SUBSCRIBE

ದ ಪಾಲಿಟಿಕ್

ಮಂಗಳೂರು: ಇಂದಿನ ಸಚಿವ ಸಂಪುಟದಿಂದ ಈಡೇರುವುದೇ ಕನಸುಗಳು?

ʻ8 ಗಂಟೆಗೆ ಮಂಗಳೂರು ಬಂದಾಗುತ್ತೆʼ ಎಂದು ಡಿ. ಕೆ. ಶಿವಕುಮಾರ್‌ ಉಪಮುಖ್ಯಮಂತ್ರಿ ಆಗಿದ್ದಾಗ  ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ಕೋಮು ವೈಷಮ್ಯದಿಂದ ನಲುಗಿ ಹೋಗಿದ್ದ ಮಂಗಳೂರು ಬಗ್ಗೆ ಅವರಾಡಿದ ಈ ಮಾತು  ಚರ್ಚೆಯನ್ನು ಹುಟ್ಟಹಾಕಿತ್ತು. ಜೊತೆಗೆ ಅವರಿಗೆ ಮಂಗಳೂರು ಬಗ್ಗೆ ಇರುವ ಆಸಕ್ತಿಯನ್ನು ಬಹಿರಂಗಗೊಳಿಸಿತ್ತು.

ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ.  ಮಂಗಳೂರು ಬಗ್ಗೆ, ಅದರ ಅಭಿವೃದ್ಧಿಯ ಬಗ್ಗೆ  ಆಗಾಗ ಮಾತನಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯೂ ನಡೆಯುತ್ತಿದೆ. ಅಭಿವೃದ್ಧಿಯಲ್ಲಿ  ಹಿಂದೆ ಸಾಗುತ್ತಿರುವ  ಮಂಗಳೂರು ಬಗ್ಗೆ ಮತ್ತು ಅದರ ಅಭಿವೃದ್ಧಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳೊಬ್ಬರು ಕಾಳಜಿ ವಹಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಸಕರಾತ್ಮಕವಾಗಿದೆ. ಕೇವಲ ಸಂಪುಟ ಸಭೆ ನಡಿಸಿದ ಮಾತ್ರಕ್ಕೆ ಈ ಜಿಲ್ಲೆಯನ್ನು ಅಭಿವೃದ್ಧಿಯ ಪಥಕ್ಕೆ ಮತ್ತೆ ಕೊಂಡೊಯ್ಯಬಹುದೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಡಿಕೆಶಿ ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ. ಅವರಿಗೆ ಕರಾವಳಿಯ ಭಾಗದಲ್ಲಿ ಮಂಕಾಗಿರುವ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ಮೂಲಕ ತಾನೊಬ್ಬ ಪ್ರಬಲ, ಚಾಣಾಕ್ಯ ರಾಜಕಾರಣಿ ಎಂಬುದನ್ನು ತೋರಿಸುವ ಅಭಿಲಾಷೆ ಇದೆ. ಎರಡನೆಯ ಅವಧಿಗೂ ಮುಖ್ಯಮಂತ್ರಿ ಆಗಲು ಈ ಭಾಗದಿಂದ ಕೆಲವು ಶಾಸಕರನ್ನು ಗೆಲ್ಲಿಸಿ ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ತಾನೊಬ್ಬ ಬೆಂಗಳೂರು ಭಾಗದಲ್ಲಿ ಮಾತ್ರವಲ್ಲ , ಬೇರೆ ಕಡೆಗಳಲ್ಲೂ ಜನಪ್ರಿಯತೆ ಇರುವ ನಾಯಕ ಎಂದು ತೋರಿಸುವುದಿದೆ.

ಕಳೆದ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟು , ತಕ್ಕಮಟ್ಟಿನ ಯಶಸ್ಸನ್ನು ಗಳಿಸಿದರು.  ಆ ಮೂಲಕ ಮೊದಲಿನಿಂದಲೂ ಒಕ್ಕಲಿಗ ನಾಯಕತ್ವಕ್ಕಾಗಿ ದೇವೇಗೌಡರ ಕುಟುಂಬದ ಜತೆಗೆ  ನಡೆಸಿದ ಹೋರಾಟವನ್ನು ಒಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದರು. ಲಿಂಗಾಯತ ಪ್ರಾಬಲ್ಯದ ಮಧ್ಯ ಕರ್ನಾಟಕವಾಗಲಿ ಅಥವಾ ಕಲ್ಯಾಣ ಕರ್ನಾಟಕವಾಗಲಿ ಅವರಿಗೆ ಬೇಕಾದ ಮೈದಾನವಲ್ಲ . ಏಕೆಂದರೆ, ಅಲ್ಲಿನ ಮತದಾರರು ಬಿಜೆಪಿಯನ್ನು ತಮ್ಮ ಪಕ್ಷವೆಂದು ಭಾವಿಸಿದಂತಿದೆ.  ಹಾಗಾಗಿ ಅವರಿಗೆ ಸೂಕ್ತವಾದದ್ದು ಕರಾವಳಿ ಕರ್ನಾಟಕ ಮಾತ್ರ.

ಡಿಕೆಶಿ  ಮಹತ್ವಾಕಾಂಕ್ಷಿ ರಾಜಕಾರಣಿ ಮಾತ್ರವಲ್ಲ, ಒಬ್ಬ ಉದ್ಯಮಿಯೂ ಸಹ.  ಮಂಗಳೂರು ಚಿನ್ನದ ಮೊಟ್ಟೆ ಇಡೋ ಕೋಳಿ ಎಂದು ಬೇಗನೆ ಗುರುತಿಸಿದ್ದಾರೆ.  ಇದು ಪ್ರವಾಸೋದ್ಯಮಕ್ಕೆ ಹಾಗೂ ಉದ್ಯಮಿಗಳಿಗೆ ಹೇಳಿ ಮಾಡಿಸಿದ ಜಾಗ. ಇಲ್ಲಿ ಶಿಕ್ಷಣ ಒಂದು ಉದ್ಯಮವಾಗಿ ಬೆಳೆದು ನಿಂತಿದೆ.  ಬೇರೆ ಕ್ಷೇತ್ರದ ಉದ್ಯಮಿಗಳೂ ಶಿಕ್ಷಣ ಕಡೆಗೆ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ಇಲ್ಲಿ ಖಾಸಗೀಕರಣದ ಪರಾಕಾಷ್ಠೆಯನ್ನು  ತಲುಪಿದೆ.

ಇಂದು ಬೆಂಗಳೂರು ಟ್ರಾಫಿಕ್ ಮತ್ತು ಇತರ ನಗರ ಸಂಬಂಧಿ ಸಮಸ್ಯೆಗಳಿಂದ ನಲಗುತ್ತಿದೆ. ಹೊಸ ಹೂಡಿಕೆಗೆ ಹೆಚ್ಚು ಆಕರ್ಷಣೆಯಾಗಿ ಉಳಿದಿಲ್ಲ. ತನ್ನ ಅವಧಿಯಲ್ಲಿ ಸಾವಿರಾರು ಕೋಟಿಯ ಯೋಜನೆಗಳಿಗೆ ಇಲ್ಲಿ ಚಾಲನೆ ನೀಡಿದರೆ, ತನ್ನ ಉದ್ಯಮದ ಷೇರು ಕೂಡ ಸರಾಗವಾಗಿ ಮೇಲೇರಲಿದೆ. ಹಾಗಾಗಿಯೇ ಅವರಿಗೆ ಮಂಗಳೂರು ಹೆಚ್ಚು ಪ್ರಿಯವಾಗಲು ಕಾರಣಗಳಲ್ಲಿ ಒಂದಾಗಿರಬಹುದು.

ಈ ಸಚಿವ ಸಂಪುಟ ಸಭೆಯಿಂದ ಜನಸಾಮಾನ್ಯರಿಗಾಗುವ ಲಾಭವೇನು ಇಲ್ಲ. ಇಲ್ಲಿ ಅನೇಕ ಖಾಸಗಿ ವಿಶ್ವವಿದ್ಯಾಲಯಗಳಿವೆ. ಆದರೂ ಬಡವರಿಗೆ ಶಿಕ್ಷಣ ಕೈಗೆಟುಕುತ್ತಿಲ್ಲ. ಇಲ್ಲಿ ಓದಬೇಕಾದರೆ ಬ್ಯಾಂಕ್ ಲೋನ್ ಮಾಡಲೇಬೇಕು.

ಪಕ್ಕದ ಕೇರಳದ ಜನರನ್ನು ಸೆಳೆಯುವ ಖಾಸಗಿ ಆಸ್ಪತ್ರೆಗಳು ಲೂಟಿಗೆ ಇಳಿದಿರುವ ಸಂಗತಿ ಗುಟ್ಟೇನಲ್ಲ. ಇಲ್ಲಿನ ಜನರ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕನಸು ಇನ್ನೂ ನನಸಾಗಿಲ್ಲ. ಕ್ಯಾನ್ಸರ್ ಆಸ್ಪತ್ರೆಯ   ಕೂಗು ಹಾಗೆ ಇದೆ.  ಇಲ್ಲಿನ ರಾಜಕಾರಣಿಗಳೇ ಖಾಸಗಿ ಆಸ್ಪತ್ರೆಗಳ ಪರ ನಿಂತಿರುವುದರಿಂದ  ಸರಕಾರ ಜನರ ಬೇಡಿಕೆಗೆ ಸ್ಪಂದಿಸುವುದು ದೂರದ ಮಾತಾಗಿದೆ. ಎಂಆರ್‌ಪಿಎಲ್ನಂತಹ ಯೋಜನೆಗಳಿಂದ ಜಿಲ್ಲೆಗೆ ದಕ್ಕಿದ್ದೇನು ಎಂದು ಯಾರೂ ಹೇಳುವ ಸ್ಥಿತಿಯಲ್ಲಿಲ್ಲ.

ಇಂದಿನ  ಸಂಪುಟ ಸಭೆಯಲ್ಲಿ ಮಂಗಳೂರು, ಕರಾವಳಿಗೆ ಪೂರಕವಾಗಿ ಎಷ್ಟು ಚರ್ಚೆ ನಡೆಯಬಹುದೋ? ಸಭೆಯ ಪೂರ್ವಭಾವಿ ಸಭೆಗಳು ಬರುವ ಸಚಿವರ ಐಷಾರಾಮಿ ವಾಸ್ತವ್ಯ ಮತ್ತು ಭೋಜನಗಳ ಬಗ್ಗೆ ನಡೆದಿರಬಹುದು.  ಕರಾವಳಿಯ ಆದಿಜನಾಂಗ ಎಂದು ಹೇಳಲಾಗುವ ಕೊರಗ ಸಮುದಾಯ ವಿವಿಧ ಬೇಡಿಕೆಗಳನ್ನು ಹೊತ್ತು ಮೆರವಣಿಗೆ ನಡೆಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿತು.  ಕೋಮು ಗಲಭೆಗಳಿಂದಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವ ಸಮುದಾಯಗಳ ಬೇಡಿಕೆಗಳನ್ನಾದರೂ ಕೇಳಿದ್ದಾರೆಯೇ? ಅದು ಇಲ್ಲ.  ಇಂದಿನ ಸಭೆಯ ಮೂಲ ಉದ್ದೇಶವೇನು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬೆಳಗಾವಿಯಲ್ಲಿ  ಭವ್ಯವಾಗಿ  ಕಟ್ಟಿಸಿದ ವಿಧಾನಸೌಧದಿಂದ ಆ ಭಾಗ ಒಂದಿಷ್ಟಾದರೂ  ಅಭಿವೃದ್ಧಿ ಕಂಡಿದೆಯೇ? ವಿಕಾಸದ ಪಥ ಬದಲಾಗಿದೆಯಾ?  ಉತ್ತರ ಮತ್ತೆ ಶೂನ್ಯ. ಇದೂ ಕೂಡ ಕೇವಲ ತೋರಿಕೆಯ ಹಾಗೂ ಪ್ರಚಾರದ ಸಭೆಯಾದರೆ ಏನು ಉಪಯೋಗ?  ಜನರಿಗೆ ಒಂದು ದಿನದ ಖುಷಿ, ಸರ್ಕಾರಕ್ಕೆ ಪ್ರಚಾರ ಹಾಗೂ ವ್ಯಾಪಾರಿಗಳಿಗೆ ಭರ್ಜರಿ ಲಾಭವಾಗಬಹುದು ಅಷ್ಟೇ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ರಾಜಕೀಯ ವ್ಯವಹಾರ ಸಮಿತಿ: ಡಿಕೆಶಿಗೆ ಹೈಕಮಾಂಡ್‌ ಶಾಕ್?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಕೇವಲ 109 ದಿನವಾಯಿತು. ಆದರೆ, ಅವರು ಸಿಎಂ ಕುರ್ಚಿ ಹತ್ತಿದಾಗಿನಿಂದ  ಪ್ರಧಾನಿ ಮೋದಿಯವರ ಶೈಲಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ, ಅವರಂತೆ ವ್ಯಕ್ತಿ ಕೇಂದ್ರಿತ ಪ್ರಚಾರ, ಏಕಚಕ್ರಾಧಿಪತಿ ನಾಯಕನೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪಕ್ಷದೊಳಗೆ ಚರ್ಚೆ ಆರಂಭವಾಗಿದೆ ಹಾಗೂ ʻಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ನನ್ನ ಮಾತು ಎಷ್ಟು ನಡೆಯುತ್ತಿದೆ ನನಗೆ ಗೊತ್ತುʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಆಡಿದ ಮಾತುಗಳು ಹೈಕಮಾಂಡ್‌ ನಿದ್ದೆ ಗೆಡಿಸಿದಂತಿದೆ.

ಜತೆಗೆ, ಎಲ್ಲರನ್ನೂ ವಿಶ್ವಾಸದಿಂದ ಜತೆಗೆ ಕರೆದುಕೊಂಡು ಹೋಗಬೇಕಾದ ಗುರುತರವಾದ ಸ್ಥಾನದಲ್ಲಿರುವ ಡಿಕೆಶಿ ಅವರೇ ವಿಶೇಷ ಆಸಕ್ತಿ ವಹಿಸಿ ಕೆ.ಎನ್‌. ರಾಜಣ್ಣನಿಗೆ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನ ತಪ್ಪಿಸಿದ್ದು ಹಾಗೂ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ರನ್ನು ಸರ್ಕಾರದ ʻಶತದಿನʼದ ಕಾರ್ಯಕ್ರಮದಿಂದ ದೂರವಿಟ್ಟ ಬೆಳವಣಿಗೆಗಳನ್ನು ಕಾಂಗ್ರೆಸ್‌ ಪಕ್ಷದ ಹೈ ಕಮಾಂಡ್‌ ಗಮನಿಸಿ ʻರಾಜಕೀಯ ವ್ಯವಹಾರ ಸಮಿತಿʼ ರಚಿಸಲು ಮುಂದಾಗಿದೆ. ಇದನ್ನು ತಡೆಯಲು ಡಿಕೆಶಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಬಹುದು.

ಆದಾಗ್ಯೂ ಸಮಿತಿ ಅಸ್ತಿತ್ವಕ್ಕೆ ಬಂದರೆ ಡಿಕೆಶಿಗೆ ಅವರ ಪಕ್ಷದ ಹೈಕಮಾಂಡ್‌ ಮೂಗುದಾರ ಹಾಕಿದಂತಾಗುತ್ತದೆ ಹಾಗೂ ಆ ಸಮಿತಿಯೇ  ಸುಪ್ರೀಂ. ಸರ್ಕಾರದ ರೀತಿ – ನೀತಿ, ಯೋಜನೆಗಳು, ಕಾರ್ಯಚಟುವಟಿಕೆಗಳು, ತೀರ್ಮಾನಗಳು ಅದೆ ನಿರ್ಣಯ ಮಾಡುತ್ತದೆ.  ಅದು ತೆಗೆದುಕೊಂಡ ನಿರ್ಣಯದಂತೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಕೆಲಸ ಮಾಡಬೇಕು.  ಸಮಿತಿ ರಚನೆಯಿಂದಾಗಿ ಅಸಮಾಧಾನಿತರು ಖುಷಿಯಾಗಬಹುದು. ಮೇಲುಗೈ ಸಾಧಿಸಲೂಬಹುದು.  ಸರ್ಕಾರ ಹಾಗೂ ಪಕ್ಷದ ನಡುವೆ ಹಳಿ ತಪ್ಪಿದ ಸಮನ್ವಯವೂ ಸರಿದಾರಿಗೆ ಬರಬಹುದು.

ಆದರೆ, ಇದು ಅಸಾಂವಿಧಾನಿಕ ನಡೆ. ಎಲ್ಲವೂ ಈ ಸಮಿತಿ ನಿರ್ಧರಿಸುವುದಾದರೆ, ಸಚಿವ ಸಂಪುಟವಾದರೂ ಯಾಕಿರಬೇಕು? ಮುಂದೆ ಅದರ ಪಾತ್ರವೇನು ಎಂಬುದನ್ನು ಕಾಂಗ್ರೆಸ್‌ ಹೈಕಮಾಂಡ್‌ ಉತ್ತರಿಸುವುದೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾದರೆ?

ದ ಪಾಲಿಟಿಕ್ ಡೆಸ್ಕ್
ದ ಪಾಲಿಟಿಕ್ ಡೆಸ್ಕ್
1 min read

ʻಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಎಂಬುದು ನನಗೆ ಗೊತ್ತುʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತು ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಅವರಾಡಿದ ಮಾತುಗಳು ಅವರ ಅಭಿಮಾನಿಗಳಲ್ಲಿ ಅವರನ್ನು ರಾಜ್ಯ ನಾಯಕರು ತೆರೆಮರೆಯಲ್ಲಿ ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ಹುಟ್ಟುಹಾಕುವಂತಿದೆ.

ʼಸಿದ್ದರಾಮಯ್ಯ ಸ್ಟ್ರಾಂಗ್‌ ಇದ್ದರೆ, ಕಾಂಗ್ರೆಸ್‌ ಪಕ್ಷವೂ ಸ್ಟ್ರಾಂಗ್‌ ಆಗಿರುತ್ತದೆ. ಅವರನ್ನು ವೀಕ್‌ ಮಾಡಿದರೆ ಪಕ್ಷವೂ ವೀಕ್‌ ಆಗುತ್ತದೆʼ ಎಂದು ಮಾಜಿ ಸಚಿವ ಕೆ. ಎನ್.‌ ರಾಜಣ್ಣ ಆಡಿದ ಮಾತುಗಳು ಅನುಮಾನ ಇನ್ನಷ್ಟು ಬಲಗೊಳಿಸುವಂತಿವೆ.

ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರಿಗೆ ರಾಜ್ಯದಲ್ಲಿ ಸುಮಾರು ಶೇಕಡಾ ೧೨ರಷ್ಟು ಮತಗಳು ಹೊಂದಿರುವ ರಾಜ್ಯದ ಐದನೇ ದೊಡ್ಡ ಒಂದು ಜಾತಿಯೂ ಇದೆ.  ಕಾಂಗ್ರೆಸ್‌ ಪಕ್ಷ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಕುರ್ಚಿಯಿಂದ ತೀರಾ ಅವಮಾನಕಾರಿಯಾಗಿ ಕೆಳಗೆ ತಳ್ಳಿತ್ತು. ಇದರಿಂದ ಮುನಿಸಿಕೊಂಡು ಪಕ್ಷದಿಂದ ದೂರ ಹೋದ ಲಿಂಗಾಯತ ಸಮುದಾಯ ಈವರೆಗೂ ಕಾಂಗ್ರೆಸ್‌ ಕಡೆಗೆ ಮುಖ ಮಾಡಿಲ್ಲ. ಈ ಘಟನೆಯಿಂದ ಪಕ್ಷ ಪಾಠ ಕಲಿತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದರೂ ಕಾಂಗ್ರೆಸ್‌ ಪಕ್ಷದಲ್ಲಿ ಈಗಲೂ ಅವರೇ ಜನಪ್ರಿಯ ಮಾಸ್ ಲೀಡರ್.‌ ಅವರನ್ನು ಕಡೆಗಣಿಸಿದರೆ, ಬಿಜೆಪಿ ಈವರೆಗೆ ರಾಜ್ಯದಲ್ಲಿ ಒಂದು ಬಾರಿಯೂ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. (ಶಾಸಕರನ್ನು ಖರೀದಿಸಿ ‍ಅಧಿಕಾರದ ರುಚಿ ನೋಡಿದೆ).  ನಾವು ಏನೇ ಸರ್ಕಸ್‌ ಮಾಡಿದರೂ ಮ್ಯಾಜಿಕ್‌ ನಂಬರ್ ತಲುಪಲು ಆಗುತ್ತಿಲ್ಲ ಎಂಬ ಕೊರಗು ಆ ಪಕ್ಷಕ್ಕಿದೆ. ಕಾಂಗ್ರೆಸ್‌ ಪಕ್ಷವೇ ಮುಂದೆ ನಿಂತು ಬಿಜೆಪಿ ಪಕ್ಷದ ಕೊರಗು ನೀಗಿಸುವ ಕಡೆಗೆ ಹೆಜ್ಜೆ ಹಾಕಿದೆ ಎಂದರ್ಥ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಯುಪಿಐ ಶುಲ್ಕ: ದೀಪ ಹಚ್ಚಿಸಿಕೊಂಡು, ಬತ್ತಿ ಇಟ್ಟರೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read
UPI_Payments

ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಡಿಜಿಟಲ್‌ ಡಿಜಿಟಲ್‌ ಎಂದು ಹೇಳಿ ಹೇಳಿ, ಜನರಿಗೆ ಅಂಗೈಯಲ್ಲೇ ಅರಮನೆ ತೋರಿಸಿತ್ತು. ಜನರೂ ಅದಕ್ಕೆ ಹೊಂದಿಕೊಂಡು ಯುಪಿಐ ಮೂಲಕವೇ ಹೆಚ್ಚು ವ್ಯವಹಾರ ಮಾಡುತ್ತಿದ್ದರು. ನಗದು ವ್ಯವಹಾರ ತುಂಬಾ ಕಡಿಮೆಯಾಗಿತ್ತು. ಈಗ ಎರಡು ಸಾವಿರ ಮೇಲೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದರೆ, ಪ್ರತಿ ಸಾವಿರ ರೂಪಾಯಿಗೆ ನಾಲ್ಕು ರೂಪಾಯಿ ಕಟ್‌ ಮಾಡಿಕೊಳ್ಳಲು ಮುಂದಾಗಿದೆ.  ವ್ಯಾಪಾರಿಗಳ ಹಣ ಕಟ್‌ ಆಗುತ್ತದೆ ವಿನಾ ಜನರದಲ್ಲ ಎಂದು ಸಮಜಾಯಿಷಿ ನೀಡುತ್ತಿದೆ.

ಅವರು ವ್ಯಾಪಾರಿಗಳು! ಅವರು ತಮ್ಮ ಕೀಸೆಯಲ್ಲಿನ ಹಣ ಕಟ್ ಮಾಡಿಸಿಕೊಳ್ಳಲು ಸಾಧ್ಯವೆ? ಇಂದು ನಾಲ್ಕು ರೂಪಾಯಿ, ನಾಳೆ ಐದು, ನಾಡಿದ್ದು ಹತ್ತು… ಹೀಗೆ ಏರುತ್ತಲೇ ಹೋಗಬಹುದು.  ವ್ಯಾಪಾರಿಗಳೂ ದರ ಹೆಚ್ಚಿಸುತ್ತಾ ಹೋಗುತ್ತಾರೆ. ದರದ ಭಾರ ಮಾತ್ರ ಜನರೇ ಹೊರಬೇಕು.

ಇನ್ನೊಂದು ಕಡೆ, ಯುಪಿಐ ಮೂಲಕ ಹಣದ ವಹಿವಾಟು ಕಡಿಮೆಯಾಗಿ ದೇಶ ಮತ್ತೆ ನಗದಿಗೆ ಮರಳಬಹುದು.  ಸರ್ಕಾರದ ಈ ನಿರ್ಧಾರ ದೇಶವನ್ನು ಡಿಜಿಟಲ್‌ನಿಂದ ಮತ್ತೆ ಕಾಗದದ ಕಡೆಗೆ ತೆಗೆದುಕೊಂಡು ಹೊಗುವ ಅಪಾಯವೂ ಇದೆ. ಈ ದಿಢೀರ್‌ ಬೆಳವಣಿಗೆ ನೋಡಿ ನೆಟ್ಟಿಗರು ʻಅವರು ತಮ್ಮ ಹುಟ್ಟು ಹಬ್ಬದಂದು ನಮ್ಮಿಂದ ದೀಪ ಹಚ್ಚಿಸಿಕೊಂಡು,  ನಮಗೇ ಬತ್ತಿ ಇಟ್ಟರುʼ ಎಂದು ಪ್ರಧಾನಿಯವರ ಕಾಲೆಳೆಯುತ್ತಿದ್ದಾರೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಜಾರಕಿಹೊಳಿ ದಿನಕ್ಕೊಂದು ಮಾತು: ಅಸಲಿ ಕಾರಣವೇನು?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read
ಸತೀಶ್‌ ಜಾರಕಿಹೊಳಿ

ತಮ್ಮ ಮೇಲೆ ಇ.ಡಿ ದಾಳಿ ಮಾಡಿದಾಗಿನಿಂದ ಸತೀಶ್‌ ಜಾರಕಿಹೊಳಿ ಇಂದೊಂದು ಮಾತನಾಡಿ, ಮರುದಿನ ತಾವಾಡಿದ ಮಾತಿಗೆ ಹಿಂದೆ ಸರಿಯುತ್ತಿದ್ದಾರೆ. ಮೊದಲು ʼಇ.ಡಿ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಅದು ಸಾಬೀತುಪಡಿಸಬೇಕುʼ ಎಂದು ಇ.ಡಿಗೆ ಸವಾಲು ಹಾಕಿದರು. ಮರುದಿನ ʼಅದೊಂದು ಕಾನೂನುಬದ್ಧ ಸಂಸ್ಥೆ. ಸವಾಲು ಹಾಕುವ ಪ್ರಶ್ನೆಯೇ ಇಲ್ಲʼ ಎಂದು ಹೇಳಿ ತಮ್ಮ ಮಾತಿಗೆ ಹಿಂದೆ ಸರಿದರು. ಆಗ ʼಇ.ಡಿಗೆ ದೂರು ಕೊಟ್ಟವರು ಯಾರೆಂದು ನಮಗೆ ಗೊತ್ತುʼ. ʼಮುಖ್ಯಮಂತ್ರಿಗಳಿಗೆ ಎಲ್ಲಾ ಹೇಳಿದ್ದೇನೆʼ ಅಂದಿದ್ದರು. ಈಗ, ದೂರು ಕೊಟ್ಟವರ ಬಗ್ಗೆ ಖಚಿತ ಮಾಹಿತಿ ಇಲ್ಲ. ಯಾವುದೇ ಸಾಕ್ಷ್ಯಗಳಿಲ್ಲ, ಪುರಾವೆ ಇಲ್ಲ, ಅದೂ ಇಲ್ಲ, ಇದೂ ಇಲ್ಲ ಎಂದು ಬಡಬಡಿಸುತ್ತಿದ್ದಾರೆ.

ಈ ಯೂಟರ್ನ್‌ಗೆ ಕೆಲ ಕಾರಣಗಳಿವೆ. ಒಂದು, ಇ.ಡಿಗೆ ದೂರು ಕೊಟ್ಟವರು ಯಾರೆಂಬುದು ಅವರಿಗೆ ಗೊತ್ತೇ ಇಲ್ಲ. ಹಾಗಾಗಿ ದಿನಕ್ಕೊಬ್ಬರ ಹೆಸರು ಬರಿ ಊಹೆ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಇಲ್ಲವೇ, ಅವರಾರು ಎಂದು ಅವರಿಗೆ ಗೊತ್ತು. ಗೊತ್ತಿದ್ದರೂ, ಅಸಹಾಯಕರಾಗಿ ಅವರು ಇವರಿಗಿಂತ ತುಂಬಾ ಪ್ರಭಾವಶಾಲಿಯಾಗಿರಬೇಕು ಅದಕ್ಕೆ ಮತ್ತೆ ಮತ್ತೆ ಯೂಟರ್ನ್‌ ಹೊಡೆಯುತ್ತಿದ್ದಾರೆ ಅಥವಾ ಅವರು ಹೆದರಿ ಹೀಗೆ ದಿನಕ್ಕೊಂದು ಮಾತನಾಡತ್ತಿರುವ ಸಾಧ್ಯತೆಯೂ ಇದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
100 ಪದ

ಮೊದಲು ಬದಲಾಗಬೇಕಾಗಿರುವುದು ಕೆಪಿಎಸ್‌ಸಿ ಅಲ್ಲ, ರಾಜಕಾರಣಿಗಳು!

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read
ಕೆಪಿಎಸ್‌ಸಿ ಸುಧಾರಣೆ

ಕೆಪಿಎಸ್‌ಸಿ ಸುಧಾರಣೆಗೆ ಆಯೋಗ ಮುಂದಾಗಿದೆ. ಒಳ್ಳೆಯದು. ಆದರೆ, ಆಯೋಗದ ಸದಸ್ಯರ ಸಂಖ್ಯೆಗೆ ಕತ್ತರಿ ಹಾಕದೆ, ರಾಜಕಾರಣಿಗಳು ಹಣ ಪಡೆದು ಅಪ್ರಾಮಾಣಿಕರನ್ನು ಆಯೋಗದ ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸುವ ಪರಂಪರೆ ನಿಲ್ಲಿಸದೆ, ಏನೇ ಮಾಡಿದರೂ ಅದೆಲ್ಲಾ ವ್ಯರ್ಥ ಕಸರತ್ತು. ಹುತ್ತದಲ್ಲಿ ಹಾವು ಹಾಗೇ ಇಟ್ಟು, ಮೇಲೆ ಸಾರಿಸಲು ಮುಂದಾಗಿದೆ ಎಂದು ವಿದ್ಯಾರ್ಥಿಗಳು ತಿವಿಯುತ್ತಿದ್ದಾರೆ.

ಆಯೋಗದ ಆಯಕಟ್ಟಿನ ಜಾಗಕ್ಕೆ ಪ್ರಾಮಾಣಿಕರನ್ನು ತಂದರೆ, ಈ ಎಐ ಕಾಲದಲ್ಲಿ ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ನೇಮಕಾತಿ ಮಾಡಿಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ರಾಜಕಾರಣಿಗಳ ಕಾಲೆಳೆಯುತ್ತಿದ್ದಾರೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್