರೆ ಎಂಬರ್ಥದಲ್ಲಿ ಮೇಲಿಂದ ಮೇಲೆ ಮಾತಾಡುತ್ತಿದ್ದಾರೆ. ಇದಕ್ಕೆ ಹಲವರು ತಲೆಯಾಡಿಸುತ್ತಿದ್ದಾರೆ. ಇದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.
ಒಂದು ವಾರದೊಳಗೆ ಸತ್ಯಾಂಶ ಹೊರಬರುತ್ತದೆ ಎಂದು ಸಾಕ್ಷಾತ್ ಗೃಹ ಸಚಿವರು ಹೇಳಿದ್ದಾರೆ. ಅದು ಯಾರ ಸತ್ಯಾಂಶ ಎಂಬುದು ಕುತೂಹಲ ಹುಟ್ಟಿಸಿದೆ.
ಅದೇನೇ ಇರಲಿ, ತಮ್ಮದೇ ಸರ್ಕಾರದ ಮೇಲೆ ರಾಜ್ಯದ ಅತ್ಯಂತ ಪ್ರಭಾವಶಾಲಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದೇ ಪಕ್ಷದ ಸರ್ಕಾರದ ಮೇಲೆ ಅಪನಂಬಿಕೆ ಪಡುತ್ತಿರುವುದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡುತ್ತಿರುವ ಆರೋಪಕ್ಕೆ ಬಲ ಬಂದಂತಾಗಿದೆ. ಇದು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಕೆಪಿಎಸ್ಸಿ ಹಗರಣ: ಕನ್ನಾಳೆ ಮತ್ತು ಗಂಗ್ವಾರ್ಗೆ ಹೆಚ್ಚಿದ ಸಂಕಷ್ಟ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ನಡೆದ ಭಾರಿ ಪ್ರಮಾಣದ ಹಗರಣ ಜಗಜ್ಜಾಹೀರಾಗಿದೆ. ಈ ಹಗರಣದ ಕುರಿತು ಸಿಐಡಿ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಪಶುವೈದ್ಯಾಧಿಕಾರಿ ಹುದ್ದೆಯ ಕೆಲ ಫಲಾನುಭವಿಗಳು ತನಿಖಾಧಿಕಾರಿಗಳ ಮುಂದೆ ಹಣ ನೀಡಿರುವ ಬಗ್ಗೆ ತಮ್ಮ ತಪ್ಪೊಪ್ಪಿಗೆಯೂ ನೀಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಆಯೋಗದ ಮಾಜಿ ಅಧ್ಯಕ್ಷ ಶಂಕರೆಪ್ಪ ಸಾಹುಕಾರ, ಆಯೋಗದ ಸದಸ್ಯರಾದ ಬಿ.ವಿ. ಗೀತಾ, ಶಾಂತಾ ಹೊಸಮನಿ ಮತ್ತು ಇತರೆ ಸಿಬ್ಬಂಧಿಗಳ ಬಂಧನವಾಗಿದೆ.
ಏತನ್ಮಧ್ಯೆ ಬಸವರಾಜ ಕನ್ನಾಳೆ ಅವರ ಸಿಂಡಿಕೇಟ್ ಸದಸ್ಯತ್ವವನ್ನು (ತುಮಕೂರು ವಿಶ್ವವಿದ್ಯಾಲಯ) ರಾಜ್ಯಪಾಲರು ವಜಾ ಮಾಡಿದ್ದಾರೆ. ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ (ಕಾನೂನು ಕ್ರಮ ಜರುಗಿಸಲು ಗ್ರಿನ್ ಸಿಗ್ನಲ್) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮತಿ ನೀಡಿದ್ದಾರೆ. ಇದರಿಂದಾಗಿ ಈಗ ಸಿಐಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿ, ಕಾನೂನು ಪ್ರಕ್ರಿಯೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಈ ಬೆಳವಣಿಗೆ ಆರೋಪಿಗಳಿಗೆ ಆಘಾತ ನೀಡಿದೆ.
ತನಿಖೆಯ ಸಂದರ್ಭದಲ್ಲಿ ಸಿಐಡಿ ಹಾಗೂ ಇ.ಡಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ, ಸಾಕ್ಷಿಗಳು ಮತ್ತು ಸಾಕ್ಷ್ಯಗಳು ಪ್ರಬಲವಾಗಿವೆಯೋ ಅಥವಾ ದೋಷಪೂರಿತವಾಗಿವೆಯೋ ಎಂಬುದರ ಮೇಲೆ ಬಸವರಾಜ ಕನ್ನಾಳೆ ಹಾಗೂ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹಣೆಬರಹ ನಿರ್ಧಾರವಾಗುತ್ತದೆ.
ಸ್ಟಿಂಗ್ ಮಾಡಿದವರನ್ನು ಬಿಟ್ಟು, ಹಂಚಿದವರ ಹಿಂದೆ ಬಿದ್ದ ಸರ್ಕಾರ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ನಕಲಿ ಸ್ಟಿಂಗ್ ಕಾರ್ಯಾಚರಣೆಯ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಾರದೊಳಗೆ ಸತ್ಯಾಂಶ ಹೊರಬರುತ್ತದೆ ಎಂದು ಗೃಹ ಸಚಿವರೂ ಹೇಳಿದ್ದಾರೆ. ಅದು ಯಾರ ಸತ್ಯ ಎಂಬುದು ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಹೆಚ್ಚಿಸಿದೆ.
ʻಸಿದ್ದರಾಮಯ್ಯನವರ ಗೌರವ ಉಳಿಸಲು ನಾನೇ ಸ್ಟಿಂಗ್ ಮಾಡಿದ್ದೇನೆʼ ಎಂದು ಹೇಳುವ ಮೂಲಕ ಸ್ಟಿಂಗ್ ಮಾಡಿದ್ದನ್ನು ಒಪ್ಪಿಕೊಂಡಿರುವ ರಾಕೇಶ್ ಶೆಟ್ಟಿಯನ್ನು ಬಂಧಿಸದೆ, ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆಯಲು ಸಾಕಷ್ಟು ಸಮಯಾವಕಾಶ ನೀಡಿದೆ ಎಂದು ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಸಾಕ್ಷಾತ್ ಸಿದ್ದರಾಮಯ್ಯನವರೇ ರಾಕೇಶ್ ಶೆಟ್ಟಿ ಹಾಗೂ ಮಂಗಳೂರಿನ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಹೆಸರನ್ನು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅವರನ್ನು ಬಂಧಿಸದ ಈ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್ಲೋಡ್ ಮಾಡಿದ ಮತ್ತು ಹಂಚಿದವರ ಬೇಟೆಯಾಡುತ್ತಿದೆ. ಇದು ಹೇಗಿದೆ ಅಂದರೆ ಅಕ್ಕಿ ಕದ್ದ ಕಳ್ಳನನ್ನು ಬಿಟ್ಟು, ಕದ್ದ ಅಕ್ಕಿಯಿಂದ ಅಡುಗೆ ಮಾಡಿ ಊಟ ಮಾಡಿದವರ ಹಿಂದೆ ಬಿದ್ದಂತಾಗಿದೆ.
ಸರ್ಕಾರದ ಈ ನಡೆ ನಿಜವಾದ ಆರೋಪಿಗಳನ್ನು ರಕ್ಷಿಸಲು, ಜೆಡಿಎಸ್ ವಾರ್ ರೂಮ್ನಲ್ಲಿ ಕೆಲಸ ಮಾಡುವ ರಿತೇಶ್ ಪಾಂಡೆ, ಮೋಹನ್ ಗೌಡ್, ಚಂದನ್ ಅವರ ಹಿಂದೆ ಬೀಳುವ ಮೂಲಕ ಜೆಡಿಎಸ್ ತಲೆಗೆ ಕಟ್ಟಲು ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನವನ್ನು ಜನರಲ್ಲಿ ಹುಟ್ಟುಹಾಕಿದೆ.
ಇದರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಗೌರವ ಅಡಗಿದೆ. ಸರ್ಕಾರ ಇದರಲ್ಲಿ ರಾಜಕಾರಣ ಮಾಡದೆ ಸಿಸಿಬಿ ಪೊಲೀಸರಿಗೆ ತನಿಖೆ ಮಾಡಲು ಮುಕ್ತ ಅವಕಾಶ ನೀಡುತ್ತದೆ. ತನಿಖೆಯಲ್ಲಿ ಮೂಗು ತೂರಿಸದೆ ಪಾರದರ್ಶಕವಾಗಿ ತನಿಖೆ ನಡೆಸಿ, ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬಹುದು ಎಂದು ಜನರು ನಂಬಿದ್ದಾರೆ. ಜನರ ಈ ನಂಬಿಕೆಯನ್ನು ಸರ್ಕಾರ ಉಳಿಸಿಕೊಳ್ಳುತ್ತದೋ ಅಥವಾ ಹುಸಿಗೊಳಿಸುತ್ತದೋ ಎಂಬುದು ಕುತೂಹಲ ಹುಟ್ಟಿಸಿದೆ.
ಸ್ಟಿಂಗ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಮಾತೇಕೆ?

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಅವರನ್ನು ಪುಂಖಾನುಪುಂಖವಾಗಿ ಕೊಂಡಾಡುತ್ತಿದ್ದರು. ಈಗ ಅವರ ವಿರುದ್ಧ ನಡೆದ ಮಾರುವೇಷದ ಕಾರ್ಯಾಚರಣೆ ವಿಷಯದಲ್ಲಿ ಬಹುತೇಕರು ಬಾಯಿಮುಚ್ಚಿಕೊಂಡೇ ಇದ್ದಾರೆ.
ಇಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಟಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರಾಡಿದ ಮಾತುಗಳಲ್ಲಿ ಹೊಗಳಿಕೆಯೂ ಇದೆ, ಉಪದೇಶವೂ ಇದೆ. ʻಅವರು (ಸಿದ್ದರಾಮಯ್ಯ) ಪಕ್ಷಾತೀತ ನಾಯಕರು, ಅವರು ಮನಸ್ಸು ಮಾಡಿದ್ದಕ್ಕೆ ನಾನು ಸಚಿವೆ ಆಗಿದ್ದುʼ ಎಂದು ಬಾಯಿತುಂಬಾ ಹೊಗಳಿದ್ದಾರೆ. ಜತೆಗೆ ʻಸ್ಟಿಂಗ್ ವಿಚಾರದಲ್ಲಿ ಮಹಿಳೆಯರ ತೇಜೋವಧೆ ಒಂದು ಮಾಡಬೇಡಿʼ ಎಂದು ಉಪದೇಶವೂ ಮಾಡಿದ್ದಾರೆ.
ಈ ಉಪದೇಶ ಅವರು ಯಾರಿಗೆ ಮಾಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸ್ಟಿಂಗ್ ನಕಲಿ ಹಾಗೂ ಇದೊಂದು ಷಡ್ಯಂತ್ರ ಎಂದು ಅವರದ್ದೇ ಸರ್ಕಾರ ಹೇಳುತ್ತಿದೆ. ಆದರೆ, ಇವರು ಅದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರ ತೇಜೋವಧೆ ಮಾಡಬೇಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಇಲ್ಲಿ ಯಾವ ಮಹಿಳೆಯ ತೇಜೋವಧೆ ನಡೆಯುತ್ತಿದೆ?
ಹೆಬ್ಬಾಳ್ಕರ್ ಅವರು ಮತ್ತೆ ಸಚಿವರಾಗಲು ತಾಲೀಮು ನಡೆಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಮುಖ್ಯಮಂತ್ರಿ ಡಿಕೆಶಿ ಅವರೂ ಸಾಥ್ ನೀಡಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಮುಂದೆ ಪಟ್ಟು ಹಿಡಿದು ಕೂತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಈ ಸಲ ಬೇರೆಯವರಿಗೆ ಅವಕಾಶ ನೀಡೋಣ ಎಂದು ಹೇಳುತ್ತಿರುವುದು ಅವರಿಗೆ ಮುಳುವಾಗಿದೆ ಎಂಬ ಸುದ್ದಿ ರಾಜಕೀಯ ಕಾರಿಡಾರ್ನಲ್ಲಿ ಹರಿದಾಡುತ್ತಿದೆ.
ಆ ಕೋಪದಲ್ಲಿ ಈ ಮಾತು ಆಡಿರಬಹುದೇ ಅಥವಾ ಈ ಸ್ಟಿಂಗ್ ಬಗ್ಗೆ ಅವರಿಗೆ ಎಬಿಸಿಡಿ ಗೊತ್ತಿಲ್ಲದೆ ಬಾಯಿತಪ್ಪಿ ಆಡಿದ್ದಾರೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ.
ಸ್ಟಿಂಗ್ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳು ಬೇರೆ ಕಥೆ ಹೇಳುತ್ತಿವೆ

ಸಿದ್ದರಾಮಯ್ಯನವರ ಮೇಲೆ ಮಾಡಿದ ಸ್ಟಿಂಗ್ ವಿಚಾರ ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಈ ವಿಷಯದ ಕುರಿತು ಇದೇ ಮೊದಲ ಬಾರಿಗೆ ಅವರು ಮೌನ ಮುರಿದ ʻನನ್ನ ಮೇಲೆ ಪವರ್ ಟಿ.ವಿಯ ರಾಕೇಶ್ ಶೆಟ್ಟಿ ಹಾಗೂ ಮಂಗಳೂರಿನ ಕೃಪಾ ಆಳ್ವ ಸೇರಿಕೊಂಡು ಬ್ಲಾಕ್ಮೇಲ್ ಮಾಡಲು ಈ ಸ್ಟಿಂಗ್ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕುʼ – ಎಂದಿರುವ ಮಾತುಗಳು ಮತ್ತು ಅವರ ಮಗ ಹಾಗೂ ಸಚಿವ ಯತೀಂದ್ರ ಅವರು ಒಂದು ಹೆಜ್ಜೆ ಮುಂದೆ ಬಂದು ʻಈ ಸ್ಟಿಂಗ್ ಹಿಂದೆ ನಮ್ಮ ಪಕ್ಷದವರೇ ಇದ್ದಾರೆʼ ಎಂದಿರುವ ಸ್ಪೋಟಕ ಹೇಳಿಕೆ ಈ ಸ್ಟಿಂಗ್ ಬಗ್ಗೆ ಬೇರೆ ಕಥೆ ಹೆಳುತ್ತಿವೆ.
ಜತೆಗೆ, ರಾಕೇಶ್ ಶೆಟ್ಟಿ ಕ್ಯಾಮೆರಾ ಮುಂದೆ ಕೂತು ʻಸಿದ್ದರಾಮಯ್ಯನವರು ನನಗೆ ತಂದೆ ಸಮಾನ. ಅವರ ಮೇಲೆ ಸ್ಟಿಂಗ್ ಮಾಡಲು ಒಂದು ಷಡ್ಯಂತ್ರ ನಡೆಯುತ್ತಿತ್ತು. ಅದನ್ನು ಬಯಲು ಮಾಡಲು ನಾನೇ ಸ್ಟಿಂಗ್ ಮಾಡಿದ್ದೇನೆ. ಈ ವಿಷಯ ಆಗ ಅವರ ಕಿವಿಯಲ್ಲಿ ಹೇಳಿದ್ದೆʼ ಎಂದು ಹೇಳಿರುವ ಮಾತುಗಳು ʻರಾಕೇಶ್ ಶೆಟ್ಟಿ ತಾನು ಉಳಿಯಲು ಹಾಗೂ ಇನ್ನಾರನ್ನೋ ಉಳಿಸಲು ದಾರಿ ತಪ್ಪಿಸುವ ಕಥೆಯನ್ನು ಹೆಣೆದಿದ್ದಾರೆʼ ಎಂಬುದನ್ನು ಸ್ಪಷ್ಟಪಡಿಸಿವೆ.
ಕುಮಾರಸ್ವಾಮಿ ಅವರು ಶೆಟ್ಟಿ ಹಾಗೂ ಸರ್ಕಾರದ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎಳೆದು ತಂದು ಬಳಸಿಕೊಳ್ಳುತ್ತಿರಬಹುದು. ಆದರೆ, ಸಾಕ್ಷಾತ್ ಸಿದ್ದರಾಮಯ್ಯನವರೇ ʻನನ್ನ ವಿರುದ್ಧ ರಾಕೇಶ್ ಶೆಟ್ಟಿ ಹಾಗೂ ಕೃಪಾ ಆಳ್ವಾ ಷಡ್ಯಂತ್ರ ಮಾಡಿದ್ದಾರೆʼ ಎಂದು ಕೇವಲ ಆರೋಪ ಮಾಡದೆ, ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಆದಾಗ್ಯೂ, ಪೊಲೀಸರು ಇದುವರೆಗೆ ಅವರಿಬ್ಬರನ್ನು ಯಾಕೆ ವಶಕ್ಕೆ ಪಡೆದಿಲ್ಲ? ವಶಕ್ಕೆ ಪಡೆಯದಂತೆ ಪೊಲೀಸರ ಕೈಯನ್ನು ಕಟ್ಟಿ ಹಾಕಿದವರು ಯಾರು ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.
ಈ ಸ್ಟಿಂಗ್ ವಿಡಿಯೊ ಸೆಪ್ಟೆಂಬರ್ 27ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸಿದ್ದರಾಮಯ್ಯನವರು ಅಕ್ಟೋಬರ್ 6ರಂದು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ಆದರೆ, ಪೊಲೀಸರು ಈಗ ಶೆಟ್ಟಿಯನ್ನು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ರಾಜಮರ್ಯಾದೆಯಿಂದ ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನು ಸರ್ಕಾರದ ಮಹದುಪಕಾರ ಎನ್ನದೆ ಮತ್ತೇನು ಎನ್ನಬೇಕು? ಇಂತಹ ಗಂಭೀರವಾದ ಪ್ರಕರಣದಲ್ಲೂ ಈ ಸಮಯ ಕೊಲ್ಲುವ ಆಟವೇಕೆ? ಸರ್ಕಾರದ ಈ ಆಟದಿಂದಾಗಿ ಶೆಟ್ಟಿ ಅವರು ಈಗ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ನಿರಾಳರಾಗಿದ್ದಾರೆ. ಆಳ್ವಾ ಅವರು ಈ ಸುದ್ದಿ ಹೊರಬಂದಾಗಿನಿಂದ ಎಲ್ಲೋ ಕಾಣೆಯಾಗಿದ್ದಾರೆ.
ರಾಜ್ಯದ ಗೃಹ ಸಚಿವರು ʻಒಂದು ವಾರದೊಳಗೆ ಸತ್ಯಾಂಶ ಹೊರಬರುತ್ತದೆʼ ಎಂದು ಹೇಳಿದಲ್ಲದೆ, ಮುಂದುವರಿದು ʻನಮಗೆ ಸರ್ಕಾರ ಹಾಗೂ ಸಿದ್ದರಾಮಯ್ಯನವರ ಘನತೆಗಿಂತ ದೊಡ್ಡದು ಯಾವುದೂ ಇಲ್ಲʼ ಎಂದಿದ್ದಾರೆ. ಅವರ ನಂಬಿಕೆ ಹುಟ್ಟಿಸದ ಈ ಮಾತುಗಳನ್ನು ಜನರಾಗಲಿ ಅಥವಾ ಸಿದ್ದರಾಮಯ್ಯನರಾಗಲಿ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಆದರೆ, ಒಂದು ವಾರದೊಳಗೆ ಹೊರಬೀಳುವ ಸತ್ಯ, ಅದು ಸರ್ಕಾರದ ಸತ್ಯವಾಗಿರುತ್ತದೋ ಅಥವಾ ನೈಜ ಸತ್ಯವಾಗಿರುತ್ತದೋ ಎಂದು ಜನರಿಗೆ ಕುತೂಹಲ ಹುಟ್ಟಿಸಿದೆ.
ʻನಾನೇ ಅಪರಾಧಿʼ ಎಂದು ಸ್ವತಃ ಆರೋಪಿಯೇ ಪರೋಕ್ಷವಾಗಿ ಹೇಳಿದರೂ ಆತನನ್ನು ವಶಕ್ಕೆ ಪಡೆಯದ ಈ ಸರ್ಕಾರ, ನಿಜವಾದ ಸತ್ಯವನ್ನು ಜನರ ಮುಂದಿಡಬಹುದೇ ಎಂಬ ಅನುಮಾನ ಜನರಲ್ಲಿ ಹುಟ್ಟಿಸಿದೆ.
ʻರಾಜ್ಯದಲ್ಲಿ ಸುಮಾರು 40 ಜನರ ಮೇಲೆ ಸ್ಟಿಂಗ್ ನಡೆದಿದೆʼ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರು ವಿಧಾನಸೌಧದಲ್ಲಿ ಹೇಳಿದ ಮಾತು ಈಗ ಜೀವ ಪಡೆದುಕೊಂಡಿದೆ. ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಮಾಡಿದವರು ಯಾರು ಹಾಗೂ ಯಾಕೆ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಈಗ ಈ ಸ್ಟಿಂಗ್ ಪಿತಾಮಹ ಯಾರು ಎಂಬುದಷ್ಟೇ ಗೊತ್ತಾಗಬೇಕಿದೆ.
ಈಗ ರಾಕೇಶ್ ಶೆಟ್ಟಿ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಎಂಬ ಪಾತ್ರಧಾರಿಗಳ ಮುಖ ಮಾತ್ರ ಹೊರಬಿದ್ದಿದೆ. ಪರದೆಯ ಹಿಂದಿರುವ ಈ ಸ್ಟಿಂಗ್ ಕಂಪನಿಯ ಮಾಲೀಕನ ಮುಖ ಹೊರಬರಬೇಕು. ಆಗಲೇ ಈ ಸ್ಟಿಂಗ್ ದಂಧೆ ಬಂದ್ ಆಗುತ್ತದೆ. ಇಲ್ಲದಿದ್ದರೆ ಕರ್ನಾಟಕ ಮತ್ತೊಂದು ಬಿಹಾರ ಅಥವಾ ಉತ್ತರ ಪ್ರದೇಶ ಆಗುತ್ತದೆ.


