ಬೀದರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಿಂದ ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇ ಮಾತು, ನಡೆದದ್ದೇ ದಾರಿಯಾಗಿತ್ತು. ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ʼಖಂಡ್ರೆ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು, ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆʼ ಎಂದು ಆರೋಪಿಸಿದರು. ಅವರ ವಿರುದ್ಧ ರಾಜಧಾನಿಯಲ್ಲಿ ಸಾಲುಸಾಲು ಸಭೆಗಳು ಮಾಡಿದರು. ಜತೆಗೆ ʼಬಸವರಾಜ್ ಜಾಬಶೆಟ್ಟಿ ರಬ್ಬರ್ ಸ್ಟಾಂಪ್ ಇದ್ದಾರೆ. ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲೇಬೇಕೆಂದುʼ ಪಕ್ಷದ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದರು. ಆಗ ಪಕ್ಷದ ಹೈಕಮಾಂಡ್ ಬಂಡಾಯ ಸಾರಿದ ಗುಂಪಿಗೆ ಸಮಾಧಾನ ಪಡಿಸಿತು.
ಖಂಡ್ರೆಯವರು ಈ ಬಾರಿಯೂ ತಮಗೆ ಆಪ್ತರಾದ ಶಿವರಾಜ್ ಹಾಸನಕರ್, ನಿಸಾರ್ ಅಹಮದ್, ಅಥವಾ ಪೂಜಾ ಜಾರ್ಜ್ ಪೈಕಿ ಯಾರನ್ನಾದರೂ ಒಬ್ಬರನ್ನು ಜಿಲ್ಲಾಧ್ಯಕ್ಷ ಮಾಡಲು ತೀವ್ರ ಕಸರತ್ತು ನಡೆಸಿದರು. ಆದರೆ, ಪಕ್ಷದ ವರಿಷ್ಠರು ಇವರ ಬೇಡಿಕೆಗೆ ಮಣೆ ಹಾಕದೆ, ಮುಸ್ಲಿಂ ಸಮುದಾಯದ ಅಬ್ದುಲ್ ಮನ್ನಾರ್ ಸೇಠ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ʼನಿಮಗಿಂತ ಪಕ್ಷ ಮುಖ್ಯʼ ಎಂಬ ಸಂದೇಶವನ್ನು ಖಂಡ್ರೆಯವರಿಗೆ ನೀಡಿದೆ.
ಖಂಡ್ರೆಯವರ ವಿರುದ್ಧ ಬಂಡಾಯ ಸಾರಿದ ಗುಂಪಿನ ನಾಯಕತ್ವ ವಹಿಸಿದ ರಾಜಶೇಖರ್ ಪಾಟೀಲ್ ಅವರು ನೂತನ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಫೇಸ್‌ಬುಕ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಕರೆದು ಸನ್ಮಾನಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆಯವರ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ ಒಂದೂ ಪೋಸ್ಟ್ ಕಾಣುತ್ತಿಲ್ಲ. ನಿನ್ನೆಯಿಂದ ಈ ವಿಷಯದಲ್ಲಿ ಖಂಡ್ರೆಯವರು ಮಾತನಾಡಿಲ್ಲ. ಆದರೆ, ಅವರ ಸಾಮಾಜಿಕ ಜಾಲತಾಣಗಳೇ ಎಲ್ಲಾ ಹೇಳುತ್ತಿವೆ.
ಕಾಂಗ್ರೆಸ್‌ನಲ್ಲಿ ಮಹಿಳೆಯರಿಗಿಲ್ಲ ಜಿಲ್ಲಾಧ್ಯಕ್ಷ ಭಾಗ್ಯ

ಇಂದು ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. 35 ಜನರ ಪಟ್ಟಿಯಲ್ಲಿ ಒಬ್ಬರೂ ಮಹಿಳೆಯರಿಲ್ಲ. ಈ ಪಕ್ಷದ ನಾಯಕರು ಮಾತೆತ್ತಿದ್ದರೆ ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ, ಸಂವಿಧಾನದ ಬಗ್ಗೆ ಗಂಟೆಗಟ್ಟಲೇ ಪುಂಗಿ ಊದುತ್ತಾರೆ. ಆದರೆ ಆಚರಣೆಯ ವಿಷಯ ಬಂದಾಗ ಮಾತ್ರ ಅವರ ವರಸೆ ಬದಲಾಗುತ್ತದೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ರಾಜ್ಯದ ಒಂದು ಜಿಲ್ಲೆಯಲ್ಲೂ ಒಬ್ಬರೂ ಸಮರ್ಥ ಮಹಿಳೆಯರು ಇಲ್ಲವೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಜನರ ಮಾತಿಗೆ, ಪ್ರಶ್ನೆಗೆ ಕಾಂಗ್ರೆಸ್ ನಾಯಕರ ಬಳಿ ಉತ್ತರ ಇದೆಯೇ?
ಇ.ಡಿ ದಾಳಿಗೆ ಬೆಚ್ಚಿಬಿದ್ದ ಜಾರಕಿಹೊಳಿ

ನಿನ್ನೆ (ಸೆಪ್ಟೆಂಬರ್ 09) ಸಚಿವ ಸತಿಶ್ ಜಾರಕಿಹೊಳಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಹಠಾತ್ತಾಗಿ ದಾಳಿ ಮಾಡಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯ್ದರೆ, ಬಿಜೆಪಿ ಈ ದಾಳಿ ಸ್ವಾಗತಿಸಿದೆ. ಆದರೆ, ವಾಸ್ತವ ಇವೆರಡರ ನಡುವೆ ಇದೆ.ಇಂದು ಇ.ಡಿ ಮೇಲೆ ಮುಗಿಬಿದ್ದ ಇದೆ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಹಾಗೂ ಕೇರಳದಲ್ಲಿ ಸಿಪಿಎಂ ನಾಯಕರ ಮನೆಯ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಿದಾಗ ಸಂಭ್ರಮಿಸಿತ್ತು. ದಾಳಿಗೆ ಗುರಿಯಾಗಿದ್ದ ಆ ಪಕ್ಷಗಳ ನಾಯಕರ ವಿರುದ್ಧ ಅಪಪ್ರಚಾರ ಮಾಡಿತ್ತು. ಈಗದು ಮರೆತಂತಿದೆ. ಈಗ ಕರ್ನಾಟಕದಲ್ಲಿ ತಮ್ಮ ಪಕ್ಷದ ಪ್ರಭಾವಿ ಸಚಿವರ ಮನೆಗೆ ಇ. ಡಿ ಬಂದಾಗ ದೇಶದ ತುಂಬೆಲ್ಲ ಬೊಬ್ಬೆ ಹೊಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಈ ಇಬ್ಬಂದಿತನವನ್ನು ದೇಶವೇ ನೋಡುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ರಾಜಕಾರಣಿಗಳ ಮನೆ ಮೇಲೆ ಮಾತ್ರ ಇತ್ತೀಚೆಗೆ ದಾಳಿಯಾಗುತ್ತಿವೆ. ಇದು ಬಿಜೆಪಿ ಪಕ್ಷಕ್ಕೆ ಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮುಳ್ಳಾಗಬಹುದು. ನಮ್ಮ ಸಮುದಾಯದ ರಾಜಕಾರಣಿಗಳು ಮಾತ್ರ ಅಪ್ರಾಮಾಣಿಕರೆ ಎಂಬ ಚರ್ಚೆ ವಾಲ್ಮೀಕಿ ಸಮುದಾಯದೊಳಗೆ ಆರಂಭವಾಗಿ, ಅದು ಮತವಾಗಿ ಪರಿವರ್ತನೆಗೊಳ್ಳಬಹುದು. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಾದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ವಿರೋಧ ಪಕ್ಷದ ನಾಯಕರ ಮನೆಯ ಮೇಲೆ ಮಾತ್ರ ದಾಳಿ ಮಾಡುತ್ತಿವೆ. ಅವುಗಳಿಗೆ ಬಿಜೆಪಿ ಪಕ್ಷದ ನಾಯಕರ ಮನೆಗಳು ಮರೆತು ಹೋದಂತಿದೆ. ಈ ತನಿಖಾ ಸಂಸ್ಥೆಗಳು ಯಾರ ಮನೆಗೆ ಕಾಲಿಡುತ್ತವೋ, ಆ ಮನೆಯ ಮಾಲೀಕ ಬಿಜೆಪಿ ಪಕ್ಷಕ್ಕೆ ಸೇರಿದರೆ ಆ ಮನೆಯಲ್ಲಿ ಮತ್ತೆಂದೂ ಅವು ಕಾಲಿಡುತ್ತಿಲ್ಲ.
ತನಿಖಾ ಸಂಸ್ಥೆಗಳೆಂಬ ಗೌರವ ಕೂಡ ಅವೀಗ ಉಳಿಸಿಕೊಂಡಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಹೇಳಿದಂತೆ ಅಥವಾ ಹೇಳಿದಷ್ಟು ಮಾತ್ರ ಕೆಲಸ ಮಾಡುವುದು ತನಿಖಾ ಸಂಸ್ಥೆಗಳ ಕೆಲಸವಾಗಿದೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ನಾಯಕರು ರಾತ್ರಿ ತೋರಿಸಿದ ಮನೆಗಳ ಮೇಲೆ ಬೆಳಿಗ್ಗೆ ದಾಳಿ ಮಾಡುತ್ತಿದ್ದವು. ಬೆಳಿಗ್ಗೆ ತೋರಿಸಿದ ಮನೆಗಳ ಮೇಲೆ ರಾತ್ರಿ ದಾಳಿ ಮಾಡುತ್ತಿದ್ದವು. ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ನಾಯಕರು ತೋರಿಸಿದ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಆಗ ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಬೀದಿಗೆ ಇಳಿಯುತ್ತಿದ್ದರು. ಈಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಳಿಯುತ್ತಿದ್ದಾರೆ.
ತನಿಖಾ ಸಂಸ್ಥೆಗಳು ಯಾರ್ಯಾರ ಮನೆಯ ಮೇಲೆ ದಾಳಿ ಮಾಡುತ್ತದೋ ಅದರ ಆಧಾರದ ಮೇಲೆ ಅವರೆಲ್ಲ ಭ್ರಷ್ಟರು ಎಂದಾಗಲಿ ಅಥವಾ ಪ್ರಾಮಾಣಿಕರು ಎಂದಾಗಲಿ ಜನರು ನಿರ್ಧಾರ ಮಾಡುವುದಿಲ್ಲ. ಯಾರು ಪ್ರಾಮಾಣಿಕರು, ಯಾರು ಪ್ರಾಮಾಣಿಕರಲ್ಲ ಎಂಬುದು ಜನರಿಗೆ ಗೊತ್ತಿರುತ್ತದೆ. ಈಗ ತನಿಖಾ ಸಂಸ್ಥೆಗಳು ಯಾರ ಮನೆಯ ಮೇಲೆ ದಾಳಿ ಮಾಡುತ್ತವೋ ಅವರು ಅಮಾಯಕರಂತೆ, ಅದು ರಾಜಕೀಯ ಪ್ರೇರಿತ ದಾಳಿಯಂತೆ ಪುಕಾರಾಗುತ್ತಿದೆ. ಇದು ಕೆಲವು ಪ್ರಕರಣಗಳಲ್ಲಿ ನಿಜವೂ ಇರಬಹುದು. ಈ ತನಿಖಾ ಸಂಸ್ಥೆಗಳು ಆರಂಭದಿಂದಲೇ ತಮ್ಮ ವೃತ್ತಿಧರ್ಮ ಪಾಲಿಸಿಕೊಂಡು ಬಂದಿದ್ದರೆ, ಇಂದು ಈ ಗುಲ್ಲು ಕೇಳಿಬರುತ್ತಿರಲಿಲ್ಲವೇನೋ. ಜತೆಗೆ ರಾಜಕಾರಣಿಗಳು ಒಂದು ಈ ಸಂಸ್ಥೆಗಳನ್ನು ಮುಚ್ಚುತ್ತಿದ್ದರು. ಇಲ್ಲವೇ ಈ ದೇಶದ ಎಲ್ಲಾ ಪಕ್ಷದ ಬಹುತೇಕ ರಾಜಕಾರಣಿಗಳು ಜೈಲಿನ ಕಂಬಿಗಳ ಹಿಂದೆ ಇರುತ್ತಿದ್ದರು.
ಪಾದಯಾತ್ರೆಯ ಹಿಂದೆ ಕುರ್ಚಿ ರಾಜಕಾರಣ ಇದೆಯೇ?

ಅದು ಜುಲೈ ೨೫, ೨೦೨೩ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೆಡ್ಡಿ ಸಹೋದರರ ಪಂಥಾಹ್ವಾನ ಸ್ವೀಕರಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಈ ಪಾದಯಾತ್ರೆಗೆ ರೆಡ್ಡಿ ಸಹೋದರರು ಅಲ್ಲಾಡಿ ಹೋಗಿದರು. ಅವರು ಜೈಲಿಗೆ ಹೋಗಲು ಈ ಯಾತ್ರೆ ಪೀಠಿಕೆ ಹಾಕಿತ್ತು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಸಿಎಂ ಕುರ್ಚಿ ಮೇಲೆ ಕೂತರು. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅದೇ ದಾರಿ ತುಳಿದಿದ್ದಾರೆ. ಆಗ ಮತ್ತು ಈಗ ಕಾಲ, ಸಮಯ, ಸಂದರ್ಭ, ವಾತಾವರಣ, ಬೀಸುತ್ತಿರುವ ರಾಜಕೀಯ ಗಾಳಿಯ ದಿಕ್ಕು ಬೇರೆ ಬೇರೆ ಇದೆ. ಇದನ್ನು ವಿಜಯೇಂದ್ರ ಸರಿಯಾಗಿ ಗ್ರಹಿಸಿಲ್ಲ ಅನಿಸುತ್ತಿದೆ.
ಮೊದಲನೆಯದಾಗಿ, ಅಕ್ರಮವಾಗಿ ಗಣಿ ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಬಾಚಿದ ರೆಡ್ಡಿ ಸಹೋದರರ ವಿರುದ್ಧ ಸಮಾಜದಲ್ಲಿ ಜನಾಕ್ರೋಶ ಒಳಗೊಳಗೆ ಕುದಿಯುತ್ತಿತ್ತು. ಎರಡನೆಯದಾಗಿ, ಜನಾರ್ಧನ ರೆಡ್ಡಿಯವರು ಸಿದ್ದರಾಮಯ್ಯನವರಿಗೆ ಪಂಥಾಹ್ವಾನ ನೀಡಿದರು. ಮೂರನೆಯದಾಗಿ ರಾಜಕೀಯ ಗಾಳಿ ಬಿಜೆಪಿಯ ವಿರುದ್ಧ ದಿಕ್ಕಿನೆಡೆಗೆ ಬೀಸುತ್ತಿತ್ತು. ನಾಲ್ಕನೆಯದಾಗಿ, ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದರು. ಐದನೆಯದಾಗಿ, ಬಹಳ ಮುಖ್ಯವಾಗಿ ಅಂದಿನ ಕಾಂಗ್ರೆಸ್ ಪಕ್ಷ ಸಂಘಟಿತವಾಗಿತ್ತು.
ಈಗ ಮೊದಲನೆಯದಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಬಿ. ನಾಗೇಂದ್ರ ಅವರ ವಿರುದ್ಧ ಜನರಲ್ಲಿ ಮುಖ್ಯವಾಗಿ ವಾಲ್ಮೀಕಿ ಸಮುದಾಯದಲ್ಲಿ ಅಂತಹ ಆಕ್ರೋಶ ಕಂಡುಬರುತ್ತಿಲ್ಲ. ಆಮೇಲೆ ಈಗಾಗಲೇ ಸರ್ಕಾರ ಅವರ ರಾಜೀನಾಮೆ ಪಡೆದಿದೆ. ಎರಡನೆಯದಾಗಿ, ವಿಜಯೇಂದ್ರ ಅವರಿಗೆ ಯಾರೂ ಪಂಥಾಹ್ವಾನ ನೀಡಿಲ್ಲ. ಮೂರನೆಯದಾಗಿ, ರಾಜ್ಯದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿರುವ ಕಾಂಗ್ರೆಸ್ ವಿರುದ್ಧ ರಾಜಕೀಯ ಗಾಳಿ ಬೀಸುತ್ತಿದೆ. ನಾಲ್ಕನೆಯದಾಗಿ, ಆ ಗಾಳಿಯನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ವಿಜಯೇಂದ್ರ ಮಾಸ ಲೀಡರ್ ಅಲ್ಲ. ಅವರ ತಂದೆಯ ನಾಮಬಲವೇ ಅವರಿಗೆ ಆಶ್ರಯವಾಗಿದೆ. ಐದನೆಯದಾಗಿ, ಬಿಜೆಪಿ ಒಡೆದ ಮನೆಯಂತಾಗಿದೆ.
ಬಿಜೆಪಿ ಪಕ್ಷದಲ್ಲಿ ಎರಡು ಗುಂಪುಗಳು ಬಹಳ ಪ್ರಬಲವಾಗಿವೆ. ವಿಜಯೇಂದ್ರ ವಿರೋಧಿ ಬಣದ ಆದ್ಯತೆ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತಲೂ, ವಿಜಯೇಂದ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಾಗಿದೆ. ಹಾಗಾಗಿಯೇ ಈ ಪಾದಯಾತ್ರೆಯ ಕಡೆಗೆ ಪಕ್ಷದ ಹಲವು ನಾಯಕರು ತಲೆಯೇ ಹಾಕುತ್ತಿಲ್ಲ. ಮೊದಲನೆಯ ದಿನ ಆರ್ ಅಶೋಕ್ ಮತ್ತಿತರರು ಪಾದಯಾತ್ರೆಗೆ ಚಾಲನೆ ನೀಡಿ, ವೇದಿಕೆಯಿಂದ ಕೆಳಗಿಳಿದು ಬೆಂಗಳೂರು ದಾರಿ ಹಿಡಿದವರು ಮತ್ತೇ ಯಾತ್ರೆಯ ದಾರಿಯಲ್ಲಿ ಕಾಣಲೇ ಇಲ್ಲ. ಈ ಪಾದಯಾತ್ರೆ ಯಶಸ್ವಿಯಾದರೆ ವಿಜಯೇಂದ್ರ ಹತ್ತಿದ ಕುದುರೆಯನ್ನು ನಾವು ತಡೆಯಲು ಆಗುವುದಿಲ್ಲವೆಂದು ಭಾವಿಸಿ ಅನೇಕರು ದೂರವೇ ಉಳಿದಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೇಂದ್ರ ಸಚಿವ ವಿ. ಸೋಮಣ್ಣನವರು ʼಈ ಪಾದಯಾತ್ರೆಯ ಬಗ್ಗೆ ನನಗೇನು ಮಾಹಿತಿ ಇಲ್ಲʼ ಎಂದಿದ್ದು
ನವೆಂಬರ್ ೨೦೨೬ಕ್ಕೆ ವಿಜಯೇಂದ್ರ ಅವಧಿ ಮುಗಿಯುತ್ತದೆ. ಮತ್ತೇ ಎರಡನೆಯ ಬಾರಿ ಪಕ್ಷದ ಅಧ್ಯಕ್ಷರಾಗಲು ಈ ಪಾದಯಾತ್ರೆ ಮಾಡುತ್ತಿದ್ದಾರೆʼ ಎಂದು ಅವರ ಪಕ್ಷದವರೇ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಅವರ ಪಕ್ಷದ ಕೆಲ ನಾಯಕರು ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್ ನಾಯಕ ಕುಮಾರಸ್ವಾಮಿ ʻಈಗಾಗಲೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯಾತ್ರೆಯ ಅವಶ್ಯಕತೆ ಇಲ್ಲʼ ಎಂದಿದ್ದರು. ಆದಾಗ್ಯೂ ವಿಜಯೇಂದ್ರ ಅವರು ಹಠಕ್ಕೆ ಬಿದ್ದು ಪಾದಯಾತ್ರೆಗೆ ಹೊರಟು, ಇಂದು ಬಳ್ಳಾರಿಗೆ ತಲುಪಿದ್ದಾರೆ.
ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯುವುದು ಬಿಜೆಪಿಯ ಕೆಲವರಿಗೆ ಮಾತ್ರವಲ್ಲ ಜೆಡಿಎಸ್ ಪಕ್ಷದ ಕುಮಾರಸ್ವಾಮಿಯವರಿಗೂ ಇಷ್ಟವಿಲ್ಲ. ಏಕೆಂದರೆ, ಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಸಹಜವಾಗಿ ಸಿಎಂ ಆಗಲು ವಿಜಯೇಂದ್ರ ಕ್ಲೇಮ್ ಮಾಡುತ್ತಾರೆ. ಮಗನ ಪರವಾಗಿ ಯಡಿಯೂರಪ್ಪನವರು ಹಠಕ್ಕೆ ಬೀಳುತ್ತಾರ. ಆಗ ಅನಿವಾರ್ಯವಾಗಿ ಬಿಜೆಪಿ ಹೈಕಮಾಂಡ್ ವಿಜಯೇಂದ್ರನನ್ನು ಸಿಎಂ ಕುರ್ಚಿ ಮೇಲೆ ಕೂರಿಸುತ್ತದೆ ಎಂಬ ದುರಾಲೋಚನೆ ಕುಮಾರಸ್ವಾಮಿಯವರಿಗೂ ಇದ್ದಂತೆ ಕಾಣುತ್ತದೆ. ಹಾಗಾಗಿಯೇ ಯಾತ್ರೆಯಲ್ಲಿ ಅವರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಣಿಸಲಿಲ್ಲ.
ಸರ್ಕಾರಿ ಮನೆಗಾಗಿ ಸಚಿವರ ಕಿತ್ತಾಟ

ಸಿದ್ದರಾಮಯ್ಯನವರು ಸಿಎಂ ಕುರ್ಚಿ ಸುಲಭವಾಗಿ ಬಿಟ್ಟುಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಡಿಕೆಶಿ ಬಣ ನಿರಾಳವಾಗಿತ್ತು. ಈಗ ಸರ್ಕಾರಿ ನಿವಾಸಕ್ಕಾಗಿ ಸಂಪುಟದ ಸಹೋದ್ಯೋಗಿಗಳ ಜಗಳ ಬೀದಿಗೆ ಬಂದಿದೆ. ಮೇಲ್ನೋಟಕ್ಕೆ ಇದು ಮಾಜಿ ಸಚಿವ ಎಸ್. ಸಿ. ಮಹಾದೇವಪ್ಪ ಮತ್ತು ಸಿದ್ದರಾಮಯ್ಯನವರ ಆಪ್ತ ಹಾಲಿ ಸಚಿವ ಭೈರತಿ ಸುರೇಶ್ ನಡುವಿನ ಜಗಳ ಅನಿಸುತ್ತದೆ.
ಆದರೆ, ಪ್ರಸ್ತುತ ಸಿದ್ದರಾಮಯ್ಯನವರ ಮತ್ತು ಮಹಾದೇವಪ್ಪ, ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ ನಡುವಿನ ಸಂಬಂಧ ಹಳಸಿದೆ. ಅದರ ಒಂದು ಭಾಗವೇ ಈ ಬೀದಿ ಜಗಳ. ಇಲ್ಲದಿದ್ದರೆ ಇಷ್ಟು ಸಣ್ಣ ವಿಷಯಕ್ಕೆ ಹೀಗೆ ಬೀದಿ ರಂಪಾಟ ನಡೆಯುತ್ತಿರಲಿಲ್ಲ.
ಎಸ್‌ಐಆರ್ ಆಟ: ಹೈರಾಣಾದ ಮತದಾರ!

ಚುನಾವಣಾ ಆಯೋಗದ ಇತಿಹಾಸದಲ್ಲಿ ಅದು ಜನರಿಂದ ಈ ಪರಿ ಟೀಕೆಗೆ ಒಳಗಾಗಿದ್ದು ಇದೆ ಮೊದಲು. ಇದೊಂದು ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆಯಾಗಿದೆ. ಮತದಾರರ ಪಟ್ಟಿ ಸಿದ್ಧಮಾಡುವುದು ಮತ್ತು ಕಾಲಕಾಲಕ್ಕೆ ಚುನಾವಣೆ ನಡೆಸುವುದು ಅದರ ಮುಖ್ಯ ಕೆಲಸವಾಗಿದೆ. ಈಗದು ತನ್ನ ಕೆಲಸಗಳನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮತದಾರರಿಗೆ ಕಾಡುತ್ತಿದೆ. ಮೊದಲು ದೇಶದ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುವ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಜತೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿದ್ದರು. ಈಗ ಸಮಿತಿಯಿಂದ ನ್ಯಾಯಾಧೀಶರನ್ನು ತೆಗೆದು, ಆ ಜಾಗಕ್ಕೆ ಆಡಳಿತ ಪಕ್ಷದ ಸಚಿವ ಸಂಪುಟದ ಸಚಿವರೊಬ್ಬರನ್ನು ತಂದು ಕೂಡಿಸಿದ್ದಾರೆ.
ಇದಕ್ಕೆ ಕಾರಣವೇನೆಂದು 2023ರಿಂದ ಪ್ರಧಾನಮಂತ್ರಿಯವರಿಗೆ ನಾಗರಿಕರು ಮತ್ತು ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅವರಿಂದ ಯಾವುದೇ ಉತ್ತರ ಬರುತ್ತಿಲ್ಲ. ಅಟ್‌ಲೀಸ್ಟ್ ಅವರಾಡುವ ಮನ್ ಕಿ ಬಾತ್‌ನಲ್ಲಾದರೂ ಈ ವಿಷಯ ಮಾತಾಡಬಹುದೆಂದು ಮೂರು ವರ್ಷದಿಂದ ದೇಶ ಎದುರು ನೋಡುತ್ತಿದೆ. ಅಲ್ಲೂ ಮಾತಾಡುತ್ತಿಲ್ಲ. ಅವರ ಈ ಮೌನ ಜನರ ಅನುಮಾನ ಮತ್ತಷ್ಟು ಹೆಚ್ಚಿಸಿದಂತಾಗಿದೆ.
ಈಗ ದಿಢೀರ್‌ನೆ ಚುನಾವಣಾ ಆಯೋಗ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬಿರುಸಿನಿಂದ ಎಸ್‌ಐಆರ್ ನಡೆಸಿ, ಸುಮಾರು 13ಕೋಟಿ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದೆ {ಇನ್ನೂ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಎಸ್‌ಐಆರ್ ನಡೆಸುವುದಿದೆ}. ಈ ಪರಿ ಮತದಾರರನ್ನು ಒಂದೇ ಸಲ ಕೈಬಿಟ್ಟಿದ್ದು ಪ್ರಾಯಶಃ ಭಾರತದಲ್ಲಿ ಮಾತ್ರ. ಪ್ರಜಾಪ್ರಭುತ್ವ ಒಪ್ಪಿಕೊಂಡಿರುವ ಯಾವುದೇ ದೇಶದಲ್ಲಿ ಹೀಗೆ ಹೆಸರು ತೆಗೆದು ಹಾಕಿರುವ ಉದಾಹರಣೆ ನಮಗೆ ಕಂಡು ಬರುವುದಿಲ್ಲ.
ಕರ್ನಾಟಕದಲ್ಲಿ ಎಸ್‌ಐಆರ್: ಮತದಾರರ ಪಟ್ಟಿಯ ಸವಾಲು
ಕರ್ನಾಟಕದಲ್ಲಿ 1.07ಕೋಟಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ. ಈಗ ಮತ್ತೆ ಹೆಸರು ತಾಳೆಯಾಗುತ್ತಿಲ್ಲ, ವಯಸ್ಸು ತಾಳೆಯಾಗುತ್ತಿಲ್ಲ, ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗಿಲ್ಲ…ಇತ್ಯಾದಿ ಕಾರಣಗಳನ್ನು ನೀಡಿ ಈಗ 43.81ಲಕ್ಷ ಮತದಾರರಿಗೆ ನೋಟಿಸ್ ನೀಡಿದ್ದಾರೆ. ಇವರು ಸರಿಯಾದ ದಾಖಲೆಗಳನ್ನು, ನಿಗದಿತ ಅವಧಿಯಲ್ಲಿ ಒದಗಿಸದಿದ್ದರೆ, ಇವರ ಹೆಸರೂ ಮತದಾರರ ಪಟ್ಟಿಯಿಂದ ಮಾಯವಾಗುತ್ತವೆ.
1960ರ ದಶಕದಲ್ಲಿ ಹಳ್ಳಿಗಳಲ್ಲಿ ಜನಿಸಿದ ಬಹಳಷ್ಟು ಜನರ ಹತ್ತಿರ ಜನನ ಪ್ರಮಾಣ ಪತ್ರವಾಗಲಿ, ಶಾಲಾ ದಾಖಲಾತಿಯಾಗಲಿ ಇಲ್ಲ. ಈಗ ಆ ತಲೆಮಾರಿನ ಜನರ ಬಳಿ ಇರುವುದು ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಮಾತ್ರ. ಇವು ಆಯೋಗದ ಪ್ರಕಾರ ದಾಖಲೆಗಳಲ್ಲ. ಆಯೋಗವೇ ನೀಡಿದ ವೋಟರ್ ಐಡಿ ಕೂಡ ಈಗವರ ಕೆಲಸಕ್ಕೆ ಬರುತ್ತಿಲ್ಲ.
ಚುನಾವಣಾ ಆಯೋಗ ಪ್ರತಿವರ್ಷ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಹೆಸರನ್ನು ಸೇರಿಸುವ ಮತ್ತು ಸತ್ತವರ ಹಾಗೂ ಸ್ಥಳಾಂತರವಾದವರ ಹೆಸರನ್ನು ಕೈಬಿಡುತ್ತಾ ಬಂದಿದೆ. ಹಾಗಾದರೆ 2002ರಿಂದ ಆಯೋಗ ಏನು ಕೆಲಸ ಮಾಡಿದೆ? ಯಾವುದೇ ಒಬ್ಬ ಮತದಾರನ ಹೆಸರನ್ನು ಕೈ ಬಿಟ್ಟಾಗ ಯಾವ ಕಾರಣಕ್ಕಾಗಿ ಅವನ ಹೆಸರು ಕೈಬಿಟ್ಟಿದ್ದೇವೆ ಎಂಬುದನ್ನು ಆಯೋಗವೇ ದಾಖಲೆ ಸಮೇತ ಹೇಳಬೇಕು. ಇದು ಆಯೋಗದ ಕೆಲಸವೇ ವಿನಾ ಮತದಾರರ ಕೆಲಸವಲ್ಲ. ಈಗ ಅದು ತನ್ನಿ, ಇದು ತನ್ನಿ ಎಂದಿದ್ದರೆ ಇಲ್ಲದಿರುವ ದಾಖಲೆಗಳನ್ನು ಹಳ್ಳಿಗರು, ಅಲೆಮಾರಿಗಳು ಎಲ್ಲಿಂದ ತರಬೇಕು?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಾವೇಶದಿಂದ ಒಬ್ಬನೇ ಒಬ್ಬ ಅರ್ಹ ಮತದಾರರ ಹೆಸರನ್ನು ನಾವು ಡಿಲೀಟ್ ಆಗಲು ಬಿಡುವುದಿಲ್ಲವೆಂದು ಹೇಳಿದರು. ಮುಂದುವರಿದು ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ಜನರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದಿದ್ದರು. ಮನೆ ಬಾಗಿಲಿಗೆ ಬರುವುದು ದೂರವೇ ಉಳಿಯಿತು, ಜನರೇ ಅರ್ಜಿ ಹಾಕೋಣವೆಂದು ಹೊದರೆ ಸರ್ವರ್ ಇಲ್ಲ. ಇದು ಒಂದು ಚುನಾಯಿತ ಸರ್ಕಾರದ ಬೇಜವಾಬ್ದಾರಿ ಮತ್ತು ಜನರ ಹಕ್ಕಿನ ಕುರಿತಾದ ನಿಷ್ಕಾಳಜಿ ಎತ್ತಿ ತೋರಿಸುತ್ತದೆ.
ಕೇಂದ್ರ ಸರ್ಕಾರಕ್ಕೆ ಮತ್ತು ಅದರ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಯಾವುದಾದರೂ ರೀತಿಯಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶವಿದ್ದಂತ್ತಿದೆ. ರಾಜ್ಯ ಸರ್ಕಾರಕ್ಕೂ ಈಗ ಮತದಾನದ ಹಕ್ಕು ಆದ್ಯತೆಯ ವಿಷಯವಾಗಿ ಉಳದಿಲ್ಲ.



