ʻಸ್ಕೂಲ್ ಠಿಕ್ ಕರೋʼ ಎಂಬ ಅಭಿಯಾನದ ನಿಮಿತ್ತ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಮತ್ತು ಸಂಗಡಿಗರು ಠಿಕಾಣಿ ಹುಡಿದ್ದಾರೆ. ಮೊನ್ನೆ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣದ ವಿರುದ್ಧ ದನಿ ಎತ್ತಿ, ʻಶೀಘ್ರವೇ ಬೆಂಗಳೂರಿನಲ್ಲಿ ಇದರ ವಿರುದ್ಧ ಹೋರಾಟ ರೂಪಿಸುತ್ತೇವೆʼ ಎಂದು ಘೋಷಣೆ ಮಾಡಿದ್ದು ನೊಂದ ವಿದ್ಯಾರ್ಥಿಗಳಿಗೆ ತುಸು ಸಮಾಧಾನ ತಂದಿದೆ.
ಅವರು ಮಾಧ್ಯಮಗಳೆದುರಿಗೆ ಮಾತನಾಡುತ್ತಾ ʼಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮ ಒಂದು ವ್ಯವಸ್ಥಿತ ದೊಡ್ಡ ಮಾಫಿಯಾ ಆಗಿದೆ. ಇಂಥಹ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳ ಹೆಡೆಮುರಿ ಕಟ್ಟಬೇಕಾಗಿದೆ. ಈ ಕೆಲಸವನ್ನು ಇನ್ನು ಮುಂದೆ CJP ಮಾಡಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ನಾವೆಲ್ಲರೂ ಹೆಜ್ಜೆ ಇಡಬೇಕಾಗಿದೆʼ ಎಂದಿದ್ದು ಯುವಜನತೆಯಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಉಮೆದು ಬೆಳದಿದೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ಹೋರಾಟಕ್ಕೆ ಅಣಿಯಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರೀಷತ್ {ಎಬಿವಿಪಿ}, ಸ್ಟುಡೆಂಟ್ ಫೇಡರೆಷನ್ ಆಫ್ ಇಂಡಿಯಾ {ಎಸ್‌ಎಫ್‌ಐ}, ಕರ್ನಾಟಕ ವಿದ್ಯಾರ್ಥಿ ಸಂಘಟನೆ [ಕೆವಿಎಸ್], ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಎಸ್‌ಐಒ), ನ್ಯಾಷನಲ್ ಸ್ಟುಡೆಂಟ್ ಯುನಿಯನ್ ಆಫ್ ಇಂಡಿಯಾ {ಎನ್‌ಎಸ್‌ಐಯು}, ಮುಸ್ಲಿಂ ಸ್ಟುಡೆಂಟ್ ಫೇಡರೆಷನ್ {ಎಮ್‌ಎಸ್‌ಎಫ್}, ಎಐಎಸ್‌ಎಫ್ ಎಂಬ ವಿದ್ಯಾರ್ಥಿ ಸಂಘಟನೆಗಳು ಯಾವ ಬಿಲದಲ್ಲಿ ಅಡಗಿಕೊಂಡಿವೆ? ಈ ಸಂಘಟನೆಗಳ ಜಾಣ ಮೌನ ನೊಂದ ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಸತೀಶ್ ಜಾರಕಿಹೊಳಿ ಮೇಲೆ ರೇಡ್: ಲಾಭ ಯಾರಿಗೆ?

ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಡಿದ ದಾಳಿ ರಾಜ್ಯ ರಾಜಕಾರಣದಲ್ಲಿ ಎರಡು ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು, ರಾಜಕೀಯವಾಗಿ, ಇನ್ನೊಂದು ಇ.ಡಿ. ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ. ಇದರಲ್ಲಿ ಮೊದಲನೆಯ ಚರ್ಚೆಯೇ ಹೆಚ್ಚು ಸದ್ದು ಮಾಡುತ್ತಿದೆ. ಈ ಚರ್ಚೆ ಎಲ್ಲೆಲ್ಲೋ ಕರೆದುಕೊಂಡು ಹೋಗಿ, ಯಾರ ಯಾರದೋ ಮನೆಯ ಮುಂದೆ ತಂದು ನಿಲ್ಲಿಸುತ್ತಿದೆ.
ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗಿನಿಂದ ತಮಗಾಗದ ಬಿಜೆಪಿಯೇತರ ರಾಜಕಾರಣಿಗಳ ಮನೆಯ ಮೇಲೆ ಮಾತ್ರ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುತ್ತಿದೆ ಎನ್ನುವವರಿದ್ದಾರೆ. ಇವರ ಈ ಮಾತಿನಲ್ಲಿ ವಾಸ್ತವವಿದೆ. ಕರ್ನಾಟಕದಲ್ಲಿ ಡಾ. ಜಿ. ಪರಮೇಶ್ವರ್, ಡಿ. ಕೆ. ಶಿವಕುಮಾರ್, ಜಮೀರ್ ಅಹಮದ್ ಖಾನ್, ಕೆ. ಎನ್. ರಾಜಣ್ಣ, ಎನ್. ಎ. ಹ್ಯಾರಿಶ್, ಇ. ತುಕಾರಾಂ, ನಾ. ರಾ. ಭರತ್ ರೆಡ್ಡಿ, ಕೆ. ನಾಗೇಂದ್ರ, ವೀರೇಂದ್ರ ಪಪ್ಪಿ, ನಂಜೇಗೌಡ, ಸತೀಶ್ ಜಾರಕಿಹೊಳಿ ಮನೆಯ ಮೇಲೆ ದಾಳಿಯಾಗಿದೆ. ಇವರಾರು ಬಿಜೆಪಿಗರಲ್ಲ, ಎಲ್ಲರೂ ಕಾಂಗ್ರೆಸ್ ಪಕ್ಷದವರು.
ಸತೀಶ್ ಮೇಲಿನ ಈ ದಾಳಿಯ ಹಿಂದೆ ಅವರದೇ ಪಕ್ಷದವರ ಕೈವಾಡವಿದೆ ಎಂದು ಬಿಜೆಪಿ ಪಕ್ಷದ ಬಹುತೇಕ ರಾಜಕಾರಣಿಗಳು ಮಾತ್ರ ಒಂದೇ ಧ್ವನಿಯಲ್ಲಿ ಮಾತ್ರ ಮಾತನಾಡುತ್ತಿದ್ದಾರೆ (ಈ ದಾಳಿಯಲ್ಲಿ ಮಾತ್ರ ಹೀಗೆ ಮಾತನಾಡಿದ್ದಾರೆ). ಕಾಂಗ್ರೆಸ್ ಪಕ್ಷದಲ್ಲಿ ಗಾಯಗೊಂಡ ಹುಲಿಯಂತಾಗಿರುವ ಕೆ. ಎನ್. ರಾಜಣ್ಣನವರು ತುಸು ಕೋಪದಿಂದಲೇ ಇದೇ ಧಾಟಿಯಲ್ಲಿ ಪರೋಕ್ಷವಾಗಿ ಕುಟುಕಿದ್ದಾರೆ. ಈಗಾಗಲೇ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಬಿ. ನಾಗೇಂದ್ರ ಅವರ ಮೇಲೆ ಇ.ಡಿ ದಾಳಿ ಮಾಡಿದೆ. ಬಿಜೆಪಿಯ ನಾಯಕರೇ ಪಟ್ಟು ಹಿಡಿದು ಅವರ ರಾಜೀನಾಮೆಯೂ ಪಡೆದಿದ್ದಾರೆ. ಮತ್ತೆ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ರಾಜಕಾರಣಿಗಳ ಮೇಲೆ ದಾಳಿ ಮಾಡಿಸುವಷ್ಟು ಬಿಜೆಪಿಗರು ದಡ್ಡರಲ್ಲ.
ಸರ್ಕಾರದ ನಿದ್ದೆಗೆಡಿಸಬೇಕಾದ ಬಿಜೆಪಿ ರಾಜ್ಯದಲ್ಲಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಪಕ್ಷದ ನಾಯಕರ ಒಳಜಗಳದಿಂದಾಗಿ ಅದು ಎದ್ದು ನಿಲ್ಲದಂತಹ ಸ್ಥಿತಿಗೆ ತಲುಪಿದೆ. ಭಾಜಪದ ನಾಯಕರು ಇದೇ ದಾರಿಯಲ್ಲಿ, ಹೀಗೆ ಮುಂದುವರೆದರೆ ಮತ್ತೆ ಅವರು ಐದು ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲಿ ಕೂರುವ ಸಾಧ್ಯತೆ ಇದೆ.
ʼ2028ರಲ್ಲಿ ಕಾಂಗ್ರೆಸ್ ಎರಡನೇ ಬಾರಿಯೂ ಬಹುಮತದ ಸಮೀಪವೋ ಅಥವಾ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷದೊಳಗೆ ಡಿ. ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಸಿಎಂ ಕುರ್ಚಿಗಾಗಿ ತೀವ್ರ ಪೈಪೋಟಿ ಶುರುವಾಗುತ್ತದೆ. ಆಗ ಡಿ.ಕೆ. ಶಿವಕುಮಾರ್ ಅವರು ಡಾ. ಜಿ. ಪರಮೇಶ್ವರ್ ಅವರನ್ನು ಸುಲಭವಾಗಿ ಪಕ್ಕಕ್ಕೆ ಸರಿಸಬಹುದು. ಆದರೆ, ಸತೀಶ್ ಅವರನ್ನು ಅಷ್ಟು ಸುಲಭವಾಗಿ ಪಕ್ಕಕ್ಕೆ ತಳ್ಳಲು ಆಗುವುದಿಲ್ಲ. ಹಾಗಾಗಿಯೇ ಅವರು ಸ್ಪರ್ಧೆಗಾಗಿ ಕುದುರೆ ಹತ್ತದಂತೆ ಈಗಲೇ ಅವರ ಕಾಲು ಕಟ್ಟಿ ಹಾಕಬೇಕೆಂದು ಅವರ ಮೇಲೆ ಈ ದಾಳಿ ಯಾರೋ ದೂರಾಲೋಚನೆ ಇಟ್ಟುಕೊಂಡೆ ಮಾಡಿಸಿದ್ದಾರೆʼ ಎಂದು ಎನ್ನುವವರೂ ಇದ್ದಾರೆ. ಜನರ ಈ ಮಾತು ಸತೀಶ್ ಅವರ ಮೇಲಿನ ದಾಳಿ ಈ ತಕ್ಷಣ ರಾಜಕೀಯವಾಗಿ ಯಾರಿಗೆ ಲಾಭ ತಂದು ಕೊಡುತ್ತದೆ ಎಂದು ರಾಜಕಾರಣದ ಎಬಿಸಿಡಿ ಗೊತ್ತಿಲ್ಲದ ಸಣ್ಣ ಮಕ್ಕಳಿಗೂ ಅರ್ಥವಾಗುವಂತಿದೆ. ನೀರಿನೊಳಗಿನ ಮೀನಿನ ಹೆಜ್ಜೆ ಗುರುತಿಸಬಹುದು. ಆದರೆ, ರಾಜಕಾರಣದಲ್ಲಿ ಮಹತ್ವಾಕಾಂಕ್ಷೆಯುಳ್ಳ ರಾಜಕಾರಣಿಗಳ ರಾಜಕೀಯ ಹೆಜ್ಜೆ ಗುರುತಿಸಲು ಆಗುವುದಿಲ್ಲ.
ಇ.ಡಿ ದಾಳಿ ಮಾಡಿ, ಮೈಮೇಲೆ ಒಂದು ಹುಣ್ಣೂ ಆಗದಂತೆ ಕೆದರಿ ಕೆದರಿ ಗಾಯ ಮಾಡುತ್ತದೆ ಅಷ್ಟೇ. ಬಹುತೇಕ ಪ್ರಕರಣಗಳನ್ನು ದಡಕ್ಕೆ ಮುಟ್ಟಿಸುವುದಿಲ್ಲ. ಅದು ಮಾಡಿದ ಗಾಯ ಮಾತ್ರ ಹಾಗೇ ಉಳಿಸುತ್ತದೆ. ಅದು ಕಲೆಹಾಕಿದ ಮಾಹಿತಿ ಹಾಗೂ ದಾಖಲೆಗಳು ಎಲ್ಲೋ ದೂಳಲ್ಲಿ ಬಿದ್ದಿರುತ್ತವೆ. ರಾಜಕೀಯದಲ್ಲಿ ಗಾಯ ಮಾಡಿಕೊಂಡ ಕುದುರೆಯ ಕೊರಳಿಗೆ ಗಂಟೆ ಕಟ್ಟಿ ಯಾರೂ ರೇಸಿಗೆ ಬಿಡುವುದಿಲ್ಲ.
ಜಾರಕಿಹೊಳಿ ಅವರು ʼನಾವು ವಿದೇಶದಲ್ಲಿ ಹೂಡಿಕೆ ಮಾಡಿಲ್ಲ. ಈಗ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ನಾನು ಸಣ್ಣ ಮೀನು, ದೊಡ್ಡ ದೊಡ್ಡ ಮೀನುಗಳಿವೆ. ಆದರೆ, ಇ.ಡಿ ಆ ಕಡೆಗೆ ನೋಡುವುದೇ ಇಲ್ಲ. ಮೈಸೂರು ಮೂಲದ ವ್ಯಕ್ತಿಯೊಬ್ಬ ನನ್ನ ವಿರುದ್ಧ ಇ.ಡಿ.ಗೆ ದೂರು ನೀಡಿದ್ದಾರೆ. ಇದು ಕೇಂದ್ರ ಸರ್ಕಾರದ ಸೇಡಿನ ರಾಜಕೀಯ. ನಮ್ಮ ಮೇಲೆ ಇ.ಡಿ. ದಾಳಿ ಮಾಡುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು. ಲೋಕೋಪಯೋಗಿ ಇಲಾಖೆಯ ಕಾಮಗಾರಿಯಲ್ಲಿ ಲಂಚ ಪಡೆದು, ಅದೇ ಹಣವನ್ನು ಹವಾಲಾ ಮೂಲಕ ವಿದೇಶಕ್ಕೆ ತಲುಪಿಸಿ ಹೂಡಿಕೆ ಮಾಡಿದ್ದು ಇ. ಡಿ. ಸಾಬೀತುಪಡಿಸಬೇಕುʼ…. ಹೀಗೆ ಏನೇನೋ ಬಡಬಡಿಸುತ್ತಿದ್ದಾರೆ. ಆದರೆ, ಅವರ ಮಾತಿನಲ್ಲಿ ಅಂತಹ ಬಲವಾಗಲಿ, ಆತ್ಮವಿಶ್ವಾಸವಾಗಲಿ ಎದ್ದು ಕಾಣುತ್ತಿರಲಿಲ್ಲ ಜತೆಗೆ ಅವರ ಮಾತುಗಳೇ ನಾವು ತಪ್ಪು ಮಾಡಿದ್ದೇವೆ ಎಂಬ ಅರ್ಥ ನೀಡುತ್ತಿದ್ದವು.
ʻನಾನೇ ಕಾರಣʼ ಎಂದ ಡಿಕೆಶಿ: ಐದು ಗ್ಯಾರಂಟಿ ಯಾರ ಕೂಸು?

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರದಲ್ಲಿ ಗೆದ್ದು, ಬಿಜೆಪಿಯನ್ನು ಧೂಳೀಪಟ ಮಾಡಿತ್ತು. ಚುನಾವಣಾ ಪ್ರಚಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವು ʻಐದು ಗ್ಯಾರಂಟಿʼ ಯೋಜನೆ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಮತದಾರರಿಗೆ ಆಶ್ವಾಸನೆ ನೀಡಿತ್ತು. ಗೆದ್ದ ನಂತರ ಜಾರಿಗೂ ತಂದಿದೆ. ಈಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ʻಸಿದ್ದರಾಮಯ್ಯನವರು ಕೇವಲ 10 ಕೆ.ಜಿ ಅಕ್ಕಿ ನೀಡುವ ಯೋಜನೆ ಮಾತ್ರ ರೂಪಿಸಿದರು. ಉಳಿದ ನಾಲ್ಕು ಯೋಜನೆಗಳು ನಾನೇ ಸಿದ್ಧಪಡಿಸಿದ್ದು, ನಾನೇ ಯೋಜನೆ ರೂಪಿಸಿದ್ದುʼ – ಎಂದಿರುವ ಮಾತು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಅವರು ಮಾಧ್ಯಮಗಳ ಎದುರು ಹೀಗೆ ಹೇಳುವ ಮೂಲಕ ಕ್ರೆಡಿಟ್‌ಗೆ ಕ್ಲೇಮು ಮಾಡಿದ್ದಾರೆ ಹಾಗೂ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯುತ್ತಿದ್ದಾರೆಂದು ಅವರ ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ.
ಸಿದ್ದರಾಮಯ್ಯನವರು ʻಪಂಚ ಗ್ಯಾರಂಟಿ ನನ್ನ ಕನಸಿನ ಕೂಸುʼ ಎಂದು ನೂರಾರು ಬಾರಿ ಹೇಳಿದ್ದಾರೆ. ಜನರು ಹಾಗೇ ಭಾವಿಸಿದರು. ಆದರೆ, ಈಗ ಡಿಕೆ ಶಿವಕುಮಾರ್ ಮಾತು ಜನರ ತಲೆಯಲ್ಲಿ ಈ ಯೋಜನೆಗಳ ಅಸಲಿ ತಂದೆ ಯಾರು ಎಂಬ ಪ್ರಶ್ನೆ ಹಾಕಿದೆ. ಸಿದ್ದರಾಮಯ್ಯ ಇದು ಹೇಗೆ ಸ್ವೀಕರಿಸುತ್ತಾರೆ ಹಾಗೂ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಇದೀಗ ಕೂತುಹಲ ಮೂಡಿಸಿದೆ.
ರಾಹುಲ್ ಭೇಟಿಯ ಬೆನ್ನಲ್ಲೇ ಸಿದ್ದು ಫುಲ್ ಖುಷ್

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿದ ನಂತರ ಹೆಚ್ಚಾಗಿ ಹೊರಗಡೆ ಎಲ್ಲೂ ಕಾಣಿಸುತ್ತಿಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ತಮ್ಮ ಆಪ್ತ ಕೆ. ಎನ್. ರಾಜಣ್ಣನಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದರು. ಅವರಿಂದ ಮಾತು ಉಳಿಸಿಕೊಳ್ಳಲಾಗಲಿಲ್ಲ. ಮೊನ್ನೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಅಹಿಂದ ಸಮಾವೇಶದಲ್ಲಿ ಭಾಗವಹಿಸಿ, ʻನಾನು ಚುನಾವಣಾ ರಾಜಕಾರಣದಿಂದ ನಿವೃತ್ತನಾಗುತ್ತೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆʼ ಎಂದು ಅವರಾಡಿದ ಮಾತುಗಳು ಹಾಗೂ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ದಿಗಿಲು ಹುಟ್ಟಿಸಿದಂತಿದೆ.
ಹಾಗಾಗಿ ಅವರನ್ನು ದೆಹಲಿಗೆ ಕರೆಯಿಸಿಕೊಂಡು, ದೆಹಲಿಯ ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಅರ್ಧಗಂಟೆ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ತಮ್ಮ ಆಪ್ತರಾದ ಅನ್ನಪೂರ್ಣ ತುಕಾರಾಂ ಹಾಗೂ ಬಸವರಾಜ ಶಿವಣ್ಣನಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜತೆಗೆ ಖಾಲಿ ಇರುವ ಐದು ವಿಧಾನ ಪರಿಷತ್ ಸ್ಥಾನಗಳ ಬಗ್ಗೆಯೂ ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಅವರ ಮಾತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಾಗಾಗಿಯೇ ಅವರು ಜನಪಥ್‌ನಿಂದ ಹೊರಗೆ ಬಂದ ಮೇಲೆ ಫುಲ್ ಖುಷ್ ಇದ್ದಾರೆಂದು ಅನ್ನುವವರಿದ್ದಾರೆ. ಇಲ್ಲ ಅಂತಹ ವಿಶೇಷ ಚರ್ಚೆ ಏನೂ ಆಗಿಲ್ಲ ಇದೊಂದು ಸಹಜ ಭೇಟಿ ಎನ್ನುವವರೂ ಇದ್ದಾರೆ. ಆದರಿದು ಸಹಜ ಭೇಟಿ ಅಂತೂ ಅಲ್ಲ. ಅಸಮಾಧಾನದ ಮೂಟೆ ಹೊತ್ತಿಕೊಂಡೇ ಅವರು ದೆಹಲಿ ವಿಮಾನ ಹತ್ತಿದ್ದರು. ಅವರ ಮಾತುಗಳಿಗೆ ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅವರಿಗೆ ಬುಲಾವ್ ಬರುತ್ತಿರಲಿಲ್ಲವೇನೋ?
ಕೆ. ಎನ್. ರಾಜಣ್ಣನಿಗೆ ಮತ್ತೆ ರಾಜಕೀಯ ಹಿನ್ನಡೆ

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಸ್ಟ್ 11, 2025ರಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ತೀರಾ ಅವಮಾನಕಾರಿಯಾಗಿ ವಜಾ ಮಾಡಿತ್ತು. ಅಟ್‌ಲಿಸ್ಟ್ ಅವರಿಗೆ ರಾಜೀನಾಮೆ ನೀಡಲು ಒಂದು ತಾಸು ಸಮಯ ನೀಡಿರಲಿಲ್ಲ. ಅದು ರಾಹುಲ್ ಗಾಂಧಿ ಬಿಜೆಪಿಯ ವೋಟ್ ಚೋರಿ ಬಗ್ಗೆ ಮಾತನಾಡಲು ಆರಂಭಿಸಿದ ಸಮಯ. 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹಾದೇವಪುರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿತ್ತು ಎಂದು ಗಟ್ಟಿಯಾಗಿ ದೆಹಲಿಯಲ್ಲಿ ಮಾಧ್ಯಮಗಳ ಎದುರಿಗೆ ರಾಹುಲ್ ಮಾತನಾಡಿದರು.
ಮರುದಿನ ಕೆ. ಎನ್. ರಾಜಣ್ಣನವರು ʻಮತದಾರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಮಾತನಾಡುತ್ತಿದ್ದಾರೆ. ಅಕ್ರಮ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ನಾಯಕರು ಆಗೇನು ಮಾಡುತ್ತಿದ್ದರುʼ ಎಂಬರ್ಥದಲ್ಲಿ ಮಾತನಾಡಿದರು. ಅವರ ಮಾತುಗಳು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರಿಂದ ಕೆರಳಿದ ರಾಹುಲ್ ಗಾಂಧಿ ಈ ಕ್ಷಣವೇ ತಮ್ಮ ಸಂಪುಟದಿಂದ ಅವರನ್ನು ಡಿಸ್‌ಮಿಸ್ ಮಾಡಲು ಸಿದ್ದರಾಮಯ್ಯನವರಿಗೆ ತಾಕೀತು ಮಾಡಿದರು.
ಪೇಚಿಗೆ ಸಿಲುಕಿದ ಸಿದ್ದರಾಮಯ್ಯನವರು ಅಸಹಾಯಕರಾಗಿ ರಾಜಣ್ಣನವರನ್ನು ಡಿಸ್‌ಮಿಸ್ ಮಾಡಿದರು. ʻಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಬಹುದಿತ್ತು. ಆದರೆ, ಅವರಿಗೆ ತಮ್ಮ ಕುರ್ಚಿ ಮುಖ್ಯವಾಗಿತ್ತು. ಹಾಗಾಗಿ, ರಾಜಣ್ಣನವರ ಪರವಾಗಿ ಅವರು ಗಟ್ಟಿಯಾಗಿ ನಿಲ್ಲಲಿಲ್ಲʼ ಎಂದು ರಾಜಣ್ಣನವರ ಅಭಿಮಾನಿಗಳು ಸಿದ್ದರಾಮಯ್ಯನವರ ಮೇಲೆ ಅಸಮಾಧಾನಗೊಂಡಿದ್ದರು. ರಾಜಕೀಯದಲ್ಲಿ ʻನೀನು ನನಗಾದರೆ, ನಾನು ನಿನಗೆʼ ಅಂತ ಒಂದು ಸಿಂಪಲ್ ನಿಯಮವಿದೆ. ಆದರೆ, ರಾಜಣ್ಣನವರ ವಿಷಯದಲ್ಲಿ ಆ ನಿಯಮ ಕೆಲಸಕ್ಕೆ ಬರಲಿಲ್ಲ.
ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಿತ್ತು. ಆ ಸಮಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಬಿರುಸಾಗಿಯೇ ನಡೆಯುತ್ತಿತ್ತು. ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿ ಆಗುತ್ತಿದೆ. ಹಾಗಾಗಿ ಯಾರು ಈ ಕುರಿತು ಮಾತನಾಡಬಾರದು ಎಂದು ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆಗ ಬಹುತೇಕರು ಈ ಕುರಿತು ಉಸಿರು ಬಿಡಲಿಲ್ಲ. ಆದರೆ, ರಾಜಣ್ಣ ಮಾತ್ರ ಅಗಲೂ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮುಂದುವರಿಸಿದರು. ಇದು ಪಕ್ಷದ ವರಿಷ್ಠರಿಗೆ ಇರಿಸು ಮುರಿಸು ಉಂಟುಮಾಡಿತ್ತು. ಹಾಗಾಗಿ ಅವರನ್ನು ಸಂಪುಟದಿಂದ ತೆಗೆಸಲು ಒಂದು ಅವಕಾಶಕ್ಕಾಗಿ ವಿರೋಧಿ ಗುಂಪು ಕಾಯತ್ತಿತ್ತು. ಆ ಅವಕಾಶವೂ ಸಿಕ್ಕಿತ್ತು. ಹಾಗಾಗಿ ಅವರನ್ನು ವಜಾ ಮಾಡಿಸಿದರು.
ಮತ್ತೊಂದು ಕಡೆ ಅವರದ್ದೇ ಸಮುದಾಯದ (ವಾಲ್ಮೀಕಿ ಸಮುದಾಯದ) ಬಿ. ನಾಗೇಂದ್ರ ಅವರಿಂದ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷ ಈಗ ಮತ್ತೊಂದು ಅವಧಿಗೆ ವಾಲ್ಮೀಕಿ ಸಮುದಾಯದ ರಾಜಣ್ಣನವರನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರ ಸಹಕಾರಿ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು. ರಾಜಣ್ಣನವರು ಮತ್ತೊಂದು ಅವಧಿಗೆ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಲು ಸುರ್ಜೇವಾಲಾ, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ ಅವರ ಮನೆ ಬಾಗಿಲು ತಟ್ಟಿದರು.
ಮುಖ್ಯಮಂತ್ರಿಗಳು ಯಾರ ಹೆಸರು ಸೂಚಿಸುತ್ತಾರೋ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಾಮಾನ್ಯವಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಇದಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದರಿಂದಾಗಿ ನಾಲ್ಕು ತಿಂಗಳ ಹಿಂದೆ ನಡೆಯಬೇಕಿದ್ದ ಚುನಾವಣೆ ನಡೆಯಲಿಲ್ಲ. ಈ ಬಾರಿ ಸಿದ್ದರಾಮಯ್ಯನವರು ರಾಜಣ್ಣನವರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಹಾಗಾಗಿ ಅವರೇ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಬಹುತೇಕರು ಭಾವಿಸಿದರು. ಆದರೆ, ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ಮತ್ತು ಸೋದರಸಂಬಂಧಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರಿಗೆ ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ಯಶಸ್ವಿಯಾದರು.
ಇದು ಕೇವಲ ಕೆ. ಎನ್. ರಾಜಣ್ಣನವರ ಹಿನ್ನಡೆ ಮಾತ್ರವಲ್ಲ, ಸಿದ್ದರಾಮಯ್ಯನವರದ್ದೂ ಕೂಡ.
ಬೀದರ ಜಿಲ್ಲಾಧ್ಯಕ್ಷ ಆಯ್ಕೆ: ಖಂಡ್ರೆಗೆ ಶಾಕ್

ಬೀದರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಿಂದ ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇ ಮಾತು, ನಡೆದದ್ದೇ ದಾರಿಯಾಗಿತ್ತು. ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ʼಖಂಡ್ರೆ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು, ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆʼ ಎಂದು ಆರೋಪಿಸಿದರು. ಅವರ ವಿರುದ್ಧ ರಾಜಧಾನಿಯಲ್ಲಿ ಸಾಲುಸಾಲು ಸಭೆಗಳು ಮಾಡಿದರು. ಜತೆಗೆ ʼಬಸವರಾಜ್ ಜಾಬಶೆಟ್ಟಿ ರಬ್ಬರ್ ಸ್ಟಾಂಪ್ ಇದ್ದಾರೆ. ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲೇಬೇಕೆಂದುʼ ಪಕ್ಷದ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದರು. ಆಗ ಪಕ್ಷದ ಹೈಕಮಾಂಡ್ ಬಂಡಾಯ ಸಾರಿದ ಗುಂಪಿಗೆ ಸಮಾಧಾನ ಪಡಿಸಿತು.
ಖಂಡ್ರೆಯವರು ಈ ಬಾರಿಯೂ ತಮಗೆ ಆಪ್ತರಾದ ಶಿವರಾಜ್ ಹಾಸನಕರ್, ನಿಸಾರ್ ಅಹಮದ್, ಅಥವಾ ಪೂಜಾ ಜಾರ್ಜ್ ಪೈಕಿ ಯಾರನ್ನಾದರೂ ಒಬ್ಬರನ್ನು ಜಿಲ್ಲಾಧ್ಯಕ್ಷ ಮಾಡಲು ತೀವ್ರ ಕಸರತ್ತು ನಡೆಸಿದರು. ಆದರೆ, ಪಕ್ಷದ ವರಿಷ್ಠರು ಇವರ ಬೇಡಿಕೆಗೆ ಮಣೆ ಹಾಕದೆ, ಮುಸ್ಲಿಂ ಸಮುದಾಯದ ಅಬ್ದುಲ್ ಮನ್ನಾರ್ ಸೇಠ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ʼನಿಮಗಿಂತ ಪಕ್ಷ ಮುಖ್ಯʼ ಎಂಬ ಸಂದೇಶವನ್ನು ಖಂಡ್ರೆಯವರಿಗೆ ನೀಡಿದೆ.
ಖಂಡ್ರೆಯವರ ವಿರುದ್ಧ ಬಂಡಾಯ ಸಾರಿದ ಗುಂಪಿನ ನಾಯಕತ್ವ ವಹಿಸಿದ ರಾಜಶೇಖರ್ ಪಾಟೀಲ್ ಅವರು ನೂತನ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಫೇಸ್‌ಬುಕ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಕರೆದು ಸನ್ಮಾನಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆಯವರ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ ಒಂದೂ ಪೋಸ್ಟ್ ಕಾಣುತ್ತಿಲ್ಲ. ನಿನ್ನೆಯಿಂದ ಈ ವಿಷಯದಲ್ಲಿ ಖಂಡ್ರೆಯವರು ಮಾತನಾಡಿಲ್ಲ. ಆದರೆ, ಅವರ ಸಾಮಾಜಿಕ ಜಾಲತಾಣಗಳೇ ಎಲ್ಲಾ ಹೇಳುತ್ತಿವೆ.


