SUBSCRIBE

ದ ಪಾಲಿಟಿಕ್

ವಂದೇ ಮಾತರಂ: ಬಿಜೆಪಿಯಿಂದ ಮತ್ತೊಂದು ಪಾದಯಾತ್ರೆ

ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ʼವಂದೇ ಮಾತರಂʼ ಗೀತೆ ಈಗ ರಾಜಕೀಯ ಬೀದಿ ಹೋರಾಟಕ್ಕೆ ಕಾರಣವಾಗಿದೆ.  ಆರು ಚರಣಗಳು ಹೊಂದಿರುವ ಈ ಗೀತೆಯ ಮೊದಲ ಎರಡು ಚರಣಗಳು ಮಾತ್ರ  ರಾಜ್ಯದಲ್ಲಿ ಹಾಡಬೇಕು ಎಂದು ರಾಜ್ಯದ ಕಾಂಗ್ರೆಸ್‌ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಹೈಕೋರ್ಟ್‌ ಸಹ ಗ್ರೀನ್‌ ಸಿಗ್ನಲ್‌ ನೀಡಿದೆ. ಹೀಗಿದ್ದರೂ,  ಈ ಆದೇಶ ವಿರೋಧಿಸಿ  ಸೆ. 15ರಿಂದ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 5 ದಿನ ಪಾದಯಾತ್ರೆಗೆ ಹೊರಡಲು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧವಾಗಿ ನಿಂತಿದ್ದಾರೆ.

ʼಇದೊಂದು ರಾಜಕೀಯ ಗಿಮಿಕ್‌. ಈ ಪಾದಯಾತ್ರೆಯ ಹಿಂದೆ ಯಾವ ದೇಶಭಕ್ತಿಯಾಗಲಿ ಅಥವಾ ಕಾಳಜಿಯಾಗಲಿ ಇಲ್ಲ. ನಾಗಪುರದ ಸಂಘಪರಿವಾರದ ಕೇಂದ್ರ ಕಛೇರಿಯ ಮೇಲೆ 2002ರವರೆಗೆ ರಾಷ್ಟ್ರಧ್ವಜವೇ ಹಾರಿಸಿರಲಿಲ್ಲ.  ಇನ್ನೂ ಅವರಿಗೆ ವಂದೇ ಮಾತರಂ ಯಾವ ಲೆಕ್ಕ. ಇದು ರಾಜಕೀಯಕ್ಕಾಗಿ ರಾಜಕೀಯ ಅಷ್ಟೇʼ ಎಂದು ಜನರು ಈ ಪಾದಯಾತ್ರೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ನಂದಿಗ್ರಾಮ ಉಪಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಮಮತಾ ಬ್ಯಾನರ್ಜಿ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್‌ ಪಕ್ಷ ಧೂಳೀಪಟವಾಗಿತ್ತು. ಸ್ವತಃ ಅವರೇ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿಯ ಎದುರು ಹಿನಾಯವಾಗಿ ಸೋತಿದ್ದಾರೆ.  ಕಷ್ಟದ ಸಮಯದಲ್ಲಿ ದೀದಿಯ ಜತೆಗೆ ನಿಲ್ಲಬೇಕಾದ ಪಕ್ಷದ ಹಲವು ಶಾಸಕರು ಹಾಗೂ ಸಂಸದರು ಪಕ್ಷ ತೊರೆದು ಅವರಿಗೆ ಇನ್ನೊಂದು ಶಾಕ್‌ ನೀಡಿದರು. ಈ ಎಲ್ಲಾ ಬೆಳವಣಿಗೆ ಗಮನಿಸಿ, ದೀದಿ ರಾಜಕೀಯ ಮುಗಿತು ಎಂದು ವಿಶ್ಲೇಷಣೆ ನಡೆಯುತ್ತಿದೆ. ಅವರೀಗ ಮರಳಿ ತಮ್ಮ ಮಾತೃ ಪಕ್ಷಕ್ಕೆ (ಕಾಂಗ್ರೆಸ್‌) ಮರಳುವ ಧಾವಂತದಲ್ಲಿದ್ದಾರೆ ಎಂಬ ವಾದವೂ ಇದೆ.

ಈ ಮಧ್ಯೆ ಬಂಗಾಳದ ರಾಜಕೀಯ ಚರಿತ್ರೆಯ ಹೈಪ್ರೊಫೈಲ್‌ ಕ್ಷೇತ್ರವಾದ ನಂದಿಗ್ರಾಮ ಕ್ಷೇತ್ರದಲ್ಲಿ ಅಕ್ಟೋಬರ್‌ 06, 2026ರಂದು ಉಪಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಸೋತಿರುವ ದೀದಿ ನಂದಿಗ್ರಾಮ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುದ್ದಿ ತೇಲಿ ಬಂದಿತ್ತು. ಈಗ ಈ ಕ್ಷೇತ್ರದಿಂದ ಎಸ್‌ಐಆರ್‌ ವೇಳೆ ಶಿಕ್ಷಕಿ ಕೆಲಸ ಕಳೆದುಕೊಂಡಿದ್ದ ಸಂಚಿತಾ ಪ್ರಧಾನ್‌ ಡೇ ಅವರನ್ನು ತೃಣಮೂಲ ಕಾಂಗ್ರೆಸ್‌ ಪಕ್ಷ ಕಣಕ್ಕಿಳಿಸುವ ಮೂಲಕ ಊಹಾಪೋಹಗಳಿಗೂ ತೆರೆ ಎಳೆದಿದೆ.

ಕಳೆದ 15 ವರ್ಷಗದಿಂದ ಇದೇ ಮೊದಲ ಬಾರಿಗೆ ಅವರು ವಿಧಾನಸಭೆಯಲ್ಲಿ ಇಲ್ಲದಂತಾಗಿದೆ. ಅವರು ಈ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಇರುವುದು ನಾನಾ ಚರ್ಚೆಗಳು ಹುಟ್ಟು ಹಾಕಿದೆ. ಈ ಚುನಾವಣೆಯಲ್ಲೂ ತಾನು ಸೋಲಬಹುದು ಎಂಬ ಭೀತಿಯಿಂದ ಹಿಂದೆ ಸರಿದಿದ್ದಾರೆ ಎಂದು ಎನ್ನುವವರಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಂಘಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಹಾಗಾಗಿ ಸ್ಪರ್ಧಿಸುತ್ತಿಲ್ಲ ಎಂದು ಎನ್ನುವವರೂ ಇದ್ದಾರೆ.  ಅವರು ಹೆದರಿ ದೂರ ಸರಿದರೋ ಅಥವಾ ಸಂಘಟನೆಗಾಗಿ ಹಿಂದಾದರೋ ಎನ್ನುವುದು ಮುಂದೆ ಅವರಿಡುವ ಹೆಜ್ಜೆಗಳೇ ಹೇಳುತ್ತವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಅಲ್ಲೋಲ ಕಲ್ಲೋಲ ಆಗುವ ಸುದ್ದಿ… ಇನ್ನೂ ಯಾವಾಗ?

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್‌. ಡಿ. ಕುಮಾರಸ್ವಾಮಿ ಅವರು ʻದೇಶ ಅಲ್ಲೋಲ ಕಲ್ಲೋಲ ಆಗುವ ಸುದ್ದಿ ನಿಮಗೆ ನೀಡುತ್ತೇನೆ. ಆಗ ಎಚ್.ಡಿ.ಕುಮಾರಸ್ವಾಮಿ ಏನು ಎಂದು ನಿಮಗೆ ಗೊತ್ತಾಗುತ್ತದೆʼ –  ಹೀಗೆ ಹೇಳಿ ಹದಿನೈದು ದಿನವಾಯಿತು. ಅವರು ಡೆಡ್‌ ಲೈನ್‌ ಕೊಟ್ಟಿದ್ದು ಸೆಪ್ಟೆಂಬರ್‌ 12ಕ್ಕೆ. ಅದೂ ಮುಗಿದು ಮೂರು ದಿನವಾಯಿತು. ಇವರೆಗೂ ಯಾವುದೇ ಪತ್ರಿಕಾಗೋಷ್ಠಿಯೂ ನಡೆಸಿಲ್ಲ. ಬಾಂಬೂ ಸಿಡಿಸಿಲ್ಲ.

ಆದರೆ, ಅವರು ದೇಶವೇ ಅಲ್ಲೋಲ ಕಲ್ಲೋಲ ಆಗುವಂತಹದ್ದು ಏನು ಹೇಳಬಹುದು ಎಂಬ ಕುತೂಹಲ ಮಾತ್ರ ಜನರಲ್ಲಿ ಹಾಗೆ ಉಳಿಸಿದ್ದಾರೆ. ಕೆಲವರ ಎದೆಬಡಿತವೂ ಡವ ಡವ ಎಂದು ಇನ್ನೂ ಬಡಿತುಕೊಳ್ಳುತ್ತಿದೆ. ಅವರು ಹೇಳುವ ಮುಂಚೆಯೇ ಅದಾ – ಇದಾ, ಅವರಾ – ಇವರಾ ಎಂಬ ಚರ್ಚೆಯೂ ಇನ್ನೂ ನಡೆಯುತ್ತಿದೆ. ಆದರೆ, ಅವರು ಮಾತ್ರ ಅಮೆರಿಕಾದಿಂದ ನೇರವಾಗಿ ಮನೆಗೆ ಹೋಗಿ ಮನೆ ಬಾಗಿಲು ಹಾಕಿಕೊಂಡವರು ಇದುವರೆಗೆ ಬಾಗಿಲು ತೆರೆದಿಲ್ಲ. ಅವರು ಇಂದಲ್ಲ ನಾಳೆ ಬಾಗಿಲು ತೆಗೆದು, ಯಾರ ಮನೆಯ ಮೇಲೆ ಬಾಂಬ್‌ ಎಸೆಯುತ್ತಾರೆ ಎಂದು ಕಣ್ತುಂಬಿಕೊಳ್ಳಲು ಕೆಲವರು ಅವರ ಮನೆ ಬಾಗಿಲು ಕಡೆಗೆ ಇನ್ನೂ ಹಾಗೆ ನೋಡುತ್ತಿದ್ದಾರೆ.

ಅದು ಯಾವ ಇಲಾಖೆಗೆ ಸಂಬಂಧಿಸಿದ್ದು ಹಾಗೂ ಯಾರಿಗೆ ಸಂಬಂಧಿಸಿದ್ದು ಎಂಬುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಅದು ಕೆಪಿಎಸ್‌ಸಿದ್ದಾ?  ನೈಸ್‌ ಹಗರಣದ್ದೋ? ಬಿಡದಿ ಟೌನ್‌ಶಿಪ್‌ದ್ದೋ? ಎಂಬುವುದು ಅವರು ಮನೆಯಿಂದ ಆಚೆ ಬಂದ ಮೇಲೆಯೇ ಬಹುಶಃ ಗೊತ್ತಾಗಬಹುದು.

ಬೆಂಗಳೂರಿನಲ್ಲಿ ಕುಳಿತು ನೇರವಾಗಿ ದೆಹಲಿಯ ರಾಬರ್ಟ್‌ ವಾದ್ರಾ ಮನೆಯ ಮೇಲೆ ಬಾಂಬ್‌ ಎಸೆಯುತ್ತಾರೋ ಅಥವಾ ರಾಜಕೀಯ ಎದುರಾಳಿ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಮನೆಯ ಮೇಲೆ ಹಾಕುತ್ತಾರೋ ಅಥವಾ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮನೆಯ ಮೇಲೆ ಬೀಸುತ್ತಾರೋ…ಅಥವಾ ಇದು ಕೂಡ ಹುಸಿ ಬಾಂಬೊ?

ಕುಮಾರಸ್ವಾಮಿ ಅವರು ಹಿಟ್‌ ಆಂಡ್‌ ರನ್‌ ಗಿರಾಕಿ. ಈ ಹಿಂದೆ ವಿಧಾನಸಭೆಯ ಅಧಿವೇಶನಕ್ಕೆ ಬಂದಾಗಲೆಲ್ಲ ಕೈಯಲ್ಲೊಂದು ಫೈಲು ಹಿಡಿದುಕೊಂಡು, ಕಿಸೆಯಲ್ಲೊಂದು ಪೆನ್‌ಡ್ರೈವ್ ಇಟ್ಟುಕೊಂಡೇ ಬರುತ್ತಿದ್ದರು. ಅಧಿವೇಶನದಲ್ಲಿ ಏರುಧ್ವನಿಯಲ್ಲಿ ಮಾತನಾಡಿ, ಕೈಯಲ್ಲಿರುವ ಫೈಲು, ಕಿಸೆಯಲ್ಲಿರುವ ಪೆನ್‌ಡ್ರೈವ್ ಮುಟ್ಟಿ ಮುಟ್ಟಿ ತೋರಿಸುತ್ತಿದ್ದರು. ಆದರೆ, ಒಂದೂ ಫೈಲ್ ಓಪನ್‌ ಮಾಡಲೇ ಇಲ್ಲ.  ಪೆನ್‌ಡ್ರೈವ್‌ ಯಾರಿಗೂ ನೀಡಲೇ ಇಲ್ಲ. ಇದು ಸಹ ಅದೇ ಕಥೆ ಎನ್ನುವವರಿದ್ದಾರೆ. ಇಲ್ಲ, ಈ ಸಲ ಹಾಗೇ ಮಾಡಲಾರರು. ಮನೆಯಲ್ಲಿ ಕೂತು ಮಾಧ್ಯಮಗೋಷ್ಠಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎನ್ನುವವರೂ ಇದ್ದಾರೆ.

ಅವರು ಭದ್ರವಾಗಿ ಹಾಕಿಕೊಂಡಿರುವ ಮನೆಯ ಬಾಗಿಲು ತೆರೆದು ಹೊರಗೆ ಬಂದಾಗಲೇ ಇದು ಸಹ ಸಿಡಿಯದ ಬಾಂಬೋ? ಅಥವಾ ಸಿಡಿಯುವ ಬಾಂಬೋ? ಎಂದು ಗೊತ್ತಾಗುವುದು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ರಾಜಕೀಯ

ಕೆಪಿಎಸ್‌ಸಿ ಆಕ್ರಮ: ಸಿಜೆಪಿ ಹೋರಾಟದ ಕಹಳೆ

ಸಿದ್ರಾಮ ಶಟಕಾರ
ಸಿದ್ರಾಮ ಶಟಕಾರ
1 min read
ಸಿಜೆಪಿ

ʻಸ್ಕೂಲ್ ಠಿಕ್ ಕರೋʼ ಎಂಬ ಅಭಿಯಾನದ ನಿಮಿತ್ತ  ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಮತ್ತು ಸಂಗಡಿಗರು ಠಿಕಾಣಿ ಹುಡಿದ್ದಾರೆ. ಮೊನ್ನೆ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣದ ವಿರುದ್ಧ ದನಿ ಎತ್ತಿ, ʻಶೀಘ್ರವೇ ಬೆಂಗಳೂರಿನಲ್ಲಿ ಇದರ ವಿರುದ್ಧ ಹೋರಾಟ ರೂಪಿಸುತ್ತೇವೆʼ ಎಂದು ಘೋಷಣೆ ಮಾಡಿದ್ದು ನೊಂದ ವಿದ್ಯಾರ್ಥಿಗಳಿಗೆ ತುಸು ಸಮಾಧಾನ ತಂದಿದೆ.

ಅವರು ಮಾಧ್ಯಮಗಳೆದುರಿಗೆ ಮಾತನಾಡುತ್ತಾ ʼಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮ ಒಂದು ವ್ಯವಸ್ಥಿತ ದೊಡ್ಡ ಮಾಫಿಯಾ ಆಗಿದೆ.  ಇಂಥಹ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳ ಹೆಡೆಮುರಿ ಕಟ್ಟಬೇಕಾಗಿದೆ. ಈ ಕೆಲಸವನ್ನು ಇನ್ನು ಮುಂದೆ CJP ಮಾಡಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ನಾವೆಲ್ಲರೂ ಹೆಜ್ಜೆ ಇಡಬೇಕಾಗಿದೆʼ ಎಂದಿದ್ದು ಯುವಜನತೆಯಲ್ಲಿ ಅನ್ಯಾಯದ ವಿರು‍ದ್ಧ ಹೋರಾಡುವ ಉಮೆದು ಬೆಳದಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ಹೋರಾಟಕ್ಕೆ ಅಣಿಯಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರೀಷತ್‌ {ಎಬಿವಿಪಿ}, ಸ್ಟುಡೆಂಟ್ ಫೇಡರೆಷನ್ ಆಫ್ ಇಂಡಿಯಾ {ಎಸ್‌ಎಫ್‌ಐ},  ಕರ್ನಾಟಕ ವಿದ್ಯಾರ್ಥಿ ಸಂಘಟನೆ [ಕೆವಿಎಸ್]‌, ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಎಸ್‌ಐಒ), ನ್ಯಾಷನಲ್ ಸ್ಟುಡೆಂಟ್ ಯುನಿಯನ್ ಆಫ್ ಇಂಡಿಯಾ {ಎನ್‌ಎಸ್‌ಐಯು}, ಮುಸ್ಲಿಂ ಸ್ಟುಡೆಂಟ್ ಫೇಡರೆಷನ್ {ಎಮ್‌ಎಸ್‌ಎಫ್‌}, ಎಐಎಸ್‌ಎಫ್‌  ಎಂಬ  ವಿದ್ಯಾರ್ಥಿ ಸಂಘಟನೆಗಳು ಯಾವ ಬಿಲದಲ್ಲಿ ಅಡಗಿಕೊಂಡಿವೆ? ಈ ಸಂಘಟನೆಗಳ  ಜಾಣ ಮೌನ ನೊಂದ ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

 

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಸತೀಶ್‌ ಜಾರಕಿಹೊಳಿ ಮೇಲೆ ರೇಡ್‌: ಲಾಭ ಯಾರಿಗೆ?

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read
ಸತೀಶ್‌ ಜಾರಕಿಹೊಳಿ

ಕಾಂಗ್ರೆಸ್‌ ಪಕ್ಷದ ಪ್ರಭಾವಿ ಸಚಿವ ಸತೀಶ್‌ ಜಾರಕಿಹೊಳಿ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಡಿದ ದಾಳಿ ರಾಜ್ಯ ರಾಜಕಾರಣದಲ್ಲಿ  ಎರಡು ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು, ರಾಜಕೀಯವಾಗಿ, ಇನ್ನೊಂದು ಇ.ಡಿ. ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ. ಇದರಲ್ಲಿ ಮೊದಲನೆಯ ಚರ್ಚೆಯೇ ಹೆಚ್ಚು ಸದ್ದು ಮಾಡುತ್ತಿದೆ. ಈ ಚರ್ಚೆ ಎಲ್ಲೊ ಕರೆದುಕೊಂಡು ಹೋಗಿ,  ಯಾರದೋ  ಮನೆಗೆ ಮುಂದೆ ತಂದು ನಿಲ್ಲಿಸುತ್ತಿದೆ.

ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗಿನಿಂದ ತಮಗಾಗದ ಬಿಜೆಪಿಯೇತರ ರಾಜಕಾರಣಿಗಳ ಮನೆಯ ಮೇಲೆ ಮಾತ್ರ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುತ್ತಿದೆ ಎನ್ನುವವರಿದ್ದಾರೆ. ಇವರ ಈ ಮಾತಿನಲ್ಲಿ ವಾಸ್ತವವಿದೆ. ಕರ್ನಾಟಕದಲ್ಲಿ ಡಾ. ಜಿ. ಪರಮೇಶ್ವರ್‌, ಡಿ. ಕೆ. ಶಿವಕುಮಾರ್‌, ಜಮೀರ್‌ ಅಹಮದ್‌ ಖಾನ್‌, ಕೆ. ಎನ್‌. ರಾಜಣ್ಣ, ಎನ್‌. ಎ. ಹ್ಯಾರಿಶ್‌, ಇ. ತುಕಾರಾಂ, ನಾ. ರಾ. ಭರತ್ ರೆಡ್ಡಿ, ಕೆ. ನಾಗೇಂದ್ರ, ವೀರೇಂದ್ರ ಪಪ್ಪಿ, ನಂಜೇಗೌಡ, ಸತೀಶ್ ಜಾರಕಿಹೊಳಿ ಮನೆಯ ಮೇಲೆ ದಾಳಿಯಾಗಿದೆ. ಇವರಾರು ಬಿಜೆಪಿಗರಲ್ಲ, ಎಲ್ಲರೂ ಕಾಂಗ್ರೆಸ್‌ ಪಕ್ಷದವರು.

ಸತೀಶ್ ಮೇಲಿನ ಈ ದಾಳಿಯ ಹಿಂದೆ ಅವರದೇ ಪಕ್ಷದವರ ಕೈವಾಡವಿದೆ ಎಂದು ಬಿಜೆಪಿ ಪಕ್ಷದ ಬಹುತೇಕ ರಾಜಕಾರಣಿಗಳು ಮಾತ್ರ ಒಂದೇ ಧ್ವನಿಯಲ್ಲಿ ಮಾತ್ರ ಮಾತನಾಡುತ್ತಿದ್ದಾರೆ (ಈ ದಾಳಿಯಲ್ಲಿ ಮಾತ್ರ ಹೀಗೆ ಮಾತನಾಡಿದ್ದಾರೆ).  ಕಾಂಗ್ರೆಸ್‌ ಪಕ್ಷದಲ್ಲಿ ಗಾಯಗೊಂಡ ಹುಲಿಯಂತಾಗಿರುವ ಕೆ. ಎನ್‌. ರಾಜಣ್ಣನವರು ತುಸು ಕೋಪದಿಂದಲೇ ಇದೇ ಧಾಟಿಯಲ್ಲಿ ಪರೋಕ್ಷವಾಗಿ ಕುಟುಕಿದ್ದಾರೆ. ಈಗಾಗಲೇ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಬಿ. ನಾಗೇಂದ್ರ ಅವರ ಮೇಲೆ ಇ.ಡಿ ದಾಳಿ ಮಾಡಿದೆ. ಬಿಜೆಪಿಯ ನಾಯಕರೇ ಪಟ್ಟು ಹಿಡಿದು ಅವರ ರಾಜೀನಾಮೆಯೂ ಪಡೆದಿದ್ದಾರೆ. ಮತ್ತೆ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಕಾಂಗ್ರೆಸ್‌ ಪಕ್ಷದ ಮತ್ತೊಬ್ಬ ರಾಜಕಾರಣಿಗಳ ಮೇಲೆ ದಾಳಿ ಮಾಡಿಸುವಷ್ಟು ಬಿಜೆಪಿಗರು ದಡ್ಡರಲ್ಲ.

ಸರ್ಕಾರದ ನಿದ್ದೆಗೆಡಿಸಬೇಕಾದ ಬಿಜೆಪಿ ರಾಜ್ಯದಲ್ಲಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಪಕ್ಷದ ನಾಯಕರ ಒಳಜಗಳದಿಂದಾಗಿ ಅದು ಎದ್ದು ನಿಲ್ಲದಂತಹ ಸ್ಥಿತಿಗೆ ತಲುಪಿದೆ.  ಭಾಜಪದ ನಾಯಕರು ಇದೇ ದಾರಿಯಲ್ಲಿ, ಹೀಗೆ ಮುಂದುವರೆದರೆ ಮತ್ತೆ ಅವರು ಐದು ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲಿ ಕೂರುವ ಸಾಧ್ಯತೆ ಇದೆ.

ʼ2028ರಲ್ಲಿ ಕಾಂಗ್ರೆಸ್‌ ಎರಡನೇ ಬಾರಿಯೂ ಬಹುಮತದ ಸಮೀಪವೋ ಅಥವಾ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ಪಕ್ಷದೊಳಗೆ ಡಿ. ಕೆ. ಶಿವಕುಮಾರ್‌, ಡಾ. ಜಿ. ಪರಮೇಶ್ವರ್‌ ಮತ್ತು ಸತೀಶ್‌ ಜಾರಕಿಹೊಳಿ ನಡುವೆ ಸಿಎಂ ಕುರ್ಚಿಗಾಗಿ ತೀವ್ರ ಪೈಪೋಟಿ ಶುರುವಾಗುತ್ತದೆ.  ಆಗ ಡಿ.ಕೆ. ಶಿವಕುಮಾರ್‌ ಅವರು ಡಾ. ಜಿ. ಪರಮೇಶ್ವರ್‌ ಅವರನ್ನು ಸುಲಭವಾಗಿ ಪಕ್ಕಕ್ಕೆ ಸರಿಸಬಹುದು. ಆದರೆ, ಸತೀಶ್‌ ಅವರನ್ನು ಅಷ್ಟು ಸುಲಭವಾಗಿ ಪಕ್ಕಕ್ಕೆ ತಳ್ಳಲು ಆಗುವುದಿಲ್ಲ. ಹಾಗಾಗಿಯೇ ಅವರು ಸ್ಪರ್ಧೆಗಾಗಿ ಕುದುರೆ ಹತ್ತದಂತೆ ಈಗಲೇ ಅವರ ಕಾಲು ಕಟ್ಟಿ ಹಾಕಬೇಕೆಂದು ಅವರ ಮೇಲೆ ಈ ದಾಳಿ ಯಾರೋ ದೂರಾಲೋಚನೆ ಇಟ್ಟುಕೊಂಡೆ ಮಾಡಿಸಿದ್ದಾರೆʼ ಎಂದು ಎನ್ನುವವರೂ ಇದ್ದಾರೆ. ಜನರ ಈ ಮಾತು ಸತೀಶ್‌ ಅವರ ಮೇಲಿನ  ದಾಳಿ ಈ ತಕ್ಷಣ ರಾಜಕೀಯವಾಗಿ ಯಾರಿಗೆ ಲಾಭ ತಂದು ಕೊಡುತ್ತದೆ ಎಂದು ರಾಜಕಾರಣದ ಎಬಿಸಿಡಿ ಗೊತ್ತಿಲ್ಲದ ಸಣ್ಣ ಮಕ್ಕಳಿಗೂ ಅರ್ಥವಾಗುವಂತಿದೆ. ನೀರಿನೊಳಗಿನ ಮೀನಿನ ಹೆಜ್ಜೆ ಗುರುತಿಸಬಹುದು. ಆದರೆ, ರಾಜಕಾರಣದಲ್ಲಿ ಮಹತ್ವಾಕಾಂಕ್ಷೆಯುಳ್ಳ ರಾಜಕಾರಣಿಗಳ ರಾಜಕೀಯ ಹೆಜ್ಜೆ ಗುರುತಿಸಲು ಆಗುವುದಿಲ್ಲ.

ಇ.ಡಿ ದಾಳಿ ಮಾಡಿ, ಮೈಮೇಲೆ ಒಂದು ಹುಣ್ಣೂ ಆಗದಂತೆ ಕೆದರಿ ಕೆದರಿ  ಗಾಯ ಮಾಡುತ್ತದೆ ಅಷ್ಟೇ. ಬಹುತೇಕ ಪ್ರಕರಣಗಳನ್ನು ದಡಕ್ಕೆ ಮುಟ್ಟಿಸುವುದಿಲ್ಲ. ಅದು ಮಾಡಿದ ಗಾಯ ಮಾತ್ರ ಹಾಗೇ ಉಳಿಸುತ್ತದೆ.  ಅದು ಕಲೆಹಾಕಿದ ಮಾಹಿತಿ ಹಾಗೂ ದಾಖಲೆಗಳು ಎಲ್ಲೋ ದೂಳಲ್ಲಿ ಬಿದ್ದಿರುತ್ತವೆ. ರಾಜಕೀಯದಲ್ಲಿ ಗಾಯ ಮಾಡಿಕೊಂಡ ಕುದುರೆಯ ಕೊರಳಿಗೆ ಗಂಟೆ ಕಟ್ಟಿ ಯಾರೂ ರೇಸಿಗೆ ಬಿಡುವುದಿಲ್ಲ.

ಜಾರಕಿಹೊಳಿ ಅವರು ʼನಾವು ವಿದೇಶದಲ್ಲಿ ಹೂಡಿಕೆ ಮಾಡಿಲ್ಲ. ಈಗ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ.  ನಾನು ಸಣ್ಣ ಮೀನು, ದೊಡ್ಡ ದೊಡ್ಡ ಮೀನುಗಳಿವೆ. ಆದರೆ, ಇ.ಡಿ ಆ ಕಡೆಗೆ ನೋಡುವುದೇ ಇಲ್ಲ. ಮೈಸೂರು ಮೂಲದ ವ್ಯಕ್ತಿಯೊಬ್ಬ  ನನ್ನ ವಿರುದ್ಧ ಇ.ಡಿ.ಗೆ ದೂರು ನೀಡಿದ್ದಾರೆ.  ಇದು ಕೇಂದ್ರ ಸರ್ಕಾರದ ಸೇಡಿನ ರಾಜಕೀಯ. ನಮ್ಮ ಮೇಲೆ ಇ.ಡಿ. ದಾಳಿ ಮಾಡುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು. ಲೋಕೋಪಯೋಗಿ ಇಲಾಖೆಯ ಕಾಮಗಾರಿಯಲ್ಲಿ ಲಂಚ ಪಡೆದು, ಅದೇ ಹಣವನ್ನು ಹವಾಲಾ ಮೂಲಕ ವಿದೇಶಕ್ಕೆ ತಲುಪಿಸಿ ಹೂಡಿಕೆ ಮಾಡಿದ್ದು ಇ. ಡಿ. ಸಾಬೀತುಪಡಿಸಬೇಕುʼ…. ಹೀಗೆ ಏನೇನೋ ಬಡಬಡಿಸುತ್ತಿದ್ದಾರೆ. ಆದರೆ, ಅವರ ಮಾತಿನಲ್ಲಿ ಅಂತಹ ಬಲವಾಗಲಿ, ಆತ್ಮವಿಶ್ವಾಸವಾಗಲಿ ಎದ್ದು ಕಾಣುತ್ತಿರಲಿಲ್ಲ ಜತೆಗೆ ಅವರ ಮಾತುಗಳೇ ನಾವು ತಪ್ಪು ಮಾಡಿದ್ದೇವೆ ಎಂಬ ಅರ್ಥ ನೀಡುತ್ತಿದ್ದವು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ʻನಾನೇ ಕಾರಣʼ ಎಂದ ಡಿಕೆಶಿ: ಐದು ಗ್ಯಾರಂಟಿ ಯಾರ ಕೂಸು?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read
ಐದು ಗ್ಯಾರಂಟಿ

2023ರ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್‌ 135  ಕ್ಷೇತ್ರದಲ್ಲಿ ಗೆದ್ದು, ಬಿಜೆಪಿಯನ್ನು ಧೂಳೀಪಟ ಮಾಡಿತ್ತು. ಚುನಾವಣಾ ಪ್ರಚಾರದಲ್ಲಿ  ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವು ʻಐದು ಗ್ಯಾರಂಟಿʼ ಯೋಜನೆ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಮತದಾರರಿಗೆ ಆಶ್ವಾಸನೆ ನೀಡಿತ್ತು. ಗೆದ್ದ ನಂತರ ಜಾರಿಗೂ ತಂದಿದೆ. ಈಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು  ʻಸಿದ್ದರಾಮಯ್ಯನವರು ಕೇವಲ 10 ಕೆ.ಜಿ ಅಕ್ಕಿ ನೀಡುವ ಯೋಜನೆ ಮಾತ್ರ ರೂಪಿಸಿದರು. ಉಳಿದ ನಾಲ್ಕು ಯೋಜನೆಗಳು ನಾನೇ ಸಿದ್ಧಪಡಿಸಿದ್ದು, ನಾನೇ ಯೋಜನೆ ರೂಪಿಸಿದ್ದುʼ – ಎಂದಿರುವ ಮಾತು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಅವರು ಮಾಧ್ಯಮಗಳ ಎದುರು ಹೀಗೆ ಹೇಳುವ ಮೂಲಕ  ಕ್ರೆಡಿಟ್‌ಗೆ  ಕ್ಲೇಮು ಮಾಡಿದ್ದಾರೆ ಹಾಗೂ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯುತ್ತಿದ್ದಾರೆಂದು ಅವರ ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ.

ಸಿದ್ದರಾಮಯ್ಯನವರು ʻಪಂಚ ಗ್ಯಾರಂಟಿ ನನ್ನ ಕನಸಿನ ಕೂಸುʼ ಎಂದು ನೂರಾರು ಬಾರಿ ಹೇಳಿದ್ದಾರೆ. ಜನರು ಹಾಗೇ ಭಾವಿಸಿದರು. ಆದರೆ, ಈಗ ಡಿಕೆ ಶಿವಕುಮಾರ್‌  ಮಾತು ಜನರ ತಲೆಯಲ್ಲಿ ಈ ಯೋಜನೆಗಳ ಅಸಲಿ ತಂದೆ ಯಾರು ಎಂಬ ಪ್ರಶ್ನೆ ಹಾಕಿದೆ. ಸಿದ್ದರಾಮಯ್ಯ ಇದು ಹೇಗೆ ಸ್ವೀಕರಿಸುತ್ತಾರೆ ಹಾಗೂ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಇದೀಗ ಕೂತುಹಲ ಮೂಡಿಸಿದೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್